ಔಟ್ ಆಫ್ ಸ್ಕೂಲ್! ಶಾಲೆ ಮೆಟ್ಟಿಲು ಹತ್ತದ ೧೧-೧೪ ವರ್ಷದ ಶೇ.೬ರಷ್ಟು ಬಾಲಕಿಯರು
– ಶಂಶೀರ್, ಬುಡೋಳಿ
ಕನ್ನಡಿಗರಲ್ಲಿ ಹೆಚ್ಚುತ್ತಿರುವ ಖಾಸಗಿ ಶಾಲಾ ವ್ಯಾಮೋಹ
ದೇಶದ ಶೈಕ್ಷಣಿಕ ರಂಗ ಬದಲಾವಣೆಯ ಹಂತದಲ್ಲಿದೆ ನಿಜ. ಬಾಲಕಿಯರು ಶೈಕ್ಷಣಿಕವಾಗಿ ಮುಂದೆ ಬರಲು ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ವಿವಿಧ ರೀತಿಯ ಶೈಕ್ಷಣಿಕ ಯೋಜನೆಗಳನ್ನು ಜಾರಿಗೆ ತಂದಿದೆ ನಿಜ. ಆದರೆ ಇವತ್ತು ಭಾರತದ ಗ್ರಾಮೀಣ ಪ್ರದೇಶದ ೧೧ರಿಂದ ೧೪ ವರ್ಷದವರೆಗಿನ ಶೇ. ೬ ರಷ್ಟು ಬಾಲಕಿಯರು ಶಾಲೆಯ ಮೆಟ್ಟಿಲು ಹತ್ತಿಲ್ಲವಂತೆ. ಇದು ಅಸೆರ್-೨೦೧೦ ಇತ್ತೀಚಿಗೆ ಬಿಡುಗಡೆ ಮಾಡಿದ ಅಂಕಿ ಅಂಶ.
ಸರಕಾರಿ ರಹಿತ ಸಂಸ್ಥೆಯಾದ ಪ್ರಥಮ್ ದೇಶಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ನಡೆಸಿದ ಶೈಕ್ಷಣಿಕ ಮಟ್ಟದ ಅಂಕಿ ಅಂಶಗಳ ಕುರಿತಾದ ‘ಅಸೆರ್-೨೦೧೦’ ವರದಿಯು ದೇಶದ ಗ್ರಾಮೀಣ ಪ್ರದೇಶದ ಕೌಟುಂಬಿಕ ಪರಿಸ್ಥಿತಿ, ಶೈಕ್ಷಣಿಕ ಅರ್ಹತೆ, ಶಾಲಾ ಶಿಕ್ಷಣ ಮಟ್ಟ ಹೀಗೆ ಮುಂತಾದ ವಿಷಯಗಳನ್ನು ತೆರೆದಿಡುತ್ತದೆ. ಇದೊಂದು ದೇಶದ ಗ್ರಾಮೀಣ ಪ್ರದೇಶವನ್ನು ಗುರಿಯಾಗಿಟ್ಟುಕೊಂಡು ಮಾಡಿದಂತಹ ಅತಿ ದೊಡ್ಡ ಶೈಕ್ಷಣಿಕ ಸಮೀಕ್ಷೆಯಾಗಿದೆ.
ಶಿಕ್ಷಣ ಎಂಬುದು ಉಳ್ಳವರ ಸೊತ್ತಾಗುತ್ತಿದೆ ಎಂದು ಅನಿಸುತ್ತದೆ. ಯಾಕೆಂದರೆ ದೇಶದ ಕೆಲವೊಂದು ರಾಜ್ಯಗಳಲ್ಲಿ ಸಮಾನ ರೀತಿಯಾದಂತಹ ಶಿಕ್ಷಣ ವ್ಯವಸ್ಥೆಯಿದ್ದರೆ , ಈಗಲೂ ಕೆಲವೊಂದು ರಾಜ್ಯಗಳಲ್ಲಿ ಶಿಕ್ಷಣ ಕಲಿಸುವ ಸಮಯದಲ್ಲಿ ಬಾಲಕಿಯರಿಗೆ ಕೇವಲ ಪ್ರಾಥಮಿಕ ಅಥವಾ ಹೈಸ್ಕೂಲ್ ಶಿಕ್ಷಣ ಕಲಿಸಿ ಕಲಿಕೆಯನ್ನು ಕಲಿಸಿ ನಂತರ ಮೊಟಕುಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಹಾಗೆಯೇ ಬಾಲಕರಿಗೆ ಉನ್ನತ ಶಿಕ್ಷಣ ಕಲಿಯುವವರೆಗೆ ಅವಕಾಶ ಕೊಡಲಾಗುತ್ತದೆ. ಹೀಗಾಗಿ ಶೈಕ್ಷಣಿಕ ಮಟ್ಟದಲ್ಲಿ ಲಿಂಗ ತಾರತಮ್ಯವಾಗುತ್ತಿದೆ.
ಪ್ರಾಥಮಿಕ ಹಂತದಲ್ಲಿ ವಿಶೇಷವಾಗಿ ಬಾಲಕಿಯರಿಗಾಗಿ ಯೋಜನೆಗಳನ್ನು ಆಳವಡಿಸಿಕೊಂಡಿರಬಹುದು. ಆದರೆ ಇದು ಸಮರ್ಪಕ ಮಟ್ಟದಲ್ಲಿ ತಲುಪುವವರಿಗೆ ತಲುಪುತ್ತಿಲ್ಲ. ಸರಕಾರಿ ಶಿಕ್ಷಣ ಕೇವಲ ನೆಪ ಮಾತ್ರ ಎಂಬ ಭಾವನೆ ಕೆಲವರಲ್ಲಿ ಇರುವುದರಿಂದ್ದ ಇವತ್ತು ಮಧ್ಯಮ ವರ್ಗದ ಕುಟುಂಬದ ಜೊತೆಗೆ ಕೆಲವು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಸಹ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಲು ಹಿಂದೇಟು ಹಾಕಲಾಗುತ್ತಿದೆ ಎಂಬ ಅಂಶ ಅಚ್ಚರಿ ಮೂಡಿಸುತ್ತದೆ. ಕಾರಣ ಸರಕಾರಿ ಶಾಲೆಯ ಶಿಕ್ಷಣ ಕಲಿಕೆ ಚೆನ್ನಾಗಿಲ್ಲ ಎಂಬುದು.
ಕಲಿಸುವಿಕೆಯ ರೀತಿಯಲ್ಲಿ ಬದಲಾವಣೆ ತಂದರೆ ಸಾಲದು. ಎಜುಕೇಶನ್ ವಿಷಯದಲ್ಲಿ ಅಧ್ಯಯನಗೈದ ಡಿಪ್ಲೊಮಾ, ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ಪದಧರರನ್ನು ಅಧ್ಯಾಪಕ ಹುದ್ದೆಗೆ ಪರಿಗಣಿಸಬೇಕಾಗಿದೆ. ಈ ಪ್ರಯತ್ನ ಎಲ್ಲಾ ರಾಜ್ಯಗಳಲ್ಲಿ ಆಗುತ್ತಿಲ್ಲ. ಆಯಾ ಆಯಾ ಕ್ಷೇತ್ರದಲ್ಲಿ ಪರಿಣತಿ ಪಡೆದವರನ್ನು ಆ ಕ್ಷೇತ್ರಗಳಿಗೆ ನೇಮಿಸಿದರೆ ಬದಲಾವಣೆಯನ್ನು ಕಾಣಬಹುದು.ಅಸೆರ್-೨೦೧೦ ವರದಿಯು ದೇಶದ ೫೨೨ ಜಿಲ್ಲೆಗಳನ್ನು, ೧೪,೦೦೦ ಗ್ರಾಮಗಳನ್ನು , ೩೦೦,೦೦೦ ಮನೆಗಳನ್ನು ಹಾಗೂ ೭೦೦,೦೦೦ ಮಕ್ಕಳನ್ನು ಸಂಪರ್ಕಿಸಿ ವರದಿ ತಯಾರಿಸಿದೆ. ಈ ವರದಿಯ ಪ್ರಕಾರ ೬ರಿಂದ ೧೪ ವರ್ಷದ ೯೬.೫ ಶೇಕಡಾ ವಿದ್ಯಾರ್ಥಿಗಳು ಶಾಲೆಗೆ ದಾಖಲಾಗಿದ್ದಾರೆ. ಇದೇ ವೇಳೆ ೭೧.೧ ಶೇಕಡರಷ್ಟು ಮಕ್ಕಳು ಸರಕಾರಿ ಶಾಲೆಗೆ ದಾಖಲುಗೊಂಡರೆ ೨೪.೩ ಶೇ.ರಷ್ಟು ಮಕ್ಕಳು ಖಾಸಗಿ ಶಾಲೆಗೆ ದಾಖಲುಗೊಂಡಿದ್ದಾರೆ.
೨೦೦೫ರಿಂದ ಬಿಹಾರದಲ್ಲಿ ಎಲ್ಲಾ ವರ್ಷದ ಬಾಲಕ-ಬಾಲಕಿಯರು ಶಾಲೆಗೆ ಹೋಗುವ ಪ್ರಮಾಣ ನಿಶ್ಚಲವಾಗಿಬಿಟ್ಟಿದೆ. ೨೦೧೦ರಲ್ಲಿ ೪.೪ ಶೇಕಡಾ ಹುಡುಗರು ಹಾಗೂ ೪.೬ರಷ್ಟು ಹುಡುಗಿಯರು ಶಾಲೆಗೆ ಹೋಗುವ ಅವಕಾಶ ಕಂಡಿಲ್ಲ. ೨೦೦೯ರಲ್ಲಿ ಖಾಸಗಿ ಶಾಲೆಗೆ ೨೧.೮ ಶೇ.ರಷ್ಟು ಗ್ರಾಮೀಣ ಪ್ರದೇಶದ ಮಕ್ಕಳು ದಾಖಲುಗೊಂಡಿದ್ದರು. ಹಾಗೂ ೨೦೧೦ರಲ್ಲಿ ೨೪.೩ ರಷ್ಟು ದಾಖಲುಗೊಂಡಿದ್ದರು. ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ಕೇರಳ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಖಾಸಗಿ ಶಾಲೆಗೆ ಹೆಚ್ಚಿನ ಮಕ್ಕಳು ದಾಖಲುಗೊಂಡಿದ್ದಾರೆ.
ಆದರೆ ಬಿಹಾರ, ಪಶ್ಚಿಮಬಂಗಾಳ, ಜಾರ್ಖಂಡ್, ಓಡಿಶಾ ಹಾಗೂ ತ್ರಿಪುರ ರಾಜ್ಯಗಳಲ್ಲಿ ಖಾಸಗಿ ಶಾಲೆಗೆ ಸೇರುವ ಮಟ್ಟ ಕಡಿಮೆಯಾಗಿದೆ. ಒಟ್ಟಾರೆ ದೇಶದಲ್ಲಿ ಐದು ವರ್ಷದ ಮಕ್ಕಳು ೨೦೧೦ರಲ್ಲಿ ಸುಮಾರು ೬೨.೮ ರಷ್ಟು ಮಕ್ಕಳು ದಾಖಲುಗೊಂಡಿದ್ದಾರಂತೆ. ಅತಿ ಹೆಚ್ಚಿನ ಮಕ್ಕಳು ದಾಖಲುಗೊಂಡಿದ್ದು ಕರ್ನಾಟಕ ರಾಜ್ಯದಲ್ಲಿ. ಇದು ಕರ್ನಾಟಕ ರಾಜ್ಯದ ಖಾಸಗಿ ಶಾಲೆಯ ಮೋಹವನ್ನು ಎತ್ತಿ ಹಿಡಿಯುತ್ತದೆ.
ಐದು ವರ್ಷ ಶಾಲಾ ಶಿಕ್ಷಣ ಪಡೆದವರಲ್ಲಿ ಅರ್ಧದಷ್ಟು ಮಕ್ಕಳು ಎರಡು ವರ್ಷಗಳಿಂದ ಏನು ನಿರೀಕ್ಷಿಸಲ್ಪಟ್ಟ ಕಲಿಕೆ ಇದೆಯೋ ಅದನ್ನು ಕಲಿತಿಲ್ಲ. ಇದು ಅಸರ್ ಬಹಿರಂಗಪಡಿಸಿದ ಅಂಶ. ಇಂತಹ ಬೆಳವಣಿಗೆ ಆಂಧ್ರಪ್ರದೇಶ, ಗುಜರಾತ್, ಹರ್ಯಾಣ, ರಾಜಸ್ಥಾನ, ಅಸ್ಸಾಂ, ಹಿಮಾಚಲ ಪ್ರದೇಶ, ಪಂಜಾಬ್, ಉತ್ತರಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ ಹೆಚ್ಚಾಗಿ ಕಂಡಿದೆ. ಬಿಹಾರ, ಪಶ್ಚಿಮ ಬಂಗಾಳ ಹಾಗೂ ಓಡಿಶಾ ರಾಜ್ಯಗಳಲ್ಲಿ ಖಾಸಗಿ ಶಾಲೆಗಳಿಗೆ ದಾಖಲಾತಿ ಮಾಡಿದ ಸಂಖ್ಯೆ ಕಡಿಮೆಯಿದೆ.
೨೦೦೯ರಲ್ಲಿ ಒಂದನೆ ತರಗತಿಯ ೬೯.೩ ಶೇಕಡರಷ್ಟು ವಿದ್ಯಾರ್ಥಿಗಳು ೧ರಿಂದ ೯ರವರೆಗಿನ ಅಂಕಿಯನ್ನು ಕಲಿಯಲು ಸಮರ್ಥರಾಗಿದ್ದರು. ಹಾಗೆಯೇ ೨೦೧೦ರಲ್ಲಿ ಈ ಕಲಿಕೆಯ ಬೆಳವಣಿಗೆ ಕೇವಲ ೬೫.೮ ಅಷ್ಟೇ. ಪಂಜಾಬ್‌ನಲ್ಲಿ ಕಳೆದ ಐದು ವರ್ಷಗಳಿಂದ ಶಾಲಾ ಮಕ್ಕಳು ಅಂಕಗಣಿತದಲ್ಲಿ ಬಹಳ ಚುರುಕುತನವನ್ನು ತೋರಿಸುತ್ತಿದ್ದಾರೆ. ವಿಶೇಷವೆಂದರೆ, ಮಧ್ಯಮ ಶಾಲಾ ವಿದ್ಯಾರ್ಥಿಗಳು ಲೆಕ್ಕಾಚಾರದಲ್ಲಿ ಹಿನ್ನೆಡೆ ಸಾಧಿಸುತ್ತಿರುವುದು.
ಇವತ್ತು ಖಾಸಗಿ ಶಾಲೆಯಲ್ಲಿ ಕಲಿಯುವ ಎಂಟನೆ ತರಗತಿಯವರೆಗಿನ ಹೆಚ್ಚಿನ ವಿದ್ಯಾರ್ಥಿಗಳು ಟ್ಯೂಷನ್‌ಗೆ ಹೋಗುತ್ತಿದ್ದಾರೆ. ಟ್ಯೂಷನ್ ಎಂಬುದು ಜೊತೆಗೆ ಪ್ಯಾಷನ್ ಆಗುತ್ತಿದೆ. ಹಾಗೆಯೇ ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಐದನೆ ತರಗತಿ ವಿದ್ಯಾರ್ಥಿಗಳು ಟ್ಯೂಷನ್ ಪಡೆಯುವುದು ಹೆಚ್ಚಾಗಿದೆ.
೧೩,೦೦೦ ಶಾಲೆಯನ್ನು ಭೇಟಿ ಮಾಡಿದ ಅಸೆರ್ ವರದಿಯು ಹೆಚ್ಚಿನ ಶಾಲೆಗಳು ಅಧ್ಯಾಪಕರ ಕೊರತೆಯನ್ನು ಹಾಗೂ ತರಗತಿ ಕೊಠಡಿಗಳ ಕೊರತೆ ಎದುರಿಸುತ್ತಿದೆ ಎಂದು ಹೇಳಿದೆ. ಅಚ್ಚರಿಯ ವಿಷಯವೆಂದರೆ ೨೦೦೭ರಿಂದ ಪ್ರಾಥಮಿಕ ಶಾಲೆಯ ಅಧ್ಯಾಪಕರ ಹಾಜರಾತಿಯು ಕಡಿಮೆಯಾಗುತ್ತಿದೆ. ಆದರೆ ೨೦೦೭-೨೦೧೦ರ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಹಾಜರಾತಿಯು ಸಮತೋಲನ ಮಟ್ಟದಲ್ಲಿದೆ. ಒಂದು ಶಾಲೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿದ್ದು, ಅಧ್ಯಾಪಕರ ಹಾಜರಾತಿಯಿಲ್ಲದಿದ್ದರೆ ಆ ಮಕ್ಕಳ ಶೈಕ್ಷಣಿಕ ಕಲಿಕೆ ಮುಂದುವರಿಯಲು ಸಾಧ್ಯವೇ? ಸರಕಾರಿ ಶಾಲೆಯಲ್ಲಿ ಕೆಲವು ಮಟ್ಟದ ಮೂಲಭೂತ ಸಮಸ್ಯೆಗಳ ಕೊರತೆಯಿದ್ದರೂ ಕಲಿಕೆಯ ಮಟ್ಟದಲ್ಲಿ ಅಭಿವೃದ್ದಿಯನ್ನು ಕಂಡ ಶಾಲೆಗಳು ಇವತ್ತಿಗೂ ದೇಶದಲ್ಲಿದೆ. ಬಾಲಕಿಯರಿಗೆ ಹೆಚ್ಚಿನ ಸೌಲಭ್ಯ ಕೊಡುವುದಕ್ಕಿಂತ ರಾಜ್ಯ ಸರಕಾರವಾಗಲಿ ಅಥವಾ ಕೇಂದ್ರ ಸರಕಾರವಾಗಲಿ ಬಾಲಕ-ಬಾಲಕಿಯರಿಗೆ ಸಮಾನ ರೀತಿಯಾದಂತಹ ಸೌಲಭ್ಯಗಳನ್ನು ಒದಗಿಸಿದರೆ, ಶಾಲಾ ಕಲಿಕೆಯ ಮಟ್ಟವನ್ನು ಏರಿಸಬಹದೇನು?
ಮುಸ್ಲಿ ಸಮುದಾಯದ ವಿದ್ಯಾರ್ಥಿನಿಗಳು ಉನ್ನತ ಶಿಕ್ಷಣ ಕಲಿಯಲು ಮುಂದೆ ಬರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಶೈಕ್ಷಣಿಕವಾಗಿ ಮುಂದೆ ಬರಲು ಸರಕಾರಿ ಹಾಗೂ ಖಾಸಗಿ ವಿದ್ಯಾರ್ಥಿ ವೇತನ, ಮನೆಯವರ ಪ್ರೋತ್ಸಾಹ, ಅವಕಾಶ ಇದ್ದರೆ ಹುಡುಗಿಯರಿಗೆ ಕಲಿಯಲು ಅವಕಾಶ ಕೊಟ್ಟಂತಾಗುತ್ತದೆ. ಆದರೆ ಇವತ್ತಿಗೂ ಕೆಲವೊಂದು ಕಡೆ ಹುಡುಗಿಯರು ಕಲಿತು ಏನಾಗಬೇಕು ಎಂಬ ಭಾವನೆ ಹೆಚ್ಚಾಗಿರುವುದರಿಂದ್ದ ಅವರಿಗೆ ಕಲಿಯುವ ಅವಕಾಶ ಸಿಗುತ್ತಿಲ್ಲ. ಹೀಗಾಗಿ ಮಹಿಳಾ ವರ್ಗ ಶೈಕ್ಷಣಿಕ ಹಿಂದುಳಿಯಲು ಕಾರಣ, ಕೌಟುಂಬಿಕ ಅನಾಸಕ್ತಿ.
ಚಿತ್ರಕೃಪೆ: ಗೂಗಲ್ ಇಮೇಜ್




