ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 20, 2011

1

ಪ್ರೀತಿಗೆ ಕಣ್ಣು ಬೇಡ ಒಂದಿಷ್ಟು ಮಣ್ಣಾದರೂ ಬೇಡವೇ?

‍ನಿಲುಮೆ ಮೂಲಕ

ರಾಕೇಶ್ ಎನ್.ಎಸ್.

ಪ್ರೇಮಿಗಳ ದಿನಾಚರಣೆಗೆ ಧಿಕ್ಕಾರ…..! ಇದು ಭಾರತದಲ್ಲಿ ಈ ದಿನಾಚರಣೆಯ ಒಟ್ಟೊಟ್ಟಿಗೆ ಬೆಳೆದು ಬಂದ ಒಂದು ಘೋಷಣೆ ಮತ್ತು ಕ್ರಿಯೆ. ಇಲ್ಲಿ ವಿರೋಧ ಮತ್ತು ಪರ ಒಟ್ಟೊಟ್ಟಿಗೆಯೇ ಸಾಗಿದೆ, ಸಾಗುತ್ತಿದೆ ಮತ್ತು ಮುಂದೆಯೂ ಸಾಗಬಹುದು.ವಿಪರ್ಯಾಸವೆಂದರೆ ಧಿಕ್ಕಾರದ ಕೂಗು ಜೋರಾದಂತೆ ಸ್ವೀಕಾರದ ಬಯಕೆ ಕೂಡ ಏರುತ್ತಿದೆ. ಅದು ಹಾಗೆಯೇ, ಮುಚ್ಚಿಟ್ಟಿರುವುದರ ಬಗೆಗೆ ಹೆಚ್ಚು ಕುತೂಹಲ. ಇದು ಮಾನವನ ಸಹಜ ಸಂಸ್ಕ್ರತಿ. ಕಾಲದ ಹರಿವು ಮುಂದೆ ಮುಂದೆ…. ಹಿಂದೆಯಲ್ಲ, ಅನ್ನುವುದು ’ಹೀಗೂ ಒಂದು ದಿನ’ ಬೇಕು ಎಂಬುವವರ ಅಂಬೋಣ. ಆದರೆ ಯಾವುದು ಮುಂದೆ, ಯಾವುದು ಹಿಂದೆ ಎಂಬುದು ನಿರ್ದಿಷ್ಟ ವ್ಯಾಖ್ಯೆಯಿಲ್ಲದ ’ಕಾಲಗುಣ’. ಒಟ್ಟಿನಲ್ಲಿ ನನ್ನಂಥವರ ಸದ್ಯದ ಸ್ಥಿತಿ, ಮೂರು ಮಾರ್ಗದ ಮಧ್ಯೆ ಮದ್ಯ ಕುಡಿದು ತೂರಾಡುವವನಂತಾಗಿದೆ!

***

ಪ್ರವೀಣ್ ಗೊಡ್ಕಿಂಡಿಯ ಕೊಳಲನಾದ ಅಲೆ ಅಲೆಯಾಗಿ ತೇಲಿ ವಾಲಿ ನನ್ನ ಸುತ್ತ ಮತ್ತು ನನ್ನೊಳಗೊಂದು ಭಾವವಲಯ ಸ್ರೃಷ್ಟಿಸಿ ಬಿಡುತ್ತದೆ. ಹೌದು, ನಾನು ಕೊಳಲನ್ನು ಪ್ರೀತಿಸುತ್ತೇನೆ. ನುಡಿಸುವವನನಲ್ಲ! ಅದನ್ನು ಯಾರು ನುಡಿಸಿದರೂ ನನಗಷ್ಟೆ! ನಾ ಝಾಕೀರ್ ಹುಸೇನ್‌ನನ್ನು ಪ್ರೀತಿಸುತ್ತೇನೆ. ತಬಲವನ್ನಲ್ಲ!  ಕೊಳಲು ವಾದಕನ ಉಸಿರು ಕೊಳಲಿಗೆ ತಾಕಿದರೆ ಸಾಕು ನನಗದು ಬರಿ ಕೊಳಲ ದನಿಯಾಗಿ ಉಳಿಯೋದಿಲ್ಲ, ಅದು ಮನಃಶಾಂತಿಯ ಕೊಳವಾಗಿ ಬಿಡುತ್ತದೆ. ತಬಲ…. ಇಲ್ಲದೆ ’ನನ್ನ’ ಹುಸೇನ್‌ಗೆ ಅಸ್ತಿತ್ವವೇ ಇಲ್ಲ! ವೇಣುಗಾನ ಸೋನೆಯಾಗಿ ಸುರಿಯುವಾಗ ತಬಲ ನನಗೆ ಗುಡುಗಿನಂತೆ ಭಯ ಹುಟ್ಟಿಸುತ್ತದೆ. ಆದರೂ ನಾ ಹುಸೇನ್‌ನನ್ನು ಪ್ರೀತಿಸುವುದನ್ನು ಬಿಟ್ಟಿಲ್ಲ!
ಈಗ ಆಯ್ಕೆ ಪ್ರೀತಿಯದ್ದು. ನನ್ನ ಪ್ರೀತಿ ಯಾರ ಕಡೆಗೆ? ಯಾವುದು ನೈಜ ಪ್ರೀತಿ? ಅಷ್ಟರಲ್ಲಿ ಆಕೆಯ ಮಿಸ್‌ಡ್ ಕಾಲ್! ಕೊಳಲು ಬೇಡ! ಹುಸೇನ್‌ನ್ನು ಬೇಡ!

