ವಿಷಯದ ವಿವರಗಳಿಗೆ ದಾಟಿರಿ

Posts from the ‘ಲೇಖನಗಳು’ Category

9
ಮಾರ್ಚ್

ಹೂ ಈಸ್ ಕನ್ಹಯ್ಯಾ ಕುಮಾರ್?

-ಎಸ್.ಆರ್. ಅನಿರುದ್ಧ ವಸಿಷ್ಠ

kanhaiya-kumar_650x400_81457076102ಈ ಹುಡುಗನಿಗೆ ಆಜಾದಿ ಬೇಕಂತೆ! ಹಸಿವಿನಿಂದ ಆಜಾದಿ, ಭ್ರಷ್ಟಾಚಾರದಿಂದ ಆಜಾದಿ, ಜಾತಿವಾದದಿಂದ ಆಜಾದಿ ಬೇಕಂತೆ. ಇದಕ್ಕಾಗಿ ಆತ ಮೋದಿಯನ್ನು ದೂರುತ್ತಿದ್ದಾನೆ. ಆದರೆ, ಮೋದಿ ಅಧಿಕಾರಕ್ಕೆ ಬಂದು ಎರಡು ವರ್ಷ ಕೂಡಾ ಸಂದಿಲ್ಲ. ಇವನನ್ನು ಬೆಂಬಲಿಸಿದ ರಾಹುಲ್ ಗಾಂಧಿ ಪಕ್ಷವೇ ದೇಶವನ್ನು ೬೦ ವರ್ಷ ಆಳಿದ್ದು. ಇವನು ಕೇಳುತ್ತಿರುವ ಆಜಾದಿಗಳು ೬೦ ವರ್ಷದಲ್ಲಿ ಸಿಗಲಿಲ್ಲ. ಆದರೆ, ಮೋದಿ ಬಂದ ನಂತರ ಆ ಆಜಾದಿಗಳು ಸಿಗುವ ಭರವಸೆ ಮೂಡಿವೆ. ಆದರೆ ಇವನ ಪ್ರಕಾರ ಇವನು ಕೇಳುವ ಆಜಾದಿ ಮೋದಿ, ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನಿಂದ ಸಿಕ್ಕಿಲ್ಲವಂತೆ. ಎಂತಹ ಹಾಸ್ಯಪ್ರಜ್ಞೆ ಈ ಹುಡುಗನಿಗೆ.
ಒಂದು ಪ್ರಸಂಗ:
ದೇಶದ ಒಂದು ವಿವಿಯಲ್ಲಿ ಓರ್ವ ವಿದ್ಯಾರ್ಥಿಯಿದ್ದ. ಆತ ಒಂದು ತಿಂಗಳ ಹಿಂದಿನವರೆಗೂ ಕೇವಲ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿ ಒಕ್ಕೂಟ ನಾಯಕನಷ್ಟೇ. ಆದರೆ, ಈಗ ಆತ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದಲ್ಲದೇ ಯುವಕರ ಶಕ್ತಿ(?)ಯಾಗಿ ಮಾರ್ಪಡುತ್ತಾನೆ. ಮುಂಬರುವ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷವೊಂದರ ಪರ ಪ್ರಚಾರಕ್ಕೆ ಆತನನ್ನು ಕರೆಸಲು ನಿರ್ಧಾರ ಮಾಡಲಾಗುತ್ತದೆ. ಆದರೆ, ಆ ವಿದ್ಯಾರ್ಥಿ ರಾತ್ರೋ ರಾತ್ರಿ ರಾಷ್ಟ್ರೀಯ ಮುಖಂಡ(?)ನಾದ ಪರಿ ಹೇಗೆ? ದೇಶ ಸೇವೆ ಮಾಡಿಯೇ, ದೇಶಕ್ಕಾಗಿ ಹೋರಾಡಿಯೇ, ಸಮಾಜಕ್ಕಾಗಿ ತ್ಯಾಗ ಮಾಡಿಯೇ? ಅಲ್ಲವೇ ಅಲ್ಲ, ರಾಷ್ಟ್ರದ್ರೋಹದ ಆರೋಪ ಹೊತ್ತು. ಯಾರು ಆ ವಿದ್ಯಾರ್ಥಿ ? ಅವರೇ ಈಗ ಪ್ರಚಂಡ ನಾಯಕನೆಂದು ಬಿಂಬಿಸಿಕೊಳ್ಳುತ್ತಿರುವ ಕನ್ಹಯ್ಯ ಕುಮಾರ್.

ಮತ್ತಷ್ಟು ಓದು »

9
ಮಾರ್ಚ್

ಸಾಯದ ಹೊರತು ನಿಮಗವನ ಹೆಸರು ಕೂಡ ಗೊತ್ತಿರುವುದಿಲ್ಲ…

ರೋಹಿತ್ ಚಕ್ರತೀರ್ಥ
beggar-made-store-owner-cryಅವನೊಬ್ಬನಿದ್ದ. ತನ್ನ ಮನೆಯ ಒಂದು ಭಾಗದಲ್ಲಿ ಅಂಗಡಿ ಇಟ್ಟುಕೊಂಡಿದ್ದ. ಪ್ರತಿದಿನ ಬೆಳಗ್ಗೆ ಮನೆಯ ಒಳಗಿಂದ ಷಟರ್ ತೆಗೆದು ಅಂಗಡಿ ತೆರೆಯುತ್ತಿದ್ದ. ಆದರೆ ಪ್ರತಿದಿನ ಆ ಕಬ್ಬಿಣದ ಬಾಗಿಲನ್ನು ಮೇಲಕ್ಕೆ ಸರಿಸುವಾಗ ಆತನ ಕಣ್ಣಿಗೆ ಮೊದಲು ಬೀಳುತ್ತಿದ್ದದ್ದು, ಅಂಗಡಿಯ ಎದುರಿಗೇ ಮಲಗಿರುತ್ತಿದ್ದ ಒಬ್ಬ ಭಿಕ್ಷುಕ. ಕೆದರಿದ, ಎಣ್ಣೆ ಕಾಣದ ತಲೆಕೂದಲು, ಬಣ್ಣಗೆಟ್ಟ ಮುಖ, ಹಲವು ದಿನಗಳಿಂದ ಸ್ನಾನ ಕಾಣದ ಮೈ, ಹರಿದ ಪ್ಯಾಂಟು, ಪುಟ್ಟಮಕ್ಕಳು ಗೀಚಿದಂತಿರುವ ನೂರೆಂಟು ಗೆರೆಗೀಟುಗಳಿಂದ ಕೂಡಿದ ಹರಕುಮುರುಕು ಅಂಗಿ, ಪ್ರಕ್ಷಾಲನವಿಲ್ಲದೆ ರಸಿಕೆಕಟ್ಟಿದ ಕೆಂಡಗಣ್ಣು, ಬಾಯಿ ತೆರೆದರೆ ಬ್ರಹ್ಮಾಂಡದರ್ಶನ. ಅಂಥ ಒಬ್ಬ ಭಿಕಾರಿ ತನ್ನ ಅಂಗಡಿಯೆದುರು ಅಪಶಕುನದಂತೆ ಕೈಕಾಲು ಮುದುರಿಕೊಂಡು ನಿದ್ದೆ ಹೊಡೆಯುವುದನ್ನು ನೋಡಿ ಅಂಗಡಿಯ ಮಾಲಿಕನಿಗೆ ನಖಶಿಖಾಂತ ಕೋಪ ಬಂದುಬಿಡುತ್ತಿತ್ತು. “ಕತ್ತೇ ಭಡವಾ” ಎಂದು ಗಟ್ಟಿಯಾಗಿ ಕಿರುಚುತ್ತಿದ್ದ. ಆತನ ಗಂಟಲಿಗೆ ಬೆಚ್ಚಿಬಿದ್ದೆದ್ದ ಭಿಕ್ಷುಕ ಕಂಗಾಲಾಗಿ ದಿಕ್ಕಾಪಾಲಾಗಿ ಓಡಿಹೋಗುತ್ತಿದ್ದ.

ಆದರೆ ಅದು, ಒಂದು ದಿನದ ಮಟ್ಟಿಗೆ ಮಾತ್ರ. ಮರುದಿನ ಅಂಗಡಿ ಬಾಗಿಲು ತೆರೆಯುವಾಗ ಭಿಕ್ಷುಕನ ಸವಾರಿ ಅಲ್ಲಿ ಹಾಜರಿರುತ್ತಿತ್ತು. ಮತ್ತೆ ಮಾಲಿಕನ ಅರಚಾಟ ನಡೆಯುತ್ತಿತ್ತು. ಈ ಕ್ರಮ ಒಂದು ದಿನವೂ ತಪ್ಪದಂತೆ ನಡೆದುಕೊಂಡು ಬರುತ್ತಿತ್ತು. ಕೆಲವೊಮ್ಮೆ ಮಾಲೀಕ ದೊಡ್ಡ ದೊಣ್ಣೆ ಎತ್ತಿಕೊಂಡು ಬಂದು ಭಿಕ್ಷುಕನಿಗೆ ಬಾರಿಸುತ್ತಿದ್ದ. ಪೆಟ್ಟು ತಿಂದ ಭಿಕ್ಷುಕ ನೋವಿನಿಂದ ಕೈಕಾಲು ಬಡಿದುಕೊಂಡು ಓಡಿಹೋಗುತ್ತಿದ್ದ. ಇನ್ನು ಕೆಲವೊಮ್ಮೆ ಮಾಲೀಕ ಒಂದು ಬಕೆಟ್ ತಣ್ಣಗೆ ನೀರು ತಂದು ಈತನ ಮೈಮೇಲೆ ಸುರಿಯುತ್ತಿದ್ದ. ಮತ್ತೆ ಕೆಲವೊಮ್ಮೆ ಬೂಟು ಹಾಕಿಕೊಂಡು ಬಂದು ಮಲಗಿ ಗೊರಕೆ ಹೊಡೆಯುತ್ತಿದ್ದವನನ್ನು ಒದ್ದದ್ದೂ ಉಂಟು. ಒಮ್ಮೆ, ಅಂಗಡಿಯ ಬಾಗಿಲು ತೆಗೆಯುವಾಗ, ಮೂತ್ರವಿಸರ್ಜನೆಯ ವಾಸನೆ ಮಾಲೀಕನ ಮುಖಕ್ಕೆ ಹೊಡೆಯಿತು. ಈ ದರಿದ್ರ ಮನುಷ್ಯ ಇಲ್ಲಿ ಮಲಗುವುದು ಮಾತ್ರವಲ್ಲದೆ ತನ್ನ ದೇಹಬಾಧೆಗಳನ್ನೂ ತೀರಿಸಿಕೊಳ್ಳುತ್ತಾನೆಂದು ಅವತ್ತು ಅವನಿಗೆ ಮೈಯೆಲ್ಲ ಉರಿದಿತ್ತು. ಕೈಗೆ ಸಿಕ್ಕಿದ್ದನ್ನೆಲ್ಲ ಆ ಭಿಕ್ಷುಕನ ಮೇಲೆ ಎತ್ತಿಹಾಕಿ ತನ್ನ ಕೋಪ ತೋರಿಸಿದ್ದ.

ಮತ್ತಷ್ಟು ಓದು »

8
ಮಾರ್ಚ್

ನನಗೆ ಅಜಾದಿ ಬೇಕು” ಎಂಬ ಆಕರ್ಷಕ ಅಪ್ರಬುದ್ಧತೆ!!

-ಸಂಕೇತ್ ಡಿ ಹೆಗಡೆ, ಸಾಗರ

images (14)ಫೇಸ್ಬುಕ್ಕಿನಲ್ಲಿ ಸುಮ್ಮನೆ ಜಾಲಾಡುತ್ತಿದ್ದಾಗ ವಾಕ್ಯವೊಂದು ಎಡತಾಕಿತು. “Strict parents raise best liars” ಅಂತ. ತೀರಾ ಸ್ಟ್ರಿಕ್ಟ್ ಪೋಷಕರ ಮಕ್ಕಳು ಅತ್ಯುತ್ತಮ ಸುಳ್ಳುಗಾರರಾಗುತ್ತಾರೆ ಅಂತ. ಸತ್ಯ. ಮಕ್ಕಳು ಸ್ವಚ್ಚಂದವಾಗಿ ಸ್ವತಂತ್ರ್ಯವಾಗಿ  ಅವರಷ್ಟಕ್ಕೆ ಬೆಳೆಯಲು ಬಿಡದಿದ್ದರೆ, ಅವರು ತಪ್ಪಿಸಿಕೊಳ್ಳಲು ಅದ್ಭುತ ಸುಳ್ಳುಗಳನ್ನು ಹೆಣೆಯಬಲ್ಲ ಪ್ರತಿಭಾವಂತರಾಗಿಬಿಡುತ್ತಾರೆ! ಮನುಷ್ಯ ಅಂತ ಅಲ್ಲ, ಸ್ವಾತಂತ್ರ್ಯ ಪ್ರತಿ ಜೀವಿಯ ಮೂಲಭೂತ ಹಕ್ಕು. ಆದರೆ… ತನ್ನ ಮಗುವಿಗೆ ಸ್ವಾತಂತ್ರ್ಯ ಕೊಡಬೇಕೆಂದು ತಾಯಿ ಮಗುವಿಗೆ ಸಂಪೂರ್ಣ ತನ್ನಷ್ಟಕ್ಕೆ ಬೆಳೆಯಲು ಬಿಟ್ಟರೆ ಏನಾಗುತ್ತೆ? ತನ್ನ ಮಗು ಸರ್ವತೋಮುಖವಾಗಿ ಬೆಳೆಯಬೇಕೆಂದು ತಂದೆ ಮಗುವನ್ನು ಸಂಪೂರ್ಣ ಸ್ವೇಚ್ಛೆಗೆ ಬಿಟ್ಟುಬಿಟ್ಟರೆ ಏನಾಗುತ್ತೆ? ಮಗು ಹಾದಿತಪ್ಪದೆ ಉಳಿದೀತೇನು? ಆಜಾದಿ ಸರಿ, ಆದರೆ ಅದು ಆರೋಗ್ಯಪೂರ್ಣ ಆಜಾದಿ ಆದರೆ ಮಾತ್ರ ಚಂದ. ಸುಮ್ಮನೆ ಬೀದಿತಪ್ಪಿದ ನಾಲ್ಕು ಹುಡುಗರು ಹಾದಿತಪ್ಪಿದ ಹಳೆಯ ಸಿದ್ದಾಂತವೊಂದನ್ನು ನಂಬಿ, ಮತ್ತೂ ನಾಲ್ಕು ಕುರಿಗಳನ್ನ ಸೇರಿಸಿ ಕೆಲಸಕ್ಕೆ ಬಾರದ so called ಕ್ರಾಂತಿ ಮಾಡುತ್ತೇವೆ, ಆಜಾದಿ ತರುತ್ತೇವೆ ಅಂತೆಲ್ಲ ಕೂಗಿದರೆ ಚಂದವಲ್ಲ, ಭಂಗ. ಅವರು ಕೇಳುತ್ತಿರುವುದು ಖಂಡಿತವಾಗಿಯೂ ಸ್ವಾತಂತ್ರ್ಯವನ್ನಲ್ಲ, ಸ್ವೇಚ್ಛೆಯನ್ನ, ಅರಾಜಕತೆ ತಂದಿಡುವ ಸ್ವೇಚ್ಛೆಯನ್ನ. ಅದನ್ನೇ ಸ್ವಲ್ಪ ಆಕರ್ಷಣೀಯವಾಗಿ “ನಮಗೆ ಭಾರತದಿಂದ ಸ್ವಾತಂತ್ರ್ಯ ಬೇಡ. ಭಾರತದಲ್ಲಿ ಬೇಕು” ಅಂತ ಕೇಳುತ್ತಿರುವುದು. ಪ್ರಥಮ ಬಾರಿಗೆ ಕೇಳುತ್ತಿರುವವನಿಗೆ “ಎಷ್ಟು ಸೊಗಸಾಗಿ ಮಾತಾಡ್ತಾನಪಾ” ಅನ್ನಿಸಬೇಕು.

ನನಗೆ ತೀರಾ ನಿಗೂಢವಾಗಿ ಕಾಣುವ ವಿಷಯ ಅಂದರೆ ಈ ಎಡಪಂಥೀಯ ಚಿಂತನೆ ಉಳ್ಳ ಬುದ್ಧಿಜೀವಿಗಳು, ಕನ್ನಯ್ಯನಂತವರೆಲ್ಲ ಯಾಕೆ ಹೀಗೆ ರಾಷ್ಟ್ರೀಯತೆಗೆ ವಿರೋಧವಾಗಿರುವ ಸಂಗತಿಗಳನ್ನೇ ಹೆಚ್ಚು ಇಷ್ಟಪಟ್ಟು ಪಸರಿಸುತ್ತಾರೆ ಎಂಬುದು. ಅವರಿಗೇನು ನಿಜವಾಗಿಯೂ ಸತ್ಯ ಗೊತ್ತಿಲ್ಲವ? ಭಾರತ ತನ್ನ ಪ್ರಜೆಗಳಿಗೆ ಬೇಕಾಬಿಟ್ಟಿ ಸ್ವಾತಂತ್ರ್ಯ ಕೊಟ್ಟಿದೆ ಎಂಬುದು. ನಾವು ನೀವು ಇರುವುದೂ ಒಂದೇ ಭೂಮಿಯಲ್ಲಿ, ಅಂಥವರಿರುವುದೂ ಒಂದೇ ಭೂಮಿಯಲ್ಲಿ, ಅಂಥದ್ದರಲ್ಲಿ ನಮಗೆ ಕಣ್ಣಿಗೆ ಹೊಡೆಯುವ ಸತ್ಯ ಅವರ ಕಣ್ಣಿಗೆ ಮಸುಬಾಗಿಯೂ ಕಾಣದೇನು? ಯಾಕೀ ಪೂರ್ವಗ್ರಹಪೀಡಿತ ರೋಗಗ್ರಸ್ಥ ಮನಸ್ಸು? ಖ್ಯಾತಿಯ ಚಿಂತೆಯಾ? ವೋಟಿನ ಚಿಂತೆಯಾ? ಕಾಸಿನ ಚಿಂತೆಯಾ? ಅಸ್ತಿತ್ವದ ಚಿಂತೆಯಾ? ಅಥವಾ ಪೊಳ್ಳು ಭ್ರಮೆಯನ್ನೇ ತಾನೂ ನಂಬಿ ಪರರನ್ನೂ ನಂಬಿಸುವುದು ಒಂದು ಮಾನಸಿಕ ಖಾಯಿಲೆಯಾ?

ಮತ್ತಷ್ಟು ಓದು »

8
ಮಾರ್ಚ್

ಮಹಿಳಾ ಅಸ್ತಿತ್ವದ ವಿವಿಧ ನೆಲೆಗಳು

– ರಾಜಕುಮಾರ.ವ್ಹಿ.ಕುಲಕರ್ಣಿ, ಮುಖ್ಯಗ್ರಂಥಪಾಲಕ
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ

ಮಾರ್ಚ್ 8 ಅಂತರಾಷ್ಟ್ರೀಯ ಮಹಿಳಾ ದಿನದ ನಿಮಿತ್ಯ ಈ ಲೇಖನ.

ಅಂತರಾಷ್ಟ್ರೀಯ ಮಹಿಳಾ ದಿನರಾಮಾಯಣದಲ್ಲಿ ಊರ್ಮಿಳೆ ಎನ್ನುವ ಪಾತ್ರವೊಂದಿದೆ. ಈಕೆ ಲಕ್ಷ್ಮಣನ ಹೆಂಡತಿ. ರಾಮ ಕಾಡಿಗೆ ಹೋಗುವ ಸಂದರ್ಭ ಅಣ್ಣನನ್ನು ಅನುಸರಿಸಿ ಲಕ್ಷ್ಮಣ ಸಹ ಕಾಡಿಗೆ ತೆರಳುತ್ತಾನೆ. ಕಾಡಿಗೆ ಹೋಗುತ್ತಿರುವ ಲಕ್ಷ್ಮಣನಿಗೆ ತನ್ನನ್ನೇ ನಂಬಿಕೊಂಡ ಜೀವವೊಂದಿದೆ ಎನ್ನುವ ನೆನಪಾಗುವುದಿಲ್ಲ. ಹೆಂಡತಿ ಸೀತೆಯನ್ನೂ ತನ್ನೊಂದಿಗೆ ಕಾಡಿಗೆ ಕರೆದೊಯ್ಯುತ್ತಿರುವ ರಾಮನಿಗೂ ತನ್ನ ತಮ್ಮ ಲಕ್ಷ್ಮಣನಿಗೂ ಪತ್ನಿ ಇರುವಳೆಂಬ ಸತ್ಯ ಗೋಚರವಾಗುವುದಿಲ್ಲ. ರಾವಣ ಸೀತೆಯನ್ನು ಅಪಹರಿಸಿದಾಗ ವಿರಹ ವೇದನೆಯಿಂದ ಬಳಲುವ ರಾಮ ತಮ್ಮ ಲಕ್ಷ್ಮಣನೆದುರು ಸೀತೆಯ ಅಗಲುವಿಕೆಯಿಂದಾದ ದುಃಖವನ್ನು ತೋಡಿಕೊಳ್ಳುತ್ತಾನೆ. ದಾರಿಯಲ್ಲಿ ಎದುರಾಗುವ ಮರ,ಗಿಡ,ಬಳ್ಳಿ,ನದಿ,ಬೆಟ್ಟಗಳನ್ನು ಮಾತನಾಡಿಸಿ ನನ್ನ ಸೀತೆಯನ್ನು ಕಂಡಿರಾ ಎಂದು ಪ್ರಲಾಪಿಸುತ್ತಾನೆ. ಹೀಗೆ ದು:ಖಿಸುತ್ತಿರುವ ರಾಮನಿಗೆ ಲಕ್ಷ್ಮಣನೂ ವಿರಹಾಗ್ನಿಯಿಂದ ಬಳಲುತ್ತಿರಬಹುದೆನ್ನುವ ಕಿಂಚಿತ್ ಸಂದೇಹವೂ ಮನಸ್ಸಿನಲ್ಲಿ ಸುಳಿಯದೇ ಹೋಗುತ್ತದೆ.ರಾಮ ರಾವಣನನ್ನು ಜಯಿಸಿ ಹದಿನಾಲ್ಕು ವರ್ಷಗಳ ವನವಾಸವನ್ನು ಪೂರ್ಣಗೊಳಿಸಿ ಸೀತೆ ಮತ್ತು ಲಕ್ಷ್ಮಣನೊಂದಿಗೆ ಅಯೋಧ್ಯೆಗೆ ಮರಳುತ್ತಾನೆ. ಹಾಗಾದರೆ ಆ ಹದಿನಾಲ್ಕು ವರ್ಷಗಳ ಕಾಲ ಪತಿಯಿಂದ ದೂರಾಗಿ ಊರ್ಮಿಳೆ ಅನುಭವಿಸಿದ ವೇದನೆ ಮತ್ತು ಸಂಕಟಗಳ ಕಥೆ ಏನು?. ರಾಮಾಯಣವನ್ನು ಓದುತ್ತಿರುವ ಘಳಿಗೆ ಓದುಗ ಊರ್ಮಿಳೆಯ ಪಾತ್ರದೊಂದಿಗೆ ಮುಖಾಮುಖಿಯಾವುದೇ ಇಲ್ಲ. ಭಾತೃತ್ವದ ಪ್ರಶ್ನೆ ಎದುರಾದಾಗ ಅದಕ್ಕೆ ಶ್ರೇಷ್ಠ ಉದಾಹರಣೆಯಾಗಿ ಲಕ್ಷ್ಮಣನ ಹೆಸರನ್ನು ಹೇಳುವ ನಾವು ಊರ್ಮಿಳೆಯನ್ನು ಮರೆತು ಬಿಡುತ್ತೇವೆ. ಹಾಗಾದರೆ ಊರ್ಮಿಳೆಯದೂ ಶ್ರೇಷ್ಠ ತ್ಯಾಗವಲ್ಲವೇ? ಹದಿನಾಲ್ಕು ವರ್ಷಗಳ ಕಾಲ ಗಂಡನಿಂದ ದೂರವೇ ಉಳಿದು ಆತನನ್ನು ಅಣ್ಣನ ಸೇವೆಗಾಗಿ ಪ್ರಾಂಜಲ ಮನಸ್ಸಿನಿಂದ ಕಳಿಸಿಕೊಟ್ಟ ಊರ್ಮಿಳೆಯ ವ್ಯಕ್ತಿತ್ವಕ್ಕೆ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ದೊರೆಯಬೇಕಾದ ಮನ್ನಣೆ ಸಿಗಲೇ ಇಲ್ಲ. ಅಂದರೆ ಮಹಿಳೆಯನ್ನು ಪುರುಷ ಪ್ರಧಾನ ನೆಲೆಯಲ್ಲಿ ಶೋಷಣೆಗೊಳಪಡಿಸುತ್ತ ಬಂದಿರುವುದಕ್ಕೆ ನಮ್ಮ ಪ್ರಾಚೀನ ಪರಂಪರೆಯ ಒತ್ತಾಸೆಯಿದೆ ಎಂದರ್ಥ.ರಾಮಾಯಣ ಹಾಗೂ ಮಹಾಭಾರತದ ಕಾಲದಿಂದಲೂ ಸ್ತ್ರೀ ಶೊಷಣೆಯ ವಸ್ತುವಾಗಿಯೇ ಬಿಂಬಿತವಾಗುತ್ತ ಬಂದಿರುವಳು.

ಇತಿಹಾಸದ ಪಾತ್ರವೊಂದು ಸ್ತ್ರೀ ಶೋಷಣೆಯ ವಸ್ತುವಾಗಿ ಪುರುಷ ಪ್ರಧಾನ ವ್ಯವಸ್ಥೆಗೆ ಒತ್ತಾಸೆಯಾಗಿ ನಿಂತಾಗ ಇತಿಹಾಸದ ಮತ್ತೊಂದು ಪಾತ್ರವಾದ ಅಕ್ಕ ಮಹಾದೇವಿಯದು ಪುರುಷ ಪ್ರಧಾನ ವ್ಯವಸ್ಥೆಯನ್ನು ಧಿಕ್ಕರಿಸಿ ಹೊಸ ವ್ಯವಸ್ಥೆಯನ್ನು ಕಟ್ಟುವ ತಹತಹಿಕೆ. ಚೆನ್ನಮಲ್ಲಿಕಾರ್ಜುನನನ್ನೆ ತನ್ನ ಪತಿಯೊಂದು ಮಾನಸಿಕವಾಗಿ ಪರಿಭಾವಿಸಿದ ಅಕ್ಕ ಕೌಶಿಕ ರಾಜನ ಕಾಮನೆಗಳನ್ನು ಮೆಟ್ಟಿನಿಂತು ಮಹಿಳಾ ವಿಮೋಚನೆಗೆ ಹೊಸ ದಾರಿ ತೋರುತ್ತಾಳೆ. ಒಂದು ಪಾತ್ರದ ಮೂಲಕ ಸ್ತ್ರೀ ಶೊಷಣೆಗೆ ಸಾಕ್ಷಿಯಾದ ಇತಿಹಾಸ ಮತ್ತೊಂದು ಪಾತ್ರದ ಮೂಲಕ ಸ್ತ್ರೀ ವಿಮೋಚನೆಗೂ ಸಾಕ್ಷಿಯಾದದ್ದು ಇತಿಹಾಸದ ಮಹತ್ವಗಳಲ್ಲೊಂದು.ಇತಿಹಾಸದಿಂದ ಬಿಡುವಷ್ಟೇ ಪಡೆಯುವುದು ಕೂಡ ಬಹುಮುಖ್ಯವಾದದ್ದು.ನಮ್ಮ ನೆಲದ ಮಹಿಳೆಯರು ಅಕ್ಕ ಮಹಾದೇವಿಯ ಧೋರಣೆ ಹಾಗೂ ಪರುಷ ಸಮಾಜವನ್ನು ಧಿಕ್ಕರಿಸಿ ನಿಂತ ಆಕೆಯ ಮನೋಸ್ಥೈರ್ಯವನ್ನು ಬಳುವಳಿಯಾಗಿ ಪಡೆದು ಸ್ತ್ರೀ ವಿಮೋಚನೆಯ ಅನೇಕ ಸ್ಥಿತ್ಯಂತರಗಳಿಗೆ ಪ್ರಯತ್ನಿಸಿದರು.ಒಂದು ರೀತಿಯಲ್ಲಿ ಮಹಿಳೆ ತನ್ನ ಅಸ್ಮಿತೆಯನ್ನು (ಅಸ್ತಿತ್ವ) ವಿವಿಧ ನೆಲೆಗಳಲ್ಲಿ ಕಂಡುಕೊಳ್ಳಲು ಮಾಡಿದ ಪ್ರಯತ್ನವೂ ಅದಾಗಿತ್ತು.
ಮತ್ತಷ್ಟು ಓದು »

7
ಮಾರ್ಚ್

ಗುರುವಾಗುವುದು ಇಷ್ಟು ಕಷ್ಟವೇ?

– ಶ್ರೀಕಾಂತ. ಎನ್, ಸಂಶೋಧನಾ ವಿದ್ಯಾರ್ಥಿ ಕುವೆಂಪು ವಿ.ವಿ

16614791-Orange-cartoon-characters-sit-in-on-a-lecture--Stock-Photoನನಗೀಗ ಇಪ್ಪತ್ತೈದು ವಯಸ್ಸು. ಈಗ ನಾನು ಸಂಶೋಧನಾ ವಿದ್ಯಾರ್ಥಿ. ಇಲ್ಲಿಗೆ ಬರುವ ಮುನ್ನ ಎರಡು ವರ್ಷ ಶಿಕ್ಷಕನಾಗಿ ಕೆಲಸ ಮಾಡಿದ್ದೆ. ಅದರ ಅನುಭವವನ್ನು ಹಂಚಿಕೊಳ್ಳುತ್ತಿದ್ದೇನೆ. ತಲೆಯ ತುಂಬಾ ಹುಡುಗರಿಗೆ ಅದು ಹೇಳಬೇಕು ಇದು ಹೇಳಬೇಕು ಎಂದು ಹಿಂದಿನ ದಿನ ಘಂಟೆಗಟ್ಟಲೇ ತಯಾರಾಗಿ, ಡಸ್ಟರ್, ಚಾಕ್, ಅಟೆಂಡೆನ್ಸ್, ಸಣ್ಣ ಚೀಟಿ ಹಿಡಿದು ತರಗತಿಗೆ ಮೊದಲನೇ ಬಾರಿ ಹೊರಟ ನನಗೆ ದೊಡ್ಡ ಆಶ್ಚರ್ಯ ಕಾದಿತ್ತು. ಯುನಿವರ್ಸಿಟಿ ನೀನು ಗಣಿತ ಪಾಠ ಮಾಡಲು ಯೋಗ್ಯ ಎಂದು ಒಂದು ಕಾರ್ಡ್ ಕೊಟ್ಟು ಕಳುಹಿಸಿತ್ತೇ ಹೊರತು, ಹೇಗೆ ಪಾಠ ಮಾಡುವುದು ಎಂದು ತಿಳಿಸಿರಲಿಲ್ಲ. ನನಗಿಂತ ಎತ್ತರ & ದಪ್ಪ, ನೋಡಲು ಪ್ರಬುದ್ಧರಾಗಿ ಕಾಣುತ್ತಿದ್ದ ಹುಡುಗರು ಅನುಮಾನದೊಂದಿಗೆ ಎದ್ದು ನಿಂತಾಗ, ನನ್ನ ಊಹೆಗಳೆಲ್ಲಾ ತಲೆಕೆಳಗಾಯಿತು. ಪಾಠ ಹೇಗೆ ಮಾಡುವುದು, ಏನೇನೆಲ್ಲಾ ಹೊಸತು ಹೇಳಬೇಕು ಎಂದಷ್ಟೇ ಯೋಚಿಸಿ ಹೋದ ನನಗೆ, ನನ್ನ ದೇಹದ ಗಾತ್ರ ಕೂಡ ಮಾನದಂಡ ಎಂದು ತಿಳಿದಾಗ, ಹಿಂದಿನ ದಿನ ತಯಾರಾದದ್ದೆಲ್ಲಾ ಸೊನ್ನೆಯಿಂದ ಗುಣಿಸಿದ ಹಾಗೆ ನಾಶವಾಯಿತು. ಕೆಲವರಂತು, ಇವರು ಲೆಕ್ಚರ್ ಅಲ್ಲವೆಂದು ಭಾವಿಸಿಯೇ ಕುಳಿತಿದ್ದರು. ಎಲ್ಲರನ್ನು ಕೂಡಿಸಿ, ಜೋರಾಗಿ ಕೇಳುತ್ತಿದ್ದ ಹೃದಯ ಬಡಿತ ಎಣಿಸುತ್ತಾ, ನನ್ನನ್ನೇ ತಿನ್ನುವಂತೆ ನೋಡುತ್ತಿದ್ದ 60*2 ಕಣ್ಣುಗಳ ತೀವ್ರತೆ ತಡೆಯಲಾಗದೆ ಬೋರ್ಡ್ ಕಡೆ ತಿರುಗಿ ಅಳಿಸಿದ್ದ ಬೋರ್ಡನ್ನು ಮತ್ತೆ ಅಳಿಸುತ್ತಾ ನನ್ನನ್ನು ಸಮಾಧಾನ ಮಾಡಿಕೊಂಡೆ. ನನ್ನ ಸಹೋದ್ಯೋಗಿ ಹೇಳಿ ಕಳಿಸಿದಂತೆ ಮೊದಲು ನನ್ನ ಪರಿಚಯ ಮಾಡಿಕೊಂಡು, ಅವರ ಹೆಸರು ಕೇಳಿ, ಭಯದಿಂದ ನನಗೆ ತೋಚಿದ್ದು ಹೇಳಿ ಬಂದಾಗ, ಇಷ್ಟೊಂದು ಕಷ್ಟವೇ ಗುರುವಾಗೋದು ? ನನ್ನ ಕೆರಿಯರ್ ಆಯ್ಕೆ ತಪ್ಪೇ ! ಎಂದೆನಿಸಿತು.

ಮತ್ತಷ್ಟು ಓದು »

6
ಮಾರ್ಚ್

ಅಗ್ನಿರಾಜನ ಪ್ರಕರಣ

 

 

– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ,
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ,ತುಮಕೂರು ವಿಶ್ವವಿದ್ಯಾನಿಲಯ 

1058749_10154099009590649_1296063247_nಮೊನ್ನೆ ತಾನೆ ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ತಂದೆಯಿಂದ ಅತ್ಯಾಚಾರಕ್ಕೊಳಗಾದ ಹೆಣ್ಣುಮಗಳೊಬ್ಬಳಿಗೆ ಪಂಚಾಯ್ತಿ ಛಡಿ ಏಟಿನ ಶಿಕ್ಷೆ ಕೊಟ್ಟಿದ್ದು ಇದೀಗ ರಾಷ್ಟ್ರವ್ಯಾಪಿ ಚರ್ಚೆಗೆ ಗ್ರಾಸವಾಗಿದೆ. ಇಂಥ ಕಥೆಯೊಂದು ಕ್ರಿ.ಶ. 900ರ ವೇಳೆಗೇ ನಡೆದಿದ್ದನ್ನು ಕಥೆಯೊಂದು ಹೇಳುತ್ತದೆ. ಇದನ್ನು ಹೇಳುವ ಮುನ್ನ ಸಣ್ಣ ಪೀಠಿಕೆ ಅಗತ್ಯ.

ಕಳೆದ ಮುನ್ನೂರು ವರ್ಷಗಳಲ್ಲಿ ಭಾರತೀಯ ಸಂಸ್ಕೃತಿಯ ಬಹುಪಾಲು ಸೈದ್ಧಾಂತಿಕ ಮತ್ತು ಪಠ್ಯ ಸಂಬಂಧಿ ಅಧ್ಯಯನವನ್ನು ಕೈಗೊಂಡವರು ಯೂರೋಪಿನ ಚಿಂತಕರು. ಅವರು ನಾವು ಹಾಗೂ ನಮ್ಮ ಸಮಾಜವನ್ನು ತಮ್ಮ ಇಷ್ಟದಂತೆ ಕಂಡು, “ಅಧ್ಯಯನ” ಮಾಡಿ, ನಮ್ಮ ಸಮಾಜ ಹಾಗೂ ಸಂಸ್ಕೃತಿಯಲ್ಲಿ ಏನೇನು ತಪ್ಪುಗಳಿವೆ ಎಂದು ತೋರಿಸಿ ಅದನ್ನೇ ಆಧುನಿಕ ಶಿಕ್ಷಣದ ಮೂಲಕ ನಮಗೆ ಕಲಿಸಿದರು. ಇಂದಿಗೂ ನಾವು ಅದನ್ನೇ ನಂಬಿಕೊಂಡು ಬಂದಿದ್ದೇವೆ. ಕಳೆದ ಎರಡರಿಂದ ಮೂರು ಸಾವಿರ ವರ್ಷಗಳ ಅವಧಿಯಲ್ಲಿ ಭಾರತೀಯ ಚಿಂತಕರು ಏನೇನೂ ಚಿಂತನೆ ಮಾಡಲೇ ಇಲ್ಲವೇ? ನಮ್ಮಿಂದ ಯೂರೋಪ್ ಕಲಿಯುವುದು ಏನೂ ಇಲ್ಲವೇ? ಎಂದು ಸಂಸ್ಕೃತಿ ಚಿಂತಕ ಬಾಲಗಂಗಾಧರ್ ಕೇಳುತ್ತಾರೆ. ಇಡೀ ಭಾರತದ್ದಿರಲಿ, ಕನ್ನಡ ಸಾಹಿತ್ಯದ ಹಲವಾರು ಸಂಗತಿಗಳನ್ನು ಗಮನಿಸಿದರೆ ಈ ಮಾತು ಅಕ್ಷರಶಃ ಸತ್ಯ ಅನಿಸುತ್ತದೆ. ಕನ್ನಡ ನವ್ಯ ಸಾಹಿತಿಗಳು ಪಾಶ್ಚಾತ್ಯರಿಂದ ಹೊಸದನ್ನು ತರುವ, ಪರಿಚಯಿಸುವ ಭರದಲ್ಲಿ ನಮ್ಮದೇ ಆದ ಹಳೆಗನ್ನಡವನ್ನು ಅಲಕ್ಷಿಸಿದರು. ಶಿಕ್ಷಣ, ಮಾಧ್ಯಮಗಳೆಲ್ಲ ನವ್ಯ ಸಾಹಿತ್ಯಕ್ಕೆ ನೀಡಿದ ಪ್ರಾಮುಖ್ಯವನ್ನು ಹಳೆಗನ್ನಡಕ್ಕೆ ನೀಡದೇ ಹೋದವು. ಮೂರ್ನಾಲ್ಕು ತಲೆಮಾರುಗಳು ಹೀಗೇ ರೂಪುಗೊಂಡು ಶಿಕ್ಷಣ ಸಂಸ್ಥೆಗಳಲ್ಲೂ ಇದೇ ಮಾದರಿ ತಯಾರಾಗಿ ಈಗ ಪ್ರಾಥಮಿಕ ಹಂತವಿರಲಿ, ಉನ್ನತ ಶಿಕ್ಷಣದಲ್ಲೂ ಹಳೆಗನ್ನಡ ಓದುವವರೂ ಇಲ್ಲವೇ ಇಲ್ಲ ಅನ್ನುವ ಪರಿಸ್ಥಿತಿ ಉಂಟಾಗಿದೆ. ನವ್ಯ ಪ್ರಭಾವದ ಇಂದಿನ ಕನ್ನಡ ಸಾಹಿತ್ಯ ಓದಿದವರಿಗೆ ಈಡಿಪಸ್ ಗೊತ್ತಿರುತ್ತಾನೆ, ಆದರೆ ಅಗ್ನಿರಾಜನಾಗಲೀ ಕುಮಾರರಾಮನಾಗಲೀ ಗೊತ್ತೇ ಇರದಿದ್ದರೆ ಅದು ವಿದ್ಯಾರ್ಥಿಗಳ ತಪ್ಪಲ್ಲ! ಸಿಗ್ಮಂಡ್ ಫ್ರಾಯ್ಡ್ ನ ಈಡಿಪಸ್ ಕಾಂಪ್ಲೆಕ್ಸ್ ಹೆಸರು ಹಾಗೂ ಕಥೆ ಪರಿಚಯವಿರುವಷ್ಟು ಅಗ್ನಿರಾಜನ ಕಥೆ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಬಹಳಷ್ಟು ಅಧ್ಯಾಪಕರಿಗೂ ಗೊತ್ತೇ ಇಲ್ಲ! ಇದಕ್ಕೆ ಇರುವ ಕಾರಣವನ್ನು ಈಗಾಗಲೇ ಬಾಲು ಅವರ ಮಾತಿನಲ್ಲಿ ಕೇಳಿದ್ದಾಗಿದೆ.

ಮತ್ತಷ್ಟು ಓದು »

5
ಮಾರ್ಚ್

ಸೈನಿಕರೊಂದಿಗೆ ಸದೃಢ ಭಾರತ ಸರಕಾರ

– ಅನಿರುದ್ಧ ಎಸ್.ಆರ್ , ಭದ್ರಾವತಿ

56215932-indian“ಈ ಕ್ಷಣದಿಂದಲೇ ಪಾಕಿಸ್ಥಾನ ಅಪ್ರಚೋದಿತ ದಾಳಿ ನಡೆಸುವುದನ್ನು ನಿಲ್ಲಿಸಬೇಕು, ಭಾರತದ ಕಡೆಯಿಂದ ಎಂದಿಗೂ ಸ್ವಯಂ ಪ್ರೇರಿತವಾಗಿ ಗುಂಡಿನ ದಾಳಿ ನಡೆಯುವುದಿಲ್ಲ. ಆದರೆ ನಿಮ್ಮ ಕಡೆಯಿಂದ ಗುಂಡಿನ ದಾಳಿಯೇನಾದರೂ ನಡೆದರೆ, ಆನಂತರ ನಮ್ಮಿಂದ ಹಾರುವ ಗುಂಡುಗಳನ್ನು ಲೆಕ್ಕ ಹಾಕಲು ನಿಮಗೆ ಸಾಧ್ಯವಿಲ್ಲ ” ಹೀಗೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದು ಸರಕಾರದ ಗೃಹ ಸಚಿವರಾದ ರಾಜನಾಥ್ ಸಿಂಗ್.

ಹೌದು. ಆಡಳಿತರೂಢರಿಂದ ಇಂತಹ ಮಾತುಗಳನ್ನು ಕೇಳಲು ಮೋದಿ ನೇತೃತ್ವದ ಸರ್ಕಾರವೇ ಬರಬೇಕಾಯಿತು. ಕದನ ವಿರಾಮ ಉಲ್ಲಂಘನೆ, ಅಂತರಾಷ್ಟ್ರೀಯ ಗಡಿ ಒಪ್ಪಂದದ ಉಲ್ಲಂಘನೆ, ಗಡಿ ಭಾಗದ ನಾಗರಿಕ ವಸತಿ ಪ್ರದೇಶಗಳ ಮೇಲೆ ಗುಂಡಿನ ದಾಳಿ ಹಾಗೂ ಭಾರತೀಯ ಯೋಧರ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸುವುದನ್ನೇ ಚಾಳಿಯನ್ನಾಗಿ ಮಾಡಿಕೊಂಡಿರುವ ಪಾಕಿಸ್ತಾನಕ್ಕೆ ಕಲಿಯುಗ ಅಸುರರೆಂಬ ಭಯೋತ್ಪಾದಕರ ಕುಮ್ಮಕ್ಕೂ ಇರುವುದು ಭಂಡ ಧೈರ್ಯಕ್ಕೆ ಕಾರಣ. ಈಗ 125 ಕೋಟಿ ಭಾರತೀಯರು  ಪೂರ್ಣ ಬಹುಮತದ ಶಕ್ತ ಸರಕಾರವನ್ನು ಆಯ್ಕೆ ಮಾಡಿದ ನಂತರ ಪಾಕ್ ಗೆ ಮಾತ್ರವಲ್ಲ ಭಯೋತ್ಪಾದನೆಯನ್ನು ನಡೆಸುತ್ತಿರುವ ಪ್ರತೀ ರಾಕ್ಷಸನಿಗೂ ಒಳಗೊಳಗೇ ನಡುಕ ಶುರುವಾಗಿದೆ. ಅದರ ಒಂದು ಪರಿಣಾಮವೇ ಪಾಕ್ ಸೇನೆಯೊಂದಿಗೆ ಸೇರಿಕೊಂಡು ಭಾರತದ ಗಡಿಯಲ್ಲಿ ನಡೆಸುತ್ತಿರುವ ಅಪ್ರಚೋದಿತ ದಾಳಿಯೆಂಬ ಭಯೋತ್ಪಾದನೆ. ಇಂತಹ ಕುತಂತ್ರಿಗಳನ್ನು ಗಡಿಯಲ್ಲಿ ಬಗ್ಗು ಬಡಿಯಲು ನಮ್ಮ ಸೈನಿಕರಿಗೆ ಮನಸ್ಸಿದ್ದರೂ ಹಿಂದಿನ ಸರ್ಕಾರದ ಅವಧಿಯಲ್ಲಿ ತಣ್ಣಗೆ ಕೂರಬೇಕಿತ್ತು. ಶತ್ರುಗಳಿಗೆ ದಿಟ್ಟ ಉತ್ತರ ನೀಡುವುದಿರಲಿ, ಕನಿಷ್ಟ ಹಿಮ್ಮೆಟ್ಟಿಸುವ ಕಾರ್ಯಕ್ಕೂ ಕೇಂದ್ರದ ಆದೇಶಕ್ಕಾಗಿ ಕಾಯಬೇಕಿತ್ತು.
ಮಾತೃಭೂಮಿಯ ರಕ್ಷಣೆಗಾಗಿ ಪ್ರಾಣತ್ಯಾಗಕ್ಕೆ ಸಿದ್ಧರಾಗಿದ್ದರೂ, ಬೇಕಾದರೆ ಪ್ರಾಣ ಬಿಡಿ, ಪ್ರತಿದಾಳಿ ನಡೆಸಬೇಡಿ ಎನ್ನುವುದು ನಮ್ಮ ಸೇನೆಗೆ ಹಿಂದಿನ ಸರ್ಕಾರ ನೀಡುತ್ತಿದ್ದ ಅಲಿಖಿತ ಮೌನ ಸಂದೇಶವಾಗಿತ್ತು. ಇದನ್ನರಿತೇ ಪಾಕ್ ಸೈನಿಕರು ಹಾಗೂ ಪಾಕ್ ಕೃಪಾಪೋಷಿತ ಉಗ್ರರು ಗಡಿಯಲ್ಲಿ ತೀವ್ರವಾಗಿ ದಾಳಿಗಳನ್ನು ನಡೆಸುತ್ತಿದ್ದರು. ನಮ್ಮ ಯೋಧರ ತಲೆ ಕತ್ತರಿಸಿಕೊಂಡು ಹೋದರೂ ಶತ್ರುಗಳಿಗೆ ದಿಟ್ಟ ಉತ್ತರ ನೀಡುವಲ್ಲಿ ಅಂದಿನ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಸೋತು ಜಗತ್ತಿನ ಮುಂದೆ ತಲೆ ತಗ್ಗಿಸಿನಿಂತಿದ್ದರೆ ಹೊಟ್ಟೆಯೆಲ್ಲಾ ಉರಿಯುತ್ತಿತ್ತು. ಆದರೆ, ಈಗ ಕಾಲ ಕೊಂಚ ಬದಲಾಗಿದೆ. ಮಾಹಿತಿಯೊಂದರ ಪ್ರಕಾರ ನಮ್ಮ ರಕ್ಷಣಾ ಬಜೆಟ್ 3.25 ಲಕ್ಷ ಕೋಟಿ, 13 ಲಕ್ಷ ಸೈನಿಕರು, 1905 ಯುದ್ಧ ವಿಮಾನಗಳು ನಮ್ಮಲ್ಲಿವೆ. ಇವೆಲ್ಲದರ ಜೊತೆಗೆ ಸೇನೆಗೆ ನಿರ್ಧಾರವನ್ನು ಕೈಗೊಳ್ಳೊ ಸ್ವಾತಂತ್ರ್ಯವನ್ನು ನೀಡಿ, ಅವರಿಗೆ ನೈತಿಕ ಸ್ಥೈರ್ಯ ತುಂಬುವ ಮೂಲಕ ಭಾರತದ ರಕ್ಷಣೆಗೆ ಸಮರ್ಥ ಪ್ರಧಾನಿಯ ನೇತೃತ್ವದಲ್ಲಿ ಯೋಗ್ಯ ರಕ್ಷಣಾ ಸಚಿವರು ಹಾಗು ಗೃಹ ಮಂತ್ರಿಗಳಿರುವುದು ನೆಮ್ಮದಿಯ ವಿಷಯ.
ಮೋದಿಯವರ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಗಡಿಯಲ್ಲಿ ದಾಳಿಗಳು ನಡೆದೇ ಇಲ್ಲವೆಂದು ಹೇಳುತ್ತಿಲ್ಲ. ವಾಸ್ತವವಾಗಿ ನೋಡುವುದಾದರೆ, ಮೋದಿ ಸರಕಾರ ಬಂದ ನಂತರ ಗಡಿಯಲ್ಲಿ ಪಾಕಿಗಳ ಉಪಟಳ ಹೆಚ್ಚಾಗಿದೆ ಎಂದೇ ಹೇಳಬೇಕು. ಅದಕ್ಕಿರುವ ಕಾರಣ ಮೋದಿ ಸರಕಾರದ ಮೇಲಿರುವ ಭಯವಷ್ಟೇ. ಅಂದರೆ ಗಡಿಯಲ್ಲಿ ದಾಳಿ ನಡೆಸಿದ ವೇಳೆ ಹಿಂದಿನಂತೆ ಪ್ರತಿದಾಳಿಗಾಗಿ ಆದೇಶಕ್ಕೆ ಈಗ ಕಾಯಬೇಕಿಲ್ಲ. ಇದಕ್ಕೆ ಸಾಕ್ಷಿಯಾಗಿ ರಕ್ಷಣಾ ಸಚಿವರಾದ ಮನೋಹರ್ ಪರಿಕ್ಕರ್ ಅವರ ಹಿಂದಿನ ಹೇಳಿಕೆಯೊಂದನ್ನು ನೋಡೋಣ. ಕಳೆದ ವರ್ಷ ಜಮ್ಮುವಿನ ಗಡಿಭಾಗದಲ್ಲಿ ಪಾಕ್ ಸೈನಿಕರು ನಡೆಸಿದ ದಾಳಿಗೆ ಓರ್ವ ಭಾರತೀಯ ಯೋಧ ಹುತಾತ್ಮನಾಗಿದ್ದ.
ಈ ದುಷ್ಕೃತ್ಯಕ್ಕೆ ಪ್ರತಿಯಾಗಿ ನಾಲ್ವರು ಪಾಕಿಸ್ತಾನದ ಸೈನಿಕರನ್ನು ನಮ್ಮ ಸೈನಿಕರು ಕ್ಷಣ ಮಾತ್ರದಲ್ಲಿ ಹೊಡೆದುರುಳಿಸಿದ್ದರು. ಪರಿಣಾಮ, ಬೆಚ್ಚಿದ ಪಾಕ್ ಸೇನೆ ಬಿಳಿ ಬಾವುಟ ತೋರಿಸಿ ದಾಳಿ ನಿಲ್ಲಿಸುವಂತೆ ಭಿಕ್ಷೆ ಬೇಡಿತ್ತು. ಹೀಗಾಗಿ ನಮ್ಮ ಕಡೆಯಿಂದ ಗುಂಡಿನ ದಾಳಿ ನಿಂತಿತ್ತು. ಆದರೆ, ಇದಾದ ಕೆಲವೇ ಗಂಟೆಗಳಲ್ಲಿ ತನ್ನ ನರಿ ಬುದ್ದಿಯನ್ನು ಪ್ರದರ್ಶಿಸಿದ ಪಾಕ್, ಭಾರತೀಯ ಪೋಸ್ಟಗಳ ಮೇಲೆ ಪುನಃ ದಾಳಿ ಆರಂಭಿಸಿತ್ತು. ಈ ಘಟನೆಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ” ಪಾಕ್ಗೆ ಸರಿಯಾದ ಬುದ್ದಿ ಕಲಿಸಿ, ಪಾಕ್ ಕಡೆಯಿಂದ ಒಂದು ಗುಂಡು ಬಂದರೆ ಅದಕ್ಕೆ ಪ್ರತಿಯಾಗಿ ನಮ್ಮಿಂದ ನಾಲ್ಕು ಗುಂಡು ಹಾರಲಿ. ಅವರು ಒಮ್ಮೆ ಟ್ರಿಗರ್ ಒತ್ತಿದರೆ, ನಮ್ಮ ಕಡೆಯಿಂದ ನಿರಂತರವಾಗಿ ಗುಂಡಿನ ಮಳೆಗರೆಯಲಿ” ಎಂದಿದ್ದರು. ಎಲ್ಲಕ್ಕೂ ಮಿಗಿಲಾಗಿ ಅವರು ಹೇಳಿದ್ದ ಒಂದು ಮಾತು ” ನಿಮ್ಮೊಂದಿಗೆ ನಾವಿದ್ದೇವೆ” ಎಂದು.
ಇಂತಹ ಮಾತನ್ನು ಭಾರತೀಯ ಸೈನಿಕರು ಕೇಳಲು ಮೋದಿಯವರ ನೇತೃತ್ವದಲ್ಲಿ ಸರಕಾರ ಬರಬೇಕಾಯಿತು ಎಂದರೆ ನಾಚಿಕೆಯಾಗಬೇಕು ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ಸಿಗರಿಗೆ. ಈಗ ಪರಿಕ್ಕರ್ ರವರ ರೀತಿಯಲ್ಲಿಯೇ ಗೃಹ ಸಚಿವ ರಾಜನಾಥ್ ಸಿಂಗ್ ರವರು  ಕೂಡ ಮಾತನಾಡಿದ್ದು, ಪಾಕಿಸ್ತಾನ ಅಪ್ರಚೋದಿತ ದಾಳಿ ನಡೆಸುವುದನ್ನು ನಿಲ್ಲಿಸಬೇಕು. ಭಾರತದ ಕಡೆಯಿಂದ ಯಾವತ್ತೂ ಸ್ವಯಂ ಪ್ರೇರಿತವಾಗಿ ಗುಂಡಿನ ದಾಳಿ ನಡೆಯುವುದಿಲ್ಲ. ಆದರೆ, ನಿಮ್ಮ ಕಡೆಯಿಂದ ಗುಂಡಿನ ದಾಳಿಯೇನಾದರೂ ನಡೆದರೆ, ಆನಂತರ ನಮ್ಮಿಂದ ಹಾರುವ ಗುಂಡುಗಳನ್ನು ಲೆಕ್ಕ ಹಾಕಲು ನಿಮಗೆ ಸಾಧ್ಯವಿಲ್ಲ ಎಂದಿದ್ದಾರೆ. ಇಲ್ಲಿ ಈ ಮಾತಿಗೆ ಹೆದರಿ ಪಾಕ್ ಸೇನೆ ಹಿಂಜರಿಯುತ್ತದೆ ಎಂಬ ಭ್ರಮೆ ನಮ್ಮದಲ್ಲ. ಆದರೆ, ಆಡಳಿತಾರೂಢರಿಂದ ಇಂತಹ ಮಾತುಗಳು ಸೇನೆಗೆ ನೈತಿಕ ಬಲವನ್ನು ತುಂಬುತ್ತದೆ. ಆ ಮೂಲಕ ದೇಶಕ್ಕಾಗಿ ಪ್ರಾಣತ್ಯಾಗಕ್ಕೂ ಸಿದ್ಧರಾಗಿರುವ ಯೋಧರ ಕಾರ್ಯವನ್ನು ಗೌರವಿಸಿದಂತಾಗುತ್ತದೆ ಎನ್ನುವುದು ವಾಸ್ತವ. ಇದರೊಂದಿಗೆ ಪಾಕಿಸ್ತಾನದ ಈ ಭಯೋತ್ಪಾದನಾ ಚಟುವಟಿಕೆಯನ್ನು ಮಟ್ಟ ಹಾಕಲು ನೈತಿಕ ಸ್ಥೈರ್ಯ ತುಂಬುವ ಜೊತೆಯಲ್ಲಿ, ಸೇನೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರಾಗಳನ್ನು ಒದಗಿಸುವುದರ ಜೊತೆಗೆ ರಾಫೆಲ್ ಜೆಟ್ನಂತಹ ಯುದ್ಧ ವಿಮಾನದ ಖರೀದಿಗೆ ಭಾರತ ಸರಕಾರ ಒಪ್ಪಂದ ಮಾಡಿಕೊಂಡಿರುವುದು ನಿಜಕ್ಕೂ ಸೇನೆಗೆ ನೂರಾನೆ ಬಲ ಬಂದಂತಾಗಿದೆ. ಹೀಗಿದ್ದಾಗ, ಪ್ರತಿ ಯೋಧನೂ ಒಂದೊಂದು ಅಸ್ತ್ರವಾಗಿ ದೇಶಕ್ಕಾಗಿ ಹೋರಾಡಬಲ್ಲ. ಇವರೊಂದಿಗೆ ನಿಜವಾದ ದೇಶಪ್ರೇಮಿಗಳೂ ಸೇನೆಯೊಂದಿಗಿದ್ದಾರೆ. ಪಾಪಿಗಳೇ ಬಾಲ ಮುದುರಿ, ಇಲ್ಲವೇ ಹೆಡೆಮುರಿ ಕಟ್ಟುತ್ತೇವೆ. ಇಲ್ಲವೇ, ಬಾಂಗ್ಲಾ ಗಡಿಯಲ್ಲಿ ನುಗ್ಗಿ, ನಾಗಾ ಉಗ್ರರನ್ನು ಅಟ್ಟಾಡಿಸಿಕೊಂಡು ಬೇಟೆಯಾಡಿದಂತೆ, ಭಾರತೀಯ ಯೋಧರು ಪಿಒಕೆಯಲ್ಲಿ ನಿಮ್ಮನ್ನು ಬೇಟೆಯಾಡುವ ದಿನ ದೂರವಿಲ್ಲ. ಎಚ್ಚರ !.
ಕೊನೆಯಲ್ಲಿ…
ಪರಮವೀರ ಚಕ್ರ ವಿಜೇತ ಸುಬೇದಾರ್ ಯೋಗೀಂದ್ರ ಸಿಂಗ್ ಅವರೊಂದಿಗೆ ಮಾತನಾಡುತ್ತಿದ್ದಾಗ ಅವರು ಹೇಳಿದ ಮಾತು ನೆನಪಿಗೆ ಬರುತ್ತಿದೆ.
“ಶತ್ರುಗಳು ಎಷ್ಟೇ ಪ್ರಬಲರಾಗಿದ್ದರೂ ಅವರನ್ನು ಎದುರಿಸಿ ಜಯಭೇರಿ ಬಾರಿಸುವಷ್ಟು ಸಾಮರ್ಥ್ಯ ನಮ್ಮ ಭಾರತೀಯ ಸೇನೆಗೆ ಇದೆ. ಅಸ್ತ್ರ, ಅಣ್ವಸ್ತ್ರಕ್ಕಿಂತಲೂ ಭಾರತೀಯ ಸೇನೆಯಲ್ಲಿರುವ ಪ್ರತಿಯೊಬ್ಬ ಯೋಧನೂ ಶಕ್ತಿಶಾಲಿಯಾದ ಒಂದೊಂದು ಪ್ರಬಲ ಅಸ್ತ್ರ “

ಮತ್ತಷ್ಟು ಓದು »

4
ಮಾರ್ಚ್

ಈ ಯೋಧರು ತಮ್ಮ ಆಳುಗಳಿಗೆ ಕೊಟ್ಟ ಕೂಲಿ ಮುಖ್ಯಮಂತ್ರಿಯೂ ಕೊಡಲಾರ !

ಸಂತೋಷ್ ತಮ್ಮಯ್ಯ

Indian_Army_troops_Guarding_Borders೧೯೯೯ರ ಜುಲೈ ತಿಂಗಳು. ದೇಶಾದ್ಯಂತ ಕಾರ್ಗಿಲ್ ಯುದ್ಧದ ಬಿಸಿ ವ್ಯಾಪಿಸುತ್ತಿತ್ತು. ಎಲ್ಲೆಲ್ಲೂ ಆಕ್ರೋಶ, ಯೋಧರ ಸ್ಥೈರ್ಯ ಹೆಚ್ಚಿಸುವ ಕಾರ್ಯಕ್ರಮಗಳು ನಡೆಯುತ್ತಿದ್ದವು. ದೇಶದ ಮೂಲೆ ಮೂಲೆಗಳಿಂದ ನಿಧಿಸಂಗ್ರಹ, ಪಾಕ್ ಖಂಡನೆ, ಪ್ರತಿಭಟನೆ, ಬಲಿದಾನಿಗಳಿಗೆ ನಮನ ಕಾರ್ಯಕ್ರಮಗಳು ನಡೆಯುತ್ತಿದ್ದವು. ಅಂಥ ಒಂದು ದಿನ ಕೊಡಗಿನ ಗೋಣಿಕೊಪ್ಪದಲ್ಲಿ ಕಾರ್ಗಿಲ್ ನಮನದ ಮೆರವಣಿಗೆ ನಡೆಯುತ್ತಿತ್ತು, ಜನ ಕಿಕ್ಕಿರಿದು ಸೇರಿದ್ದರು. ನಾಗರಿಕರು, ಮಾಜಿ ಯೋಧರು, ವರ್ತಕರು, ಸಂತೆಗೆ ಬಂದವರು, ವಿದ್ಯಾರ್ಥಿಗಳು ಸೇರಿದ್ದರು. ಮಾಜಿ ಮಿಲಿಟರಿ ಅಧಿಕಾರಿಯೊಬ್ಬರು ಪಾಕ್ ವಿರುದ್ಧ ಕೆಂಡಾಮಂಡಲವಾಗಿ ಮಾತಾಡಿದರು. ಜಯಘೋಷಗಳೊಂದಿಗೆ ಮೆರವಣಿಗೆ ಹೊರಟಿತು. ಮುಶ್ರಫನ ಪ್ರತಿಕೃತಿ ದಹಿಸುವುದರೊಂದಿಗೆ ಮೆರವಣಿಗೆ ಮುಕ್ತಾಯವಾಗುತ್ತದೆ ಎಂದು ಘೋಷಿಸಲಾಯಿತು. ಹೀಗೆ ಮೆರವಣಿಗೆ ಸಾಗಿ ಬಸ್ ಸ್ಟಾಂಡಿಗೆ ಮುಟ್ಟಿ ಮುಶ್ರಫನ ಪ್ರತಿಕೃತಿಗೆ ಇನ್ನೇನು ಬೆಂಕಿ ಹಚ್ಚಬೇಕು, ಅಷ್ಟರಲ್ಲಿ ಪೊನ್ನಂಪೇಟೆ ಕಡೆಯಿಂದ ಅತಿ ವೇಗವಾಗಿ ಬಂದ ಕಾರೊಂದು ಮೆರವಣಿಗೆಯ ಮುಂದೆ ಬಂದು ಜಕ್ಕೆಂದು ನಿಂತಿತು. ಜನರು ಬೆಂಕಿ ಹಚ್ಚುವುದನ್ನು ಬಿಟ್ಟು ಆ ಕಾರನ್ನು ನೋಡತೊಡಗಿದರು. ನೋಡುತ್ತಿದ್ದಂತೆ ಆ ಕಾರಿಂದ ಬಿಳಿಯಾದ ಸುರುಳಿ ಮೀಸೆಯ ಮುದುಕರೊಬ್ಬರು ಇಳಿದರು. ಅವರ ಕೈ ನಡುಗುತ್ತಿತ್ತು. ಡಬಲ್ ಬ್ಯಾರಲ್ ಬಂದೂಕನ್ನು ಬೇರೆ ಹಿಡಿದಿದ್ದರು. ಒಂದು ಕ್ಷಣ ಆ ಸಾವಿರಾರು ಜನರು ಸ್ತಬ್ದರಾದರು. ಈ ಅಜ್ಜ ನೋಡನೋಡುತ್ತಲೇ ಕೋವಿಗೆ ಕಾಡತೂಸುಗಳನ್ನು ತುಂಬಿಸಿದರು. ಜೈ ಮಾಕಾಳಿ ಎನ್ನುತ್ತಲೇ ಮುಶರಫನ ಪ್ರತಿಕೃತಿಗೆ ಎರಡು ಗುಂಡುಗಳನ್ನು ಹಾರಿಸಿಯೇಬಿಟ್ಟರು! ಸಾವಿರಾರು ಜನ ಸೇರಿದ್ದ ಮೆರವಣಿಗೆ ಸನ್ನಿ ಹಿಡಿದವರಂತೆ ಜಯಘೋಷ ಮೊಳಗಿಸಿತು. ನಂತರ ಆ ಅಜ್ಜನನ್ನು ಪತ್ರಿಕೆಗಳು ಮಾತಾಡಿಸಿದವು. ಆ ಅಜ್ಜ ಹವಾಲ್ದಾರ್ ಮುದ್ದಪ್ಪ. ಬ್ರಿಟೀಷ್ ಕಾಲದಲ್ಲೇ ಆರ್ಮಿ ಸೇರಿ ಎರಡನೆ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ಯೋಧ. ಅರವತ್ತೆರಡರ ಯುದ್ದದಲ್ಲಿ ಪಾಲ್ಗೊಂಡು ಚೀನಾದಲ್ಲಿ ಸೆರೆಯಾಳಗಿದ್ದ ವ್ಯಕ್ತಿ. ತಮ್ಮ ೮೫ನೇ ವಯಸ್ಸಿನಲ್ಲೂ ಅವರು “ನಾನು ಈಗಲೂ ಕಾರ್ಗಿಲ್ ಗೆ ಹೋಗಲು ಸಿದ್ಧ” ಎಂದು ಮೀಸೆ ತಿರುವಿ ವರದಿಗಾರರಿಗೆ ಹೇಳಿದ್ದರು. ಮತ್ತಷ್ಟು ಕೆದಕಿ ನೋಡಿದರೆ ಆ ಅಜ್ಜ ದಕ್ಷಿಣ ಕೊಡಗಿನಲ್ಲಿ ಅತಿ ದೊಡ್ಡ ಕಾಫಿ ತೋಟವನ್ನು ಹೊಂದಿದ್ದ ಟಾಪ್ ಹತ್ತು ಜನರಲ್ಲಿ ಒಬ್ಬರು. ಆ ಕಾಲದಲ್ಲೇ ಅವರ ಮಕ್ಕಳು ಹೆಲಿಕಾಫ್ಟರನ್ನು ಖರೀದಿಸಲು ಓಡಾಡುತ್ತಿದ್ದರು.

ಮತ್ತಷ್ಟು ಓದು »

2
ಮಾರ್ಚ್

ಕಾಂಗ್ರೆಸ್ ಮುಕ್ತ ಸುಳ್ಯದಲ್ಲಿ ಅರಳಿದ ಕಮಲ

  – ತಾರನಾಥ ನಡುಮನೆ

BJP Wಸುಳ್ಯ- ಇಂದು ಇದು ರಾಜಕೀಯವಾಗಿ ದಕ್ಷಿಣಕನ್ನಡಕ್ಕೆ ಸೇರಿದರೂ, ಇನ್ನೂ ಕೊಡಗಿನ ಕೆಲವು ಸಂಪ್ರದಾಯವನ್ನು ಉಳಿಸಿಕೊಂಡು ಬಂದ ಪ್ರದೇಶ. ಕರ್ನಾಟಕದ ಪ್ರಮುಖ ತೀರ್ಥಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವನ್ನು ಹೊಂದಿರುವ ತಾಲೂಕು.

ಸುಳ್ಯ ಪರಿಸರ ಮಂಗಳೂರಿನಂತೆ ಸಮತಟ್ಟಾಗಿರದೆ , ಕೊಡಗಿನಂತೆ ಸಣ್ಣ ಬೆಟ್ಟ-ಗುಡ್ಡ ವನ್ನು ಹೊಂದಿರೋ ಪ್ರದೇಶ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಹಸಿರು ಸಿರಿಯಲ್ಲಿ  ಮಲಗಿರುವ ಊರು. ಇಲ್ಲಿನ ಜನ ಸ್ವಾಭಿಮಾನಿಗಳು , 1837 ರಲ್ಲಿ ನಡೆದ ಅಮರ ಸುಳ್ಯದ ರೈತ ದಂಗೆ ಇದಕ್ಕೆ ಸಾಕ್ಷಿ. ಅಂದು ಕಂದಾಯ ಪಾವತಿ ಹಾಗೂ ಕೊಡಗಿನ ಅರಸ ಚಿಕ್ಕವೀರರಾಜೇಂದ್ರನ ಪದಚ್ಯುತಿ ಕಾರಣಕ್ಕಾಗಿ ತಮ್ಮನಾಳುತ್ತಿದ್ದ ಬ್ರಿಟಿಷರ ವಿರುದ್ದ ದಂಗೆ ಎದ್ದ ರೈತರು ಮಂಗಳೂರಿಗೆ ಮುತ್ತಿಗೆ ಹಾಕಿದ್ದರು. ಮೊದಲು ಮಂಗಳೂರನ್ನು ಗೆದ್ದರೂ ನಂತರ ಆಂಗ್ಲರಿಗೆ ಬಿಟ್ಟು ಕೊಡಬೇಕಾಯಿತು.

ಮತ್ತಷ್ಟು ಓದು »

29
ಫೆಬ್ರ

ಸುಳ್ಸುದ್ದಿ: ಹಾರ್ಪಿಕ್ ಟಾಯ್ಲೆಟ್ ಕ್ಲೀನರ್ ಮೇಲೆ ಅಮೀರ್ ಖಾನ್ ಕಣ್ಣು!

– ಪ್ರವೀಣ್ ಕುಮಾರ್ ಮಾವಿನಕಾಡು
sulsuddi      ಅಸಹಿಷ್ಣುತೆ ಹೇಳಿಕೆಯಿಂದ ಸ್ನ್ಯಾಪ್ ಡೀಲ್ ನ ಜಾಹೀರಾತಿನಿಂದ ಹೊರಹಾಕಲ್ಪಟ್ಟಿದ್ದ ಬಾಲಿವುಡ್ ನಟ ಅಮೀರ್ ಖಾನ್ ಕಣ್ಣು ಇದೀಗ ಇದುವರೆಗೂ ಅಬ್ಬಾಸ್ ನಟಿಸುತ್ತಿದ್ದ ಹಾರ್ಪಿಕ್ ಜಾಹೀರಾತಿನ ಮೇಲೆ ಬಿದ್ದಿದೆ! ಜಾಹೀರಾತಿನಲ್ಲಿ ದೇಶದ ಪರವಾಗಿ ಮಾತನಾಡುವ ವ್ಯಕ್ತಿ ಹೊರಗೆ ದೇಶದ ಮಾನ ತೆಗೆಯುವ ಮಾತನ್ನಾಡಿದ ಕಾರಣಕ್ಕಾಗಿ ಕೇಂದ್ರ ಸರ್ಕಾರದ ಇನ್ಕ್ರೆಡಿಬಲ್ ಇಂಡಿಯಾ ಜಾಹೀರಾತಿನಿಂದಲೂ ಹೊರ ಹಾಕಲ್ಪಟ್ಟ ನಂತರ ಅಮೀರ್ ಖಾನ್,ಮೊದಲ ಬಾರಿಗೆ ತನ್ನ ಕೈಯಲ್ಲಿ ಯಾವುದೇ ಜಾಹೀರಾತಿಲ್ಲದೇ ಕುಳಿತುಕೊಳ್ಳುವಂತಾಗಿದೆ.

ಇದೇ ಸಮಯದಲ್ಲಿ ನಟ ಅಬ್ಬಾಸ್ ನೊಂದಿಗಿನ ಹಾರ್ಪಿಕ್ ಟಾಯ್ಲೆಟ್ ಕ್ಲೀನರ್ ನ ಜಾಹೀರಾತಿನ ಒಪ್ಪಂದದ ಅವಧಿ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿರುವ ಕಾರಣ ಶತಾಯ ಗತಾಯ ಹಾರ್ಪಿಕ್ ಕಂಪನಿಯ ರಾಯಭಾರಿಯಾಗಲೇಬೇಕೆಂದು ನಿರ್ಧರಿಸಿರುವ ಅಮೀರ್,ತನ್ನ ಕಾರ್ಯದರ್ಶಿಯ ಮೂಲಕ ಈಗಾಗಲೇ ಕಂಪನಿಯ ಆಡಳಿತ ಮಂಡಳಿಯನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.ದಂಗಾಲ್ ಹೀರೋನ ಈ ನಡೆಯಿಂದ ಕಂಗಾಲ್ ಆಗಿರುವ ಹಾರ್ಪಿಕ್ ಹೀರೋ ಜಾಹೀರಾತನ್ನು ತನ್ನಲ್ಲಿಯೇ ಉಳಿಸಿಕೊಳ್ಳಲು ಒದ್ದಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

      ಈ ಬಗ್ಗೆ ಮಾತನಾಡಿದ ನಟ ಅಮೀರ್ ಖಾನ್,ನಾನು ಇದುವರೆಗೂ ಹಲವಾರು ಜಾಹೀರಾತುಗಳಲ್ಲಿ ನಟಿಸಿದ್ದೇನೆ.ಇನ್ನು ಮುಂದೆಯೂ ನಟಿಸುತ್ತೇನೆ.ನಾನು ಮತ್ತು ನನ್ನ ಕುಟುಂಬ ಭಾರತವನ್ನು ಅಪಾರವಾಗಿ ಪ್ರೀತಿಸುತ್ತೇವೆ.ನಾವು ಈ ದೇಶವನ್ನು ಬಿಟ್ಟು ಹೋಗುವ ಬಗ್ಗೆ ಯಾವುದೇ ನಿದ್ದೆ ಬಾರದ ರಾತ್ರಿಯಲ್ಲೂ ಸಮಾಲೋಚಿಸಿಲ್ಲ.ಒಂದು ವೇಳೆ ಹಾರ್ಪಿಕ್ ಟಾಯ್ಲೆಟ್ ಕ್ಲೀನರ್ ನ ಜಾಹೀರಾತಿನಲ್ಲಿ ನಟಿಸುವ ಅವಕಾಶ ದೊರೆತರೆ ಅದರಿಂದ ಬರುವ ಸಂಭಾವನೆಯ ಶೇ.೫೦ ರಷ್ಟು ಮೊತ್ತವನ್ನು ಪಾಕೀಸ್ತಾನದಲ್ಲಿ ಬಾಂಬ್ ದಾಳಿಯಿಂದ ಸಂತ್ರಸ್ತರಾದ ಜನರಿಗೆ ನೆರವಾಗಲು ಬಳಸುವುದಾಗಿ ಹೇಳಿದರು.

ಈ ನಡುವೆ ಬೆಂಗಳೂರಿನ ಜಾತ್ಯಾತೀತ ಶಾಸಕ ಜಮೀರ್ ಅಹಮ್ಮದ್ ಅವರನ್ನು ಭೇಟಿಯಾದ ಅಬ್ಬಾಸ್,ಈ ವಿಷಯದಲ್ಲಿ ತನಗೆ ಸಹಾಯ ಮಾಡಬೇಕೆಂದು ಕೋರಿದರು.ಅವರಿಗೆ ಪ್ರತಿಕ್ರಿಯಿಸಿದ ಜಮೀರ್,ಜಾತ್ಯಾತೀತರ ನಡುವೆ ಈ ರೀತಿಯ ಸ್ಪರ್ಧೆ ಒಳ್ಳೆಯದಲ್ಲ.ನಮ್ಮ ಹಿರಿಯರ ಮುಂದೆ ಈ ವಿಷಯವನ್ನಿಟ್ಟು ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು.ಎಲ್ಲಾ ಜಾತ್ಯಾತೀತರ ಕಂಪನಿಗಳ ಉತ್ಪನ್ನಗಳ ಪ್ರಚಾರಕ್ಕೂ ರಾಯಭಾರಿಗಳನ್ನಾಗಿ ಜಾತ್ಯಾತೀತರನ್ನೇ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಫ಼ತ್ವಾ ಹೊರಡಿಸುವ ಬಗ್ಗೆ ತಾನು ಈಗಾಗಲೇ ನಮ್ಮ ವೈಯುಕ್ತಿಕ ಕಾನೂನು ಮಂಡಳಿ ಮತ್ತು ಶಾಹಿ ಇಮಾಂ ಬುಖಾರಿಯವರ ಜೊತೆಯಲ್ಲಿ ಒಂದು ಸುತ್ತಿನ ಮಾತುಕತೆ ನಡೆಸಿದ್ದು ಕೆಲವೇ ದಿನಗಳಲ್ಲಿ ಈ ಬಗ್ಗೆ ಫ಼ತ್ವಾ ಹೊರಬೀಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.ನಮ್ಮ ದೇಶದ ಸಂವಿಧಾನದಲ್ಲಿ ಫ಼ತ್ವಾಗಳಿಗೆ ಮಾನ್ಯತೆಯಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜಮೀರ್,ನಮ್ಮ ವೈಯುಕ್ತಿಕ ಕಾನೂನಿನಲ್ಲಿ ಸಂವಿಧಾನಕ್ಕೇ ಮಾನ್ಯತೆಯಿಲ್ಲ ಎಂದು ಸ್ವಲ್ಪ ಖಾರವಾಗಿಯೇ ಉತ್ತರಿಸಿದರು.

ಮುಂದಿನ ಶುಕ್ರವಾರ ಡಿ.ಎಸ್.​ಯು.ಮುಖಂಡ ಉಮರ್ ಖಾಲಿದ್ ನ ನೇತೃತ್ವದಲ್ಲಿ ಬನಾರಸ್ ಹಿಂದೂ ವಿ.ವಿ.ಸೇರಿದಂತೆ ದೇಶದ ಹದಿನೆಂಟು ವಿಶ್ವವಿದ್ಯಾಲಯಗಳಲ್ಲಿ ಅಮೀರ್ ಖಾನ್ ಪರ ಘೋಷಣೆ ಕೂಗಿ ಹಾರ್ಪಿಕ್ ಜಾಹೀರಾತಿನಲ್ಲಿ ನಟಿಸಲು ಅವರಿಗೆ ಬೆಂಬಲ ವ್ಯಕ್ತಪಡಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಇದೇ ವೇಳೆ ಪಾಕೀಸ್ತಾನದ ಪ್ರಧಾನಿ ನವಾಜ್ ಷರೀಫ್‌ ಲಾಹೋರ್ ನಲ್ಲಿ ಇಂದು ಮಾತನಾಡುತ್ತಾ,ಮುಂದಿನ ತಿಂಗಳು ಅಮೇರಿಕಾದಲ್ಲಿ ನಡೆಯುವ ಪರಮಾಣು ಶೃಂಗಸಭೆಯಲ್ಲಿ ಈ ವಿಷಯದ ಬಗ್ಗೆ ಅಲ್ಲಿನ ಅಧ್ಯಕ್ಷರ ಗಮನ ಸೆಳೆಯುವುದಾಗಿ ತಿಳಿಸಿದ್ದಾರೆ.

    ಕೆಲ ರಾಜಕೀಯ ಪಕ್ಷಗಳೂ ಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳು ಹಾಗೂ ಹಲವು ಪ್ರಗತಿಪರ ಸಂಘಟನೆಗಳು ‘ದೇಶದಲ್ಲಿ ಜಾತ್ಯಾತೀತರ ನಡುವೆ ನಡೆಯುತ್ತಿರುವ ಈ ರೀತಿಯ ಅನಾರೋಗ್ಯಕರ ಸ್ಪರ್ಧೆಗೆ ಮೋದಿ ಸರ್ಕಾರದ ಷಡ್ಯಂತ್ರವೇ ಕಾರಣ’ ಎಂದು ಆರೋಪಿಸಿದ್ದು,ಮುಂದಿನ ಸೋಮವಾರದಂದು ಖಾಸಗಿ ಜಾಹೀರಾತಿನಲ್ಲಿ ಜಾತ್ಯಾತೀತರಿಗೆ ಮೀಸಲಾತಿಗೆ ಒತ್ತಾಯಿಸಿ ದೇಶದಾದ್ಯಂತ ಹೋರಾಟ ಹಮ್ಮಿಕೊಂಡಿರುವುದಾಗಿ ತಿಳಿಸಿವೆ.ಈ ಬಗ್ಗೆ ಸರ್ಕಾರ ಶೀಘ್ರವಾಗಿ ಕಾನೂನು ತರದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿಯೂ ಅವು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ!

ಒಟ್ಟಿನಲ್ಲಿ ಎಲ್ಲವೂ ಅಮೀರ್ ಖಾನ್ ಅಂದುಕೊಂಡಂತೆಯೇ ಆದರೆ ಇನ್ನು ಕೆಲವೇ ದಿನಗಳಲ್ಲಿ ಅಮೀರ್ ಖಾನ್ ಕೂಡಾ ಅಬ್ಬಾಸ್ ನಂತೆಯೇ ನೇರವಾಗಿ ನಿಮ್ಮ ಶೌಚಾಲಯ ಕೋಣೆಗೆ ನುಗ್ಗುವ ದಿನ ದೂರವಿಲ್ಲ!!

*ವಿ.ಸೂ:ಈ ಸುದ್ದಿಯು ಕೇವಲ ಕಾಲ್ಪನಿಕವಾಗಿದ್ದು ಮೇಲೆ ಹೆಸರಿಸಿದ ಆಯಾ ಪಕ್ಷ,ವ್ಯಕ್ತಿ,ಸಂಸ್ಥೆ,ಸಂಘಟನೆಗಳ ಇದುವರೆಗಿನ ನಡವಳಿಕೆಗಳನ್ನಾಧರಿಸಿ ಕಲ್ಪಿಸಿಕೊಂಡಿದ್ದಾಗಿರುತ್ತದೆ.ಈ ಸುದ್ದಿಯು ಕೇವಲ ಮನರಂಜನೆಗಾಗಿಯೇ ಹೊರತೂ ಯಾರನ್ನೂ ನೋಯಿಸುವ ಅಥವಾ ಅವಮಾನಿಸುವ ಉದ್ದೇಶದ್ದಲ್ಲ.