ಪ್ರಕಟವಾದ ಮೊದಲನೇ ವಾರವೇ ಮೂರು ಮುದ್ರಣ, ಅಧಿಕೃತವಾಗಿ ಪುಸ್ತಕ ಬಿಡುಗಡೆ ಮಾಡಿದ್ದು ಎಂಟನೇ ಮುದ್ರಣ, ಪ್ರಕಟವಾಗುವ ಮೊದಲೇ ಬುಕ್ಕಿಂಗ್, ಎಲ್ಲಾ ಪ್ರತಿಗಳು ಖಾಲಿ, ಬೆಲೆ ದುಬಾರಿಯಾದರೂ ಎಲ್ಲಾ ಕಡೆ ಪುಸ್ತಕಗಳ ಜೋರು ಮಾರಾಟ, ಪತ್ರಿಕೆಗಳಲ್ಲಿ ಚರ್ಚೆ, ವಾದ, ವಿವಾದ, ಸಮರ್ಥನೆ, ದೂಷಣೆ – ಇಷ್ಟು ಹೇಳುತ್ತಿದ್ದಂತೆ ಎಲ್ಲರಿಗೂ ತಿಳಿದುಬಿಡುತ್ತದೆ. ಇದು ಇತ್ತೀಚೆಗೆ ಕನ್ನಡ ಸಾಹಿತ್ಯ ಲೋಕದ ವಿದ್ಯಮಾನ. ಅದು ಎಸ್.ಎಲ್. ಭೈರಪ್ಪನವರ ’ಕವಲು’ ಕಾದಂಬರಿ. ೨೩ ಮುದ್ರಣಗಳನ್ನು ಕಂಡ ಅವರ ಹಿಂದಿನ ಕಾದಂಬರಿ ‘ಆವರಣ’ದ ವಿಷಯವಂತೂ ಹೇಳುವುದೇ ಬೇಡ. ಬಹುಶಃ ಈ ಮಟ್ಟಿಗೆ ಸಂಚಲನ ಉಂಟು ಮಾಡುವ ಮತ್ತೊಬ್ಬ ಬರಹಗಾರ ಭಾರತದಲ್ಲಿಲ್ಲ. ಆ ಮಟ್ಟಿಗೆ ಜನಪ್ರಿಯ. ಎಲ್ಲಾ ವಯೋಮಾನದ ಓದುಗರನ್ನು ಹೊಂದಿರುವ ಲೇಖಕರಲ್ಲೊಬ್ಬರು. ಅಧ್ಯಯನ ಶೀಲ, ಸಮರ್ಪಣಾ ಮನೋಭಾವದ ಕಾದಂಬರಿಕಾರರಾಗಿ, ಅದ್ಭುತ ಬರಹಗಾರರಾಗಿ ಭೈರಪ್ಪನವರು ಪ್ರಸಿದ್ಧಿ. ಪಕ್ಕದ ರಾಜ್ಯದ ಸಾಹಿತ್ಯ ಲೋಕದಲ್ಲೇನಾಗುತ್ತಿದೆ ಎಂದು ಸರಿಯಾಗಿ ಗೊತ್ತಾಗದಿರುವ ಈ ಪರಿಸ್ಥಿತಿಯಲ್ಲೂ ಇವರ ಹಲವಾರು ಕಾದಂಬರಿಗಳು ಭಾರತದ ಅನೇಕ ಭಾಷೆಗಳಿಗೆ ಅನುವಾದಗೊಳ್ಳುತ್ತವೆ.ನಾನು ಓದಿದ ಇವರ ಮೊದಲ ಕಾದಂಬರಿ ‘ಧರ್ಮಶ್ರೀ’. ಅದಾದ ಮೇಲೆ ಅವರ ಅಂಚು, ದಾಟು, ಪರ್ವ, ವಂಶವೃಕ್ಷ, ನಿರಾಕರಣ, ಜಲಪಾತ, ಸಾರ್ಥ ಮುಂತಾದ ಹಲವು ಕಾದಂಬರಿಗಳನ್ನು ಓದಿದ್ದೇನೆ. ಒಂದೊಂದೂ ಕೂಡ ವಿಷಯಗಳ ಆಗರವಾಗಿ ಕಂಡಿವೆ. ಇನ್ನೂ ಕೆಲವು ಓದುವುದು ಬಾಕಿ ಇವೆ. ಘಟನೆಗಳನ್ನು ಕತೆಯಂತೆ ಹೇಳಿಬಿಡಬಹುದು, ಕಾಲ್ಪನಿಕ ಕತೆಗಳನ್ನು ಹೆಣೆದುಬಿಡಬಹುದು ಆದರೆ ಅದರಲ್ಲಿನ ಪಾತ್ರಗಳ ಮನಸ್ಸಿನ ತುಮುಲಗಳನ್ನು, ಸಮಾಜ, ಧರ್ಮ, ಸಂಪ್ರದಾಯ ಸಂಬಂಧಿತ ಸಂಗತಿಗಳನ್ನು ಚಿತ್ರಿಸುವುದು ಮಾತ್ರ ಎಲ್ಲರಿಗೂ ಸಾಧ್ಯವಿಲ್ಲ. ಅದನ್ನು ಸಮರ್ಥವಾಗಿ ಮಾಡುವುದರಿಂದಲೇ ಭೈರಪ್ಪನವರು ಅತ್ಯಂತ ಯಶಸ್ವಿ ಬರಹಗಾರರೆನ್ನಬಹುದು. ಭೈರಪ್ಪನವರ ಬರವಣಿಗೆಯ ವಿಷಯಗಳು ಎಷ್ಟರ ಮಟ್ಟಿಗೆ ಸೂಕ್ಷ್ಮವಾಗಿರುತ್ತವೆ ಎಂದರೆ ಅವು ಮೇಲ್ನೋಟಕ್ಕೆ ಸುಮ್ಮನೇ ಕಥೆಯಾಗಿದ್ದರೂ ಅದು ಸರಿಯಾಗಿ ಅರ್ಥವಾಗಲು ಅಂತಹ ಸನ್ನಿವೇಶಗಳನ್ನು, ಪರಿಸ್ಥಿತಿಗಳನ್ನು, ಮನಸ್ಥಿತಿಯನ್ನು ಸ್ವತಃ ಅನುಭವಿಸಿರಬೇಕು, ಇಲ್ಲವೇ ಕಂಡಿರಬೇಕು. ಆವಾಗಲಷ್ಟೇ ಅದು ಇನ್ನೂ ಚೆನ್ನಾಗಿ ತಾಗಬಲ್ಲುದು. ಜೊತೆಗೆ ಅವರ ಕಾದಂಬರಿಗಳ ವಿಷಯ ವ್ಯಾಪ್ತಿ ಮತ್ತು ಆಳ ಎಂತವರಿಗೂ ಹೊಸ ಹೊಸ ಲೋಕಗಳನ್ನು, ಸತ್ಯಗಳನ್ನು ತೋರಿಸಿಕೊಡುವಂತವು.
ಮತ್ತಷ್ಟು ಓದು 