ನಿಜಗನ್ನಡ ವ್ಯಾಕರಣ
– ಹರೀಶ್ ಆತ್ರೇಯ
ಪ್ರಾಣಿಗಳೆಲ್ಲವುದರ ಮುಖ್ಯ ಲಕ್ಷಣಗಳಲ್ಲಿ ಶಬ್ದವನ್ನು ದ್ವನ್ಯಂಗಗಳ ಮೂಲಕ ಹೊರಡಿಸುವುದೂ ಒಂದು. ಗಾಳಿಯನ್ನು ಬಾಯಿಯ ಮೂಲಕ ನಿರ್ದಿಷ್ಟ ತಡೆ ನೀಡಿ ಹೊರಬಿಡುವಾಗ ಶಬ್ದ (ಧ್ವನಿ)ವುಂಟಾಗುತ್ತದೆ. ಕೇವಲ ಶ್ರವಣೇಂದ್ರಿಯಗಳ ಅನುಭವಕ್ಕೆ ಮಾತ್ರ ಬರುವ ಈ ಶಬ್ದವು ಜೀವನ ಇಷ್ಟದಂತೆ ಹೊರಬೀಳುತ್ತದೆ. ಈ ಜಗತ್ತಿನಲ್ಲಿ ಎಲ್ಲ ಪ್ರಾಣಿಗಳಿಗೂ ತಮ್ಮ ಅಭಿಪ್ರಾಯವನ್ನು ಇತರ ಜೀವಿಗಳಿಗೆ ತಿಳಿಸುವ ಮಾಧ್ಯಮಗಳಲ್ಲಿ ಶಬ್ದ ಮಾಧ್ಯಮ ಪಂಚಭೂತಾತ್ಮಕವಾಗಿ ಅತ್ಯುತ್ತಮ ಮಾಧ್ಯಮವೆನಿಸಿದೆ. ಇಂತಹ ಶಬ್ದದ ಉತ್ಪಾದನೆ ಮಾಡುವ ಪ್ರಾಣಿವರ್ಗದಲ್ಲಿ ಮಾನವ ವಿಭಿನ್ನಜೀವಿ ಈ ಶಬ್ದದ ಉತ್ಪಾದನೆ ಮಾಡುವ ಧ್ವನ್ಯಂಗಗಳನ್ನು ವಿಶಿಷ್ಟ ರೀತಿಯಲ್ಲಿ ದಂಡಿಸಿಕೊಂಡು ವಿಚಿತ್ರ ರೀತಿಯ ಶಬ್ದಗಳನ್ನು ಹೊರಡಿಸುವ ಮೂಲಕ ಭಾವನೆಗಳನ್ನು ಹೊರಗೆಡುವುದಕ್ಕೆ ನಾನಾ ಶಬ್ದಗಳನ್ನು ಉತ್ಪಾದಿಸಬಲ್ಲವನಾಗಿದ್ದಾನೆ.
“ಧರ್ಮ”ದ ದಾರಿ ತಪ್ಪಿಸುತ್ತಿರುವ ಹಿರಿಯರು;ಇಲ್ಲದ ಹಿಂದೂ ರಿಲಿಜನ್ನಿನ ಭ್ರಮೆಯಲ್ಲಿ ಕಿರಿಯರು
– ರಾಕೇಶ್ ಶೆಟ್ಟಿ
ಕಳೆದ ಜೂನ್ ೯ರಂದು ನಡೆದಿದ್ದ ಮೌಢ್ಯಮುಕ್ತ ಸಮಾಜ,ಕರ್ನಾಟಕ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಅನುಷ್ಠಾನ ಚರ್ಚಾ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿ ಡಾ.ಕಲ್ಬುರ್ಗಿಯವರು,“ದೇವರ ವಿಗ್ರಹಗಳ ಮೇಲೆ ಮೂತ್ರ ಮಾಡಿದರೂ ಏನೂ ಆಗದು” ಎಂದು ಹೇಳಿ ಸುದ್ದಿಯಾಗಿದ್ದರು. ಈಗ ಮತ್ತೆ, ಗದುಗಿನಲ್ಲಿ ಆಯೋಜಿಸಲಾಗಿದ್ದ ’ಸಮಾಜಶಾಸ್ತ್ರ,ಕನ್ನಡಶಾಸ್ತ್ರ ಮತ್ತು ಅರ್ಥಶಾಸ್ತ್ರ ವಿಚಾರಗೋಷ್ಠಿ’ಯಲ್ಲಿ, “ಹಿಂದುಗಳಿಗೆ ಧರ್ಮಗ್ರಂಥವೇ ಇಲ್ಲ.ಭಗವದ್ಗೀತೆ ಹಿಂದುಗಳ ಧರ್ಮ ಗ್ರಂಥವಲ್ಲ,ಅದೊಂದು ವಚನ ಸಾಹಿತ್ಯ… ರಾಜ್ಯ ಸರ್ಕಾರ ನಡೆಸಲು ತೀರ್ಮಾನಿಸಿರುವ ಜಾತಿಜನಗಣತಿಯ ಪ್ರಶ್ನಾವಳಿಯಲ್ಲಿ ಧರ್ಮ,ಜಾತಿ,ಉಪಜಾತಿಗೊಂದು ಪ್ರತ್ಯೇಕ ಕಾಲಂ ನಿಗದಿಪಡಿಸಲಾಗಿದೆ.ಜಾತಿ ಜನಗಣತಿಯಲ್ಲಿ ಧರ್ಮ ಯಾಕೆ ಬೇಕು.ಏಕೆಂದರೆ ಧರ್ಮ ಮತ್ತು ಜಾತಿ ಎರಡೂ ಒಂದೇ.ಜೈನ ಧರ್ಮವೂ ಹೌದು,ಜಾತಿಯೂ ಹೌದು.ಅದರಂತೆ ಮುಸ್ಲಿಂ,ಕ್ರಿಶ್ಚಿಯನ್ ಮತ್ತು ಬೌದ್ಧ ಧರ್ಮವೂ ಹೌದು,ಜಾತಿಯೂ ಹೌದು.ಹೀಗಿದ್ದಾಗ ಇಂತಹ ಅನವಶ್ಯಕ ಕಾಲಂಗಳು ಏಕೆ ಬೇಕು?” ಎಂದು ಪ್ರಶ್ನಿಸಿದ್ದಾರೆಂದು ವರದಿಯಾಗಿತ್ತು.
ಡಾ.ಕಲ್ಬುರ್ಗಿಯವರ ಹೇಳಿಕೆಯನ್ನು ವಿರೋಧಿಸಿ,ಹಿರಿಯ ಸಂಶೋಧಕರಾದ ಡಾ.ಎಂ ಚಿದಾನಂದ ಮೂರ್ತಿಗಳು ವಿಜಯವಾಣಿಯ ಜನಮತ ವಿಭಾಗದಲ್ಲಿ ಪತ್ರವೊಂದನ್ನು ಬರೆದು ’ಕಲ್ಬುರ್ಗಿಯವರು ಗದುಗಿನಲ್ಲಿ ಮಾತನಾಡುತ್ತ ’ಹಿಂದೂ ಎಂಬ ಧರ್ಮವೇ ಇಲ್ಲ’ ಎಂದು ವಿತಂಡವಾದ ಮಾಡಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ’ ಎನ್ನುತ್ತಾ ಮುಂದುವರೆದೂ ’ಧರ್ಮ ಎಂಬ ಶೀರ್ಷಿಕೆಯಡಿಯಲ್ಲಿ ಹಿಂದೂ ಎಂದು ದಾಖಲಿಸಲು ಸುಪ್ರೀಂ ಕೋರ್ಟ್ ಅವಕಾಶ ಮಾಡಿಕೊಟ್ಟಿದೆ.’ಹಿಂದೂ ವಿವಾಹ ಕಾನೂನು’ ಎಂಬ ಕಾನೂನು ಕೂಡ ಇದೆ.ಕಲ್ಕತ್ತೆಯ ಮಠವೊಂದು ತಾನು ಹಿಂದು ವ್ಯಾಪ್ತಿಗೆ ಬರುವುದಿಲ್ಲವೆಂದಾಗ,೧೯೯೫ರಲ್ಲಿ ಸರ್ವೋಚ್ಚ ನ್ಯಾಯಾಲಯದ ಪೂರ್ಣಪೀಠವು ಅದು ’ಹಿಂದು ಧರ್ಮಕ್ಕೆ ಸೇರಿದ ಮಠ” ಎಂದು ತೀರ್ಪು ನೀಡಿದೆ.ಗಾಂಧೀಜಿ ತಮ್ಮನ್ನು ’ಸನಾತನಿ ಹಿಂದೂ’ ಎನ್ನುತ್ತಾರೆ.ಸ್ವಾಮಿ ವಿವೇಕಾನಂದರು ಶಿಕಾಗೋದಲ್ಲಿ ತಮ್ಮನ್ನು ’ಹಿಂದು’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ… ” ಇತ್ಯಾದಿ ಉದಾಹರಣೆಗಳನ್ನು ನೀಡಿದ್ದಾರೆ.
ಕನ್ನಡನಾಡಿನ ಅನರ್ಘ್ಯ ರತ್ನಗಳು
– ರೋಹಿತ್ ಚಕ್ರತೀರ್ಥ
ನಮ್ಮ ನಾಡು ಕವಿಪುಂಗವರಿಗೆ, ಸಮಾಜಸುಧಾರಕರಿಗೆ, ಶಾಸ್ತ್ರಕೋವಿದರಿಗೆ ನೆಲೆ ಕೊಟ್ಟ ಪುಣ್ಯಭೂಮಿ. ಇಲ್ಲಿ ಶತಶತಮಾನಗಳಿಂದ ಅನೇಕಾನೇಕ ಸಂತರು, ಪ್ರಾಜ್ಞರು, ವಿಚಾರವಾಧಿಗಳು ಆಗಿಹೋಗಿದ್ದಾರೆ. ಈಗಿನ ಇಪ್ಪತ್ತೊಂದನೇ ಶತಮಾನದಲ್ಲೂ ಅಂತಹ ಪುಣ್ಯಪುರುಷರು ಮತ್ತೆಮತ್ತೆ ನಮ್ಮ ಈ ಕರುನಾಡಿನಲ್ಲಿ ಹುಟ್ಟಿಬರುತ್ತಲೇ ಇರುವುದು ನಮ್ಮೆಲ್ಲರ ಪೂರ್ವಜನ್ಮದ ಸುಕೃತ ಎಂದೇ ತಿಳಿಯಬೇಕು. ಇಂದಿನ ಈ ಸುದಿನದಂದು ಅಂತಹ ಕೆಲ ಪುಣ್ಯಪುರುಷ/ಮಹಿಳೆಯರನ್ನು, ಸಮಾಜದ ಚಿಂತನೆಯ ಧಾಟಿಯನ್ನೇ ಬದಲಾಯಿಸಬಲ್ಲ ಪ್ರವರ್ತಕರನ್ನು ನೆನೆಯೋಣ.
ಪ್ರೊ. ಭಗ್‍ವಂತ – ಇವರೊಬ್ಬ ಸಮಾಜಸುಧಾರಕ ಕಮ್ ಪಂಡಿತ ಕಮ್ ವಿಚಾರವಾದಿ ಕಮ್ ಜಾತ್ಯತೀತ ಕಮ್ ಇನ್ನೇನೇನೋ ಆಗಿರುವ ಪುಣ್ಯಪುರುಷರು. ಇವರು ಜಗತ್ತಿನ ಉಳಿದೆಲ್ಲಾ ದೇಶಗಳನ್ನು ಬಿಟ್ಟು ನಮ್ಮ ಭರತಖಂಡವನ್ನು, ಅದರಲ್ಲೂ ಕರ್ನಾಟಕವನ್ನು ತನ್ನ ಅವತಾರಕ್ಕಾಗಿ ಆರಿಸಿಕೊಂಡದ್ದೇ ನಮ್ಮೆಲ್ಲರ ಪುಣ್ಯ. ಭಗ್‍ವಂತ್ ಅವರು ತನ್ನ ದಿವ್ಯಚಕ್ಷುಗಳಿಂದ ಈ ಸಮಾಜದ ಧರ್ಮ-ಪಂಥಗಳಲ್ಲಿ ಅಡಗಿರುವ ವಾರೆಕೋರೆಗಳನ್ನು ಹೊರಗೆಳೆದುಹಾಕಿ ಸಮಾಜಕ್ಕೆ ಭರಿಸಲಾರದ ಸಹಾಯ ಮಾಡಿದ್ದಾರೆ. ಇವರಿಗೆ ಹಿಂದೂ ಧರ್ಮದ ಭಗವದ್ಗೀತೆ ಎಂದರೆ ತುಂಬಾ ಪ್ರೀತಿ. ಅದನ್ನು ನೂರಾರು ಸಲ ಪಾರಾಯಣ ಮಾಡಿ, ಇದುವರೆಗೆ ಪಂಡಿತವರೇಣ್ಯರಿಗೆ ಕಾಣದ ಅರ್ಥಗಳನ್ನು ಹುಡುಕಿ ಹೊರತೆಗೆದ ಸಾಹಸಿ ಅವರು. ಭಗ್‍ವಂತ್ ಭಾರತದಲ್ಲಲ್ಲದೆ ದೂರದ ಸೌದಿಯಲ್ಲೋ ವ್ಯಾಟಿಕನ್‍ನಲ್ಲೋ ಹುಟ್ಟಿ ಅಲ್ಲಿನ ಧರ್ಮಗ್ರಂಥಗಳನ್ನು ಈ ರೀತಿ ಹೊಗಳಿದ್ದರೆ ಅವರಿಗೆ ಅಲ್ಲಿನ ಮಠಾಧಿಪತಿಗಳು ಮತ್ತು ಸರ್ಕಾರಗಳು ಅಲೌಕಿಕ ಪ್ರಶಸ್ತಿಗಳನ್ನು ಕೊಟ್ಟು ಸನ್ಮಾನಿಸುತ್ತಿದ್ದವು. ಮತ್ತಷ್ಟು ಓದು 
ಆಚಾರವಿಲ್ಲದ ನಾಲಿಗೆ…
– ಎಸ್.ಎನ್.ಭಾಸ್ಕರ್,ಬಂಗಾರಪೇಟೆ
“ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ” – ಪುರಂದರದಾಸರ ಈ ಪದ ನೆನಪಾಗುತ್ತಿದೆ. ಇತ್ತೀಚೆಗಷ್ಟೇ ಭಗವದ್ಗೀತೆಯನ್ನು ಸುಡುತ್ತೇನೆ ಎಂದು ಹೇಳಿ ಸುದ್ದಿ ಮಾಡಿದ್ದ ದೇವನಾಮಾಂಕಿತ ಬುದ್ದಿಜೀವಿಯೊಂದು ಮತ್ತೊಮ್ಮೆ ತನ್ನ ಎಲುಬಿಲ್ಲದ ನಾಲಿಗೆಯನ್ನು ಹರಿಬಿಟ್ಟು ಸುದ್ದಿ ಮಾಡಿದೆ. ನಿಜಕ್ಕೂ ಖೇದವೆನಿಸುತ್ತದೆ. ಒಂದಿಡೀ ಜನಾಂಗದ ಆರಾಧ್ಯ ದೈವವಾಗಿರುವ, ಮರ್ಯಾದ ಪುರುಷೋತ್ತಮ, ಆದರ್ಶ ಪುರುಷನಾಗಿ ದೈವಸ್ಥಾನದಲ್ಲಿ ಪ್ರತಿಷ್ಟಾಪಿಸಿ ಪೂಜಿಸಲಾಗುತ್ತಿರುವ ಶ್ರೀ ರಾಮನನ್ನು ಕುರಿತು ಈ ರೀತಿ ಅನಗತ್ಯವಾದ ಹೇಳಿಕೆಗಳನ್ನು ನೀಡುವುದರಿಂದ ಅವರಿಗೆ ಆಗುವ ಲಾಭವಾದರೂ ಏನೋ? ಆಗಸದೆಡೆ ಮುಖಮಾಡಿ ಉಗುಳಿದರೆ ನಷ್ಟ ಯಾರಿಗೆ?
ಅಲ್ಲಾ ಸ್ವಾಮಿ… ಈ ರೀತಿ ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವಂತಹ ಹೇಳಿಕೆಗಳನ್ನು ನೀಡುವುದರ ಮೂಲಕ ಸ್ವಸ್ಥ ಸಮಾಜದಲ್ಲಿ ವಿಷ ಬೀಜ ಬಿತ್ತುತ್ತಿದ್ದೇನೆ ಎಂಬ ಅರಿವಾದರೂ ನಿಮಗುಂಟೆ ? ಅಥವಾ ಸೋ ಕಾಲ್ಡ್ ’ಸೆ(ಸಿ)ಕ್ಯುಲರ್” ಸಿದ್ದಾಂದತದೆಡೆಗೆ ತಮ್ಮ ಅತೀವ ಬದ್ದತೆಯನ್ನು ಈ ರೀತಿ ಸಮಾಜಕ್ಕೆ ತೋರ್ಪಡಿಸುತ್ತಿರುವಿರೇ? ವೇದಿಕೆಗಳ ಮೇಲೆ ನಿಂತು ಈ ರೀತಿ ಭಾಷಣ ಮಾಡಿ ಸುತ್ತ ನೆರೆದಿರುವ ಭಟ್ಟಂಗಿಗಳ ಚಪ್ಪಾಳಿ ಗಿಟ್ಟಿಸುತ್ತಾ ಸುದ್ದಿಯಾಗುವುದು ಯಾರನ್ನು ಓಲೈಸಲು? ಈ ರೀತಿ ಹೇಳಿಕೆ ನೀಡಿದವರ ವಿರುದ್ದ ಸರ್ಕಾರವೂ ಮೌನವಾಗಿರುವುದು ನಿಜಕ್ಕೂ ಸೋಜಿಗವೇ ಸರಿ. ಕ್ರಮ ಕೈಗೊಳ್ಳಲು ಯಾರಾದರೂ ದೂರು ನೀಡುವವರೆಗೆ ಕಾಯಬೇಕೆಂಬ ನಿಯಮವೇನೂ ಇಲ್ಲವಲ್ಲ. ಬಹು ಸಂಖ್ಯಾತ ಜನ ಸಮೂಹದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿರುವ ಬಗ್ಗೆ ಸ್ವಯಂ ದೂರು ದಾಖಲಿಸಿ ಕ್ರಮ ಕೈಗೊಳ್ಳುವ ಕಾರ್ಯ ಏಕೆ ಸರ್ಕಾರದಿಂದ ಆಗುತ್ತಿಲ್ಲ. ಪ್ರಮೋದ್ ಮುತಾಲಿಕ್ ರವರ ಭಾಷಣಕ್ಕೆ ನಿಷೇಧ ಹೇರುವ ಸರ್ಕಾರ ಇವರಿಗೂ ಏಕೆ ನಿಷೇಧ ಹೇರಬಾರದು? ಜನರ ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ಬರದ ಹಾಗೆ ನೋಡಿಕೊಳ್ಳುವುದು ಸರ್ಕಾರದ ಹಾಗೂ ಕಾನೂನಿನ ವ್ಯಾಪ್ತಿಗೆ ಬರುತ್ತದೆ ಅಲ್ಲವೇ..? ಮತ್ತೇಕೆ ಈ ಮೌನ. ಯಾರ ಓಲೈಕೆಗಾಗಿ..?
ಶೂದ್ರ ಶಂಬುಕ ಮತ್ತು ರಾಮಾಯಣ – ಒಂದು ಚರ್ಚೆ
– ರಾಘವೇಂದ್ರ ಸುಬ್ರಹ್ಮಣ್ಯ
ಹಲವಾರು ಜನ ಶಂಬುಕನ ಉದಾಹರಣೆ ಕೊಟ್ಟು ರಾಮನ ಮೇಲೆ ಅಧರ್ಮದ ಪಟ್ಟ ಹೊರಿಸ್ತಾರೋದು ನೋಡಿ, ನನ್ನ ದೃಷ್ಟಿಕೋನವನ್ನೂ ಹಂಚಿಕೊಳ್ಳೋಣವೆಂದು ನಿರ್ಧರಿಸಿದ್ದರಿಂದ,ಈ ಲೇಖನ.ಇದರ ಬಗ್ಗೆ ಒಂದು ಚರ್ಚೆ ಆದ್ರೆ ಚೆನ್ನಾಗಿರುತ್ತೆ ಅನ್ನಿಸ್ತು. ನಾನು ರಾಮಾಯಣನ್ನು ಧರ್ಮಗ್ರಂಥವಾಗಿ ಅಥವಾ ಪುರಾಣವನ್ನಾಗಿ ನೋಡುವುದಿಲ್ಲವಾದ್ದರಿಂದ, ರಾಮನೆಂಬ ‘ಮರ್ಯಾದಾ ಪುರುಷೋತ್ತಮ’ ಮಾಡಿದ್ದು ಸರಿಯೋ ತಪ್ಪೋ ಎಂಬ ವಿಮರ್ಷೆಗೆ ಕೈ ಹಾಕಲಾರೆ. ರಾಮನೆಂಬ ಪಾತ್ರ ಮಾಡಿದ್ದು ಸರಿಯೋ ಎಂದು ನೋಡುವ ಪ್ರಯತ್ನವಷ್ಟೇ.
ನನಗೆ ಗೊತ್ತಿದ್ದಂತೆ ಕಥೆ ಹೀಗಿದೆ (ತಪ್ಪಿದ್ದಲ್ಲಿ ದಯವಿಟ್ಟು ತಿದ್ದಿ):
“ರಾಮನ ಆಸ್ಥಾನಕ್ಕೆ ಒಬ್ಬ ಬ್ರಾಹ್ಮಣ ತನ್ನ ಮಗನ ಸಾವಿಗಾಗಿ ನ್ಯಾಯ ಕೇಳಲು ಬರುತ್ತಾನೆ. ಎಲೈ ರಾಜನೇ, ನೀನೇನೋ ಅನ್ಯಾಯ ಮಾಡಿರಬೇಕು, ಆದ್ದರಿಂದ ಯಾವ ತಪ್ಪನ್ನೂ ಮಾಡನ ನನ್ನ ಮಗನ ಸಾವಾಗಿದೆ ಎಂದು ಆರೋಪಿಸುತ್ತಾನೆ. ನಾರದಮುನಿ ಇದರಬಗ್ಗೆ ಕೊಟ್ಟ ಹಿನ್ನೆಲೆ ಹಾಗೂ ಶಂಭುಕನ ತಪಸ್ಸಿನ ಬಗ್ಗೆ ತಿಳಿದು ರಾಮ ಶಂಬುಕನಿದ್ದಲ್ಲಿಗೆ ಪ್ರಯಾಣ ಬೆಳೆಸುತ್ತಾನೆ. ಶಂಬುಕನನ್ನು ಭೇಟಿ ಮಾಡಿ, ಅವನ ತಪಸ್ಸಿನ ಕಾರಣ ಕೇಳಲಾಗಿ, ಶಂಬುಕ ‘ರಾಮ, ನಾನು ಶೂದ್ರ ಕುಟುಂಬದಲ್ಲಿ ಜನಿಸಿದವನು. ನನ್ನ ಕಠಿಣ ಪರಿಶ್ರಮದಿಂದ ದೇವತೆಗಳನ್ನು ಮೆಚ್ಚಿಸಿ, ದೇವಲೋಕವನ್ನು ನನ್ನದಾಗಿ ಮಾಡಿಕೊಂಡು, ಈ ದೇಹದೊಂದಿಗೇ ಸ್ವರ್ಗವನ್ನು ಪ್ರವೇಶಿಸುವ ನಿರ್ಧಾರದಿಂದ ಈ ತಪಸ್ಸನ್ನು ಮಾಡುತ್ತಿದ್ದೇನೆ” ಎನ್ನುತ್ತಾನೆ. ಅದಕ್ಕೆ ರಾಮ ‘ಅಯ್ಯಾ ನಿನ್ನ ತಪಸ್ಸು, ಪರಿಶ್ರಮ ಒಳ್ಳೆಯದೇ ಆದರೂ, ಅದರ ಹಿಂದಿನ ಕಾರಣ ಅಸಾತ್ವಿಕವಾದದ್ದು’ ಎಂಬ ಕಾರಣದಿಂದ ಅವನ ಹರಣ ಮಾಡುತ್ತಾನೆ.
ಮತ್ತಷ್ಟು ಓದು 
ಸಾಮಾನ್ಯ ಓದುಗನ ಗ್ರಹಿಕೆಯಲ್ಲಿ ಭೈರಪ್ಪ
– ಎಸ್ ಎನ್ ಸಿಂಹ. ಮೇಲುಕೋಟೆ.
ಸೃಷ್ಟಿಯ ಆರಂಭದಿಂದ ಇಂದಿನವರೆಗೂ ಮನುಷ್ಯನ ಹೃದಯವನ್ನು ಅನೇಕ ಚಿಂತೆ ಸಂತಾಪಗಳು ಬಾಧಿಸುತ್ತಲೇ ಇವೆ. ಅವುಗಳನ್ನು ನೀಗಿ ಜೀವನವನ್ನು ನೇರ್ಪಡಿಸಿಕೊಳ್ಳುವ ಯತ್ನದಲ್ಲಿ ಆತ ಹಲವು ಸಾಮಗ್ರಿಗಳ ನೆರವನ್ನು ಅಪೇಕ್ಷಿಸುತ್ತಾನೆ. ಅವುಗಳ ನೆರವಿನಿಂದ ಸಂಪೂರ್ಣವಾಗಿ ಅಲ್ಲದಿದ್ದರೂ ತಾತ್ಕಾಲಿಕವಾಗಿಯಾದರೂ ಸಂತಾಪಶಮನವನ್ನು ಪಡೆಯುವಲ್ಲಿ ಸುಖಾಪೇಕ್ಷಿಯಾದ ಮಾನವ ಕೊಂಚಮಟ್ಟಿಗೆ ಯಶಸ್ವಿಯಾಗಿದ್ದಾನೆ.ಇಂತಹ ಸುಖವನ್ನು ಪಡೆಯುವ ನಿಟ್ಟಿನಲ್ಲಿ ಅಗತ್ಯವಾದ ಕನಿಷ್ಠ ಸಾಮಗ್ರಿಗಳು ಯಾವುವೆಂದು ಸೂಫಿ ಸಂತ ಉಮರ್ ಖಯ್ಯಮನು ತನ್ನೊಂದು ರುಬಾಯಿಯಲ್ಲಿ ಹಿಡಿದಿಟ್ಟಿದ್ದಾನೆ. ರಸಋಷಿ ಡಿ.ವಿ.ಜಿ. ಅವರು ಮಾಡಿರುವ ಅದರ ಸುಂದರವಾದ ಅನುವಾದ ಹೀಗಿದೆ..
ಅಲ್ಲಿ ಮರದಡಿಯಲ್ಲಿ ನಲ್ಗಾವ್ಯವೊಂದಿರಲು
ರೊಟ್ಟಿಯೊಂದಿನಿಸೊಂದು ಕುಡಿಕೆಯಲಿ ಮಧುವು |
ಮೇಣ್ ಮುಗುದೆ ನೀನೆನ್ನ ಬಳಿ ಕುಳಿತು ಪಾಡಲಹ
ಕಾಡಾದೊಡೇನದುವೆ ಸಗ್ಗಸುಖವೆನಗೆ ||
ಖಯ್ಯಮನಿಗಿಂತಲೂ ತುಂಬ ಹಿಂದೆಯೇ ನಮ್ಮ ಭರ್ತೃಹರಿ ಹೇಳುವುದಾದರೂ ಇದನ್ನೇ..
ಅಗ್ರೇ ಗೀತಂ ಸರಸ ಕವಯಃ ಪಾರ್ಶ್ವತೋ ದಾಕ್ಷಿಣಾತ್ಯಾಃ
ಪಶ್ಚಾಲ್ಲೀಲಾವಲಯರಣಿತಂ ಚಾಮರಗ್ರಾಹಿಣೀನಾಮ್ |
ಯದ್ಯಸ್ತ್ಯೇವಂ ಕುರು ಭವರಸಾಸ್ವಾದನೇ ಲಂಪಟತ್ವಂ
ನೋಚೇಚ್ಚೇತಃ ಪ್ರವಿಶ ಸಹಸಾ ನಿರ್ವಿಕಲ್ಪೇ ಸಮಾಧೌ ||
ಮತ್ತಷ್ಟು ಓದು 
ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪ-ರೇಖೆ? – ಭಾಗ 2
– ರೋಹಿತ್ ಚಕ್ರತೀರ್ಥ
ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪ-ರೇಖೆ? – ಭಾಗ 1
ಶ್ರೀ ರಾಮನವಮಿಯ ದಿವಸ ರಾಮನಾಮಾಮೃತವೆ
ಪಾನಕ, ಪನಿವಾರ, ಕೋಸಂಬರಿ;
ಕರಬೂಜ ಸಿದ್ದೋಟುಗಳ ಹೋಳು, ಸೀಕರಣೆ;
ವ್ಯಕ್ತಮಧ್ಯಕ್ಕೆ ಬಂದುರಿವ ಶಬರಿ
ಎಂದು ಶುರುವಾಗುತ್ತದೆ ಅಡಿಗರ ಕವಿತೆ. ರಾಮನ ಹುಟ್ಟುಹಬ್ಬ ಬೇಸಗೆಯಲ್ಲಿ ಬರುತ್ತದೆ ಎನ್ನುವುದನ್ನು ಹೇಳಲಿಕ್ಕೇ ಕವಿ ಎರಡು ಸಾಲುಗಳಲ್ಲಿ ಪಾನಕ, ಪನಿವಾರ, ಕೋಸಂಬರಿ, ಕರಬೂಜ ಸಿದ್ದೋಟುಗಳ ಹೋಳು, ಸೀಕರಣೆಗಳನ್ನು ಹರಡಿ ಕೂತಿದ್ದಾರೆ! ಇಲ್ಲಿ ಪಾನಕ ಎಂದರೆ ಪಾನಕ, ಪನಿವಾರ ಎಂದರೆ ಪನಿವಾರ. ಅದಕ್ಕೆ ಎರಡನೆ ಅರ್ಥ ಇರುವ ಹಾಗೇನೂ ಕಾಣುತ್ತಿಲ್ಲ. ನಾನು ಈಗಾಗಲೇ ಹೇಳಿದ ಹಾಗೆ, ಅಡಿಗರು ಚಿತ್ರಕ ಶಕ್ತಿಯ ಕವಿ. ಒಂದು ಸಂಗತಿಯನ್ನು ವಿವರಿಸಲು ಎಷ್ಟು ಮೂರ್ತ ಉದಾಹರಣೆಗಳು ಸಾಧ್ಯವೋ ಅಷ್ಟನ್ನು ಎತ್ತಿಕೊಂಡು ಬರಬಲ್ಲ ಪ್ರತಿಭಾವಂತ. “ಬೇಸಗೆ” ಅಂದಿದ್ದರೆ ಸಾಕಿತ್ತು. ರಾಮನ ಬರ್ತ್‍ಡೇ ಸಮಯದಲ್ಲಿ ಸೆಕೆ ವಿಪರೀತ ಇರುತ್ತೆ ಎಂದಿದ್ದರೂ ನಡೆಯುತ್ತಿತ್ತು. ಆದರೆ, ಅಂತಹ ಯಾವ ಮಾತನ್ನೂ ಹೇಳದೆ ಪಾನಕ-ಕೋಸಂಬರಿಗಳ ಬಗ್ಗೆ ಹೇಳುತ್ತ ಅಡಿಗರು ಒಂದು ವಿಭಿನ್ನ ವಾತಾವರಣವನ್ನು ಸೃಷ್ಟಿಸುತ್ತಾರೆ. ಅದನ್ನು ಓದುವಾಗ ನಮಗೆ ಹಬ್ಬದ ವಾತಾವರಣ ಕಂಡಂತೆ ಆಗಬೇಕು. ಆ ಸಿಹಿಭಕ್ಷ್ಯಗಳನ್ನು ತಿಂದಹಾಗನಿಸಬೇಕು. ಕಾವ್ಯದ ಉದ್ಧೇಶ ರಸೋತ್ಪತ್ತಿಯಲ್ಲವೆ?
ಅದೆಲ್ಲ ಸರಿ, ಆದರೆ ವ್ಯಕ್ತಮಧ್ಯಕ್ಕೆ ಬಂದುರಿವ ಶಬರಿ – ಎಂಬ ಸಾಲಿಗೆ ಏನರ್ಥ? ಇಷ್ಟೆಲ್ಲ ಹಬ್ಬದ ವಾತಾವರಣ ಕಟ್ಟಿಕೊಡುವಾಗ ಮಧ್ಯದಲ್ಲಿ ಶಬರಿ ಯಾಕೆ ಬರಬೇಕು? ಅವಳು ಯಾಕೆ ಉರಿಯಬೇಕು? ವ್ಯಕ್ತಮಧ್ಯ ಎಂಬ ಪದವನ್ನು ಅಡಿಗರು ಎತ್ತಿಕೊಂಡಿರುವುದು (ಇತ್ತೀಚೆಗೆ ಕೆಲವು ಬುದ್ಧಿವಂತರು ಸುಡಬೇಕು ಎಂದು ಆದೇಶಿಸಿದ) ಭಗವದ್ಗೀತೆಯಿಂದ! ಅಲ್ಲಿ ಸಾಂಖ್ಯಯೋಗದಲ್ಲಿ ಮತ್ತಷ್ಟು ಓದು 
ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪ-ರೇಖೆ? – ಭಾಗ 1
– ರೋಹಿತ್ ಚಕ್ರತೀರ್ಥ
ಗೋಪಾಲಕೃಷ್ಣ ಅಡಿಗರು ನನ್ನ ಮೆಚ್ಚಿನ ಕವಿ.ಲ್ಯಾಟಿನ್ ಜಗತ್ತಿಗೆ ನೆರೂಡ ಇದ್ದ ಹಾಗೆ, ಶಿಷ್ಟ ಅಮೆರಿಕಕ್ಕೆ ಎಲಿಯೆಟ್ ಇದ್ದ ಹಾಗೆ ಕನ್ನಡ ಜಗತ್ತಿಗೆ ಅಡಿಗರು. ಅವರನ್ನು ಕೇವಲ ಕನ್ನಡದ ನೆಲಕ್ಕೆ ಸೀಮಿತಗೊಳಿಸುವುದು ತಪ್ಪಾಗಬಹುದು. ಅಡಿಗರು ಇಂಗ್ಲೀಷಿನಲ್ಲಿ ಬರೆದಿದ್ದರೆ ಅಥವಾ ಅವರು ಬರೆದಿದ್ದನ್ನು ಅಷ್ಟೇ ಸಮರ್ಥವಾಗಿ ಇಂಗ್ಲೀಷಿಗೆ ಅನುವಾದಿಸುವುದು ಸಾಧ್ಯವಿದ್ದರೆ, ನಮಗೆ ಇನ್ನೊಂದು ನೊಬೆಲ್ ಅನಾಯಾಸವಾಗಿ ದೊರೆಯುತ್ತಿತ್ತು. ಅಡಿಗರ ಕಾವ್ಯಕೃಷಿಯ ಬಗ್ಗೆ ಗೊತ್ತಿಲ್ಲದ ಕನ್ನಡಿಗ ಸಿಗುವುದು ಅಪರೂಪ. ಅವರ ಹೆಸರು ತಿಳಿಯದವರು ಕೂಡ “ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು” ಎಂಬ ಹಾಡು ಕೇಳಿದರೆ, ಕೊರಳು ತುರಿಸಿಕೊಳ್ಳುವ ಬೆಕ್ಕಿನಂತೆ ಕಣ್ಣುಮುಚ್ಚಿ ಕಾವ್ಯಾರ್ಥವನ್ನು ಆನಂದಿಸುತ್ತಾರೆ. ನವ್ಯ ಎಂಬ ಒಂದು ಪಂಥವನ್ನೇ ಕನ್ನಡದಲ್ಲಿ ಸೃಷ್ಟಿಸಿದ, ಕಾವ್ಯಲೋಕದಲ್ಲಿ ಹೊಸದಾರಿ ಕೊರೆದ, ಒಂದು ಯುಗದ ಕಣ್ಣು ತೆರೆಸಿದ ಕವಿ ಎಂದು ಕರೆಸಿಕೊಂಡ ಅಡಿಗರು ಕನ್ನಡಿಗರಿಗೆ ಕೊಟ್ಟಿರುವ ಸಫಲ ಕವಿತೆಗಳ ಸಂಖ್ಯೆ ದೊಡ್ಡದು. ಕುಮಾರವ್ಯಾಸನನ್ನು ಓದಿಕೊಂಡರೆ ಹೇಗೋ ಹಾಗೆಯೇ ಅಡಿಗರನ್ನು ಓದಿಕೊಂಡರೂ ಶಬ್ದ ಮತ್ತು ಅರ್ಥಗಳ ದಾರಿದ್ರ್ಯ ಬರುವುದಿಲ್ಲ ಎಂದು ಧೈರ್ಯವಾಗಿ ಹೇಳಬಹುದು.
ಚೈತ್ರ ಮಾಸದ ಶುಕ್ಲಪಕ್ಷದ ಒಂಬತ್ತನೆ ದಿನ ನವಮಿ. ರಾಮನ ಬರ್ತ್‍ಡೇ. ರಾಮಾಯಣದ ನಾಯಕಮಣಿ, ಮರ್ಯಾದಾಪುರುಷೋತ್ತಮ ಶ್ರೀರಾಮಚಂದ್ರನ ಬಗ್ಗೆ ಅಡಿಗರು ಒಂದು ಕವಿತೆ ಬರೆದಿದ್ದಾರೆ. ಉಡುಪಿಯ ರಥಬೀದಿಯ ಪರಿಸರದಲ್ಲಿ ಪ್ರತಿವರ್ಷದ ಬೇಸಗೆಯಲ್ಲಿ ನಡೆಯುವ ವಸಂತೋತ್ಸವದಲ್ಲೊಮ್ಮೆ ಅವರು ಈ ಕವನ ವಾಚಿಸಿದ್ದರಂತೆ. (ಪ್ರಾಸಂಗಿಕವಾಗಿ ಒಂದಷ್ಟು ಮಾತು: ಉಡುಪಿ ಮತ್ತು ಅಡಿಗರ ಸಂಬಂಧಕ್ಕೆ ಹಲವು ಕೊಂಡಿಗಳಿವೆ. ಅಡಿಗರು ಆಚಾರ್ಯ ಮಧ್ವರ ಮೇಲೆ “ಆನಂದತೀರ್ಥರಿಗೆ” ಎಂಬ ಕವಿತೆ ಬರೆದಿದ್ದಾರೆ. ಹಾಗೆಯೇ, ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕ ಮತ್ತು ಪ್ರಿನ್ಸಿಪಾಲ್ ಆಗಿಯೂ ಕೆಲವರ್ಷ ಕೆಲಸ ಮಾಡಿದ್ದಾರೆ. ಅವರ “ಸುವರ್ಣಪುತ್ಥಳಿ” ಕವನಸಂಗ್ರಹಕ್ಕೆ ಉಡುಪಿಯ ಜಿ. ರಾಜಶೇಖರ ಮುನ್ನುಡಿ ಬರೆದರು)






