ವಿಷಯದ ವಿವರಗಳಿಗೆ ದಾಟಿರಿ

Posts from the ‘ಲೇಖನಗಳು’ Category

27
ಮಾರ್ಚ್

ಶಿಕ್ಷಣ ಮತ್ತು ಧರ್ಮ: ಪರಸ್ಪರ ಪೂರಕ ಅಂಶಗಳು

– ಎಸ್.ಎನ್.ಭಾಸ್ಕರ್‍

right-to-education_3ಶಿಕ್ಷಣದ ಮೂಲ ಉದ್ದೇಶ ವ್ಯಕ್ತಿಯ ಪರಿಪೂರ್ಣ ವಿಕಾಸ. ಸಂಸ್ಕಾರ, ತಿಳುವಳಿಕೆ, ಜ್ಞಾನ, ಕೌಶಲ್ಯ ಇವು ಶಿಕ್ಷಣದ ಮೂಲಭೂತ ಅಂಶಗಳು. ಉತ್ತಮ ಮಟ್ಟದ ಶಿಕ್ಷಣ ವ್ಯವಸ್ಥೆಯು ಈ ಎಲ್ಲಾ ಅಂಶಗಳಲ್ಲೂ ವ್ಯಕ್ತಿಯನ್ನು ಶಿಕ್ಷಿತನನ್ನಾಗಿಸುತ್ತದೆ. ಪ್ರಾರಂಭಿಕ ಹಂತದಿಂದಲೇ ಮಕ್ಕಳಿಗೆ ಈ ಎಲ್ಲಾ ಪ್ರಕಾರಗಳಲ್ಲಿ ಶಿಕ್ಷಣವನ್ನು ಒದಗಿಸುವುದು ಶೈಕ್ಷಣಿಕ ವ್ಯವಸ್ಥೆಯೊಂದರ ಆದ್ಯತೆ – ಯಾಗಬೇಕಾಗುತ್ತದೆ. ಆದರೆ ಇಂದಿನ ಪರಿಸ್ಥಿತಿ ಬಿನ್ನವಾಗಿದೆ. ಪಾಶ್ಚಾತ್ಯ ಕ್ರಮಗಳ, ವಿಧಿ-ವಿಧಾನಗಳ ಅನುಕರಣೆಯಲ್ಲಿ ನಾ ಮುಂದು ತಾ ಮುಂದು ಎಂದು ಶಿಕ್ಷಣ ಸಂಸ್ಥೆಗಳು ಪೈಪೋಟಿಗೆ ಬಿದ್ದಿವೆ. ಕೇವಲ ಆಂಗ್ಲ ಭಾಷೆಯ ಕಲಿಕೆಯಿಂದ ಮಕ್ಕಳು ಸುಶಿಕ್ಷಿತರಾಗುತ್ತಾರೆ ಎಂಬುದು ಬಹುತೇಕ ಪೋಷಕರ ಅನಿಸಿಕೆಯಾಗಿದೆ, ಇದನ್ನು ಮನಗಂಡ ಹಲವಾರು ಖಾಸಗಿ ಶಾಲೆಗಳು ಅಂಗ್ಲ ಭಾಷೆಯನ್ನು ಮಕ್ಕಳ ಮೇಲೆ ಹೇರುವುದರ ಮೂಲಕ ಜನಪ್ರಿಯವಾಗುತ್ತಿವೆ. ತನ್ನದೇ ಮಾತೃಭಾಷೆಯಲ್ಲಿ ಉನ್ನತ ಮಟ್ಟದ ಪ್ರೌಢಿಮೆ ಗಳಿಸದೇ ಇರುವ ವ್ಯಕ್ತಿಯ ಶಿಕ್ಷಣವು ಪರಿಪೂರ್ಣವಾಗುವುದಾದರೂ ಹೇಗೆ..? ಮೇಲೆ ತಿಳಿಸಿದ ನಾಲ್ಕೂ ಅಂಶಗಳೂ ಶಿಕ್ಷಣದ ಆಧಾರ ಸ್ಥಂಭಗಳಿದ್ದಂತೆ. ಯಾವುದೇ ಒಂದು ಸ್ಥಂಭ ಕುಸಿದರೂ ವ್ಯಕ್ತಿಯ ಕಲಿಕೆ, ಶಿಕ್ಷಣ ಪರಿಪೂರ್ಣತೆಯನ್ನು ಪಡೆಯುವುದಿಲ್ಲ. ಹಾಗೆಯೇ ನಮ್ಮ ಧರ್ಮ, ಸಂಸ್ಕೃತಿಯ ಬಗ್ಗೆ ಸೂಕ್ತ ಅರಿವು ಅಧ್ಯಯನವಿಲ್ಲದೇ ಜ್ಞಾನಾರ್ಜನೆ ವಿಕಾಸವಾಗುವುದಿಲ್ಲ,  ನಮ್ಮ ಸಂಸ್ಕೃತಿಯ ಹಿನ್ನೆಲೆ ವ್ಯಾಪ್ತಿಗಳನ್ನು ಅರಿಯದೆಯೇ ಇದ್ದರೆ ಹೇಗೆ ತಾನೆ ಕಲಿಕೆ ಪೂರ್ಣತೆಯನ್ನು ಮುಟ್ಟಲು ಸಾಧ್ಯ..? ನಮ್ಮ ಸಂಸ್ಕೃತಿಯು ನಮ್ಮ ಬೇರುಗಳಿದ್ದ ಹಾಗೆ  ಮೂಡುವ ಪ್ರತೀ ಚಿಗುರಿಗೂ ಸತ್ವ ಬೇರುಗಳಿಂದಲೇ ಒದಗ ಬೇಕಾಗುತ್ತದೆ. ನಮ್ಮದೇ ಬೇರುಗಳ ಬಗ್ಗೆ ನಮ್ಮ ಮಕ್ಕಳು ಶಿಕ್ಷಿತರಾಗದಿದ್ದರೆ ಅವರ ಜ್ಞಾನ ಅರ್ಧ ಬೆಂದ ಮಡಿಕೆಯಾಗುವುದರಲ್ಲಿ ಸಂಶಯವೇ ಇಲ್ಲ.

ಮತ್ತಷ್ಟು ಓದು »

26
ಮಾರ್ಚ್

ಎದೆಗೆ ಬಿದ್ದ ಅಕ್ಷರ: ಸಮಾನತೆಯ ಕನಸು ಮತ್ತು ಕಾಣ್ಕೆ

– ರಾಜಕುಮಾರ.ವ್ಹಿ.ಕುಲಕರ್ಣಿ

ಮುಖ್ಯ ಗ್ರಂಥಪಾಲಕ, ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಬಾಗಲಕೋಟ

ಎದೆಗೆ ಬಿದ್ದ ಅಕ್ಷರ‘ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು’ ದೇವನೂರ ಮಹಾದೇವರ ‘ಎದೆಗೆ ಬಿದ್ದ ಅಕ್ಷರ’ ಪುಸ್ತಕದ ಪುಟಗಳು ತೆರೆದುಕೊಳ್ಳುವುದೇ ಈ ಮೇಲಿನ ನುಡಿಯೊಂದಿಗೆ.ಪ್ರಕಟವಾದ ಕೆಲವೇ ತಿಂಗಳುಗಳಲ್ಲಿ ಅನೇಕ ಮುದ್ರಣಗಳನ್ನು ಕಂಡ ಪುಸ್ತಕವಿದು. ದೇವನೂರ ಮಹಾದೇವ ಕನ್ನಡ ಸಾಹಿತ್ಯ ಲೋಕದ ಅನನ್ಯ ಬರಹಗಾರ. ಅವರ ಅನೆಕ ಬಿಡಿ ಲೇಖನಗಳು ಮತ್ತು ಕಥೆಗಳು ಪ್ರಕಟವಾಗಿವೆಯಾದರೂ ಪುಸ್ತಕ ರೂಪದಲ್ಲಿ ಅವರು ಬರಹಗಳು ಬೆಳಕು ಕಂಡಿದ್ದು ಬಹಳಷ್ಟು ಕಡಿಮೆ ಎಂದೇ ಹೇಳಬಹುದು. 1973 ರಲ್ಲಿ ‘ದ್ಯಾವನೂರು’, 1982 ರಲ್ಲಿ ‘ಒಡಲಾಳ’, 1988 ರಲ್ಲಿ ‘ಕುಸುಮ ಬಾಲೆ’ಯ ನಂತರ ಪ್ರಕಟವಾದ ಕೃತಿ ಈ ‘ಎದೆಗೆ ಬಿದ್ದ ಅಕ್ಷರ’.

ಕನ್ನಡದ ಮಹತ್ವದ ಲೇಖಕರಲ್ಲಿ ಒಬ್ಬರಾದ ದೇವನೂರ ಮಹಾದೇವ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರಿನವರು. ಆರಂಭದ ಕೆಲವು ವರ್ಷಗಳ ಕಾಲ ಅಧ್ಯಾಪಕರಾಗಿ ಕೆಲಸ ಮಾಡಿದ ಮಹಾದೇವ ಅದು ತಮ್ಮ ಜಾಯಮಾನಕ್ಕೆ ಒಗ್ಗದೇ ಹೋದಾಗ ಯಾವ ಮುಲಾಜಿಲ್ಲದೆ ನೌಕರಿಗೆ ರಾಜಿನಾಮೆಯಿತ್ತು ಕೃಷಿಯಲ್ಲಿ ತೊಡಗಿಸಿಕೊಂಡವರು.ಜೊತೆಗೆ ಜೊತೆಗೆ ದಲಿತ ಚಳುವಳಿ ಮತ್ತು ಬಂಡಾಯ ಸಾಹಿತ್ಯದೊಂದಿಗೂ ತಮ್ಮನ್ನು ಗುರುತಿಸಿಕೊಂಡವರು. ಹಾಗೆಂದು ದಲಿತ ಚಳುವಳಿಯ ಬಗ್ಗೆ ಅವರದು ಸಂಪೂರ್ಣ ಕುರುಡು ನಂಬಿಕೆಯಲ್ಲ. ದಲಿತ ಸಂಘರ್ಷ ಸಮಿತಿಯಲ್ಲಿನ ಒಳಜಗಳ ಹಾಗೂ ಒಡಕುಗಳ ಬಗ್ಗೆ ನಿಷ್ಠುರವಾಗಿ ಮಾತನಾಡುವ ಎದೆಗಾರಿಕೆ ಅವರದು. ಕುವೆಂಪು ಮತ್ತು ಬೇಂದ್ರೆ ಸಾಹಿತ್ಯದ ಜೊತೆಗೆ ಶೇಕ್ಸ್ ಪಿಯರ್ ಮತ್ತು ಟಾಲ್‍ಸ್ಟಾಯ್ ಅವರನ್ನೂ ಓದಿಕೊಂಡಿರುವ ದೇವನೂರ ಮಹಾದೇವ ಅಂಬೇಡ್ಕರರಷ್ಟೇ ಗಾಂಧಿಯನ್ನೂ ಪ್ರೀತಿಸಬಲ್ಲರು. ಅವರು ಗತದ ನೆನಪುಗಳೊಂದಿಗೆ ವರ್ತಮಾನದಲ್ಲಿ ಬದುಕುತ್ತ ನಾಳಿನ ಕನಸುಗಳನ್ನು ಕಾಣುವರು. ಅವರ ಈ ವ್ಯಕ್ತಿತ್ವಕ್ಕೊಂದು ನಿದರ್ಶನ ಕೊಡುವುದಾದರೆ ‘ಗಾಂಧಿಗೆ ಅಬ್ರಾಹಿಂ ಲಿಂಕನ್ ಸಿಕ್ಕಿದ್ರೆ ಭಾಳ ದೊಡ್ಡ ಸಂಗತಿಗಳು ಆಗ್ತಿದ್ವೇನೋ’ ಎನ್ನುವ ಅವರ ಹೇಳಿಕೆಯೇ ಒಂದು ದೃಷ್ಟಾಂತ. ತಳ ಸಮುದಾಯಗಳ ಬದುಕಿನ ತಲ್ಲಣಗಳನ್ನು ಬರವಣಿಗೆಯ ಮೂಲಕ ತೆರೆದಿಡುತ್ತಿರುವ ಮಹಾದೇವರ ಬರಹಗಳಲ್ಲಿ ಸಂವೇದನೆ ಹಾಗೂ ಸಮಾಜದ ಕುರಿತಾದ ಕಾಳಜಿ ಈ ಗುಣಗಳೇ ಎದ್ದು ಕಾಣುತ್ತವೆ. ‘ನನಗೆ ಏನೂ ಗೊತ್ತಿಲ್ಲ ಎಂಬ ರೀತಿಯಲ್ಲಿ ಎಂಬಂತೆ ಚಿಂತಿಸುವವರು ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ದೊಡ್ಡ ಚಿಂತಕರು’ ಸಂದರ್ಶನವೊಂದರಲ್ಲಿ ಶಂಕರ ಮೊಕಾಶಿ ಪುಣೇಕರ್ ಅವರು ಹೇಳಿದ ಈ ಮಾತು ದೇವನೂರ ಮಹಾದೇವರಿಗೆ ಹೆಚ್ಚು ಅನ್ವಯಿಸುತ್ತದೆ.

ಮತ್ತಷ್ಟು ಓದು »

26
ಮಾರ್ಚ್

ರೇಡಿಯೋ ಪುರಾಣ

– ಭರತೇಶ ಅಲಸಂಡೆಮಜಲು

ರೇಡಿಯೋರೇಡಿಯೋ ಅದೆನೋ ಆಯಾತಕಾರದ ಮಾತನಾಡುವ ಪೆಟ್ಟಿಗೆ. ನಮ್ಮ ಮನೆಯ ಸುರಕ್ಷಿತ ಜಾಗದಲ್ಲಿ ಪುಟಾಣಿಗಳಾದ ನಮಗೆ ಎಟುಕದ ಆಯಕಟ್ಟಿನ ಸ್ಥಳದಲ್ಲಿ ಹೆಚ್ಚಾಗಿ ಕಪಾಟಿನ ಮೇಲೆ ತಪಸ್ಸು ಮಾಡುತ್ತಾ ಕುಳಿತಿರುತಿತ್ತು. ಮನೆಯಲ್ಲಿ ಯಾರು ಮೊದಲು ಎದ್ದೇಳುತ್ತಾರೋ ಅವರು ರೇಡಿಯೊವನ್ನು ಚಾಲಿಸುವವರು. ಸಮಯ ಬೆಳಗ್ಗೆ 6 ಗಂಟೆ ಮೊದಲು ಕೊಯೋ ಎಂದು ಅರೆದುತ್ತಾ ಸದ್ದು ಮಾಡಿದರೆ 5:55 ಮಿನಿಟಿಗಾಗುವಾಗ ಅದೆನೋ ವಿಶೇಷ ಗುರುತು ಸಂಗೀತ(Signature ಟ್ಯೂನ್) ಕಾರ್ಯಕ್ರಮ  ಮುನ್ಸೂಚನೆಗಿರುವ ವಾದ್ಯಪ್ರಕಾರದ ಧ್ವನಿ ಬದಲಾಗುವುದು. ಸಮಯ 6 ಭಜಿಸಿತೆಂದರೆ ವಂದೇ ಮಾತರಂನೊಂದಿಗೆ ದಿನಚರಿ ಶುರು…

ಅಜ್ಜನಿಂದ ಬಳುವಳಿಯಾಗಿ ಬಂದಿದ್ದ ರೇಡಿಯೋ ನಮ್ಮದು, ಅದರ ಕೈಗೊಂದು ಉದ್ದ ಲಾಡಿ ಅಲ್ಲಿ ಇಲ್ಲಿ ನೇತಾಡಿಸಲು… ಅಪರೂಪಕ್ಕೆ ನನ್ನ ತಮ್ಮ ಬೀರ್ಯದಿಂದ ಬೊಂಡ ತೆಗೆದುಕೊಡುವುದ್ದಕ್ಕಾಗಿಯೋ, ಭರಣಿಯಲ್ಲಿ ಇದ್ದ ತಿಂಡಿ ನೋಡಿಯೋ ಹಠದಿಂದ ಅರಚುವುದು… ಮತ್ತೆ ಸಮಾಧಾನವಾಗಲು ಅಜ್ಜನ ರೇಡಿಯೋವೇ ಬೇಕಿತ್ತು. ತನ್ನ ಕುತ್ತಿಗೆಗೆ ಕಟ್ಟಿಕೊಂಡು ಮನೆಯೊಳಗೆ ಹೊರಗೆ ಓಡಾಡಿ ಮಂಕಟವಾಗುತ್ತಿದ್ದ ,ಅಗಾಗ ಕೋಪದಿಂದ ಉಂಬಿ ಕೆಳಗೆ ಹಾಕಿ, ಕೇಳದಂತೆಯು ಮಾಡುತಿದ್ದ.  ಕೆಲವೊಮ್ಮೆ ವಿಶೇಷ ಸಂದರ್ಭಗಳಲ್ಲಿ ಪೀಟಿಲು,

ಮತ್ತಷ್ಟು ಓದು »

25
ಮಾರ್ಚ್

ಸಲ್ಲದ ವಾದದಲ್ಲಿ ಬಂಧಿಯಾದ ಸಂಕಮ್ಮ

– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ

ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

ಮಲೆ ಮಾದೇಶ್ವರ ಕಾವ್ಯಕಥನದ ರೀತಿ, ಬೃಹತ್ತು-ಮಹತ್ತು ಮತ್ತು ಕಾವ್ಯಗುಣಗಳಿಂದ ಕನ್ನಡ ಜನಪದ ಮಹಾಕಾವ್ಯಗಳಲ್ಲಿ ಅಗ್ರಮಾನ್ಯವಾದ ಮಲೆಮಾದೇಶ್ವರ ಕಾವ್ಯದ ಅತ್ಯಂತ ಪ್ರಮುಖ ಭಾಗ ಸಂಕಮ್ಮನ ಸಾಲು. ಈ ಕಾವ್ಯ ಹಾಡುವವರು, ದೇವರಗುಡ್ಡರು ಅಥವಾ ಕಂಸಾಳೆಯವರು ಸಂಕಮ್ಮನ ಸಾಲನ್ನು ಸಾಮಾನ್ಯವಾಗಿ ಹಾಡಿಯೇ ಹಾಡುತ್ತಾರೆ. ಕೋರಣ್ಯಕ್ಕೆ ಬಂದಾಗ ಕೆಲವೊಮ್ಮೆ ಜನರೇ ಬೇಡಿಕೆ ಇಟ್ಟು ಈ ಸಾಲನ್ನು ಹಾಡಿಸುವುದೂ ಇದೆ. ಈ ಕಥೆಯನ್ನು ತನ್ಮಯರಾಗಿ ಕೇಳುವ ಜನ ಸಂಕಮ್ಮನ ಕಷ್ಟ ಕೋಟಲೆ ಕೇಳಿ ಕಣ್ಣೀರು ಇಡುವುದೂ ಇದೆ. ಈ ಕಾವ್ಯವನ್ನು ಮೊದಲ ಬಾರಿ ಸಮಗ್ರವಾಗಿ ಸಂಗ್ರಹಿಸಿದ ಪಿ ಕೆ ರಾಜಶೇಖರ್ ಅವರು ಕ್ಷೇತ್ರಕಾರ್ಯದ ಸಂದರ್ಭದಲ್ಲಿ ತಮಗಾದ ಇಂಥ ಅನುಭವವನ್ನು ತಮ್ಮ ಸಂಗ್ರಹದಲ್ಲಿ ದಾಖಲಿಸಿದ್ದಾರೆ.

ಕೇಳಲು ಕಷ್ಟವಾದರೂ ಜನಪದರು ಬೇಡಿ ಬಯಸುವ ವಿಶಿಷ್ಟ ಕಥಾ ಭಾಗ ಇದು ಎಂಬುದರಲ್ಲಿ ಅನುಮಾನವಿಲ್ಲ. ಮಾದೇಶ್ವರನ ಹುಟ್ಟಿನ ಸಾಲು, ಶ್ರವಣ ದೊರೆ ಸಾಲು, ಬೇವಿನ ಹಟ್ಟಿ ಕಾಳಮ್ಮನ ಸಾಲುಗಳೂ ಆಸಕ್ತಿದಾಯಕವಾದವಾದರೂ ಜನರಿಗೆ ಇವು ಸಂಕಮ್ಮನ ಸಾಲಿನಷ್ಟು ಪ್ರಿಯವಾಗಿಲ್ಲ. ಸಂಕಮ್ಮನಲ್ಲಿ ಒಂದು ಬಗೆಯ ಆದರ್ಶವನ್ನು ಜನಪದರು ಬಹುಶಃ ಕಂಡಿರುವುದೇ ಇದಕ್ಕೆ ಕಾರಣವಿರಬೇಕು. ಗಂಡ ನೀಲಯ್ಯನ ವಿರುದ್ಧ ಸಂಕಮ್ಮನೇನೂ ಬಂಡೇಳುವುದಿಲ್ಲ; ಅವನ ಕ್ರಿಯೆಗೆ ಪ್ರತಿಕ್ರಿಯೆಯನ್ನೂ ತೋರುವುದಿಲ್ಲ; ತಂತ್ರಕ್ಕೆ ಪ್ರತಿ ತಂತ್ರವನ್ನೂ ಹೆಣೆಯುವುದಿಲ್ಲ. ಆಕೆಯ ವೃತ್ತಾಂತದಲ್ಲಿ ಕಾಣುವುದು ಅವಳ ತಾಳ್ಮೆ, ಸಹನೆ ಮತ್ತು ಕ್ಷಮೆ. ಬಹುಶಃ ಜನಪದರು ಪ್ರತಿಪಾದಿಸುವ ಇಂಥ ಆದರ್ಶದ ಗುಣಗಳು ಈ ಸಾಲುಗಳಲ್ಲಿ ಚಿತ್ರಿತವಾದ ಕಾರಣ ಜನಪದರು ಇದನ್ನು ಹೆಚ್ಚಾಗಿ ಬಯಸಲು ಕಾರಣವಾಗಿರಬಹುದು.

ಮತ್ತಷ್ಟು ಓದು »

24
ಮಾರ್ಚ್

ಅಂದು “ಕೈ” ಗೆ ಜೈ ಎಂದ ಬುದ್ಧಿಜೀವಿಗಳು ಎಲ್ಲಿ ಅಡಗಿದ್ದಾರೆ?

– ರಾಕೇಶ್ ಶೆಟ್ಟಿ

Intelectuals“ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ನಮ್ಮ ಸಂಪೂರ್ಣ ಬೆಂಬಲವಿದೆ.ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳವಿದೆ.ಆದರೆ ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಂವಿಧಾನಕ್ಕೆ ಬದ್ಧವಾಗಿ ಆಡಳಿತ ನಡೆಸುವ ಹಿನ್ನೆಲೆ ಆ ಪಕ್ಷಕ್ಕಿದೆ. ಇಂತಹ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯ ಅಭಿವೃದ್ಧಿ ಕಾಣಲು ಸಾಧ್ಯ.ಬಿಜೆಪಿಯ ದುರಾಡಳಿತ ಹಾಗೂ ನೈಸರ್ಗಿಕ ಸಂಪನ್ಮೂಲ ಲೂಟಿಗೆ ಬ್ರೇಕ್ ಹಾಕಿ ಕೋಮುವಾದಿ ಶಕ್ತಿಗಳ ನಿರ್ಮೂಲನೆಗೆ ಪರ್ಯಾಯವಾಗಿ ಉಳಿದಿರುವ ಶಕ್ತಿ ಕಾಂಗ್ರೆಸ್ ಮಾತ್ರ. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ಒಕ್ಕೊರಲ ನಿರ್ಧಾರ ಕೈಗೊಂಡಿದ್ದೇವೆ … “ ಎಂಬಂತಹ ಸಾಲುಗಳಿದ್ದ ಪತ್ರವೊಂದನ್ನು ಕಳೆದ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯ ಸಮಯದಲ್ಲಿ ಬರೆದು ದಿ.ಯು.ಆರ್. ಅನಂತ ಮೂರ್ತಿ, ಕೆ.ಮರುಳಸಿದ್ದಪ್ಪ ಪ್ರೊ.ಎಸ್.ಜಿ. ಸಿದ್ಧರಾಮಯ್ಯ, ಡಾ.ಬಂಜಗೆರೆ ಜಯಪ್ರಕಾಶ್,ಮಾವಳ್ಳಿಶಂಕರ್,ಪ್ರೊ.ರವಿವರ್ಮಕುಮಾರ್ ಮುಂತಾದ ಕೆಲ ಸಾಹಿತಿಗಳು ಹಾಗೂ ಬುದ್ಧಿಜೀವಿಗಳು ಕಾಂಗ್ರೆಸ್ಸಿಗೆ ಬೆಂಬಲ ಸೂಚಿಸಿದ್ದವರು.’ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡುವ ನಿಟ್ಟಿನಲ್ಲಿ ಯು.ಆರ್.ಅನಂತಮೂರ್ತಿ ಸೇರಿದಂತೆ ಕೆಲ ಸಾಹಿತಿಗಳು ಕಾಂಗ್ರೆಸ್ ಬೆಂಬಲಿಸಿದ್ದಾರೆ.ಇದಕ್ಕೆನನ್ನ ಸಹಮತವಿದೆ’ ಎಂದು ಹಿರಿಯ ಸಾಹಿತಿ ಚಂಪಾ ಅವರೂ ಹೇಳಿದ್ದರು.

ಆ ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬಂದು,ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದರು.ಸಿದ್ದರಾಮಯ್ಯನವರು ಅಧಿಕಾರ ವಹಿಸಿಕೊಂಡ ನಂತರ,ಅಂದು ಬೆಂಬಲ ಪತ್ರದಲ್ಲಿ ಹೇಳಿದ್ದಂತೆ “ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸಂವಿಧಾನಕ್ಕೆ ಬದ್ಧವಾಗಿ ಆಡಳಿತವನ್ನು ಕಾಂಗ್ರೆಸ್ಸ್ ಸರ್ಕಾರ ನಡೆಸಿದೆಯಾ ಮಾನ್ಯ ಸಾಹಿತಿಗಳೇ-ಬುದ್ಧಿಜೀವಿಗಳೇ? ಬಹಳಷ್ಟು ಹಿಂದೆಯೇನು ಹೋಗುವುದು ಬೇಡ.ರಾಜ್ಯದಲ್ಲಿ ಸದ್ಯಕ್ಕೆ ನಡೆಯುತ್ತಿರು ವಿದ್ಯಾಮಾನವನ್ನೇ ತೆಗೆದುಕೊಳ್ಳೋಣ.

ಮತ್ತಷ್ಟು ಓದು »

23
ಮಾರ್ಚ್

ಸರ್ವಾಧಿಕಾರಿಗಳನ್ನೂ ಜನಶಕ್ತಿ ಮುಗಿಸಿಹಾಕಿದೆ, ನೆನಪಿರಲಿ!

– ರೋಹಿತ್ ಚಕ್ರತೀರ್ಥ

ಡಿ.ಕೆ ರವಿಮಹಾಭಾರತದಲ್ಲಿ ಬರುವ ಪ್ರಸಂಗ ಇದು. ಭೀಷ್ಮರ ಸೇನಾಧಿಪತ್ಯವನ್ನು ಕೊನೆಗಾಣಿಸಿ ಅವರನ್ನು ಪಾಂಡವರು ಶರತಲ್ಪದಲ್ಲಿ ಮಲಗುವಂತೆ ಮಾಡಿದ ಮೇಲೆ, ದುರ್ಯೋಧನ, ದ್ರೋಣನಿಗೆ ಸೇನೆಯ ಅಧಿಪತ್ಯ ವಹಿಸುತ್ತಾನೆ. ದ್ರೋಣ ಆದದ್ದಾಗಲಿ, ದೊಡ್ಡ ಮಿಕವನ್ನೇ ಬಲೆಗೆ ಕೆಡವಬೇಕು ಎಂದು ಯೋಚಿಸಿ ಚಕ್ರವ್ಯೂಹದ ರಚನೆ ಮಾಡುತ್ತಾನೆ. ಈ ವ್ಯೂಹಕ್ಕೆ ಅರ್ಜುನನಲ್ಲದೆ ಮತ್ಯಾರೂ ಎಂಟೆದೆಯಿಂದ ನುಗ್ಗುವುದಿಲ್ಲ; ಅವನೊಮ್ಮೆ ಒಳಬಂದರೆ ಸಾಕು ಒಂದೆರಡು ದಿನದ ಮಟ್ಟಿಗೆ ಅವನನ್ನು ಓಡಾಡಿಸಿ ಸುಸ್ತುಹೊಡೆಸಬಹುದು ಎನ್ನುವುದು ದ್ರೋಣನ ಲೆಕ್ಕಾಚಾರ. ಆದರೆ, ಅರ್ಜುನ ಸಂಶಪ್ತಕರೊಂದಿಗೆ ಹೋರಾಡಲು ಹೋದದ್ದರಿಂದ ಅವನ ಮಗ ಅಭಿಮನ್ಯು ಈ ಚಕ್ರವ್ಯೂಹದೊಳಕ್ಕೆ ನುಗ್ಗುತ್ತಾನೆ. ಆಗ ಅವನಿಗಿನ್ನೂ ಹದಿನಾರರ ಹರೆಯ. ವ್ಯೂಹವನ್ನು ಭೇದಿಸುವುದು ಹೇಗೆಂದು ತಿಳಿದಿದೆಯೇ ಹೊರತು ಹೊರಬರುವ ತಂತ್ರ ಅವನ ಕೈಯಲ್ಲಿಲ್ಲ. ಆದರೂ ಒಂದು ಕೈ ನೋಡೇಬಿಡಬೇಕು ಎಂಬ ಭಂಡಧೈರ್ಯದಲ್ಲಿ ನುಗ್ಗಿದ ಕೂಸು ಅದು. ಚಕ್ರವ್ಯೂಹವನ್ನು ಹೊಕ್ಕಮೇಲೆಯೇ ಅವನಿಗೆ ನಿಜಸ್ಥಿತಿಯ ಅರಿವಾಗುವುದು. ವ್ಯೂಹದ ರಚನೆ ಹೇಗಿರುತ್ತದೆಂದರೆ, ಎಷ್ಟೇ ಹೊತ್ತು ಕಾದಾಡಿದರೂ ಆ ಸೈನಿಕರು ವೃತ್ತಾಕಾರದಲ್ಲಿ ಸುತ್ತುತ್ತಿರುವುದರಿಂದ ಯುದ್ಧ ನಿಲ್ಲುವ ಪ್ರಶ್ನೆಯೇ ಇಲ್ಲ! ಅಭಿಮನ್ಯು ಎಲ್ಲರನ್ನೂ ಕೊಂದು ಹೊರಬರುವ ಯೋಚನೆಯನ್ನು ಬಿಟ್ಟೇಬಿಡಬೇಕು!

ಮತ್ತಷ್ಟು ಓದು »

20
ಮಾರ್ಚ್

ನಮಗೆ ಪೋಲಿಸರ ಮೇಲೆ ನಂಬಿಕೆಯಿದೆ; ನಿಮ್ಮ ಸರ್ಕಾರದ ಮೇಲಿಲ್ಲ ಸಿ.ಎಂ.ಸಿದ್ಧರಾಮಯ್ಯನವರೇ

– ರಾಕೇಶ್ ಶೆಟ್ಟಿ

DK Ravi N Siddaramayyaಸದನದಲ್ಲಿ ತನ್ನ ಹಟಮಾರಿ ಧೋರಣೆಯನ್ನು ಬಿಡದಿದ್ದ ಸರ್ಕಾರ,ನಿನ್ನೆಯ ಸಂಪುಟ ಸಭೆಯ ನಂತರವಾದರೂ ಬುದ್ಧಿ ಕಲಿತೀತು ಎಂಬ ಸಣ್ಣದೊಂದು ಆಸೆಯಿತ್ತು. ಆದರೆ,ಸಂಪುಟ ಸಭೆ ಮುಗಿದ ನಂತರ ಗೃಹ ಸಚಿವ ಜಾರ್ಜ್ ಸಾಹೇಬರು “ಸಿಬಿಐ ತನಿಖೆಯಿಲ್ಲ” ಎಂಬ ತಮ್ಮ ಹಳೇ ರಾಗವನ್ನೇ ಹಾಡಿದ್ದರು.ಇವತ್ತು ಸಂಜೆಯ ವೇಳೆಗೆ ಸಿಬಿಐ ತನಿಖೆಗೆ ಸೋಮವಾರ ಒಪ್ಪಿಸುತ್ತಾರೆ ಎಂಬ ಸುದ್ದಿಯೇನೋ ಹರಿದಾಡುತ್ತಿದೆ.ದಕ್ಷ ಯುವ ಅಧಿಕಾರಿಯ ಅಸಹಜ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೊಪ್ಪಿಸಿ ಎಂಬುದು ಕೇವಲ ವಿರೋಧ ಪಕ್ಷಗಳ ಬೇಡಿಕೆಯಲ್ಲ ಮಿ.ಸಿ.ಎಂ ಸಿದ್ದರಾಮಯ್ಯನವರೇ. ಈ ಪ್ರಕರಣ ಬೆಳಕಿಗೆ ಬಂದ ತಕ್ಷಣ ಡಿ.ಕೆ ರವಿಯವರ ಬಗ್ಗೆ ತಿಳಿದುಕೊಂಡಿದ್ದ ಜನ ಸಾಮಾನ್ಯರು ಸಹ ಅದೇ ಬೇಡಿಕೆಯನ್ನಿಟ್ಟಿದ್ದರು. ಆದರೆ,ಇನ್ನು ಐದು ವರ್ಷ ಸರ್ಕಾರವನ್ನು ಯಾರೂ ಏನು ಮಾಡಲಾರರು ಎಂಬ ಧೋರಣೆಯಿರಬೇಕು ನಿಮ್ಮದು. ಪ್ರಜಾಪ್ರಭುತ್ವವೆಂದರೆ, ಪ್ರಭುಗಳು ಹೇಳಿದಂತೆ ಪ್ರಜೆಗಳು ಕೇಳಬೇಕು ಎಂಬುದು ಬಹುಷಃ ನಿಮ್ಮ ನಿಲುವಾಗಿರಬೇಕು.ಇಲ್ಲವಾಗಿದ್ದರೆ ನೀವು ಇಡೀ ರಾಜ್ಯದ ಜನತೆಯ ಬೇಡಿಕೆಯನ್ನು ಹೀಗೆ ಧಿಕ್ಕರಿಸುತ್ತಿರಲಿಲ್ಲ.ನಿಮಗೆ ಮತ್ತು ನಿಮ್ಮ ಪಕ್ಷಕ್ಕೇ ಮತ ನೀಡಿದ “ಪ್ರಜೆ” ಸೋತಿದ್ದಾನೆ ಸಿದ್ದರಾಮಯ್ಯನವರೇ.ಇನ್ನು ಮುಂದೆ ದಯವಿಟ್ಟು ಪ್ರಜಾಪ್ರಭುತ್ವದ ಬಗ್ಗೆ ನಮಗೆ ಲೆಕ್ಚರ್ ಮಾಡಲು ಬರಬೇಡಿ.

ಸಿಬಿಐ ತನಿಖೆಗೊಪ್ಪಿಸಿ ಎಂದ ತಕ್ಷಣವೇ,”ನಮ್ಮ ರಾಜ್ಯದ ಪೋಲಿಸರ ಶಕ್ತಿಯ ಬಗ್ಗೆ ಅನುಮಾನವೇ? ರಾಜ್ಯ ಪೋಲಿಸರ ಮೇಲೆ ನಂಬಿಕೆಯಿಡಿ” ಎಂದೆಲ್ಲಾ ಸಿನೆಮಾ ಡೈಲಾಗ್ ಹೇಳಬೇಡಿ ಮಿಸ್ಟರ್ ಸಿ.ಎಂ.ಸಿದ್ಧರಾಮಯ್ಯನವರೇ.ನಮಗೆ ಪೋಲಿಸರ ಮೇಲೆ ನಂಬಿಕೆಯಿದೆ; ನಿಮ್ಮ ಸರ್ಕಾರದ ಮೇಲೆ ನಂಬಿಕೆಯಿಲ್ಲ.ಅಷ್ಟಕ್ಕೂ ನಿಮ್ಮ ಮೇಲೆ ನಿಮ್ಮ ಸರ್ಕಾರದ ಮೇಲೆ ನಾವು ನಂಬಿಕೆಯಿಡುವುದಾದರೂ ಹೇಗೆ ಹೇಳಿ? ಡಿ.ಕೆ ರವಿಯಂತ ದಕ್ಷ ಅಧಿಕಾರಿಗಳಿಗೆ ಮಾತ್ರ ನಿಮ್ಮ ಘನ ಸರ್ಕಾರದಲ್ಲಿ ತೊಂದರೆಗಳಾಗಿಲ್ಲ.ಆ ಪಟ್ಟಿಗೆ ಸಾಲು ಸಾಲು ಅಧಿಕಾರಿಗಳು ಸೇರಿಕೊಳ್ಳುತ್ತಾರೆ.
ಮತ್ತಷ್ಟು ಓದು »

20
ಮಾರ್ಚ್

ಈ ಸಾವು ನಿಮ್ಮಲ್ಲಿ ವಿಷಾದ ಹುಟ್ಟಿಸಬೇಕಿತ್ತು

– ರೋಹಿತ್ ಚಕ್ರತೀರ್ಥ

DK Ravis Parentsಬಹಳ ಹಿಂದೆ ಓದಿದ ಸಾಲು ಅದು. ಒಬ್ಬಳು ಹೆಣ್ಣಿನ ಹತ್ಯೆಯಾಗಿದೆ. ಅದನ್ನು ಯಾರ್ಯಾರು ಯಾವ್ಯಾವ ಬಗೆಯಲ್ಲಿ ಬಳಸಿಕೊಳ್ಳಬಹುದು ಎನ್ನುವ ಬಗ್ಗೆ ಒಬ್ಬೊಬ್ಬರೂ ತಮ್ಮ ಮೂಗಿನ ನೇರಕ್ಕೆ ಸಲಹೆಗಳನ್ನು ಕೊಡುತ್ತಾ ಹೋಗುತ್ತಾರೆ. ಅವೆಲ್ಲ ಮಾತುಗಳು ನಿಂತ ಮೇಲೆ ರಾಜ್ಯದ ಮುಖ್ಯಮಂತ್ರಿ – ಇಷ್ಟೆಲ್ಲಾ ಹೇಳಿದಿರಿ, ಆದರೆ ಆಕೆಯ ಸಾವು ನಮ್ಮೊಳಗೆ ವಿಷಾದ ಹುಟ್ಟಿಸಬೇಕಾಗಿತ್ತು ಅಂತ ನಿಮಗ್ಯಾರಿಗೂ ಅನ್ನಿಸಲೇ ಇಲ್ಲವಲ್ಲ – ಎಂದು ಮರುಗುತ್ತಾನೆ. ಅವಸ್ಥೆ ಕಾದಂಬರಿಯಲ್ಲಿ ಬರುವ ಆ ಭಾಗವನ್ನು ಓದುವಾಗ ನನಗೇ ತಿಳಿಯದಂತೆ ಕಣ್ಣೀರಾಗಿಬಿಟ್ಟಿದ್ದೆ. ಹೌದಲ್ಲ, ಒಂದು ಸಾವು ನಮ್ಮನ್ನು ಕಾಡಬೇಕು; ನಮ್ಮ ಅಂತರಾತ್ಮವನ್ನು ಕಲಕಬೇಕು; ಸುತ್ತ ಗವ್ವೆನ್ನುವ ಕತ್ತಲೆ ಮುತ್ತಿದಾಗ ಒಂಟಿ ನಿಂತ ಮೇಣದಬತ್ತಿ ಸದ್ದಿಲ್ಲದೆ ಕರಗಿಹೋದಂತೆ ನಾವೂ ನಿಂತಲ್ಲೇ ಕಲ್ಲಾಗಬೇಕು, ಕರಗಬೇಕು.
ಮತ್ತಷ್ಟು ಓದು »

20
ಮಾರ್ಚ್

ಒಡೆಯನ ನಿಷ್ಠ ‘ಬ್ರೂನಿ’ಯ ಸ್ವಗತ

– ಚಕ್ರವರ್ತಿ ಸೂಲಿಬೆಲೆ

ಮಾನ್ಯ ಮುಖ್ಯಮಂತ್ರಿಗಳಿಗೆ ನಮಸ್ಕಾರ.

DK Ravi IAS_Brooniನನ್ನ ಯಜಮಾನನ ಸಾವಿಗೆ ನಾಲ್ಕು ದಿನ ಕಳೆದೇ ಹೋಯಿತು. ಮೊದಲ ದಿನದಿಂದಲೂ ಇದನ್ನು ಆತ್ಮಹತ್ಯೆಯೆಂದೇ ಸಾಬೀತು ಪಡಿಸಲು ಹೆಣಗಾಡುತ್ತಿದ್ದ ನಿಮಗೂ-ನಿಮ್ಮ ವ್ಯವಸ್ಥೆಗೂ ನಾಲ್ಕು ದಿನವಾದರೇನು? ನಲ್ವತ್ತು ದಿನವಾದರೇನು? ನನಗಿರುವ ನಿಯತ್ತಿನ ಹತ್ತು ಪರ್ಸೆಂಟು ನಿಮ್ಮ ವ್ಯವಸ್ಥೆಗೆ ಇದ್ದಿದ್ದರೆ ಇವತ್ತು ನಮ್ಮ ಯಜಮಾನರು ಸಾಯುವ ಸ್ಥಿತಿ ಬರುತ್ತಿರಲಿಲ್ಲ.

ನಮ್ಮ ಮನೆಗೆ ಬಂದಾಗಲೆಲ್ಲ ಅವರು ಮೊದಲು ನನ್ನತ್ತಲೇ ಬರಬೇಕಿತ್ತು. ಪ್ರೀತಿಯಿಂದ ನೇವರಿಸಿ ನನ್ನೊಡನೆ ಹತ್ತು ನಿಮಿಷ ಆಡಿದ ಮೇಲೆಯೇ ಮನೆಯೊಳಗೆ ಹೋಗುತ್ತಿದ್ದರು. ಅವರು ಮುಟ್ಟುವಾಗ,ಮುದ್ದಿಸುವಾಗ ಅವರೊಬ್ಬ ದೊಡ್ಡ ಅಧಿಕಾರಿ ಅಂತ ನನಗೆಂದೂ ಅನ್ನಿಸಲೇ ಇಲ್ಲ. ಕುಸುಮಕ್ಕ ಆಗಾಗ ದೊಡ್ಡ ಯಜಮಾನರ ಜೊತೆಗೆ ಸಾಹೇಬರ ಕುರಿತಂತೆ ಮಾತನಾಡುವುದನ್ನು ಕೇಳಿ ರೋಮಾಂಚನವಾಗುತ್ತಿದ್ದೆ. ನಿಷ್ಠೆಗೆ ಇನ್ನೊಂದು ಹೆಸರು ಅಂತ ನನಗೆ ಹೇಳುತ್ತಾರೆ ಅನ್ನೋ ಧಿಮಾಕು ನನಗಿತ್ತು. ಆದರೆ ರಾಷ್ಟ್ರನಿಷ್ಠೆಗೆ ನಮ್ಮ ಯಜಮಾನರೇ ನಿಜವಾದ ಸಂಕೇತ ಎನ್ನುವುದು ನನಗೆ ಖಾತ್ರಿಯಾಗಿತ್ತು. ಥೂ! ಬಿಡಿ ವೋಟಿಗಾಗಿ ದೇಶವನ್ನೂ ಮಾರಿಬಿಡುವವರಿಗೆ ರಾಷ್ಟ್ರನಿಷ್ಠೆಯೆಂಬುದೆಲ್ಲ ಹೇಗೆ ಅರ್ಥವಾಗಬೇಕು.
ಮತ್ತಷ್ಟು ಓದು »

19
ಮಾರ್ಚ್

ಡಿ.ಕೆ ರವಿಯವರ ಅಸಹಜ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಸಹಿಸಂಗ್ರಹ ಅಭಿಯಾನ.ನೀವು ಪಾಲ್ಗೊಳ್ಳಿ

https://www.change.org/p/prime-minister-of-india-home-minister-of-india-make-cbi-probe-on-mysterious-death-of-ias-officer-d-k-ravi

DK Ravi