ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ…!
– ಆಸು ಹೆಗ್ಡೆ
ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ, 
ಈ ಗೂಡು ತನ್ನದು, ಇದರಲ್ಲಿ ತನ್ನ ಬೆವರು ಬೆರೆತಿದೆ,
ತನ್ನ ಪರಿಶ್ರಮದ ಸಾಕ್ಷಿಯಾಗಿ ಇನ್ನೂ ಸುಭದ್ರವಾಗಿಯೇ ಅದು ಉಳಿದಿದೆ;
ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,
ಹಕ್ಕಿ ಹೊಸ ನೆಲೆಯ ಹುಡುಕಿ ಹೊರಡಬೇಕಾಗಿದೆ,
ಇಂದಿಗೆ ತೀರಿತು ಇಲ್ಲಿಯ ಋಣ, ಎಂದು ಇನ್ನು ಹೊಸಗೂಡು ಕಟ್ಟಬೇಕಾಗಿದೆ;
ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,
ತಾನು ತನ್ನದೆಂಬ ಭಾವುಕತೆಗೆ ಅಂಟಿರಲಾಗದಾಗಿದೆ,
ಭೌತಿಕ ವ್ಯಾಮೋಹ ತೊರೆದು ಮೈಕೊಡವಿ ಎದ್ದು ಹೊರನಡೆಯಬೇಕಾಗಿದೆ;
ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,
ವಿಷಜಂತುಗಳ ಜೊತೆಗೆ ಕಾಲಹರಣ ವ್ಯರ್ಥವಾದುದಾಗಿದೆ,
ಮನವೊಲಿಸಿ ತನ್ನದನ್ನು ಉಳಿಸಿಕೊಂಬ ವ್ಯರ್ಥ ಪ್ರಯತ್ನ ಇನ್ನು ಬೇಡವಾಗಿದೆ;
ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,,
ಇದ್ದಲ್ಲೇ ಒಳಗೊಳಗೇ ಮರುಗಿ ಬೇಯುವುದು ಬೇಡವಾಗಿದೆ,
ಹಾವಿನ ಸಹವಾಸವ ತೊರೆದು ಸ್ವಚ್ಛಂದ ಬಾನಿನಲ್ಲಿ ತಾನೀಗ ಹಾರಾಡಬೇಕಿದೆ;
ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,
ನಂಬಿದ ತತ್ವಗಳ ಇಂದು ಒರೆಗೆಹಚ್ಚಿ ಪರೀಕ್ಷಿಸಬೇಕಾಗಿದೆ,
ತಾನು ಸರ್ವಸಮರ್ಥ ಎಂಬುದ ಈ ಜಗದ ಮುಂದೆ ಸಾಬೀತುಪಡಿಸಬೇಕಾಗಿದೆ;
ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,
ತಲೆಯೆತ್ತಿ, ಎತ್ತ ದೈವಚಿತ್ತವೋ ಅತ್ತ ನಡೆದುಬಿಡಬೇಕಾಗಿದೆ,
ಹೊಸದೊಂದು ಸ್ಥಾನದಲ್ಲಿ ಹೊಸ ಅಸ್ಥಿತ್ವವನ್ನು ಸ್ಥಾಪಿಸಿ ಬೆಳೆಸಿಕೊಳ್ಳಬೇಕಾಗಿದೆ!
ಚಿತ್ರ ಕೃಪೆ : http://www.austinreptileservice.net





– ಆಸು ಹೆಗ್ಡೆ
ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,
ನಿಮ್ಮ ಕವನ ನನಗೆ ಇಷ್ಟವಾಗಿದೆ….
ಶುಭಾಶಯ ಹೇಳದಿರಲು ಕಷ್ಟವಾಗಿದೆ…
ಹಕ್ಕಿಯ ಮುಂದಿನ ಹೆಜ್ಜೆ ಏನಾಗಿದೆ..
ತಿಳಿಯುವಲ್ಲಿ ಸ್ವಲ್ಪ ಕುತೊಹಲವಿದೆ..
“ಹಕ್ಕಿಯ ಮುಂದಿನ ಹೆಜ್ಜೆ ಏನಾಗಿದೆ..
ತಿಳಿಯುವಲ್ಲಿ ಸ್ವಲ್ಪ ಕುತೊಹಲವಿದೆ..”
– ಹೊಸದೊಂದು ಸ್ಥಾನದಲ್ಲಿ ಹೊಸ ಅಸ್ಥಿತ್ವವನ್ನು ಸ್ಥಾಪಿಸಿ ಬೆಳೆಸಿಕೊಳ್ಳಬೇಕಾಗಿದೆ!
ಧನ್ಯವಾದಗಳು!
ಅಸ್ಥೆಯಿಂದ ಕಟ್ಟಿದ ಗೂಡಲ್ಲಿ
ಅನ್ಯರ ಪ್ರವೇಶ ಸಹಿಸಲಾರದು ಹಕ್ಕಿ ಮನಸಿಲ್ಲಿ
ಹೋರಾಡುವ ಛಲವೊಂದಿದ್ದರೆ
ಸಮಯಕ್ಕೆ ತಕ್ಕ ಬುದ್ದಿಯಿದ್ದರೆ
ಹಾವ ಹೊರದೂಡಿ
ಮತ್ತದೆ ಪ್ರಶಾಂತತೆಯನ್ನ ತರಬಲ್ಲುದು
ದುರ್ಬಲತೆ ಬೇಡ ಹಕ್ಕಿಗೆ
———————————–
ಸುರೇಶ್ ತುಂಬಾ ಚೆನ್ನಾಗಿದೆ
ಅರ್ಥಗರ್ಭಿತ ಕವಿತೆ. ಕವಿತೆಯ ಒಳತೋಟಿ ಮತ್ತು. ಭಾವ ಚೆನ್ನಾಗಿದೆ.