ವಿಷಯದ ವಿವರಗಳಿಗೆ ದಾಟಿರಿ

Posts from the ‘ಕನ್ನಡ’ Category

9
ಮಾರ್ಚ್

ನನ್ನಿ- ತಾತ್ವಿಕ ಒಳಸುಳಿಗಳ ವಿಶ್ಲೇಷಣೆ.

ನವೀನ ಗಂಗೋತ್ರಿ

12122868_977678548941892_2941475822589158080_nಗಂಭೀರ ಓದುಗರು, ನೋಡುಗರು, ಕನ್ನಡದಲ್ಲಿ ಕಡಿಮೆಯಾದ್ದರಿಂದಲೇ ಕಡಮೆ ದರ್ಜೆಯ ಪತ್ರಿಕೆಗಳು, ಸಿನಿಮಾಗಳು, ಕಾದಂಬರಿಗಳು ನಮ್ಮಲ್ಲಿ ನಾಯಿಕೊಡೆಯಂತೆ ಹುಟ್ಟಿಕೊಂಡಿವೆ ಎನ್ನುವ ಮಾತನ್ನು ಆಗಾಗ ನಿರಾಶಾವಾದಿ ವಿಮರ್ಶಕರೂ, ತಮ್ಮ ಕಣ್ಣೀರಿನ ಕಾರ್ಯಕ್ರಮಗಳ ಸಮರ್ಥಕರಾದ ಚಾನೆಲ್ಗಳೂ ಹೇಳಿಕೊಂಡು ಬಂದಿವೆ. ಸಕಾರಾತ್ಮಕ ಧೋರಣೆಯ ಕೆಲವು ಬರಹಗಾರರು, ಚಿಂತಕರು ಓದುಗರನ್ನು ಇಷ್ಟು ತಳಮಟ್ಟದಲ್ಲಿ ಕಾಣುವುದಿಲ್ಲ. ಹಾಗಾಗಿಯೇ ಘನವಾದ ಕೃತಿಗಳನ್ನು ಕೊಡುವುದು ಅವರಿಗೆ ಇಂದಿಗೂ ಸಾಧ್ಯವಾಗುತ್ತಿದೆ.

ಕರ್ಮ ಕಾದಂಬರಿಯ ಮೂಲಕ ಕರಣಂ ಪವನ್ ಪ್ರಸಾದ್ ಹಾಗೊಬ್ಬ ಆಳ ಚಿಂತನೆಯ ಕಾದಂಬರಿಕಾರರಾಗುವ ಭರವಸೆಯನ್ನು ಹುಟ್ಟಿಸಿದ್ದರು. ತಾತ್ತ್ವಿಕ ಎತ್ತರವನ್ನು ಅಡಕಗೊಳಿಸಿಕೊಂಡಿದ್ದರೂ ಕರ್ಮದ ಓಘದಲ್ಲಿ ಇನ್ನೊಂದಿಷ್ಟು ನೈಪುಣ್ಯವನ್ನು ಬಯಸಿದ್ದ ಓದುಗ, ಇದೀಗ ಅವರ ಹೊಸ ಕಾದಂಬರಿ ’ನನ್ನಿ’ಯ ಮೂಲಕ ಹೆಚ್ಚು ಕುಶಲಿಯಾದ ಮತ್ತು ಪ್ರಭಾವಿಯಾದ ಕಾದಂಬರಿಕಾರನನ್ನು ಕಂಡಿದ್ದಾರೆ. ಎರಡುವಾರದ ಹಿಂದೆ ಬಿಡುಗಡೆಯಾದ ನನ್ನಿ ಅದಾಗಲೇ ಎರಡುಬಾರಿ ಟಾಪ್ ಟೆನ್ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಆನ್ ಲೈನ್ ನ್ಯೂಸ್ ಪೋರ್ಟಲ್ಗಳಲ್ಲಿ ಸುದ್ದಿಯಾಗ್ತಿದೆ, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗ್ತಿದೆ. ಹೊತ್ತಿ ಉರಿವ ಬೆಂಕಿಯಂತಲ್ಲದೆ, ಚಾಪೆಯಡಿಗೆ ಹರಿವ ನೀರಿನಂತೆ ಓದುಗನನ್ನು ಆಂತವಾಗಿ ತಲುಪುತ್ತಿದೆ. ಅದ್ಯಾಕೆ ಹಾಗೆ ತಲುಪುತ್ತಿದೆ ಎನ್ನುವುದಕ್ಕೆ ನನ್ನಿ ಕಾದಂಬರಿಯ ಸಾಮರ್ಥ್ಯವೇ ಉತ್ತರ.

ಮತ್ತಷ್ಟು ಓದು »

6
ಮಾರ್ಚ್

ಅಗ್ನಿರಾಜನ ಪ್ರಕರಣ

 

 

– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ,
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ,ತುಮಕೂರು ವಿಶ್ವವಿದ್ಯಾನಿಲಯ 

1058749_10154099009590649_1296063247_nಮೊನ್ನೆ ತಾನೆ ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ತಂದೆಯಿಂದ ಅತ್ಯಾಚಾರಕ್ಕೊಳಗಾದ ಹೆಣ್ಣುಮಗಳೊಬ್ಬಳಿಗೆ ಪಂಚಾಯ್ತಿ ಛಡಿ ಏಟಿನ ಶಿಕ್ಷೆ ಕೊಟ್ಟಿದ್ದು ಇದೀಗ ರಾಷ್ಟ್ರವ್ಯಾಪಿ ಚರ್ಚೆಗೆ ಗ್ರಾಸವಾಗಿದೆ. ಇಂಥ ಕಥೆಯೊಂದು ಕ್ರಿ.ಶ. 900ರ ವೇಳೆಗೇ ನಡೆದಿದ್ದನ್ನು ಕಥೆಯೊಂದು ಹೇಳುತ್ತದೆ. ಇದನ್ನು ಹೇಳುವ ಮುನ್ನ ಸಣ್ಣ ಪೀಠಿಕೆ ಅಗತ್ಯ.

ಕಳೆದ ಮುನ್ನೂರು ವರ್ಷಗಳಲ್ಲಿ ಭಾರತೀಯ ಸಂಸ್ಕೃತಿಯ ಬಹುಪಾಲು ಸೈದ್ಧಾಂತಿಕ ಮತ್ತು ಪಠ್ಯ ಸಂಬಂಧಿ ಅಧ್ಯಯನವನ್ನು ಕೈಗೊಂಡವರು ಯೂರೋಪಿನ ಚಿಂತಕರು. ಅವರು ನಾವು ಹಾಗೂ ನಮ್ಮ ಸಮಾಜವನ್ನು ತಮ್ಮ ಇಷ್ಟದಂತೆ ಕಂಡು, “ಅಧ್ಯಯನ” ಮಾಡಿ, ನಮ್ಮ ಸಮಾಜ ಹಾಗೂ ಸಂಸ್ಕೃತಿಯಲ್ಲಿ ಏನೇನು ತಪ್ಪುಗಳಿವೆ ಎಂದು ತೋರಿಸಿ ಅದನ್ನೇ ಆಧುನಿಕ ಶಿಕ್ಷಣದ ಮೂಲಕ ನಮಗೆ ಕಲಿಸಿದರು. ಇಂದಿಗೂ ನಾವು ಅದನ್ನೇ ನಂಬಿಕೊಂಡು ಬಂದಿದ್ದೇವೆ. ಕಳೆದ ಎರಡರಿಂದ ಮೂರು ಸಾವಿರ ವರ್ಷಗಳ ಅವಧಿಯಲ್ಲಿ ಭಾರತೀಯ ಚಿಂತಕರು ಏನೇನೂ ಚಿಂತನೆ ಮಾಡಲೇ ಇಲ್ಲವೇ? ನಮ್ಮಿಂದ ಯೂರೋಪ್ ಕಲಿಯುವುದು ಏನೂ ಇಲ್ಲವೇ? ಎಂದು ಸಂಸ್ಕೃತಿ ಚಿಂತಕ ಬಾಲಗಂಗಾಧರ್ ಕೇಳುತ್ತಾರೆ. ಇಡೀ ಭಾರತದ್ದಿರಲಿ, ಕನ್ನಡ ಸಾಹಿತ್ಯದ ಹಲವಾರು ಸಂಗತಿಗಳನ್ನು ಗಮನಿಸಿದರೆ ಈ ಮಾತು ಅಕ್ಷರಶಃ ಸತ್ಯ ಅನಿಸುತ್ತದೆ. ಕನ್ನಡ ನವ್ಯ ಸಾಹಿತಿಗಳು ಪಾಶ್ಚಾತ್ಯರಿಂದ ಹೊಸದನ್ನು ತರುವ, ಪರಿಚಯಿಸುವ ಭರದಲ್ಲಿ ನಮ್ಮದೇ ಆದ ಹಳೆಗನ್ನಡವನ್ನು ಅಲಕ್ಷಿಸಿದರು. ಶಿಕ್ಷಣ, ಮಾಧ್ಯಮಗಳೆಲ್ಲ ನವ್ಯ ಸಾಹಿತ್ಯಕ್ಕೆ ನೀಡಿದ ಪ್ರಾಮುಖ್ಯವನ್ನು ಹಳೆಗನ್ನಡಕ್ಕೆ ನೀಡದೇ ಹೋದವು. ಮೂರ್ನಾಲ್ಕು ತಲೆಮಾರುಗಳು ಹೀಗೇ ರೂಪುಗೊಂಡು ಶಿಕ್ಷಣ ಸಂಸ್ಥೆಗಳಲ್ಲೂ ಇದೇ ಮಾದರಿ ತಯಾರಾಗಿ ಈಗ ಪ್ರಾಥಮಿಕ ಹಂತವಿರಲಿ, ಉನ್ನತ ಶಿಕ್ಷಣದಲ್ಲೂ ಹಳೆಗನ್ನಡ ಓದುವವರೂ ಇಲ್ಲವೇ ಇಲ್ಲ ಅನ್ನುವ ಪರಿಸ್ಥಿತಿ ಉಂಟಾಗಿದೆ. ನವ್ಯ ಪ್ರಭಾವದ ಇಂದಿನ ಕನ್ನಡ ಸಾಹಿತ್ಯ ಓದಿದವರಿಗೆ ಈಡಿಪಸ್ ಗೊತ್ತಿರುತ್ತಾನೆ, ಆದರೆ ಅಗ್ನಿರಾಜನಾಗಲೀ ಕುಮಾರರಾಮನಾಗಲೀ ಗೊತ್ತೇ ಇರದಿದ್ದರೆ ಅದು ವಿದ್ಯಾರ್ಥಿಗಳ ತಪ್ಪಲ್ಲ! ಸಿಗ್ಮಂಡ್ ಫ್ರಾಯ್ಡ್ ನ ಈಡಿಪಸ್ ಕಾಂಪ್ಲೆಕ್ಸ್ ಹೆಸರು ಹಾಗೂ ಕಥೆ ಪರಿಚಯವಿರುವಷ್ಟು ಅಗ್ನಿರಾಜನ ಕಥೆ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಬಹಳಷ್ಟು ಅಧ್ಯಾಪಕರಿಗೂ ಗೊತ್ತೇ ಇಲ್ಲ! ಇದಕ್ಕೆ ಇರುವ ಕಾರಣವನ್ನು ಈಗಾಗಲೇ ಬಾಲು ಅವರ ಮಾತಿನಲ್ಲಿ ಕೇಳಿದ್ದಾಗಿದೆ.

ಮತ್ತಷ್ಟು ಓದು »

4
ಆಗಸ್ಟ್

“ಪೂರ್ವಾಗ್ರಹ” ಕುರಿತ ಪೂರ್ವಗ್ರಹ

– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ, ತುಮಕೂರು ವಿವಿ

ಪೂರ್ವಗ್ರಹಆಗಸ್ಟ್ ೨ ರಂದು ಬಿಡುಗಡೆಯಾದ ‘ಕೊಟ್ಟ ಕುದುರೆಯನೇರಲರಿಯದೆ…'(ವಚನಗಳ ಅಧ್ಯಯನದಲ್ಲಿ ಆಧುನಿಕರ ಪೂರ್ವಗ್ರಹಗಳು ಮತ್ತು ಅವುಗಳಾಚೆಗೆ) ಕೃತಿಯ ಶೀರ್ಷಿಕೆಯಡಿಯ ವಿವರಣ ವಾಕ್ಯ ಸಾಲಿನಲ್ಲಿ ಕಾಣಿಸಿದ “ಪೂರ್ವಗ್ರಹ” ಎಂಬ ಪದವನ್ನು ಕುರಿತು ಪೂರ್ವಾಗ್ರಹ ಪದ ಪರಿಚಯವಿರುವ ಬಹಳಷ್ಟು ಜನ ಇಲ್ಲೊಂದು ದೋಷವಾಗಿದೆ ಎಂದು ಹೇಳುತ್ತಿದ್ದಾರೆ.

ಇಲ್ಲ. ಪೂರ್ವಗ್ರಹ ಎಂಬುದೇ ವ್ಯಾಕರಣಾತ್ಮಕವಾಗಿ ಸರಿ.

ಇದು ಪೂರ್ವ+ಗ್ರಹಿಕೆ ಎಂಬುದರ ಸಂಕ್ಷಿಪ್ತ ರೂಪ. ಪೂರ್ವ ಮತ್ತು ಉತ್ತರ ಪದಗಳೆರಡೂ ಮುಖ್ಯವಾಗಿ ಮೂರನೆಯದನ್ನು ಹೇಳುವ ಕರ್ಮಧಾರಯ ಸಮಾಸದ ಪದ. ವ್ಯಕ್ತಿ, ವಿಷಯ ಇತ್ಯಾದಿಗಳನ್ನು ಕುರಿತು ಮೊದಲೇ ಒಂದು ಅಭಿಪ್ರಾಯ, ನಿರ್ಧಾರಕ್ಕೆ ಬರುವುದು ಎಂಬುದು ಇದರ ಅರ್ಥ. ಎಲ್ಲರೂ ಸಾಮಾನ್ಯವಾಗಿ ಭಾವಿಸಿದಂತೆ “ಪೂರ್ವ+ಆಗ್ರಹ” ಕೂಡಿ ಆದುದಲ್ಲ. ಅಷ್ಟಕ್ಕೂ “ಆಗ್ರಹಿಸುವ” ಅರ್ಥ ಈ ಪದ ಪ್ರಯೋಗದಲ್ಲಿ ಬರುವ ಪ್ರಶ್ನೆಯೇ ಇಲ್ಲ.
ಮತ್ತಷ್ಟು ಓದು »

9
ಏಪ್ರಿಲ್

ನಿಜಗನ್ನಡ ವ್ಯಾಕರಣ

– ಹರೀಶ್ ಆತ್ರೇಯ

ನಿಜಗನ್ನಡ ವ್ಯಾಕರಣಪ್ರಾಣಿಗಳೆಲ್ಲವುದರ ಮುಖ್ಯ ಲಕ್ಷಣಗಳಲ್ಲಿ ಶಬ್ದವನ್ನು ದ್ವನ್ಯಂಗಗಳ ಮೂಲಕ ಹೊರಡಿಸುವುದೂ ಒಂದು. ಗಾಳಿಯನ್ನು ಬಾಯಿಯ ಮೂಲಕ ನಿರ್ದಿಷ್ಟ ತಡೆ ನೀಡಿ ಹೊರಬಿಡುವಾಗ ಶಬ್ದ (ಧ್ವನಿ)ವುಂಟಾಗುತ್ತದೆ. ಕೇವಲ ಶ್ರವಣೇಂದ್ರಿಯಗಳ ಅನುಭವಕ್ಕೆ ಮಾತ್ರ ಬರುವ ಈ ಶಬ್ದವು ಜೀವನ ಇಷ್ಟದಂತೆ ಹೊರಬೀಳುತ್ತದೆ. ಈ ಜಗತ್ತಿನಲ್ಲಿ ಎಲ್ಲ ಪ್ರಾಣಿಗಳಿಗೂ ತಮ್ಮ ಅಭಿಪ್ರಾಯವನ್ನು ಇತರ ಜೀವಿಗಳಿಗೆ ತಿಳಿಸುವ ಮಾಧ್ಯಮಗಳಲ್ಲಿ ಶಬ್ದ ಮಾಧ್ಯಮ ಪಂಚಭೂತಾತ್ಮಕವಾಗಿ  ಅತ್ಯುತ್ತಮ ಮಾಧ್ಯಮವೆನಿಸಿದೆ. ಇಂತಹ ಶಬ್ದದ ಉತ್ಪಾದನೆ ಮಾಡುವ ಪ್ರಾಣಿವರ್ಗದಲ್ಲಿ ಮಾನವ ವಿಭಿನ್ನಜೀವಿ ಈ ಶಬ್ದದ ಉತ್ಪಾದನೆ ಮಾಡುವ ಧ್ವನ್ಯಂಗಗಳನ್ನು ವಿಶಿಷ್ಟ ರೀತಿಯಲ್ಲಿ ದಂಡಿಸಿಕೊಂಡು ವಿಚಿತ್ರ ರೀತಿಯ ಶಬ್ದಗಳನ್ನು ಹೊರಡಿಸುವ ಮೂಲಕ ಭಾವನೆಗಳನ್ನು ಹೊರಗೆಡುವುದಕ್ಕೆ ನಾನಾ ಶಬ್ದಗಳನ್ನು ಉತ್ಪಾದಿಸಬಲ್ಲವನಾಗಿದ್ದಾನೆ.

ಮತ್ತಷ್ಟು ಓದು »

1
ಏಪ್ರಿಲ್

ಕನ್ನಡನಾಡಿನ ಅನರ್ಘ್ಯ ರತ್ನಗಳು

– ರೋಹಿತ್ ಚಕ್ರತೀರ್ಥ

ಸುದ್ದಿ ಜೀವಿಗಳುನಮ್ಮ ನಾಡು ಕವಿಪುಂಗವರಿಗೆ, ಸಮಾಜಸುಧಾರಕರಿಗೆ, ಶಾಸ್ತ್ರಕೋವಿದರಿಗೆ ನೆಲೆ ಕೊಟ್ಟ ಪುಣ್ಯಭೂಮಿ. ಇಲ್ಲಿ ಶತಶತಮಾನಗಳಿಂದ ಅನೇಕಾನೇಕ ಸಂತರು, ಪ್ರಾಜ್ಞರು, ವಿಚಾರವಾಧಿಗಳು ಆಗಿಹೋಗಿದ್ದಾರೆ. ಈಗಿನ ಇಪ್ಪತ್ತೊಂದನೇ ಶತಮಾನದಲ್ಲೂ ಅಂತಹ ಪುಣ್ಯಪುರುಷರು ಮತ್ತೆಮತ್ತೆ ನಮ್ಮ ಈ ಕರುನಾಡಿನಲ್ಲಿ ಹುಟ್ಟಿಬರುತ್ತಲೇ ಇರುವುದು ನಮ್ಮೆಲ್ಲರ ಪೂರ್ವಜನ್ಮದ ಸುಕೃತ ಎಂದೇ ತಿಳಿಯಬೇಕು. ಇಂದಿನ ಈ ಸುದಿನದಂದು ಅಂತಹ ಕೆಲ ಪುಣ್ಯಪುರುಷ/ಮಹಿಳೆಯರನ್ನು, ಸಮಾಜದ ಚಿಂತನೆಯ ಧಾಟಿಯನ್ನೇ ಬದಲಾಯಿಸಬಲ್ಲ ಪ್ರವರ್ತಕರನ್ನು ನೆನೆಯೋಣ.

ಪ್ರೊ. ಭಗ್‍ವಂತ – ಇವರೊಬ್ಬ ಸಮಾಜಸುಧಾರಕ ಕಮ್ ಪಂಡಿತ ಕಮ್ ವಿಚಾರವಾದಿ ಕಮ್ ಜಾತ್ಯತೀತ ಕಮ್ ಇನ್ನೇನೇನೋ ಆಗಿರುವ ಪುಣ್ಯಪುರುಷರು. ಇವರು ಜಗತ್ತಿನ ಉಳಿದೆಲ್ಲಾ ದೇಶಗಳನ್ನು ಬಿಟ್ಟು ನಮ್ಮ ಭರತಖಂಡವನ್ನು, ಅದರಲ್ಲೂ ಕರ್ನಾಟಕವನ್ನು ತನ್ನ ಅವತಾರಕ್ಕಾಗಿ ಆರಿಸಿಕೊಂಡದ್ದೇ ನಮ್ಮೆಲ್ಲರ ಪುಣ್ಯ. ಭಗ್‍ವಂತ್ ಅವರು ತನ್ನ ದಿವ್ಯಚಕ್ಷುಗಳಿಂದ ಈ ಸಮಾಜದ ಧರ್ಮ-ಪಂಥಗಳಲ್ಲಿ ಅಡಗಿರುವ ವಾರೆಕೋರೆಗಳನ್ನು ಹೊರಗೆಳೆದುಹಾಕಿ ಸಮಾಜಕ್ಕೆ ಭರಿಸಲಾರದ ಸಹಾಯ ಮಾಡಿದ್ದಾರೆ. ಇವರಿಗೆ ಹಿಂದೂ ಧರ್ಮದ ಭಗವದ್ಗೀತೆ ಎಂದರೆ ತುಂಬಾ ಪ್ರೀತಿ. ಅದನ್ನು ನೂರಾರು ಸಲ ಪಾರಾಯಣ ಮಾಡಿ, ಇದುವರೆಗೆ ಪಂಡಿತವರೇಣ್ಯರಿಗೆ ಕಾಣದ ಅರ್ಥಗಳನ್ನು ಹುಡುಕಿ ಹೊರತೆಗೆದ ಸಾಹಸಿ ಅವರು. ಭಗ್‍ವಂತ್ ಭಾರತದಲ್ಲಲ್ಲದೆ ದೂರದ ಸೌದಿಯಲ್ಲೋ ವ್ಯಾಟಿಕನ್‍ನಲ್ಲೋ ಹುಟ್ಟಿ ಅಲ್ಲಿನ ಧರ್ಮಗ್ರಂಥಗಳನ್ನು ಈ ರೀತಿ ಹೊಗಳಿದ್ದರೆ ಅವರಿಗೆ ಅಲ್ಲಿನ ಮಠಾಧಿಪತಿಗಳು ಮತ್ತು ಸರ್ಕಾರಗಳು ಅಲೌಕಿಕ ಪ್ರಶಸ್ತಿಗಳನ್ನು ಕೊಟ್ಟು ಸನ್ಮಾನಿಸುತ್ತಿದ್ದವು. ಮತ್ತಷ್ಟು ಓದು »

25
ಮಾರ್ಚ್

ಸಲ್ಲದ ವಾದದಲ್ಲಿ ಬಂಧಿಯಾದ ಸಂಕಮ್ಮ

– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ

ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

ಮಲೆ ಮಾದೇಶ್ವರ ಕಾವ್ಯಕಥನದ ರೀತಿ, ಬೃಹತ್ತು-ಮಹತ್ತು ಮತ್ತು ಕಾವ್ಯಗುಣಗಳಿಂದ ಕನ್ನಡ ಜನಪದ ಮಹಾಕಾವ್ಯಗಳಲ್ಲಿ ಅಗ್ರಮಾನ್ಯವಾದ ಮಲೆಮಾದೇಶ್ವರ ಕಾವ್ಯದ ಅತ್ಯಂತ ಪ್ರಮುಖ ಭಾಗ ಸಂಕಮ್ಮನ ಸಾಲು. ಈ ಕಾವ್ಯ ಹಾಡುವವರು, ದೇವರಗುಡ್ಡರು ಅಥವಾ ಕಂಸಾಳೆಯವರು ಸಂಕಮ್ಮನ ಸಾಲನ್ನು ಸಾಮಾನ್ಯವಾಗಿ ಹಾಡಿಯೇ ಹಾಡುತ್ತಾರೆ. ಕೋರಣ್ಯಕ್ಕೆ ಬಂದಾಗ ಕೆಲವೊಮ್ಮೆ ಜನರೇ ಬೇಡಿಕೆ ಇಟ್ಟು ಈ ಸಾಲನ್ನು ಹಾಡಿಸುವುದೂ ಇದೆ. ಈ ಕಥೆಯನ್ನು ತನ್ಮಯರಾಗಿ ಕೇಳುವ ಜನ ಸಂಕಮ್ಮನ ಕಷ್ಟ ಕೋಟಲೆ ಕೇಳಿ ಕಣ್ಣೀರು ಇಡುವುದೂ ಇದೆ. ಈ ಕಾವ್ಯವನ್ನು ಮೊದಲ ಬಾರಿ ಸಮಗ್ರವಾಗಿ ಸಂಗ್ರಹಿಸಿದ ಪಿ ಕೆ ರಾಜಶೇಖರ್ ಅವರು ಕ್ಷೇತ್ರಕಾರ್ಯದ ಸಂದರ್ಭದಲ್ಲಿ ತಮಗಾದ ಇಂಥ ಅನುಭವವನ್ನು ತಮ್ಮ ಸಂಗ್ರಹದಲ್ಲಿ ದಾಖಲಿಸಿದ್ದಾರೆ.

ಕೇಳಲು ಕಷ್ಟವಾದರೂ ಜನಪದರು ಬೇಡಿ ಬಯಸುವ ವಿಶಿಷ್ಟ ಕಥಾ ಭಾಗ ಇದು ಎಂಬುದರಲ್ಲಿ ಅನುಮಾನವಿಲ್ಲ. ಮಾದೇಶ್ವರನ ಹುಟ್ಟಿನ ಸಾಲು, ಶ್ರವಣ ದೊರೆ ಸಾಲು, ಬೇವಿನ ಹಟ್ಟಿ ಕಾಳಮ್ಮನ ಸಾಲುಗಳೂ ಆಸಕ್ತಿದಾಯಕವಾದವಾದರೂ ಜನರಿಗೆ ಇವು ಸಂಕಮ್ಮನ ಸಾಲಿನಷ್ಟು ಪ್ರಿಯವಾಗಿಲ್ಲ. ಸಂಕಮ್ಮನಲ್ಲಿ ಒಂದು ಬಗೆಯ ಆದರ್ಶವನ್ನು ಜನಪದರು ಬಹುಶಃ ಕಂಡಿರುವುದೇ ಇದಕ್ಕೆ ಕಾರಣವಿರಬೇಕು. ಗಂಡ ನೀಲಯ್ಯನ ವಿರುದ್ಧ ಸಂಕಮ್ಮನೇನೂ ಬಂಡೇಳುವುದಿಲ್ಲ; ಅವನ ಕ್ರಿಯೆಗೆ ಪ್ರತಿಕ್ರಿಯೆಯನ್ನೂ ತೋರುವುದಿಲ್ಲ; ತಂತ್ರಕ್ಕೆ ಪ್ರತಿ ತಂತ್ರವನ್ನೂ ಹೆಣೆಯುವುದಿಲ್ಲ. ಆಕೆಯ ವೃತ್ತಾಂತದಲ್ಲಿ ಕಾಣುವುದು ಅವಳ ತಾಳ್ಮೆ, ಸಹನೆ ಮತ್ತು ಕ್ಷಮೆ. ಬಹುಶಃ ಜನಪದರು ಪ್ರತಿಪಾದಿಸುವ ಇಂಥ ಆದರ್ಶದ ಗುಣಗಳು ಈ ಸಾಲುಗಳಲ್ಲಿ ಚಿತ್ರಿತವಾದ ಕಾರಣ ಜನಪದರು ಇದನ್ನು ಹೆಚ್ಚಾಗಿ ಬಯಸಲು ಕಾರಣವಾಗಿರಬಹುದು.

ಮತ್ತಷ್ಟು ಓದು »

13
ಮಾರ್ಚ್

ಪರ್ವ ಮತ್ತು ಮಹಾಭಾರತ

– ಮು.ಅ ಶ್ರೀರಂಗ 

ಪರ್ವಹರವು ಸ್ಫೂರ್ತಿ ಗೌಡ ಅವರು ‘ಅವಧಿ’ಯಲ್ಲಿ ೬-೩-೧೫ರಂದು ಬರೆದಿರುವ ‘ಭೈರಪ್ಪನವರಿಗೆ ಕೆಲವು ಪ್ರಶ್ನೆಗಳು’ ಲೇಖನದಲ್ಲಿ ಭೈರಪ್ಪನವರು ಮಹಾಭಾರತವನ್ನು ಆಧರಿಸಿ ಬರೆದಿರುವ ಪರ್ವ ಕಾದಂಬರಿಯ ಬಗ್ಗೆ  ಪ್ರಸ್ತಾಪಿಸಿರುಪ  ಪ್ರಶ್ನೆಗಳನ್ನು ಕುರಿತಂತೆ ಕೆಲವು ವಿಷಯಗಳನ್ನು ನಿಲುಮೆಯ ಓದುಗರ ಜತೆ ಹಂಚಿಕೊಳ್ಳುವುದು ಈ ನನ್ನ ಬರಹದ ಉದ್ದೇಶ. ಸ್ಪೂರ್ತಿ ಗೌಡ ಅವರ ಲೇಖನಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಅವುಗಳು ಸದ್ಯದ ನಮ್ಮ ಓದುಗರ ಮನೋಭಾವ, ಅವರ ಓದಿನ ರೀತಿ ನೀತಿ, ಕನ್ನಡ ಸಾಹಿತ್ಯದ ಸದ್ಯದ  ವಿಮರ್ಶೆಯ ವಾತಾವರಣ  ಇತ್ಯಾದಿಗಳ  ಪ್ರತಿಫಲನದಂತೆ ಇದೆ. ಇದು ಸಹಜ.ಆ ಪ್ರತಿಕ್ರಿಯೆಗಳ ಬಗ್ಗೆ ಇದಕ್ಕಿಂತ ಹೆಚ್ಚೇನು ಹೇಳುವುದು ಇಲ್ಲ.

ಸ್ಫೂರ್ತಿ ಗೌಡ ಅವರು ‘ಪರ್ವ’ದ ಬಗ್ಗೆ random ಆಗಿ ಎತ್ತಿರುವ  ಮೂರ್ನಾಲಕ್ಕು ಆಕ್ಷೇಪಣೆಗಳು ಮತ್ತು ಉಪ ಆಕ್ಷೇಪಣೆಗಳ relevanceಗೆ ಮಾತ್ರ ನನ್ನ ಈ ಬರಹ ಸೀಮಿತವಾಗಿದೆ. ಇತಿಹಾಸ, ಕಾವ್ಯ ಮತ್ತು ಪುರಾಣಗಳು ಬೆರೆತಿರುವ ಮಹಾಭಾರತದ ಕತೆಯನ್ನು ಈಗ ಚಾಲ್ತಿಯಲ್ಲಿರುವ ವಿಮರ್ಶೆಯ ಅಳತೆಗೋಲಿನಿಂದ ಅಳೆದು ಬೆಲೆ ಕಟ್ಟುವ ಕ್ರಿಯೆಯೇ ಸರಿಯಾದುದಲ್ಲ. ಇಂದು ನಮ್ಮ ಸಾಹಿತ್ಯದ ವಿಮರ್ಶಕ ಮತ್ತು ವಿಮರ್ಶಕಿಯರಿಗೆ  ಹಿಂದಿನ ಮತ್ತು ಇಂದಿನ ಕೃತಿಗಳಿಗೆ (ಅದು ಸಾಮಾಜಿಕ/ಐತಿಹಾಸಿಕ/ಪೌರಾಣಿಕ ಯಾವುದೇ ಆಗಿರಲಿ) ಪ್ರಗತಿಗಾಮಿ.ಪ್ರತಿಗಾಮಿ,ಮಹಿಳಾ ವಿರೋಧಿ,ವೈದಿಕ ಶಾಹಿ ಇತ್ಯಾದಿ ಹಣೆ ಪಟ್ಟಿಗಳನ್ನು ಕಟ್ಟಿ ಆ ಕೃತಿಗಳ  ಲೇಖಕರನ್ನು ಏರಿಸುವುದೋ ಇಳಿಸುವುದೋ ಮಾಡುವುದು ತುಂಬಾ ಖುಷಿ ಕೊಡುವ  ಕೆಲಸವಾಗಿದೆ. ಹಾಗೆ ನೋಡಿದರೆ ಇಂತಹ ವಿದ್ಯಮಾನ ಮೂವತ್ತು ನಲವತ್ತು ವರ್ಷಗಳಷ್ಟು ಹಳೆಯದೇ. ಈಗ  ಈ ಕೆಲಸ ಇನ್ನೂ ಜೋರಾಗಿದೆ ಅಷ್ಟೇ. ವಿಮರ್ಶೆಯ ಪರಿಭಾಷೆಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತವೆ; ಬದಲಾಗಬೇಕು ಎಂಬುದರ ಬಗ್ಗೆ  ಯಾರೂ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಆದರೆ ಬದಲಾಗುತ್ತಿರುವ ವಿಮರ್ಶೆಯ ಪರಿಭಾಷೆಗಳನ್ನು ಸಾಹಿತ್ಯ ಕೃತಿಯೊಂದಕ್ಕೆ ನಾವು ಯಾವ ರೀತಿ apply ಮಾಡಬೇಕು? ಆ ಪರಿಭಾಷೆಗಳ limits ಏನು? ಎಂಬುದರ ಬಗ್ಗೆ ನಾವು ಯೋಚಿಸದಿದ್ದರೆ ಆಭಾಸವಾಗುತ್ತದೆ. ಸ್ಪೂರ್ತಿಗೌಡ ಅವರು ಪರ್ವದ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ ಮೂಲ ಕಾರಣ ಹೊಸ ವಿಮರ್ಶೆಯ ಪರಿಭಾಷೆಗಳ wrong application.
ಮತ್ತಷ್ಟು ಓದು »