28 ವರ್ಷಗಳ ಬಳಿಕ ಬ್ಲೂ ಪಡೆ ಗೆಲ್ಲಬಹುದೇ ವಿಶ್ವಕಪ್!?
– ಶಂಶೀರ್ ಬುಡೋಳಿ
ಜನವರಿ ೧೭. ಫೆಬ್ರವರಿ ೧೯ರಿಂದ ಎಪ್ರಿಲ್ ೨ ರವರೆಗೆ ಭಾರತ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ದೇಶಗಳ ಅತಿಥೇಯತ್ವದಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್‌ಗಾಗಿ ೧೫ ಮಂದಿ ಸದಸ್ಯರ
ಭಾರತ ತಂಡವನ್ನು ಪ್ರಕಟಿಸಿದ ದಿನ. ಸಮತೋಲನ ರೀತಿಯಲ್ಲಿ ವಿಶ್ವಕಪ್‌ಗಾಗಿ ತಂಡವನ್ನು ಆಯ್ಕೆ ಮಾಡಿರುವ ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷ ಕೃಷ್ಣಮಾಚಾರಿ ಶ್ರೀಕಾಂತ್ ಜೊತೆಗೆ ಯಶ್ಪಾಲ್ ಶರ್ಮಾ, ಸುರೇಂದ್ರ ಭಾವೆ, ನರೇಂದ್ರ ಹಿರ್ವಾನಿ ಹಾಗೂ ರಾಜಾ ವೆಂಕಟ್ ಸಮಿತಿಯು ಇಪ್ಪತ್ತೆಂಟು ವರ್ಷಗಳ ಬಳಿಕ ಭಾರತ ತಂಡ ವಿಶ್ವಕಪ್ ಗೆಲ್ಲಬೇಕೆಂಬ ನೆಲೆಯಲ್ಲಿ ತಂಡವನ್ನು ಪ್ರಕಟಿಸಿದಂತಿದೆ.
ಧೋನಿ ನೇತೃತ್ವದ ಭಾರತೀಯ ತಂಡ ಫೇವರೀಟ್ ತಂಡಗಳಲ್ಲೊಂದು ಎಂಬುದು ಸಂಶಯವಿಲ್ಲ. ಟೆಸ್ಟ್ ಅಗ್ರಸ್ಥಾನಿ ಹಾಗೂ ಏಕದಿನ ರ‍್ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನದಲ್ಲಿರುವ ಭಾರತ ಕ್ರಿಕೆಟ್ ತಂಡ ೨೦೧೧ರ ವಿಶ್ವಕಪ್ ಕ್ರಿಕೆಟ್‌ನಲ್ಲಿ ವಿಶ್ವಕಪ್ ಗೆಲ್ಲುವುದು ಅನಿವಾರ್ಯವೆಂದು ಗುರಿ ಇಟ್ಟುಕೊಂಡರೆ ಫೈನಲ್ ಹಾದಿಗೇರಬಹುದು. ತಂಡದ ಆಯ್ಕೆ ಸಮತೋಲನವಾಗಿದೆ. ಈ ಜೊತೆಗೆ ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ, ನ್ಯೂಝಿಲೆಂಡ್ ವಿರುದ್ಧ ಯಾವ ರೀತಿಯ ಪ್ರದರ್ಶನ ನೀಡುತ್ತದೆಯೆಂಬುದು ಕೌತುಕವಾಗಿದೆ. ಯಾಕೆಂದರೆ ಇವರೆಗೆ ತವರಿನಲ್ಲಿ ನಡೆದ ಸರಣಿ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಭಾರತ, ಈ ಬಾರಿಯ ವಿಶ್ವಕಪ್, ತವರಿನಲ್ಲಿ ನಡೆಯುವುದರಿಂದ್ದ ವಿಶ್ವಕಪ್ ಜಯಿಸುವ ಫೇವರೀಟ್ ತಂಡಗಳಲ್ಲೊಂದಾಗಿದೆ. ಗ್ರೂಪ್ ಬಿಯಲ್ಲಿ ಸ್ಥಾನ ಪಡೆದಿರುವ ಭಾರತದ ಫೈನಲ್ ಹಾದಿ ಸುಗಮವಾಗಿದೆ ಎಂದು ಹೇಳಬಹುದು. ಯಾಕೆಂದರೆ ಗ್ರೂಪ್ ಬಿಯಲ್ಲಿ ಭಾರತದ ಜೊತೆಗೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್‌ಇಂಡೀಸ್, ಬಾಂಗ್ಲಾದೇಶ, ಐರ್ಲೆಂಡ್ ಹಾಗೂ ಹಾಲೆಂಡ್ ತಂಡಗಳು ಸ್ಥಾನ ಪಡೆದಿವೆ.





