ಒಳಗಿಳಿದ ಬೆಂಗಳೂರು ಹಾಗೂ ನೈಪಾಲ್
-ಸುಪ್ರೀತ್ ಕೆ ಎಸ್
“ಇದು ನನ್ನ ಊರಲ್ಲ. ನಾನು ಇಲ್ಲಿ ಸೇರಿದವನಲ್ಲ. ಇದು ಸರಿಹೋಗುತ್ತಿಲ್ಲ” ಮೆಜೆಸ್ಟಿಕ್ ನಿಂದ ಆಟೋ ಹಿಡಿದು ಕೆ.ಆರ್ ವೃತ್ತದ ಬಳಿಯಿರುವ ನನ್ನ ಕಾಲೇಜಿಗೆ ತಲುಪುವುದಕ್ಕೆ ರಸ್ತೆಗಳನ್ನು ಹಾದು ಹೋಗುವಾಗ ನನಗೆ ಅನ್ನಿಸುತ್ತಿದ್ದದ್ದು ಹೀಗೆ. ನಾನು ಹೊಸ ಊರಿನ ಚಹರೆಯ ಅಪರಿಚಿತತೆಯನ್ನು ಎದುರುಗೊಂಡಿದ್ದು ಈ ಭಾವನೆಯಲ್ಲೇ. ದೇಶದ ಮೂಲೆ ಮೂಲೆಗಳಿಂದ ದಿನವೊಂದಕ್ಕೆ ಸಾವಿರಾರು ಮಂದಿ ಬೆಂಗಳೂರು ಸೇರುತ್ತಾರೆ. ಬೆಂಗಳೂರು ಸಹ ಕೊಸರದೆ ಕೆಮ್ಮದೆ ಎಲ್ಲರನ್ನು ಒಳಕ್ಕೆ ಬಿಟ್ಟುಕೊಳ್ಳುತ್ತದೆ. ಆದರೆ ಪ್ರವಾಸಿಯಾಗಿಯಲ್ಲದೆ ಸ್ಥಾವರ ಸ್ಥಾಪಿಸಿಕೊಳ್ಳಲು ಬಂದಿದ್ದ ನನ್ನನ್ನು ಒಳಕ್ಕೆ ಬಿಟ್ಟುಕೊಳ್ಳಲು ಬೆಂಗಳೂರು ಬಿಗುಮಾನ ತೋರಿದ ಹಾಗೇ ನನಗೆ ಭಾಸವಾಗಿತ್ತು. ಅತ್ತಿಂದಿತ್ತ ಓಡಾಡುವ ಅಷ್ಟು ಜನರಲ್ಲಿ ಯಾರಿಗೂ ನಾನು ಬಂದುದದರ ಕುರಿತು ಸಂಭ್ರಮವಿಲ್ಲ. ಅಸಲಿಗೆ ಟಾರು ಕವಿದ ರಸ್ತೆಯ ಮೇಲೆ ನಾನೊಬ್ಬ ಮಾಂಸ ಮಜ್ಜೆಗಳ ಮನುಷ್ಯ ನಡೆದು ಹೋಗುತ್ತಿರುವುದೂ, ನಾನು ಇಲ್ಲಿಯವನಾಗಲಿಕ್ಕೆ ಸಾಧ್ಯವಾಗದೆ ಒದ್ದಾಡುತ್ತಿರುವುದು ಯಾರ ಕಣ್ಣಿಗೂ ಮುಖ್ಯವಾಗಿಯೇ ಇರಲಿಲ್ಲ. ಓಡಾಡುವ ಜನರ ಕಣ್ಣಿಗೆ ಯಾವುದೂ ಮುಖ್ಯವಾಗಿದ್ದಂತೆ ಕಾಣುತ್ತಿರಲಿಲ್ಲ.
ವರ್ಷಗಳು ಕಳೆದಿವೆ. ಅಂದು ಕೆ.ಆರ್.ವೃತ್ತದಿಂದ, ಮೈಸೂರು ಬ್ಯಾಂಕ್ ವೃತ್ತದ ನಡುವೆ ಇರುವ ಗೊಂದಲಕಾರಿ ಒಮ್ಮಾರ್ಗಗಳ ಚಕ್ರವ್ಯೂಹದಲ್ಲಿ ಸಿಲುಕಿಕೊಂಡು, ಮರಳುಗಾಡಿನಲ್ಲಿ ದಿಕ್ಕು ತಪ್ಪಿದವನಂತೆ ಓಡಾಡುತ್ತಿದ್ದೆ. ರಾತ್ರಿ ಎಂಟುಗಂಟೆ ದಾಟಿತ್ತು. ಕತ್ತಲು ಗಾಢವಾದಷ್ಟು, ವಾಹನಗಳ ಸಂಖ್ಯೆ ವಿರಳವಾದಷ್ಟೂ ಎದೆ ಬಡಿತ ಜೋರಾಗುತ್ತಿತ್ತು. ದಾರಿಹೋಕರೊಂದಿಗೆ ಮಾತನಾಡಲೂ ಸಂಕೋಚ. ಯಾರಲ್ಲಾದರೂ ದಾರಿ ಕೇಳಬೇಕೆ ಬೇಡವೇ ಎನ್ನುವುದಕ್ಕೆ ನೂರು ಮಾರು ದೂರದಿಂದ ನಡೆದು ಬರುವ ವ್ಯಕ್ತಿಯನ್ನು ಅವಲೋಕಿಸುವುದು. ಆತನ ಚರ್ಯೆಯಲ್ಲಿ, ವರ್ತನೆಯಲ್ಲಿ, ಬಾಡಿ ಲ್ಯಾಂಗ್ವೇಜಿನಲ್ಲಿ ತುಸುವೇ ಆಕ್ರಮಣ ಕಂಡೊಡನೆ ಅವನಿಂದ ಕಣ್ಣು ಕೀಲಿಸಿ ಇನ್ನೊಬ್ಬನಿಗಾಗಿ ಕಾಯುವುದು. ಯಾರೋ ತೋರಿದ ದಿಕ್ಕಿನಲ್ಲಿ ನಿಂತು ಎಂದೂ ಬರದಿರುವ ಬಿ.ಎಂ.ಟಿ.ಸಿ ಬಸ್ಸಿಗಾಗಿ ಕಾಯುವುದು. ಕಾಲು ನಡಿಗೆಯ ದೂರದಲ್ಲಿದ್ದ ಮೆಜೆಸ್ಟಿಕ್ ಗೆ ದಾರಿ ಯಾವುದೆಂದು ಕೇಳುತ್ತ ಅಲೆಯುವುದು. ಬೆಂಗಳೂರೆಂಬ ಮರಳುಗಾಡಿನ ಓಯಸಿಸ್ ಆಗಿ ಕಂಡಿತ್ತು ಅಂದು ಮೆಜೆಸ್ಟಿಕ್. ಕಣ್ಣೆದುರು ಸರ್ರೆಂದು ಸಾಗುವ ಅಷ್ಟು ಬಸ್ಸುಗಳಲ್ಲಿ ಒಂದೂ ಮೆಜೆಸ್ಟಿಕ್ ಹೋಗುವುದಿಲ್ಲ ಎನ್ನುವುದನ್ನು ನಂಬುವುದಕ್ಕೇ ಸಾಧ್ಯವಾಗಿರಲಿಲ್ಲ. ಬೆಂಗಳೂರಿನ ಪಾಲಿಗೆ ರಕ್ತವನ್ನು ಪಂಪ್ ಮಾಡುವ ಹೃದಯ ಮೆಜೆಸ್ಟಿಕ್, ಅಲ್ಲಿಗೆ ಬಸ್ಸುಗಳು ಹೋಗುತ್ತಿಲ್ಲ ಎಂದರೆ ಏನರ್ಥ? ಮತ್ತಷ್ಟು ಓದು 




