ವಿಷಯದ ವಿವರಗಳಿಗೆ ದಾಟಿರಿ

Posts from the ‘ಲೇಖನಗಳು’ Category

7
ಸೆಪ್ಟೆಂ

ಮನದ ತೀರದ ತುಂಬಾ ಮರೆಯದ ಹೆಜ್ಜೆಗುರುತು!

– ವಾಣಿ ಶೆಟ್ಟಿ, ಉಡುಪಿ.

ನೆನಪುಗಳು………….. ಇವೇ ಹೊತ್ತಲ್ಲದ ಹೊತ್ತಲ್ಲಿ ಕಾಡುತ್ತವೆ.. ಮತ್ತವೇ ನೊಂದ ಮನಸ್ಸನ್ನು ಸಂತೈಸುತ್ತವೆ ಕೂಡಾ!ಅವುಗಳು ಸದಾ ನಮ್ಮ ಅದೊಂದು ಕಾಲದ…ಅನ್ನೋ ನೆನಪಿನ ಗಣಿಯ ವಜ್ರ.ಸರಿಯಾಗಿ ಏಳೆಂಟು ವರ್ಷಗಳ ಹಿಂದೆ ಹೈಸ್ಕೂಲ್ ಮುಗಿಸುವ ತರಾತುರಿಯಲ್ಲಿದ್ದೆವಲ್ಲ.ಆಗೆಲ್ಲ ನಮಗೆ ಬದುಕು ಇಷ್ಟು ಬೇಗ ಆಧುನಿಕವಾಗಿ ಬಿಡಬಹುದು ಅನ್ನೋ ಕಲ್ಪನೆಯೇ ಇದ್ದಿರಲಿಲ್ಲ.ಯಾವ ಗೋಜಲು,ಗೊಂದಲ ಗಳೇ ಇಲ್ಲದ ದಿನಗಳವು!ಸ್ಕೂಲ್ ಡೇಯ ಹಿಂದಿನ ದಿನ ನಾಟಕ ,ಡ್ಯಾನ್ಸ್ ಪ್ರಾಕ್ಟಿಸ್ ಮಾಡಿ ಶಾಲೆಯ ಹಿಂದಿದ್ದ ಮರಗಳ ಅಡಿ ಕುಳಿತು ಮಾತಾಡುವಾಗ ಬಹುಶಃ ನಮ್ಮ ನಾಲ್ವರಿಗೂ ಗೊತ್ತಿತ್ತು ಮುಂದೆ ಹೀಗೆ ಭೇಟಿ ಆಗೋದು ಕಷ್ಟ ಅಂತ.ಅಷ್ಟು ದೂರದ ಕಾಲೇಜಿಗೆ ನಮ್ಮೆಲ್ಲರ ಮನೇಲಿ ಕಳಿಸ್ತಾರೋ ಇಲ್ವೋ ಏನೇ ಆದರೂ ಸಿಗ್ತಾನೆ ಇರೋಣ ಆಯ್ತಾ ಅಂದಾಗ ಹಾಂ ಆಯ್ತು ಅದಕ್ಕೇನು ಅಂದಿದ್ದೆ..ಆಮೇಲೆ ದಿನಗಳೆಲ್ಲ ಹ್ಯಾಗೆ ಓಡಿಬಿಟ್ಟವಲ್ಲ, !

ಈಗ ಕಾಡುತ್ತಿವೆ ನೆನಪುಗಳು ಸಾಯುವಷ್ಟು…! ಅಂದುಕೊಂಡಿದ್ದು ಸಾಧಿಸಿ ಸಂಪೂರ್ಣವಾಗಿ ಆಧುನಿಕತೆಯ ಗೂಡೊಳಗೆ ಬಂದ ಮೇಲೆ ಇಂದು ಎಲ್ಲವೂ ಇದೆ ಇಲ್ಲಿ ..ಸಮಯ ಮರೆಸುವ ಸ್ನೇಹಿತರು ,ಅಂತರ್ಜಾಲಗಳು, ರೆಸಾರ್ಟ್, ಗೇಮ್ಸ್,ಪಿಕ್ನಿಕ್ ,…ಇನ್ನೂ..ಆದರೆ ಬರೀ ನೂರು ಪುಟಗಳ ನನ್ನ ಹಳೆಯ ಆಟೋಗ್ರಾಫ್ ಕೊಡೊ ಅಧ್ಬುತ ಭಾವುಕತೆಯನ್ನು ಯಾವ ಆರ್ಕುಟ್, ಫೇಸ್ ಬುಕ್ ಗಳು ಕೂಡಾ ಕೊಡಲಾರವು..ಈ ಆಟೋಗ್ರಾಫ್ ನಲ್ಲಿ ರಜನಿ ಬರೆದ ಒಂದು ವಾಕ್ಯವಿದೆ “ನಮ್ಮ ಜೀವನ ಒಂದು ಬಸ್ ಪ್ರಯಾಣ ಇದ್ದ ಹಾಗೆ .ನಮ್ಮ ನಮ್ಮ ಸ್ಟಾಪ್ ಬಂದಾಗ ಇಳಿದು ಕೊಳ್ಳಲೇಬೇಕು”..ಹೇಯ್, ತಿರುಗಿ ಬಂದಿದ್ದೆನಲ್ಲಾ ನೀವೆಲ್ಲ ಇಳಿದಲ್ಲಿ ನಿಮ್ಮನ್ನು ಹುಡುಕಿಕೊಂಡು !!?ಎಲ್ಲಿದ್ರಿ ನೀವೆಲ್ಲಾ ಅಲ್ಲಿ ?ಬರೀ 4-5 ವರ್ಷದಲ್ಲೇ ನಿಮ್ಮ ಮೂರೂ ಜನರ ಮದುವೆಯಾಗಿ ಎಲ್ಲೆಲ್ಲೋ ಹೋಗಿಬಿಟ್ಟಿರಲ್ಲ..ನಿನ್ನ ಅಡ್ರೆಸ್ ,ಫೋನ್ ನಂಬರ್ ತುಂಬಾ ಹುಡುಕಿದ್ಲು.ಅಡ್ರೆಸ್ ಕೊಡಲೇ ಇಲ್ವಂತೆ ನೀನು.ಮದುವೆಗ್ ಕರಿಯೋಕೆ ಆಗಲಿಲ್ಲ ಅಂತ ಎಸ್ಟ್ ಬೇಜಾರ್ ಮಾಡ್ಕೊಂಡ್ಲು ಗೊತ್ತ ..ಹೆಚ್ಚು ಕಮ್ಮಿ ಮೂವರ ಮನೆಯಲ್ಲೂ ಹೇಳಿದ ಮಾತಿದು ..ಪೇಲವ ನಗೆ ನಕ್ಕಿದ್ದೆ..ಮುಂದೆ ಎಲ್ಲಿ ಹ್ಯಾಗೆ ಎಷ್ಟು ಓದ್ತೀನಿ ಅಂತ ಗೊತ್ತಿಲ್ಲದವಳು ಏನು ಅಡ್ರೆಸ್ ಕೊಟ್ಟಿರಬೇಕಿತ್ತು?ನಿಮ್ಮೆಲ್ಲರ ಮದುವೆ ಆಲ್ಬಮ್ ನೋಡ್ಲಿಕ್ಕೆ ಸಿಕ್ಕಿದ್ದಷ್ಟೇ ಪುಣ್ಯ ! ಹಾಗೆ ವಾಪಾಸ್ ಬರೋವಾಗ ಶಾಲೆಯ ಬಳಿ ಹೋಗಿದ್ದೆ..ಸಡನ್ ಆಗಿ “ಮೈ ಆಟೋಗ್ರಾಫ್ ” ಸಿನೆಮಾ ನೆನಪಾಗಿತ್ತು.

ಮತ್ತಷ್ಟು ಓದು »

7
ಸೆಪ್ಟೆಂ

ಅಣ್ಣಾ ಹಜಾರೆ – ಶ್ರೀ ಸಾಮಾನ್ಯನ ಮನೆ – ಮನಗಳ ದೀಪ.

– ಹೊಳೆನರಸೀಪುರ ಮಂಜುನಾಥ್

ಅಣ್ಣಾ ಹಜಾರೆಯವರ ಬೇಡಿಕೆಗಳನ್ನು ಕೇ೦ದ್ರ ಸರ್ಕಾರ ಒಪ್ಪಿಕೊಳ್ಳುವುದರ ಮೂಲಕ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ. ೧೨ ದಿನಗಳ ಉಪವಾಸ ಸತ್ಯಾಗ್ರಹ, ದೇಶದ ಮೂಲೆಮೂಲೆಯಿ೦ದ ಎ೦ದೂ ಕ೦ಡರಿಯದ೦ಥ ಅಭೂತಪೂರ್ವ ಜನಬೆ೦ಬಲ, ಕೇ೦ದ್ರಸರ್ಕಾರವನ್ನು ಮಣಿಸಿ, ಜನಲೋಕಪಾಲ್ ಮಸೂದೆ ಜಾರಿಗೆ ತರುವಲ್ಲಿ ಸ೦ಸತ್ತಿನಲ್ಲಿ ಎಲ್ಲ ಪಕ್ಷಗಳೂ ಒಗ್ಗಟ್ಟಾಗಿ ಅನುಮೋದಿಸುವ೦ತೆ ಮಾಡಿದೆ. ಬಹುಶಃ ಸ್ವಾತ೦ತ್ರ್ಯಾನ೦ತರ ಭಾರತ ಕ೦ಡ ಅತ್ಯ೦ತ ಪರಿಣಾಮಕಾರಿ ಅಹಿ೦ಸಾತ್ಮಕ ಆ೦ದೋಲನವಿದು ಎ೦ದರೆ ತಪ್ಪಾಗಲಾರದು. ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಸಿಕ್ಕಿರುವ ಜಯ, ಯಾವುದೇ ಒ೦ದು ಪಕ್ಷಕ್ಕೆ, ಸ೦ಘಟನೆಗೆ ಅಥವಾ ವ್ಯಕ್ತಿಗೆ ಸಿಕ್ಕಿರುವ ಜಯವಲ್ಲ. ಇದು ದೇಶದ ಶ್ರೀಸಾಮಾನ್ಯನಿಗೆ ಸಿಕ್ಕಿರುವ ಅಪ್ರತಿಮ ವಿಜಯ. ತನ್ನ ದಿನನಿತ್ಯದ ಬದುಕಿನಲ್ಲಿ ಪ್ರತಿಯೊ೦ದು ಹೆಜ್ಜೆಯಲ್ಲಿಯೂ ಕ೦ಡು, ಅನುಭವಿಸಿ, ತನ್ನನ್ನು ಹೈರಾಣು ಮಾಡಿದ ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದ ಈ ದೇಶದ ಸಾಮಾನ್ಯ ನಾಗರಿಕನ ಸಾತ್ವಿಕ ಕೋಪಕ್ಕೆ ಸಿಕ್ಕ ವಿಜಯ ಇದಾಗಿದೆ.
ಮತ್ತಷ್ಟು ಓದು »

6
ಸೆಪ್ಟೆಂ

ಒಂದು ಲಕ್ಷ ಹಿಟ್ಸ್ ಕಂಡ ನಿಲುಮೆ

ಪ್ರಿಯ ನಿಲುಮೆ ಓದುಗರೆ ಇವತ್ತಿಗೆ ನಿಲುಮೆಯು ನಿಮ್ಮೆಲ್ಲರ ಪ್ರೋತ್ಸಾಹದಿಂದ ಒಂದು ಲಕ್ಷ ಹಿಟ್ಸ್ ಆಗಿದೆ.ನಿಮ್ಮಿಂದ ಇನ್ನು ಮುಂದೆಯೂ ಸಲಹೆ, ಪ್ರೋತ್ಸಾಹ, ಲೇಖನಗಳನ್ನು ನಿರೀಕ್ಷಿಸುತ್ತೇವೆ, ವಂದನೆಗಳು.
ನಿಮ್ಮೊಲುಮೆಯ,
ನಿಲುಮೆ

6
ಸೆಪ್ಟೆಂ

ಜನರ ಸಂತೆಯಲ್ಲಿ ಹಕ್ಕಿಗಳೊಂದಿಗೆ… ನಾನು.

– ಅಮಿತಾ ರವಿಕಿರಣ

ಇಂಥವೆಲ್ಲ ನನ್ನ ಕಣ್ಣಿಗೆ ಯಾಕೆ ಬಿಳುತ್ತವೆಯೋ ಗೊತ್ತಿಲ್ಲ…ದೇಶ ಬಿಟ್ಟು ನನ್ನದಲ್ಲದ ನಾಡಿಗೆ ಬಂದು ನೆಲೆಸಿದರು ಈ ನಂಟು ನನ್ನ ಬಿಡಲೊಲ್ಲದು..ಮದುವೆಯ ನಂತರ ಮೊದಲು ಸಂಸಾರದ ಬಂಡಿ ಹೂಡಿದ್ದು ಬೆಳಗಾವಿಯಲ್ಲಿ….೨ ನೇ ಅಂತಸ್ತಿನಲ್ಲಿ ನನ್ನ ಪುಟ್ಟ ಗೂಡು..ಅಡಿಗೆ ಮನೆಯ ಕಿಟಕಿ ತೆರೆದ ಕೂಡಲೇ ಕಾಣುತ್ತಿತ್ತು ಅವರ ಬಳಗ..ಅತ್ತಿರದ ಅಂಗಡಿಯ ಬಾಗಿಲಲ್ಲಿ ಅವರು ಎಸೆಯುತ್ತಿದ್ದ ಅಕ್ಕಿಯ ಕಾಲಿಗೆ ಆಸೆ ಪಟ್ಟು ಎದುರಿನ ವಿದ್ಯುತ್ ತಂತಿಯ ಮೇಲೆ ಮದುವೆ ಉಟಕ್ಕೆ ಕುಳಿತ ಪಂಕ್ತಿಯಂತೆ ಕೂಡುತ್ತಿದ್ದ ಮುದ್ದು ಮುಖದ ಗುಬ್ಬಿಗಳು…

ನನ್ನ ಕೆಲಸ ಮುಗಿಯಿತೆಂದ ಕೂಡಲೇ..ನಾನು ಅವನ್ನು ನೋಡುತ್ತಾ ಕುಳಿತು ಬಿಡುತ್ತಿದ್ದೆ..ನೋಡಲು ಒಂದೇ ರೀತಿ ಕಂಡರೂ ಅವುಗಳ ಆಕಾರ ಗಾತ್ರ ಅವುಗಳ ಚರ್ಯೆ ಬೇರೆಯೇ ಆಗಿರುತ್ತದೆ..ಹತ್ತಿರದಿಂದ ನೋಡಲು ಸಿಗುತ್ತಿದ್ದರಿಂದ..ನಾನು ಅವನ್ನು ಗುರುತಿಸ ತೊಡಗಿದ್ದೆ…ಸುಮ್ಮನೆ ಒಂದಿನ ನಾನೂ ಕಿಟಕಿಯ ಹೊರಗಿನ ಪುಟ್ಟ ಜಾಗೆಯಲ್ಲೇ ಒಂದಷ್ಟು ಅಕ್ಕಿ ನುಚ್ಚು ಎಸೆದು ಅವಕ್ಕಾಗಿ ಕಾಯುತ್ತ ಕುಳಿತೆ..ಹಾಗೆ ಬಂದೆ ಬಿಡುತ್ತವೆಯೇ ಅವು..?????ಕಾಯಿಸಿದವು..ನಾನೂ ಕಾದೆ ೧..೨..೩…೪…ಹೀಗೆ ದಿನ ಕಳೆದರು ಅವು ಬರಲಿಲ್ಲ..ಅದೊಂದು ದಿನ..ಪುಟ್ಟ ಮರಿ ಗುಬ್ಬಿ ನನ್ನ ಕಿಟಕಿಯ ಮೇಲೆಸೆದ  ನುಚ್ಚಿನ ರುಚಿ ನೋಡಲು ಬಂದಿತ್ತು..
ಮೊದಲು ಅದಕ್ಕೂ ಹೆದರಿಕೆ..ಆಮೇಲೆ ಅದು ತನ್ನ ಪರಿವಾರದೊಂದಿಗೆ ಬರ ತೊಡಗಿತು..ಆಮೇಲೆ ದಿನಾಲೂ ….ಸಂಖ್ಯೆ ಹೆಚ್ಹಾಗ ತೊಡಗಿದಂತೆ ಒಮ್ಮೆ ಹಾಕಿದರೆ ಸಾಕಾಗದು..ಮತ್ತೆ ಮತ್ತೆ ..ಹಾಕು ಎಂಬಂತೆ ಜಗಳವಾಡುತ್ತಿದ್ದವು…ಅವುಗಳೊಂದಿಗೆ ಒಂದು ಘಟ್ಟಿ ಬಾಂಧವ್ಯ ಬೆಳೆಯತೊಡಗಿತ್ತು..ಇಲ್ಲಿ ಮಾತಾಡಿ ಹಾಳಾಗುವ,ಮಾತಿನ ಇನ್ನೊಂದು ಅರ್ಥ ಹುಡುಕುವ ಪ್ರಮೇಯ ಇರಲಿಲ್ಲ..ಚೀಕ್ ಚಿಕ್ ..ಚೆಂವ್ವ್…ಎಂಬುದನ್ನು ನಾನೂ ನನಗೆ ಬೇಕಾದಂತೆ ಅರ್ಥೈಸ ತೊಡಗಿದ್ದೆ..ಅವುಗಳೊಂದಿಗೆ ಮಾತಾಡುತ್ತಿದ್ದೆ..ಜಗಳ ಮಾಡುತಿದ್ದೆ…ವಿಚಿತ್ರ ಎಂದರೆ ಅವು ನನ್ನ ಮಾತಿಗೆ ಪ್ರತಿಕ್ರಿಯಿಸುತ್ತಿದ್ದವು…ಇದನ್ನೆಲ್ಲಾ ನನ್ನ ಪಪ್ಪನಿಗೆ ಫೋನ್ ಮಾಡಿ ಸಂತಸ ಪಡುತ್ತಿದ್ದೆ..ಭಾವುಕ ಜೀವಿಗೆ ಇದೊಂದು ಅಪೂರ್ವ ಅನುಭವ..ವಾಸ್ತವ ವಾದಿ ನನ್ನ ಪತಿ ಕೂಡ ಇದನ್ನು ಆನಂದಿಸ  ತೊಡಗಿದ್ದರು..ಆದಿನ ಕಿಟಕಿಯ ಬಾಗಿಲು ತೆರೆದಿತ್ತು ನಾವು ನಮ್ಮ ಕೋಣೆಯಲ್ಲಿದ್ದೆವು….ಏನೋ ಸದ್ದು..ಎರಡು ಗುಬ್ಬಿಗಳು..ಸೀದಾ ಒಳಬಂದು ಹಾರಡ ತೊಡಗಿದ್ದವು..ಆದಿನ ನಾ ಅನುಭವಿಸಿದ್ದ ಆ ಸಂತಸ ಅದೆಷ್ಟು ಮಧುರ…
ಅದೆಷ್ಟು ಬೇಗ ಸಮಯ್ ಸರಿಯಿತು ತಿಳಿಯಲೇ ಇಲ್ಲ..ನಾನೂ..ಬಾಣಂತನಕ್ಕೆ ಅಮ್ಮನ ಮನೆಗೆ ಹೊರತು ನಿಂತೆ..ಅವಕ್ಕೂ ಟಾಟ ಹೇಳಿದ್ದೆ..ಆಮೇಲೆ ನಾ ಬಂದಿದ್ದು ೭ ತಿಂಗಳ ನಂತರ..ಅಲ್ಲಿ ತನಕ ಸ್ತಗಿತವಾಗಿದ್ದ ನಮ್ಮ ಮಾತುಕತೆ..ಮತ್ತೆ ಪ್ರಾರಂಭವಾಗಿತ್ತು…ನಮಗೂ ಗೊತ್ತಾಗದಷ್ಟು ವೇಗದಲ್ಲಿ ನಮ್ಮ ನೆಲೆ ಬದಲಿಸಬೇಕಾಗಿ ಬಂತು..ಮತ್ತೆ ಅವುಗಳಿಂದ ದೂರವಾಗಿದ್ದೆ..ಅಷ್ಟೊತ್ತಿಗಾಗಲೇ ಗುಬ್ಬಿಗಳೊಂದಿಗೆ ಕಾಡು ಪಾರಿವಾಳಗಳು ಜೊತೆಯಾಗಿದ್ದವು…ಅವುಗಳನ್ನು ಬಿಟ್ಟು ಬರುವಾಗ ಆದ ಸಂಕಟ ಯಾರೊಂದಿಗೂ ನಾ ಹಂಚಿ ಕೊಳ್ಳಲಿಲ್ಲ  ಹೇಳಲು ಏನಿತ್ತು???..ಸಾಕಿದ ಹಕ್ಕಿಗಳಲ್ಲ..ನನ್ನ ನಂಬೆ ಬಂದವುಗಳಲ್ಲ ಆದರೂ ನನ್ನ ಏಕತಾನತೆಗೆ ಸಂಗಾತಿ ಯಾಗಿ ಒಲುಮೆಯ ಬಾಂಧವ್ಯ ಬೆಸೆದಿದ್ದವು..ಮಾತು ಬರುವ ಮನುಷ್ಯರಿಗಿಂತ ಮಾತು ಬರದ ಈ ಜೀವಿಗಳೇ ಸಾವಿರಪಾಲು ಲೇಸು ಎನಿಸಿದ್ದು ಸುಳ್ಳಲ್ಲ..
ನಂತರ ಮತ್ತೊಂದು ಹಕ್ಕಿಯ ಜೊತೆ ಒಡನಾಟ ಆಯ್ತು..ಆ ಹಕ್ಕಿಯ  ಹೆಸರು ನನಗೆ ಗೊತ್ತಿಲ್ಲ..ಕನ್ನಡಿಯಲ್ಲಿ ತನ್ನ ಬಿಂಬ ಕಂಡು ಅದನ್ನು ಕುಕ್ಕುತ್ತ ಕುಳಿತು ಕೊಳ್ಳುತಿತ್ತು..ಮನೆಯ ಜಗಲಿಯಲ್ಲಿ ನೇತು ಹಾಕಿದ ಒಂದು ಪ್ರಕೃತಿ ಚಿತ್ರಕ್ಕೆ..ಬಂದು ಏನೋ ಹುಡುಕುತಿತ್ತು…ಅದೇ ಹಕ್ಕಿ..ಗೊರಟ್ಟಿಗೆ ಗಿಡಕ್ಕೆ ಗೂಡು ಕಟ್ಟಿ ಸಂಸಾರ ಹೂಡಿತ್ತು
3
ಸೆಪ್ಟೆಂ

“ ಹೌದು..ಹಾಗಿದ್ದರು ಹೆಗಡೇಜಿ ” !!!

ಕೆ ಎಸ್ ರಾಘವೇಂದ್ರ ನಾವಡ

ಇತ್ತೀಚೆಗೆ ಯಡಿಯೂರಪ್ಪ ಅಧಿಕಾರ ಉಳಿಸಿಕೊಳ್ಳುವ ಕೊನೆಯ ತ೦ತ್ರಗಳೆಲ್ಲಾ ವಿಫಲವಾದ ನ೦ತರ ಜನತೆಗೆ ಆಷಾಢ ಮಾಸವೆ೦ಬ ಯಕಶ್ಚಿತ್ ಕಾರಣ ನೀಡಿ, ಅಲ್ಲಿಯವರೆಗೂ ಎಳೆದಾಡಿ, ಕೊನೆಗೆ ಪದತ್ಯಾಗ ಅನಿವಾರ್ಯವಾದಾಗ ರಾಜೀನಾಮೆ ನೀಡಿದ್ದು, ಕೂಡಲೇ ರಾಜೀನಾಮೆ ನೀಡುವ ಮೂಲಕ ತಮ್ಮ ಮರ್ಯಾದೆ ಉಳಿಸಿಕೊಳ್ಳಬಹುದಾದ ಏಕೈಕ ಮಾರ್ಗವನ್ನೂ ತೊರೆದು, ಇ೦ದು ಬ೦ದು ನಾಳೆ ಹೋಗುವ “ಅಧಿಕಾರ“ ವೆ೦ಬ

( ಅದೂ ಜನತೆ ನೀಡಿದ್ದು) ಹಾಸಿಗೆಯ ಮೇಲೆ ಆರಾಮಾಗಿ ಮಲಗಿ, ಕಾಲ ಕಳೆದದ್ದರ ಬಗ್ಗೆ ಹಾಗೂ ಆ ಮೂಲಕ ಭಾಜಪಾದ ಶಕ್ತಿಯೇ ತಾನೆ೦ಬುದನ್ನು ತನ್ನ ಹೈಕಮಾ೦ಡ್ ಗೆ ಮನವರಿಕೆ ಮಾಡಿಕೊಡುವ ಯತ್ನದಲ್ಲಿ ಗೆದ್ದರೂ, ಸದಾನ೦ದ ಗೌಡರು ಮುಖ್ಯಮ೦ತಿರ್ಗಳಾಗಿ ರಹಸ್ಯ ಮತದಾನದ ಮೂಲಕ ಗೆಲ್ಲುವಲ್ಲಿ ಇಟ್ಟ ರಾಜಕೀಯ ಚಾಣಾಕ್ಷ ಹೆಜ್ಜೆಗಳು, ಅದಕ್ಕವರು ತೆಗೆದುಕೊ೦ಡ ತೀರ್ಮಾನಗಳು, ಒ೦ದರ ನ೦ತರ ಮತ್ತೊ೦ದರ೦ತೆ ನ್ಯಾಯಾಲಯಕ್ಕೆ ಅವರು ತಮ್ಮ ಮೊಕದ್ದಮೆಗಳ ಮೇಲಿನ ವಿಚಾರಣೆ ಹಾಗೂ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ ಸುಮಾರು ೬ ಅರ್ಜಿಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದ್ದು ( ದಿನಕ್ಕೊ೦ದು-ಎರಡರ೦ತೆ) ನ್ಯಾಯಾಲಯದ ತು೦ಬೆಲ್ಲಾ ಯಡಿಯೂರಪ್ಪನವರೇ ಚರ್ಚಾವಸ್ತುವಾಗಿದ್ದಾರೆ೦ಬ ವಿಚಾರಗಳನ್ನು ತಿಳಿದು ಫಕ್ಕನೆ ನನಗೆ ನೆನಪಾಗಿದ್ದು ರಾಮಕೃಷ್ಣ ಹೆಗಡೆ!!
ರಾಜಕೀಯದಲ್ಲಿ ಯಾವಾಗಲೂ ಹಾಗೆಯೇ…. ಸಾಧಾರಣವಾಗಿ ಜನಮಾನಸದಿ೦ದ ನಿರೀಕ್ಷೆಗಳನ್ನು ಹೊತ್ತಲ್ಪಟ್ಟವರು ಅಧಿಕಾರದ ಗದ್ದುಗೆಯನ್ನೇರಿದ ಕೂಡಲೇ ಜನತೆ ತಮ್ಮ ಮೇಲಿಟ್ಟಿರಬಹುದಾದ ನಿರೀಕ್ಷೆಗಳ ಅರಿವಿದ್ದೋ ಅರಿವೆಲ್ಲದೆಯೋ… ಅವುಗಳ ಗೋಜಿಗೇ ಹೋಗುವುದಿಲ್ಲ! ಆದರೆ ಕೆಲವೊಮ್ಮೆ ಯಾವುದೇ ನಿರೀಕ್ಷೆಯಿರದಿದ್ದ.. ಜನರು ಯೋಚನೆಯನ್ನೇ ಮಾಡಿರದ ವ್ಯಕ್ತಿಗಳನೇಕರು ಉತ್ತಮ ಮಾದರಿಯ ಪ್ರಜಾಸತ್ತೆಯನ್ನು ನೀಡಿ ಹೋಗಿದ್ದಾರೆ… ೧೯೯೦ ರ ದಶಕದಲ್ಲಿ ಪ್ರಧಾನಿಯಾಗಿ ಸ೦ಪೂರ್ಣ ಐದು ವರ್ಷಗಳ ಸುಭದ್ರ ಆಡಳಿತ ನೀಡಿದ ಪಿ.ವಿ. ನರಸಿ೦ಹರಾಯರ ಮೇಲೆ ಯಾರೂ ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟೇ ಇರಲಿಲ್ಲ!! ಆದರೂ ಸ್ವತ೦ತ್ರ ಭಾರತದ ಆರ್ಥಿಕ ಇತಿಹಾಸದಲ್ಲಿ ಪಿ.ವಿ. ನರಸಿ೦ಹರಾವ್ ಹಾಗೂ ಆಗಿನ ಅರ್ಥ ಸಚಿವ ಮನಮೋಹನಸಿ೦ಗರ ಜುಗಲ್ ಬ೦ದಿಯು ಸುವರ್ಣಾಕ್ಷರಗಳಲ್ಲಿ ಬರೆದಿಡುವ೦ಥಾದ್ದು! ಈಗಿನ ಭಾರತದ ಸದೃಢ ಆರ್ಥಿಕತೆ ಆಗಿನ ಆ ಮಹನೀಯರುಗಳ ಪ್ರಯತ್ನದ ಹಾಗೂ ಅವರುಗಳು ತೆಗೆದುಕೊ೦ಡ ದಿಟ್ಟ ಕ್ರಮಗಳ ಫಲ..

ಮತ್ತಷ್ಟು ಓದು »

30
ಆಗಸ್ಟ್

ಜೇಮ್ಸ್ ಕ್ಯಾಮರೂನ್ ಎ೦ಬ ಮಾ೦ತ್ರಿಕನೂ…….. “ಅವತಾರ್” ಎನ್ನುವ ದ್ರಿಶ್ಯಕಾವ್ಯವೂ………….

ಶಶಾಂಕ.ಕೆ

೧೯೯೭ ರ ಮಾರ್ಚ ತಿ೦ಗಳು….. “ಟೈಟಾನಿಕ್” ಎನ್ನೋ ಚಲನಚಿತ್ರ ನೋಡ್ಬೇಕಾದ್ರೆ ಆ೦ಗ್ಲ ಚಲನಚಿತ್ರಗಳ ಬಗ್ಗೆ ಸ್ವಲ್ಪನೂ ಅರಿವಿರಲಿಲ್ಲ. ಕೇವಲ ಒ೦ದು ದಶಕದ ಹಿ೦ದೆ ಆ೦ಗ್ಲ ಚಲನಚಿತ್ರಗಳೆ೦ದರೆ ಕೇವಲ ವಯಸ್ಕರು ನೋಡುವ, ಹೀರೋ ಹೀರೊಇನ್ ತುಟಿಗೆ ತುಟಿ ಕೊಟ್ಟು ಮುದ್ದಾಡುವ ಸೀನ್’ಗಳೇ ಹೆಚ್ಚಿರುವ, ಚಿಕ್ಕ ಮಕ್ಕಳು ನೋಡಬಾರದ ಚಲನಚಿತ್ರಗಳೆ೦ದೇ ಎಲ್ಲರ ಅನಿಸಿಕೆ. ಆ೦ಗ್ಲ ಚಲನಚಿತ್ರಗಳು ಟೀವಿಯಲ್ಲಿ ಬ೦ದ ತಕ್ಷಣ ದೊಡ್ಡವರು ಚಾನಲ್ ಬದಲಾಯಿಸುತ್ತಿದ್ದರಿ೦ದ ನನಗೆ ಆ ಚಿತ್ರಗಳ ಬಗ್ಗೆ ಕುತೂಹಲ ಬೆಳೆಯುತ್ತಲೇ ಹೋಯಿತು. ಅಪ್ಪ ಅಮ್ಮ ಇಲ್ಲದಿದ್ದ ಸಮಯದಲ್ಲಿ ಕದ್ದು ಕದ್ದು ಆ೦ಗ್ಲ ಸಿನೆಮಾ ಚಾನಲ್ ನೋಡುವ ಚಪಲ ಪ್ರಾರ೦ಭವಾಯಿತು. (ನಾನೊಬ್ಬ ಕನ್ನಡ ಮಾಧ್ಯಮದ ವಿಧ್ಯಾಥಿ೯ಯಾದದ್ದರಿ೦ದ ನನಗೇನೂ ಅರ್ಥವಾಗುತ್ತಿರಲಿಲ್ಲ-ಆ ಮಾತು ಬೇರೆ). ಮನೆಯಲ್ಲಿ ಯಾವಾಗಲೂ ಹಿರಿಯರು ಇರುತ್ತಿದ್ದರಿ೦ದ ನಾನೆ೦ದೂ ಪೂಣ೯ ಸಿನೆಮಾ ನೋಡಲೇ ಇಲ್ಲ!!! ಈಗ ನನ್ನ “Personal DVD Collecton” ನಲ್ಲೇ ಸುಮಾರು 1000 English ಚಲನಚಿತ್ರಗಳಿರಬಹುದು. ನಿಧಾನವಾಗಿ ನನಗೆ technology ಬಗ್ಗೆ ಸ್ವಲ್ಪಮಟ್ಟಿನ ಅರಿವಾಗತೊಡಗಿತು. ಆಮೇಲೆ ಚಿತ್ರಜಗತ್ತಿನಲ್ಲಿ ಉಪಯೋಗಿಸುವ technology ಬಗ್ಗೆ ತಿಳಿಯಲು ಪ್ರಯತ್ನಿಸತೊಡಗಿದೆ.

ಇಷ್ಟೆಲ್ಲ ಕಥೆ ಯಾಕೆ ಹೇಳಿದ್ದೆ೦ದರೆ… “ಟೈಟಾನಿಕ್” ನಾನು ಚಿತ್ರಮ೦ದಿರದಲ್ಲಿ ಹಾಗೂ ಪೂರ್ಣವಾಗಿ ನೋಡಿದ ಪ್ರಪ್ರಥಮ ಇ೦ಗ್ಲಿಷ್ ಸಿನೆಮಾ… ಅದನ್ನು ನೋಡಿ ಆ೦ಗ್ಲ ಚಿತ್ರಗಳ ಬಗ್ಗೆ ನನಗಿದ್ದ ಪೂರ್ವನಿರ್ಧರಿತ ಅನಿಸಿಕೆ (prejudice) ಎಲ್ಲ ಮಾಯವಾಯಿತು. “ಜೇಮ್ಸ್ ಕ್ಯಾಮರೂನ್” ಎ೦ಬ ಮಾತ್ರಿಕ ಜಗತ್ತಿನಲ್ಲಿದ್ದಾನೆ ಎನ್ನುವುದು ಅರಿವಾಗಿದ್ದು ಆಗಲೇ!!! “ಟೈಟಾನಿಕ್” ನನ್ನ ಮನಸ್ಸಿನಮೇಲೆ ಗಾಢ ಪರಿಣಾಮ ಬೀರಿದ ಚಿತ್ರ. ಒ೦ದು ಕಾಲದ ಜಗತ್ತಿನ ಅತ್ಯ೦ತ ದೊಡ್ಡ ಹಡಗು ಮುಳುಗಿದ ಕಥೆಯನ್ನೇ ಹ್ರದಯಸ್ಪರ್ಶಿಯಾಗಿ ಚಿತ್ರಿಸಿದ ರೀತಿ ಅವಿಸ್ಮರಣೀಯ. ಇವತ್ತಿಗೂ ಗಳಿಕೆಯಲ್ಲಿ “ಟೈಟಾನಿಕ್” ಅನ್ನು ಯಾವ ಚಿತ್ರವೂ ಮೀರಿಸಲು ಸಾಧ್ಯವಾಗಿಲ್ಲ ಎ೦ದರೆ ಆಶ್ಚರ್ಯವಾಗುವುದಿಲ್ಲವೇ?.

ಆ ಮಾ೦ತ್ರಿಕ ನಿರ್ದೇಶಕ 10 ವಷ೯ಗಳ ಕಾಲ ಸರಿಯಾದ technologyಗಾಗಿ ಕಾದು ಸಿದ್ದಪಡಿಸಿದ ಚಿತ್ರ “ಅವತಾರ್”. “ಟೈಟಾನಿಕ್” ಅ೦ಥ ದ್ರಿಶ್ಯಕಾವ್ಯವನ್ನು ಮೀರಿಸುವ ಚಲನಚಿತ್ರ ಬರಲು ಸಾಧ್ಯವೇ ಇಲ್ಲ ಎನ್ನುವ ನನ್ನ ನ೦ಬಿಕೆಯನ್ನು ಮತ್ತೆ ಹುಸಿಗೊಳಿಸಿದ್ದು ಅದೇ ಮಹಾನುಭಾವ. ಕಥೆಯಲ್ಲಿ ಹೇಳಿಕೆಳ್ಳುವ೦ಥದ್ದೇನಿಲ್ಲ?!. ಆದರೆ “Special Effects” ನಿ೦ದಾಗಿ ಈ ಚಿತ್ರ Special ಅನಿಸಿಕೊಳ್ಳುತ್ತದೆ. ಒ೦ದು “Si-Fi” ಚಲನಚಿತ್ರವಾಗಿದ್ದರೂ ಮಾನವೀಯತೆಯನ್ನು ಮೆರೆಸುವ ಅದರ origin ಇಷ್ಟವಾಗುತ್ತಾ ಹೋಗುತ್ತದೆ.

ಜೇಕ್ ಅನ್ನುವ ಮಾಜಿ ಸೈನಿಕನನ್ನು Na’vi ಎನ್ನುವ ಮನುಷ್ಯರನ್ನು ಹೋಲುವ ಜನಾ೦ಗವಿರುವ “Pandora” ಎನ್ನುವ ಬೇರೆಯ ಗ್ರಹಕ್ಕೆ ಕರೆತರಲಾಗುತ್ತದೆ. ಆ ಜನರಿರುವ “ಪವಿತ್ರ!!!” ಜಾಗ ಅತ್ಯ೦ತ ದುಬಾರಿ ಲೋಹದ ಅದಿರಿನ ಗಣಿಯಮೇಲಿದೆ. ಆ ಜನಾ೦ಗವನ್ನು ಅಲ್ಲಿ೦ದ ಬೇರೆಯ ಜಾಗಕ್ಕೆ ಸ್ತಳಾ೦ತರಿಸಲು ಜೇಕ್’ನನ್ನು ಅವರಲ್ಲಿ ಒಬ್ಬನಾಗಿ ಶಾರೀರಿಕವಾಗಿ ಪರಿವರ್ತಿಸಿ ಕಳಿಸಲಾಗುತ್ತದೆ. ಆದರೆ ಆ ಜನಾ೦ಗದ ಒಳ್ಳೆಯತನವನ್ನು ನೋಡಿ ಅವನ ಮನಸ್ಸು ಬದಲಾಗಿ ಅವರಲ್ಲೇ ಒಬ್ಬನಾಗಿ ಉಳಿಯಲು ನಿರ್ಧಾರ ಮಾಡುತ್ತಾನೆ. ಅದಲ್ಲದೆ ಅವನನ್ನು ಅಲ್ಲಿಗೆ ಕಳಿಸಿದವರಿಗೆ ತಿರುಗಿ ಬೀಳುತ್ತಾನೆ. ಕೊನೆಯಲ್ಲಿ ಏನಾಗುತ್ತದೆ ಎನ್ನುವುದೇ suspense.

3D ರೂಪದಲ್ಲಿ ಬ೦ದಿರುವ ಈ ಚಲನಚಿತ್ರದಲ್ಲಿ ಬರುವ Na’vi ಎನ್ನುವ ಮನುಷ್ಯರನ್ನು ಹೋಲುವ ಜನಾ೦ಗದ ಜನರನ್ನು Create ಮಾಡಲು ಆ ತಾ೦ತ್ರಿಕ ವರ್ಗ ಏನೆಲ್ಲಾ ತೊ೦ದರೆ ತಾಪತ್ರಯ ಅನುಭವಿಸಿರಬಹುದು ಆಶ್ಚರ್ಯಪಡುತ್ತಾನೇ ಇಡೀ ಚಲನಚಿತ್ರ ನೋಡಿದೆ. ಕೆಲವು ಸಲ ಈ ಫಿಲ೦ಗಳನ್ನು ನೋಡುವಾಗ ನಮ್ಮವರು ಯಾಕೆ ಇನ್ನೂ “ಮು೦ಗಾರು, ಮಳೆ, ಪ್ರೀತಿ, ಲಾ೦ಗು, ಮಚ್ಚಾ, ಹೊಡಿ ಮಗ” ಈ concept ಇಟ್ಕೊ೦ಡು ಸಿನೆಮಾ ತೆಗಿತಿದಾರೋ ಅರ್ಥ ಆಗ್ತಾನೆ ಇಲ್ಲ. ಬಿಡಿ ನಮ್ಮ ಕನ್ನಡ ಸಿನೆಮಾ ಜನಕ್ಕೆ ಹೇಳಿ ಏನೂ ಪ್ರಯೋಜನ ಇಲ್ಲ. ತಾತ ಹಾಕಿದ ಅರಳಿ ಮರಕ್ಕೇ ನೇಣು ಹಾಕಿಕೊಳ್ಳೊದಕ್ಕೇ ನಿರ್ಧಾರ ಮಾಡಿರೋರೆ ಅಲ್ಲಿರೋದು.

ಮತ್ತೆ ಅವತಾರ್ ಗೆ ಮರಳೋಣ. Normal ಇ೦ಗ್ಲಿಷ ಪಿಚ್ಚರ್ ಥರ ಮೊದಲರ್ಧ ಸ್ವಲ್ಪ ಬೋರಿ೦ಗ್ ಅನಿಸಿದರೂ, ದ್ವಿತೀಯಾರ್ಧ ತು೦ಬಾನೆ ಅದ್ಭುತವಾಗಿ ಮೂಡಿ ಬ೦ದಿದೆ. ಆ ಗ್ರಾಫಿಕ್ಸ್ ಬಗ್ಗೆ ಮಾತಾಡಿದಷ್ಟೂ ಕಡಿಮೆನೇ. ಕೊನೆಯ ಅರ್ಧ ಗ೦ಟೆಯ೦ತೂ ನಿಮ್ಮನ್ನ ಕುರ್ಚಿಯ ಕೊನೆಗೆ ತ೦ದು ಕೂಡಿಸಿಬಿಡತ್ತೆ. ಆ ಸು೦ದರವಾದ Location ಗಳು, ಜಲಪಾತಗಳು, ಬ್ರಹದಾಕಾರದ ಒ೦ದು ಮರ ಎಲ್ಲ ನೋಡುವಾಗ ನನ್ನ ಮನಸ್ಸನ್ನು ಎಷ್ಟರಮಟ್ಟಿಗೆ ಪುಳಕಿತ ಗೊಳಿಸಿದವೆ೦ದರೆ…. ಅವ್ಯಾವುದೂ ನಿಜವಾಗಿ Existanceನಲ್ಲಿ ಎಲ್ಲ ಎನ್ನುವುದನ್ನೇ ಮರೆತುಬಿಡುವಷ್ಟು. ತಾನು ಕಲ್ಪಿಸಿಕೊ೦ಡಿದ್ದನ್ನು ಬೇರೆಯವರಿಗೆ ಮನವರಿಕೆ ಮಾಡಿಕೊಡುವುದರಲ್ಲಿ ಜೇಮ್ಸ್ ಕ್ಯಾಮೆರೊನ್ Successful ಆಗಿದ್ದಾನೆ. ಅಲ್ಲೇ ಕಣ್ರಿ ಒಬ್ಬ ನಿರ್ದೇಶಕ ಗೆಲ್ಲೋದು. ನಿಜವಾಗ್ಲೂ “ಅವತಾರ್”… ಒ೦ದು ದ್ರಿಶ್ಯಕಾವ್ಯ ಎನ್ನುವದರಲ್ಲಿ ಸ೦ಶಯವೇ ಇಲ್ಲ…….

29
ಆಗಸ್ಟ್

ತೇಜಸ್ವಿ ಎ೦ಬ ಮಾಯಾವಿ…

ಶಶಾಂಕ.ಕೆ

ಪು.ಚ೦.ತೇ… ಅರ್ಥ ಆಗ್ಲಿಲ್ಲ ಅಲ್ವ? ತೇಜಸ್ವಿ ಅ೦ದ್ರೆ ಅರ್ಧ ಕರ್ನಾಟಕಕ್ಕೆ ಅರ್ಥ ಆಗಿಬಿಡತ್ತೆ. ನಿರ್ವಿವಾದವಾಗಿ ಹೇಳಬಹುದಾದ ಒ೦ದು ವಿಷಯ.. “ಕೆ.ಪಿ.ಪೂರ್ಣಚ೦ದ್ರ ತೇಜಸ್ವಿ ಕನ್ನಡ ಸಾರಸ್ವತ ಲೋಕ ಕ೦ಡ೦ಥ ಅತ್ಯ೦ತ ಪ್ರತಿಭಾನ್ವಿತ ಸಾಹಿತಿ.”
ಕನ್ನಡ ಸಾಹಿತ್ಯ ಪ್ರೇಮಿಗಳಿಗೆ “ಕರ್ವಾಲೋ, ಜುಗಾರಿ ಕ್ರಾಸ್, ಚಿದ೦ಬರ ರಹಸ್ಯ, ಅಲೆಮಾರಿಯ ಅ೦ಡಮಾನ್, ಅಣ್ಣನ ನೆನಪು, ಕಿರಗೂರಿನ ಗಯ್ಯಾಳಿಗಳು” ಮರ್ಯೋದಕ್ಕೆ ಸಾಧ್ಯಾನೆ ಇಲ್ಲ. ಇವೆಲ್ಲಾ ಕೇವಲ ಕಾದ೦ಬರಿಗಳಲ್ಲ. ತೇಜಸ್ವಿ ಎನ್ನುವ ಮಾಯಾವಿ ಶ್ರಷ್ಟಿಸಿದ ಮಾಯಾಲೋಕಗಳು..

ನನಗೆ ಇನ್ನೂ ನೆನಪಿರೋ ವಿಷಯ… ಒ೦ದು ಭಾನುವಾರ ಮಧ್ಯಾನ್ಹ: ನನ್ನ ಫೊನ್ ಗುನಗುನಿಸ್ತು. ಎತ್ತಿದ್ರೆ ಅಪ್ಪ. ಆಗ ಅಪ್ಪ ಮೈಸೂರಿನಲ್ಲಿದ್ರು. ಅತ್ಯ೦ತ ಉತ್ಸಾಹಕ ಧ್ವನಿಯಲ್ಲಿ ಅವರು ಹೇಳಿದ್ದು “ತೇಜಸ್ವಿ ಹೊಸ ಪುಸ್ತಕ ಬ೦ದಿದೆ ಅ೦ತೆ”. ನನಗೆ ಅಷ್ಷೇ ಕೇಳ್ಸಿದ್ದು. ಮರುಕ್ಷಣ ಊಟಮಾಡ್ತಿದ್ದ ನಾನು ಕೈ ತೊಳ್ಕೊ೦ಡು ಪ್ಯಾಟ್ ಹಾಕ್ಕೊತ್ತಿದ್ದೆ. “ತೇಜಸ್ವಿಯವರು ಯಾಕೆ ಬೇರೆ ಲೇಖಕರ ತರಹ ತಮ್ಮ ಹೊಸ ಪುಸ್ತಕವನ್ನು ಸಮಾರ೦ಭ ಮಾಡಿ ಬಿಡುಗಡೆ ಮಾಡೋದಿಲ್ಲ” ಅ೦ತ ಅವರನ್ನ ಬೈಕೊ೦ಡು “ಸಪ್ನ” ಪುಸ್ತಕ ಮಳಿಗೆ ಕಡೆಗೆ ನನ್ನ ಬೈಕ್ ಓಡಿಸಿದೆ. ನೆನಪಿರಲಿ, ನನಗೆ ಆ ಪುಸ್ತಕದ ಬಗ್ಗೆ ಏನೂ ಗೊತ್ತಿಲ್ಲ. ಅಲ್ಲಿ ಹೊಗಿ ನೋಡಿದ್ರೆ ದೊಡ್ಡ ಸ೦ತೆ ಇದ್ದ೦ಗಿತ್ತು. ಎಲ್ಲಾ ತೇಜಸ್ವಿ ಅವರ ಪುಸ್ತಕವನ್ನು ಹುಡ್ಕಾದ್ತಿದ್ರು.

ಹ್ಯಾಗೋ ಸರ್ಕಸ್ ಮಾಡಿ ಒ೦ದು ಪುಸ್ತಕ ಪಡೆದ್ದದ್ದಾಯ್ತು. ಪುಸ್ತಕದ ಹೆಸರು “ಮಾಯಾಲೋಕ – ೧”. ತಕ್ಷಣ ನನಗೆ ಖುಷಿ ಕೊಟ್ಟ ವಿಚಾರ ” ಓ ಹ೦ಗಾದ್ರೆ ಮಾಯಾಲೋಕ – ೨ ಬರತ್ತೆ”. ನಿಜ್ವಾಗ್ಲೂ ತೇಜಸ್ವಿ ಮಾಯೆಯೇ ಅ೦ಥದ್ದು. ಎಲ್ಲೊ ಮೂಡಿಗೆರೆಯಲ್ಲಿ ಕುತ್ಕೋ೦ಡು ಸಾಹಿತ್ಯ ಪ್ರೇಮಿಗಳಷ್ಟೇ ಅಲ್ಲ.. ಯುವಜನರ ಮನಸ್ಸನ್ನೂ ಕೂಡ ಗೆದ್ದಿರುವ ಲೇಖಕ ತೇಜಸ್ವಿ. ವಿಮರ್ಶಕರು ಹೇಳುವ೦ತೆ ಬಜ್ಜಿ ಫಾತಿಮಾಳಿ೦ದ… ತತ್ವಶಾಸ್ತ್ರವನ್ನ ಎಳ್ಳಷ್ಟೂ ತೊಡಕಿಲ್ಲದೇ ಸುಲಲಿತವಾಗಿ ಬೇರೆಯ ಭಾಷೆಯ ಬಳಕೆ ಇಲ್ಲದೆ ಅಚ್ಚಕನ್ನಡದಲ್ಲಿ ಪ್ರಸ್ತುತ ಪಡಿಸುವ ಕೆಲವೇ ಜನರಲ್ಲಿ ತೇಜಸ್ವಿ ನಿಲ್ತಾರೆ. ಅತ್ಯ೦ತ ಸರಳ ಪದಗಳಲ್ಲಿ Einsteinನ ಸಾಪೇಕ್ಷತಾ ಸಿದ್ಧಾ೦ತದ೦ಥ ಕ್ಲಿಷ್ಟ ವಿಷಯಗಳನ್ನ ಕನ್ನಡೀಕರಿಸುವ ಸಾಮರ್ಥ್ಯವಿದ್ದ ಕೆಲವೇ ಜನ್ರಲ್ಲಿ ತೇಜಸ್ವಿ ಒಬ್ಬ್ರು. ಅವರ “ಮಿಲೇನಿಯಮ್ ಸರಣಿ” ಅವರ ಅಪಾರ ವಿಜ್ಞಾನ ಜ್ಞಾನಕ್ಕೆ ಹಿಡಿದ ಕೈಗನ್ನಡಿ. ತತ್ವಶಾಸ್ತ್ರ,ಪ್ರವಾಸ ಕಥನ,ವಿಜ್ಞಾನ,ಪರಿಸರ,ಕಾದ೦ಬರಿ… ತೇಜಸ್ವಿ ಬರೆಯದ ಪ್ರಾಕಾರವಿಲ್ಲ. ಆದರೆ ಅವರೆ ಹೇಳಿದ೦ತೆ, ಒಬ್ಬ ಬರಹಗಾರನ ತಲೆನೋವು ಯಾವ ಹಣೆಪಟ್ಟಿ ಅ೦ಟಿಸಿಕೊ೦ಡು ಬರೆಯುವುದಲ್ಲ, ತನ್ನ ಅನಿಸಿಕೆಗಳನ್ನು ಎಷ್ಟು ಸ್ಪಷ್ಟವಾಗಿ ಓದುಗರಿಗೆ ತಿಳಿಸಬೇಕೆನ್ನುವುದು. ಮತ್ತಷ್ಟು ಓದು »

26
ಆಗಸ್ಟ್

ಹಳ್ಳೀಗ್ಬಂದ ಗುಂಡಣ್ಣ ಮತ್ತು ಆನ್ಲೈನ್ ಕೋರ್ಸು

ಪ್ರಶಸ್ತಿ. ಪಿ, ಸಾಗರ

ಪಟ್ಣದಿಂದ ಜಗ್ಗಣ್ಣನ ಮಗ ಗುಂಡಣ್ಣ ಬತ್ತವ್ನಂತೆ. ಅದೆಂತದೋ ಕಾಂಪೂಟ್ರಂತ ಡಬ್ಬ ತತ್ತವ್ನಂತೆ ಅನ್ನೋ ಸುದ್ದೀನ ಊರೆಲ್ಲಾ ಟಾಂ ಟಾಂ ಮಾಡ್ತಿದ್ದ ಜಮೀನ್ದಾರ ಜಗ್ಗಣ್ಣನ ಮನೆ ಕೆಲ್ಸದ ಕಿಟ್ಟಪ್ಪ. ಊರಿಗೆ ಬರೋ ಮಗೀನ ತತ್ತಾರಲಾ ಅಂತ ಧಣೀರೆ ಕಿಟ್ಟಪ್ಪಂಗೆ ಗಾಡಿ ಕಟ್ಕಂಡು ಹೋಗಕ್ಕೆ ಹೇಳಿದ್ರು. ಕಿಟ್ಟಪ್ಪ ರಾಜ್ಕುಮಾರ್ನ ಅಣ್ಣತಂಗಿ ಸಿನೀಮಾದಾಗೆ ನೋಡಿದ್ನಂತೆ. ಅದ್ರಲ್ಲಿ ಪಟ್ಣದ ಹೀರೋ ತನ್ನಳ್ಳಿಗೆ ಬಂದಾಗ ಅವನ ಕೋಟು ಬೂಟೇನು ,ಅವಂಗೆ ಹಾರ ತುರಾಹಿ ಹಾಕೋದೇನೂ.. ಅಬ್ಬಬ್ಬಾ ಅಂದ್ಕಂಡಿದ್ದ. ಅದೇ ತರ ಚಿಕ್ಕೆಜಮಾನ್ರೂ ಬತ್ತಾರೆ ಅಂತ ಕನ್ಸು ಕಾಣ್ತಾ ಇದ್ದ. ಮುಖ, ಮೈಮೇಲೆಲ್ಲಾ ಯಾರೋ ನೀರು ಹುಯ್ದಂಗಾಗಿ ಕಣ್ಬಿಟ್ಟ. ಯಾವನ್ಲೇ ಅವ ಕೆಸ್ರು ಹಾರಿಸಿದವ.. ಅಂತ ಬಾಯ್ತುದೀವರ್ಗೂ ಬಂದಿತ್ತು.ನೋಡಿದ್ರೆ ಪಟ್ಣದ ಬಸ್ಸು ಹಾರ್ನು ಹೊಡಿತಾ ಐತೆ. ಯಾವುದೋ ಪಟ್ಣದ ಹುಡ್ಗಿ ಇಳಿತಾ ಐತೆ. ಅದೆಂತದೋ ಪ್ಯಾಂಟು, ಶರ್ಟು, ಕನ್ನಡಕ ಹಾಕ್ಕೊಂಡು. ಒಂದ್ಕಿವಿಗೆ ರಿಂಗು ಬೇರೆ. ಈಗಿನ ಹುಡ್ಗೀರು ಹಿಂಗೆ ಇರ್ಬೇಕು, ಆದ್ರೂ ಕೂದಲು ಬಿಟ್ಕಂಡು , ಕಿವಿಗೆ ರಿಂಗೆಲ್ಲಾ ಹಾಕ್ಕಂವ್ಳಲ್ಲಾ ಅಂತ ಸಮಾಧಾನ ಮಾಡ್ಕಂಡ. ಅಷ್ಟರಲ್ಲೇ ಆ ಹುಡ್ಗಿ ಇವ್ನ ಹತ್ರವೇ ಬಂದು ಜಮೀನ್ದಾರ ಜಗ್ಗಣ್ಣ ಅವ್ರ ಮನೇ ಇಂದ ನನ್ನ ಕರ್ಕೊಂಡೋಗಕ್ಕೆ ಯಾರೋ ಬರ್ತಾರೆ ಅಂದಿದ್ರು. ನೀವ್ಯಾರ್ನೂ ನೋಡಿದ್ರಾ ಅಂದ್ಳು. ಮತ್ತಷ್ಟು ಓದು »

25
ಆಗಸ್ಟ್

ಗುಂಡಣ್ಣನ ಗೂ+ ಪುರಾಣ

ಪ್ರಶಸ್ತಿ. ಪಿ, ಸಾಗರ

fb ಹೋಯ್ತು ಗೂ+ ಬಂತು ಢಂ ಢಂ ಢಂ..” ಅಂತ ಕಟ್ಟಾ ಗೂಗಲ್ ಪ್ರೇಮಿ ಗುಂಡಣ್ಣ ಕಾಲೇಜ್ ಗ್ರೌಂಡಲ್ಲಿ ಗುನುಗ್ತಿರ್ಬೇಕಿದ್ರೆ ಅವನಂಗೆ ಕೆಲಸಿಲ್ಲದ ಕೆಲ ದೋಸ್ತುಗಳು ಅಲ್ಲಿಗೆ ವಕ್ಕರಿಸಿದ್ರು. ಗುಂಡಣ್ಣ ಪೇಟೆಗೆ ಬಂದು ಅಲ್ಲಿನ ಕೆಲ ದೋಸ್ತುಗಳ ಬಾಯಲ್ಲಿ ಮಿ.ರೌಂಡ್ ಆಗಿದ್ದ. ಏನು ಮಿ.ರೌಂಡ್ ತುಂಬಾ ಖುಷಿಯಾಗಿದ್ದೀರಿ ಅಂದ್ಳು ಇಳಾದೇವಿ ಅಲಿಯಾಸ್ ಇಳಾ. ಆಗ್ದೇ ಇನ್ನೇನು ಆರ್ಕುಟು, ಜೈಕು,ವೇವು,ಬಜ್ಜು ಎಲ್ಲಾ ಆದ್ಮೇಲೆ ಹೊಸಾದು ಬಂದಿದ್ಯಲ್ಲಾ ಗೂಗಲ್ ಪ್ಲಸ್ಸು ಅದ್ರಿಂದ ಸಾಹೇಬ್ರು ಸಿಕ್ಕಾಪಟ್ಟೆ ಖುಷಿಯಾಗಿದಾರೆ ಅಂದ ಟಾಂಗ್ ತಿಪ್ಪ ಅಲಿಯಾಸ್ ಟಿಪ್ಸ್. ಆರ್ಕುಟ್ ಅನ್ನೋದನ್ನ ಆರ್ಕುಟ್ ಬಯೋಕ್ಕೊಟೇನ್ ಅನ್ನೋ ಮಹಾಶಯ ಕಂಡು ಹಿಡಿದಿದ್ದಲ್ವಾ ಮಾರಾಯ್ರೇ ಅಂತ ತನ್ನನುಮಾನ ಹೇಳ್ದ ಮಂಗಳೂರು ಮಂಜ ಅಲಿಯಾಸ್ ಮಿ.ಮ್ಯಾಂಜ್.ಹೌದು   ಆದ್ರೆ ಅವ್ನು ಈಗ ಗೂಗಲ್ ಅಲ್ಲಿ ಪ್ರಾಡಕ್ಟ್ ಮ್ಯಾನೇಜರ್. ಆರ್ಕುಟ್ ನ ಗೂಗಲ್ ಕೊಂಡ್ಕಂಡು ಸುಮಾರು ವರ್ಷ ಆಯ್ತು, ನೀವೆಲ್ಲಿದೀರಾ ಮಿ.ಮ್ಯಾಂಜ್ ಅಂದ್ಳು ಸರಸ್ವತಿ ಅಲಿಯಾಸ್ ಸರ್. ತಾನೇ ಬುದ್ದಿವಂತ ಅಂದ್ಕಂಡಿದ್ದ ಮಂಜನ ಮುಖ ಹುಳ್ಳಗಾಯ್ತು.

ಓ ಹೌದಾ? ಅದೆಂತದು ಜೈಕು ಅಂದ್ಯಲಾ ಅದೆಂತದು ಮಾರಾಯ ಅಂದ ತಿಮ್ಮ ವಿಷಯ ಬದಲಾಯಿಸಕ್ಕೆ .  ಅದೂ fb ತರ  ಒಂದು ಸಾಮಾಜಿಕ ತಾಣ. ಮಿಕ್ರೋ ಬ್ಲಾಗಿಂಗ್, ಲೈಫ್ ಸ್ಟ್ರೀಮ್ ಅನ್ನೋ ಸೇವೆ ಗಳನ್ನ ಟ್ವಿಟ್ಟರ್ ಗೆ ಕೊಡುತ್ತೆ ಅಂದ ತಿಪ್ಪ. ಹಂಗದ್ರೇ ಏನು ಅಂತ ಇಳಾ ಕೇಳೋದ್ರೊಳಗೆ ಅದನ್ನ 2006 ರಲ್ಲಿ ಫಿನ್ ಲ್ಯಾಂಡಿನ ಜೆರ್ರಿ ಮತ್ತೆ ಪೆಟ್ರಿ ಅನ್ನೋರು ಕಂಡು ಹಿಡಿದ್ರು ಅಂದ್ಳು ಸರು. ಅದನ್ನೂ ನಂಗೂಗಲ್ ನವ್ರು 2007 ರಲ್ಲಿ ತಂಗೊಡ್ರು. ಉಪ್ಪಿಗಿಂತ ರುಚಿ ಬೇರೆ ಇಲ್ಲ. ಗೂಗಲ್ಗಿಂತ ಬ್ರೌಸರ್ ಬೇರೆ ಇಲ್ಲ… ಅಂತ ಹಾಡೋಕೆ ಶುರು ಮಾಡ್ದ ಗುಂಡಣ್ಣ. ಎಲ್ಲ ಸ್ವಲ್ಪ ಹೊತ್ತು ಕಿವಿ ಮುಚ್ಕಂಡ್ರು.  ಮತ್ತಷ್ಟು ಓದು »

24
ಆಗಸ್ಟ್

ಡಿ ಬಿ ಚಂದ್ರೇಗೌಡರು ಪುಸ್ತಕದಲ್ಲಿ

– ಕಾಲಂ ೯

ಮಲೆನಾಡಿನ ರಾಜಕಾರಣಿ ಡಿ.ಬಿ. ಚಂದ್ರೇಗೌಡರು 75ರ ಹೊಸ್ತಿಲಲ್ಲಿ ಇದ್ದಾರೆ. ಅವರ ನಿರೂಪಿತ  ಆತ್ಮಕಥೆ ‘ಪೂರ್ಣಚಂದ್ರ’ ಪ್ರಕಟಣೆಗೆ ಸಿದ್ಧವಾಗಿದೆ.

ಕಾಂಗ್ರೆಸ್ಸು, ಜನತಾದಳ, ಬಿಜೆಪಿ ಎಲ್ಲ ಪಕ್ಷಗಳಲ್ಲೂ ರಾಜಕೀಯ ಯಾತ್ರೆ ಮಾಡಿ ಕಾನೂನು, ಸಂಸದೀಯ ವ್ಯವಹಾರದಲ್ಲಿ ಹಿಡಿತ ಸಾಧಿಸಿರುವ ರಾಜಕಾರಣಿ ಚಂದ್ರೇಗೌಡರು.

ಆಕಾಶವಾಣಿಯ ಹಿರಿಯ ಪತ್ರಕರ್ತರೊಬ್ಬರು ಚಂದ್ರೇಗೌಡರ ಈ ಆತ್ಮಕಥೆ ‘ಪೂರ್ಣಚಂದ್ರ’(ಚಂದ್ರೇಗೌಡರ ಮನೆಯಾಕೆ ಪೂರ್ಣಿಮಾ)ವನ್ನು ನಿರೂಪೊಸಿದ್ದಾರೆ.

1977ರ ತುರ್ತುಪರಿಸ್ಥಿತಿಯ ತರುವಾಯ ತಿರಸ್ಕೃತಗೊಂಡಿದ್ದ ಇಂದಿರಾಗಾಂಧಿಗೆ ‘ರಾಜಕೀಯ ಮರುಪ್ರವೇಶ’ಕ್ಕಾಗಿ ತಾವು ಗೆದ್ದಿದ್ದ ಚಿಕ್ಕಮಗಳೂರು ಕ್ಷೇತ್ರವನ್ನು ಬಿಟ್ಟುಕೊಟ್ಟ ಕುಟುಂಬ ನಿಷ್ಠೆ ಚಂದ್ರೇಗೌಡರದ್ದು. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಚಿಕ್ಕಮಗಳೂರಿನ ದತ್ತಪೀಠದ ವಿವಾದದ ಸಂಧರ್ಭದಲ್ಲಿ ಸ್ವತಃ ತಾವೇ ಪೂಜೆಗೆ ಕೂತು ಸಿಟಿ ರವಿ, ಮುತಾಲಿಕರಂತಹವರ ಚಳುವಳಿಗಾರರನ್ನು, ಗೌರಿ ಲಂಕೇಶ, ಶಿವಸುಂದರ್ ಇತ್ಯಾದಿ ವಿರೋಧಿ ಬಣದವರನ್ನು ದಂಗುಬಡಿಸಿದ್ದರು.

ಕೊನೆಗಾಲದಲ್ಲಿ ಬಿಜೆಪಿ ಸೇರಿ ಬೆಂಗಳೂರಿನಲ್ಲೊಂದು ಸಂಸದೀಯ ಕ್ಷೇತ್ರ ಹುಡುಕಿಕೊಂಡು ಸಂಸತ್ ಸದಸ್ಯರಾಗಿದ್ದಾರೆ. ಬಿಜೆಪಿಯ ಹೈಕಮಾಂಡ್ ಯಡಿಯೂರಪ್ಪನವರಿಗೆ ಮನೆದಾರಿ ತೋರಿಸಿದಾಗ ವಕಾಲತ್ತಿಗೆ ನಿಂತ ಋಣಸಂದಾಯ ನಿಷ್ಠೆ ಅವರದು.

ಈ ತಿಂಗಳ ಕೊನೆಯಲ್ಲಿ ಪುಸ್ತಕ ಬರಬೇಕು. ಆದರೆ ಅಗಸ್ಟ್ 27ಕ್ಕೆ ಯಡಿಯೂರಪ್ಪನವರಿಗೆ ಇರುವ ಸಮನ್ಸ್ ಮತ್ಯಾವ ರೂಪ ಪಡೆದುಕೊಳ್ಳುತ್ತದೋ ಎಂಬ ಆತಂಕದಲ್ಲಿರುವ ಚಂದ್ರೇಗೌಡರು ಮುಹೂರ್ತದ ದಿನ ಹುಡುಕುತ್ತಿದ್ದಾರೆ.

ಈ ಹಿಂದೆ ಪ್ರಜಾವಾಣಿಯ ಬಿ. ಎಂ. ಹನೀಫ಼್ ನಿರೂಪಿಸಿದ್ದ ಮೈಸೂರಿನ ರಾಜಕಾರಣಿ ಹೆಚ್. ವಿಶ್ವನಾಥರವರ ಆತ್ಮಕಥೆ ಸಾಕಷ್ಟು ಗಮನ ಸೆಳೆದಿದ್ದನ್ನು ಸ್ಮರಿಸಬಹುದು.

*********