ಹೌದು. ಆಡಳಿತರೂಢರಿಂದ ಇಂತಹ ಮಾತುಗಳನ್ನು ಕೇಳಲು ಮೋದಿ ನೇತೃತ್ವದ ಸರ್ಕಾರವೇ ಬರಬೇಕಾಯಿತು. ಕದನ ವಿರಾಮ ಉಲ್ಲಂಘನೆ, ಅಂತರಾಷ್ಟ್ರೀಯ ಗಡಿ ಒಪ್ಪಂದದ ಉಲ್ಲಂಘನೆ, ಗಡಿ ಭಾಗದ ನಾಗರಿಕ ವಸತಿ ಪ್ರದೇಶಗಳ ಮೇಲೆ ಗುಂಡಿನ ದಾಳಿ ಹಾಗೂ ಭಾರತೀಯ ಯೋಧರ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸುವುದನ್ನೇ ಚಾಳಿಯನ್ನಾಗಿ ಮಾಡಿಕೊಂಡಿರುವ ಪಾಕಿಸ್ತಾನಕ್ಕೆ ಕಲಿಯುಗ ಅಸುರರೆಂಬ ಭಯೋತ್ಪಾದಕರ ಕುಮ್ಮಕ್ಕೂ ಇರುವುದು ಭಂಡ ಧೈರ್ಯಕ್ಕೆ ಕಾರಣ. ಈಗ 125 ಕೋಟಿ ಭಾರತೀಯರು ಪೂರ್ಣ ಬಹುಮತದ ಶಕ್ತ ಸರಕಾರವನ್ನು ಆಯ್ಕೆ ಮಾಡಿದ ನಂತರ ಪಾಕ್ ಗೆ ಮಾತ್ರವಲ್ಲ ಭಯೋತ್ಪಾದನೆಯನ್ನು ನಡೆಸುತ್ತಿರುವ ಪ್ರತೀ ರಾಕ್ಷಸನಿಗೂ ಒಳಗೊಳಗೇ ನಡುಕ ಶುರುವಾಗಿದೆ. ಅದರ ಒಂದು ಪರಿಣಾಮವೇ ಪಾಕ್ ಸೇನೆಯೊಂದಿಗೆ ಸೇರಿಕೊಂಡು ಭಾರತದ ಗಡಿಯಲ್ಲಿ ನಡೆಸುತ್ತಿರುವ ಅಪ್ರಚೋದಿತ ದಾಳಿಯೆಂಬ ಭಯೋತ್ಪಾದನೆ. ಇಂತಹ ಕುತಂತ್ರಿಗಳನ್ನು ಗಡಿಯಲ್ಲಿ ಬಗ್ಗು ಬಡಿಯಲು ನಮ್ಮ ಸೈನಿಕರಿಗೆ ಮನಸ್ಸಿದ್ದರೂ ಹಿಂದಿನ ಸರ್ಕಾರದ ಅವಧಿಯಲ್ಲಿ ತಣ್ಣಗೆ ಕೂರಬೇಕಿತ್ತು. ಶತ್ರುಗಳಿಗೆ ದಿಟ್ಟ ಉತ್ತರ ನೀಡುವುದಿರಲಿ, ಕನಿಷ್ಟ ಹಿಮ್ಮೆಟ್ಟಿಸುವ ಕಾರ್ಯಕ್ಕೂ ಕೇಂದ್ರದ ಆದೇಶಕ್ಕಾಗಿ ಕಾಯಬೇಕಿತ್ತು.
ಮಾತೃಭೂಮಿಯ ರಕ್ಷಣೆಗಾಗಿ ಪ್ರಾಣತ್ಯಾಗಕ್ಕೆ ಸಿದ್ಧರಾಗಿದ್ದರೂ, ಬೇಕಾದರೆ ಪ್ರಾಣ ಬಿಡಿ, ಪ್ರತಿದಾಳಿ ನಡೆಸಬೇಡಿ ಎನ್ನುವುದು ನಮ್ಮ ಸೇನೆಗೆ ಹಿಂದಿನ ಸರ್ಕಾರ ನೀಡುತ್ತಿದ್ದ ಅಲಿಖಿತ ಮೌನ ಸಂದೇಶವಾಗಿತ್ತು. ಇದನ್ನರಿತೇ ಪಾಕ್ ಸೈನಿಕರು ಹಾಗೂ ಪಾಕ್ ಕೃಪಾಪೋಷಿತ ಉಗ್ರರು ಗಡಿಯಲ್ಲಿ ತೀವ್ರವಾಗಿ ದಾಳಿಗಳನ್ನು ನಡೆಸುತ್ತಿದ್ದರು. ನಮ್ಮ ಯೋಧರ ತಲೆ ಕತ್ತರಿಸಿಕೊಂಡು ಹೋದರೂ ಶತ್ರುಗಳಿಗೆ ದಿಟ್ಟ ಉತ್ತರ ನೀಡುವಲ್ಲಿ ಅಂದಿನ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಸೋತು ಜಗತ್ತಿನ ಮುಂದೆ ತಲೆ ತಗ್ಗಿಸಿನಿಂತಿದ್ದರೆ ಹೊಟ್ಟೆಯೆಲ್ಲಾ ಉರಿಯುತ್ತಿತ್ತು. ಆದರೆ, ಈಗ ಕಾಲ ಕೊಂಚ ಬದಲಾಗಿದೆ. ಮಾಹಿತಿಯೊಂದರ ಪ್ರಕಾರ ನಮ್ಮ ರಕ್ಷಣಾ ಬಜೆಟ್ 3.25 ಲಕ್ಷ ಕೋಟಿ, 13 ಲಕ್ಷ ಸೈನಿಕರು, 1905 ಯುದ್ಧ ವಿಮಾನಗಳು ನಮ್ಮಲ್ಲಿವೆ. ಇವೆಲ್ಲದರ ಜೊತೆಗೆ ಸೇನೆಗೆ ನಿರ್ಧಾರವನ್ನು ಕೈಗೊಳ್ಳೊ ಸ್ವಾತಂತ್ರ್ಯವನ್ನು ನೀಡಿ, ಅವರಿಗೆ ನೈತಿಕ ಸ್ಥೈರ್ಯ ತುಂಬುವ ಮೂಲಕ ಭಾರತದ ರಕ್ಷಣೆಗೆ ಸಮರ್ಥ ಪ್ರಧಾನಿಯ ನೇತೃತ್ವದಲ್ಲಿ ಯೋಗ್ಯ ರಕ್ಷಣಾ ಸಚಿವರು ಹಾಗು ಗೃಹ ಮಂತ್ರಿಗಳಿರುವುದು ನೆಮ್ಮದಿಯ ವಿಷಯ.
ಮೋದಿಯವರ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಗಡಿಯಲ್ಲಿ ದಾಳಿಗಳು ನಡೆದೇ ಇಲ್ಲವೆಂದು ಹೇಳುತ್ತಿಲ್ಲ. ವಾಸ್ತವವಾಗಿ ನೋಡುವುದಾದರೆ, ಮೋದಿ ಸರಕಾರ ಬಂದ ನಂತರ ಗಡಿಯಲ್ಲಿ ಪಾಕಿಗಳ ಉಪಟಳ ಹೆಚ್ಚಾಗಿದೆ ಎಂದೇ ಹೇಳಬೇಕು. ಅದಕ್ಕಿರುವ ಕಾರಣ ಮೋದಿ ಸರಕಾರದ ಮೇಲಿರುವ ಭಯವಷ್ಟೇ. ಅಂದರೆ ಗಡಿಯಲ್ಲಿ ದಾಳಿ ನಡೆಸಿದ ವೇಳೆ ಹಿಂದಿನಂತೆ ಪ್ರತಿದಾಳಿಗಾಗಿ ಆದೇಶಕ್ಕೆ ಈಗ ಕಾಯಬೇಕಿಲ್ಲ. ಇದಕ್ಕೆ ಸಾಕ್ಷಿಯಾಗಿ ರಕ್ಷಣಾ ಸಚಿವರಾದ ಮನೋಹರ್ ಪರಿಕ್ಕರ್ ಅವರ ಹಿಂದಿನ ಹೇಳಿಕೆಯೊಂದನ್ನು ನೋಡೋಣ. ಕಳೆದ ವರ್ಷ ಜಮ್ಮುವಿನ ಗಡಿಭಾಗದಲ್ಲಿ ಪಾಕ್ ಸೈನಿಕರು ನಡೆಸಿದ ದಾಳಿಗೆ ಓರ್ವ ಭಾರತೀಯ ಯೋಧ ಹುತಾತ್ಮನಾಗಿದ್ದ.
ಈ ದುಷ್ಕೃತ್ಯಕ್ಕೆ ಪ್ರತಿಯಾಗಿ ನಾಲ್ವರು ಪಾಕಿಸ್ತಾನದ ಸೈನಿಕರನ್ನು ನಮ್ಮ ಸೈನಿಕರು ಕ್ಷಣ ಮಾತ್ರದಲ್ಲಿ ಹೊಡೆದುರುಳಿಸಿದ್ದರು. ಪರಿಣಾಮ, ಬೆಚ್ಚಿದ ಪಾಕ್ ಸೇನೆ ಬಿಳಿ ಬಾವುಟ ತೋರಿಸಿ ದಾಳಿ ನಿಲ್ಲಿಸುವಂತೆ ಭಿಕ್ಷೆ ಬೇಡಿತ್ತು. ಹೀಗಾಗಿ ನಮ್ಮ ಕಡೆಯಿಂದ ಗುಂಡಿನ ದಾಳಿ ನಿಂತಿತ್ತು. ಆದರೆ, ಇದಾದ ಕೆಲವೇ ಗಂಟೆಗಳಲ್ಲಿ ತನ್ನ ನರಿ ಬುದ್ದಿಯನ್ನು ಪ್ರದರ್ಶಿಸಿದ ಪಾಕ್, ಭಾರತೀಯ ಪೋಸ್ಟಗಳ ಮೇಲೆ ಪುನಃ ದಾಳಿ ಆರಂಭಿಸಿತ್ತು. ಈ ಘಟನೆಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ” ಪಾಕ್ಗೆ ಸರಿಯಾದ ಬುದ್ದಿ ಕಲಿಸಿ, ಪಾಕ್ ಕಡೆಯಿಂದ ಒಂದು ಗುಂಡು ಬಂದರೆ ಅದಕ್ಕೆ ಪ್ರತಿಯಾಗಿ ನಮ್ಮಿಂದ ನಾಲ್ಕು ಗುಂಡು ಹಾರಲಿ. ಅವರು ಒಮ್ಮೆ ಟ್ರಿಗರ್ ಒತ್ತಿದರೆ, ನಮ್ಮ ಕಡೆಯಿಂದ ನಿರಂತರವಾಗಿ ಗುಂಡಿನ ಮಳೆಗರೆಯಲಿ” ಎಂದಿದ್ದರು. ಎಲ್ಲಕ್ಕೂ ಮಿಗಿಲಾಗಿ ಅವರು ಹೇಳಿದ್ದ ಒಂದು ಮಾತು ” ನಿಮ್ಮೊಂದಿಗೆ ನಾವಿದ್ದೇವೆ” ಎಂದು.
ಇಂತಹ ಮಾತನ್ನು ಭಾರತೀಯ ಸೈನಿಕರು ಕೇಳಲು ಮೋದಿಯವರ ನೇತೃತ್ವದಲ್ಲಿ ಸರಕಾರ ಬರಬೇಕಾಯಿತು ಎಂದರೆ ನಾಚಿಕೆಯಾಗಬೇಕು ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ಸಿಗರಿಗೆ. ಈಗ ಪರಿಕ್ಕರ್ ರವರ ರೀತಿಯಲ್ಲಿಯೇ ಗೃಹ ಸಚಿವ ರಾಜನಾಥ್ ಸಿಂಗ್ ರವರು ಕೂಡ ಮಾತನಾಡಿದ್ದು, ಪಾಕಿಸ್ತಾನ ಅಪ್ರಚೋದಿತ ದಾಳಿ ನಡೆಸುವುದನ್ನು ನಿಲ್ಲಿಸಬೇಕು. ಭಾರತದ ಕಡೆಯಿಂದ ಯಾವತ್ತೂ ಸ್ವಯಂ ಪ್ರೇರಿತವಾಗಿ ಗುಂಡಿನ ದಾಳಿ ನಡೆಯುವುದಿಲ್ಲ. ಆದರೆ, ನಿಮ್ಮ ಕಡೆಯಿಂದ ಗುಂಡಿನ ದಾಳಿಯೇನಾದರೂ ನಡೆದರೆ, ಆನಂತರ ನಮ್ಮಿಂದ ಹಾರುವ ಗುಂಡುಗಳನ್ನು ಲೆಕ್ಕ ಹಾಕಲು ನಿಮಗೆ ಸಾಧ್ಯವಿಲ್ಲ ಎಂದಿದ್ದಾರೆ. ಇಲ್ಲಿ ಈ ಮಾತಿಗೆ ಹೆದರಿ ಪಾಕ್ ಸೇನೆ ಹಿಂಜರಿಯುತ್ತದೆ ಎಂಬ ಭ್ರಮೆ ನಮ್ಮದಲ್ಲ. ಆದರೆ, ಆಡಳಿತಾರೂಢರಿಂದ ಇಂತಹ ಮಾತುಗಳು ಸೇನೆಗೆ ನೈತಿಕ ಬಲವನ್ನು ತುಂಬುತ್ತದೆ. ಆ ಮೂಲಕ ದೇಶಕ್ಕಾಗಿ ಪ್ರಾಣತ್ಯಾಗಕ್ಕೂ ಸಿದ್ಧರಾಗಿರುವ ಯೋಧರ ಕಾರ್ಯವನ್ನು ಗೌರವಿಸಿದಂತಾಗುತ್ತದೆ ಎನ್ನುವುದು ವಾಸ್ತವ. ಇದರೊಂದಿಗೆ ಪಾಕಿಸ್ತಾನದ ಈ ಭಯೋತ್ಪಾದನಾ ಚಟುವಟಿಕೆಯನ್ನು ಮಟ್ಟ ಹಾಕಲು ನೈತಿಕ ಸ್ಥೈರ್ಯ ತುಂಬುವ ಜೊತೆಯಲ್ಲಿ, ಸೇನೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರಾಗಳನ್ನು ಒದಗಿಸುವುದರ ಜೊತೆಗೆ ರಾಫೆಲ್ ಜೆಟ್ನಂತಹ ಯುದ್ಧ ವಿಮಾನದ ಖರೀದಿಗೆ ಭಾರತ ಸರಕಾರ ಒಪ್ಪಂದ ಮಾಡಿಕೊಂಡಿರುವುದು ನಿಜಕ್ಕೂ ಸೇನೆಗೆ ನೂರಾನೆ ಬಲ ಬಂದಂತಾಗಿದೆ. ಹೀಗಿದ್ದಾಗ, ಪ್ರತಿ ಯೋಧನೂ ಒಂದೊಂದು ಅಸ್ತ್ರವಾಗಿ ದೇಶಕ್ಕಾಗಿ ಹೋರಾಡಬಲ್ಲ. ಇವರೊಂದಿಗೆ ನಿಜವಾದ ದೇಶಪ್ರೇಮಿಗಳೂ ಸೇನೆಯೊಂದಿಗಿದ್ದಾರೆ. ಪಾಪಿಗಳೇ ಬಾಲ ಮುದುರಿ, ಇಲ್ಲವೇ ಹೆಡೆಮುರಿ ಕಟ್ಟುತ್ತೇವೆ. ಇಲ್ಲವೇ, ಬಾಂಗ್ಲಾ ಗಡಿಯಲ್ಲಿ ನುಗ್ಗಿ, ನಾಗಾ ಉಗ್ರರನ್ನು ಅಟ್ಟಾಡಿಸಿಕೊಂಡು ಬೇಟೆಯಾಡಿದಂತೆ, ಭಾರತೀಯ ಯೋಧರು ಪಿಒಕೆಯಲ್ಲಿ ನಿಮ್ಮನ್ನು ಬೇಟೆಯಾಡುವ ದಿನ ದೂರವಿಲ್ಲ. ಎಚ್ಚರ !.
ಕೊನೆಯಲ್ಲಿ…
ಪರಮವೀರ ಚಕ್ರ ವಿಜೇತ ಸುಬೇದಾರ್ ಯೋಗೀಂದ್ರ ಸಿಂಗ್ ಅವರೊಂದಿಗೆ ಮಾತನಾಡುತ್ತಿದ್ದಾಗ ಅವರು ಹೇಳಿದ ಮಾತು ನೆನಪಿಗೆ ಬರುತ್ತಿದೆ.
“ಶತ್ರುಗಳು ಎಷ್ಟೇ ಪ್ರಬಲರಾಗಿದ್ದರೂ ಅವರನ್ನು ಎದುರಿಸಿ ಜಯಭೇರಿ ಬಾರಿಸುವಷ್ಟು ಸಾಮರ್ಥ್ಯ ನಮ್ಮ ಭಾರತೀಯ ಸೇನೆಗೆ ಇದೆ. ಅಸ್ತ್ರ, ಅಣ್ವಸ್ತ್ರಕ್ಕಿಂತಲೂ ಭಾರತೀಯ ಸೇನೆಯಲ್ಲಿರುವ ಪ್ರತಿಯೊಬ್ಬ ಯೋಧನೂ ಶಕ್ತಿಶಾಲಿಯಾದ ಒಂದೊಂದು ಪ್ರಬಲ ಅಸ್ತ್ರ “