ಡಬ್ಬಿಂಗ್ ಬೇಕೋ ಬೇಡವೋ ಅಂತ ನಿರ್ಧರಿಸಬೇಕಾದವನು “ಕನ್ನಡ ಪ್ರೇಕ್ಷಕನೋ?” ಇಲ್ಲ “ಕನ್ನಡ ಚಿತ್ರ ರಂಗವೋ?”
“ಮಚ್ಚು,ಲಾಂಗು,ಲೀಟರ್ ಗಟ್ಲೆ ರಕ್ತ ಬಿಟ್ಟು ಬೇರೆ ಇನ್ನೆನಪ್ಪ ಇದೆ ನಿಮ್ಮ ಕನ್ನಡ ಚಿತ್ರಗಳಲ್ಲಿ?, ವರ್ಷಕ್ಕೆ ಬರೋ ಚಿತ್ರಗಳಲ್ಲಿ ಅರ್ದಕ್ಕರ್ಧ ರಿಮೇಕ್ ಚಿತ್ರಗಳೇ.ಯಪ್ಪಾ!! ಬಿಡೋ ಹೋಗ್ಲಿ… ” ಅಂತ ನನ್ನ ಅನ್ಯ ಭಾಷೆಯ ಗೆಳೆಯರು ಕೂಡಿ ಗೇಲಿ ಮಾಡಿ ನಗ್ತಾ ಇದ್ರು.ನಾನಾದರು ಏನಂತ ಉತ್ತರ ಕೊಡ್ಲಿ, ಇರೋ ವಿಷ್ಯಾನೆ ತಾನೇ ಪಾಪ ಅವ್ರು ಹೇಳ್ತಾ ಇರೋದು.ಅದ್ರಲ್ಲಿ ತಪ್ಪೇನಿದೆ?,ಒಬ್ಬ ಕನ್ನಡ ಸಿನೆಮಾ ಅಭಿನಯದ ಅಭಿಮಾನಿಯಾಗಿದ್ದಕ್ಕೆ ಇಂತ ಮಾತುಗಳನ್ನ ಕೇಳಲೆಬೇಕಾಗಿತ್ತು.
ಅವ್ರು ಹೇಳಿದ್ ಮಾತ್ಗಳನ್ನ ಒಮ್ಮೆ ಕೂತು ಯೋಚಿಸಿ ನೋಡಿದೆ.ಹೌದಲ್ಲ! ನಮ್ಮ ಚಿತ್ರರಂಗದವರು ‘ಓಂ’ ಚಿತ್ರ ಗೆದ್ದಾದ ಮೇಲೆ ದಶಕಗಳ ಕಾಲ ಮಚ್ಚು,ಲಾಂಗು ಹಿಡಿದು ಟಿ.ಎಂ.ಸಿಗಟ್ಲೆ ರಕ್ತ ಚೆಲ್ಲಾಡಿ,ಮಧ್ಯೆ ‘ತವರಿನ’ ನೆನಪಾಗಿ ತೊಟ್ಟಿಲು,ಬಟ್ಟಲು,ಬಿಂದಿಗೆ,ಚೊಂಬು ಎಲ್ಲ ತಂದು,ಕಡೆಗೆ ‘ಮುಂಗಾರು ಮಳೆ’ ಬಂದ್ ಮೇಲೆ ಪ್ರವಾಹದ ರೀತಿಯಲ್ಲಿ ಪ್ರೀತಿಯ ಮಳೆ ಸುರಿಸುತ್ತಾ,ಒಂದ್ಸರಿ ತಮಿಳು ಸಿನೆಮ, ಇನ್ನೊಂದ್ಸರಿ ತೆಲುಗು ಸಿನೆಮ,ಟೈಮ್ ಸಿಕ್ಕಾಗ ಮಲಯಾಳಂ,ಹಿಂದಿ ಸಿನೆಮಾಗಳನ್ನ ನೋಡಿ ಆ ರೀಲುಗಳನ್ನ ಇಲ್ಲಿಗ್ ತಗಂಡ್ ಬಂದು,ಅದನ್ನ ಇಲ್ಲಿ ಬಿಚ್ಚಿ ಅದೇ ಕತೆಗೆ ಕನ್ನಡದ ಬಣ್ಣ (ಅದನ್ನು ಸರಿಯಾಗ್ ಬಳಿಯೋದಿಲ್ಲ ಎಷ್ಟೋ ಜನ,ಅದು ಇರ್ಲಿ ಬಿಡಿ) ಬಳಿದು ಮೇಲ್ಗಡೆ ಆ ಸ್ಟಾರು,ಈ ಸ್ಟಾರು ಅಂತ ಹೆಸ್ರಾಕಂಡು ರಿಲೀಸ್ ಮಾಡ್ತಾರೆ.ಜನ ಬಂದ್ ನೋಡ್ತಾರಾ?,ಎಲ್ಲೋ ನಮ್ಮಂತ ಕನ್ನಡ ಚಿತ್ರಗಳನ್ನ ಮಾತ್ರ ನೋಡೋ ಮಂದಿ ವಿಧಿಯಿಲ್ಲದೇ ಬಂದು ನೋಡ್ತಾರೆ.ಉಳಿದವರು ‘ಬನ್ರೋ,ಆ ಸಿನೆಮ ಬಂದೈತೆ ನೋಡನ’ ಅಂದ್ರೆ ‘ಹೇಯ್,ಹೋಗಲೇ ಅದನ್ನ ಆ ಭಾಷೆಯಲ್ಲೇ ನೋಡಿವ್ನಿ.ಯಾವ್ದಾದ್ರು ಇವರೇ ಮಾಡಿರೋ ಕತೆಯಿದ್ರೆ ಹೇಳು ಬತ್ತಿನಿ ನೋಡಕೆ’ ಅಂತಾರೆ.
ಅನ್ಯ ಭಾಷೆಯ ಚಿತ್ರಗಳ ಹಕ್ಕುಗಳಿಗಾಗಿ ಆ ನಟ/ಈ ನಟ ರ ನಡುವೆ ತೆರೆ ಮರೆಯ ಕಸರತ್ತು ನಡೆಯುತ್ತಿದೆ ಅನ್ನುವಂತ ಸುದ್ದಿಗಳು ಮಾಮೂಲಾಗಿವೆ.ಹಾಗೆ ಸರ್ಕಸ್ ಮಾಡಿ ತಗೊಂಡು ಬರೋ ಕತೆಯೇನು ಆಕಾಶದಿಂದ ಉದುರಿದ್ದ? ಅಥವಾ ಯಾರಿಗೂ ಹೊಳೆಯದೆ ಇರೋ ಕತೆ ನಾ?.ಎರಡು ಅಲ್ಲ, ರಿಮೇಕ್ ಅನ್ನೋ ರೆಡಿಮೇಡ್ ತಿಂಡಿ ರುಚಿ ನೋಡಿರೋ ಜನ, ತಾವೇ ಅಡಿಗೆ ಮಾಡೋಕೆ ಇಷ್ಟ ಪಡ್ತಾ ಇಲ್ಲ.ಹೋಗ್ಲಿ ಆ ಚಿತ್ರಗಳನ್ನಾದರು ಬೇಗ ತಂದು ರಿಮೇಕ್ ಮಾಡ್ತಾರ ಅದು ಇಲ್ಲ.ಇತ್ತೀಚಿಗೆ ತಾನೇ ಬಂದ ತೆಲುಗು ಚಿತ್ರದ ರಿಮೆಕ್ನ, ಆ ಸಿನೆಮಾ ಬಂದು ೪-೫ ವರ್ಷಗಳಾಗಿರಬಹುದು.ಅದನ್ನ ಬಹಳಷ್ಟು ಜನ ಈಗಾಗಲೇ ತೆಲುಗು,ತಮಿಳಿನಲ್ಲಿ ನೋಡಿದ್ದಾರೆ, ಇನ್ನ ಕನ್ನಡದಲ್ಲಿ ತೆಗೆದರೆ ಓಡುತ್ತಾ?ದುಡ್ಡು ಮಾಡುತ್ತಾ!?, ಹ್ಞೂ! ಇದ್ಯಾವುದರ ಯೋಚನೆ ಇಲ್ಲದಂತೆ ಚಿತ್ರೀಕರಿಸಿ ಬಿಡುಗಡೆ ಮಾಡಿ ಕಡೆಗೆ ಜನ ಪ್ರೋತ್ಸಾಹ ನೀಡುತ್ತಿಲ್ಲ ಅಂತ ಅಲವತ್ತು ಕೊಳ್ಳೋದು.ಇದ್ಯಾವ ಬಿಸಿನೆಸ್ಸು? ಈ ರೀತಿ ಮಾಡಿ ಕಡೆಗೆ ನಮ್ಮ ಚಿತ್ರರಂಗದ ವ್ಯಾಪ್ತಿ ಚಿಕ್ಕದು,ಚಿತ್ರಗಳು ಸೋಲುತ್ತಿವೆ ಅನ್ನೋದು ಯಾಕೆ?
ಈ ಪರಿಯಾಗಿ ರಿಮೇಕ್ ನಮ್ಮ ಚಿತ್ರರಂಗವನ್ನ ಆವರಿಸಿ ಕೂತಿದೆ.ರಿಮೇಕ್ ಬ್ಯಾಡ ಅಂದ್ರೆ ಯಾಕ್ರೀ ಬ್ಯಾಡ ಅಂತ ಮೈಮೇಲೆ ಬೀಳೋ ಬಹುತೇಕ ಮಂದಿ, “ಬನ್ರಿ ಸ್ವಾಮೀ, ಡಬ್ಬಿಂಗ್ ಮಾಡನ” ಅಂದ್ರೆ ಗುರ್ರ್ ಅಂತಾರೆ.ಯಾಕೆ? ರಿಮೇಕ್ ಮಾಡುವಾಗ ಬಾರದಿರೋ ಮಡಿವಂತಿಕೆ ಡಬ್ಬಿಂಗ್ ಮಾಡುವಾಗ ಯಾಕೆ ಬರುತ್ತೆ?,ಮೊನ್ನೆ ಮೊನ್ನೆ ತಾನೇ ‘ಕನ್ನಡ ಚಲನ ಚಿತ್ರ ಅಕಾಡೆಮಿ’ಯು ಬಿಡುಗಡೆ ಮಾಡಿದ್ದ ವರದಿ ಡಬ್ಬಿಂಗ್ ಪರವಾಗಿತ್ತು.ಆ ವರದಿ ಬಿಡುಗಡೆಯಾದ ತಕ್ಷಣ ಚಿತ್ರರಂಗದ ಬಹುತೇಕ ಮಂದಿ ನಾಗಾಭರಣರ ಮೇಲೆ ಮುಗಿಬಿದ್ದರು.ಕಡೆಗೆ ಅವ್ರು ವರದಿಯನ್ನ ಹಿಂಪಡೆದರು.ಇಲ್ಲಿ ನಷ್ಟ ಆಗಿದ್ದು ಯಾರಿಗೆ? ಕನ್ನಡ ಚಿತ್ರ ರಂಗಕ್ಕಾ? ಅಲ್ಲ … ಕನ್ನಡ ಪ್ರೇಕ್ಷಕನಿಗೆ.
ಇಷ್ಟಕ್ಕೂ, ಡಬ್ಬಿಂಗ್ ಬೇಕೋ ಬೇಡವೋ ಅಂತ ನಿರ್ಧರಿಸಬೇಕಾದವನು “ಕನ್ನಡ ಪ್ರೇಕ್ಷಕನೋ?” ಇಲ್ಲ “ಕನ್ನಡ ಚಿತ್ರ ರಂಗವೋ?”
ಡಬ್ಬಿಂಗ್ ಯಾಕೆ ಬೇಡ ಅಂದ್ರೆ, ಅದರಿಂದ ಕನ್ನಡದ ಮಕ್ಕಳಿಗೆ ಕೆಲಸವಿರೋದಿಲ್ಲ ಅಂತ ಹಳೆ ಕತೆ ಹೇಳ್ತಾ ಇದ್ದಾರೆ.ಈಗ ಬರ್ತಾ ಇರೋ ಅದಿನ್ನೆಷ್ಟು ಚಿತ್ರಗಳಲ್ಲಿ ಕನ್ನಡದ ಕಲಾವಿದರು,ತಂತ್ರಜ್ಞರು,ನಟಿಯರು,ಪೋಷಕ ನಟರು,ಖಳನಟರು,ಸಂಗೀತ ನಿರ್ದೇಶಕರು,ಗಾಯಕ-ಗಾಯಕಿಯರಿಗೆ ಕೆಲ್ಸ ಇದೆ?,ಎಲ್ಲದಕ್ಕೂ ಬೇರೆ ಭಾಷೆಯವರೇ ಬೇಕು.ಆಗ ಮಾತ್ರ ಯಾರು ಕನ್ನಡ ಮಕ್ಕಳಿಗೆ ಅನ್ಯಾಯವಾಗ್ತಾ ಇದೆ ಅಂತ ಉಸಿರೆತ್ತುವುದಿಲ್ಲ. ಭಾಷೆಯ ಉಚ್ಚಾರಣೆ ಬರದೆ ಇದ್ರೂ ನಮಗೆ ಬಾಲಿವುಡ್ ಗಾಯಕರು ಬಂದು ಉಸಿರು ಕಟ್ಟಿ ಹಾಡ್ಬೇಕು,ಬಾಯಿ ಅಲ್ಲಾಡಿಸಲು ಬರದ ಖಳ ನಟರು ಅಲ್ಲಿಂದಲೇ ಬರಬೇಕು.ಒಟ್ಟಿನಲ್ಲಿ ಬೇರೆ ಕಡೆಯಿಂದ ಜನ ಆಮದಾದಷ್ಟು ಚಿತ್ರ ಅದ್ದೂರಿ ಅನ್ನೋ ಭ್ರಮೆ!ಈಗಲೂ ಕನ್ನಡದ ಮಕ್ಕಳಿಗೆ ಆಗುತ್ತಿರುವುದು ಅನ್ಯಾಯವೇ ಅಲ್ಲವೆ?
ಡಬ್ಬಿಂಗ್ ಮಾಡಿದರೆ ಆಗುವ ಲಾಭಗಳಾದರು ಏನು ನೋಡೋಣ.
೧. ಕನ್ನಡದ ಕಂಠ ದಾನ ಕಲಾವಿದರಿಗೆ,ಕೆಲ ತಂತ್ರಜ್ಞರಿಗೆ,ಚಿತ್ರ ಮಂದಿರದವರಿಗೆ ಕೆಲ್ಸ ಸಿಗುತ್ತದೆ.
೨. ಬೇರೆ ಭಾಷೆಯಲ್ಲಿ ಹಿಟ್ ಆದ ಚಿತ್ರ ೩-೪ ವರ್ಷ ಬಿಟ್ಟು ಇಲ್ಲಿ ರಿಮೇಕ್ ಮಾಡಿ ಹೊಸತರಂತೆ ತೋರಿಸುವದು ನಿಲ್ಲುತ್ತದೆ.
೩.ರಿಮೇಕ್ ಕಡಿಮೆಯಾದಲ್ಲಿ ಸೃಜನಶೀಲತೆ ಹೆಚ್ಚುತ್ತದೆ.ಅದರಿಂದ ಕನ್ನಡ ಚಿತ್ರ ರಂಗ ಇನ್ನ ಬೆಳೆಯುತ್ತದೆ.
೪.ಈಗಿನ ಕನ್ನಡ ಪ್ರೇಕ್ಷಕರು ರಾಜ್ಯದ ಮೂಲೆ ಮೂಲೆಯ ಹಳ್ಳಿಗಳಲ್ಲೂ ಅನ್ಯ ಭಾಷೆಯ ಸಿನೆಮವನ್ನ ಅರ್ಥ ಆಗದೆ ಇದ್ರೂ ನೋಡ್ತಾರಲ್ವಾ, ಅವರೆಲ್ಲ ಆ ಸಿನೆಮಾಗಳು ಕನ್ನಡದಲ್ಲೇ ಡಬ್ ಆಗಿ ಬಂದ್ರೆ ಅವನ್ನೇ ನೋಡ್ತಾರೆ.ಕನ್ನಡನು ಉಳಿಯುತ್ತೆ.ಮತ್ತು ಅಷ್ಟರ ಮಟ್ಟಿಗೆ ನಾವು ಬೇರೆ ಭಾಷೆಯನ್ನ ನಮ್ಮ ನೆಲದಲ್ಲಿ ಬೇರೂರದಂತೆ ಮಾಡಬಹುದು.
ಇನ್ನ ನಷ್ಟ ಯಾರಿಗೆ?
೧. ಕೇವಲ ರಿಮೇಕ್ ಸಿನೆಮಾವನ್ನೇ ನಿರ್ಮಿಸೋ,ನಿರ್ದೇಶಿಸೋ,ನಟಿಸೋ ಅಂತವರಿಗೆ ಮಾತ್ರ.
ಇಷ್ಟಕ್ಕೂ ಡಬ್ಬಿಂಗ್ಗೆ ಅವಕಾಶ ಕೊಟ್ರೆ ಎಲ್ರೂ ಅದೇ ಮಾಡ್ತಾರೆ ಅನ್ನೋ ಅತಂಕವಿದ್ದರೆ,ಅದಕ್ಕಾಗಿ ಕೆಲ ನೀತಿ ನಿಯಮಗಳನ್ನ ಮಾಡಿಕೊಳ್ಳಬಹುದು. ಡಬ್ಬಿಂಗ್ ಮಾಡುವ ಹಕ್ಕನ್ನ ಮುಕ್ತವಾಗಿಡದೆ ‘ವಾಣಿಜ್ಯ ಮಂಡಳಿ’ ಯೇ ಆಯ್ದ ಚಿತ್ರಗಳನ್ನ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡಬಹುದು.ಹಾಗೆ ಡಬ್ಬಿಂಗ್ ಮಾಡಿದ ಸಿನೆಮಾಗಳಲ್ಲಿ ನಮ್ಮ ನೇಟಿವಿಟಿ ಇಲ್ಲ ಅಂದ್ರೆ ಅವು ಗೆಲ್ಲೋದು ಅಷ್ಟರಲ್ಲೇ ಇದೆ,ಅದರಿಂದ ಯಾವ ಅಪಾಯವು ಇಲ್ಲ. ವಿಷಯ ಹೀಗಿರುವಾಗ ಇನ್ನು ಆಗಿನ ಕಾಲದ ಕತೆಯನ್ನೇ ಹೇಳಿ ಕನ್ನಡ ಪ್ರೇಕ್ಷಕರಿಗೆ ಒಳ್ಳೊಳ್ಳೆ ಚಿತ್ರವನ್ನ ನಮ್ಮ ಭಾಷೆಯಲ್ಲಿ ನೋಡದಂತೆ ಚಿತ್ರ ರಂಗದ ಕೆಲವರು ಯಾಕೆ ಮಾಡುತಿದ್ದಾರೆ!?, ಹಾಗೆ ಡಬ್ಬಿಂಗ್ನಿಂದ ಮುಳುಗಿ ಹೋಗುವಷ್ಟು ‘ಕನ್ನಡ ಚಿತ್ರ ರಂಗ’ ದುರ್ಬಲವಾಗಿಲ್ಲ.೭೫ ವರ್ಷದ ಇತಿಹಾಸವಿರುವ ಚಿತ್ರ ರಂಗದ ಮಾರುಕಟ್ಟೆ ವ್ಯಾಪ್ತಿ ಚಿಕ್ಕದು ಅಂತ ಇನ್ನ ಎಷ್ಟು ದಿನ ಹೆದರ್ತಿರ ಸ್ವಾಮೀ?
ಈಗಾಗಲೇ ಡಬ್ಬಿಂಗ್ ಪರವಾಗಿ ಹಲವಾರು ಜನ ಪತ್ರಿಕೆಗಳಿಗೆ ಬರೆಯುತ್ತಲೇ ಇದ್ದಾರೆ.ಆದ್ರೆ ವಿರೋಧಿಸುವ ಜನರು ಯಾಕೆ ಸಮರ್ಪಕ ಉತ್ತರ ನೀಡುತ್ತಿಲ್ಲ? ಮೊನ್ನೆ ಮೊನ್ನೆ ಪಾರ್ವತಮ್ಮ ಅವ್ರು ಯಾರದು ಡಬ್ಬಿಂಗ್ ಪರವಾಗಿ ಮಾತಾಡಿದ್ರೆ ಬೀದಿಗಿಳಿದು ಹೋರಾಟ ಮಾಡ್ತೀನಿ ಅಂದಿದ್ದಾರೆ.ಬೀದಿಗಿಳಿದು ಹೋರಾಟ ಮಾಡೋ ಬದ್ಲು ಸ್ವಲ್ಪ logical ಆಗಿ ಡಬ್ಬಿಂಗ್ ಯಾಕೆ ಬೇಡ?ರಿಮೇಕ್ ಯಾಕೆ ಬೇಕು ಅನ್ನೋದನ್ನ ಸಮಾಧಾನವಾಗಿ ಹೇಳೋಕೆ ಆಗೋಲ್ವಾ? ಈಗೇನು ಕನ್ನಡದಲ್ಲಿ ಬೇಜಾನ್ ನ್ಯೂಸ್ ಚಾನೆಲ್ಗಳೀವೆ, ಅಲ್ಲೆ ಬಂದು ಪರ-ವಿರೋಧದ ಚರ್ಚೆ ಮಾಡಬಹುದಲ್ವಾ?ನಿಜ ವಿಷಯ ಜನರಿಗೆ ತಲುಪುತ್ತೆ.
ಜಗತ್ತಿನ ವಿವಿಧ ದೇಶದ ಅತುತ್ತಮ ಚಿತ್ರಗಳು,ಕಾರ್ಯಕ್ರಮಗಳನ್ನ ‘ಕನ್ನಡ’ ಭಾಷೆಯಲ್ಲಿ ನೋಡಲಿಚ್ಚಿಸುವುದು ಪ್ರತಿಯೊಬ್ಬ ಕನ್ನಡಿಗನ ಹಕ್ಕು ಮತ್ತು ಇದನ್ನ ಕೇವಲ ಬೆರಳೆಣಿಕೆಯಷ್ಟು ಜನ ನಿರ್ಧರಿಸಲಾಗದು ಅನ್ನುವ ಜಾಗೃತಿ ಕನ್ನಡಿಗರಿಗೆ ಮೂಡಬೇಕು.ಯಾರೋ ಅಬ್ಬರಿಸಿ ಬೋಬ್ಬಿರಿದರೆ ಯಾಕೆ ಮಾತಾಡಲು ಭಯಪಡಬೇಕು?
ರಾಕೇಶ್ ಶೆಟ್ಟಿ ![]()






ನಿಮ್ಮ ವಾದ ಬಹಳ ತರ್ಕಬದ್ಧವಾಗಿದೆ. ಎಲ್ಲಾ ಭಾಷೆಯ ಚಿತ್ರಗಳನ್ನೂ ಕನ್ನಡದಲ್ಲೇ ನೋಡಿ ಆಸ್ವಾದಿಸಲು “ಡಬ್ಬಿಂಗ್” ನಿಂದ ಮಾತ್ರ ಸಾಧ್ಯ. ಇಲ್ಲದೆ ಹೋದಲ್ಲಿ ನಾವು ಇತರ ಭಾಷೆಗಳ ಚಿತ್ರಗಳನ್ನು ನೋಡುತ್ತಾ ಅಪ್ರಯತ್ನಪೂರ್ವಕವಾಗಿ ಆ ಭಾಷೆಗಳನ್ನು ಕಲಿತುಬಿಡುತ್ತೇವೆ. ಹಾಗಾದಾಗ ಇಲ್ಲಿಗೆ ವಲಸೆಬರುವವರಿಗೆ ಇಲ್ಲಿ ಕನ್ನಡ ಕಲಿಯದೇ ವ್ಯವಹಾರಮಾಡುವುದು ಸುಲಭವಾಗುತ್ತದೆ.
ಡಬ್ಬಿ೦ಗ್ ಇದ್ರೆ ಕನ್ನಡದಲ್ಲಿ ‘ಮಾಟ್ರಿಕ್ಸ್’ ತೋರಿಸ್ಬೋದು. ‘ಇ೦ಸೆಪ್ಷನ್’ ನೋಡ್ಬೋದು. ಹುಡುಗ್ರಿಗೆ ಹೊಸ ಹೊಸ ಐಡಿಯಾಸ್ ಬರ್ಬೋದು.ತೆಲುಗು ತಮಿಳಿನಿ೦ದ ರಿಮೇಕ್, ಭಟ್ಟಿ ಇಳಿಸುವುದನ್ನು ಕಡಿಮೆ ಮಾಡಬಹುದು. “ವಾಟ್ ಮ್ಯಾನ್, ಯುವರ್ ಕನ್ನಡ ಮೂವೀಸ್ ನೊ ಗುಡ್, ನೊ ಹೀರೋಸ್ etc” ಮು೦ತಾದ ಹೀಗಳಿಕೆಗೆ ಮಿಡಲ್ ಫಿ೦ಗರ್ ತೋರಿಸುವಷ್ಟು ತಾಕತ್ತು ಬರಬಹುದು.
ಸದಭಿರುಚಿ ಚಿತ್ರಗಳನ್ನ ಜನ ಇಷ್ಟ ಪಡೋ ತನಕ, ಅವರು ಅದನ್ನ ಇಷ್ಟ ಪಡೋವರೆಗೂ “ಛಲ ಬಿಡದ ತ್ರಿವಿಕ್ರಮನಂತೆ” ನಮ್ಮ ಚಿತ್ರರಂಗದವರು (ನಿರ್ದೇಶಕ-ನಿರ್ಮಾಪಕ-ನಟರು) ಚಿತ್ರಗಳನ್ನ ಮಾಡೋ ತನಕ ನಮ್ಮ ಚಿತ್ರರಂಗ ಉದ್ಧಾರ ಆಗೋದು ಡೌಟು!!!
ಪ್ರತಿಕ್ರಿಯಿಸಿದ ಗೆಳೆಯರಿಗೆ ಧನ್ಯವಾದಗಳು.ರಿಮೇಕ್ ಚಿತ್ರಕ್ಕಿಲ್ಲದ ಮಡಿವಂತಿಕೆಯನ್ನ ಡಬ್ಬಿಂಗ್ ಮೇಲೆ ತೊರಿಸೋ ಚಿತ್ರರಂಗಕ್ಕೆ, ಟಿವಿ ಚಾನೆಲ್ಗಳು ಅನ್ಯ ಭಾಷೆಯ ಚಿತ್ರ ಬಿಡುಗಡೆಯಾಗುವಾಗ ಕೊಡುವ ಬಿಟ್ಟಿ ಪಬ್ಲಿಸಿಟಿ ಎಲ್ಲ ಕಾಣುವುದಿಲ್ಲ.ಎಲ್ಲೊ ಮಳೆ ಬಂದ್ರೆ ಇನ್ನೆಲ್ಲೋ ಕೊಡೆ ಹಿಡಿಯೋದು ನಿಲ್ಲೊವರೆಗು ಇದೆ ಕತೆ ಬಿಡಿ