ಕನ್ನಡಿಗನ ರಾಷ್ಟ್ರೀಯತ್ವಕ್ಕೆ ಹಿಂದಿ ಬೇಕಿಲ್ಲ,ಕನ್ನಡ ಮಾತ್ರ ಸಾಕು
ಕಲ್ಯಾಣ ರಾಮನ್ ಚಂದ್ರಶೇಖರನ್
*****
ಕಳೆದ ಭಾನುವಾರ, ೨೬ ಡಿಸಂಬರ್ ೨೦೧೦ ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ, ಕರ್ನಾಟಕ ಮಹಿಳಾ ಹಿಂದಿ ಸೇವಾ ಸಮಿತಿಯ ೩೭ನೇ ಘಟಿಕೋತ್ಸವದಲ್ಲಿ ಸಾಹಿತಿ ಜಯಂತ ಕಾಯ್ಕಿಣಿ ಅವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತ “ರಾಷ್ಟ್ರ ಭಾಷೆ ಹಿಂದಿ ಸೇರಿದಂತೆ ಎಲ್ಲ ಪ್ರಾದೇಶಿಕ ಭಾಷೆಗಳು ಭಾರತದ ಏಕತೆಯ ಸಂಕೇತಗಳಿದ್ದಂತೆ” ಎಂದು ತಿಳಿಸಿರುತ್ತಾರೆ(ವಿಜಯ ಕರ್ನಾಟಕ ಸುದ್ಧಿ ೨೭/೧೨/೨೦೧೦, ಪುಟ ೧೧).
ಮೊದಲಿಗೆ ಹಿಂದಿ ಭಾರತದ ರಾಷ್ಟ್ರ ಭಾಷೆ ಅಲ್ಲ. ಹಾಗೆಂದು ನಮ್ಮ ಸಂವಿಧಾನದಲ್ಲಿ ಎಲ್ಲೂ ನಮೂದಾಗಿಲ್ಲ. ಅರಿವು-ತಿಳಿವುಳ್ಳ ಕಾಯ್ಕಿಣಿಯಂತಹವರೇ, ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂಬ ತಪ್ಪು ಅಭಿಪ್ರಾಯ ಹೊಂದಿರುವಾಗ ಇನ್ನು ಜನ ಸಾಮಾನ್ಯರ ಆಭಿಪ್ರಾಯದ ಕುರಿತಾಗಿ ಹೇಳುವುದೇನಿದೆ? ಇದು ಈ ಹಿಂದಿ ಸೇವಾ ಸಮಿತಿಗಳು, ತಮ್ಮ ಪ್ರಚಾರಕ್ಕಾಗಿ ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಬಿಂಬಿಸುತ್ತಿರುವ ಪರಿಯನ್ನು ಎತ್ತಿ ತೋರಿಸುತ್ತಿದೆ ಮತ್ತು ಜನಸಾಮಾನ್ಯರಲ್ಲಿ, ಹಿಂದಿ ಭಾರತದ ರಾಷ್ಟ್ರ ಭಾಷೆ, ಹಿಂದಿ ಬಲ್ಲವ ಮಾತ್ರ ರಾಷ್ಟ್ರ ಭಕ್ತಿ ಹೊಂದಿರಲು ಸಾಧ್ಯ , ಇಡೀ ಭಾರತದ ಸಂಸ್ಕೃತಿಯೆಂದರೆ ಕೇವಲ ಹಿಂದಿ ಸಂಸ್ಕೃತಿ ಮಾತ್ರ, ಹಿಂದಿ ಬಲ್ಲವನಿಗೆ ಮಾತ್ರ ಸರ್ಕಾರದ ಎಲ್ಲಾ ಉದ್ಯಮಗಳಲ್ಲಿ ಕೆಲಸ ಲಭ್ಯ, ಹಿಂದಿಯನ್ನು ಕಲಿತು ಇಡೀ ಭಾರತವನ್ನು ಸುತ್ತಾಡಿ ಎಲ್ಲವನ್ನು ಗ್ರಹಿಸಿ, ಎಲ್ಲರೊಂದಿಗೆ ಐಕ್ಯತೆಯನ್ನು ಸಾಧಿಸಿಬಿಡಬಹುದು ಮತ್ತು ಹಿಂದಿ ಬಾರದಿರುವುದೇ ನಮ್ಮ ಜನಪ್ರತಿನಿಧಿಗಳಿಗೆ ರಾಷ್ಟ್ರ ವರ್ಚಸ್ಸು ಗಳಿಸಲು ಸಾಧ್ಯವಾಗದಿರುವ ಕಾರಣ ಎಂಬ ಕಲ್ಪನೆ – ಭ್ರಮೆಯನ್ನು ಆಳವಾಗಿ ಬಿತ್ತಿದೆ. ವಾಸ್ತವವೆಂದರೆ ಭಾರತದೆಲ್ಲೆಡೆ ಹಿಂದಿಯ ಪ್ರತಿಪಾದನೆ ಕೇವಲ ಹಿಂದಿ ಭಾಷಿಕರಿಗೆ/ಪ್ರದೇಶಗಳಿಗೆ ಮಾತ್ರ ಒಲಿದಿರುವ ವರದಾನವಾಗಿ ಪರಿಣಮಿಸಿದೆ ಮತ್ತು ಹಿಂದಿ ಭಾಷಿಕರು ತಾವು ನೆಲಸಲು ಬರುವ ಪ್ರದೇಶಗಳ ಭಾಷೆಯನ್ನು ಕಡೆಗಣಿಸಲು ಮತ್ತು ಅಸಡ್ಡೆ ತೋರಲು ಪರೋಕ್ಷವಾಗಿ ಸಹಕಾರಿಯಾಗಿದೆ. ಮತ್ತಷ್ಟು ಓದು 





