ಇನ್ನು10 ತಿಂಗಳಲ್ಲಿ ಭಾರತ ಚೀನಾ ನಡುವೆ ಸಂಭವನೀಯ ಯುದ್ಧ?
– ಗಣೇಶ್ ಕೆ ದಾವಣಗೆರೆ
ಚೀನಾದ ತಗಾದೆ ಶುರುವಾದಮೇಲೆ ಭಾರತ ೬೪ ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸೇನೆಗೆ ಹೊಸ ಆಯಾಮ ನೀಡುವ ಯೋಜನೆಗೆ ಅಸ್ತು ಎಂದಿದೆ. ಸಾವಿರಾರು ಸೇನೆಯ ತುಕಡಿಗಳನ್ನ ಹೊಂದಿದ ಸ್ಟ್ರೈಕಿಂಗ್ ಕಾರ್ಪ್ ನಿಯೋಜಿಸಲು ಉದ್ದೇಶಿಸಿದೆ. ಹಿಂದಿನ ವಾರದ ದಿ ವೀಕ್ ಪ್ರಕಟಿಸಿರುವ ಸೇನಾ ವಲಯದ ಅಭಿಮತದ ಪ್ರಕಾರ ಚೀನಾ ನಮ್ಮ ಮೇಲೆ ಎರಗಿ ಬರುವುದು ಅಷ್ಟೇನೂ ಸುಲಭದ ಕೆಲಸವೇನಲ್ಲ. ಚೀನೀಯರು ಆಕ್ರಮಣ ಮಾಡಿದರೆ, ಭಾರತವು ಚೀನಾದ ದುರ್ಬಲ ವಲಯಗಳ ಮೇಲೆ ಆಕ್ರಮಣ ಮಾಡಲಿದೆ. ಟಿಬೆಟ್ ಮೂಲಕ ಸಾವಿರಾರು ಕಿಲೋಮೀಟರ್ ಉದ್ದದ ರೈಲು ಮಾರ್ಗ ನಿರ್ಮಿಸಿ ಸೇನೆಯನ್ನ, ಜನರನ್ನ ವಾಯುಪುತ್ರನ ವೇಗದಲ್ಲಿ ಸಾಗಿಸುತ್ತೇವೆ ಎಂದು ಬೀಗುತ್ತಿರುವ ಚೀನಾ ಅದೇ ಕಾರಣಕ್ಕಾಗಿ ಕಳವಳಗೊಂಡಿದೆ. ಟಿಬೆಟ್‌ನಲ್ಲಿರುವ ರೈಲು ಮಾರ್ಗ ಹಲವಾರು ಸೇತುವೆಗಳನ್ನ ಒಳಗೊಂಡಿದೆ. ಜೊತೆಗೆ ಅಲ್ಲಿ ಬೆಂಗಾಡು. ಎಷ್ಟೇ ಎತ್ತರದಿಂದ ನೋಡಿದರೂ ನೆಲ ಕಾಣುತ್ತದೆ. ನಾಲ್ಕು ಸೇತುವೆಗಳನ್ನ ಒಡೆದು ಹಾಕಿದರೆ ಚೀನೀಯರು ಸೇನೆಯನ್ನ ಜಮಾವಣೆ ಮಾಡಲಿಕ್ಕೆ ರೈಲನ್ನ ಬಳಸಲಿಕ್ಕೆ ಸಾಧ್ಯವೇ ಇಲ್ಲ. ಅವನ್ನ ಮರು ನಿರ್ಮಿಸಿ ರೈಲು ಚಲಿಸುವ ಹೊತ್ತಿಗೆ ವಾರಗಳೇ ಬೇಕಾಗುತ್ತವೆ. ಜೊತೆಗೆ, ಟಿಬೆಟಿನಲ್ಲಿ ಹರಿಯುವ ನದಿಗಳಿಗೆ ರಾತ್ರೋ ರಾತ್ರಿ ಸೇತುವೆಗಳನ್ನ ಕಟ್ಟಿಕೊಡುವ ಕಠಿಣ ಪರಿಶ್ರಮದ, ಚಾಣಾಕ್ಷ, ಸಮರ್ಥ ಎಂಜಿನಿಯರುಗಳ ಬಳಗವಿದೆ ಭಾರತಕ್ಕೆ. ನಮ್ಮ ಸೇನೆಯ ಎಂಜಿನಿಯರುಗಳ ಈ ಎಲ್ಲ ವಿಶೇಷಣಗಳೂ ಮೊನ್ನೆ ಮೊನ್ನೆ ಸಂಭವಿಸಿದ ಉತ್ತರಾಖಂಡದ ಪ್ರಾಕೃತಿಕ ಅವಗಢದ ಸಮಯದಲ್ಲಿ ಸಾಬೀತಾಗಿದೆ.





