ವಿಷಯದ ವಿವರಗಳಿಗೆ ದಾಟಿರಿ

Posts from the ‘ಶಿಕ್ಷಣ’ Category

23
ಜೂನ್

ಶಿಕ್ಷಣ ತಜ್ಞ ಶ್ಯಾಮಪ್ರಸಾದ್ ಮುಖರ್ಜಿ

– ಅಜಿತ್ ಶೆಟ್ಟಿ ಹೆರಂಜೆ

ಇವತ್ತು ಶ್ಯಾಮಾ ಪ್ರಸಾದ್ ಮುಖರ್ಜಿಯವರು ಹತ್ಯೆಯಾದ ದಿನ. 1953ರ ಈ ದಿನ, ನೆಹರೂ ಸರಕಾರದ ಆದೇಶದ ಮೇರೆಗೆ ಕಾಶ್ಮೀರ ರಾಜ್ಯ ಸರಕಾರ ಅವರನ್ನು ಒಂದು ಅಜ್ಞಾತ ಪ್ರದೇಶದಲ್ಲಿ  ಗೃಹ ಬಂಧನದಲ್ಲಿ ಇಟ್ಟಿತ್ತು. ಕಾಶ್ಮೀರದಲ್ಲಿ ಇದ್ದ ಆರ್ಟಿಕಲ್ 370ರ ವಿರುದ್ಧ ಪ್ರತಿಭಟಿಸಲು ಹೋದಾಗ ನೆಹರೂ ಸರಕಾರ ಇವರ ಬಂಧನಕ್ಕೆ ಆದೇಶ ಹೊರಡಿಸಿತ್ತು. 40 ದಿನಗಳ ಗೃಹ ಬಂಧನದ ಅವಧಿಯಲ್ಲಿ ಅವರ ಆರೋಗ್ಯದಲ್ಲಿ ಇದ್ದಕ್ಕಿದ್ದಂತೆ ಏರುಪೇರಾಗುತ್ತದೆ. ಅವರಿಗೆ ಔಷಧೋಪಚಾರವನ್ನು ಸರಕಾರ ಒದಗಿಸಿತ್ತಾದರೂ ಅವರು ಮರಣ ಹೊಂದುತ್ತಾರೆ.

ಅವರ ಸಾವಿನ ನಂತರ ಅವರ ತಾಯಿ ಜೋಗಮಾಯಾ ದೇವಿಯವರು ತನ್ನ ಮಗನ ಸಾವಿನ ಬಗ್ಗೆ ತಮಗೆ ಅನೇಕ ಅನುಮಾನಗಳಿವೆ, ಅವನ ಬಂಧನದಲ್ಲಿದ್ದಾಗ ಅವನಿಗೆ ಚಿಕಿತ್ಸೆ ಕೊಟ್ಟವರು ಯಾರು? ಯಾವ ರೀತಿಯ ಚಿಕಿತ್ಸೆ ಕೊಡಲಾಯಿತು? ಯಾವ ಕಾಯಿಲೆಗೆ ಕೊಡಲಾಯಿತು? ಇದು ಸಹಜ ಸಾವೋ? ಅಥವಾ ನನ್ನ ಮಗನ ರಾಜಕೀಯ ಚಳುವಳಿಯ ಕಾರಣಕ್ಕೆ  ಸರಕಾರೀ ಪ್ರಾಯೋಜಕತ್ವದಲ್ಲಿ ನಡೆಸಿದ ಕೊಲೆಯೋ ಎಂಬುದರ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು   ಪ್ರಧಾನಿ ನೆಹರುವಿಗೆ ಪತ್ರ ಬರೆಯುತ್ತಾರೆ. ಆದರೆ ಅದು ನೆಹರೂ ಕಛೇರಿಯ ಕಸದ ಬುಟ್ಟಿ ಸೇರುತ್ತದೆ.

ಶ್ಯಾಮಪ್ರಸಾದ್ ಮುಖರ್ಜಿಯವರು ಯಾವುದನ್ನು ವಿರೋಧಿಸಿ ತಮ್ಮ ಸರ್ವೋಚ್ಛ ಬಲಿದಾನವನ್ನು ನೀಡಿದರೋ, ಅದನ್ನ ಮೋದಿ ಸರಕಾರ 2 ವರ್ಷದ ಹಿಂದೆ ತೆಗೆದುಹಾಕಿತು. ಕಾಶ್ಮೀರ ಪೂರ್ಣ ಪ್ರಮಾಣದಲ್ಲಿ ಭಾರತದ ಭಾಗವಾಯಿತು.
ಬಹುತೇಕ ಮಂದಿಗೆ ಶ್ಯಾಮಾ ಪ್ರಸಾದ್ ಮುಖರ್ಜಿಯವರ 30 ವರ್ಷಗಳ ಸುದೀರ್ಘವಾದ ಸಾರ್ವಜನಿಕ ಜೀವನದಲ್ಲಿ ಅವರ ಕೊನೆಯ ಮೂರು ವರ್ಷಗಳ ಪರಿಚಯ ಮಾತ್ರ ಇರುವುದು. 1950ರಲ್ಲಿ ಅವರು ನೆಹರೂ  ಸರಕಾರಕ್ಕೆ ರಾಜಿನಾಮೆ ಕೊಡುತ್ತಾರೆ, 1951ರಲ್ಲಿ ಸಂಘದ ಸಂಪರ್ಕಕ್ಕೆ ಬರುತ್ತಾರೆ, ‘ಜನಸಂಘ’ದ ಸ್ಥಾಪನೆ ಮಾಡುತ್ತಾರೆ. 1952 ರ ಚುನಾವಣೆಯಲ್ಲಿ ಜನಸಂಘ 3 ಸ್ಥಾನವನ್ನು ಗೆಲ್ಲುತ್ತದೆ. 1953ರಲ್ಲಿ ಅವರು ಕಾಶ್ಮೀರದ ವಿಚಾರವಾಗಿ ಹೋರಾಡಿ ನಿಗೂಢವಾಗಿ ಸಾವನ್ನು ಕಾಣುತ್ತಾರೆ ಎನ್ನುವುದಷ್ಟೆ ತಿಳಿದಿರುವ ವಿಚಾರ.

ಶ್ಯಾಮಪ್ರಸಾದ ಮುಖರ್ಜಿ 1934 ರಿಂದ 1938ರ ತನಕ ಕೋಲ್ಕತ್ತಾ ವಿಶ್ವವಿದ್ಯಾನಿಲಯದ ಉಪ ಕುಲಪತಿಯಾಗಿ ಕೆಲಸ ಮಾಡುತ್ತಾರೆ. 1933ರಲ್ಲಿ ಉಪಕುಲಪತಿಯಾಗಿ ನೇಮಕವಾದಾಗ ಅವರ ವಯಸ್ಸು ಇನ್ನೂ 33. ಅವರು ಭಾರತದ ಇತಿಹಾಸದಲ್ಲಿ ಅತ್ಯಂತ ಕಿರಿಯ ವಯಸ್ಸಿಗೆ ವಿಶ್ವವಿದ್ಯಾನಿಲಯದ ಉಪಕುಲಪತಿಯಾದವರು. ಆ ವಯಸ್ಸಿಗಾಗಲೇ ಅವರು ಇಂಗ್ಲೀಷಿನಲ್ಲಿ ಬಿ ಎ, ಬಂಗಾಳಿ ಭಾಷೆಯಲ್ಲಿ ಎಂ ಎ, ಕಾನೂನು ಶಿಕ್ಷಣದಲ್ಲಿ  ಬ್ಯಾಚುಲರ್ ಪದವಿ ಹಾಗು ಇಂಗ್ಲೆಂಡ್ ಗೆ ತೆರಳಿ  ಭ್ಯಾರಿಷ್ಟರ್ ಪದವಿಯನ್ನೂ ಪಡೆದಿದ್ದರು. ಇವರ ತಂದೆ ಆಶುತೋಷ್ ಮುಖರ್ಜಿ ಕೊಲ್ಕತ್ತಾ ವಿಶ್ವವಿದ್ಯಾನಿಲಯದ ಮೊದಲ ಭಾರತೀಯ  ಉಪಕುಲಪತಿಗಳಾಗಿದ್ದವರು. ಶ್ಯಾಮಾ ಪ್ರಸಾದ್ ಮುಖರ್ಜಿಯವರು ಕೊಲ್ಕತ್ತಾ ವಿಶ್ವವಿದ್ಯಾನಿಲಯದ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರಾಗಿದ್ದಾಗಲೆ ವಿಶ್ವವಿದ್ಯಾನಿಲಯದ ಕೆಲಸಗಳಲ್ಲಿ ತಂದೆಗೆ ಸಹಾಯ ಮಾಡಿದ ಅನುಭವವನ್ನು ಹೊಂದಿದ್ದರು.
 
ಶ್ಯಾಮ ಪ್ರಸಾದ್ ಮುಖರ್ಜಿಯವರು ಕೋಲ್ಕತ್ತಾ ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾದಾಗ, ವಿಶ್ವವಿದ್ಯಾನಿಲಯಗಳ ಇತಿಹಾಸದಲ್ಲೇ ನಡೆಯದ ಹಲವು ಪ್ರಥಮಗಳಿಗೆ ಮುನ್ನುಡಿಯನ್ನು ಬರೆಯುತ್ತಾರೆ. ಬ್ರಿಟೀಷರ ಆಳ್ವಿಕೆಯಲ್ಲಿ ಭಾರತೀಯ ಮೂಲದ ಶಿಕ್ಷಣ ಪದ್ಧತಿಯ ನಲುಗಿ ಹೋಗಿತ್ತು. ಅದರ ಜೊತೆಗೆ ಬ್ರಟೀಷ್ ಸಾಮ್ರಾಜ್ಯಶಾಹಿ ವ್ಯವಸ್ಥೆ ಹುಟ್ಟು ಹಾಕಿದ ಆಧುನಿಕ ಶಿಕ್ಷಣ ವ್ಯವಸ್ಥೆ, ಸಂಪೂರ್ಣವಾಗಿ ಇಂಗ್ಲೀಷ್ ಮಯವಾಗಿತ್ತು. ಅಲ್ಲಿ ಭಾರತೀಯ ಭಾಷೆಗಳಿಗೆ ಯಾವುದೇ ಪ್ರಾಧಾನ್ಯತೆ ಇರಲಿಲ್ಲ. ಬಂಗಾಳದಲ್ಲಿ  ಬಂಗಾಳದ ಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ಪಡೆಯುವುದು ಅತ್ಯಂತ ಪ್ರಯಾಸದ ವಿಷಯವಾಗಿತ್ತು ಹಾಗಾಗಿ ತಮ್ಮ ಕಾಲದಲ್ಲಿ ಕೋಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಮತ್ತು ಬಂಗಾಳದ ಶಿಕ್ಷಣ ವ್ಯವಸ್ಥೆಯಲ್ಲಿ ಸ್ಥಳಿಯ ಭಾಷೆಗಳಿಗೆ ಪ್ರಾತಿನಿದ್ಯತೆ ಕೊಡಿಸುವ ತೀರ್ಮಾನ ಮಾಡುತ್ತಾರೆ ಹಾಗು ಬಂಗಾಳಿ ಭಾಷೆಯಲ್ಲೇ ಹತ್ತನೆ ತರಗತಿಯವರೆಗೆ ಶಿಕ್ಷಣ ಪಡೆಯುವ ಅವಕಾಶವನ್ನು ಬಂಗಾಳಿ ವಿಧ್ಯಾರ್ಥಿಗಳಿಗೆ ಮಾಡಿಸಿಕೊಡುತ್ತಾರೆ. ಇದಕ್ಕೆ 1935ರ ‘ಯೂನಿವರ್ಸಿಟಿ ಕಾಯಿದೆ’ಯಲ್ಲಿ ಮಾನ್ಯತೆಯನ್ನೂ ಕೊಡಿಸುತ್ತಾರೆ. 

ವಿವಿಯಲ್ಲಿ ಬ್ರಿಟಿಷರ ಲಾಂಛನ
ಮುಖರ್ಜಿಯವರು ಬದಲಾಯಿಸಿದ ಲಾಂಛನ

ವಿಶ್ವವಿದ್ಯಾನಿಲಯ ಪ್ರಾರಂಭವಾದಾಗಿನಿಂದ ಅಲ್ಲಿಯ ತನಕ  ಬ್ರಿಟೀಷರ ದಾಸ್ಯದ ಚಿಹ್ನೆಯಾಗಿದ್ದ ‘ವಿಶ್ವವಿದ್ಯಾನಿಲಯದ ಚಿಹ್ನೆ’ಯನ್ನು ಬದಲಾಯಿಸಿ ಅದಕ್ಕೆ ಸಂಪೂರ್ಣವಾಗಿ ಭಾರತದ ಆದ್ಯಾತ್ಮ ಸ್ವರೂಪವನ್ನು ಕೊಡುತ್ತಾರೆ.  ಕುದುರೆ ಮತ್ತು ಇಂಗ್ಲೆಂಡಿನ ರಾಜ ಪ್ರಭುತ್ವದ ಸೂಚಕದ ಚಿಹ್ನೆಯನ್ನು ತೆಗೆದು ‘ಕಮಲದ ಹೂವುಗಳ ದಳ ಇರುವ ವ್ರತ್ತಾಕಾರದ ಚಿಹ್ನೆ’ಯನ್ನು ನೀಡುತ್ತಾರೆ. ಇದು ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗುತ್ತದೆ. ವಿಶ್ವವಿದ್ಯಾನಿಲಯದ ಘಟಿಕೋತ್ಸವಕ್ಕೆ ಗುರುದೇವ ರಬೀಂದ್ರನಾಥ ಠಾಗೋರ್ ಅವರನ್ನು ಕರೆಯಿಸಿ ವಿಶ್ವವಿದ್ಯಾನಿಲಯದ ಇತಿಹಾಸದಲ್ಲೇ ಮೊದಲಬಾರಿಗೆ ಘಟಿಕೋತ್ಸವದ ಭಾಷಣ ಬಂಗಾಳಿ ಭಾಷೆಯಲ್ಲಿ ಮಾಡಿಸುತ್ತಾರೆ. ಇದು ಬ್ರಿಟಿಷರನ್ನ ಇನ್ನೂ ಕೆರಳಿಸುತ್ತದೆ. ರಬೀಂದ್ರನಾಥ ಠಾಗೋರರನ್ನು ವಿಶ್ವವಿದ್ಯಾನಿಲಯದಲ್ಲಿ  ಬಂಗಾಳಿ ಭಾಷಾ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕೂಡ ನೇಮಿಸುತ್ತಾರೆ. ಬಂಗಾಳಿ ಭಾಷೆಯಲ್ಲಿ ಹೆಚ್ಚಿನ ಸಾಹಿತ್ಯ ಸೃಷ್ಟಿಸಲು ಪ್ರೇರಣೆ ಸಿಗಲಿ ಎನ್ನುವ ಕಾರಣಕ್ಕೆ ವಿಶ್ವವಿದ್ಯಾನಿಲಯದಿಂದಲೇ ಅನೇಕ ಬಂಗಾಳಿ ಸಾಹಿತ್ಯದ ಕೈಪಿಡಿಗಳನ್ನು ಮುದ್ರಿಸಿ ಪ್ರಕಟಿಸುತ್ತಾರೆ,  ಇವರ ಕಾಲದಲ್ಲೇ, ಅಂದರೆ 1937 ರಲ್ಲಿ ಮೊದಲ ಬಾರಿಗೆ ಬಂಗಾಳಿ ಭಾಷೆಯಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧ ಒಂದಕ್ಕೆ ಡಾಕ್ಟರೇಟ್ ಗೌರವ ಸಿಗುತ್ತದೆ.
 
ಶ್ಯಾಮ ಪ್ರಸಾದ್  ಮುಖರ್ಜಿಯವರು ವಿಶ್ವವಿದ್ಯಾನಿಲಯದಲ್ಲಿ, ಇತರ ಅನೇಕ ಆಧುನಿಕ ಮತ್ತು ಹೊಸತಲೆಮಾರಿಗೆ ಆವಶ್ಯಕವಾಗಿ ಬೇಕಾಗಿದ್ದ ವಿಷಯಗಳ ತರಗತಿಯನ್ನೂ ಪ್ರಾರಂಭಿಸುತ್ತಾರೆ. ಬಂಗಾಳಿ ಭಾಷೆಯ ಜೊತೆಗೆ ಉರ್ದು, ಹಿಂದಿ, ಅಸ್ಸಾಮಿ ಮುಂತಾದ ಸ್ಥಳೀಯ ಭಾರತೀಯ ಭಾಷೆಗಳಿಗೂ ಅವಕಾಶ ಕೊಡಿಸುತ್ತಾರೆ.  ಔದ್ಯೋಗಿಕ ಜಗತ್ತಿಗೆ ಅಗತ್ಯವಿದ್ದ  ತಾಂತ್ರಿಕ ವಿಷಯಗಳ ಬಗ್ಗೆ ತರಬೇತಿ ಕೊಡಿಸುವ ಕೆಲಸ ಮಾಡುತ್ತಾರೆ.  ಇವರು ‘ಅಪ್ಲೈಡ್ ಫಿಸಿಕ್ಸ್’ ವಿಭಾಗವನ್ನು ಆರಂಭಿಸಿ, ಅಲ್ಲಿ ಇವತ್ತಿನ  ಮಾಹಿತಿ ತಂತ್ರಜ್ನಾನದ ಇಂಜಿನೀಯರಿಂಗ್ ಗೆ ಸಮನಾಗಿದ್ದ  ‘ಕಮ್ಯುನಿಕೇಶನ್ ಇಂಜಿನೀಯರಿಂಗ್’ ಪ್ರಾರಂಭಿಸುತ್ತಾರೆ. 1934 ರಲ್ಲಿ ಡಿಸಿಎಸ್ ಪದವಿಯನ್ನು ಪಬ್ಲಿಕ್ ಹೆಲ್ತ್ ವಿಭಾಗದಲ್ಲಿ ಪ್ರಾರಂಭಿಸುತ್ತಾರೆ. ಸೈನ್ಯಕ್ಕೆ ಸೇರಬಯಸುವ ವಿಧ್ಯಾರ್ಥಿಗಳಿಗೆ ತರಬೇತಿ ಕೊಡಿಸುವ ವ್ಯವಸ್ಥೆ ಮಾಡಿಸುತ್ತಾರೆ. ನಂತರದ ದಿನಗಳಲ್ಲಿ ಭಾರತೀಯ ವಾಯುಪಡೆಯೊಂದಿಗೆ ಸೇರಿ  3 ತಿಂಗಳ ಇಂಟರ್ನಶಿಪ್  ಕೋರ್ಸ್‍ಗಳನ್ನು ಪ್ರಾರಂಭಿಸುತ್ತಾರೆ.  ಪ್ರಾಚ್ಯವಸ್ತು ಶಾಸ್ತ್ರ,ಆರೋನಾಟಿಕ್ಸ್ ವಿಭಾಗದಲ್ಲಿ ಬಿಎ, ಖಗೋಳ ಶಾಸ್ತ್ರದಲ್ಲಿ ಪದವಿ, ಗಣಿತದಲ್ಲಿ ಹಾನರರಿ ಕೋರ್ಸ್‍ಗಳನ್ನೂ ಪ್ರಾರಂಭಿಸುತ್ತಾರೆ. ವಿಧ್ಯಾರ್ಥಿಗಳ ಜೊತೆಗೆ ಶಿಕ್ಷಕರಿಗೆ ತರೆಬೇತಿ ಕೊಡಿಸುವ ಕಲಿಕಾ ವ್ಯವಸ್ಥೆಯನ್ನೂ ವಿಶ್ವವಿದ್ಯಾನಿಲಯದಲ್ಲಿ ಆರಂಭಿಸುತ್ತಾರೆ. ಇವರ ಕಾರ್ಯಕಾಲದಲ್ಲಿ ಬಂಗಾಳದಲ್ಲಿ 2 ಪ್ರಮುಖ ಶಿಕ್ಷಕರ ತರಬೇತಿ ಕಾಲೇಜ್ ಗಳನ್ನು ಆರಂಭಿಸುತ್ತಾರೆ. ಮಹಿಳೆಯದ ಶಿಕ್ಷಣಕ್ಕೆ ಒತ್ತುಕೊಡಲು,  ಬಿಹಾರಿಲಾಲ್ ಮಿತ್ರರವರು  ಮಹಿಳೆಯರಿಗಾಗಿ ಹೊಮ್ ಸಯನ್ಸ್ ತರಗತಿಗಳನ್ನು ಪ್ರಾರಂಭಿಸಲು ನಿಶ್ಚಯಿಸಿದಾಗ ಅವರಿಗೆ ಆ ಕಾಲದಲ್ಲೇ 6500 ರೂಪಾಯಿಗಳ ದೇಣಿಗೆ ನೀಡುತ್ತಾರೆ.  ಮುಂದೆ ಅದೇ ಸಂಸ್ಥೆ ಬೆಳೆದು ‘ಬಿಹಾರಿಲಾಲ್ ಕಾಲೇಜ್’ಆಗುತ್ತದೆ. ಶ್ಯಾಮಾಪ್ರಸಾದ ಮುಖರ್ಜಿ ವಿಶ್ವವಿದ್ಯಾನಿಲಯದಲ್ಲಿ  ಏಷಿಯಾದ ಸಂಸ್ಕ್ರತಿಯನ್ನು ಕಲಿಕಾ ವಿಷಯವನ್ನಾಗಿಸುವ ಹೊಸ ಪ್ರಯತ್ನವೊಂದಕ್ಕೆ ಮುಂದಾಗುತ್ತಾರೆ.  ಅವರು  ಚೀನಾ ಮತ್ತು ಟಿಬೇಟಿನ ಭಾಷಾ ಅಧ್ಯಯನ ಕೇಂದ್ರವನ್ನ ಸ್ಥಾಪಿಸುತ್ತಾರೆ. 
 
ವಿದ್ಯಾರ್ಥಿಗಳ ಶಿಕ್ಷಣದ ಜೊತೆಗೆ, ಅವರ ಇತರ ಶಿಕ್ಷಣೇತರ ಹಿತಗಳನ್ನು ಕಾಪಾಡಲು ಅವರು ವಿಶ್ವವಿದ್ಯಾನಿಲಯದಲ್ಲಿ ಒಂದು ಸ್ಟೂಡೆಂಟ್ ವೆಲ್‍ಫೇರ್ ಅಸೋಸಿಯೇಶನ್ ಪ್ರಾರಂಭಿಸುತ್ತಾರೆ. ವಿದ್ಯಾರ್ಥಿಗಳು , ಶಿಕ್ಷಕರು ಮತ್ತು ಭೋಧನೇತರ ಸಿಬ್ಬಂಧಿಗಳ ಒಳಿತಿಗಾಗಿ ಸುಮಾರು 30ಕ್ಕೂ ಹೆಚ್ಚು  ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುತ್ತಾರೆ. ‘ವಿಶ್ವವಿದ್ಯಾನಿಲಯದ ಸಿಬ್ಬಂಧಿಗಳ ಸಂಘಟನೆ’ಯ ಅಧ್ಯಕ್ಷರೂ ಆಗುತ್ತಾರೆ. ವಿಶ್ವವಿದ್ಯಾನಿಲಯದ ಇತಿಹಾಸದಲ್ಲೆ ಮೊದಲ ಬಾರಿಗೆ  ಸಿಬ್ಬಂಧಿಗಳಿಗೆ ‘ಪ್ರಾವಿಡೆಂಟ್ ಫಂಡ್’ ಕೊಡಿಸುವ ಬಗ್ಗೆ ಸಿಂಡಿಕೇಟ್ ಬಳಿ ಪ್ರಸ್ಥಾಪವನ್ನು ಇಡುತ್ತಾರೆ.
 
ಶಿಕ್ಷಣ ಕ್ಷೇತ್ರದಲ್ಲಿ ಶ್ಯಾಮಾ ಪ್ರಸಾದ್ ಮುಖರ್ಜಿಯವರ ಅತ್ಯಂತ ಮಹತ್ವದ ಕೊಡುಗೆ ಅಂದರೆ, ಅವರು ಜಾರಿಗೆ ತಂದ ‘ಪಂಚ ಶೀಲ  ನೀತಿ ಭಾರತದ ಭವಿಷ್ಯವನ್ನು ನಿರ್ಮಿಸುವ ಯುವ ವರ್ಗದ ಶಿಕ್ಷಣ ವ್ಯವಸ್ಥೆ ಸರಿಯಾದ ದಿಕ್ಕಿನಲ್ಲಿ ಸಾಗಿದಾಗ ಮಾತ್ರ, ದೇಶದ ಭವಿಷ್ಯವೂ ಸರಿಯಾದ ದಿಕ್ಕಿನಲ್ಲಿ ಸಾಗಲು ಸಾಧ್ಯ ಎನ್ನುವ  ವಿಷಯವನ್ನು ಪ್ರತಿಪಾದಿಸಿತ್ತಾ ಶ್ಯಾಮಪ್ರಸಾದ ಮುಖರ್ಜಿಯವರು ತನ್ನ 2ನೇ ಘಟಿಕೋತ್ಸವದ ಭಾಷಣದಲ್ಲಿ 5 ವಿಷಯಗಳ ಬಗ್ಗೆ ಪ್ರಸ್ತಾಪ ಮಾಡುತ್ತಾರೆ.


1.           ಸಮಾಜದಲ್ಲಿ  ಯುವಕರ ಸರ್ವಾಂಗೀಣ ಅಭಿವೃದ್ದಿಗೆ  ಸಹಾಯವಾಗಲು, ಶಿಕ್ಷಣ ಸಮಾಜದ ಎಲ್ಲಾ ವರ್ಗಗಳಲ್ಲೂ ಸಿಗಬೇಕು.
2.           ಸಂಸ್ಕೃತಿ ಮತ್ತು ವಿಜ್ಞಾನದ  ಸರಿಯಾದ ಸಮನ್ವಯ ಶಿಕ್ಷಣ ವ್ಯವಸ್ಥೆಯೊಳಗಿರಬೇಕು.
3.           ದೇಶದ ಆಯಾಯ ಪ್ರದೇಶದ ಸಂಸ್ಕೃತಿಗೆ ಅನುಗುಣವಾಗಿ ಶಿಕ್ಷಕರು ಶಿಕ್ಷಣವನ್ನು ಕೊಡಬೇಕು.
4.           ಶಿಕ್ಷಣ ವ್ಯವಸ್ಥೆ ಸಮಾಜದೊಳಗೆ ಸ್ವಸ್ಥ, ಸುಂದರ ಮತ್ತು ಭಯ ಮುಕ್ತ ವಾತಾವರಣದ ನಿರ್ಮಾಣಕ್ಕೆ ಪೂರಕವಾಗಿರಬೇಕು.
5.           ಶಿಕ್ಷಣ ಹೆಚ್ಚು ಹೆಚ್ಚು ಸರಕಾರಿ ಪ್ರಾಯೋಜಕತ್ವದಲ್ಲೇ ದೊರಕಬೇಕು.


ಶ್ಯಾಮಾ ಪ್ರಸಾದ್ ಮುಖರ್ಜಿಯರ ಈ ನೀತಿಯನ್ನು, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವವರು ಅನುಷ್ಟಾನಕ್ಕೆ ತರುವ ಪ್ರಯತ್ನ ಮಾಡಿದರು. ಅವರು ವಿಶ್ವವಿಧ್ಯಾನಿಲಯದಲ್ಲಿ  ಪ್ರಾರಂಭಿಸದ ಅನೇಕ ವಿಷಯಗಳು ಮುಂದಿನ ದಿನಗಳಲ್ಲಿ ಪ್ರತ್ಯೇಕ ಶಿಕ್ಷಣ ಪ್ರಭೇದಗಳಾಗಿ ವಿಶ್ವವಿದ್ಯಾನಿಲಯಗಳಲ್ಲಿ ಬೋದಿಸಲ್ಪಡುತ್ತದೆ.  ವರ್ತಮಾನದ ಕೇಂದ್ರ ಸರ್ಕಾರ ರೂಪಿಸಿರುವ ‘ಹೊಸ ಶಿಕ್ಷಣ ನೀತಿ’ಯು ಕೂಡ ಶ್ಯಾಮಾ ಪ್ರಸಾದ ಮುಖರ್ಜಿವರ ಶಿಕ್ಷಣ ನೀತಿಯಂದ ಪ್ರೇರಣೆ ಪಡೆದಿದೆ.
 
ಕೋಲ್ಕತ್ತಾ ವಿಶ್ವವಿದ್ಯಾನಿಲಯದ ಅವರ ಅನುಭವ, ಅವರು ಮುಂದೆ ದೇಶದ ಕೈಗಾರಿಕೆ ಮತ್ತು ಸರಬರಾಜು ಮಂತ್ರಿಗಳಾಗಿ ಕಾರ್ಯನಿರ್ವಹಿಸುವಾಗ ಸಹಾಯಕ್ಕೆ ಬರುತ್ತದೆ. ಅವರು ತಮ್ಮ ಕಾರ್ಯಕಾಲದಲ್ಲಿ ವಿಶ್ವವಿದ್ಯಾನಿಲಯದಲ್ಲಿ ಪ್ರಾರಂಭಿಸಿದ ಅನೇಕ ವೃತ್ತಿಪರ ಶಿಕ್ಷಣ ಮಾದರಿಯಲ್ಲಿ ಕಲಿತವರೇ ದೇಶದ ಪ್ರಖ್ಯಾತ ಉದ್ದಿಮೆಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸುತ್ತಾರೆ. ಈ ಕಾರಣಕ್ಕೆ ಅವರಿಗೆ ಕೈಗಾರಿಕೆ ಮತ್ತು ಅವುಗಳ ಸವಾಲುಗಳನ್ನು ಆಧರಿಸಿ ಉದ್ದಿಮೆ ಮತ್ತು ಕಾರ್ಮಿಕರಿಬ್ಬರ ಹಿತವನ್ನೂ ಕಾಯುವ, ಅವರ ನಡುವೆ ಸಂಭವಿಸುತ್ತಿದ್ದ ಸಂಘರ್ಷಗಳನ್ನ ತಡೆದು, ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರದ ಜೊತೆಗೆ ಅವುಗಳ ಮೂಲವನ್ನು ಅರಿತು ಪರಹಾರ ಕಂಡುಕೊಳ್ಳುವುದು ಸುಲಭವಾಯಿತು. ಕೈಗಾರಿಕೆಗಳು ದೇಶದ ಅಭಿವೃದ್ದಿಗೆ ಮತ್ತು ಕೈಗಾರಿಕೆ ಬೇಕಿರುವ ವೃತ್ತಿ ಕೌಶಲ್ಯ ಹೊಂದಿರುವ, ನುರಿತ ತರಬೇತಿ ಪಡೆದಿರುವ ಕಾರ್ಮಿಕ ವರ್ಗದ ಪೂರೈಕೆಗೆ ಅಗತ್ಯವಿರುವ ದೂರಗಾಮಿ ಯೋಜನೆಗಳನ್ನು ರೂಪಿಸುವಲ್ಲಿ ಸಹಾಯ ಮಾಡಿತು. ಶ್ಯಾಮಾ ಪ್ರಸಾದ್
ಮುಖರ್ಜಿಯವರು ರಾಜಕಾರಣದ ಕಾರಣಕ್ಕೆ ಈ ದೇಶಕ್ಕೆ ಎಷ್ಟು ಪ್ರಸ್ತುತವೋ,  ಅವರು ಒಬ್ಬ ಶಿಕ್ಷಣ ತಜ್ಞನಾಗಿ, ಒಬ್ಬ ನುರಿತ ಆಡಳಿತಗಾರನಾಗಿ, ಒಬ್ಬ ಒಳ್ಳೆಯ ಸಮಾಜ ಚಿಂತಕನಾಗಿ, ಕೂಡ ನಮಗೆ ಇಂದಿಗೂ ಅಷ್ಟೇ ಪ್ರಸ್ತುತ.

10
ಮಾರ್ಚ್

ದಾಸ ಸಾಹಿತ್ಯ ಮಾರುವೇಷದ ಕಾರ್ಯಾಚರಣೆ – ಕನಕದಾಸ ಬಲೆಯೊಳಗೆ ಬಿದ್ದ ಮಿಕ !!!

– ಡಾ. ರೋಹಿಣಾಕ್ಷ ಶಿರ್ಲಾಲು
ಕನ್ನಡ ಉಪನ್ಯಾಸಕರು,ವಿವೇಕಾನಂದ ಕಾಲೇಜು, ಪುತ್ತೂರು

ನಮ್ಮ ಶಾಲಾ ಕಾಲೇಜು ಪಠ್ಯ ಪುಸ್ತಕಗಳು ಹೇಗಿರಬೇಕು ಎನ್ನುವ ಚರ್ಚೆ ಬಹುಕಾಲದಿಂದಲೂ ನಡೆದುಬಂದಿದೆ. ಶಿಕ್ಷಣ ತಜ್ಞರು ಶೈಕ್ಷಣಿಕ ತತ್ವಶಾಸ್ತ್ರದ ಹಿನ್ನೆಲೆಯಲ್ಲಿ , ವಿದ್ಯಾರ್ಥಿಗಳ ಮನೋಭಾವ, ಬದಲಾದ ಕಾಲಮಾನ, ಔದ್ಯೋಗಿಕ ಅವಕಾಶ ಇವೇ ಮೊದಲಾದ ಸಂಗತಿಗಳನ್ನು ಕಣ್ಮುಂದೆ ಇರಿಸಿಕೊಂಡು ಪಠ್ಯಗಳನ್ನು ಸಿದ್ಧ ಮಾಡಬೇಕಾಗುತ್ತದೆ. ಪ್ರಾಥಮಿಕ ಶಾಲಾ ಪಠ್ಯದಿಂದ ತೊಡಗಿ ಸ್ನಾತಕೋತ್ತರರ ಪದವಿಯಂತಹ ಉನ್ನತ ಶಿಕ್ಷಣದ ವರೆಗಿನ ಪಠ್ಯಗಳಿಗೂ ಅದರದ್ದೇ ಆದ ಉದ್ದೇಶ ಮತ್ತು ಗುರಿ ಇರುತ್ತದೆ. ಪಠ್ಯವೊಂದು ಅಂತಿಮವಾಗಿ ಓದುವ ವಿದ್ಯಾರ್ಥಿಗಳ ಆಸಕ್ತಿಯನ್ನು ಹೆಚ್ಚಿಸುವಂತೆಯೂ,ಕುತೂಹಲವನ್ನು ಬೆಳೆಸುವಂತೆಯೂ ಇರಬೇಕು ಎನ್ನುವುದರಲ್ಲಿ ಸಂಶಯವಿಲ್ಲ. ಪಠ್ಯವೊಂದನ್ನು ಓದಿದ ವಿದ್ಯಾರ್ಥಿಯು ಮುಂದೆ ಆ ವಿಷಯದಲ್ಲಿ ಇನ್ನಷ್ಟು ಸಂಗತಿಗಳನ್ನು ಆಸಕ್ತಿಯಿಂದ ಓದುವಂತೆ ಪ್ರೆರೇಪಿಸಬೇಕೇ ವಿನಃ ಅದು ಓದಿನ ಕೊನೆಯಾಗುವಂತೆ ಮಾಡಬಾರದು ಎನ್ನುವುದೂ ಸತ್ಯ. ವಿದ್ಯಾರ್ಥಿಗಳ ಆಲೋಚನೆಯನ್ನು ವಿಸ್ತರಿಸುವಲ್ಲಿ, ಮನಸ್ಸನ್ನು ಇನ್ನಷ್ಟು ಮುಕ್ತವಾಗಿ ಇರಿಸುವಲ್ಲಿ ಪೂರಕವಾಗಿರಬೇಕೇ ಹೊರತು ಅವರ ಆಲೋಚನೆಗಳಿಗೆ ಪೂರ್ಣವಿರಾಮ ಹಾಕಿ ಯಾರೋ ಹೇರಿದ ಚಿಂತನೆಯ ದಾಸ್ಯಕ್ಕೆ ತಳ್ಳಬಾರದು.

ಉದಾಹರಣೆಗೆ,ಪದವಿ ಹಂತದಲ್ಲಿ ಕನ್ನಡ ಸಾಹಿತ್ಯ ವಿಷಯವನ್ನು ಮೇಜರ್ ವಿಷಯವಾಗಿ ಆಯ್ದುಕೊಂಡ ವಿದ್ಯಾರ್ಥಿಗಳಿಗೆ ತಮ್ಮ ಮೂರು ವರ್ಷಗಳ ಪದವಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸುವಾಗ ಕನ್ನಡ ಸಾಹಿತ್ಯದ ವಿಸ್ತಾರ, ಆಳ ಅಗಲಗಳನ್ನು ಪರಿಚಯಿಸಿಕೊಳ್ಳುವಂತೆ ಪ್ರಾತಿನಿಧಿಕ ಪಠ್ಯಗಳನ್ನು ಅಭ್ಯಾಸಿಸಲಾಗುತ್ತದೆ. ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯದಲ್ಲಿ ಈ ವಿಷಯವನ್ನು ಅಭ್ಯಾಸ ಮಾಡಿದರೂ ಓದಿದ ಪ್ರಾತಿನಿಧಿಕ ಪಠ್ಯಗಳು ಬೇರೆ ಬೇರೆ ಯಾದರೂ ಅವುಗಳ ನಡುವೆ ಒಂದು ಸಾಮಾನ್ಯ ಸ್ವರೂಪ ಸಮಾನವಾಗಿರುತ್ತದೆ. ಇದಕ್ಕಾಗಿ ಈಗಾಗಲೇ ಒಪ್ಪಿತವಾದ ಮಾದರಿಯೂ ಇದೆ.

ಸಾಹಿತ್ಯ ಪಠ್ಯದ ಭಾಗವೇ ಆಗಿ ಸಾಹಿತ್ಯ ಚರಿತ್ರೆಯನ್ನೂ ಓದುವಾಗ ಈಗಾಗಲೇ ಪ್ರಾಜ್ಞರಿಂದ ರಚನೆಯಾದ ಸಾಹಿತ್ಯ ಚರಿತ್ರೆಯ ಸಂಗ್ರಹರೂಪವನ್ನು ಪಠ್ಯವಾಗಿ ನೀಡಲಾಗುತ್ತದೆ. ಪಠ್ಯ ಪುಸ್ತಕಗಳ ಸಂಪಾದಕರು ಬೇರೆ ಬೇರೆ ಸೆಮಿಸ್ಟರ್‍ಗಳಿಗೆ ಹಂಚಿಹೋಗುವಂತೆ ಹಳೆಗನ್ನಡ, ನಡುಗನ್ನಡ, ಹೊಸಗನ್ನಡದ ವಿವಿಧ ಪ್ರಕಾರ, ಸಾಹಿತ್ಯ ರೂಪಗಳ ಉಗಮ ವಿಕಾಸದ ಕುರಿತು ಚರಿತ್ರೆಯನ್ನು ಸಂಗ್ರಹಿಸಿ ನೀಡುತ್ತಾರೆ. ಆ ಮೂಲಕ ಭವಿಷ್ಯದಲ್ಲಿ ವಿದ್ಯಾಭ್ಯಾಸ ಮುಗಿಸಿ ಆಡಳಿತ ಸೇವೆಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳೂ ಸೇರಿದಂತೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳ್ಳಲು ರಾಜ್ಯಾದ್ಯಂತ ಒಂದೇ ಮಾದರಿಯ ಚರಿತ್ರೆಯ ಪಠ್ಯಗಳು ಅನುಕೂಲಕರವಾಗಿ ಒದಗಿ ಬರುತ್ತಿತ್ತು. ಸಾಹಿತ್ಯ ಚರಿತ್ರೆ ಎನ್ನುವುದು ವಸ್ತುನಿಷ್ಟವಾಗಿ ಅಧಿಕೃತ ದಾಖಲೆಗಳ ನೆರವಿನಿಂದ ರೂಪುಗೊಳ್ಳುವ ಒಂದು ಶಾಸ್ತ್ರ. ಹಲವು ಮಾದರಿಯ ಸಾಹಿತ್ಯ ಚರಿತ್ರೆ ಕೃತಿಗಳು ನಮ್ಮೆದುರಿಗಿದ್ದರೂ ವಿದ್ಯಾರ್ಥಿಗಳು ತರಗತಿ ಪಠ್ಯವಾಗಿ ಓದಬೇಕಾದ ಚರಿತ್ರೆಯಂತೂ ಅತಿಯಾದ ವಿಶ್ಲೇಷಣೆಯ ಭಾರದಿಂದ ಕುಸಿದು, ಲೇಖಕರ ಸೈದ್ಧಾಂತಿಕ ದೃಷ್ಟಿ ಧೋರಣೆಯಿಂದ ದಾರಿ ತಪ್ಪಿಸುವಂತಿರಬಾರದು. ವಿವಿಧ ಕಾಲಘಟ್ಟದ ಸಾಹಿತ್ಯ ಪ್ರಕಾರಗಳನ್ನು ಅವುಗಳ ಸಾಮಾನ್ಯ ಸ್ವರೂಪ, ಗುಣ ಲಕ್ಷಣ,ಸಾಹಿತ್ಯಿಕ ವೈಶಿಷ್ಟ್ಯ ಮತ್ತು ಆ ಕಾಲಘಟ್ಟದ ಒಂದಷ್ಟು ಮುಖ್ಯರಾದ ಕೃತಿಕಾರರ ಪರಿಚಯವನ್ನು ಇಲ್ಲಿ ನೀಡಬೇಕಾಗುತ್ತದೆ. ಇದು ಹೊಸದಾಗಿ ಓದಿಗೆ ಪ್ರವೇಶ ಮಾಡುತ್ತಿರುವ ವಿದ್ಯಾರ್ಥಿ ಯಾವುದೇ ಪೂರ್ವಾಗ್ರಹಗಳಿಲ್ಲದೆ, ತನ್ನದೇ ಅನುಭವ-ನಿಲುವುಗಳಿಂದ ಕೃತಿಗಳನ್ನು ಅಧ್ಯಯನ ಮಾಡಲು ಸಾದ್ಯವಾಗುತ್ತದೆ.ಈ ರೀತಿಯ ಅಭ್ಯಾಸ ನಡೆದಾಗ ಸಾಹಿತ್ಯದ ನಿಷ್ಪಕ್ಷಪಾತ ಗ್ರಹಿಕೆ ಮೌಲ್ಯಮಾಪನಕ್ಕೆ ಸಾದ್ಯವಾಗುತ್ತದೆ. ರಂ.ಶ್ರಿ.ಮುಗಳಿ, ಎಂ.ಎಂ.ಕಲ್ಬುರ್ಗಿ, ಕೀರ್ತಿನಾಥ ಕುರ್ತಕೋಟಿ,ಎಲ್.ಎಸ್.ಶೇಷಗಿರಿರಾವ್ ಮೊದಲಾದವರು ವೈಯಕ್ತಿಕವಾಗಿ, ಬೆಂಗಳೂರು, ಮೈಸೂರು ವಿ.ವಿ.ಗಳು ಸಾಹಿತ್ಯ ಚರಿತ್ರೆಯ ಹಲವು ಸಂಪುಟಗಳನ್ನು ಪ್ರಕಟಿಸಿದ್ದು ವಿದ್ಯಾರ್ಥಿಗಳ ಪಠ್ಯಕ್ಕೆ ಇವುಗಳನ್ನು ಆಕರವಾಗಿ ಬಳಸಿಕೊಳ್ಳಲಾಗುತ್ತಿತ್ತು.

ಮತ್ತಷ್ಟು ಓದು »

12
ಫೆಬ್ರ

ಸದ್ದಿಲ್ಲದೇ ಸ್ತ್ರೀ ಶಿಕ್ಷಣಕ್ಕೆ ನಾಂದಿ ಹಾಡಿದ ಹರಿಕಾರ – ಶ್ರೀ ಶಿವಕುಮಾರ ಸ್ವಾಮೀಜಿ.

– ಡಾ.ಸುದರ್ಶನ ಗುರುರಾಜರಾವ್

9e1bce87-ff5c-42f8-9dee-335621550861ಸರಿ ಸುಮಾರು ನೂರಾಹನ್ನೊಂದು ವರ್ಷಗಳ ಕಾಲ ದೇಶಸೇವೆಯೇ ಈಶಸೇವೆ ಎಂದೆನ್ನುತ್ತಾ, ಜನತೆಯಲ್ಲಿಯೇ ಜನಾರ್ದನನನ್ನು ಕಂಡು ನಮ್ಮನ್ನಗಲಿದ ಯುಗಪುರುಷ, ನಡೆದಾಡುವ ದೇವರೆಂದೇ ಜನಮಾನಸಗಳಲ್ಲಿ ನೆಲೆಯಾಗಿದ್ದ ಶ್ರೀ ಶಿವಕುಮಾರಸ್ವಾಮಿಗಳು ನಮ್ಮನ್ನು ತೊರೆದು ನೈತಿಕವಾಗಿ ದಿನೇ ದಿನೇ ಅಧೋಗತಿಗಿಳಿಯುತ್ತಿರುವ ನಮ್ಮ ಸಮಾಜವನ್ನು ಆ ಮೂಲಕವಾಗಿ ಸಾತ್ವಿಕ ಸಮುದಾಯವನ್ನು ಅನಾಥರನ್ನಾಗಿ ಮಾಡಿ ಹೋದದ್ದು ದುಃಖಕರವಾದ ಸಂಗತಿಯೇ ಸರಿ. ಕಾಲನ ಕರೆಗೆ ಓಗೊಡದವರಾರು?

ಸ್ವಾಮೀಜಿಗಳ ಬಗ್ಗೆ ಅವರು ಹಗಲಿರುಳು ದುಡಿದು ಕಾಯಾ ವಾಚಾ ಮನಸಾ ದೀನರ ಕರೆಗೆ ಓಗೊಟ್ಟದ್ದು, ಏನೂ ಇದ್ದಿಲ್ಲದ ಒಂದು ಬಿಡಿ ಮಠವನ್ನು ಬೃಹತ್ ಸಂಸ್ಥೆಯನ್ನಾಗಿ ಬೆಳೆಸಿದ್ದು, ಆ ಮೂಲಕವಾಗಿ ಲಕ್ಷಾಂತರ ಜೀವಗಳ ಅಭಿವೃದ್ಧಿಗೆ ಕಾರಣರಾದದ್ದು , ಜಾತ್ಯಾತೀತರೆಂದು ಕೊಚ್ಚಿಕೊಳ್ಳುವ ಸರಕಾರಗಳ ಅನೀತಿಯ ಕಾಕದೃಷ್ಟಿಗೆ ಬಿದ್ದು ಕಷ್ಟ ಅನುಭವಿಸಿದರೂ ಒಂದೇ ಒಂದು ಮಾತನಾಡದೆ ಮಠದ ಮಕ್ಕಳಿಗೆ ಅನ್ನಪೋಷಣೆ ವಿದ್ಯಾದಾನಗಳನ್ನು ಅವಿರತವಾಗಿ ಮುಂದುವರಿಸಿದ್ದು ಎಲ್ಲವನ್ನು ಕೇಳಿ, ಓದಿ ತಿಳಿದಿದ್ದೇವೆ. ಇವೆಲ್ಲದರ ನಡುವೆ ತುಮಕೂರಿನ ಆಸುಪಾಸಿನಲ್ಲಿ ನಾನಾ ಕಾರಣಗಳಿಗೆ ವಿದ್ಯಾಭ್ಯಾಸಕ್ಕೆ ಅವಕಾಶವಿಲ್ಲದ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಟ್ಟ ಸಮಾನತೆಯ ಹರಿಕಾರ ಶ್ರೀ ಸ್ವಾಮೀಜಿಗಳು ಎಂಬುದು ಬಹುತೇಕರಿಗೆ ತಿಳಿದಿಲ್ಲದ ವಿಚಾರ.

ಸಿದ್ಧಗಂಗಾ ಮಠದ ಶಾಲೆಯ ಮೊತ್ತ ಮೊದಲ ವಿದ್ಯಾರ್ಥಿನಿಯಾದ ನನ್ನ ತಾಯಿಯ ಅನುಭವದ ಪರಿಚಯ ಈ ಲೇಖನದ ಉದ್ದೇಶ. ಇದನ್ನು ಹೇಳುವಾಗ, ಬರೆಯುವಾಗ ಭಕ್ತಿ, ಕೃತಜ್ಞತೆಗಳು ಎದೆತುಂಬಿ ನಿಂತಿವೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೇ. ಮತ್ತಷ್ಟು ಓದು »

4
ಫೆಬ್ರ

ತೊತ್ತೋಚಾನ್ (ಪುಸ್ತಕ ಪರಿಚಯ)

– ವಲವಿ ವಿಜಯಪುರ

scan0015“ಕನಸುಗಳನ್ನು ಕಾಣಬೇಕು. ಉನ್ನತೋನ್ನತವಾದ ಹಗಲು ಕನಸು ಕಾಣಿರಿ.”
ಇದು ಭಾರತದ ಮಾಜಿ ರಾಷ್ಟ್ರಪತಿ, ಕ್ಷಿಪಣಿ ಜನಕ ದಿ| ಶ್ರೀ ಅಬ್ದುಲ್ ಕಲಾಂ ಅವರ ಅಮೃತ ನುಡಿ.

ಹೌದು, ಕನಸು ಕಾಣಬೇಕು. ಉನ್ನತೋನ್ನತವಾದ ಕನಸನ್ನೇ ಕಾಣಬೇಕು. ಮತ್ತು ಅದನ್ನು ನನಸಾಗಿಸುವತ್ತ ಸತತ ಪ್ರಯತ್ನಿಸಬೇಕು. ಅಂಥ ಉನ್ನತ ಕನಸನ್ನು ಕಂಡು ಅದನ್ನು ನನಸಾಗಿಸಲು ಹಗಲಿರುಳು ಶ್ರಮಿಸಿದ, ಖ್ಯಾತ ಶಿಕ್ಷಣ ಪ್ರೇಮಿ, ಮಕ್ಕಳ ಪ್ರೇಮಿ, ಪ್ರಯೋಗಶೀಲ ವ್ಯಕ್ತಿತ್ವದ ಶ್ರೀ ಸೋಸಾಕು ಕೊಬಾಯಾಶಿ ಅವರ ಪ್ರಾಯೋಗಿಕ ಶಾಲೆ ತೊಮೆಯೆ ಗಾಕುಯೆನ್ ಹೇಗಿತ್ತು ಎಂದು ತಿಳಿಸುವ ಪ್ರಯತ್ನವನ್ನು ಆ ಶಾಲೆಯ ಹಾಗೂ ಕೊಬಾಯಾಶಿ ಅವರ ಪ್ರಯೋಗದ ನೇರ ಭಾಗೀದಾರಳಾದ ತೊಮೆಯೆ ಶಾಲೆಯ ಮಾಜಿ ವಿದ್ಯಾರ್ಥಿನಿ ಶ್ರೀಮತಿ ತೆತ್ಸುಕೋ ಕುರೊಯಾನಾಗಿ ಬರೆದ ಪುಸ್ತಕವೇ ಈ ‘ತೊತ್ತೋ ಚಾನ್’ ಮತ್ತಷ್ಟು ಓದು »

1
ಫೆಬ್ರ

ನಮೋ ಶಿವಕುಮಾರ ಸ್ವಾಮಿ: ಶರಣಂ ಗಚ್ಛಾಮಿ!

~ ತುರುವೇಕೆರೆ ಪ್ರಸಾದ್
ಗಾಂಧಿನಗರ
ತುರುವೇಕೆರೆ-572227

9e1bce87-ff5c-42f8-9dee-335621550861ಸಿದ್ಧಗಂಗೆಯ ಐಸಿರಿ, ತಾನಾಗಬಲ್ಲನಿಲ್ಲಿ ನರನು ನಾರಾಯಣನು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ಶ್ರೇಷ್ಠ ನರಹರಿ, ಸಿದ್ಧಗಂಗೆಯ ಸಾಧನೆಯ ಉತ್ತುಂಗದ ಗಿರಿ ಡಾ.ಶ್ರೀ ಶಿವಕುಮಾರಸ್ವಾಮೀಜಿ ಭೌತಿಕವಾಗಿ ನಮ್ಮನ್ನೆಲ್ಲಾ ಅಗಲಿ ಹೋಗಿದ್ದಾರೆ. ಸುಮಾರು 9 ದಶಕಗಳ ಕಾಲ ಅವರು ಮನುಕುಲಕ್ಕೆ ಸಲ್ಲಿಸಿದ ಸೇವೆ ಅನುಪಮವಾದದು, ಅನನ್ಯವಾದದು, ಮಾನವೀಯತೆಯ ಇತಿಹಾಸದಲ್ಲಿ ಎಂದೆಂದಿಗೂ ಅಜರಾಮರವಾಗಿ ‘ನಭೂತೋ ನಭವಿಷ್ಯತ್’ ಎನ್ನುವಂತೆ ದಾಖಲಾಗುವಂತಾದ್ದು. ಶಾಂತಿ ನೆಮ್ಮದಿ ಬಯಸಿದವನಿಗೆ ದಿವ್ಯ ದರ್ಶನ, ನರಳುತ್ತಾ ಬಂದವನಿಗೆ ಮಾನವೀಯ ಸೇವೆಯ ದಿಗ್ದರ್ಶನ, ಹಸಿದವನಿಗೆ ಅನ್ನ, ಅನಾಥನಿಗೆ ಪ್ರೀತಿಯ ಸಿಂಚನ, ಅರಿವಿನ ಜೋಳಿಗೆ ಹಿಡಿದು ಬಂದವನಿಗೆ ಜ್ಞಾನ- ಸಿದ್ಧಗಂಗಾ ಸ್ವಾಮೀಜಿಯ ಬಹುಮುಖಿ ದಾಸೋಹದ ವೈಖರಿಯೇ ಅನನ್ಯ! ಮತ್ತಷ್ಟು ಓದು »

12
ನವೆಂ

ರಾಜೀವ್ ಮಲ್ಹೋತ್ರ ಸಂವಾದ : ಭಾಗ ೨

ಆಂಗ್ಲಮೂಲ : ಶ್ರೀ ರಾಜೀವ್ ಮಲ್ಹೋತ್ರ                                              

ಕನ್ನಡ ಅನುವಾದ : ಶ್ರೀ ಹುಲ್ಲುಮನೆ ಶ್ರೀಧರ

ರಾಜೀವ್ ಮಲ್ಹೋತ್ರ ಸಂವಾದ : ಅಯೋಧ್ಯೆ,ಸತಿ ಪದ್ಧತಿ ಮತ್ತಿತರ ವಿಷಯಗಳು – 1

ಉದಾರವಾದಿಗಳು ಮತ್ತು ಕ್ರಿಶ್ಚಿಯನ್ ಮತಕ್ಕೆ ಸೇರಿಸಿಕೊಳ್ಳುವ/ ಪ್ರಚಾರಕರ (ಇವಾನ್ಜಲಿಸ್ಟ್‌ಗಳ) ನಡುವೆ ಹೊಂದಾಣಿಕೆ:

ಬ್ರಿಟಿಷ್ ಸಂಸತ್ತಿನಲ್ಲಿ ಎಡ್ವಿನ್ ಬೆರ್ಕ್ ಸ್ಪಷ್ಟವಾಗಿ ಹೇಳಿದ್ದಿದೆ- ’ಓಕ್ ಮರಗಳನ್ನು ಥೇಮ್ಸ್ ನದಿಯ ದಂಡೆಯಿಂದ ತೆಗೆದುಕೊಂಡು ಹೋಗಿ ಗಂಗಾನದಿಯ ದಂಡೆಯುದ್ದಕ್ಕೂ ನೆಡಲಾಗದು’ ಎಂದು. ಭಾರತೀಯ ಸಂಸ್ಥಾನಗಳು ಭಾರತೀಯರ ಅಗತ್ಯಗಳನ್ನು ಪೂರೈಸುತ್ತಿದ್ದವು. ಆ ಸಂಸ್ಥೆಗಳಲ್ಲಿ ಪುನರುಜ್ಜೀವನದ ಅಗತ್ಯವಿತ್ತೇ ವಿನಃ ಅವುಗಳನ್ನು ಬದಲಿಸುವ ಅಗತ್ಯವಿರಲಿಲ್ಲ. ಆಂಗ್ಲರಲ್ಲಿ, ಸಂಸತ್ತಿನಲ್ಲಿ ಹಾಗೂ ಭಾರತದ ಆಂಗ್ಲ ಅಧಿಕಾರಿಗಳಲ್ಲಿ ಒಂದು ಬಲವಾದ ಗುಂಪಿದ್ದು ಅವರು ಭಾರತೀಯ ಸಂಸ್ಥಾನಗಳನ್ನು ಮರುನಿರ್ಮಾಣ ಮಾಡಲಿಚ್ಛಿಸಿದ್ದರು. ನಮ್ಮ ಕುತೂಹಲಕ್ಕೆ ’ಸಂಪ್ರದಾಯವಾದಿಗಳು’ (ಕನ್ಸರ್ವೇಟಿವ್‌ಗಳು) ಗಂಭೀರತೆಯಿಂದ ಭಾರತೀಯ ಸಂಸ್ಥಾನಗಳನ್ನು ಹೇಗಿದ್ದವೋ ಹಾಗೆಯೇ ಬಿಡಬೇಕೆನ್ನುತ್ತಿದ್ದರು. ’ಆಂಗ್ಲ ಉದಾರವಾದಿಗಳು’ ಭಾರತದ ಸಂಸ್ಥಾನಗಳನ್ನು ಗೊಂದಲಮಯವಾಗಿಸಲು/ ಅವ್ಯವಸ್ಥಿತಗೊಳಿಸಲು ಇಚ್ಛಿಸಿದ್ದರು. ಮತ್ತಷ್ಟು ಓದು »

26
ಆಕ್ಟೋ

ಉತ್ತರ ಸಿಗದ ನನ್ನ ಪ್ರಶ್ನೆಗಳು

– ವಿದ್ಯಾ ಕುಲಕರ್ಣಿ

ಜಿಜ್ಞಾಸು, ಪ್ರಬುದ್ಧರ ಚಿಂತನೆ, ಕುಲುಮೆ, ನಿಲುಮೆ ಈ ಗುಂಪುಗಳಲ್ಲಿ ನಾನು ಕೆಲವು ಪ್ರಶ್ನೆಗಳನ್ನು ಕೇಳುತ್ತಲೇ ಬಂದಿದ್ದೇನೆ. ಅವುಗಳಿಗೆ ಯಾರೂ ಸಮರ್ಪಕ ಉತ್ತರ ಕೊಡದೇ ಪುನಃ ಬೇರೆ ಬೇರೆ ಪ್ರಶ್ನೆ ಕೇಳುತ್ತಲೇ ಹೋಗುತ್ತಾರೆ.

ನನ್ನ ಪ್ರಶ್ನೆಗಳಿಗೆ ಉತ್ತರಿಸಿ ಎಂದರೆ “ಉತ್ತರಿಸಿದ್ದೇನೆ. ನಿಮಗೆ ತಿಳಿಯದಿದ್ದರೆ ಏನು ಮಾಡಲಿ??” “ನಿಮಗೆ ಗ್ರಹಿಸುವ ಶಕ್ತಿ ಇಲ್ಲ ಏನು ಮಾಡಲಿ?” ಇತ್ಯಾದಿ ಹಾರಿಕೆಯ ಉತ್ತರ ಕೊಡುತ್ತಾರೆ. ಹಾಗಿದ್ದರೆ ನನ್ನ ಪ್ರಶ್ನೆಗಳಾದರೂ ಏನು??

ಪುನಃ ಅದೇ ಪ್ರಶ್ನೆಗಳನ್ನು ಕ್ರೋಢೀಕರಿಸಿ ನಂಬರ್ ಕೊಟ್ಟು ಕೇಳುತ್ತಿದ್ದೇನೆ. ಈಗಲಾದರೂ ಉತ್ತರಿಸುವ (ನಂಬರ್ ಪ್ರಕಾರ ಉತ್ತರಿಸುವ) ಸೌಜನ್ಯ ಯಾರಾದರೂ  ತೋರಿಸುತ್ತೀರಾ?? ಮತ್ತಷ್ಟು ಓದು »

9
ಆಕ್ಟೋ

ಶಿಕ್ಷಣ ತಜ್ಞರಾಗಿ ಡಾ. ಶಿವರಾಮ ಕಾರಂತರು

ಶ್ರೀಮತಿ ತುಳಸಿ ಶಿರ್ಲಾಲು
ಉಪನ್ಯಾಸಕರು
ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್ (ಬಿ.ಎಡ್)
ತೆಂಕಿಲ , ಪುತ್ತೂರು. ದ.ಕ.

ಡಾ. ಶಿವರಾಮ ಕಾರಂತರು ತಮ್ಮ ಮಾತು – ಬರವಣಿಗೆಗಳೆರಡರಲ್ಲೂ ದಶಕಗಳುದ್ದಕ್ಕೂ ಶಿಕ್ಷಣ ಎಂದರೆ ಏನು? ಯಾವುದು ಶಿಕ್ಷಣ? ಶಿಕ್ಷಣ ಹೇಗಿರಬೇಕು? ತರಗತಿಯ ಒಳಗಿನ ಶಿಕ್ಷಣ ಮತ್ತು ನಿತ್ಯ ಜೀವನದಲ್ಲಿ ಉಪಯೋಗ ಮೊದಲಾದ ವಿಷಯಗಳನ್ನು ಮತ್ತೆ ಮತ್ತೆ ಪರಿಷ್ಕರಿಸುತ್ತಾ, ಸ್ಪಷ್ಟಗೊಳಿಸುತ್ತಾ, ಪುನರ್ ರೂಪಿಸುತ್ತಿದ್ದರು. “ಓದು ಯಾಕೆ ಬೇಕು, ಬರಹ ಯಾಕೆ ಬೇಕು ಎಂದು ತಿಳಿಯದ ಮಕ್ಕಳನ್ನು ಕುಳ್ಳಿರಿಸಿಕೊಂಡು ಓದಿನಲ್ಲಿ ಸ್ವಾರಸ್ಯವಿದೆ, ಬರಹದಿಂದ ನಮ್ಮ ಮನಸ್ಸನ್ನು ತೋಡಿಕೊಳ್ಳುವುದಕ್ಕೆ ಬರುತ್ತದೆ ಎಂಬ ಉದ್ದೇಶ ಸಾಧಿಸಬೇಕು. ಇಲ್ಲಿ ಕಲಿತ ಗಣಿತ, ನಾಳೆ ನಡೆಸುವ ವಿವಿಧ ವ್ಯವಹಾರಗಳಲ್ಲಿ ಅನಿವಾರ್ಯ ಎಂಬ ಭಾವನೆಗೆ ಪೀಠಿಕೆ ಹಾಕಬೇಕು. ಮಕ್ಕಳಿಗೆ ಕಲಿಸುವ ವಿಜ್ಞಾನ, ಸಮಾಜಶಾಸ್ತ್ರ, ಚರಿತ್ರೆ ಭೂಗೋಳದಂತಹ ವಿಷಯಗಳು ಕೂಡಾ ನಾಳಿನ ಬುದ್ದಿಯ ಬೆಳವಣಿಗೆಗೆ, ಜ್ಞಾನ ಸಂಪಾದನೆಗೆ ಅವಶ್ಯಕವಾದ ತೃಷೆಯ ರೂಪವನ್ನು ಹೊಂದಿದಾಗ ಮಾತ್ರವೇ ಪ್ರಾಥಮಿಕ ಹಂತದಲ್ಲಿ ನಾವು ಕೊಡುವ ಸರಳ ಪಾಠಗಳು ತಮ್ಮ ಗುರಿಯನ್ನು ಸಾಧಿಸಬಹುದು ಇಲ್ಲವಾದರೆ ಇಲ್ಲ” ಎನ್ನುತ್ತಾರೆ. ಈ ಮಾತುಗಳೇ ಕಾರಂತರು ಶಿಕ್ಷಣವನ್ನು ಗ್ರಹಸಿಕೊಂಡ ಅವರ ಉದ್ದೇಶವನ್ನು ತಿಳಿದುಕೊಂಡ ಸೃಜನಾತ್ಮಕ ನೆಲೆಗೆ ಸಾಕ್ಷಿಯಾಗಿವೆ. ಮತ್ತಷ್ಟು ಓದು »

20
ಫೆಬ್ರ

ಆಚರಣೆ ಮತ್ತು ನಂಬಿಕೆಗಳ ಟೀಕೆ: ಅಂದು ಹಾಗೂ ಇಂದು ( ಭಾಗ – ೩ )

– ವಿನಾಯಕ ವಿಶ್ವನಾಥ ಹಂಪಿಹೊಳಿ

muslim-talakಮುಸ್ಲಿಂ ಪರಂಪರೆಗಳಲ್ಲಿ ಮೂರು ಬಾರಿ ತಲಾಕ್ ಹೇಳಿ ಇದ್ದಕ್ಕಿದ್ದಂತೇ ಹೆಂಡತಿಯನ್ನು ತ್ಯಜಿಸುವ ಕ್ರಿಯೆ ಭಾರತೀಯರಿಗೆ ಅನೈತಿಕವಾಗಿ ಕಾಣಲು ಆ ಕ್ರಿಯೆಯಿಂದ ಒಂದು ಹೆಣ್ಣಿನ ಮನಸ್ಸಿಗೆ ಉಂಟಾಗುವ ನೋವಷ್ಟೇ ಸಾಕಾಗಿರುತ್ತದೆ. ಆದರೆ ನಾವು ಆ ಕ್ರಿಯೆಯನ್ನು ಸಮಾನತೆಯ ತತ್ತ್ವದ ಉಲ್ಲಂಘನೆಯಾಗಿ ವ್ಯಾಖ್ಯಾನಿಸುವರ ಮೂಲಕ ಟೀಕಿಸುತ್ತೇವೆ. ಮೂಲತಃ ಪ್ರೊಟೆಸ್ಟಂಟ್ ಕ್ರಿಶ್ಚಿಯನ್ ಪರಿಕಲ್ಪನೆಯಿಂದ ಬಂದ ಈ ಸಮಾನತೆಯ ಪರಿಕಲ್ಪನೆಯು ಭಾರತೀಯ ಮುಸ್ಲಿಮರಿಗೆ ಅರ್ಥವಾಗುವುದಿಲ್ಲ. ಹೀಗಾಗಿ ಈ ವಿರೋಧವನ್ನು ಮುಸ್ಲಿಮರು ಇಸ್ಲಾಂ ವೈಯಕ್ತಿಕ ಕಾನೂನಿನ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಅನುಷ್ಠಾನವಾಗಿ ನೋಡುತ್ತಾರೆ. ಲಿಬರಲ್ ವಿಚಾರವಂತರು ಮುಸ್ಲಿಮರ ನಿಲುವನ್ನು ಸಮಾನತೆಯ ತತ್ತ್ವದ ಉಲ್ಲಂಘನೆಯಾಗಿ ನೋಡುತ್ತಾರೆ. ನಾವು ನಮ್ಮ ಸಂಪ್ರದಾಯಗಳ ಕುರಿತು ಹಿಂದಿನಿಂದ ಬೆಳೆದು ಬಂದ ಟೀಕೆಗಳ ಪರಂಪರೆಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕು, ಈಗ ಬರುತ್ತಿರುವ ಹೊಸ ಟೀಕೆಗಳನ್ನು ಹೇಗೆ ಸ್ವೀಕರಿಸಬೇಕು ಹಾಗೂ ಪ್ರತಿಕ್ರಿಯಿಸಬೇಕು ಎನ್ನುವುದರ ಸ್ಪಷ್ಟತೆಯನ್ನು ನಾವು ಕಂಡುಕೊಳ್ಳಬೇಕಿದೆ. ಮತ್ತಷ್ಟು ಓದು »

16
ಫೆಬ್ರ

ಎತ್ತ ಸಾಗುತ್ತಿದೆ ಕನ್ನಡದ ಬೌದ್ಧಿಕ ಜಗತ್ತು..?

– ಡಾ. ಪ್ರವೀಣ ಟಿ. ಎಲ್
ಉಪನ್ಯಾಸಕರು
ಕುವೆಂಪು ವಿಶ್ವವಿದ್ಯಾನಿಲಯ

downloadಬೌದ್ಧಿಕವಲಯದಲ್ಲಿ ಮುಕ್ತ ಸಂವಾದಗಳು ಜ್ಞಾನದ ಬೆಳವಣಿಗೆಯ ದೃಷ್ಟಿಯಿಂದ ಅತ್ಯಂತ ಮುಖ್ಯ. ಅವುಗಳು ಹೆಚ್ಚೆಚ್ಚು ನಡೆಯಲೆಂದೇ ಯುಜಿಸಿಯಂತಹ ಸಂಸ್ಥೆಗಳು, ಸರ್ಕಾರಗಳು ಕೋಟಿಗಟ್ಟಲೇ ಹಣವನ್ನು ನೀಡುತ್ತವೆ. ವಿದ್ಯಾರ್ಥಿಗಳ ನಡುವೆ, ಚಿಂತಕರ ನಡುವೆ ಸಂವಾದಗಳು, ಚರ್ಚೆಗಳು ನಡೆದರೆ ಮಾತ್ರವೇ ತಮ್ಮ ತಿಳುವಳಿಕೆಯ ಮಿತಿಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಹಾಗೂ ಹೊಸ ಹೊಸ ಚಿಂತನೆಯ ಉಗಮಕ್ಕೆ ದಾರಿಯಾಗಲಿವೆ. ಆಗ ಅಲ್ಲಿನ ಬೌದ್ಧಿಕ ವಲಯವು ಹೆಚ್ಚು ಕ್ರಿಯಾಶೀಲವಾಗಿದೆ ಎಂದು ತೀರ್ಮಾನಿಸಬಹುದು. ಕರ್ನಾಟಕದ ಸಂದರ್ಭದಲ್ಲಿ ಬುದ್ಧಿಜೀವಿಗಳೆಂದರೆ ಸಾಹಿತಿಗಳು ಎಂಬಂತಾಗಿದೆ. ಕನ್ನಡ ಬೌದ್ಧಿಕ ವಲಯದಲ್ಲಿ ಇಂತಹ ಸಂವಾದಗಳು ನಡೆಯುತ್ತಿವೆಯೇ? ಎಂಬ ಮುಖ್ಯ ಪ್ರಶ್ನೆಯೊಂದನ್ನು ಕೇಳಿಕೊಳ್ಳಬೇಕಾದ ಸುಸಂದರ್ಭದಲ್ಲಿದ್ದೇವೆ. ಮತ್ತಷ್ಟು ಓದು »