ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 20, 2017

2

ಆಚರಣೆ ಮತ್ತು ನಂಬಿಕೆಗಳ ಟೀಕೆ: ಅಂದು ಹಾಗೂ ಇಂದು ( ಭಾಗ – ೩ )

‍ನಿಲುಮೆ ಮೂಲಕ

– ವಿನಾಯಕ ವಿಶ್ವನಾಥ ಹಂಪಿಹೊಳಿ

muslim-talakಮುಸ್ಲಿಂ ಪರಂಪರೆಗಳಲ್ಲಿ ಮೂರು ಬಾರಿ ತಲಾಕ್ ಹೇಳಿ ಇದ್ದಕ್ಕಿದ್ದಂತೇ ಹೆಂಡತಿಯನ್ನು ತ್ಯಜಿಸುವ ಕ್ರಿಯೆ ಭಾರತೀಯರಿಗೆ ಅನೈತಿಕವಾಗಿ ಕಾಣಲು ಆ ಕ್ರಿಯೆಯಿಂದ ಒಂದು ಹೆಣ್ಣಿನ ಮನಸ್ಸಿಗೆ ಉಂಟಾಗುವ ನೋವಷ್ಟೇ ಸಾಕಾಗಿರುತ್ತದೆ. ಆದರೆ ನಾವು ಆ ಕ್ರಿಯೆಯನ್ನು ಸಮಾನತೆಯ ತತ್ತ್ವದ ಉಲ್ಲಂಘನೆಯಾಗಿ ವ್ಯಾಖ್ಯಾನಿಸುವರ ಮೂಲಕ ಟೀಕಿಸುತ್ತೇವೆ. ಮೂಲತಃ ಪ್ರೊಟೆಸ್ಟಂಟ್ ಕ್ರಿಶ್ಚಿಯನ್ ಪರಿಕಲ್ಪನೆಯಿಂದ ಬಂದ ಈ ಸಮಾನತೆಯ ಪರಿಕಲ್ಪನೆಯು ಭಾರತೀಯ ಮುಸ್ಲಿಮರಿಗೆ ಅರ್ಥವಾಗುವುದಿಲ್ಲ. ಹೀಗಾಗಿ ಈ ವಿರೋಧವನ್ನು ಮುಸ್ಲಿಮರು ಇಸ್ಲಾಂ ವೈಯಕ್ತಿಕ ಕಾನೂನಿನ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಅನುಷ್ಠಾನವಾಗಿ ನೋಡುತ್ತಾರೆ. ಲಿಬರಲ್ ವಿಚಾರವಂತರು ಮುಸ್ಲಿಮರ ನಿಲುವನ್ನು ಸಮಾನತೆಯ ತತ್ತ್ವದ ಉಲ್ಲಂಘನೆಯಾಗಿ ನೋಡುತ್ತಾರೆ. ನಾವು ನಮ್ಮ ಸಂಪ್ರದಾಯಗಳ ಕುರಿತು ಹಿಂದಿನಿಂದ ಬೆಳೆದು ಬಂದ ಟೀಕೆಗಳ ಪರಂಪರೆಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕು, ಈಗ ಬರುತ್ತಿರುವ ಹೊಸ ಟೀಕೆಗಳನ್ನು ಹೇಗೆ ಸ್ವೀಕರಿಸಬೇಕು ಹಾಗೂ ಪ್ರತಿಕ್ರಿಯಿಸಬೇಕು ಎನ್ನುವುದರ ಸ್ಪಷ್ಟತೆಯನ್ನು ನಾವು ಕಂಡುಕೊಳ್ಳಬೇಕಿದೆ.

ಕರ್ನಾಟಕದಲ್ಲಿ ಸಂಪ್ರದಾಯಗಳ ಪರಸ್ಪರ ಟೀಕೆಗಳ ಒಂದು ಶ್ರೀಮಂತ ಪರಂಪರೆಯೇ ಇದೆ. ಇಷ್ಟೆಲ್ಲ ವಿದೇಶೀ ಆಕ್ರಮಣಕ್ಕೊಳಗಾದರೂ ಸಂಪ್ರದಾಯಗಳು ಅಳಿಯದೇ ಉಳಿಯುವಲ್ಲಿ ಈ ಶ್ರೀಮಂತ ಚರ್ಚೆಯ ಪರಂಪರೆ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದೆ. ಆಗಿನ ಸಂಪ್ರದಾಯಗಳು ತಾವು ಇಟ್ಟುಕೊಂಡು ಬಂದ ಪ್ರಮಾಣಗಳ ಆಧಾರದಲ್ಲಿ ಚರ್ಚೆ ನಡೆಸುತ್ತ ಬಂದರು. ಈಗ ಆಧುನಿಕ ಅಧ್ಯಯನ ಪ್ರಕಾರದಲ್ಲಿ ನಮ್ಮ ಸಂಪ್ರದಾಯಗಳನ್ನು ಸಮಂಜಸವಾಗಿ ಅರ್ಥೈಸಿಕೊಳ್ಳದ ಹೊರತು ನಾವು ಈ ಚರ್ಚೆಯನ್ನು ಮುನ್ನಡೆಸಲು ಸಾಧ್ಯವಿಲ್ಲ. ಈ ದಿಕ್ಕಿನಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕು. ಮುಸ್ಲಿಂ ರಾಜರು ಭಾರತದ ವಿವಿಧ ಭಾಗಗಳನ್ನು ಆಕ್ರಮಿಸಿಕೊಂಡು ಸಂಪ್ರದಾಯಗಳೊಡನೆ ಬೆರೆಯಬೇಕಾದ ಸಂದರ್ಭ ಬಂದಾಗಲೂ ಇಲ್ಲಿನ ಚರ್ಚೆಯ ಪದ್ಧತಿಯಂದ ತಪ್ಪಿಸಿಕೊಳ್ಳಲು ಬಹುಶಃ ಸಾಧ್ಯವಾಗಿರಲಿಕ್ಕಿಲ್ಲ. ಇಸ್ಲಾಂ ಹಾಗೂ ಕ್ರೈಸ್ತರು ಉಳಿದ ಪ್ರದೇಶಗಳಲ್ಲಿ ಹೋಗಿ, ಅಲ್ಲಿನ ಮೂಲಸಂಸ್ಕೃತಿಯನ್ನು ನಿರ್ದಾಕ್ಷಿಣ್ಯವಾಗಿ ನಾಶ ಮಾಡಿದ ಹಾಗೆ, ಇಲ್ಲಿ ನಾಶ ಮಾಡಲು ಸಾಧ್ಯವಾಗದೇ ಹೋಗಿರುವದಕ್ಕೆ ಅಥವಾ ಇಲ್ಲಿನ ಸಂಪ್ರದಾಯಗಳನ್ನು ನಾಶ ಮಾಡುವ ಬದಲು ಅವುಗಳೊಡನೆ ಸಹಕಾರದಿಂದ ವಾಸಿಸುವದೇ ಹೆಚ್ಚು ಶ್ರೇಯಸ್ಕರವೆಂದು ಭಾವಿಸಬೇಕಾದರೆ, ಅದಕ್ಕೆ ನಮ್ಮ ಸಂಪ್ರದಾಯಗಳ ಒಂದು ವಿಶಿಷ್ಟ ಗುಣಲಕ್ಷಣವೇ ಕಾರಣವಾಗಿರಬಹುದು. ಆಗ ಸಹಜವಾಗಿ ಇಲ್ಲಿನ ಸಂಪ್ರದಾಯಗಳ ಚರ್ಚೆಯಲ್ಲಿ ಅವರೂ ಭಾಗವಹಿಸಿರಬಹುದು. ಹೀಗಾಗಿ ದೀನ್-ಎ-ಇಲಾಹಿ, ಸೂಫಿ ಮುಂತಾದವುಗಳು ಬೆಳದಿರಬಹುದು. ಇದರ ಕುರಿತು ಇನ್ನೂ ಅಧ್ಯಯನವನ್ನು ಮಾಡಬೇಕಿದೆ.

ನಮ್ಮ ಸಂಪ್ರದಾಯಗಳ ಕುರಿತು ಬರುತ್ತಿರುವ ಟೀಕೆಗಳನ್ನು ಯಾವುದರ ಉಲ್ಲಂಘನೆ ಅಥವಾ ಅನುಷ್ಠಾನವೆಂದು ವ್ಯಾಖ್ಯಾನಿಸಿ ವಾದಿಸುತ್ತಿದ್ದಾರೆ ಎಂಬುದನ್ನು ಅರಿತು ಅದು ನಮ್ಮ ಸಮಾಜದ ವಿವರಣೆಯಲ್ಲಿ ಏಕೆ ಅಪ್ರಸ್ತುತ ಎನ್ನುವದನ್ನು ತಿಳಿಸಬೇಕು. ಉದಾಹರಣೆಗೆ ಒಬ್ಬ ವಿದೇಶೀ ಪ್ರವಾಸಿಗ ಒಂದು ಸಾವಿರ ಮನೆಗಳಿಗೆ ಭೇಟಿ ಕೊಡುತ್ತಾನೆ. ಆಗ ಬಹುತೇಕ ಎಲ್ಲ ಮನೆಗಳಲ್ಲಿ ಹೆಂಡತಿಯೇ ಅಡುಗೆ ಮಾಡಿ ಬಡಿಸುವದನ್ನು ದಾಖಲಿಸುತ್ತಾನೆ. ಆಮೇಲೆ ತನ್ನ ಅನುಭವವನ್ನು ವಿವರಿಸುವಾಗ ಭಾರತೀಯ ಮನೆಗಳಲ್ಲಿ ಹೆಂಡತಿ ಎರಡನೇ ದರ್ಜೆಯ ಸದಸ್ಯೆ ಎಂದು ಹೇಳುತ್ತಾನೆ. ಈ ವಾದವನ್ನ ನಾವು ಹೇಗೆ ಎದುರಿಸಬೇಕು? ಅದಕ್ಕಿರುವದು ಒಂದೇ ವಿಧಾನ. ಆತ ಹೆಂಡತಿಯಷ್ಟೇ ಅಡುಗೆ ಮಾಡುವ ಕ್ರಿಯೆಯನ್ನು, ಎರಡನೇ ದರ್ಜೆಯ ತತ್ತ್ವದ ಅನುಷ್ಠಾನ ಎಂದು ವಿಶ್ಲೇಷಿಸಲು ಕಾರಣವೇನೆಂಬುದನ್ನು ಅರಿತು, ಆ ಕಾರಣವು ನಮಗೆ ಪ್ರಸ್ತುತವಲ್ಲ ಎನ್ನುವದನ್ನು ಸಾಬೀತುಪಡಿಸಬೇಕು.

ಮೇಲ್ನೋಟಕ್ಕೆ ನಮ್ಮ ಸಂಪ್ರದಾಯಗಳ ಅವಹೇಳನೆಯಂತೆ ಕಾಣುವ ಕ್ರಿಯೆಗಳಿಗೆ ಹೇಗೆ ಪ್ರತಿಕ್ರಿಯಿಸಬಹುದು? ಉದಾಹರಣೆಗೆ ಸೀತೆ ಹಾಗೂ ಹನುಮಂತನ ನಗ್ನಚಿತ್ರವು ನಮ್ಮ ನಂಬಿಕೆಯನ್ನು ಕೆರಳಿಸುವ ಉದ್ದೇಶಕ್ಕಾಗಿ ಎಂದುಕೊಂಡರೂ ನಾವು ಅದನ್ನೇ ವಾದದಲ್ಲಿ ಉಪಯೋಗಿಸುವದರಲ್ಲಿ ಅರ್ಥವಿಲ್ಲ. ಹಾಗೆ ಮಾಡಿದರೆ ನಾವು ಬೇಲೂರಿನ ಶಿಲ್ಪಗಳನ್ನೂ ಹೀಗೆಯೇ ವ್ಯಾಖ್ಯಾನಿಸುವ ಅನಿವಾರ್ಯತೆಗೆ ಬೀಳುತ್ತೇವೆ. ನಮ್ಮ ಪೂರ್ವಜರು ದೇವಸ್ಥಾನದ ಆವರಣದಲ್ಲಿ ಕೆತ್ತಿರುವ ಶಿಲ್ಪಗಳನ್ನು ಕಲಾವಿದರು ಶೃಂಗಾರ ರಸವೆಂದು ಹಾಗೂ ಸಾಂಖ್ಯರು ಪ್ರಕೃತಿ-ಪುರುಷ ತತ್ತ್ವವೆಂದು ಭಾವಿಸುತ್ತಾರೆ. ಸೀತಾ-ಹನುಮ ನಗ್ನಚಿತ್ರವು ಶೃಂಗಾರಕ್ಕಾಗಲೀ, ಆಧ್ಯಾತ್ಮಿಕ ತತ್ತ್ವಕ್ಕಾಗಲೀ ಪೂರಕವಾಗಿಲ್ಲದಿರುವದರಿಂದ ವರ್ಜ್ಯ ಎಂದು ತೋರಿಸುವದಷ್ಟೇ ನಮ್ಮ ಟೀಕೆಯ ಪದ್ಧತಿಯಾಗಬೇಕು.

ಉಳಿದ ರಿಲಿಜನ್ನುಗಳ ಕುರಿತು ನಾವು ಟೀಕಿಸುವಾಗಲೂ ಕೂಡ, ರಿಲಿಜನ್ನಿನ ಟೀಕೆಯ ಪ್ರಕಾರವನ್ನು ಅನುಸರಿಸುವದರಲ್ಲಿ ಯಾವ ಪ್ರಯೋಜನವೂ ಇಲ್ಲ. ಉದಾಹರಣೆಗೆ ಶಾಲೆಯ ಯುನಿಫಾರಂ ನಿಯಮ ಹಾಗೂ ಮುಸ್ಲಿಂ ಹೆಣ್ಣುಮಕ್ಕಳ ಬುರ್ಖಾ ತೊಡುವ ನಿಯಮದ ಮಧ್ಯೆ ಘರ್ಷಣೆಯಾದಾಗ ಹಿಂದೂ ಸಂಘಟನೆಗಳು ಬುರ್ಖಾವನ್ನೇ ವಿರೋಧಿಸುತ್ತವೆ. ಆದರೆ ಕೆಲವು ಸ್ಥಳೀಯ ಸಂಪ್ರದಾಯಗಳಲ್ಲಿ ಕನ್ಯೆಯರಿಗೆ ಲಂಗವು ಅನಿವಾರ್ಯವಾಗಿರುತ್ತವೆ. ಹಿಂದೂ ಸಂಘಟನೆಗಳ ವಿರೋಧವು ಸ್ವತಃ ಹಿಂದೂಗಳಿಗೇ ತೊಂದರೆದಾಯಕವಾಗುತ್ತದೆ. ಯುನಿಫಾರಂ ಹೆಸರಲ್ಲಿ ತಿಲಕ ಹಾಗೂ ಕುಂಕುಮದ ಬೊಟ್ಟನ್ನು ನಿಷೇಧಿಸಿದರೆ ಸಾಧುವೇ? ಆದ್ದರಿಂದ ನಾವು ಯುನಿಫಾರಂನ ಪರಿಕಲ್ಪನೆಯ ಜನ್ಮವನ್ನು ಜಾಲಾಡುವದೇ ಇಲ್ಲಿ ನಾವು ಮಾಡುವ ಸರಿಯಾದ ಟೀಕೆ. ಆಚರಣೆಯೊಂದನ್ನು ಸತ್ಯ ನಂಬಿಕೆಯೊಂದರ ಉಲ್ಲಂಘನೆಯಾಗಿ ಇಲ್ಲವೇ ಸುಳ್ಳು ನಂಬಿಕೆಯೊಂದರ ಅನುಷ್ಠಾನವಾಗಿ ವ್ಯಾಖ್ಯಾನ ಮಾಡುವದರ ಮೂಲಕ ಅವನ್ನು ಟೀಕಿಸುವ ಪದ್ಧತಿಗೆ ತಿಲಾಂಜಲಿಯಿಡದ ಹೊರತು ಈಗ ನಡೆಯುತ್ತಿರುವ ಚರ್ಚೆಗೆ ಯಾವ ತಾರ್ಕಿಕ ಅಂತ್ಯವನ್ನೂ ನೀಡಲು ಸಾಧ್ಯವಿಲ್ಲ. ಹಾಗೆಯೇ ಜಾಗತಿಕ ಮಟ್ಟದಲ್ಲಿ ನಮ್ಮ ಸಮಾಜದ ಕುರಿತು ಏಳುವ ಟೀಕೆಗಳನ್ನು ಸಮರ್ಪಕವಾಗಿ ಉತ್ತರಿಸಲೂ ಸಾಧ್ಯವಿಲ್ಲ. ಅವರ ಟೀಕೆಗಳನ್ನೇ ಎದುರಿಸಲು ಸಾಧ್ಯವಾಗದಿದ್ದಾಗ, ಇನ್ನು ಪ್ರತಿಟೀಕೆ ಮಾಡುವದು ದೂರವೇ ಉಳಿಯಿತು. ಆದ್ದರಿಂದ ಅವರ ಟೀಕೆಗಳನ್ನು ಎದುರಿಸಿ ಉತ್ತರಿಸಲು ಅಗತ್ಯವಾದ ಸಮರ್ಪಕ ತರ್ಕವನ್ನು ಬೆಳೆಸುವದು ಇಂದಿನ ಅತ್ಯಗತ್ಯವಾಗಿದೆ.

ಅಸ್ಪೃಶ್ಯತೆ, ಜಾತಿ ತಾರತಮ್ಯ, ಮಡೆಸ್ನಾನ ಮುಂತಾದ ಆಚರಣೆಗಳನ್ನು ವಿರೋಧಿಸುವಾಗ, ಈ ಆಚರಣೆಗಳನ್ನು ಮನುಷ್ಯರಲ್ಲಿ ಅಸಮಾನತೆಯನ್ನು ಸಾರುವ ಮನುಸ್ಮೃತಿಯ ನಂಬಿಕೆಯೊಂದರ ಮೇಲೆ ಬೆಳೆದ ಜಾತಿಪದ್ಧತಿಯ ಕಾರ್ಯಗಳೆಂದು ವ್ಯಾಖ್ಯಾನಿಸುತ್ತಾರೆ. ಈ ವಾದಸರಣಿಯನ್ನು ಮುರಿಯಲು ನಮ್ಮ ಸಮಾಜದ ಆಚರಣೆಗಳು ಅಂತಹ ಕಾರ್ಯಕಾರಣ ವಿವರಣೆಯ ಮೇಲೆ ಬೆಳೆದಿಲ್ಲವೆಂದು ಸಾಧಿಸುವದರ ಮೂಲಕವೇ ಜಾತಿಪದ್ಧತಿಯ ಕುರಿತ ಅವರ ಟೀಕೆಗಳನ್ನು ಉತ್ತರಿಸಬಹುದು. ಆಧ್ಯಾತ್ಮ ಸಾಧಕನೊಬ್ಬ, ಎಲ್ಲರನ್ನೂ ಸಮಾನವಾಗಿ ನೋಡುವದನ್ನು ಹೇಗೆ ಕಲಿಯುತ್ತಾನೆ ಹಾಗೂ ಅಂತಹ ಸಾಧಕರಲ್ಲಿ ಅಸ್ಪೃಶ್ಯತೆ, ಜಾತಿ ತಾರತಮ್ಯವನ್ನು ಕಾಣುವದನ್ನು ತಪ್ಪು ಎಂದು ಜನಸಾಮಾನ್ಯನೊಬ್ಬ ಹೇಗೆ ನಿರ್ಣಯಿಸಿಕೊಳ್ಳುತ್ತಾನೆ ಎನ್ನುವದನ್ನೂ ನಾವು ತಾರ್ಕಿಕವಾಗಿ ವಿವರಿಸಬೇಕು. ಪರರ ಹಾಗೂ ಸ್ವಂತ ನಂಬಿಕೆ ಹಾಗೂ ಆಚರಣೆಗಳನ್ನು ಟೀಕಿಸುವಾಗ ಅಥವಾ ವಿಮರ್ಶಿಸುವಾಗ ನಮ್ಮ ಪರಂಪರಾಗತ ಟೀಕೆಗಳು ಯಾವ ಸ್ವರೂಪವನ್ನು ಹೊಂದಿತ್ತೋ, ಆ ಸ್ವರೂಪವನ್ನು ಪುನಃ ಕಂಡುಕೊಳ್ಳಬೇಕು ಹಾಗೂ ಆ ಸ್ವರೂಪದಡಿಯಲ್ಲಿ ತರ್ಕವನ್ನು ಬೆಳೆಸಬೇಕು. ಆ ತರ್ಕವನ್ನು ನಮ್ಮ ಸಂಪ್ರದಾಯಗಳ ಕುರಿತು ಹುಟ್ಟುತ್ತಿರುವ ಹೊಸ ಟೀಕೆಗಳನ್ನು ಎದುರಿಸಲು ಹಾಗೂ ಟೀಕಾಕಾರರ ಸಿದ್ಧಾಂತಗಳನ್ನು ಪ್ರಶ್ನಿಸಲು, ಪ್ರಸಕ್ತ ಚರ್ಚೆಗಳಲ್ಲಿ ಬಳಸಿಕೊಳ್ಳಬೇಕು. ಆಗಷ್ಟೇ ನಮ್ಮ ತರ್ಕವು ಹೆಚ್ಚು ಸಮಂಜಸವಾಗಿ ನಮ್ಮ ಸಂಪ್ರದಾಯಗಳ ಕುರಿತು ಹುಟ್ಟಿರುವ ಪ್ರಶ್ನೆಗಳು ಉತ್ತರಿಸಲ್ಪಡಬಹುದು. ಇಂದು ನಾವು ನೋಡುವ, ಭಯೋತ್ಪಾದನೆ, ಇಸ್ಲಾಂ ಮೂಲಭೂತವಾದದಂತಹ ಜಾಗತಿಕ ಚರ್ಚೆಗಳಲ್ಲಿ ಕಾಣುವ ತಾರ್ಕಿಕ ಇತಿಮಿತಿಗಳನ್ನು ಮೀರಿ ಆ ಚರ್ಚೆಯನ್ನು ಮುಂದುವರೆಸುವಲ್ಲಿ ಹಾಗೂ ಈ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಸಹಾಯಕವೂ ಆಗಬಹುದು.
ಆಚರಣೆ ಮತ್ತು ನಂಬಿಕೆಗಳ ಟೀಕೆ: ಅಂದು ಹಾಗೂ ಇಂದು ( ಭಾಗ – ೨ )

ಆಚರಣೆ ಮತ್ತು ನಂಬಿಕೆಗಳ ಟೀಕೆ: ಅಂದು ಹಾಗೂ ಇಂದು ( ಭಾಗ – ೧ )

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments