ನಮ್ಮ ರಾಜ್ಯವನ್ನು ಪ್ರತಿನಿಧಿಸಲು ಜನರಿಲ್ವಾ???
– ಚೇತನ್ ಜೀರಾಳ್
ಇದು ಖಂಡಿತಾ ಕರ್ನಾಟಕದ ದೌರ್ಭಾಗ್ಯದ ಪರಮಾವಧಿ. ಹೈಕಮಾಂಡ್ ದಾಸ್ಯಕ್ಕೆ ಸಿಲುಕಿರುವ ಬಿಜೆಪಿ ಪಕ್ಷ ಮತ್ತೊಂದು ಎಡವಟ್ಟು ತೀರ್ಮಾನ ಕೈಗೊಂಡಿದೆ. ಹಿರಿಯ ರಾಜಕಾರಣಿ ಶ್ರೀ ರಾಜಶೇಖರ ರ್ಮೂರ್ತಿಯವರ ನಿಧನದಿಂದ ತೆರವಾಗಿದ್ದ ರಾಜ್ಯಸಭಾ ಸ್ಥಾನಕ್ಕೆ ಹಿಂದಿ ಚಲನಚಿತ್ರ ನಟಿ ಶ್ರೀಮತಿ ಹೇಮಾ ಮಾಲಿನಿ ಅವರನ್ನ ರಾಜ್ಯದಿಂದ ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದೆ.
ರಾಜ್ಯಸಭಾ ಸದಸ್ಯತ್ವ ಅಂದರೇನು?
ಒಬ್ಬ ರಾಜ್ಯಸಭಾ ಸದಸ್ಯ ಮುಖ್ಯವಾಗಿ ಆಯಾ ರಾಜ್ಯದ ಪ್ರತಿನಿಧಿಯಾಗಿ ಸಂಸತ್ತಿನ ಮೇಲ್ಮನೆಯಲ್ಲಿ ಕೆಲಸಮಾಡುತ್ತಾರೆ. ರಾಜ್ಯಸಭೆ ಅನ್ನುವುದು ಒಕ್ಕೂಟ ವ್ಯವಸ್ಥೆಯ ಒಂದು ಮುಖ್ಯ ಭಾಗ. ಕೇಂದ್ರದಲ್ಲಿ ಲೋಕಸಭೆಗಿರುವಷ್ಟೇ ಪ್ರಾಮುಖ್ಯತೆ ರಾಜ್ಯಸಭೆಗೂ ಇದೆ. ರಾಜ್ಯಸಭಾ ಸದಸ್ಯರನ್ನು ಆಯಾ ರಾಜ್ಯದ ಶಾಸಕರು ಆಯ್ಕೆ ಮಾಡುತ್ತಾರೆ.
ನಮ್ಮ ರಾಜ್ಯವನ್ನೂ ಪ್ರತಿನಿಧಿಸಲು ಅರ್ಹ ಜನಪ್ರತಿನಿಧಿಗಳು ಇಲ್ಲವೇ?
ಇಷ್ಟಕ್ಕೂ ರಾಜ್ಯಸಭೆ ಸ್ಥಾನಕ್ಕೆ ಹೇಮಾ ಮಾಲಿನಿಯವರನ್ನು ಕಣಕ್ಕಿಳಿಸಲು ಇರುವ ಅರ್ಹತೆಯಾದರೂ ಏನು? ಮೊದಲನೆಯದಾಗಿ ಹೇಮಾ ಮಾಲಿನಿ ನಮ್ಮ ನಾಡಿನವರಲ್ಲ, ಹೋಗಲಿ ಆ ಕಾರಣವನ್ನು ಬದಿಗಿಟ್ಟು ನೋಡೋಣವೆಂದರೆ ಅವರಿಂದ ನಮ್ಮ ರಾಜ್ಯಕ್ಕೆ ಆಗಿರುವ ಉಪಯೋಗವಾದರೂ ಏನು? ನಮ್ಮ ನಾಡಿನ ಯಾವ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವ ಪ್ರಯತ್ನ ರಾಜ್ಯ ಮಟ್ಟದಲ್ಲಾಗಲಿ ಅಥವಾ ಕೇಂದ್ರ ಮಟ್ಟದಲ್ಲಾಗಲಿ ಪ್ರಯತ್ನಿಸಿದ್ದಾರೆ? ನಮ್ಮ ನೆಲ, ಜಲ, ಭಾಷೆ, ಉದ್ಯೋಗ, ಉದ್ದಿಮೆ ಹೀಗೆ ಯಾವ ಕಾರಣಕ್ಕಾಗಿ ನಮ್ಮ ನಾಡಿಗಾಗಿ ಕೆಲಸ ಮಾಡಿದ್ದಾರೆ? ಯಾವುದೇ ದೃಷ್ಠಿಯಿಂದ ನೋಡಿದರೂ ಸಹ ಹೇಮಾ ಮಾಲಿನಿ ನಮ್ಮ ರಾಜ್ಯದ ಪ್ರತಿನಿಧಿಯಾಗಿ ರಾಜ್ಯಸಭೆ ಪ್ರವೇಶಿಸಲು ಅರ್ಹರಲ್ಲ. ಇಂತಹುದೇ ತಪ್ಪನ್ನು ಹಿಂದೆ ಬಿಜೆಪಿ ಹೈಕಮಾಂಡ್ ವೆಂಕಯ್ಯ ನಾಯ್ಡು ಅವರನ್ನ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಿವಾಗ ಮಾಡಿತ್ತು. ಕಾಂಗ್ರೆಸ್ ಹಾಗೂ ಜನತಾದಳ ಪಕ್ಷಗಳು ಸಹಿತ ಇಂತಹುದೇ ತಪ್ಪನ್ನು ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ.
ಮತ್ತಷ್ಟು ಓದು 
ಓಶೋ ವಿಚಾರಗಳು ಪ್ರಾಕ್ಟಿಕಲ್ಲಾಗಿವೆಯೇ?
– ಸುಪ್ರೀತ್.ಕೆ.ಎಸ್
ಈ ಲೇಖನದ ಉದ್ದೇಶ ಓಶೋ ಮೇಲಿನ ನನ್ನ ಪ್ರೀತಿ, ಮುನಿಸು, ಅಭಿಮಾನ, ಆತನ ಬಗೆಗಿರುವ ಬೆರಗು, ಕುತೂಹಲ, ಅನುಮಾನ, ಅಸಹ್ಯಗಳನ್ನು ಬರೆದಿರಿಸುವುದು, ಆ ಮೂಲಕ ನನ್ನೊಳಗೊಂದು ಸ್ಪಷ್ಟ ನಿಲುವನ್ನು ರೂಪಿಸಿಗೊಳ್ಳುತ್ತಾ ಹೋಗುವುದು ಎಂದಾಗಿತ್ತು. ಓಶೋನ ವಿಚಾರಗಳನ್ನು ನಾನೆಷ್ಟೇ ಮೆಚ್ಚಿದರೂ
ಅವನ್ನು ಯಥಾವತ್ತಾಗಿ ಬ್ಲಾಗಿಗೆ ಹಾಕುವುದು ವ್ಯರ್ಥ ಶ್ರಮ ಎನ್ನಿಸಿ ಸುಮ್ಮನಾದೆ. ಹಾಗೆ ನೋಡಿದರೆ ಅಂತರ್ಜಾಲದಲ್ಲಿ ಓಶೋ ಸಾಹಿತ್ಯಕ್ಕೆ ಕೊರತೆಯೇನೂ ಇಲ್ಲ. ಆತನ ಪ್ರತಿಯೊಂದು ಭಾಷಣ, ಪುಸ್ತಕಗಳು ಅಂತರ್ಜಾಲದಲ್ಲಿ ಲಭ್ಯವಿವೆ. ಕನ್ನಡದಲ್ಲಿಯೂ ಓಶೋ ವಿಚಾರಗಳಿಗಾಗಿಯೇ ಮೀಸಲಾದ ಪತ್ರಿಕೆಯಿದೆ. ಇಂಗ್ಲೀಷಿನಲ್ಲಿ ತುಂಬಾ ಸರಳವಾಗಿರುವ ಪ್ರವಚನಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಹೊರಟರೆ ನಮ್ಮ ಶ್ರದ್ಧೆಯೆಂಬ ಕಲ್ಮಷವೇ ಸೇರಿಕೊಂಡು ಭಾಷಾಂತರ ಮೂಲಕ್ಕಿಂತ ಹೆಚ್ಚು ಕ್ಲಿಷ್ಟಕರವಾಗಿಬಿಡುತ್ತದೆ. ಮೇಲಾಗಿ ಓಶೋ ಇಂಥದ್ದೊಂದು ವಿಷಯದ ಬಗ್ಗೆ ಎಂದು ತಯಾರಾಗಿ ಮಾತಾಡಿದವನಲ್ಲ. ತನ್ನ ಸಂನ್ಯಾಸಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದ. ಒಂದೊಂದು ಪ್ರವಚನದಲ್ಲೂ ಬೇರೆ ಬೇರೆ ಆಯಾಮಗಳಲ್ಲಿ ವಿಷಯಗಳನ್ನು ವಿವರಿಸುತ್ತಾ ಹೋಗುವ ಆತನ ಶೈಲಿಯನ್ನು ಅನೇಕ ವೇಳೆ ನಾವು ವಿರೋಧಾಭಾಸ ಎಂದು ಭಾವಿಸುತ್ತೇವೆ.ಯೇಸುವಿನ ಬಗ್ಗೆ ಇದುವರೆಗೂ ನಾನು ಕೇಳಿರುವ ಪ್ರವಚನಗಳಲ್ಲಿ ಒಂದಕ್ಕಿಂತ ಒಂದು ಭಿನ್ನವಾದ, ಕೆಲವೊಂದು ವೇಳೆ ವೈರುಧ್ಯಗಳಂತೆ ಕಾಣುವ ಹಾಗೆ ಆತ ಮಾತನಾಡಿದ್ದಾನೆ. ಹೀಗಾಗಿ ಓಶೋ ಚಿಂತನೆ ಎಂಬುದು ನನ್ನೆದುರು ಸಮುದ್ರದ ಹಾಗೆ ನಿಂತಂತೆ ಭಾಸವಾಗುತ್ತದೆ. ಕಲ್ಲು ಸಕ್ಕರೆಯ ದೊಡ್ಡ ಬಂಡೆಯೆದುರು ನಿಂತಂತೆ ಅನ್ನಿಸುತ್ತದೆ. ಹೀಗಾಗಿ ಆತನ ಪ್ರವಚನಗಳನ್ನು ಯಥವಾತ್ತಾಗಿ ಭಾಷಾಂತರಿಸಿ ಬ್ಲಾಗಿಗೆ ಹಾಕುವುದಕ್ಕಿಂತ ಆತನ ಪ್ರೇರಣೆಯಿಂದ ನಾನು ಕಂಡುಕೊಂಡ ಸತ್ಯ ಯಾವುದು, ಆತ ನನ್ನಲ್ಲಿ ಹುಟ್ಟುಹಾಕಿದ ವಿಚಾರಗಳು ಯಾವುವು, ಅವು ನನ್ನೊಳಗೆ ಮಾಡಿದ ಪ್ರಭಾವಗಳೇನು ಎಂಬುದರ ಬಗ್ಗೆ ಬರೆಯುತ್ತೇನೆ. ಮತ್ತಷ್ಟು ಓದು 




