ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 24, 2012

11

ಕನ್ನಡದಲ್ಲಿ ಉನ್ನತ ವ್ಯಾಸಾಂಗ

‍ನಿಲುಮೆ ಮೂಲಕ

– ಬಿಂದುಮಾಧವಿ ಪಿ,ಹೈದರಾಬಾದ್

ನಮ್ಮ ದೇಶವು ವಿದ್ಯೆಯಲ್ಲಿ ಯಾವ ದೇಶಕ್ಕೂ ಕಡಿಮೆಯಿಲ್ಲ. ವಿದ್ಯಾವಂತರಿಗೆ ಬರವಿಲ್ಲ. ಹಾಗಿದ್ದರೂ ನಮ್ಮ ದೇಶದಿಂದ ಹೊಸ ಹೊಸ ಸಂಶೋಧನೆಗಳು ವಿರಳವಾಗಿವೆ. ಸಿ.ವಿ ರಾಮನ್, ಹರಗೋವಿಂದ ಖೊರಾನ ಇವರುಗಳ ಹೆಸರನ್ನೇ ಅನೇಕ ದಶಕಗಳಿಂದ ಹೇಳುತ್ತಿದ್ದೇವೆ. ಇದೇಕೆ ಹೀಗೆ?

ಗಣಿತದಲ್ಲಿ ಭಾರತೀಯರು ಎಂದೂ ಮುಂದು.ಅಮೇರಿಕದಲ್ಲಿ ಅನೇಕ ಸ್ಪರ್ಧೆಗಳಲ್ಲಿ ಭಾರತೀಯ ಮೂಲದ ಬಾಲಕರೇ ಮೊದಲ ಸ್ಥಾನ ಗಳಿಸುತ್ತಾರೆ. ಹಾಗಿರುವಾಗ Inventions and Discoveries ಪಟ್ಟಿಯಲ್ಲಿ ನಮ್ಮ ದೇಶದ ಹೆಸರು ಏಕೆ ಕಾಣುವುದಿಲ್ಲ?

ಇದಕ್ಕೆ ಉತ್ತರ ನಮ್ಮ ಮಾಧ್ಯಮ. ಒಂದರಿಂದ ಏಳನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ನಾನು, ಅಲ್ಲಿಯವರೆಗೆ ಯಾವತ್ತೂ ತರಗತಿಯಲ್ಲಿ ಮೊದಲಿಗಳಾಗಿರುತ್ತಿದ್ದೆ. ನಂತರ ಪ್ರೌಢಶಾಲೆಯಲ್ಲಿ ಆಂಗ್ಲ ಮಾಧ್ಯಮ ಅದೂ ಮರಿಮಲ್ಲಪ್ಪ ಶಾಲೆಯಲ್ಲಿ. ಅಲ್ಲಿ ಅಪರೂಪಕ್ಕೆ ಮೂರನೇ ಅಥವಾ ನಾಲ್ಕನೆಯ ಸ್ಥಾನ ಬಂದರೆ ಅದೇ ಹೆಚ್ಚು. ಪದವಿ ಪೂರ್ವ ಕಾಲೇಜಿನಲ್ಲಿ, ನಂತರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಾಗೂ ಹೀಗೂ ಮೊದಲ ದರ್ಜೆಯಲ್ಲಿ ಉತ್ತೀರ್ಣಳಾಗುವುದೇ ಹೆಚ್ಚಾಯಿತು. ಏಕೆ ಹೀಗೆ? ಬಹುಶ: ನಾನು ಕನ್ನಡ ಮಾಧ್ಯಮದಲ್ಲೇ ಮುಂದುವರೆದಿದ್ದರೆ ಎಂದಿಗೂ ಮೊದಲ ಸ್ಥಾನದಲ್ಲಿ ಇರುತ್ತಿದ್ದೆನೇನೊ?
ನಾವು ಅಂದುಕೊಳ್ಳಬಹುದು, ಅಲ್ಲಿ ಕೂಡ ನನಗಿಂತ ಬುದ್ಧಿವಂತರು ಇದ್ದರಲ್ಲ, ಅವರೆಲ್ಲಾ ಮೊದಲ rank ಪಡೆಯುತ್ತಿದ್ದರಲ್ಲ, ಅವರು ಏಕೆ ಯಾವುದೇ ಪ್ರಖ್ಯಾತ ವಿಜ್ಞಾನಿ ಯಾಗಲಿಲ್ಲ ಎಂದು. ಮಾತೃಭಾಷೆಯಲ್ಲಿ ಸಿಗುವ ಜ್ಞಾನ ಬೇರೆ ಭಾಷೆಯಲ್ಲಿ ಸಿಗುವುದಿಲ್ಲ. ಅಲ್ಲಿ ಏನಿದ್ದರೂ ನಾವು ಓದಿದ್ದನ್ನು ಮನನ ಮಾಡಿಕೊಂಡು ಪ್ರಶ್ನೆಪತ್ರಿಕೆಯನ್ನು ಉತ್ತರಿಸುತ್ತೇವೆಯೇ ಹೊರತು, ಹೊಸ ಹೊಸ ಸಂಶೋಧನೆಗಳು ಹುಟ್ಟಿ ಬರುವುದಿಲ್ಲ. ನಮ್ಮ ಸೃಜನಾತ್ಮಕ ವಿಚಾರಗಳು ಮಾತೃಭಾಷೆಯಲ್ಲಿ ಬರುತ್ತಿರುತ್ತವೆ, ಅದನ್ನು ಆಂಗ್ಲಭಾಷೆಗೆ ಅನುವಾದಿಸಿ, ಹೊಸತನ್ನು ಸಂಶೋಧಿಸುವುದು ಕಷ್ಟವಾಗುತ್ತದೆ. ಈಗ ಹೆಚ್ಚಿನ ಓದನ್ನು ಆಂಗ್ಲ ಮಾಧ್ಯಮದಲ್ಲಿ ಮಾಡಿದ ನಮಗೆ, ಆಂಗ್ಲ ಭಾಷೆಯೆ ಸುಲಭ ಎನ್ನಿಸುವುದು. ಈ ಕನ್ನಡದಲ್ಲಿ type ಮಾಡುವುದಂತೂ ಇನ್ನೂ ಕಷ್ಟ! ಎಷ್ಟೋ ಪದಗಳಿಗೆ ಕನ್ನಡ ಪದವನ್ನು ನಿಘಂಟಿನಲ್ಲಿ ಹುಡುಕಬೇಕಾದ ಪರಿಸ್ಥಿತಿ, ಆದರೆ ಯಾವುದೇ ಒಂದು ವಿಷಯದ ಬಗ್ಗೆ ಕನ್ನಡ ಭಾಷೆ ಹಾಗೂ ಆಂಗ್ಲ ಭಾಷೆ ಎರಡರಲ್ಲೂ ಉಪನ್ಯಾಸವನ್ನು ಕೇಳಿದರೆ, ಕನ್ನಡದಲ್ಲಿ ಕೇಳಿದ ವಿಷಯ ತಕ್ಷಣ ಮನಸ್ಸಿನ ಆಳಕ್ಕೆ ಹೋಗುವುದು.

ನಾನು youtube ನಲ್ಲಿ ಕೆಲವು ಪಾಠಗಳನ್ನು ಕೇಳುತಿರುತ್ತೇನೆ, ನಮ್ಮ IIT, IISc ಪ್ರಾಧ್ಯಾಪಕರು ಅಚ್ಚ ಆಂಗ್ಲಭಾಷೆಯಲ್ಲೇ ಪಾಠ ಮಾಡುತ್ತಾರೆ, ಅದೇ ಕೆಲವು ಪಾಕಿಸ್ತಾನಿ ವಿಶ್ವ ವಿದ್ಯಾಲಯದ ಪಾಠಗಳನ್ನೂ ಕೇಳಿದ್ದೇನೆ, ಅವರು English, ಹಿಂದಿ ಅಥವಾ ಉರ್ದುವನ್ನು ಯಥೇಚ್ಚವಾಗಿ ಬಳಸುತ್ತಾರೆ, ನನಗೆ ಅದು ಅತ್ಯಂತ ಸರಳ ಎಂದು ಎನಿಸುತ್ತದೆ. ಏಕೆಂದರೆ ಹಿಂದಿಯಲ್ಲಿರುವ ಅನೇಕ ಪದಗಳು ಸಂಸ್ಕೃತದ್ದು, ಎಷ್ಟೇ ಆದರೂ ಹಿಂದಿ ಹಾಗೂ ಉರ್ದು ನಮಗೆ ಆಂಗ್ಲ ಭಾಷೆಯಷ್ಟು ಪರದೇಶಿಯಲ್ಲ.

ಮತ್ತೊಂದು ವಿಷಯ ನೀವು ಯಾವುದೇ ಪುಸ್ತಕದ ಲೇಖಕರ ಹೆಸರನ್ನು ನೋಡಿ, ಅದು ವಾಣಿಜ್ಯ ವಿರಬಹುದು, ಅಥವಾ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇರಬಹುದು ಅದರಲ್ಲಿ ಉತ್ತರ ಭಾರತ ದವರದ್ದೇ ಮೇಲುಗೈ. ಅನೇಕ ಉನ್ನತ ಹುದ್ದೆಗಳಲ್ಲಿ ಅವರಿರುತ್ತಾರೆ. ಏಕೆ? ಏಕೆಂದರೆ ನಮ್ಮ ಕನ್ನಡ ಮಾಧ್ಯಮ ನಮಗೆ ಹೆಚ್ಚು ಕಡಿಮೆ ಹತ್ತನೇ ತರಗತಿಗೇ ಮುಗಿದು ಹೋಗುತ್ತದೆ. ಕೆಲವರು ಪದವಿ ಪೂರ್ವ ತರಗತಿಯನ್ನೂ ಕನ್ನಡ ಮಾಧ್ಯಮದಲ್ಲಿ ಮಾಡುತ್ತಾರೆ. ವಿಜ್ಞಾನದ ಪದವಿಗಳು ಕರ್ಣಾಟಕದಲ್ಲಿ ಕನ್ನದ ಮಾಧ್ಯಮದಲ್ಲಿ ಇದೆಯೋ  ಇಲ್ಲವೋ ನಾ ಬೇರೆ ಕಾಣೆ. ಆದರೆ ಹಿಂದಿ ಮಾಧ್ಯಮದಲ್ಲಿ ವಿಜ್ಞಾನದ ಪದವಿಗಳು ಹೇರಳವಾಗಿವೆ. ಅಷ್ಟೇ ಅಲ್ಲ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದು ಬದಿಯಲ್ಲಿ ಆಂಗ್ಲ ಭಾಷೆಯಲ್ಲಿ ಮತ್ತೊಂದು ಬದಿಯಲ್ಲಿ ಹಿಂದಿ ಭಾಷೆಯಲ್ಲಿ ಪ್ರಶ್ನೆಗಳಿರುತ್ತವೆ. ಅಲ್ಲಿ ಕನ್ನಡದಲ್ಲೂ ಪ್ರಶ್ನೆಗಳು ಬಂದಾಗ, ಕನ್ನಡಿಗರು ಹೆಚ್ಚು ಮುಂದುವರೆಯಲು ಸಾಧ್ಯ.

ಇದಕ್ಕಿರುವುದು ಒಂದೇ ಉಪಾಯ. ಜನಸಾಮಾನ್ಯರಾದ ನಾವು ಆದಷ್ಟು ವಿಜ್ಞಾನ, ವಾಣಿಜ್ಯ, ಹಾಗೂ ಎಲ್ಲಾ ವಿಷಯಗಳಿಗೆ ಸಂಭಧಿಸಿದ ವಿಷಯಗಳನ್ನು ಆದಷ್ಟು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುತ್ತಿರಬೇಕು. ಎಲ್ಲಾ ವಿಷಯಗಳನ್ನೂ ಕನ್ನಡದಲ್ಲಿ ವಿವರಿಸಲು ಸಾಧ್ಯ ಎಂಬ ಮನಗಟ್ಟು ಸರ್ಕಾರಕ್ಕೆ ಬಂದರೆ ಅದೂ ಹೆಚ್ಚು ಹೆಚ್ಚು ಉನ್ನತ ವ್ಯಾಸಾಂಗಗಳನ್ನು ಕನ್ನಡ ಮಾಧ್ಯಮದಲ್ಲಿ ನೀಡುವ ಸಂಕಲ್ಪ ಮಾಡಬಹುದು. ಹೀಗೆ ಉನ್ನತ ವ್ಯಾಸಾಂಗಗಳು ಕನ್ನಡ ಮಾಧ್ಯಮದಲ್ಲಿ ದೊರಕುವುದೇ ಆದರೆ ನಾವು ನಮ್ಮ ಮಕ್ಕಳನ್ನು ಆಂಗ್ಲಮಾಧ್ಯಮಕ್ಕೆ ತಳ್ಳುವ ಅಸಹಾಯಕತೆಯೂ ಇರುವುದಿಲ್ಲ.

ಇದೆಲ್ಲಕ್ಕಿಂತ ನಮ್ಮ ಭಾಷೆಯಲ್ಲಿ ಉನ್ನತ ವ್ಯಾಸಾಂಗವನ್ನು ಮಾಡಿದರೆ, translation ಸಮಯ ಕಡಿಮೆಯಾಗಿ ವಿದ್ಯಾರ್ಥಿಗಳು ಹೊಸ ಹೊಸ ವಿಚಾರಗಳನ್ನು ಮಂಡಿಸುವಲ್ಲಿ ಹೆಚ್ಚು ಹೆಚ್ಚು ಸಮಯ ವಿನಿಯೋಗಿಸುವರು. ಹೊಸ ಆವಿಶ್ಕಾರಗಳ ಪಟ್ಟಿಯಲ್ಲಿ ನಮ್ಮ ದೇಶದ ಹೆಸರಷ್ಟೇ ಏಕೆ, ನಮ್ಮ ರಾಜ್ಯದ ಹೆಸರೂ ಕಾಣಸಿಗುವುದು

11 ಟಿಪ್ಪಣಿಗಳು Post a comment
  1. Kumar's avatar
    Kumar
    ಸೆಪ್ಟೆಂ 24 2012

    > ಕೆಲವು ಪಾಕಿಸ್ತಾನಿ ವಿಶ್ವ ವಿದ್ಯಾಲಯದ ಪಾಠಗಳನ್ನೂ ಕೇಳಿದ್ದೇನೆ, ಅವರು English, ಹಿಂದಿ ಅಥವಾ ಉರ್ದುವನ್ನು ಯಥೇಚ್ಚವಾಗಿ ಬಳಸುತ್ತಾರೆ,
    > ಹಿಂದಿ ಮಾಧ್ಯಮದಲ್ಲಿ ವಿಜ್ಞಾನದ ಪದವಿಗಳು ಹೇರಳವಾಗಿವೆ. ಅಷ್ಟೇ ಅಲ್ಲ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ
    > ಒಂದು ಬದಿಯಲ್ಲಿ ಆಂಗ್ಲ ಭಾಷೆಯಲ್ಲಿ ಮತ್ತೊಂದು ಬದಿಯಲ್ಲಿ ಹಿಂದಿ ಭಾಷೆಯಲ್ಲಿ ಪ್ರಶ್ನೆಗಳಿರುತ್ತವೆ.
    ಹಾಗಿದ್ದರೆ Inventions and Discoveries ಪಟ್ಟಿಯಲ್ಲಿ ಇವರ ಹೆಸರು ಹೆಚ್ಚಿರಬೇಕಲ್ಲವೆ?
    ಪಾಕಿಸ್ತಾನೀಯರು ಮಾಡಿರುವ Inventions and Discoveries ನನಗಾವುದೂ ತಿಳಿದಿಲ್ಲ!

    ಉತ್ತರ
    • Bindu's avatar
      ಸೆಪ್ಟೆಂ 24 2012

      ಹೌದು ಕುಮಾರ್ ಅವರೆ ಪಾಕಿಸ್ತಾನಿಯರು ಇನ್ನೂ ಮಾಡಿಲ್ಲ, ಆದರೆ ಅವರು ವಿಷಯಗಳು ನಮ್ಮ ವಿದ್ಯಾರ್ಥಿಗಳಿಗೆ ಅರ್ಥವಾಗುವುದು ಬಹು ಮುಖ್ಯ ಎಂಬುದನ್ನು ಮನಗಂಡಿದ್ದಾರೆ, ನಾವುಗಳು ಬರೀ ಉರುಹೊಡಿದು Production support, customer support ಇಂಥ ಕೆಲಸಗಳಲ್ಲೇ ಸಂತ್ರುಪ್ತಿಯಿಂದ ಇದ್ದರೆ, ಮುಂದಿನ ವರ್ಷಗಳಲ್ಲಿ ಪಾಕಿಸ್ತಾನದವರ ಹೆಸರೂ ಸಂಶೋಧನಾ ಪಟ್ಟಿಯಲ್ಲಿ ಬರಬಹುದು.
      ನಮ್ಮ ದೇಶದಲ್ಲಿ ಇರುವಂಥಹ ಮೇಧಾವಿಗಳು ಅವರ ದೇಶದಲ್ಲಿದ್ದು ಅವರು ಉರ್ದುವಿನಲ್ಲಿ ಅವರಿಗೆ ಪಾಠ ಮಾಡಿದ್ದೇ ಆದರೆ ನಮಗಿಂತ ಅವರು ಬುದ್ದಿವಂತರಾಗುವುದರಲ್ಲಿ ಸಂಶಯವಿಲ್ಲ.
      ಚೀನಾ, ಜಪಾನ್, ಜರ್ಮನಿ ದೇಶಗಳಲ್ಲಿ ಯಾವ ಭಾಷೆಯಲ್ಲಿ ಪಾಠ ಮಾಡುತ್ತಾರೆ? ಅವರು ಸೃಜನಾತ್ಮಕತೆಯಲ್ಲಿ ನಮಗಿಂತ ಮುಂದಿದ್ದಾರೋ ಹಿಂದಿದ್ದಾರೋ?

      ಉತ್ತರ
  2. Bindu's avatar
    ಸೆಪ್ಟೆಂ 24 2012

    ಹೌದು ಕುಮಾರ್ ಅವರೆ ಪಾಕಿಸ್ತಾನಿಯರು ಇನ್ನೂ ಮಾಡಿಲ್ಲ, ಆದರೆ ಅವರು ವಿಷಯಗಳು ನಮ್ಮ ವಿದ್ಯಾರ್ಥಿಗಳಿಗೆ ಅರ್ಥವಾಗುವುದು ಬಹು ಮುಖ್ಯ ಎಂಬುದನ್ನು ಮನಗಂಡಿದ್ದಾರೆ, ನಾವುಗಳು ಬರೀ ಉರುಹೊಡಿದು Production support, customer support ಇಂಥ ಕೆಲಸಗಳಲ್ಲೇ ಸಂತ್ರುಪ್ತಿಯಿಂದ ಇದ್ದರೆ, ಮುಂದಿನ ವರ್ಷಗಳಲ್ಲಿ ಪಾಕಿಸ್ತಾನದವರ ಹೆಸರೂ ಸಂಶೋಧನಾ ಪಟ್ಟಿಯಲ್ಲಿ ಬರಬಹುದು.

    ನಮ್ಮ ದೇಶದಲ್ಲಿ ಇರುವಂಥಹ ಮೇಧಾವಿಗಳು ಅವರ ದೇಶದಲ್ಲಿದ್ದು ಅವರು ಉರ್ದುವಿನಲ್ಲಿ ಅವರಿಗೆ ಪಾಠ ಮಾಡಿದ್ದೇ ಆದರೆ ನಮಗಿಂತ ಅವರು ಬುದ್ದಿವಂತರಾಗುವುದರಲ್ಲಿ ಸಂಶಯವಿಲ್ಲ.

    ಚೀನಾ, ಜಪಾನ್, ಜರ್ಮನಿ ದೇಶಗಳಲ್ಲಿ ಯಾವ ಭಾಷೆಯಲ್ಲಿ ಪಾಠ ಮಾಡುತ್ತಾರೆ? ಅವರು ಸೃಜನಾತ್ಮಕತೆಯಲ್ಲಿ ನಮಗಿಂತ ಮುಂದಿದ್ದಾರೋ ಹಿಂದಿದ್ದಾರೋ?

    ಉತ್ತರ
    • SSNK's avatar
      ಸೆಪ್ಟೆಂ 24 2012

      ನಾನು ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಪಡೆದವನು. ಮತ್ತು “ಮಾತೃಭಾಷೆಯಲ್ಲಿ ಶಿಕ್ಷಣ”ಕ್ಕೆ ನನ್ನ ಶೇಕಡಾ ೧೦೦ರಷ್ಟು ಬೆಂಬಲವಿದೆ.
      ಸರಕಾರ ಇದನ್ನು ಕಡ್ಡಾಯ ಮಾಡಬೇಕು. ಆಗ ಮಾತ್ರ ನಮ್ಮ ಭಾಷೆ ಉಳಿಯಲು ಸಾಧ್ಯ.

      ಆದರೆ, ಮಾತೃಭಾಷೆಯಲ್ಲಿ ಕಲಿತ ಕೂಡಲೇ Inventions and Discoveries ಆಗಿಬಿಡುತ್ತದೆ ಎನ್ನುವುದು ಒಪ್ಪುವ ಮಾತಲ್ಲ.
      ಅದಕ್ಕೆ ಬೇಕಾಗಿರುವುದು ಸತತ ಪರಿಶ್ರಮ, ಆಳದ ಅಧ್ಯಯನ, ಸಾತತ್ಯತೆ ಮತ್ತು ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳಿಂದ ಪ್ರೋತ್ಸಾಹ.
      ಶಾಲಾ ಶಿಕ್ಷಣದ ವಿಷಯವನ್ನು ಬಿಡಿ. ಕ್ರೀಡೆಯನ್ನೇ ತೆಗೆದುಕೊಳ್ಳಿ. ಅಲ್ಲೇನೂ ಕಲಿಕೆಯ ಮಾಧ್ಯಮದ ಸಮಸ್ಯೆ ಇಲ್ಲವಲ್ಲ.
      ಹೀಗಿದ್ದಾಗ್ಯೂ ೧೦೦ ಕೋಟಿ ಜನರಿರುವ ನಮ್ಮ ದೇಶಕ್ಕೆ ಒಲಂಪಿಕ್ಸ್‌ನಂತಹ ಸ್ಪರ್ಧೆಯಲ್ಲಿ ೧೦ ಪದಕಗಳನ್ನು ಗೆಲ್ಲುವುದೂ ಸಾಧ್ಯವಾಗಿಲ್ಲ – ಹೆಸರೇ ಕೇಳಿಲ್ಲದ ದೇಶಗಳು ನಮಗಿಂತ ಮುಂದಿವೆ!
      ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ನಾವು ಹಿಂದೆ ಬಿದ್ದಿದ್ದೇವೆ. ಇದಕ್ಕೆ ಕಾರಣ ಕಲಿಕೆಯ ಮಾಧ್ಯಮವಲ್ಲ. ನಮಗೆ ಕಡಿಮೆ ಪರಿಶ್ರಮದಿಂದ ಹೆಚ್ಚಿನ ಸಂಪಾದನೆ ಬೇಕು.
      ನಮ್ಮಲ್ಲಿ ಕಲಿಯುವುದೇ ನೌಕರಿಗೋಸ್ಕರ – ಉನ್ನತ ವ್ಯಾಸಂಗಕ್ಕೆ ಹೆಚ್ಚಿನ ಉತ್ಸಾಹವಿಲ್ಲ ಮತ್ತು ಪ್ರೋತ್ಸಾಹವೂ ಇಲ್ಲ. ಆದಷ್ಟು ಬೇಗ ಕೆಲಸಕ್ಕೆ ಸೇರಿದರೆ ಸಾಕು ಎನ್ನುವ ಮನೋಭಾವ. ಹೆಚ್ಚಿನ ಸಾಧನೆ ಮಾಡುವ ಗುರಿಯೇ ಇಲ್ಲ – ಕೇವಲ “Careerism” ಕಡೆಗೇ ನಮ್ಮೆಲ್ಲಾ ಗಮನ ಕೇಂದ್ರೀಕೃತ.
      ಮಕ್ಕಳಿಗೆ ಶಾಲೆ, Homework, Tutionಗಳ ಮಧ್ಯೆ ಮನಸ್ಸು ವಿಕಾಸಗೊಳ್ಳಲು ಅವಕಾಶವೆಲ್ಲಿ?

      ಉತ್ತರ
  3. Bindu's avatar
    ಆಕ್ಟೋ 1 2012

    ನನ್ನ ಈ ಲೇಖನ ಸಂಯುಕ್ತ ಕರ್ನಾಟಕ ದಲ್ಲಿ ಪ್ರಕಟವಾಗಿದೆ ಎಂದು ತಿಳಿಯಿತು. ಇದನ್ನು ಪತ್ರಿಕೆಯಲ್ಲಿ ಪ್ರಕಟ ಮಾಡಲು ನಿರ್ಧರಿಸಿದ ವ್ಯಕ್ತಿಗೆ ನನ್ನ ಧನ್ಯವಾದಗಳು. 🙂

    ಉತ್ತರ
  4. Basavaraj's avatar
    Basavaraj
    ಆಕ್ಟೋ 7 2012

    mam nm tarka tumbane cbennagide adre adanna mado manasugalu munde barabeku. evattu vedike mele nintu kannada madyama beku anta neeti helo esto mandi makkalanna kannada shalege serasalla, avar makkalella eng mediumnalle odabeku anno chapala avarige kannada annodu hrudayadinda barabeke horatu bayinda bandre agalla

    ಉತ್ತರ
    • Bindu's avatar
      ಆಕ್ಟೋ 8 2012

      ನೋಡಿ ಬಸವರಾಜ್ ಅವರೆ, ಉನ್ನತ ವ್ಯಾಸಾಂಗ ಆಂಗ್ಲ ಮಾಧ್ಯಮದಲ್ಲಿ ಇರುವವರೆಗೆ ನಾವು ನೀವು ಎಲ್ಲರೂ ನಮ್ಮ ಮಕ್ಕಳನ್ನು english medium ನಲ್ಲಿ ಓದಿಸುವುದು ಅನಿವಾರ್ಯವಾಗುತ್ತದೆ. ನಿಮಗೆ ಒಂದು ಉದಾಹರಣೆಯನ್ನು ಹೇಳುತ್ತೇನೆ,

      ಕೆಲವು ವರ್ಷದ ಹಿಂದೆ ಕನ್ನಡ ಪತ್ರಿಕೆಯಲ್ಲಿ ಒಬ್ಬರು ತಮ್ಮ ಅನುಭವವನ್ನು ಬರೆದಿದ್ದರು, ಅವರು ಓದಿದ್ದು ಕನ್ನಡ ಮಾಧ್ಯಮವಂತೆ, ಹಾಗಾಗಿ ಐಟಿಐ ಸಂದರ್ಶನದಲ್ಲಿ ನಿರ್ಣಾಯಕರು ಪೈತಾಗೊರನ ಪ್ರಮೇಯವನ್ನು ಹೇಳು ಎಂದರಂತೆ. ಇವರು ಅಚ್ಚಕನ್ನಡದಲ್ಲಿ ಪೈತಾಗರನ ಪ್ರಮೇಯವನ್ನು ಸಮರ್ಪಕವಾಗಿ ಹೇಳಿದರಂತೆ, ಆದರೆ judge, English ನಲ್ಲಿ ಹೇಳು ಎಂದರಂತೆ, ಇವರಿಗೆ English ನಲ್ಲಿ ಹೇಳಲು ಬರಲಿಲ್ಲ. ಹಾಗಾಗಿ ಅವರು select ಆಗಲಿಲ್ಲ ವಂತೆ!!

      ಇಂತಹ ಉದಾಹರಣೆಗಳು ಇರುವುದರಿಂದ, ನಮಗೆ ಕನ್ನಡದ ಮೇಲೆ ಎಷ್ಟೇ ಅಭಿಮಾನವಿದ್ದರೂ ಕನ್ನಡ ಮಾಧ್ಯಮಕ್ಕೆ ಮಕ್ಕಳನ್ನು ಕಳುಹಿಸಲು ಹಿಂದು ಮುಂದು ಯೋಚಿಸಬೇಕು.

      ಅದೇ ಉನ್ನತ ವ್ಯಾಸಾಂಗಗಳೆಲ್ಲಾ ಕನ್ನಡ ಮಾಧ್ಯಮದಲ್ಲಿ ಇದ್ದರೆ, ನಾವು ನಿಶ್ಚಿಂತೆಯಿಂದ ಕನ್ನಡ ಮಾಧ್ಯಮದಲ್ಲಿ ಮಕ್ಕಳನ್ನು ಓದಿಸಬಹುದು. ಅಲ್ಲವೇ?

      ಉತ್ತರ
  5. Manju's avatar
    ಮಾರ್ಚ್ 27 2013

    Nijavaglu houdu.nanu kuda nimmade samasye anubavishddene.

    ಉತ್ತರ
  6. ಮಲ್ಲಪ್ಪ's avatar
    ಮಲ್ಲಪ್ಪ
    ಜೂನ್ 25 2015

    ಬಿಂದು ಅವರೆ,
    ನೀವು ಪ್ರತಿಪಾದಿಸಿದ ವಿಚಾರಗಳನ್ನು 100%ಒಪ್ಪಿ ಕೊಳ್ಳುತ್ತೆನೆ. ಅನೇಕರು ಒಪ್ಪುತ್ತಾರೆ. ಆದರೆ ಒಪ್ಪಿದ ವಿದ್ವಾಂಸರು ಕನ್ನಡದಲ್ಲಿ ತಾಂತ್ರಿಕ ಪದಗಳನ್ನು ತರುವುದು ಬಿಡಿ, ಸಾಮಾಜಿಕ ಪದಗಳನ್ನು ಬಳಕೆಗೆ ತರುವಾಗ ಈಗಾಗಲೇ ಆಡುಭಾಷೆಯಲ್ಲಿ ಬಳಕೆಯಲ್ಲಿರುವ ಪದಗಳನ್ನು ಬಿಟ್ಟು ಅದೆಂಥದ್ದೋ ಮಡಿವಂತಿಗೆ ಮೆರೆಯುತ್ತಾ, ವಿಚಿತ್ರ ವಾದ ಹೊಸ ಪದಗಳನ್ನು ಬಳಸಲು ಪ್ರಯತ್ನ ಪಡುತ್ತಾರೆ. ಉದಾ: ವೃತ್ತ ನೀರಿಕ್ಷಕ, ಅಭಿಯಂತಕ. ಏಕೆ ಜನಬಳಕೆಯ ಪದಗಳಾದ ಇಂಜಿನಿಯರ್, ಪೊಲೀಸ್ ಇಂಥಹ ಪದಗಳನ್ನು ಬಳಿದು ಬಳಕೆಗೆ ತಂದರೆ ಕನ್ನಡ ಬೆಳೆಯುತ್ತದೆ, ಬೆಳಗುತ್ತದೆ.
    ಇನ್ನೊಂದು ಸರಕಾರವು ಕೂಡಾ ಕಲಿಕಾ ಮಾಧ್ಯಮದಲ್ಲಿ ಉನ್ನತ ಶಿಕ್ಷಣ ದಲ್ಲಿ ಕನ್ನಡ ಬಳಸಲು ಒತ್ತಾಯ ಮಾಡಿದರೆ ಒಳ್ಳೆಯದು. ಯಾಂತ್ರಿಕ / ತಾಂತ್ರಿಕ ಪದಗಳನ್ನು ಉನ್ನತ ಶಿಕ್ಷಣದಲ್್ಲು ತರುವಾಗ ಪಂಡಿತರ ಕಿಂತಲೂ ಸೃಜನಶೀಲರನ್ನು ಬಳಸಿಕೊಳ್ಳುವದು ಉತ್ತಮ. ಮೊದಲು ಬದಲಾವಣೆ ಶಿಕ್ಷಣ ದಲ್ಲಿ ಬರಬೇಕು. ಎನ್ನುತ್ತಿರಿ??

    ಉತ್ತರ

Leave a reply to Basavaraj ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments