ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 19, 2011

5

ನಮ್ಮ ರಾಜ್ಯವನ್ನು ಪ್ರತಿನಿಧಿಸಲು ಜನರಿಲ್ವಾ???

‍ನಿಲುಮೆ ಮೂಲಕ

– ಚೇತನ್ ಜೀರಾಳ್

ಇದು ಖಂಡಿತಾ ಕರ್ನಾಟಕದ ದೌರ್ಭಾಗ್ಯದ ಪರಮಾವಧಿ. ಹೈಕಮಾಂಡ್ ದಾಸ್ಯಕ್ಕೆ ಸಿಲುಕಿರುವ ಬಿಜೆಪಿ ಪಕ್ಷ ಮತ್ತೊಂದು ಎಡವಟ್ಟು ತೀರ್ಮಾನ ಕೈಗೊಂಡಿದೆ. ಹಿರಿಯ ರಾಜಕಾರಣಿ ಶ್ರೀ ರಾಜಶೇಖರ ರ್ಮೂರ್ತಿಯವರ ನಿಧನದಿಂದ ತೆರವಾಗಿದ್ದ ರಾಜ್ಯಸಭಾ ಸ್ಥಾನಕ್ಕೆ ಹಿಂದಿ ಚಲನಚಿತ್ರ ನಟಿ ಶ್ರೀಮತಿ ಹೇಮಾ ಮಾಲಿನಿ ಅವರನ್ನ ರಾಜ್ಯದಿಂದ ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದೆ.

ರಾಜ್ಯಸಭಾ ಸದಸ್ಯತ್ವ ಅಂದರೇನು?
ಒಬ್ಬ ರಾಜ್ಯಸಭಾ ಸದಸ್ಯ ಮುಖ್ಯವಾಗಿ ಆಯಾ ರಾಜ್ಯದ ಪ್ರತಿನಿಧಿಯಾಗಿ ಸಂಸತ್ತಿನ ಮೇಲ್ಮನೆಯಲ್ಲಿ ಕೆಲಸಮಾಡುತ್ತಾರೆ. ರಾಜ್ಯಸಭೆ ಅನ್ನುವುದು ಒಕ್ಕೂಟ ವ್ಯವಸ್ಥೆಯ ಒಂದು ಮುಖ್ಯ ಭಾಗ. ಕೇಂದ್ರದಲ್ಲಿ ಲೋಕಸಭೆಗಿರುವಷ್ಟೇ ಪ್ರಾಮುಖ್ಯತೆ ರಾಜ್ಯಸಭೆಗೂ ಇದೆ. ರಾಜ್ಯಸಭಾ ಸದಸ್ಯರನ್ನು ಆಯಾ ರಾಜ್ಯದ ಶಾಸಕರು ಆಯ್ಕೆ ಮಾಡುತ್ತಾರೆ.

ನಮ್ಮ ರಾಜ್ಯವನ್ನೂ ಪ್ರತಿನಿಧಿಸಲು ಅರ್ಹ ಜನಪ್ರತಿನಿಧಿಗಳು ಇಲ್ಲವೇ?
ಇಷ್ಟಕ್ಕೂ ರಾಜ್ಯಸಭೆ ಸ್ಥಾನಕ್ಕೆ ಹೇಮಾ ಮಾಲಿನಿಯವರನ್ನು ಕಣಕ್ಕಿಳಿಸಲು ಇರುವ ಅರ್ಹತೆಯಾದರೂ ಏನು? ಮೊದಲನೆಯದಾಗಿ ಹೇಮಾ ಮಾಲಿನಿ ನಮ್ಮ ನಾಡಿನವರಲ್ಲ, ಹೋಗಲಿ ಆ ಕಾರಣವನ್ನು ಬದಿಗಿಟ್ಟು ನೋಡೋಣವೆಂದರೆ ಅವರಿಂದ ನಮ್ಮ ರಾಜ್ಯಕ್ಕೆ ಆಗಿರುವ ಉಪಯೋಗವಾದರೂ ಏನು? ನಮ್ಮ ನಾಡಿನ ಯಾವ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವ ಪ್ರಯತ್ನ ರಾಜ್ಯ ಮಟ್ಟದಲ್ಲಾಗಲಿ ಅಥವಾ ಕೇಂದ್ರ ಮಟ್ಟದಲ್ಲಾಗಲಿ ಪ್ರಯತ್ನಿಸಿದ್ದಾರೆ? ನಮ್ಮ ನೆಲ, ಜಲ, ಭಾಷೆ, ಉದ್ಯೋಗ, ಉದ್ದಿಮೆ ಹೀಗೆ ಯಾವ ಕಾರಣಕ್ಕಾಗಿ ನಮ್ಮ ನಾಡಿಗಾಗಿ ಕೆಲಸ ಮಾಡಿದ್ದಾರೆ? ಯಾವುದೇ ದೃಷ್ಠಿಯಿಂದ ನೋಡಿದರೂ ಸಹ ಹೇಮಾ ಮಾಲಿನಿ ನಮ್ಮ ರಾಜ್ಯದ ಪ್ರತಿನಿಧಿಯಾಗಿ ರಾಜ್ಯಸಭೆ ಪ್ರವೇಶಿಸಲು ಅರ್ಹರಲ್ಲ. ಇಂತಹುದೇ ತಪ್ಪನ್ನು ಹಿಂದೆ ಬಿಜೆಪಿ ಹೈಕಮಾಂಡ್ ವೆಂಕಯ್ಯ ನಾಯ್ಡು ಅವರನ್ನ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಿವಾಗ ಮಾಡಿತ್ತು. ಕಾಂಗ್ರೆಸ್ ಹಾಗೂ ಜನತಾದಳ ಪಕ್ಷಗಳು ಸಹಿತ ಇಂತಹುದೇ ತಪ್ಪನ್ನು ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ.

ಗಮನಿಸಬೇಕಾದ ಅಂಶವೆಂದರೆ ನಮ್ಮ ನಾಡಿನಲ್ಲಿ ರಾಜ್ಯಸಭೆಗೆ ಅರ್ಹರಾಗಿರುವ ಯಾವುದೇ ನಾಯಕರು ಬಿಜೆಪಿ ಹೈಕಮಾಂಡಿಗೆ ಕಾಣಸಿಗಲಿಲ್ಲವೇ? ನಮ್ಮ ನಾಡನ್ನ ಉದ್ಧಾರ ಮಾಡೋದಕ್ಕೆ ಬೇರೆ ರಾಜ್ಯದ ಜನರನ್ನ ಕರೆದುಕೊಂಡು ಬರಬೇಕಾದ ಪರಿಸ್ಥಿತಿ ಬಂದಿದೆಯೇ? ನಮ್ಮ ನಾಡಿನ ರಾಜಕೀಯ ನಾಯಕರು ಆಗುತ್ತಿರುವ ತಪ್ಪನ್ನು ನೋಡಿಕೊಂಡು ಸುಮ್ಮನಿದ್ದಾರೆಯೇ? ಸುಮಾರು ಮೂರ್ನಾಲ್ಕು ದಶಕಗಳಿಂದ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ದುಡಿದಿರುವಂತಹ ಬಿಜೆಪಿಯ ಕಾರ್ಯಕರ್ತರೆಲ್ಲಾ ಹೈಕಮಾಂಡ್ ಕಣ್ಣಿಗೆ ಕಾಣಿಸುತ್ತಿಲ್ಲವೇ? ಈ ಸರ್ತಿಯಾದರು ಬಿಜೆಪಿ ಪಕ್ಷ ತನ್ನ ತಪ್ಪನ್ನು ತಿದ್ದಿಕೊಳ್ಳುತ್ತಾ? ಕಾದು ನೋಡಬೇಕು………

(ಚಿತ್ರ ಕೃಪೆ : ರೆಡಿಫ್.ಕಾಂ)

5 ಟಿಪ್ಪಣಿಗಳು Post a comment
  1. ಮಹೇಶ ಪ್ರಸಾದ್ ನೀರ್ಕಜೆ's avatar
    ಮಹೇಶ ಪ್ರಸಾದ್ ನೀರ್ಕಜೆ
    ಫೆಬ್ರ 19 2011

    ಇದಕ್ಕಿಂತ ಅವಿವೇಕಿತನ ಇನ್ನೊಂದಿಲ್ಲ ಅಂತಷ್ಟೇ ಹೇಳಬಹುದು. ಜನವಿರೋಧಕ್ಕೆ ಮಣಿದಾದರೂ‌ ತನ್ನ ನಿರ್ಧಾರವನ್ನು ಬಿಜೆಪಿ ವಾಪಸ್ ತೆಗೆದುಕೊಳ್ಳುತ್ತಾ ನೋಡಬೇಕು. ಚಿಮೂ ಅವರ ವಿಷಯದಲ್ಲಿ ಕನ್ನಡಿಗರಿಗೆ ಜಯವಾದ ಹಾಗೆ ಈ ಸಂದರ್ಭದಲ್ಲೂ ಬಿಜೆಪಿ ತನ್ನ ನಿರ್ಧಾರ ಬದಲಿಸುವಂತೆ ಅವರ ಮೇಲೆ ಒತ್ತಡ ತರಬೇಕು.

    ಉತ್ತರ
  2. ಆಸು ಹೆಗ್ಡೆ's avatar
    ಫೆಬ್ರ 21 2011

    ರಾಜಕೀಯ ಪಕ್ಷಗಳು, ಪಕ್ಷಾತೀತವಾಗಿ ತಮ್ಮ ಇಚ್ಛಾನುಸಾರ ವರ್ತಿಸುತ್ತಿವೆ ಎನ್ನುವುದಕ್ಕೆ ಇದು ಮತ್ತೊಂದು ಉದಾಹರಣೆ.
    ನಾಡಿನ ಜನರ ಹಿತರಕ್ಷಣೆಗಿಂತ ಪಕ್ಷದ ಹಿತರಕ್ಷಣೆಯೇ ಮುಖ್ಯವಾಗುತ್ತದೆ ರಾಜಕೀಯ ಪಕ್ಷಗಳಿಗೆ.
    ತಮಿಳುನಾಡಿನಲ್ಲಿ ಮುಂಬರುವ ಚುನಾವಣೆಗೆ ಆಕೆಯನ್ನು ಬಳಸಿಕೊಂಡು ಹಲವು ಸ್ಥಾನ ಗಿಟ್ಟಿಸಿಕೊಳ್ಳಬಹುದು ಎನ್ನುವ ದುರಾದೃಷ್ಟಿಯ ಮುಂದೆ, ಸದ್ಯ ಅಧಿಕಾರದಲ್ಲಿರುವ ರಾಜ್ಯ ತಮ್ಮ ಕೈಯಿಂದ ಜಾರಿ ಹೋಗಬಹುದೇನೋ ಎನ್ನುವ ಅನುಮಾನ ಕೂಡ ನಗಣ್ಯವಾಗಿದೆ.
    ಅಲ್ಲದೇ, ಎಲ್ಲವೂ ಭಾಜಪಾದಲ್ಲಿ ಯಡ್ಡಿ ಹೇಳಿದಂತೆ ನಡೆಯುತ್ತಿಲ್ಲ ಅನ್ನುವುದನ್ನು ಪರೋಕ್ಷವಾಗಿ ಸೂಚಿಸಲು, ಕನ್ನಡಿಗರ ಹಿತಾಸಕ್ತಿಯನ್ನು ಬಲಿಕೊಟ್ಟಿದ್ದಾರೆ.
    ಭಾಜಪಾ ಕರ್ನಾಟಕದಲ್ಲಿ ಈಗ ತೋಡುತ್ತಿರು ಹೊಂಡಕ್ಕೆ. ಮುಂದೊಂದು ದಿನ ತಾನೇ ಬೀಳಬೇಕಾಗಿ ಬರಬಹದು.

    ಉತ್ತರ
  3. ಅರವಿಂಬ ಬ ನ's avatar
    ಅರವಿಂಬ ಬ ನ
    ಫೆಬ್ರ 21 2011

    ಸಿನಿಕ ಕನ್ನಡಿಗರ ಪಾಲಿಗೆ ಹೇಮಾ ಮಾಲಿನಿಯಾದರೂ ಅಷ್ಟೇ ಇನ್ನು ಯಾರಾದರೂ ಅಷ್ಟೇ, ಏಕೆಂದರೆ ಬೇರೆ ಯಾರಾದರೂ ಆ ಸ್ಥಾನಕ್ಕೆ ಹೋದರೂ ಅವರು ಕನ್ನಡ ಹಾಗೂ ಕರ್ನಾಟಕವನ್ನು ಪ್ರತಿನಿಧಿಸುವುದು ಅಷ್ಟರಲ್ಲೇ ಇದೆ. ಇದರಿಂದ ಯಾವ ವ್ಯತ್ಯಾಸವೂ ಆಗಲಾರದು.

