ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 25, 2010

“ಗ್ರಾಮದೇಗುಲಗಳಾಗಿ ಗರೋಡಿಗಳು”

‍ನಿಲುಮೆ ಮೂಲಕ

ಜಗನ್ನಾಥ್ ಶಿರ್ಲಾಲ್

ತುಳುನಾಡು ಸಾಂಸ್ಕೃತಿಕ ಅನನ್ಯತೆಯ ನಾಡು. ದೈವ, ದೇವರುಗಳ ಸಮಾಗಮದ ಬೀಡು. ಇಲ್ಲಿನ ಪರಿಸರ, ಪ್ರಾಣಿ, ಪಕ್ಷಿ, ಗಿಡ, ಮರ, ಸ್ಥಳ, ವೀರ ಪುರುಷರ, ಆರಾಧನೆಯ ದೈವಿಕ ನೆಲೆಯಾಗಿದೆ. ಪ್ರತಿಯೊಂದು ನಂಬಿಕೆ ನಡವಳಿಕೆಗಳು ಜಾನಪದದ ಆಧಾರದಲ್ಲಿ ಹೆಣೆದಿರುವುದು ತುಳುನಾಡ ಸಂಸ್ಕೃತಿಯ ವೈಶಿಷ್ಟ್ಯ.
ವ್ಯಕ್ತಿಗಳು ತನ್ನ ಜೀವಿತ ಕಾಲದಲ್ಲಿ ಅಸಾಮಾನ್ಯ ರೀತಿಯಲ್ಲಿ ಬಾಳಿ ಬದುಕಿ ಬಲಿದಾನವಾದಾಗ ಅವರನ್ನು ದೈವತ್ವ ಮಟ್ಟಕ್ಕೆ ಏರಿಸಿ ಪೂಜಿಸುವ ಪದ್ಧತಿ ನಮ್ಮ ಸಂಸ್ಕೃತಿಯಲ್ಲಿ ಕಂಡುಬರುತ್ತದೆ. ಅತಿಮಾನುಷ ಶಕ್ತಿಗಳನ್ನು ಪೂಜಿಸಲು ಅತ್ತ ದೇವಸ್ಥಾನವು ಅಲ್ಲದ ಇತ್ತ ಭೂತ ಸ್ಥಾನವೂ ಅಲ್ಲದ ಒಂದು ವಿಶಿಷ್ಟ ಪೂಜಾ ಕೇಂದ್ರವಾಗಿ ‘ಗರೋಡಿ’ ಎಂಬ ದೇಗುಲವು ನಿರ್ಮಾಣವಾದುದು ಜನರ ಭಾವುಕ ಪ್ರಜ್ಞೆಗೆ ತಲೆಬಾಗಲೇ ಬೇಕಾದುದು. ಈ ಮೂಲಕ ಇಡೀ ಗ್ರಾಮ ವ್ಯವಸ್ಥೆಯಲ್ಲಿ ಆ ಗರೋಡಿಗೆ ಸಂಬಂಧಿಸಿದ ಸಮುದಾಯದ ಜನರನ್ನು ಒಂದುಗೂಡಿಸುವಲ್ಲಿ ದೈವ ಭಕ್ತಿಯು  ಕಾರಣವಾಗಿದೆ. ಅಲ್ಲದೆ ಪ್ರಸ್ತುತ ಆಧುನಿಕ ಜಗತ್ತಿನಲ್ಲಿ ಸಮುದಾಯಗಳ ಮಧ್ಯೆ ಸಾಮರಸ್ಯ ಮೂಡಿಸಲು ಮತ್ತು ಪಾಲ್ಗೊಳ್ಳುವಿಕೆಗೆ ಗರೋಡಿಗಳು ಒಂದು ಕಾರಣವಾಗಿದೆ.

ಗರೋಡಿ ಶಬ್ದೊತ್ಪತ್ತಿ:
        ಗರೋಡಿ ಎಂಬುದು ಶಸ್ತ್ರ ವಿದ್ಯೆ, ಜಟ್ಟಿ ಕಾಳಗ ಮೊದಲಾದುವನ್ನು ಅಭ್ಯಾಸ ಮಾಡುವ ವ್ಯಾಯಾಮ ಶಾಲೆ ಎಂಬುದಾಗಿದ್ದು ಕಾಲಾನಂತರದಲ್ಲಿ ವೀರ ಪುರುಷರ ಆರಾಧನಾ ಕೇಂದ್ರವಾಗಿ ಮಾರ್ಪಾಡಾಗಿದೆ. ಯುದ್ಧ ಶಿಕ್ಷಣ ಕೇಂದ್ರದಲ್ಲಿ ಕಳರಿ, ಮಲ್ಲಕಂಭ ಮುಂತಾದ ಕಠಿಣ ತರಬೇತಿ ಪಡೆದು ಬಲಿದಾನ ಹೊಂದಿದ ಮಹಾ ಪುರುಷರನ್ನು ಹಿಂದೆ ಗರುಡರೆಂದೂ ಕರೆಯಲಾಗುತ್ತಿತ್ತು. ಈ ರೀತಿ ಗರೋಡಿಗಳಲ್ಲಿ ಯುದ್ಧ ವಿದ್ಯೆಯ ತರಬೇತಿ ಪಡೆದು ತ್ಯಾಗ, ಶೌರ್ಯ ಮೆರೆದು, ಬಲಿದಾನ ಹೊಂದಿ ಬ್ರಹ್ಮ ಬೈದರ್‌ರಾದ ವೀರರೇ ಕೋಟಿ ಚೆನ್ನಯ್ಯರು. ಇವರ ಬಲಿದಾನಕ್ಕಿಂತ ಮೊದಲೇ ಗರೋಡಿಗಳು ಅಸ್ತಿತ್ವದಲ್ಲಿದ್ದು ಅದರಲ್ಲಿಯೆ ಪಳಗಿದ ಅಸಾಮಾನ್ಯ ವ್ಯಕ್ತಿಗಳಾಗಿದ್ದರು.
ಕೋಟಿ ಚೆನ್ನಯ್ಯರು ಬೈದೆರ್ಲುಗಳಾದ ಬಗೆ:
        ದೇವರಿಗಿಂತ ಕೆಳಗೆ ಭೂತಗಳಿಗಿಂತ ಮೇಲಿನ ಸ್ಥಾನವನ್ನು ಹೊಂದಿರುವ, ಬೈದೆರ್ಲುಗಳು ಇಂದು ತುಳುನಾಡಿನ ಎಲ್ಲಾ ಜಾತಿ, ಮತ, ವರ್ಗಗಳ ಜನರ ನಡುವೆ ಗರೋಡಿಗಳಲ್ಲಿ ಪೂಜಿಸಲ್ಪಡುತ್ತಿದ್ದಾರೆ.
        ನಾಗಬ್ರಹ್ಮರನ್ನು ಕುಲದೇವರಾಗಿ ನಂಬಿ, ಬದುಕಿನಲ್ಲಿ ಸತ್ಯ, ನ್ಯಾಯ, ಧರ್ಮವನ್ನು ಪರಿಪಾಲಿಸುತ್ತ ಜಾತಿಪದ್ಧತಿ, ವರ್ಗ ಭೇದದ ತಾರತಮ್ಯದಿಂದ ಬಡಜನ ತತ್ತರಿಸಿದ್ದ ಕಾಲದಲ್ಲಿ ಸಮಾಜದ ಮಧ್ಯೆ ಎದ್ದು ನಿಂತು ಶೌರ್ಯ ಮೆರೆದು ಅಸಹಾಯಕ ವರ್ಗದವರಿಗೆ ನ್ಯಾಯ ದೊರಕಿಸಿ, ಅನ್ಯಾಯವನ್ನು ಹಿಮ್ಮೆಟ್ಟಿಸಿ ದುಷ್ಟ ಶಕ್ತಿಗಳನ್ನು ನಿಗ್ರಹಿಸಿ ಜಾನಪದ ರಂಗದಲ್ಲಿ ದೈವತ್ವ ಮಟ್ಟಕ್ಕೇರಿ ಬೈದೆರ್ಲುಗಳಾದರು.
        ಕೋಟಿ ಚೆನ್ನಯರು ಅವಸಾನವಾದ ನಂತರ ಉತ್ತರ ಕ್ರಿಯಾದಿಗಳನ್ನು ಬಲ್ಲಾಲರು ನೆರವೇರಿಸಿ ದುಃಖತಪ್ತರಾಗಿ ಮಲಗಿದಾಗ ಅವಳಿ ವೀರರು ಕನಸಿನಲ್ಲಿ ಬಂದು ಹದಿನಾರು ಕೋಲು ಉದ್ದದ ಗರೋಡಿ ಕಟ್ಟಿಸಬೇಕು, ಎರಡು ತಂಬಿಗೆ ಹಾಲು ಕೊಡಬೇಕು ಎಂದು ಅಭಯದ ನುಡಿಕೊಡುತ್ತಾರೆ. ಆ ಪ್ರಕಾರವಾಗಿ ಎಣ್ಮೂರಿನಲ್ಲಿ ಬಲ್ಲಾಳರು ಆದಿ ಬೈದೆರ್ ಗರೋಡಿ ಸ್ಥಾಪನೆ ಮಾಡಿದರು ಎಂದು ಐತಿಹ್ಯಗಳಿಂದ ತಿಳಿದುಬರುತ್ತದೆ. ಅಲ್ಲಿಂದ ಗರೋಡಿಗಳ ಪ್ರಸರಣವಾಯಿತು.
ಬೈದೆರ್ಲುಗಳ ಪ್ರಸರಣ:
        ಬೈದೆರ್ಲುಗಳು ‘ಅರುವತ್ತಾರು ಗರೋಡಿ ಮೂವತ್ತ ಮೂರು ತಾವು ಕಟ್ಟಿಸಿಕೊಂಡೆವು’ ಎಂಬ ಐತಿಹ್ಯವಿದ್ದರೂ ತುಳುನಾಡಿನ ಗರೋಡಿಗಳ ಬಗ್ಗೆ ಅಧ್ಯಯನ ನಡೆಸಿದ ಬನ್ನಂಜೆ ಬಾಬು ಅಮಿನ್ ಮತು ಮೋಹನ್ ಕೋಟ್ಯಾನ್‌ರವರು ಒಟ್ಟು 214 ಗರೋಡಿಗಳನ್ನು ಗುರುತಿಸಿದ್ದಾರೆ.
        ಬೈದೆರ್ಲುಗಳ ಪ್ರಸರಣದ ಬಗ್ಗೆ ಎರಡು ರೀತಿಯ ಐತಿಹ್ಯಗಳನ್ನು ಹೊಂದಿದೆ. ಬೈದೆರ್ಲುಗಳು ತನ್ನ ದೈವಿಕ ಶಕ್ತಿಯ ಮುಖಾಂತರ ಪ್ರದೇಶದಿಂದ ಪ್ರದೇಶಕ್ಕೆ ಪಸರಿಸಿ ಜನರಿಗೆ ಕನಸಿನಲ್ಲಿ ಕಾಣಿಸಿಕೊಂಡು ಗರೋಡಿ ಕಟ್ಟಲು ಸೂಚಿಸಿದ ನಂಬಿಕೆಗಳಾದರೆ ಇನ್ನೂ ಕೆಲವು ಕಡೆ ಜನರೇ ಸ್ವತಃ ತಮ್ಮ ಇಷ್ಟದಂತೆ ನಿರ್ಮಿಸಿದ ಗರೋಡಿಗಳು, ಬೈದೆರ್ಲುಗಳು ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವಾಗ ಹಲವಾರು ಅಡಚಣೆಗಳು ಎದುರಾದದ್ದು ಐತಿಹ್ಯಗಳಿಂದ ತಿಳಿದುಬರುತ್ತದೆ. ಸ್ಥಳೀಯ ಪ್ರಭಾವಿ ಭೂತಗಳು, ಬೈದೆರ್ಲುಗಳನ್ನು ನೆಲೆಯಾಗಲು ಬಿಡದೆ ಓಡಿಸಿದ ನಿದರ್ಶನಗಳು ಇವೆ. ತನ್ನ ಅಸ್ತಿತ್ವಕ್ಕೆ, ಪ್ರಸಿದ್ಧಿಗೆ ಧಕ್ಕೆಯಾಗಬಹುದೆಂದು ಬೈದೆರ್ಲುಗಳನ್ನು ನೆಲೆವೂರಲು ಅವಕಾಶ ನೀಡಲಿಲ್ಲ. ಬಂಗಾಡಿಯಲ್ಲಿ ಬಂಗಾಡಿ ಉಳ್ಳಾಕುಳು ಅಲ್ಲದೆ ಇನ್ನೂ ಹಲವು ಕಡೆ ಪ್ರಬಲ ದೈವಗಳಿರುವ ಸ್ಥಳಗಳಲ್ಲಿ ಬೈದೆರ್ಲುಗಳು ನೆಲೆಯಾಗಲಿಲ್ಲ. ಆ ಕಾರಣದಿಂದ ಆ ಪ್ರದೇಶಗಳಲ್ಲಿ ಗರೋಡಿಗಳು ನಿರ್ಮಾಣವಾಗಿಲ್ಲದಿರುವುದು ದೈವಗಳಲ್ಲೂ ಇರುವ ಅಸಮಾನತೆಯನ್ನು ಗುರುತಿಸಬಹುದು. ಇನ್ನೂ ಕೆಲವು ಕಡೆ ಬೇಯಿಸಿದ ಭತ್ತ ಮೊಳಕೆಯೊಡೆದ ಪ್ರಸಂಗದಿಂದ ಬೈದೆರ್ಲುಗಳ ಕಾರಣಿಕವೆಂದು ತಿಳಿದು ಗರೋಡಿಗಳ ಸ್ಥಾಪನೆಗೆ ಪ್ರೇರಣೆಯಾಗಿದ್ದುಂಟು.
ಬೆಳ್ತಂಗಡಿ ತಾಲ್ಲೂಕಿನ ಗರಡಿಗಳು:
        ಗರೋಡಿಗಳನ್ನು ಎರಡು ವಿಧವಾಗಿ ಮನೆ ಗರೋಡಿ ಮತ್ತು ಗ್ರಾಮ ಗರೋಡಿಗಳಾಗಿ ಗುರುತಿಸಬಹುದು. ತಾಲ್ಲೂಕಿನ ಎರಡು ಮನೆ ಗರೋಡಿಗಳೆಂದರೆ ಮೇಲಂತಬೆಟ್ಟು ಮತ್ತು ದೇಲಂಪಾಡಿ ಗರೋಡಿಗಳು. ಬೆಳ್ತಂಗಡಿ ತಾಲ್ಲೂಕಿನಲ್ಲಿ ಒಟ್ಟು ಹದಿನಾರು ಗ್ರಾಮ ಗರೋಡಿಗಳಿವೆ. ಅವುಗಳೆಂದರೆ:
1. ಬಾವಂತಬೆಟ್ಟು ಮರಿಪಾದೆ ಗರೋಡಿ               2. ಬಂತಡ್ಕ ಗರೋಡಿ (ಶಿರ್ಲಾಲು ಗ್ರಾಮ)
3. ದೈಪಾಲ್‌ಬೆಟ್ಟು ಗರೋಡಿ (ಮೂಡುಕೋಡಿ)        4. ಕಾಶಿಪಟ್ನ ಗರೋಡಿ
5. ಕಾಲಿಪಾಡಿ ಗರೋಡಿ (ಮರೋಡಿ)          6. ಕೊಕ್ರಾಡಿ ಗರೋಡಿ
7. ಮಾರವಾಂಡಿ ಗರೋಡಿ (ಮುದ್ದಾಡಿ)               8. ನಾರಾವಿ ಗರೋಡಿ
9. ನಾವುಂಡ ಗರೋಡಿ (ಮಾಲಾಡಿ ಗ್ರಾಮ)          10. ನೇರಳೆಗುಡ್ಡೆ ಗರೋಡಿ (ಪೆರಿಂಜೆ)
11. ಪೆರಾಜೆ ಗರೋಡಿ (ಪೆರಾಡಿ)                      12. ಅರ್ಚಾಡಿ ಗರೋಡಿ (ಪಂಜಿನ ಡಯಿ)
13. ಸುಳ್ಕೇರಿಮೊಗ್ರು ಗರೋಡಿ                        14. ಸುಲ್ಕೇರಿ ಗರೋಡಿ      
15. ನಾವರ ಗರೋಡಿ                                 16. ಕುದ್ಯಾಡಿ ಗರೋಡಿ
ಪೂಜಾ ವಿಧಾನ:
        ಗರೋಡಿಗಳಲ್ಲಿ ನಾಗಬ್ರಹ್ಮರ ಆರಾಧನೆಯೊಂದಿಗೆ ಬೈದೆರ್ಲುಗಳ ಉತ್ಸವವು ಜನಮನದಲ್ಲಿ ಭಕ್ತಿ, ಶ್ರದ್ಧೆಗಳನ್ನು ಮೂಡಿಸಿದೆ. ಗರೋಡಿಗಳಲ್ಲಿರುವ ಆಚರಣೆಗಳು ಇತರ ದೇವಸ್ಥಾನಗಳಲ್ಲಿರುವಂತೆ ಪೂಜಾ ಪದ್ಧತಿಯನ್ನು ಒಳಗೊಂಡಿದೆ. ಬೈದೆರ್ಲುಗಳು ನಾಗಬ್ರಹ್ಮರೊಂದಿಗೆ ಸ್ಥಾನ ಪಡೆದ ಕಾರಣ ಗರೋಡಿಗಳಲ್ಲಿ ಅನ್ನ ನೈವೇದ್ಯಗಳು ಪೂರ್ತಿ ಶಾಖಾಹಾರ ಪದ್ಧತಿಯಾಗಿದೆ. ಸಂಕ್ರಮಣ, ಚೌತಿ ಪೂಜೆಗಳಂದು ಬೈದೆರ್ಲುಗಳಿಗೆ ಪರ್ವ ಸೇವೆ ನಡೆಯುತ್ತದೆ. ವಾರ್ಷಿಕಾಚರಣೆ ಸಂದರ್ಭದಲ್ಲಿ ಸುಗ್ಗಿ ತಿಂಗಳಲ್ಲಿ ಬೈದೆರ್ಲುಗಳಿಗೆ ಮತ್ತು ಅಲ್ಲಿರುವ ದೈವಗಳಿಗೆ ಕೋಲ ನಡೆಯುತ್ತದೆ. ಗರೋಡಿಗಳಲ್ಲಿ ಪ್ರಾದೇಶಿಕ ವ್ಯತ್ಯಾಸಗಳನ್ನು ಕಾಣಬಹುದು. ತಾಲ್ಲೂಕಿನ ಗರೋಡಿಗಳಲ್ಲಿ ಎರಡು ಗರೋಡಿಗಳು ಪುರಾತನವಾಗಿದ್ದು ಉಳಿದವು ಇತ್ತೀಚಿನವುಗಳು. ಗರೋಡಿಗಳಲ್ಲಿರುವ ಇತರ ದೈವಗಳು ಕೊಡಮಣಿತ್ತಾಯ, ದೈವ, ಮಾಯಾಂದಾಗ (ಮಾಣಿ ಬಾಲೆ), ಕಾಂಜ ಕುಜುಂಬ, ಜೋಗಿ ಪುರುಷ, ಕಲ್ಕುಡ ಕಲ್ಲುರ್ಟಿ, ಮಾರಂಡಿ, ಮೈಸಂದಾಯ, ಪಂಜುರ್ಲಿ, ಮಲಕಾಯ, ಪಿಲಿಚಾಮುಂಡಿ, ಕಾಳಮ್ಮ ಭೂತಗಳಿದ್ದು ಆಯಾ ಗ್ರಾಮದ ವೈವಿಧ್ಯತೆಗೆ ಅನುಸಾರವಾಗಿ ನೆಲೆಯಾಗಿವೆ. ಆ ಗ್ರಾಮದ ಪ್ರಭಾವಿ ದೈವಗಳು ಮಾತ್ರ ಅಲ್ಲಿ ಕಂಡುಬರುತ್ತವೆ.

ನಂಬಿಕೆ:
        ಗರೋಡಿಗಳ ವಾರ್ಷಿಕ ಆಚರಣೆ, ಜಾತ್ರೋತ್ಸವದ ಸಂದರ್ಭದಲ್ಲಿ ಜನ ಹರಕೆಯ ರೂಪದಲ್ಲಿ ಕುರುಂಟು ಮುಡಿ, ತೆಂಗಿನಕಾಯಿ ಹರಕೆ ರೂಪದಲ್ಲಿ ಸಲ್ಲಿಸುವುದು, ಬೆಳೆ ತರಕಾರಿ, ಕೃಷಿಗೆ ತೊಂದರೆಗಳಾದಾಗ ಬೈದೆರ್ಲುಗಳಿಗೆ ಹರಕೆ ಹೇಳುವ ಮುಖಾಂತರ ಬೈದೆರ್ಲುಗಳಿಗೆ ಮೊರೆ ಹೋಗುವುದು ಜನರಲ್ಲಿರುವ ಭಾವುಕ ಭಕ್ತಿಯನ್ನು ತೋರಿಸುತ್ತದೆ. ಬೇಯಿಸಿದ ಭತ್ತ ಮೊಳಕೆಯೊಡೆದರೆ ಬೈದೆರ್ಲುಗಳ ಉಪದ್ರ ಎಂಬ ನಂಬಿಕೆಯಿಂದ ಹರಕೆ ಹೇಳುವ ವಾಡಿಕೆಯಿದೆ.
        ಈ ರೀತಿಯಾಗಿ ಜನಮನದಲ್ಲಿ ಗ್ರಾಮ ದೇಗುಲಗಳಾಗಿ, ವಿವಿಧ ಜಾತಿ, ಸಮುದಾಯಗಳ ಮಧ್ಯೆ ಕಾರಣಿಕ ಪುರುಷರ ಗರೋಡಿಗಳು ಸಾಮಾಜಿಕ ಸಾಮರಸ್ಯದೊಂದಿಗೆ ಭಕ್ತಿ ಶ್ರದ್ಧೆಯ ಕೇಂದ್ರವಾಗಿದೆ.

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments