ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 23, 2010

ಕನ್ನಡ ಮಿಡಿಯಾ – ಎಡವುತ್ತಿರುವುದೆಲ್ಲಿ ?

‍ನಿಲುಮೆ ಮೂಲಕ

ವಸಂತ ಶೆಟ್ಟಿ, ಬೆಂಗಳೂರು

ದಿನಾ ಓದೋ ಕನ್ನಡ ಪತ್ರಿಕೆಗಳಿರಬಹುದು (ವಿ.ಕ, ಪ್ರ.ವಾ,ಉ.ವಾ, ಕ.ಪ್ರ), ನೋಡೋ ಕನ್ನಡ ಸುದ್ದಿ ವಾಹಿನಿಗಳಿರಬಹುದು (ಟಿವಿ9, ಸುವರ್ಣ) ಇಲ್ಲವೇ ಕನ್ನಡದ ಮನರಂಜನೆ ಚಾನೆಲ್ ಗಳಿರಬಹುದು( ಜೀ ಕನ್ನಡ, ಕಸ್ತೂರಿ, ಈ ಟಿವಿ ಕನ್ನಡ, ಸುವರ್ಣ), ಇವರೆಲ್ಲರಲ್ಲಿ ಒಂದು ಸಾಮಾನ್ಯವಾದ ಅಂಶವೆಂದರೆ ಇವರಿಗಿರೋ ಹಿಂದಿ ಸಿನೆಮಾ, ಬಾಲಿವುಡ್ ಬಗೆಗಿನ ವಿಪರೀತ ಅಭಿಮಾನ. ಇವರ ಹಿಂದಿ ಸಿನೆಮಾ, ಹಾಡು, ನಟರ ಬಗೆಗಿನ disproportionate ಪ್ರಚಾರದ ವೈಖರಿ ನೋಡಿದವರಿಗೆ ಕರ್ನಾಟಕದಲ್ಲಿ ಹಿಂದಿ ಚಿತ್ರೋದ್ಯಮ ಕನ್ನಡಕ್ಕಿಂತ ದೊಡ್ಡದು ಅನ್ನುವಂತೆ ಅನ್ನಿಸುವ ಹಾಗೆ ಮಾಡಿದ್ದರೆ ಅಚ್ಚರಿಯಿಲ್ಲ. ಹಾಗಿದ್ರೆ ಇದೆಷ್ಟು ಸರಿಯಾದದ್ದು ?

ಮಾಧ್ಯಮದ ಮಂದಿಗೆ ಕೆಲವು ಪ್ರಶ್ನೆಗಳು

’ಹಿಂದಿ’ಗಿಂತ ’ಕನ್ನಡ’ದ ಮನರಂಜನೆ, ಕನ್ನಡ ಚಿತ್ರಗಳು ಗ್ರಾಹಕರಾಗಿ ಕನ್ನಡಿಗರ ಮನಸಿಗೆ ಹೆಚ್ಚು ಹತ್ತಿರ ಅನ್ನುವುದನ್ನು ಹಲವು ಹಿಟ್ ಚಿತ್ರಗಳು ( ಈ ವರ್ಷ ಜಾಕಿ, ಸೂಪರ್, ಪಂಚರಂಗಿ, ಆಪ್ತರಕ್ಷಕ, ಪೃಥ್ವಿ, ಕೃಷ್ಣನ್ ಲವ್ ಸ್ಟೋರಿ) ಸಾಬೀತು ಮಾಡಿದ್ದರೂ ಹಿಂದಿ ಚಿತ್ರಗಳ ಬಗ್ಗೆ ಕನ್ನಡದ ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ನಡೆಯುತ್ತಿರುವ ಮಿತಿ ಮೀರಿದ ಪ್ರಚಾರ ಇಂದಿಗೂ ಹಾಗೆಯೇ ಸಾಗಿದೆ. ಆದರೆ ಇದೇ ಸಂದರ್ಭದಲ್ಲಿ ಬೆಂಗಳೂರಿನ ಎಪ್.ಎಮ್ ರೇಡಿಯೊಗಳು ಕೆಲವೇ ಕೆಲವು ವರ್ಷಗಳಲ್ಲಿ ಕನ್ನಡ ಅಪ್ಪಿಕೊಂಡು ಅತಿ ಹೆಚ್ಚು ವ್ಯಾಪಾರ ಮಾಡುವಂತಾದದ್ದು ನಾವೆಲ್ಲರೂ ಕಂಡುಕೊಂಡ ಸತ್ಯ. ಈಗ ಬೆಂಗಳೂರಿನ ಹಿಂದಿ ಹಾಡು ಹಾಕುವ ಏಕೈಕ ಸ್ಟೇಶನ್ ಆದ ರೇಡಿಯೊ ಒನ್ ವಾಹಿನಿಯ ನ್ಯಾಷನಲ್ ಮಾರ್ಕೆಟಿಂಗ್ ಹೆಡ್ ಶೈಜು ಅವರ ಪ್ರಕಾರವೇ ಬೆಂಗಳೂರಿನ ಎಫ್.ಎಮ್ ಮಾರುಕಟ್ಟೆಯಲ್ಲಿ ’ಹಿಂದಿ’ಗಿರುವ ಪಾಲು ಹೆಚ್ಚೆಂದರೆ 14%. ಕನ್ನಡ ವಾಹಿನಿಗಳನ್ನು ಕೇಳುವವರ ಸಂಖ್ಯೆಯ ಮುಂದೆ ಹಿಂದಿ ಕೇಳುಗರ ಸಂಖ್ಯೆ ನಗಣ್ಯ ಅನ್ನುವ ಮಾತನ್ನು ಅವರು ಆಡಿದ್ದಾರೆ. ಕನ್ನಡ ಮನರಂಜನೆ ಅನ್ನುವುದು ಬೆಂಗಳೂರಿನ, ಕನ್ನಡ ಗ್ರಾಹಕರ ಮೊದಲ ಆಯ್ಕೆ ಅನ್ನುವುದು ನಿಜ ಸ್ಥಿತಿಯಾಗಿರುವಾಗ, ಕನ್ನಡ ಮಾಧ್ಯಮಗಳು ಅನುಸರಿಸುತ್ತಿರುವ ದ್ವಂದ್ವ ನಿಲುವಿನ ಬಗ್ಗೆ ನನ್ನ ಮನಸ್ಸಲ್ಲಿ ಏಳುತ್ತಿರುವ ಹಲವು ಪ್ರಶ್ನೆಗಳು ಇಂತಿವೆ.

  • ಅದ್ಯಾಕೆ ಕನ್ನಡದ ಹೆಸರಾಂತ ಪತ್ರಿಕೆಗಳು ಹಿಂದಿ ಚಿತ್ರರಂಗ, ಚಿತ್ರಗಳು, ಹಿಂದಿ ಸಿನೆಮಾ ತಾರೆಯರನ್ನು ಹೆಗಲ ಮೇಲೆ ಹೊತ್ತು ಮೆರೆಸುವುದು?
  • ಅದ್ಯಾಕೆ ಕನ್ನಡದ 24X7 ಸುದ್ದಿ ವಾಹಿನಿಗಳ ಫಿಲ್ಮಿ ಫಂಡಾ, ರಂಜನೆ ಮನರಂಜನೆಯಂತಹ ಸಿನೆಮಾ ಸಂಬಂಧಿ ಕಾರ್ಯಕ್ರಮಗಳಲ್ಲಿ ಕನ್ನಡಕ್ಕಿಂತ ತುಸು ಹೆಚ್ಚೇ ಹಿಂದಿ ಚಿತ್ರಗಳ ಬಗ್ಗೆ ಮಾಹಿತಿ ನೀಡಲು ತುದಿಗಾಲ ಮೇಲೆ ನಿಂತುಕೊಳ್ಳುವುದು?
  • ಯಾಕೆ ಕನ್ನಡದ ಮನರಂಜನೆ ವಾಹಿನಿಗಳ ಡ್ಯಾನ್ಸ್, ಹಾಡು ಮುಂತಾದ ಕಾರ್ಯಕ್ರಮಗಳಲ್ಲಿ ಸುಖಾಸುಮ್ಮನೆ ಹಿಂದಿ ಹಾಡುಗಳನ್ನು ತೂರಿಸುವುದು? ಕನ್ನಡಿಗರಿಗೆ ಹಿಂದಿ ಮನರಂಜನೆಯೇ ಬೇಕಿದ್ದಲ್ಲಿ, ಅದು ಹೇಗೆ ಬೆಂಗಳೂರಿನ 80% ಕ್ಕೂ ಹೆಚ್ಚು ಜನರು ಕನ್ನಡ ಎಫ್.ಎಮ್ ವಾಹಿನಿಗಳನ್ನು ಕೇಳುತ್ತಿದ್ದಾರೆ ?
  •  ಕನ್ನಡಿಗರಿಗೆ ನಿಜಕ್ಕೂ ಅಷ್ಟೇನು ಮಹತ್ವವಿಲ್ಲದ ಹಿಂದಿ,ತಮಿಳು,ತೆಲುಗು ಚಿತ್ರಗಳ ಬಗ್ಗೆ ನೀಡುವ ಪ್ರಚಾರ ನಿಜಕ್ಕೂ disproportionate ಅನ್ನಿಸುವುದಿಲ್ಲವೇ?
  • ಕನ್ನಡಿಗರ ಮಾರುಕಟ್ಟೆಯನ್ನೇ ಸರಿಯಾಗಿ ಅರ್ಥ ಮಾಡಿಕೊಳ್ಳದೇ ಮಾಡುತ್ತಿರುವ ಈ ರೀತಿಯ ಎಡವಟ್ಟುಗಳು ನಾವೇ ಕೈಯಾರೇ ಇಲ್ಲದಿರುವ ಮಾರುಕಟ್ಟೆಯನ್ನು ಪರಭಾಷಾ ಚಿತ್ರಗಳಿಗೆ ಕಲ್ಪಿಸಿಕೊಡುವಂತೆ ಮಾಡುತ್ತಿಲ್ಲವೇ?

 ಕನ್ನಡದ ಪತ್ರಿಕೆ ಮತ್ತು ಎಲೆಕ್ಟ್ರಾನಿಕ್ ವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಗೆಳೆಯರು ಈ ಬಗ್ಗೆ ಗಮನ ಹರಿಸಿ, ಬದಲಾವಣೆ ಮಾಡಿಕೊಂಡರೆ ಅವರಿಗೂ ಲಾಭ, ಕನ್ನಡದ ಗ್ರಾಹಕನಿಗೂ ಲಾಭ, ಕನ್ನಡ ಭಾಷೆಯ ಉಳಿವು, ಬೆಳವಿಗೂ ಪೂರಕ ಅನ್ನುವುದು ನನ್ನ ಅನಿಸಿಕೆ.

ಚಿತ್ರಕೃಪೆ:ಗೂಗಲ್ ಇಮೇಜ್

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments