ರಾಂಬೋ ಮೇನಿಯಾ.. ಶರಣ್ ದೇ ದುನಿಯಾ
ಫಿಲ್ಮಿ ಪವನ್
ಈ ನಡುವೆ ಯಾಕೋ ಲೇಖನ ಅಂದ್ರೆ ಸ್ವಲ್ಪ ಸೋಂಬೇರಿಯಾಗಿಬಿಡುತಿದ್ದೆ, ಸುಲಭವಾಗಿ ಕವನ ಬರೆದುಬಿಡೋಣ, ಯಾರು ಅಷ್ಟುದ್ದ ಟೈಪ್ ಮಾಡೋರು ಅನ್ನೋ ಆಲಸಿತನ. ಆದ್ರು ಈ ಸಿನಿಮಾ ನಂಗೆ ಬಹಳಾ ಹತ್ತಿರವಾಗಿದ್ದು ಮತ್ತೆ ತುಂಬಾ ಚೆನ್ನಾಗಿರೋದ್ರಿಂದ ಸುಮಾರು ದಿನಗಳ ಮೇಲೆ ಸಿನಿಮಾ ಲೇಖನ ಬರೀತಿದ್ದೀನಿ.
ಶರಣು ಶರಣಾರ್ಥಿ ಅಂತ ತೆರೆಮೇಲೆ ಒಂದು ಪತ್ರ ಕಡೆಯಲ್ಲಿ ಶರಣ್ ಹಸ್ತಾಕ್ಷರ ಹಿಂದೆ ಶರಣ್ ಕಂಠ ಸಿನಿಮಾ ಪ್ರಾರಂಭಕ್ಕೆ ಬಂದು ಶರಣ್ ಬಗ್ಗೆ ಒಂದಷ್ಟು ವಿಷಯಗಳು ತಿಳಿಯುತ್ತದೆ, ೯೯ ಸಿನಿಮಾಗಳು ಸಹಾಯಕ ನಟನಾಗಿ ದುಡಿದ ಶರಣ್, ನಾಯಕನಾಗಲು ಇಷ್ಟು ದಿನ ಯಾಕೆ ತೊಗೊಂಡ್ರು ಅಂತ ಒಮ್ಮೆ ಅನಿಸಿದ್ರೆ ಅದ್ರಲ್ಲಿ ತಪ್ಪೇನು ಇಲ್ಲ, ಶರಣ್ ನೂರನೆ ಚಿತ್ರ ಅವರದೇ ಬ್ಯಾನರ್ ನಲ್ಲಿ ಬಂದಿರೋದು ನಿಜಕ್ಕು ಅವರಿಗೇ ಹೆಮ್ಮೆ, ಲಡ್ಡು ಪ್ರೊಡಕ್ಷನ್ಸ್ ಅಂತ ಹೆಸರಿಟ್ಟಾಗಲೆ ಇವರ ಸಿನಿಮಾ ಹಿಟ್ ಆಗಿತ್ತು ಅನ್ಸುತ್ತೆ, ಯಾಕಂದ್ರೆ ಆ ಪ್ರೊಡಕ್ಷನ್ ಹೆಸರು ನೋಡಿದೊಡನೆ ಚಿತ್ರಮಂದಿರದಲ್ಲಿ ಒಮ್ಮೆ ನೆಗೆಯ ಬುಗ್ಗೆ ಒಡೆದಿತ್ತು.
ಚಿತ್ರ ಶುರುವಾಗೋದು ಮಿಷಿನ್ ಕುಮಾರ್, ಅಲಿಯಾಸ್ ಬೆಲ್ಟ್ ಕುಮಾರ್ ಅಲಿಯಾಸ್ ಪ್ರೇಮ್ ಕುಮಾರ್ ಮಿಸ್ಟರ್ ತಬಲಾನಾಣಿ ಅವರ ಕಾಮೆಡಿ ಕಿಕ್ಕಿಂದ, ಮೈಸೂರಿನ ಮಿಷಿನ್ (ರಾಗಿ) ಬಿಡುವ ಕುಮಾರ್, ಮಿಷೀನ್ ಬಿಡುವುದಲ್ಲದೆ ಕಾರ್ ಡೀಲಿಂಗ್ ಸಹ ಮಾಡ್ತಾನೆ, ಈ ಬೆಲ್ಟ್ ಕುಮಾರ್ ಗೆ ಬಾಸ್/ಗೆಳೆಯ/ಅಳಿಯ ಎಲ್ಲ ನಮ್ಮ ನಾಯಕ ಪೋಲಿಕಿಟ್ಟಿ ಶರಣ್.ಇವರಿಬ್ರು ಸೇರಿ ಕಾರ್ ಡೀಲ್ ಮಾಡೋ ಸ್ಟೈಲೇ ಬೇರೆ, ಆ ಸ್ಟೈಲ್ ಗೆ ಅವ್ರಿಗೆ ಬೆಂಬಲ ನೀಡೋನೆ RAMBO. RAMBO ಗೆ ಒಮ್ಮೆ ಕಾರ್ ನಂಬರ್ ಕಲರ್ ಮತ್ತೆ ಅಡ್ಡ್ರೆಸ್ಸ್ ಹೇಳಿದ್ರೆ ಸಾಕು ಮುಕ್ಕಾಲು ಡೀಲ್ ಮುಗಿಸ್ಕೊಂಡು ಬರ್ತಾನೆ, ಮಿಕ್ಕಿದ ಡೀಲ್ ಮಾವ ಅಳಿಯ ಮಾಡಿ ಮುಗಿಸ್ತಾರೆ. ಹೀಗೆ ಡೀಲ್ ಮಾಡೋವಾಗ, ಕಿಟ್ಟಿ ಪ್ರೀತಿಯ ಗೆಳೆಯ ಗಣೇಶನಿಗೆ ಕಡುಬಿನ ಹಾರ ಹಾಕ್ಸ್ತೀನಿ ಹಾಕಿಸ್ತೀನಿ ಅಂತ ಪ್ರತಿ ಬಾರಿ ಹೇಳಿ ಹಲ್ವ ಕೊಟ್ಟಿರ್ತಾನೆ ಇದಕ್ಕೆ ಗಣೇಶನಿಗೆ ಬೇಜಾರಾಗಿ ಸರ್ಯಾಗಿ ಇವ್ರಿಗೆ ಲಡ್ಡು ತಿನ್ನುಸ್ತಾನೆ, ಆಗ ಸಿಕ್ಕಾಕ್ಕೋಳೋ ಕಿಟ್ಟಿ ಮತ್ತು ಬೆಲ್ಟ್ ಕುಮಾರ್ ಮುಂದೆ ಏನೆಲ್ಲ ಪಾಡು ಅನುಭವಿಸ್ತಾರೆ,ಬಹಳಷ್ಟು ಕಷ್ಟ ಪಟ್ಟು ಬಹಳಷ್ಟು ಮದ್ವೆ ಸಂಬಂಧಗಳನ್ನು ನೋಡಿ ಕಡೆಗೆ ಸಿಕ್ಕ ನಾಯಕಿ ಪ್ರೀತಿ ಸಹ ಇಲ್ಲಿ ಗೊಂದಲವಾಗುತ್ತದೆ. ಇವೆಲ್ಲದ್ರಿಂದ ಹೇಗೆ ತಪ್ಪಿಸ್ಕೊಳ್ತಾರೆ. ಅನ್ನೋದೆ ಪೂರ್ತಿ ಸಿನಿಮ.
ಮೊದಲನೇ ಫ್ರೇಮ್ ಇಂದ ಕಡೆವರೆಗು ಪ್ರತಿಯೊಬ್ಬ ಕಲಾವಿದನು ತನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ, ಉಮಾಶ್ರೀ ಅವರದ್ದು ಎಂದಿನಂತೆಯೆ ನೈಜ ಅಭಿನಯ, ತಬಲಾನಾಣಿ ಚಿತ್ರದ ಬೆನ್ನೆಲುಬು ಅಂದ್ರೆ ತಪ್ಪೇನಿಲ್ಲ. ಇನ್ನು ರಂಗಾಯಣ ರಘು, ಸಾಧುಕೋಕಿಲ ಬಗ್ಗೆ ಮಾತಾಡೋದೆ ಬೇಕಿಲ್ಲ, ನವೀನ್ ಕೃಷ್ಣ ಗೆ ಸ್ಪೆಷಲ್ ಥ್ಯಾಂಕ್ಸ್ ಕೊಟ್ಟಿರೋದ್ರಲ್ಲಿ ತಪ್ಪೇನಿಲ್ಲ, ಕೃಷ್ಣರಾಗಿದ್ದಾರೆ, ಇನ್ನು ಕಾಶಿ,ಉಮೇಶ್ ಅವ್ರೆಲ್ಲ ನುರಿತವರು, ಹೀರೋಇನ್ ಸಲ್ಪ ದಪ್ಪ ಆದ್ರು ಚೆನ್ನಾಗಿ ಕಾಣಿಸ್ತಾರೆ, ಅಷ್ಟಾಗಿ ಅವರನ್ನ ಬಳಸಿಕೊಂಡಿಲ್ಲವಾದ್ರು ಚಿತ್ರಕಥೆಯಲ್ಲಿ ಅವರ ಪಾತ್ರ ಸಹ ಮಹತ್ವದ್ದಾಗಿದೆ. ಮತ್ತು ಚೆನ್ನಾಗಿ ಕುಣಿದಿದ್ದಾರೆ.ಇಂಟರ್ವಲ್ ಗೆ ಮುಂಚೆ ಸ್ವಲ್ಪ ಉಮಾಶ್ರೀ ಮತ್ತು ಶರಣ್ ಅವರ ಅರುಚಾಟ ಜಾಸ್ತಿ ಅನ್ಸುತ್ತೆ. ಹಾಗೆ ಶರಣ್ ಆಪ್ತ ಸ್ನೇಹಿತ ಗೋಲ್ಡನ್ ಸ್ಟಾರ್ ಗಣೇಶ್ ಗಣೇಶ ಭಗವಾನನಿಗೆ ಪಾತ್ರಕ್ಕೆ ಕಂಠದಾನ ಮಾಡಿ ಸ್ನೇಹ ಮೆರೆದಿದ್ದಾರೆ.
ಇನ್ನು ಚಿತ್ರದ ತಂತ್ರಜ್ಞರೆಲ್ಲ ಹೆಸರುವಾಸಿ, ಅರ್ಜುನ್ ಜನ್ಯ ಅವರ ಹಾಡುಗಳು ಈಗಾಗಲೆ ಮನೆ ಮಾತಾಗಿವೆ, ಮುಂಗಾರು ಮಳೆ ಕೃಷ್ಣ ಅವರ ಕ್ಯಾಮರ ಮುದ್ದಾಗಿ ಕೆಲಸಮಾಡಿದೆ. ನಿರ್ಮಾಪಕರು ಎಲ್ಲಿಯೂ ಯಾವುದಕ್ಕು ಕಡಿಮೆ ಮಾಡಿಲ್ಲ. ನಿರ್ದೇಶಕರಿಗೆ ಬಹಳ ಅನುಭವವಿರುವಂತೆ ನಿರ್ದೇಶಿಸಿದ್ದಾರೆ. ಇಷ್ಟೆಲ್ಲ ಅಚ್ಚುಕಟ್ಟಾಗಿ ಎಲ್ಲ ವಿಭಾಗಗಳು ಬೆಸೆದು ಕೆಲಸ ಮಾಡಲು ಕಾರಣ ಚಿತ್ರದ ಹಿಂದೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಮಾಸ್ಟರ್ ಮೈಂಡ್ ತರುಣ್ ಸುಧೀರ್ ಅನ್ನೋದು ಚಿತ್ರದ ವಿಶೇಷ. ಮನೆಮಂದಿಯೆಲ್ಲಾ ನೆಮ್ಮದಿಯಾಗಿ ಎರಡೂವರೆ ಘಂಟೆ ಎಂಜಾಯ್ ಮಾಡಬಹುದಾದ ಚಿತ್ರ, ಎಲ್ಲ ನೋಡ್ಕೊಂಡು ಬನ್ನಿ 🙂
ಚಿತ್ರಕೃಪೆ : sanalwoodking.com
********************************************************





Nijavagalu olleya Movie…..