ಆಲದ ಮರ ಮತ್ತು ಅತೃಪ್ತ ಆತ್ಮಗಳು
ಸಂತೋಷ್ ಆಚಾರ್ಯ
ಮನೆಯ ಕಾಂಪೌಂಡಿನಿಂದ ಸುಮಾರು ಐವತ್ತು ಮೀಟರ್ ದೂರದಲ್ಲಿದ್ದ ಆಲದ ಮರದಲ್ಲಿ ಭೂತವಿತ್ತು ಎಂಬುದು ಅಜ್ಜಿ ಕಲಿಸಿಕೊಟ್ಟ ಸಂಗತಿ. ಆಗ ಭೂತವೆಂದರೆ ಬಿಳಿ ಸೀರೆಯನ್ನುಟ್ಟ ಮಹಿಳೆ ಎಂದೆನಿಸುತ್ತಿದ್ದೆ. ವಿಶಾಲವಾಗಿದ್ದ ಆ ಮರದ ಯಾವುದೋ ಕೊಂಬೆಯಲ್ಲಿ ರಾತ್ರಿ ಬಂದು ನೇತಾಡುತ್ತಿರಬಹುದು ಎಂದು ನನ್ನ ಊಹೆಯಾಗಿತ್ತು. ಅದು ನಾನು ಓದುತ್ತಿದ್ದ ಪುಸ್ತಕಗಳ ಮಹಿಮೆಯೋ ಟಿವಿಯ ಮಹಿಮೆಯೋ ಅಥವಾ ಅಜ್ಜಿಯ ಮಹಿಮೆಯೋ ಭೂತವೆಂದರೆ ಹೀಗೆಯೇ ಇರತ್ತೆ ಎಂದು ನಾನು ಅಂದುಕೊಂಡಿದ್ದೆ. ಅದರ ಮೇಲೆ ಮನೆಯ ಹಿಂದಿನ ಬ್ರಾಹ್ಮಣರ ತಂದೆಯ ಶವವನ್ನೂ ಅಲ್ಲೇ ಸುಟ್ಟಿದ್ದು ಅವರ ಭೂತ ಕೂಡ ಅಲ್ಲಿ ಸೇರಿರಬಹುದು ಎಂದು ನನ್ನ ಶಂಕೆಯಾಗಿತ್ತು. ಪುರುಷರೂ ಸತ್ತ ನಂತರ ಭೂತವಾಗುತ್ತಾರೆ. ಸೊಳ್ಳೆಗಳಂತೆ ಅವು ತೊಂದರೆ ಮಾಡುವುದಿಲ್ಲ ಎಂದು ನನ್ನ ಅನಿಸಿಕೆಯಾಗಿತ್ತು. ಒಟ್ಟಾರೆ ಸತ್ತ ಬಳಿಕ ಎಲ್ಲರೂ ಭೂತವಾಗುತ್ತಾರೆ ಮತ್ತು ಆ ಮರದಲ್ಲಿ ಜೋತು ಬೀಳುತ್ತಾರೆ ಎಂದು ಅಂದುಕೊಂಡಿದ್ದೆ. ನನ್ನ ಎಷ್ಟೋ ಟೆನ್ನಿಸ್ ಬಾಲುಗಳು ಆ ಮರದ ಕೆಳಗಿದ್ದ ಪೊದೆಗಳಲ್ಲಿ ಮರೆಯಾಗಿತ್ತು. ಹುಡುಕುವ ಧೈರ್ಯ ಯಾವತ್ತೂ ಮಾಡಿರಲಿಲ್ಲ. ಆದರೆ ಕ್ರಮೇಣ ಚಿಂತನೆಗಳು ಬದಲಾದಂತೆ ಇದೆಲ್ಲಾ ನಗಣ್ಯವಾಗಿದ್ದು ಬೇರೆ ಮಾತು. ಮತ್ತಷ್ಟು ಓದು 