    ಉತ್ತರ
  4. Chetan Jeeral's avatar
    Chetan Jeeral
    ಫೆಬ್ರ 21 2011

    @ಅರವಿಂದ್,
    ಸದ್ಯದ ಮಟ್ಟಿಗೆ ಕನ್ನಡಿಗರಲ್ಲಿ ಜಾಗೃತಿಯ ಕೊರತೆ ಕಾಣುತ್ತಿರಬಹುದು, ಹಾಗಂತ ಖಂಡಿತವಾಗಿ ನಿರಾಶೆ ಪಡಬೇಕಾಗಿಲ್ಲ. ಕನ್ನಡವನ್ನ ಎತ್ತಿ ಹಿಡಿಯುವಂತಹ ಕೆಲಸಗಳು ಆಗಬೇಕಾಗಿವೆ ಹಾಗು ಆಗುತ್ತಲಿವೆ. ಇವತ್ತು ಒಬ್ಬ ಹೇಮಾ ಮಾಲಿನಿ ಅಥವಾ ಒಬ್ಬ ವೆಂಕಯ್ಯ ನಾಯ್ಡು ಅವರನ್ನ ಆರಿಸಿ ಕಳುಹಿಸಿದರೆ ಮುಂದೊಂದು ದಿನ ಬೇರೆ ರಾಜ್ಯದ ನಾಯಕರಿಗೆ ನಮ್ಮ ರಾಜ್ಯದ ರಾಜ್ಯಸಭಾ ಸ್ಥಾನಗಳು ಮೀಸಲಾಗಿ ಬಿಡಬಹುದು. ರಾಜ್ಯಸಭೆಯಾ ಮುಖ್ಯ ಉದ್ದೇಶ ಪ್ರತಿಯೊಂದು ರಾಜ್ಯದ ಪ್ರತಿನಿಧಿಗಳನ್ನು ಹೊಂದುವುದು ಹಾಗೂ ಆಯಾ ರಾಜ್ಯದ ಅಭಿವೃದ್ಧಿಗಾಗಿ ಆಗಬೇಕಾಗಿರುವ ಕೆಲಸಗಳ ಬಗ್ಗೆ ರೂಪು ರೇಷೆಗಳನ್ನು ರೂಪಿಸಿವುದು ಆಗಿದೆ. ಹೇಮಾ ಮಾಲಿನಿಯಂತಹ ಹೊರ ರಾಜ್ಯದವರನ್ನ ಆರಿಸಿ ಕಳುಹಿಸಿದರೆ ಕಾರ್ಯಕ್ರಮಗಳನ್ನು ರೂಪಿಸುವುದು ಇರಲಿ ಕನಿಷ್ಠ ಪಕ್ಷ ರಾಜ್ಯದ ಚರ್ಚೆಗಳಲ್ಲಿ ಭಾಗವಹಿಸಬಹುದಾ ಅನ್ನೋ ಪ್ರಶ್ನೆ ಮೂಡುತ್ತದೆ? ನಮ್ಮ ರಾಜ್ಯದ ನಾಯಕರೇ ಪ್ರತಿನಿಧಿಗಳಾಗಿದ್ದರೆ ಖಂಡಿತವಾಗಿ ನಮ್ಮ ರಾಜ್ಯಕ್ಕೆ ಕೆಲಸಗಳಾಗಬಹುದು.

    ಉತ್ತರ
  5. Dr. Indira hegde's avatar
    ಫೆಬ್ರ 22 2011

    ನಮ್ಮಲ್ಲಿ ಕರ್ನಾಟಕವನ್ನು ರಾಜ್ಯ ಸಭೆಗೆ ಪ್ರತಿನಿಧಿಸಲು ಜನರು ಇದ್ದಾರೆ. ರಾಜ್ಯವನ್ನು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುವ ರಾಜಕೀಯ ಪಕ್ಷ ಇಲ್ಲ ಅಷ್ಟೆ.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments