– ಕುಮಾರ ರೈತ

ಯೋಗರಾಜ ಭಟ್ಟರೆ ನಿಮ್ಮಗೊಂದು ಬಹಿರಂಗ ಪತ್ರ……..‘ಪರಮಾತ್ಮ’ ಚಿತ್ರದ ಬಗ್ಗೆ ನನ್ನ ಅನೇಕ ಸ್ನೇಹಿತರು ನನ್ನೊಂದಿಗೆ ಮಾತನಾಡುತ್ತಿದ್ದರು. ಈ ಪ್ರತಿಯೊಬ್ಬರು ಹೇಳುತ್ತಿದ್ದ ಮಾತು ‘ ಚಿತ್ರ, ನಿರೀಕ್ಷೆಯನ್ನು ಹುಸಿಯಾಗಿಸಿದೆ’ ಇದು ನನ್ನ ಅಭಿಪ್ರಾಯ ಕೂಡ. ಸಿನಿಮಾ ತೆರೆಕಂಡ 12 ದಿನಗಳ ಬಳಿಕ ಈ ಪತ್ರ ಬರೆಯಲು ನನ್ನೊಳಗಿನ ಒತ್ತಡವೇ ಕಾರಣ. ಮಣಿ, ಮುಂಗಾರು ಮಳೆ ಮತ್ತು ಪಂಚರಂಗಿ ಯಿಂದ ಸಹಜವಾಗಿಯೆ ನಿಮ್ಮ ಚಿತ್ರಗಳೆಂದರೆ ನಮಗೆ ಹೆಚ್ಚು ನಿರೀಕ್ಷೆ-ಕುತೂಹಲ. ಪ್ರತಿಭಾನ್ವಿತ ನಟ ಪುನೀತ್ ಅವರು ನಟಿಸುವ ಚಿತ್ರವನ್ನು ನೀವು ನಿರ್ದೇಶಿಸುತ್ತೀರಿ ಎನ್ನುವುದು ಇವೆಲ್ಲವನ್ನೂ ಹೆಚ್ಚು ಮಾಡಿತ್ತು. ಬಹು ಕಲಾತ್ಮಕವಾಗಬಹುದಾಗಿದ್ದ ಚಿತ್ರವೊಂದು ನಿರೀಕ್ಷೆಯ ಮಟ್ಟ ಮುಟ್ಟದಿರಲು ನೀವೇ ಸಂಪೂರ್ಣ ಕಾರಣಕರ್ತರು. ಇದು ಹೇಗೆ….ಎನ್ನುತ್ತೀರಾ….ಮುಂದೆ ಓದಿ…ಭಟ್ಟರೆ…
ರೂಪಕ-ಪ್ರತಿಮೆಗಳನ್ನು ದುಡಿಸಿಕೊಳ್ಳಲು ನೀವು ಸಾಕಷ್ಟು ಪ್ರಯತ್ನಪಟ್ಟಿದ್ದೀರಿ ಎನ್ನುವುದು ಚಿತ್ರದುದ್ದಕ್ಕೂ ಕಾಣುತ್ತದೆ. ಇದರ ಮೊದಲ ನಿದರ್ಶನ. ನಾಯಕ ಪರಮಾತ್ಮ ಹಿಮಾಲಯ ಪರ್ವತವನ್ನೇರುವುದು. ಈ ಮೂಲಕ ಆತ ಹಿಮಾಲಯದೆತ್ತರದ ವ್ಯಕ್ತಿತ್ವವುಳ್ಳವನು ಎಂದು ಹೇಳಿದಿರಿ. ಕುಂಗ್ ಪು ಸಮರ ಕಲೆಯೂ ಹೌದು ಮತ್ತು ದೇಹ ಮನಸಿನ ನಡುವೆ ಅದ್ಬುತ ಹೊಂದಾಣಿಕೆ ಏರ್ಪಡಿಸುವ; ತನ್ಮೂಲಕ ಏಕಾಗ್ರತೆ ನೀಡುವ ಕಲೆಯೂ ಹೌದು. ಇದರಲ್ಲಿ ಪರಿಣಿತಿ ಪಡೆದ ಕಥಾನಾಯಕ ಈ ಎಲ್ಲವನ್ನು ಸಿದ್ದಿಸಿಕೊಂಡಿದ್ದಾನೆ ಎಂದು ಪರೋಕ್ಷವಾಗಿ ತಿಳಿಸಿದಿರಿ. ಇವೆಲ್ಲದರ ಜೊತೆಗೆ ಆತ ಮಾರುಕಟ್ಟೆ ಪರಿಣಿತ ಎನ್ನುವುದನ್ನು ಹೇಳಿದಿರಿ. ಇಷ್ಟೆಲ್ಲ ಹೇಳಿದ ನೀವು ಆತ ಎಂ.ಎಸ್ ಸ್ಸಿಯಲ್ಲಿ ಆರು ವರ್ಷ ಢುಂಕಿ ಹೊಡೆದಿದ್ದು ಯಾಕೆ ಎನ್ನುವುದನ್ನು ಅರ್ಥ ಮಾಡಿಸುವುದಿಲ್ಲ. ಈ ಸಂದರ್ಭದ ಹಾಡು ಕೂಡ ಈ ನಿಟ್ಟಿನಲ್ಲಿ ವಿಫಲವಾಗಿದೆ. ದುಶ್ಚಟಗಳಿಲ್ಲದ, ಸಂಪೂರ್ಣ ಸಂಯಮದಿಂದ ವರ್ತಿಸುವ, ಯಾರನ್ನೂ ಕಿಚಾಯಿಸಿ-ಗೋಳು ಹುಯ್ದುಕೊಳ್ಳದ ನಾಯಕ ಏಕಾಗಿ ಸತತ ಫೇಲಾಗುತ್ತಾನೆ ಎಂದು ಬಿಂಬಿಸಲು ನೀವು ವಿಫಲರಾದಿರಿ. ಪರೀಕ್ಷೆಯಲ್ಲಿ ಫೇಲಾಗುವುದಕ್ಕೂ ಜೀವನದಲ್ಲಿ ಯಶಸ್ವಿಯಾಗುವುದಕ್ಕೂ ಸಂಬಂಧವಿಲ್ಲ ಎಂದು ಹೇಳಲು ನೀವು ಪ್ರಯತ್ನಿಸಿದ್ದೀರಿ ನಿಜ. ಆದರೆ ‘ಪರಮಾತ್ಮ’ನ ವಿಷಯದಲ್ಲಿ ಈ ಎಣಿಕೆ ಹೊಂದಾಣಿಕೆಯಾಗುವುದಿಲ್ಲ.