ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 21, 2012

3

ಬರಹಗಾರನ ಭಾಷೆ ಮತ್ತು ಸ್ಮಾರಕ

‍Dr Ashok K R ಮೂಲಕ

ಡಾ ಅಶೋಕ್. ಕೆ. ಆರ್.

ಆರ್. ಕೆ. ನಾರಾಯಣ್ ಯಾರಿಗೆ ಸೇರಿದವರು? ಅವರು ಮೂಲತಃ ತಮಿಳಿಗ, ಕರ್ನಾಟಕದ ಮೈಸೂರಿನಲ್ಲೂ ವಾಸಿಸಿದ್ದರು. ಬರೆದಿದ್ದು ತಮಿಳಿನಲ್ಲೂ ಅಲ್ಲ, ಕನ್ನಡದಲ್ಲೂ ಅಲ್ಲ; ನಮ್ಮ ದೇಶದ್ದೇ ಅಲ್ಲದ ಆಂಗ್ಲ ಭಾಷೆಯಲ್ಲಿ. ಇದೊಂದೇ ಕಾರಣಕ್ಕೆ ಅವರನ್ನು ಕನ್ನಡಿಗರೂ ಅಲ್ಲ, ತಮಿಳರೂ ಅಲ್ಲ ಕೊನೆಗೆ ಭಾರತದವರೇ ಅಲ್ಲ ಎನ್ನಲಾದೀತೆ? ಬರಹಗಳು ಒಂದು ಭಾಷೆ, ರಾಜ್ಯ, ರಾಷ್ಟ್ರಕ್ಕಷ್ಟೇ ಸೀಮಿತವಾದ ಸಂಗತಿಯೇ? ಮನದ ಭಾವನೆ ತುಮುಲಗಳನ್ನು, ಸಮಾಜದ ಜೀವನ ವಿಧಾನವನ್ನು ಬರಹರೂಪದಲ್ಲಿ ಕಟ್ಟಬಯಸುವ ಲೇಖಕನಿಗೆ ತನಗೆ ಹಿಡಿತವಿರುವ ಭಾಷೆಯಲ್ಲಿ ಬರೆಯುವ ಸ್ವಾತಂತ್ರ್ಯವಿದ್ದೇ ಇದೆ. ಪ್ರಾದೇಶಿಕ ಭಾಷೆಗಳ ಪುಸ್ತಕಗಳು ಮೇಲ್ನೋಟಕ್ಕೆ ಆ ಭಾಷಿಗರಿಗಷ್ಟೇ ಸೀಮಿತವೆಂಬಂತೆ ತೋರಿದರೂ ಅನುವಾದಗಳ ಮುಖಾಂತರ ಅನ್ಯಭಾಷಿಗರನ್ನೂ ತಲುಪುತ್ತದೆ. ರಷಿಯನ್ ಭಾಷೆಯಲ್ಲಿ ಬರೆದ ಲಿಯೋ ಟಾಲ್ ಸ್ಟಾಯ್, ದಸ್ತೋವಸ್ಕಿ ಪ್ರಪಂಚವನ್ನೆಲ್ಲ ತಲುಪಲು ಸಾಧ್ಯಾವಾಗಿದ್ದು ಅನುವಾದದಿಂದ. ತೆಲುಗಿನ ಯಂಡಮೂರಿ ವಿರೇಂದ್ರನಾಥ್ ನಮ್ಮವನೆನಿಸಿದ್ದು ಅನುವಾದದಿಂದ. ಭಾಷೆಗಿಂತ ಬರಹಗಳಲ್ಲಿನ ಮಾನವೀಯತೆ, ಸಾರ್ವತ್ರಿಕತೆಯಷ್ಟೇ ಕೊನೆಗೆ ಮುಖ್ಯವಾಗುಳಿಯುವುದು. ಆರ್. ಕೆ. ನಾರಾಯಣ್ ರ ಬಹುತೇಕ ಕೃತಿಗಳು ಕನ್ನಡಕ್ಕೆ ಅನುವಾದಗೊಂಡು ಕನ್ನಡಿಗರನ್ನೂ ತಲುಪಿದೆ. ಓದಲು ಬಾರದವರಿಗೆ, ಓದಲು ಇಚ್ಛಿಸದವರಿಗೆ ಶಂಕರ್ ನಾಗ್ ರ ಸಮರ್ಥ ನಿರ್ದೇಶನದಲ್ಲಿ ಮೂಡಿಬಂದ ಮಾಲ್ಗುಡಿ ಡೇಸ್ ಧಾರಾವಾಹಿಯ ಮುಖಾಂತರ ಹಿಂದಿ ಅರ್ಥೈಸಿಕೊಳ್ಳುವ ಜನರಿಗೂ ತಲುಪಿದೆ. ಎಲ್ಲರ ಮನಸ್ಸು ತಟ್ಟುವ ನಮ್ಮದೇ ಜೀವನದ ತುಣುಕುಗಳಂತೆ ಕಾಣುವ ನಾರಾಯಣ್ ರ ಕಥೆಗಳು ಭಾಷೆಯನ್ನು ಮೀರಿ ನಮ್ಮನ್ನು ತಲುಪುತ್ತದೆ.

kuvempu's house

 ಕುವೆಂಪು ವಾಸಿಸಿದ್ದ ಮನೆ

ಮೈಸೂರಿನಲ್ಲಿ ಆರ್. ಕೆ. ನಾರಾಯಣ್ ವಾಸವಿದ್ದ ಮನೆಯನ್ನು ಸ್ಮಾರಕವಾಗಿಸಬೇಕೆಂಬ ಸರಕಾರದ ಉದ್ದೇಶವನ್ನು ಕನ್ನಡದ ಕೆಲವು ಲೇಖಕರು ವಿರೋಧಿಸಿದ್ದಾರೆ. ‘ಕನ್ನಡಕ್ಕೆ ಆರ್. ಕೆ. ನಾರಾಯಣರ ಕೊಡುಗೆ ಏನು?’ ಎಂದು ಪ್ರಶ್ನಿಸಿದ್ದಾರೆ. ಆರ್. ಕೆ. ನಾರಾಯಣ್ ಕನ್ನಡಿಗರೂ ಅಲ್ಲ, ತಮಿಳರೂ ಅಲ್ಲ, ಭಾರತೀಯರೂ ಅಲ್ಲವೆಂಬ ಭಾವನೆ ಅವರ ಬರಹದ ಭಾಷೆಯ ಚೌಕಟ್ಟಿನಿಂದಾಗಿ ಉದ್ಭವವಾಗುವುದಾದರೆ ಆರ್. ಕೆ. ನಾರಾಯಣ್ ಒಬ್ಬ ಶ್ರೇಷ್ಠ ಸಾಹಿತಿ ಎಂಬ ದೃಷ್ಟಿಕೋನವಾದರೂ ಇರಬೇಕಲ್ಲವೇ? ಇಂಥ ಒಬ್ಬ ಸಾಹಿತಿ ವಾಸವಿದ್ದ, ಬರವಣಿಗೆ ನಡೆಸಿದ ಮನೆಯನ್ನು ಸ್ಮಾರಕ ಮಾಡುವುದನ್ನು ವಿರೋಧಿಸುವುದಕ್ಕೆ ಭಾಷೆಯೊಂದೇ ಕಾರಣವಾಗುವುದು ಸರಿಯಲ್ಲ. ಆರ್. ಕೆ. ನಾರಾಯಣ್ ರ ಸಾಹಿತ್ಯಿಕ ಕೊಡುಗೆಯನ್ನು ಗಮನಿಸುವಾಗ ಭಾಷೆ ಗೌಣವಾಗಬೇಕು. ನಾರಾಯಣ್ ರ ಮನೆಯವರು ಅವರು ವಾಸವಿದ್ದ ಮನೆಯನ್ನು ಸರಕಾರಕ್ಕೆ ‘ಮಾರಿದ್ದಾರೆ’ ಎಂಬ ಆರೋಪವೂ ಇದೆ. ಅದು ಅವರ ಮನೆಯವರ ಅನಿವಾರ್ಯತೆಯೇನೋ? ಖಾಸಗಿ ವ್ಯಕ್ತಿ ಖರೀದಿಸಿ ವಾಸ್ತುವಿನ ಹೆಸರಲ್ಲೋ, ನವೀಕರಣದ ಹೆಸರಲ್ಲೋ ಮನೆಯನ್ನು ಕೆಡವಿ ಕೆಡಿಸುವುದಕ್ಕಿಂತ ಸರಕಾರ ಖರೀದಿಸುವುದೇ ಸೂಕ್ತವಲ್ಲವೇ?

shivaram karant's house in puttur

ಪುತ್ತೂರಿನ ಬಾಲವನ

ಇನ್ನು ಲೇಖಕರ ಮನೆಯನ್ನು ಸ್ಮಾರಕವನ್ನಾಗಿಸಿ ಪ್ರವಾಸಿ ತಾಣದಂತೆ ಮಾರ್ಪಡಿಸುವುದು ಎಷ್ಟರಮಟ್ಟಿಗೆ ಸಾಹಿತ್ಯಕ್ಕೆ ಉಪಯೋಗಕಾರಿ? ಸ್ಮಾರಕಗಳಿಗೆ ವೆಚ್ಚ ಮಾಡುವ ಹಣವನ್ನು ಸಾಹಿತಿಯ ಪುಸ್ತಕಗಳನ್ನು ಮುದ್ರಿಸಿ ಜನರಿಗೆ ತಲುಪಿಸುವುದು ಹೆಚ್ಚು ಸೂಕ್ತವೆಂಬ ವಾದವೂ ಇದೆ. ಪ್ರತಿಮೆಗಳಿಗೆ ವೆಚ್ಚ ಮಾಡುವುದನ್ನು ವಿರೋಧಿಸುವುದು ಅರ್ಥಪೂರ್ಣ. ಆದರೆ ಸ್ಮಾರಕಗಳಿಂದ ಸಾಹಿತ್ಯಿಕ ಉಪಯೋಗವಿಲ್ಲ ಎಂಬುದನ್ನು ಸಂಪೂರ್ಣವಾಗಿ ಒಪ್ಪುವುದು ಕಷ್ಟ. ಮೋಜಿಗಾಗಿ, ಪ್ರವಾಸಕ್ಕಾಗಿ ಇಂಥ ಸ್ಮಾರಕಗಳಿಗೆ ಭೇಟಿ ನೀಡುವವರು ಇದ್ದಾರಾದರೂ ಸಾಹಿತಿಯ ಬರಹಗಳನ್ನು ಓದಿದ ಓದುಗನಿಗೆ ಆ ಸಾಹಿತಿ ಓಡಾಡಿದ, ಆ ಸಾಹಿತ್ಯ ಪಡಿಮೂಡಿದ ಜಾಗವನ್ನು ನೋಡುವ ಕುತೂಹಲವೂ ಇರುತ್ತದೆ. ಪುತ್ತೂರಿನ ಶಿವರಾಮ ಕಾರಂತ ಬಾಲವನ, ಕುವೆಂಪುರವರ ಕುಪ್ಪಳ್ಳಿಗೆ ಭೇಟಿ ನೀಡಿದಾಗ ಓದುಗರಿಗೆ ಸಿಗುವ ಉಲ್ಲಾಸ, ‘ನಾನೂ ಬರೆಯಬೇಕೆಂದು’ ಕೊಂಡವರಿಗೆ ಸಿಗುವ ಉತ್ಸಾಹ – ಪ್ರೇರಣೆಯನ್ನು ಕಡೆಗಣಿಸಲಾದೀತೆ? ಪುಸ್ತಕಗಳನ್ನು ಜನರಿಗೆ ತಲುಪಿಸುವುದು ಸಾಹಿತಿಗೆ ತೋರುವ ಶ್ರೇಷ್ಠ ಗೌರವವೆಂಬುದು ಸತ್ಯ, ಇದರೊಟ್ಟಿಗೆ ಸಾಹಿತಿಗಳ ಮನೆಯನ್ನು ಸ್ಮಾರಕವಾಗಿಸುವುದು ಕೂಡ ಅವರನ್ನು ಮತ್ತಷ್ಟು ಅರಿಯಲು, ಮಗದಷ್ಟು ಓದಲು ಸಹಾಯಕ.

 

ಚಿತ್ರಗಳು – ಡಾ ಅಶೋಕ್ ಕೆ ಆರ್, churumuri

 

3 ಟಿಪ್ಪಣಿಗಳು Post a comment
  1. Bindu's avatar
    ಸೆಪ್ಟೆಂ 21 2012

    ಹೌದು. ಕುಪ್ಪಳ್ಳಿಯಲ್ಲಿ ಕುವೆಂಪು ಮನೆಯಲ್ಲಿ ಓಡಾಡಿದಾಗ ಆಗುವ ಅನುಭವ ನಿಜಕ್ಕೂ ಅನುಪಮ. ಅಂತಹ ಅನೇಕ ಸ್ಮಾರಕಗಳು ನಮಗೆ ಬೇಕು. R k ನಾರಾಯಣ್ ಭಾರತೀಯರು, ಅವರು ಬರೆದ ಕಥೆಗಳಲ್ಲಿ ನಮ್ಮ ಮೈಸೂರಿನ, ದಕ್ಶಿಣ ಭಾರತದ ಮಣ್ನಿನ ಪರಿಮಳ ಘಮ್ ಎನ್ನುತ್ತದೆ, ಹಾಗಿರುವಾಗ ಅವರು ಕನ್ನಡಕ್ಕೆ ಏನೂ ಕೊಡುಗೆ ಕೊಟ್ಟಿಲ್ಲ ಅನ್ನುವುದು ಯಾವ ನ್ಯಾಯ?

    ಈಗ ಪ್ರಕಾಶ್ ರೈ ನಮ್ಮವರಲ್ಲವೇ? ರಜನೀಕಾಂತ್ ನಮ್ಮವರಲ್ಲವೇ? ಎಲ್ಲಾ ರಾಜ್ಯದ sports people, actors ಗಳಿಗೆ ಬೆಂಗಳೂರಿನಲ್ಲಿ ಸೈಟ್ ಕೊಡುವ ನಾವು, R K Narayan ರ ಸ್ಮಾರಕಕ್ಕೆ ವಿರೋಧಿಸುವುದು ಯಾವ ನ್ಯಾಯ?

    ನಾನಂತೂ ಅವರ ಕಥೆ ಕಾದಂಬರಿಗಳನ್ನು ಓದಿಯೋ english novels ಓದಲು ಕಲಿತದ್ದು.

    ಇದನ್ನು ವಿರೋಧಿಸುವವರು ಕನ್ನಡದ ಎಷ್ಟು ಕಾವ್ಯಗಳನ್ನು ಓದಿದ್ದಾರೋ? ಖಂಡಿತ ಇರಲಿಕ್ಕಿಲ್ಲ.

    ಉತ್ತರ
  2. Nanjunda Raju's avatar
    Nanjunda Raju
    ಸೆಪ್ಟೆಂ 21 2012

    ಡಾ ಅಶೋಕ್. ಕೆ. ಆರ್.ರವರೇ ಸಾಮಾನ್ಯವಾಗಿ ನಮ್ಮ ಕನ್ನಡ ನಾಡು ನುಡಿಗೆ ನಮ್ಮ ಕನ್ನಡಿಗರಷ್ಟೇ ಅಲ್ಲ. ಅನ್ಯ ಭಾಷಿಕರೂ ನಮ್ಮ ಕನ್ನಡ ಬೆಳೆಸಿದ್ದಾರೆ, ಉಳಿಸಿದ್ದಾರೆ. ಮಾಲ್ಗುಡಿ ಡೇಸ್ ಎಂಬ ದಾರಾವಾಹಿ ರಾಷ್ಟ್ರೀಯ ಚಾನಲ್ ನಲ್ಲಿ ಪ್ರಸಾರವಾಗಿ ಜನಪ್ರೀಯವಾದ ಕಾರಣ, (ರಾಜ್ಯದಲ್ಲಿ ಡಬ್ ವಿವಾದವಿರುವುದರಿಂದ, ಅದೇ ದಾರಾವಾಹಿಯನ್ನು ಕನ್ನಡಿಗರಾದ ನಾವು ಕನ್ನಡದಲ್ಲಿ ನೋಡುವ ಭಾಗ್ಯ ಕಳೆದುಕೊಂಡಿದ್ದೇವೆ.ಸಂಭಾಷಣೆಗಳು ಅರ್ಥವಾಗದಿದ್ದರೂ ಕಣ್ಣು ಬಾಯಿ ಬಿಟ್ಟುಕೊಂಡು ನೋಡಬೇಕು) ಶ್ರೀ ಅರ್.ಕೆ. ನಾರಾಯಣ್ ಬೆಳಕಿಗೆ ಬಂದರು.ಮೈಸೂರಿನಲ್ಲಿ ಮನೆ ಕೊಡಲಿ ಸಂತೋಷ. ಆದರೆ, ಅದೇ ಕರ್ನಾಟಕದಲ್ಲಿ ಹುಟ್ಟಿ, ಕರ್ನಾಟಕದಲ್ಲಿ ಬೆಳೆದು ಅಪ್ಪಟ ಕನ್ನಡಿಗರಾಗಿ, ಜನಮನದಲ್ಲಿ ಮೆರೆದಾಡಿದ,ಅನೇಕ ಕವಿಗಳು ಎಲೆಮರೆಯ ಕಾಯಿಗಳಂತೆ ಬದುಕಿ ಅಂತಿಮ ದಿನಗಳಲ್ಲಿ ತುತ್ತು ಅನ್ನಕ್ಕಾಗಿ ಕೈಚಾಚುವ ಹೀನ ಸ್ತಿತಿಯಲ್ಲಿರುತ್ತಾರೆ ಇಂತಹವರನ್ನು ಗುರುತಿಸಿ, ಸೂಕ್ತ ಸಹಾಯ, ನೀಡಿ, ಅವರು ಹುಟ್ಟಿ ಬಾಳಿ ಬದುಕಿದ ಮನೆಯನ್ನು ಸ್ಮಾರಕವನ್ನಾಗಿ ಮಾಡುವುದೋ, ಅಥವಾ ಸಾರ್ವಜನಿಕ ಉಪಯೋಗಕ್ಕೆ ಬಳಸಿಕೊಲ್ಲುವುದೋ ಮಾಡಿದರೆ ಉತ್ತಮ.

    ಉತ್ತರ
  3. makara's avatar
    makara
    ಸೆಪ್ಟೆಂ 22 2012

    ಸ್ಮಾರಕದ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲಿ, ಇದರ ಪ್ರಸ್ತಾವನೆಯನ್ನು ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಕಳುಹಿಸಿಕೊಡಲಿ. ಆಗ ಇದು ಕನ್ನಡಿಗರಿಗೂ ಹೊರೆಯಾಗದು ಮತ್ತು ಅವರು ದೇಶದ ಹೆಮ್ಮೆಯ ಲೇಖಕರೂ ಎನ್ನುವುದು ಚಿರಸ್ಥಾಯಿಯಾಗುತ್ತದೆ.

    ಉತ್ತರ

Leave a reply to Bindu ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments