ಬುದ್ಧಿಜೀವಿ ಮತ್ತು ಸಾಕ್ಷಿ ಪ್ರಜ್ಞೆ ಎಂಬ ಮಾಯಾಲೋಕ (ಪೀಠಿಕೆ )
– ಎಂ. ಎ . ಶ್ರೀರಂಗ
ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಬುದ್ಧಿಜೀವಿ ಮತ್ತು ಸಾಕ್ಷಿಪ್ರಜ್ಞೆ ಎಂಬ ಪದಗಳು ಚಾಲ್ತಿಗೆ ಬಂದಿದ್ದು ನವ್ಯಸಾಹಿತ್ಯ ಮತ್ತು ವಿಮರ್ಶೆ ಭದ್ರವಾಗಿ ಬೇರೂರಿದ 1970ರ ಮಧ್ಯಭಾಗದಲ್ಲಿ. ಈ ವಿಶಿಷ್ಠ ಪದದ ಮಾತಾಪಿತೃಗಳು ಕನ್ನಡದ ನವ್ಯ ಸಾಹಿತಿಗಳು ಮತ್ತು ವಿಮರ್ಶಕರು. ಆಗ ಇವರುಗಳಲ್ಲಿ ಕೆಲವರಿಗೆ ಬುದ್ಧಿಜೀವಿಗಳ ಒಂದು ಪಟ್ಟಿ ತಯಾರಿಸಿ ತಮ್ಮ ಮುಂದಿನ ಪೀಳಿಗೆಗೆ ಅನುಕೂಲ ಮಾಡಿಕೊಡುವ ಉಮೇದು ಹುಟ್ಟಿತು. ನವ್ಯ ಸಾಹಿತ್ಯ ಎಂಬ ಪಂಥ (ಗುಂಪು) ಬರುವುದಕ್ಕಿಂತ ಮುಂಚೆ ಇದ್ದ ನವೋದಯ ಹಾಗು ಪ್ರಗತಿಶೀಲ ಸಾಹಿತಿಗಳನ್ನು ಸೇರಿಸಿಕೊಂಡು ಬುದ್ಧಿಜೀವಿ ಎಂದರೆ ಯಾರು? ಅವರ ಗುಣಲಕ್ಷಣಗಳು ಹೇಗಿರುತ್ತವೆ? ಹೇಗಿರಬೇಕು? ಯಾವ ವಿಷಯವನ್ನು ಯಾವ ಕಾಲದಲ್ಲಿ ವಿರೋಧಿಸಬೇಕು? ಯಾವಾಗ ವಿರೋಧಿಸಬಾರದು? ಇವರುಗಳ ಸಾಹಿತ್ಯ ಪ್ರಗತಿಪರವೊ ವಿರೋಧವೋ? ಎಂಬುದರ ಬಗ್ಗೆ ಚರ್ಚೆ ನಡೆದು ಕೊನೆಗೂ ಒಂದು ಬುದ್ಧಿಜೀವಿ ಮತ್ತು ಸಾಕ್ಷಿ ಪ್ರಜ್ಞೆಯ ಸಾಂಸ್ಕೃತಿಕ ಸಂವಿಧಾನ ತಯಾರಾಯಿತು.
ಆಗ ನಮ್ಮ ಬಹುಪಾಲು ಹಿರಿಯ ಸಾಹಿತಿಗಳು ಈ ಸಾಂಸ್ಕೃತಿಕ ಸಂವಿಧಾನದಲ್ಲಿ ನಿರೂಪಿಸಲ್ಪಟ್ಟ ನಿಯಮಾನುಸಾರ ಅರ್ಹತೆ ಪಡೆಯದ ಕಾರಣ ಬುದ್ಧಿಜೀವಿ ಎಂಬ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಹೊರಗುಳಿಯಬೇಕಾಯಿತು. ಇನ್ನು ಕೆಲವರನ್ನು ನಿರ್ದಿಷ್ಠವಾಗಿ ಇವರು ಪ್ರಗತಿ ಪರರೊ ವಿರೋಧಿಗಳೋ ಎಂದು ನಿರ್ಧರಿಸುವಲ್ಲಿ ಗೊಂದಲ ಮೂಡಿ ಅಮಾನತ್ತು ಮಾಡಿ ಅವರನ್ನು ಬುದ್ಧಿಜೀವಿಗಳು ಹೌದೋ ಅಲ್ಲವೋ ಎಂದು ನಿರ್ಧರಿಸುವ ಕೆಲಸವನ್ನು ತಮ್ಮ ಮುಂದಿನ ಪೀಳಿಗೆಯವರು ಮಾಡಲಿ ಎಂದು ಬಿಟ್ಟುಬಿಟ್ಟರು. ಎಪ್ಪತ್ತರ ದಶಕದ ಹೊತ್ತಿಗಾಗಲೇ ಸಾಕಷ್ಟು ವಯಸ್ಸಾಗಿದ್ದ ಹಿರಿಯ ಸಾಹಿತಿಗಳು ಯಾವ ಪ್ರತಿಭಟನೆಯನ್ನು ಮಾಡದೆ ತಾತ, ತಮ್ಮ ಮೊಮ್ಮಕ್ಕಳ ಆಟ ನೋಡುವಂತೆ ನೋಡಿ ನಕ್ಕು ಸುಮ್ಮನಾದರು. ದೇಹದಲ್ಲಿ ಇನ್ನೂ ಕಸುವಿದ್ದವರು ಪ್ರತಿಭಟಿಸಿದರು. ಮತ್ತೆ ಕೆಲವರು ಈ ಬುದ್ಧಿಜೀವಿಗಳ ಸಂವಿಧಾನವನ್ನೇ ನಿರ್ಲಕ್ಷಿಸಿದರು. ಆಗ ಈ ಬುದ್ಧಿಜೀವಿಗಳಿಗೆ ತಮ್ಮ ಪಂಥ ಪ್ರಚಾರಕ್ಕೆ ತಮ್ಮದೇ ಒಂದು ಸಾಹಿತ್ಯಿಕ ಪತ್ರಿಕೆಯಿದ್ದರೆ ಉತ್ತಮ ಎನಿಸಿತು. ಅದನ್ನೂ ಮಾಡಿದರು. ತಮ್ಮ ತುತ್ತೂರಿಯನ್ನು ತಾವೇ ಊದಿಕೊಂಡರು. ಕಾಲ ಕಳೆದಂತೆ ಇವರಲ್ಲೇ ಬಿರುಕು ಹುಟ್ಟಿ ದಿನ ಬೆಳಗಾದರೆ ಜಾತಿ, ಮತ, ವೈಯಕ್ತಿಕ ವಿಷಯಗಳನ್ನು ಹಿಡಿದುಕೊಂಡು ಪರಸ್ಪರ ಕೆಸರೆರಚಾಟ ಪ್ರಾರಂಭಿಸಿದರು. ಇದು ನಮ್ಮ ಬುದ್ಧಿಜೀವಿಗಳ ಪೂರ್ವಾಶ್ರಮದ ಕಥೆ.
ಇಷ್ಟು ಪ್ರಸ್ತಾವನೆಯಿಂದ ಬುದ್ಧಿಜೀವಿಗಳು ಎಂದರೆ ಸಾಹಿತಿಗಳು ಮಾತ್ರ ಇರುವ ಒಂದು ಸಾಂಸ್ಕೃತಿಕ ಕೂಟ ಎಂದು ಯಾರು ಬೇಕಾದರೂ ಊಹಿಸಬಹುದು. ಅದು ನಿಜವೂ ಆಗಿದ್ದೇ ನಮ್ಮ ಕಾಲದ ದುರಂತ. ಇವರುಗಳಿಗೆ ಗೊತ್ತಿಲ್ಲದ ವಿಷಯ ಈ ಪ್ರಪಂಚದಲ್ಲೇ ಇಲ್ಲ. ಗುಂಡು ಸೂಜಿಯಿಂದ ಹಿಡಿದು ರಾಕೆಟ್ ಸೈನ್ಸ್ ತನಕ ಯಾವ ವಿಷಯ ಕೇಳಿ ಇವರಲ್ಲಿ ಉತ್ತರವಿದೆ. ಇದೇ ಕಾರಣದಿಂದ ಸರ್ಕಾರ ಯಾವ ಕೆಲಸ ಮಾಡಲು ಹೊರಟರೂ ಇವರ ಸಲಹೆ ಪಡೆಯಲೇಬೇಕು. ನೆಲ, ಜಲ, ಭಾಷೆ ಯಾವ ವಿಷಯದ ಸಮಿತಿಯಿರಲಿ, ಅದರಲ್ಲಿ ಇವರಿಗೊಂದು ಸ್ಥಾನ ಖಾಯಂ. ಹಾಗಾದರೆ ವೈದ್ಯ, ವಕೀಲ, ಇಂಜಿನೀಯರ್, ಮುಂತಾದ ವೃತ್ತಿಗಳಲ್ಲಿ ಇರುವವರು ಬುದ್ಧಿಜೀವಿಗಳಲ್ಲವೇ? ಅಲ್ಲ ಎಂದವರಾರು? ದಿನನಿತ್ಯ ವಾಹನ ನಡೆಸುವ ಡ್ರೈವರ್ ಸಹ ಬುದ್ಧಿಜೀವಿಯೇ. ಹಾಗಾದರೆ ಈ ಬುದ್ಧಿಜೀವಿಗಳ ಸಂವಿಧಾನಕ್ಕೆ ಕಳೆದ ಐವತ್ತು ವರ್ಷಗಳಲ್ಲಿ ಏನೂ ತಿದ್ದುಪಡಿಗಳೇ ಆಗಿಲ್ಲವೇ? ಆಗಿದೆ. ತಮ್ಮ ಕೂಟದ ವ್ಯಾಪ್ತಿ ಹೆಚ್ಚಿಸಿಕೊಳ್ಳಲು ಇವರು ಒಂದು ತಂತ್ರ ಹೂಡಿದ್ದಾರೆ. ಸಿನಿಮಾ, ನಾಟಕ, ಪತ್ರಿಕೋದ್ಯಮ, ರಾಜಕೀಯ, ವಕೀಲರು,ಸಾಮಾಜಿಕ ಕಾರ್ಯಕರ್ತರು ಹೀಗೆ ಯಾವ ರಂಗದ ಯಾರು ಬೇಕಾದರೂ ಈಗ ಬುದ್ಧಿಜೀವಿಯಾಗಬಹುದು. ಮುಖ್ಯವಾದ ವಿಷಯವೆಂದರೆ ಏನಾದರೊಂದು ವಿವಾದ ಹುಟ್ಟಿಸುವ ಮಾತಾಡಿ ಅಥವಾ ಬರೆದು ಪ್ರಕಟಿಸಿ ಚಾಲ್ತಿಯಲ್ಲಿರಬೇಕಷ್ಟೆ.
ಈಗಂತೂ 24×7 ಸುದ್ದಿವಾಹಿನಿಗಳ ಕಾಲ. ಅಲ್ಲಿ ಯಾವುದೇ ಚರ್ಚೆ ಇರಲಿ ಈ ಬುದ್ದಿಜೀವಿಗಳ ಕೂಟದ ಒಬ್ಬ ಸದಸ್ಯರ ಹಾಜರಿ ಖಾತರಿ. ಈಗ ಒಂದೆರೆಡು ವರ್ಷದಿಂದ ಕೋವಿಡ್ ಕಾರಣದಿಂದಲೋ ಏನೋ ಮಂಕಾಗಿದ್ದ ಬುದ್ಧಿಜೀವಿಗಳಿಗೆ ಕಳೆದ ಹತ್ತು ಹದಿನೈದು ದಿನಗಳಿಂದ ಹೊಸ ವಿಷಯ ಸಿಕ್ಕಿದೆ. ಅದು ಮಾತಾಡುವಾಗ ಲಯ
ತಪ್ಪುವುದು ಒಳ್ಳೆಯದೋ ಕೆಟ್ಟದ್ದೋ? ಒಳ್ಳೆಯದು ಎಂದು ಬುದ್ಧಿಜೀವಿಗಳು ಈ ಹಿಂದೆ ನಮ್ಮ ಹಿರಿಯರು ಯಾವಾಗ ಹೇಗೆ ಲಯ ತಪ್ಪಿ ನಡೆದು ಮಾತಾಡಿ ದೇಶಕ್ಕೆ, ಸಮಾಜಕ್ಕೆ ಒಳಿತು ಮಾಡಿದ್ದಾರೆ ಎಂದು ಸೋದಾಹರಣವಾಗಿ ಉತ್ತರಕೊಟ್ಟಿದ್ದಾರೆ. ಹಾಗಾಗಿ ಈಗ ಯಾರು ಬೇಕಾದರೂ ಲಯ ತಪ್ಪಿ ಮಾತಾಡಿ ನಂತರ ಎದುರಾಗಬಹುದಾದ ಸಿವಿಲ್ ದೂರುಗಳಿಂದ ಪಾರಾಗಬಹುದು. ಇದು ತಮಾಷೆ ಎನಿಸಬಹುದು. ಆದರೆ ವಾಸ್ತವ ಸ್ಥಿತಿ. ಬುದ್ಧಿಜೀವಿಗಳಿಗೆ ಈ ಅಧಿಕಾರ ಕೊಟ್ಟವರು ಯಾರು ಎಂದು ಯಾರಾದರೂ ಕೇಳಿದರೋ ಬಂತು ಕಷ್ಟ. ಆಗ ಕೇಳಿದವರು ಪುರೋಹಿತಶಾಹಿ, ಮನುವಾದಿ, ಬಲಿತ ಜಾತಿವಾದಿ ಮತ್ತು ಮುಖ್ಯವಾಗಿ ನಮ್ಮ ದೇಶದ ಸಂವಿಧಾನದತ್ತವಾದ ಮಾತಾಡುವ ಹಕ್ಕನ್ನು ಕಸಿದುಕೊಂಡ ನಿರಂಕುಶವಾದಿ ಎಂಬ ನಾನಾ ಆರೋಪಗಳನ್ನು ಎದುರಿಸಬೇಕಾಗುತ್ತದೆ.
ನಮ್ಮ ರಾಜ್ಯ/ದೇಶದ ಚುನಾವಣೆಗಳ ಕಾಲ ಬಂತೆಂದರೆ ಅದು ಬುದ್ಧಿಜೀವಿಗಳಿಗೆ ಸುಗ್ಗಿಯ ಕಾಲ. ಯಾವ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಟಿವಿ ಚರ್ಚೆಗಳಲ್ಲಿ ಭಾಗವಹಿಸಿ ನಿರ್ಧರಿಸುವವರು ಇವರುಗಳೇ . ಹುಮ್ಮಸ್ಸು ಇದ್ದವರು ತಾವೇ ಪಕ್ಷೇತರರಾಗೋ ಇಲ್ಲ ತಮಗೆ ಟಿಕೆಟ್ ಕೊಟ್ಟ ಪಕ್ಷದಿಂದಲೋ ಚುನಾವಣೆಗೆ ನಿಂತಿದ್ದ ಉದಾಹರಣೆಗಳೂ ಇವೆ. ಆದರೆ ಇವರುಗಳು ಟಿವಿ ಚರ್ಚೆಗಳಲ್ಲಿ ನಿರ್ಧರಿಸಿದ ರಾಜಕೀಯ ಪಕ್ಷ ಅಧಿಕಾರಕ್ಕೆ ಬರದೇ, ತಾವೂ ಠೇವಣಿ ಕಳೆದು ಕೊಂಡು ನಿರಾಶರಾಗಿ ಈ ದೇಶಕ್ಕೆ ಭವಿಷ್ಯವಿಲ್ಲ ಎಂದು ಕೊರಗಿ ಮಂಕಾಗಿರುತ್ತಾರೆ . ಆದರೆ ಅದು ತಾತ್ಕಾಲಿಕ ಅಷ್ಟೇ. ಮತ್ತೆ ಇವರೋ, ಇವರ ಕೂಟದ ಸದಸ್ಯರಲ್ಲಿ ಯಾರಾದರೊಬ್ಬರು ಮಾತಾಡುವಾಗ ಲಯ ತಪ್ಪುತ್ತಾರೆ. ಮತ್ತೆ ಬುದ್ಧಿಜೀವಿಗಳು ಎಂದಿನಂತೆ ಹುರುಪಿನಿಂದ ತಮ್ಮ ಲಯಕ್ಕೆ ಮರಳುತ್ತಾರೆ. ಇದು ಕೊನೆಯಿಲ್ಲದ ಪಯಣ.
—(ಮುಂದಿನ ಭಾಗದಲ್ಲಿ—ಸಾಕ್ಷಿಪ್ರಜ್ಞೆ ಎಂದರೇನು.)