***

ಅವಳದ್ದು ಕಲ್ಲು ಹೃದಯ, ಅವಳೂ ಹಾಗೆ ಹೇಳಿಕೊಳ್ಳುತ್ತಿದ್ದಳು, ಅವಳಿಗಾಗಿ ಹಪಹಪಿಸಿದವರೂ ಕೂಡ! ಒಂದು ದಿನ ’ಪರಾರಿ’ ಸುದ್ದಿಯಡಿಯಲ್ಲಿ ಅವಳ ಹೆಸರು! ಅವನ್ಯಾರೋ ಚಿರಪರಿಚಿತ ಟಪೋರಿ! ಅದು ಕಲ್ಲು ಕರಗುವ ಸಮಯ! ’ಪ್ರೀತಿಗೆ ಕಣ್ಣಿಲ್ಲ’ ಎನ್ನುವವರಿಗೆ ಸಿಕ್ಕ ಉದಾಹರಣೆ. ಪ್ರೀತಿಗೆ ಕಣ್ಣು ಬೇಡ ಬಿಡಿ, ಕೊನೆಗೊಂದಿಷ್ಟು ಮಣ್ಣಾದರೂ ಬೇಡವೇ? ಇದು ಅವಳ ತಂದೆ ತಾಯಿಯ ಅಳಲು, ಕೊನೆಗೊಂದು ದಿನ ಅವಳದ್ದು ಕೂಡ!

***
ಪ್ರೀತಿಯಿಂದ ಬಿತ್ತಿದರೆ ಅಕ್ಕಿಯಿಂದ ಭತ್ತ ಬೆಳೆಯಬಹುದು, ಪ್ರೀತಿಯಿದ್ದರೆ ಗಾಳಿಯನ್ನು ಕೂಡ ಮುಷ್ಟಿಯಲ್ಲಿ ಹಿಡಿದು ತೋರಿಸಬಹುದು, ಒಣ ಮರಳಲ್ಲಿ ಆಳೆತ್ತರದ ಗೋಡೆ ಕಟ್ಟಬಹುದು, ಹೀಗೆ ಪ್ರೀತಿಯಿದ್ದಲ್ಲಿ ಎಲ್ಲ ಬಹುದುಗಳೇ! ಪ್ರೀತಿಯೆಂದರೆ ಏನು? ನಾವು ಪ್ರೀತಿಗೆ ಬೀಳುವುದಾ? ಅಥವಾ ಪ್ರೀತಿ ನಮ್ಮನ್ನು ಎಬ್ಬಿಸುವುದಾ? ಪ್ರೀತಿಯಲ್ಲಿ ನೈತಿಕ ಮತ್ತು ಅನೈತಿಕ ಎಂಬ ವಿಧ ಇದೆಯಾ? ಅದು ವರ್ತನೆಯಲ್ಲಿ ಮಾತ್ರ ಅಲ್ವಾ?
ನಾ ಮುಗ್ದ ಮುಖವಿಟ್ಟುಕೊಂಡು, ಪಿಳಿಪಿಳಿ ಕಣ್ಣು ಬಿಡುತ್ತಾ ನಿಮ್ಮನ್ನು ಕೇಳುತ್ತಿದ್ದೇನೆ….. ಒಂದೋ ಉತ್ತರ ಕೊಡಿ. ಇಲ್ಲ, ಒಂದಿಷ್ಟು ಪ್ರೀತಿ……!

ಕೃಪೆ: kempukote.blogspot.com

1 ಟಿಪ್ಪಣಿ Post a comment
  1. ಆಸು ಹೆಗ್ಡೆ's avatar
    ಫೆಬ್ರ 21 2011

    ಈ ಪ್ರಿತಿ ಅನ್ನುವುದು ಹರಿಯುವ ನೀರಿನಂತೆ,
    ನಿಂತಲ್ಲೇ ನಿಲ್ಲದೇ, ಒಂದು ಹೃದಯದಿಂದ,
    ಇನ್ನೊಂದು ಹೃದಯದತ್ತ ಹರಿಯುವುದೇ
    ಅದರ ಜಾಯಮಾನ!

    ಆದರೆ, ಅಹಂಕಾರ, ಅಸೂಯೆ, ಮದ,
    ಮತ್ಸರಗಳೆಂಬ, ಅಡ್ಡಗೋಡೆಗಳ
    ಕಟ್ಟಿಕೊಂಡ ಸಂಕುಚಿತ ಹೃದಯಗಳತ್ತ
    ಸರಾಗವಾಗಿ ಹರಿಯದು ಈ ಪ್ರೀತಿ;

    ಮಾನವೀಯತೆಯಿಂದ ಕೂಡಿ, ಹಸನಾಗಿ,
    ತಗ್ಗಿ – ಬಗ್ಗಿ ನಡೆವವರ, ವಿಶಾಲ ಹೃದಯಗಳತ್ತ
    ಧುಮ್ಮುಕ್ಕಿ ಹರಿಯುವುದು ಈ ಪ್ರೀತಿ!

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments