ಮೇಲೆ ಹಾರಿ, ನಿನ್ನ ಸೆಳೆತ ಮೀರಿ..!
-ರಂಜಿತ್
ಇದುವರೆಗೂ ಬ್ಯಾಚುಲರ್ ಅಂತ ಹಣೆಪಟ್ಟಿ ಹಾಕ್ಕೊಂಡು ಒಬ್ಬನೇ ಆರಾಮಾಗಿದ್ದೆ. ನಾನು ಬೆಂಗಳೂರಿಗೆ ಬರುವೆ, ಇಲ್ಲೇ ಇರುವೆ ಅಂತ ಸುದ್ಧಿ ಪಕ್ಕಾ ಆದ ಕೂಡಲೇ ಅಮ್ಮ ನಾನೂ ಬೆಂಗಳೂರಿಗೆ ಬರ್ತೇನೆ, ನಿನ್ನ ಜತೆ ಇರ್ತೇನೆ ಅಂದಾಗ ಖುಷಿ ಆಯ್ತು. ಅಲ್ಲಿಗೆ ನನ್ನ ರೂಮು ಜೀವನ, ಚೆಲ್ಲಾಪಿಲ್ಲಿ ಪೇಪರುಗಳ ಫ್ಲೋರಿಂಗ್, ಅಶಿಸ್ತಿನ ಅಭ್ಯಾಸಗಳಿಗೆ ತಿಲಾಂಜಲಿ ಇಡುವ ಅನಿವಾರ್ಯತೆ ಉಂಟಾಯಿತು. ಆದರೂ ಹೊತ್ತೊತ್ತಿಗೆ ಕರೆಕ್ಟಾಗಿ ಸಿಗುವ ಭಾರೀ ಭೋಜನ, ಮನೆಗೆ ಬೇಗ ಹೋಗೋಣ ಅಂತ ಅನ್ನಿಸುವಂತೆ ಮಾಡುವ ಒಂದು ಜೀವ ನಮ್ಮನ್ನು ಕಾಯುತ್ತ ಇರುತ್ತದೆಂಬ ಭಾವನೆಗಳು ಆಸೆ ಹುಟ್ಟಿಸಿದವು. ಒಡಹುಟ್ಟಿದವರೂ ನಿಷ್ಕಲ್ಮಶ, ನಿಷ್ಕಾರಣ ಪ್ರೀತಿ ತೋರದಿರುವ ಈ ಕಾಲದಲ್ಲಿ ಅದಕ್ಕೆ ನಂಬಬೇಕಾದ್ದು ಅಮ್ಮ ಒಬ್ಬರನ್ನೇ ಅಲ್ಲವೇ? ಹಾಗಾಗಿ ರೂಮು ಹುಡುಕುವುದು ಬಿಟ್ಟು ಮನೆ ಹುಡುಕುವುದಕ್ಕೆ ಶುರು ಮಾಡಿದ್ದಾಯಿತು.
ಬೆಂಗಳೂರು ಮಧ್ಯದಲ್ಲಿರುವ ಆಸೆ, ಬೆಂಗಳೂರು ಮ್ಯಾಪಿನ ಎಲ್ಲೋ ಮೂಲೆಯಲ್ಲಿರುವ ಕೆಲಸದ ಜಾಗ, ಈ ಎರಡೂ ತುಂಬ ಮಾನಸಿಕ ಸಂಘರ್ಷ ಉಂಟುಮಾಡಿದವು. ಕೊನೆಗೂ ಎಲ್ಲಾ ಆಸೆಗಳನ್ನು ಟ್ರಾಫಿಕ್ ಎಂಬ ಭೂತ ಹೆದರಿಸಿ ’ಎಲ್ಲಿ ಕೆಲಸವೋ ಅಲ್ಲೇ ವಾಸ’ ಎಂಬ ಗಾದೆ ಹುಟ್ಟಿಸಿ ಮ್ಯಾಪಿನ ಮೂಲೆಯಲ್ಲೇ ಮನೆ ಮಾಡುವಂತೆ ಪ್ರೇರೇಪಿಸಿದವು. ಮನೆ ಆಯ್ತು, ಅಮ್ಮ ಬರುವ ಮುಂಚೆ ಎಲ್ಲಾ ತಯಾರಿರಬೇಕು ಅಂತ ಅನ್ನಿಸಿ ಮನೆಗೆ ಬೇಕಾದ ಎಲ್ಲಾ ಸಾಮಾನುಗಳೂ, ಯಂತ್ರ (ವಾಷಿಂಗ್ ಮೆಶೀನು, ಗ್ಯಾಸು ಸಿಲಿಂಡರು ಇತ್ಯಾದಿ) ತಂದಿರಿಸಿದ್ದಾಯಿತು. ಅಮ್ಮನಿಗೆ ಮುಖ್ಯವಾಗಿ ಬೇಕಾಗಿದ್ದ ಟೀವಿ ಠೀವಿಯಿಂದ ಡ್ರಾಯಿಂಗ್ ರೂಮಿನಲ್ಲಿ ಕೂತಿತು. ಮತ್ತಷ್ಟು ಓದು 




