ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 15, 2012

2

ಮುಲ್ಲಾ ಇಸ್ಲಾಂ ಮತ್ತು ಮಹಾತ್ಮರ ಘನತೆ

‍ನಿಲುಮೆ ಮೂಲಕ

-ಡಾ ಅಶೋಕ್ ಕೆ ಆರ್

ವರುಷದ ಹಿಂದೆ ಸಂದರ್ಶನವೊಂದರಲ್ಲಿ ಶಾರೂಕ್ ಖಾನ್ ‘ಮುಲ್ಲಾಗಳ ಇಸ್ಲಾಂ ಮತ್ತು ಅಲ್ಲಾಹುವಿನ ಇಸ್ಲಾಂ’ ಎಂಬ ಮಾತು ಹೇಳಿದ್ದರು. ಮುಲ್ಲಾಗಳ ಇಸ್ಲಾಂನಿಂದ ಇಸ್ಲಾಂ ಧರ್ಮಕ್ಕೆ ಮತ್ತು ಮುಖ್ಯವಾಗಿ ಮನುಷ್ಯತ್ವಕ್ಕೆ ಆಗುತ್ತಿರುವ ಹಾನಿಯನ್ನು ವಿವರಿಸಿದ್ದರು ಶಾರೂಕ್. ಚಲನಚಿತ್ರವೊಂದರ ಸಂಬಂಧವಾಗಿ ಲಿಬಿಯಾ ಮತ್ತಿತರ ಮುಸ್ಲಿಂ ಬಾಹುಳ್ಯದ ದೇಶಗಳಲ್ಲಿ ನಡೆಯುತ್ತಿರುವ ವಿನಾಕಾರಣದ ಹಿಂಸಾಚಾರದ ವರದಿಗಳನ್ನು ಓದಿದಾಗ ಶಾರುಕ್ ಮಾತುಗಳು ನೆನಪಾದವು. ಮಾನವೀಯ ಮೌಲ್ಯಗಳ ಬಗ್ಗೆ ಮಾತನಾಡುವ ಕೆಲವು ಚಲನಚಿತ್ರಗಳನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಆಯಾ ದೇಶ – ಧರ್ಮ –ಪ್ರದೇಶಕ್ಕೆ ಸೀಮಿತವಾದಂತಹ ಚಿತ್ರಗಳಷ್ಟೇ. ಇದೇ ಕಾರಣದಿಂದ ಭಾರತದ ಚಿತ್ರಗಳಲ್ಲಿ ಪಾಕಿಸ್ತಾನ ಶತ್ರುವಾಗಿ ಚಿತ್ರಿಸಲ್ಪಡುತ್ತದೆ, ಅಮೆರಿಕಾದ ಚಿತ್ರಗಳಲ್ಲಿ ರಷಿಯನ್ನರು ಅಮಾನವೀಯರಂತೆ ತೋರಿಸಲ್ಪಡುತ್ತಾರೆ. ನಾವು ಭಾರತದವರಾಗಿದ್ದರೆ ಚಿತ್ರ ಹಿಡಿಸುತ್ತದೆ, ಮನುಷ್ಯ ನಿರ್ಮಿತ ಗಡಿಯಾಚೆಗೆ ಹುಟ್ಟಿದ್ದರೆ ಚಿತ್ರ ಕೋಪ ಮೂಡಿಸುತ್ತದೆ. ಮತಿಗೆಟ್ಟ ಧರ್ಮಾಂಧರು ಅನ್ಯಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಎಲ್ಲ ಧರ್ಮದಲ್ಲೂ ಸಾಮಾನ್ಯ, ಮುಸ್ಲಿಮರೂ ಇದಕ್ಕೆ ಹೊರತಲ್ಲ. ಅಂಥವನೇ ಒಬ್ಬ ಯಹೂದಿ ತನ್ನ ನಿರ್ದೇಶನದ ಚಿತ್ರದಲ್ಲಿ ಮುಸ್ಲಿಮರ ಬಗ್ಗೆ, ಪ್ರವಾದಿಯ ಬಗ್ಗೆ, ಇಸ್ಲಾಮಿನ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಬಳಸಿದ್ದಾನೆ ಎಂಬುದೇ ನೆಪವಾಗಿ ಮುಲ್ಲಾಗಳ ಇಸ್ಲಾಂ ವಿಜ್ರಂಭಿಸುತ್ತಿದೆ.

ಇಲ್ಲಿ ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಇಂಥ ಅನೇಕ ಪ್ರತಿಭಟನೆಗಳಲ್ಲಿ ನಡೆಯುವಂತೆ ಇಲ್ಲೂ ಬಹುತೇಕ ಪ್ರತಿಭಟನಾಕಾರರಿಗೆ ಆ ಚಿತ್ರದಲ್ಲಿರುವ ಆಕ್ಷೇಪಾರ್ಹ ಹೇಳಿಕೆಗಳೇನೆಂಬುದೇ ಗೊತ್ತಿಲ್ಲದಿರುವುದು! ಯಾಕೆಂದರೆ ಇನ್ನೂ ಆ ಚಿತ್ರ ಬಿಡುಗಡೆಯೇ ಆಗಿಲ್ಲ. ಚಿತ್ರದ ಕೆಲವು ತುಣುಕುಗಳು ಅಂತರ್ಜಾಲದಲ್ಲಿ ಬಿಡುಗಡೆಗೊಂಡು ಈ ಮಟ್ಟದ ಪ್ರತಿಭಟನೆಗೆ ಕಾರಣವಾಗಿದೆ. ಈ ಪ್ರತಿಭಟನೆಗಳಿಂದ ಅವರು ಸಾಧಿಸಿದ್ದಾರೂ ಏನು? ಆ ಯಹೂದಿಗೂ , ಆ ಚಿತ್ರಕ್ಕೂ ಸಂಬಂಧವೇ ಇರದ ಅಮೆರಿಕಾ ರಾಯಭಾರಿಯ ಹತ್ಯೆ, ಮತ್ತು ಮತಿಗೆಟ್ಟ ಮುಲ್ಲಾಗಳ ಮಾತುಗಳಿಂದ ಯೋಚನಾಶಕ್ತಿ ಕಳೆದುಕೊಂಡು ಬೀದಿಗಿಳಿದ ಜನರ ಸಾವು. ಆ ಜನರ ಸಾವನ್ನೇ ಬಂಡವಾಳ ಮಾಡಿಕೊಂಡು ಮತ್ತಷ್ಟು ಜನರ ಯೋಚನಾಶಕ್ತಿ ಕಸಿಯುವಲ್ಲಿ ಧರ್ಮಾಂಧರಿಗೆ ಅನುಕೂಲವಾಗುತ್ತದೆಯಷ್ಟೇ

ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಧರ್ಮ, ದೇಶ, ಭಾಷೆಗಳನ್ನು ಅಪಮಾನಿಸುವುದು ತಪ್ಪು ಎಂಬುದಕ್ಕೆ ಇರಬೇಕಾದ ಗಡಿಯೇನು? ಬಹಳಷ್ಟು ಬಾರಿ ವಿಮರ್ಶಾತ್ಮಕ ಟೀಕೆಯನ್ನೂ ಅಪಮಾನವೆಂದು ಪರಿಗಣಿಸಿ ರೊಚ್ಚಿಗೇಳುವುದು, ಹಲ್ಲೆ ನಡೆಸುವುದು, ನಿಷೇಧಕ್ಕೆ ಆಗ್ರಹಿಸುವ ಪ್ರವೃತ್ತಿ ಹೆಚ್ಚುತ್ತಲೇ ಸಾಗಿರುವುದು ವಿಷಾದನೀಯ. ವಿಮರ್ಶಾತ್ಮಕ ಒಳನೋಟಗಳೆಡೆಗೆ ತಿರಸ್ಕಾರ ಹೊಂದಿದರೆ ಮುಮ್ಮುಖ ಚಲನಶೀಲತೆ ಅಸಾಧ್ಯ; ಧರ್ಮ – ದೇಶದೊಳಗಿನ ಕೆಡಕು – ಲೋಪದ ಸರಿಪಡಿಸುವಿಕೆಯೂ ಸಾಧ್ಯವಿಲ್ಲ. ಟೀಕಿಸಿದವನು ಕುತ್ಸುತ – ಸಂಕುಚಿತ ಮನೋಭಾವದವನೇ ಆಗಿದ್ದರೂ ಅವನ ಬಗೆಗೆ ಆಕ್ರೋಶವನ್ನು ಈ ಮಟ್ಟಿಗೆ ವ್ಯಕ್ತಪಡಿಸುವುದು ಸರಿಯೇ? ಈ ಪ್ರತಿಭಟನೆ – ಹಿಂಸೆಗಳಿಂದ ಯಾರಿಗೆಷ್ಟು ಉಪಯೋಗವಾಯಿತೋ ಗೊತ್ತಿಲ್ಲ, ಆ ಅಜ್ಞಾತ ನಿರ್ದೇಶಕನಿಗೆ ಮತ್ತು ಅವನ ಚಿತ್ರಕ್ಕೆ ಬಿಟ್ಟಿ ಪ್ರಚಾರ ದೊರೆಯಿತಷ್ಟೇ! ‘ಇಸ್ಲಾಮನ್ನು ಹೇಗೆ ಅಪಮಾನಿಸಿರಬಹುದು?’ ಎಂಬ ಕುತೂಹಲದಿಂದ ಮುಸ್ಲಿಮರು ಮತ್ತು ಇತರ ಧರ್ಮದವರೂ ಆ ಚಿತ್ರವನ್ನು [ಅದು ಕಳಪೆ ಸಿನಿಮಾವಾಗಿದ್ದರೂ] ನೋಡಿ ಚಿತ್ರ ನಿರ್ಮಾಪಕನ ಥೈಲಿ ತುಂಬಿಸಲು ಇವರ ಹಿಂಸಾತ್ಮಕ ಪ್ರತಿಭಟನೆ ಸಹಾಯ ಮಾಡುತ್ತದೆ! ಈಗಾಗಲೇ ಹುತಾತ್ಮರಾಗಿ ಹೋಗಿರುವ ಮಹಾತ್ಮರ ‘ಘನತೆ’ ಬದುಕಿರುವವರ ಟೀಕೆ ಟಿಪ್ಪಣಿ ಹೊಗಳಿಕೆ ತೆಗಳುವಿಕೆಯಿಂದ ಕಡಿಮೆಯೂ ಆಗಲಾರದು ಹೆಚ್ಚೂ ಆಗಲಾರದು.

ಇನ್ನು ಲಿಬಿಯಾ ದೇಶದ ಸ್ಥಿತಿ ನೋಡಿದರೆ ಬೇಸರವಾಗುತ್ತದೆ. ತನ್ನೆಲ್ಲಾ ತಿಕ್ಕಲುತನಗಳ ನಡುವೆಯೂ ಗಡಾಫಿ ತೀರ ಲಿಬಿಯಾ ಧರ್ಮಾಂಧ ದೇಶವಾಗಲು ಬಿಟ್ಟಿರಲಿಲ್ಲ. ಸರ್ವಾಧಿಕಾರತ್ವದ ವಿರುದ್ಧ ಕ್ರೋಡಿಕರಣಗೊಳ್ಳುತ್ತಿದ್ದ ರೋಷವನ್ನು ಯಶಸ್ವಿಯಾಗಿ ಬಳಸಿಕೊಂಡಿದ್ದು ಮತಾಂಧ ಮೂಲಭೂತವಾದಿಗಳು. ರಷಿಯಾದ ವಿರುದ್ಧ ಕೆಂಡಕಾರುತ್ತಿದ್ದ ಅಮೆರಿಕಾ ಅಪಘಾನಿಸ್ತಾನದ ತಾಲಿಬಾನಿ ಮುಜಾಹಿದೀನ್ ಗೆ ರಾಕೆಟ್ ಲಾಂಚರ್ ನೀಡಿ ರಷಿಯಾದ ಪತನಕ್ಕೆ ಕಾರಣವಾಯಿತು. ನಂತರ ಅದೇ ತಾಲಿಬಾನಿಗಳು ಅವೇ ರಾಕೆಟ್ ಲಾಂಚರ್ ಉಪಯೋಗಿಸುತ್ತ ಅಮೆರಿಕಕ್ಕೆ ತಲೆನೋವಾಯಿತು. ಇಷ್ಟಾದರೂ ಬುದ್ಧಿ ಕಲಿಯದ ಅಮೆರಿಕಾ ‘ಪ್ರಜಾಪ್ರಭುತ್ವ’ ಸ್ಥಾಪಿಸುವ ನೆಪದಲ್ಲಿ ಲಿಬಿಯಾದ ಬಂಡುಕೋರರನ್ನು ಬೆಂಬಲಿಸಿತು. ಆ ಬಂಡುಕೋರರಲ್ಲಿ ಮೂಲಭೂತವಾದಿಗಳೂ ಇದ್ದಾರೆ ಎಂಬುದು ಅದಕ್ಕೆ ತಿಳಿಯಲಿಲ್ಲವೇ? ಅಮೆರಿಕಾದ ನಿಜವಾದ ಉದ್ದೇಶ ಲಿಬಿಯಾದ ತೈಲೋತ್ಪನ್ನವಷ್ಟೇ! ಈಗ ಅಮೆರಿಕಾ ರಾಯಭಾರಿಯ ಹತ್ಯೆಯಾಗಿದೆ. ಮೂಲಭೂತವಾದಿಗಳ ಪ್ರಾಬಲ್ಯ ಹೆಚ್ಚುತ್ತಿದ್ದಂತೆ ಮತ್ತೊಂದು ಇರಾಕೆ ಮಾದರಿ ಯುದ್ಧಕ್ಕೆ ಅಮೆರಿಕಾ ಸಜ್ಜಾಗುತ್ತದೆ. ಮತ್ತಷ್ಟು ಜನರ ಮಾರಣಹೋಮ, ಮತ್ತಷ್ಟು ಅಮೆರಿಕನ್ ಸೈನಿಕರ ಹತ್ಯೆ, ಅಮೆರಿಕಾ ಕೈಗೊಂಬೆ ಸರಕಾರದ ಸ್ಥಾಪನೆ, ದೇಶದೆಲ್ಲೆಡೆ ಅಶಾಂತಿ, ಆದರೆ ತೈಲೋತ್ಪಾದನೆಗೆ ಮಾತ್ರ ಭಂಗವಿಲ್ಲ! ಪ್ರಸ್ತುತ ಇರಾಕಿನಂತೆ.

ಇವಕ್ಕೆಲ್ಲಾ ಕೊನೆಯೇ ಇಲ್ಲವೇ ಎಂಬ ಪ್ರಶ್ನೆಗೆ ಸರಿಯಾದ ಉತ್ತರ ‘ಖಂಡಿತವಾಗಿಯೂ ಇಲ್ಲ’! ದೇಶ – ದೇಶಗಳ ನಡುವೆ, ಧರ್ಮ – ಧರ್ಮಗಳ ನಡುವೆ ನಡೆಯುವ ಯುದ್ಧಕ್ಕೆ ರಾಷ್ಟ್ರೀಯತೆ, ಮತಾಂಧತೆಗಳು ಕಾರಣವಾದರೂ ಸಹಿತ ಶಸ್ತ್ರಾಸ್ತ್ರ ವಹಿವಾಟು ಕೂಡ ಈ ‘ಯುದ್ಧವೆಂಬ ದಂಧೆಗೆ’ ಪೋಷಕನಾಗಿರುವುದು ಸುಳ್ಳಲ್ಲ. ಜಗತ್ತಿನ ಅತಿದೊಡ್ಡ ಉದ್ಯಮಗಳಲ್ಲಿ ಅಕ್ರಮ ಶಸ್ತ್ರಾಸ್ತ್ರ ವಹಿವಾಟು ಪ್ರಮುಖವಾದುದು. ಯುದ್ಧಗಳೇ ನಿಂತು ಹೋಗಿ ಪ್ರಪಂಚವೆಲ್ಲ ಶಾಂತವಾಗಿಬಿಟ್ಟರೆ ಶಸ್ತ್ರಾಸ್ತ್ರ ವಹಿವಾಟು ನಡೆಸುವ ದೇಶಗಳ ಆರ್ಥಿಕತೆಯೇ ಕುಸಿದುಹೋಗುತ್ತದೆಯಾ?! ಲೇಖನ ಎತ್ತೆತ್ತಲೋ ಸಾಗುತ್ತಿರುವುದಕ್ಕೆ ಇಂಥ ಅಯೋಮಯ ಸಂಗತಿಗಳೇ ಕಾರಣ, ಕ್ಷಮೆಯಿರಲಿ.

2 ಟಿಪ್ಪಣಿಗಳು Post a comment
  1. anand prasad's avatar
    anand prasad
    ಸೆಪ್ಟೆಂ 15 2012

    ಭಿನ್ನಾಭಿಪ್ರಾಯಗಳನ್ನು ಹಿಂಸೆಯ ಮೂಲಕ ಹತ್ತಿಕ್ಕುವುದು ಅನಾಗರಿಕ ಸಮಾಜದ ಲಕ್ಷಣ. ಒಬ್ಬ ಲೇಖಕನ ಕೃತಿ ಅಥವಾ ಒಂದು ಸಿನಿಮಾ ಒಂದು ಧರ್ಮಕ್ಕೆ ಅವಹೇಳನ ಮಾಡಿದೆ ಎಂದ ಕೂಡಲೇ ಆ ಲೇಖಕನನ್ನು ಕೊಲ್ಲಲು ಆಜ್ಞೆ ಹೊರಡಿಸುವುದು ಅಥವಾ ಅದರ ವಿರುದ್ಧ ಹಿಂಸಾಚಾರ ನಡೆಸುವುದು ನಾಗರಿಕತೆಯ ಕೊರತೆ ಉಳ್ಳವರ ಲಕ್ಷಣ. ಇಂಥ ಕೃತಿಗಳನ್ನು ಅಥವಾ ಸಿನೆಮಾವನ್ನು ವಿರೋಧಿಸಬೇಕೆಂದಿದ್ದರೆ ಲೇಖನದ ಮೂಲಕ ಅಥವಾ ಬೇರೆ ನಾಗರಿಕ ವಿಧಾನಗಳ ಮೂಲಕ ಪ್ರತಿಭಟಿಸುವ ಅವಕಾಶ ಇರುವಾಗ ಹಿಂಸಾತ್ಮಕ ಪ್ರತಿಭಟನೆ ನಡೆಸುವುವರು ಇನ್ನೂ ತಾವು ನಾಗರಿಕತೆಯ ಮಟ್ಟಕ್ಕೆ ಮುಟ್ಟಿಲ್ಲ ಎಂದೇ ಅರ್ಥ. ಅವರನ್ನು ನಾಗರಿಕತೆಯ ಮಟ್ಟಕ್ಕೆ ತರಬೇಕಾದರೆ ವೈಚಾರಿಕ ಶಿಕ್ಷಣ ನೀಡುವುದೊಂದೇ ಮಾರ್ಗ. ಧರ್ಮವು ನಿಂತ ನೀರಾದರೆ ಅದು ಮಾನವನನ್ನು ಮೃಗವಾಗಿ ಮಾಡುತ್ತದೆ. ಮಾನವ ಜನಾಂಗದ ಜ್ಞಾನ ಹೆಚ್ಚಿದಂತೆ ಹಾಗೂ ವಿಜ್ಞಾನ ತಂತ್ರಜ್ಞಾನಗಳ ಬೆಳವಣಿಗೆ ಆದಂತೆ ಅದಕ್ಕೆ ತಕ್ಕಂತೆ ಧರ್ಮವೂ ಹೆಜ್ಜೆ ಹಾಕದೆ ಇದ್ದರೆ ಧರ್ಮ ಮೂಲಭೂತವಾದಿಯಾಗಿ ಬದಲಾಗುತ್ತದೆ. ಜ್ಞಾನ, ವಿಜ್ಞಾನಗಳ ಬೆಳವಣಿಗೆಯ ಜೊತೆ ಸಾವಿರಾರು ಅಥವಾ ನೂರಾರು ವರ್ಷಗಳ ಹಿಂದೆ ರೂಪುಗೊಂಡ ಧಾರ್ಮಿಕ ಆಚರಣೆಗಳು, ಕಟ್ಟುಪಾಡುಗಳು ಬದಲಾಗಬೇಕಾಗಿರುವುದು ನಾಗರೀಕತೆಯ ಬೆಳವಣಿಗೆಗೆ ಅತ್ಯವಶ್ಯಕ. ಇದನ್ನು ಅಗುಮಾಡದೆ ಸಾವಿರಾರು ವರ್ಷಗಳ ಹಿಂದಿನ ಮನಸ್ಥಿತಿಯಲ್ಲಿಯೇ ಮಾನವ ಜನಾಂಗವನ್ನು ಇಡಲು ಬಯಸುವ ಧರ್ಮ ಸಮಸ್ಯೆಗಳಿಗೆ ಮೂಲಭೂತ ಕಾರಣ. ವೈಚಾರಿಕ ಶಿಕ್ಷಣ ನೀಡದ ಕೆಲವು ದೇಶಗಳು ಇಂದು ವಿಶ್ವದಲ್ಲಿ ಧರ್ಮದ ಆಧಾರದಲ್ಲಿ ನಡೆಯುತ್ತಿರುವ ಎಲ್ಲ ಮೂಲಭೂತವಾದಿ ಹಿಂಸೆಗಳಿಗೆ ಕಾರಣವಾಗಿವೆ. ಇದರಲ್ಲಿ ಇಸ್ಲಾಮಿಕ್ ದೇಶಗಳು ಮುಂಚೂಣಿಯಲ್ಲಿರುವುದು ಕಂಡು ಬರುತ್ತದೆ. ಈ ಇಸ್ಲಾಮಿಕ್ ದೇಶಗಳು ಆಧುನಿಕ ವಿಜ್ಞಾನ, ಚಿಂತನೆ, ಹಾಗೂ ವೈಚಾರಿಕತೆಗೆ ತೆರೆದುಕೊಳ್ಳುವ ಶಿಕ್ಷಣ ವ್ಯವಸ್ಥೆಯನ್ನು ಅಳವಡಿಸಿಕೊಂಡರೆ ಇಂಥ ಮೂಲಭೂತವಾದಿ ಹಿಂಸೆಯ ಪ್ರಮಾಣ ಕಡಿಮೆಯಾದೀತು ಮತ್ತು ಕ್ರಮೇಣ ನಿಲ್ಲಬಹುದು. ಈ ಬಗ್ಗೆ ವಿಶ್ವದ ಎಲ್ಲ ಆಧುನಿಕ ರಾಷ್ಟ್ರಗಳು ಇಸ್ಲಾಮಿಕ್ ದೇಶಗಳಿಗೆ ಮನವರಿಕೆ ಮಾಡಿಕೊಡಬೇಕಾದ ಅಗತ್ಯ ಇದೆ ಮತ್ತು ಆಧುನಿಕ ವೈಚಾರಿಕ ಶಿಕ್ಷಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಂತೆ ಈ ರಾಷ್ಟ್ರಗಳಿಗೆ ವಿಶ್ವಸಂಸ್ಥೆಯಂಥ ಜಾಗತಿಕ ಸಂಘಟನೆಗಳು ಮನವೊಲಿಸಬೇಕಾದ ಅಗತ್ಯ ಕಂಡುಬರುತ್ತಿದೆ.

    ಉತ್ತರ
  2. SSNK's avatar
    ಸೆಪ್ಟೆಂ 16 2012

    ನೀವು ಹೇಳುತ್ತಿರುವುದು ಸರಿಯಾಗಿದೆ. ಹಿಂಸಾಚಾರವನ್ನು ಯಾವುದೇ ರೀತಿಯಲ್ಲೂ ಸಮರ್ಥಿಸಕೂಡದು.
    ಆದರೆ, ಆ ರೀತಿ ಹಿಂಸಾಚಾರ ಏಳುವುದಕ್ಕೆ ಆಗಿರುವ ಕಾರಣವನ್ನೂ ಮರೆಯಬಾರದು. ಆ ರೀತಿಯ ಕಾರಣಗಳು ಮರುಕಳಿಸದಂತೆ ಯಾವ ಕ್ರಮಗಳನ್ನು ಕೈಗೊಳ್ಳಬೇಕೆಂದೂ ಚಿಂತಿಸಬೇಕು.

    ನೀವು ಅನೇಕ ಕಡೆ ಧರ್ಮ ಎನ್ನುವು ಪದವನ್ನು ಬಳಸಿರುವಿರಿ. ಆದರೆ, ಜಗತ್ತಿನ ಬೇರಾವ ಪ್ರದೇಶದಲ್ಲೂ, ಬೇರಾವ ಸಂಸ್ಕೃತಿಯಲ್ಲೂ “ಧರ್ಮ”ದ ಪರಿಕಲ್ಪನೆಯೇ ಇಲ್ಲ.
    ಇಸ್ಲಾಮಿಗೂ ಧರ್ಮಕ್ಕೂ ಏನು ಸಂಬಂಧ. “ಧರ್ಮ” ಎನ್ನುವುದು ಅಚ್ಚ ಭಾರತೀಯ ಪದ. ಎಲ್ಲವನ್ನೂ ಒಳಗೊಂಡಿರುವುದು ಧರ್ಮ; ನಾಗರೀಕರಾಗಿ ಬದುಕುವುದು ಧರ್ಮ; ಗಾಳಿಗೆ ಬೀಸುವುದು ಧರ್ಮ; ಬೆಂಕಿಗೆ ಸುಡುವುದು ಧರ್ಮ; ಧರ್ಮವೆಂದರೆ ಮನುಷ್ಯರಾಗಿ ಬದಕಲು ಇರುವ ನಿಯಮಗಳು. ಧರ್ಮವು ದೇವರಿಗೆ ಸಂಬಂಧಿಸಿದ್ದಲ್ಲ ಅಥವಾ ಪೂಜಾಪದ್ಧತಿಗೂ ಸಂಬಂಧಿಸಿದ್ದಲ್ಲ; ಅದು ಅದೆಲ್ಲವನ್ನೂ ಮೀರಿದ್ದು – ಎಲ್ಲಾ ಪೂಜಾಪದ್ಧತಿಗಳನ್ನೂ ಒಳಗೊಂಡದ್ದು ಧರ್ಮ.

    ಇಂಗ್ಲಿಷಿನ “Religion” ಪದವನ್ನು ಅನೇಕ ಬಾರಿ ಧರ್ಮ ಎಂದು ಉಪಯೋಗಿಸಲಾಗುತ್ತದೆ. “Religion”ಗೆ ಸರಿಯಾದ ಪದ “ಮತ”.
    ಮತ ಬೇರೆ, ಧರ್ಮ ಬೇರೆ. ಮತವೆಂದರೆ ಅಭಿಪ್ರಾಯ. ಒಬ್ಬ ಪ್ರವಾದಿಯ ಅಭಿಪ್ರಾಯ; ಒಂದು ಪುಸ್ತಕದ ಅಭಿಪ್ರಾಯ.
    ಧರ್ಮವೆನ್ನುವುದು ಒಂದು ಪುಸ್ತಕದಲ್ಲಿ ಹಿಡಿದಿಡುವಂತಹುದಲ್ಲ; ಒಬ್ಬ ಪ್ರವಾದಿ ಹೇಳಿದ ಅಭಿಪ್ರಾಯವಲ್ಲ; ಧರ್ಮ ಎನ್ನುವುದು ನಿರಂತರ ಮಂಥನಕ್ಕೆ ಒಳಗಾಗುವಂತಹುದು ಮತ್ತು ತನ್ಮೂಲಕ ಕಲ್ಮಶಗಳನ್ನೆಲ್ಲಾ ತೆಗೆಯುತ್ತಾ ಹೋಗುವುದು. ಮತವು ತನ್ನಲ್ಲಿ ತಪ್ಪಿದೆ ಎನ್ನುವುದನ್ನು ಒಪ್ಪುವುದಿಲ್ಲ. ಪುಸ್ತಕವನ್ನು ಬಿಟ್ಟು ಬೇರೆಲ್ಲಾ ಅಲ್ಲಿ ತಪ್ಪಾಗುತ್ತದೆ ಇಲ್ಲವೇ ಸುಳ್ಳಾಗುತ್ತದೆ. ಧರ್ಮವು ನಿಂತ ನೀರಲ್ಲ; ಅದು ಪರಿಶ್ಕರಣೆಗೆ ಸದಾ ತೆರೆದಿರುತ್ತದೆ.

    ಹೀಗಾಗಿ ದಯವಿಟ್ಟು “ಮತ” ಮತ್ತು “ಧರ್ಮ” ಎರಡು ಪದಗಳನ್ನು ಉಪಯೋಗಿಸುವಾಗ ವಿವೇಚನೆಯಿಂದ ಉಪಯೋಗಿಸಿ.
    ಭಾರತದಲ್ಲಿ ಹುಟ್ಟಿರುವ ಅನೇಕ ಪದಗಳಿಗೆ ಪಶ್ಚಿಮದ ಭಾಷೆಗಳಲ್ಲಿ ಸಮಾನಾರ್ಥಕ ಪದಗಳಿಲ್ಲ. ಧರ್ಮ, ಕರ್ಮ, ಪುಣ್ಯ – ಈ ಪದಗಳಿಗೆ ಪಶ್ಚಿಮದ ಭಾಷೆಗಳಲ್ಲಿ ಪದಗಳಿಲ್ಲ; ಏಕೆಂದರೆ, ಅವರಲ್ಲಿ ಆ ರೀತಿಯ ವಿಚಾರಗಳು ಹುಟ್ಟಲಿಲ್ಲ.

    ಉತ್ತರ

Leave a reply to Kumar ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments