ಎಲ್ಲವೂ ಹೇಡಿತನದ ಪರಮಾವಧಿಯೇ!?
– ಚಕ್ರವರ್ತಿ ಸೂಲಿಬೆಲೆ
ಇಂದು ಹದಿನೈದು ನಿಮಿಷ ಪೊಲೀಸರು ಸುಮ್ಮನಿದ್ದರೆ ಹಿಂದೂಗಳನ್ನು ನಾಶ ಮಾಡಿಬಿಡುತ್ತೇವೆ ಎನ್ನುತ್ತಾನಲ್ಲ ಓವೈಸಿ, ಅವತ್ತು ಗಾಂಧೀಜಿ ಮೂವತ್ತು ಸೆಕೆಂಡು ಸುಮ್ಮನಿದ್ದುಬಿಟ್ಟಿದ್ದರೆ, ಹಿಂದೂಸ್ಥಾನದಲ್ಲಿ ಹೇಡಿ ಹಿಂದುಗಳು ಮಾತ್ರ ಉಳಿದಿರುತ್ತಿದ್ದರು.
ಮಿತ್ರ ತನ್ವೀರ್ ಮಡಿಕೇರಿಯಲ್ಲೊಮ್ಮೆ ಕೇಳಿದ್ದರು, ’ಹಿಂದುಗಳು ಸಂಖ್ಯೆಯಲ್ಲಿ ಹೆಚ್ಚಿದ್ದೀರಿ. ಅಣ್ಣನಂತೆ ನೀವು. ಸ್ವಲ್ಪ ಕೈಗಳನ್ನು ಅಗಲಿಸಿ ಅಪ್ಪಿಕೊಳ್ಳುವ ಪ್ರೀತಿ ತೋರಿದರೆ ನಾವು ಓಡಿಬಂದು ಅಪ್ಪಿಕೊಂಡು ಬಿಡುತ್ತೇವೆ. ನೀವೇಕೆ ಅಷ್ಟು ವಿಶಾಲವಾಗಲಾರಿರಿ?’ ಎಂದು.
’ನಾವು ಬಾಹುಗಳನ್ನು ಅಗಲಿಸಿಕೊಂಡೇ ನಿಂತಿದ್ದೇವೆ. ಮೊದಲೆಲ್ಲ ಬಂದು ಬಂದು ತಬ್ಬಿಕೊಳ್ಳುತ್ತಿದ್ದ ನೀವೇ ಈಗ ದೂರ ನಿಲ್ಲಲು ಶುರು ಮಾಡಿದ್ದೀರಿ; ನಿಮ್ಮ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆಯಲ್ಲ, ಅದಕ್ಕೆ. ನಾವೇನೋ ಅಂದಿಗೂ ಇಂದಿಗೂ ಅಣ್ಣನ ಸ್ಥಾನದಲ್ಲೇ ಇದ್ದೇವೆ. ಆದರೆ ನೀವು ಮಾತ್ರ ತಮ್ಮನ ಸ್ಥಾನವನ್ನು ತೊರೆಯುತ್ತಿದ್ದೀರಿ. ನಮ್ಮೊಡನೆ ಬೆರೆಯಲು ಹಿಂದೇಟು ಹಾಕುತ್ತಿದ್ದೀರಿ’ ಎಂದೆ. ಏನನ್ನಿಸಿತೋ ಏನೋ ತನ್ವೀರ್ ನಕ್ಕು ಸುಮ್ಮನಾಗಿಬಿಟ್ಟರು.
ಇಸ್ಲಾಮ್ ಈ ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಪಂಥ. ಅದರಲ್ಲಿ ಎರಡು ಮಾತೇ ಇಲ್ಲ. ಈ ಕಾರಣದಿಂದಲೇ ವ್ಯಾಟಿಕನ್‌ನ ಕ್ರಿಸ್ತ ಪಡೆ ಬೆಚ್ಚಿ ಕುಳಿತಿದೆ. ಹೀಗಾಗಿಯೇ ಇಸ್ಲಾಮ್ ರಾಷ್ಟ್ರಗಳ ನಡುವೆ ಕದನ ತೀವ್ರಗೊಳಿಸಿ ಸಂಖ್ಯೆ ಕಡಿಮೆ ಮಾಡುವ ಹುನ್ನಾರವನ್ನು ಅದು ಮಾಡುತ್ತಲೇ ಇದೆ. ಬಹುಶಃ ಸಾವಿರಾರು ವರ್ಷಗಳಿಂದ ಹೀಗೆ ಎತ್ತಿಕಟ್ಟುವ ಕೆಲಸ ಮಾಡಿದ್ದರಿಂದಲೋ ಏನೋ ಇಂದು ಚಿಂತನಶೀಲ ಕ್ರಿಸ್ತ ಸಮಾಜ, ಚಿಂತನಿಗೆ ಅವಕಾಶವೇ ಇಲ್ಲದ ಇಸ್ಲಾಮಿನತ್ತ ಹೊರಳಿಕೊಳ್ಳಲು ಆರಂಭಿಸಿದೆ.
ಅದೆಲ್ಲ ಬಿಡಿ, ಈಗ ಪ್ರಶ್ನೆ ಅಕ್ಬರುದ್ದಿನ್ ಓವೈಸಿಯದು. ಹೈದರಾಬಾದಿನ ನಟ್ಟನಡುವೆ ನಿಂತು ಹಿಂದುತ್ವವನ್ನೂ ಹಿಂದೂ ದೇವತೆಗಳನ್ನೂ ಹಿಂದೂ ನಾಯಕರನ್ನೂ ಕೊನೆಗೆ ಭಾರತವನ್ನೂ ಅತಿ ಹೀನ ಪದಗಳಲ್ಲಿ ನಿಂದಿಸಿದ್ದಾನಲ್ಲ, ಇದು ಸಾಮೂಹಿಕ ಅತ್ಯಾಚಾರಕ್ಕಿಂತ ಭೀನ್ನವಾದ್ದೇನೂ ಅಲ್ಲ. ಓವೈಸಿಯ ಮದವೇರಲು ಕಾರಣವಾಗಿದ್ದು ಸಂಖ್ಯೆಯೇ, ಅನುಮಾನವಿಲ್ಲ. ’ನಾವೀಗ ಇಪ್ಪತ್ತೈದು ಕೋಟಿಯಾಗಿದ್ದೇವೆ’ ಎನ್ನುವುದು ಅವನ ಎಚ್ಚರಿಕೆಯ ಸಂದೇಶ. ಇಷ್ಟು ಸಂಖ್ಯೆಯ ಮುಸಲ್ಮಾನರು ನೂರು ಕೋಟಿ ಹಿಂದೂಗಳನ್ನು ನಾಶ ಮಾಡುವುದು ಕಠಿಣವಲ್ಲ. ಏಕೆಂದರೆ ಹಿಂದುಗಳು ಹೇಡಿಗಳು – ಇದು ಅವನ ಭಾಷಣದ ಒಟ್ಟಾರೆ ಸಾರಾಂಶ.





