ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 9, 2015

2

ನಿಜಗನ್ನಡ ವ್ಯಾಕರಣ

‍ನಿಲುಮೆ ಮೂಲಕ

– ಹರೀಶ್ ಆತ್ರೇಯ

ನಿಜಗನ್ನಡ ವ್ಯಾಕರಣಪ್ರಾಣಿಗಳೆಲ್ಲವುದರ ಮುಖ್ಯ ಲಕ್ಷಣಗಳಲ್ಲಿ ಶಬ್ದವನ್ನು ದ್ವನ್ಯಂಗಗಳ ಮೂಲಕ ಹೊರಡಿಸುವುದೂ ಒಂದು. ಗಾಳಿಯನ್ನು ಬಾಯಿಯ ಮೂಲಕ ನಿರ್ದಿಷ್ಟ ತಡೆ ನೀಡಿ ಹೊರಬಿಡುವಾಗ ಶಬ್ದ (ಧ್ವನಿ)ವುಂಟಾಗುತ್ತದೆ. ಕೇವಲ ಶ್ರವಣೇಂದ್ರಿಯಗಳ ಅನುಭವಕ್ಕೆ ಮಾತ್ರ ಬರುವ ಈ ಶಬ್ದವು ಜೀವನ ಇಷ್ಟದಂತೆ ಹೊರಬೀಳುತ್ತದೆ. ಈ ಜಗತ್ತಿನಲ್ಲಿ ಎಲ್ಲ ಪ್ರಾಣಿಗಳಿಗೂ ತಮ್ಮ ಅಭಿಪ್ರಾಯವನ್ನು ಇತರ ಜೀವಿಗಳಿಗೆ ತಿಳಿಸುವ ಮಾಧ್ಯಮಗಳಲ್ಲಿ ಶಬ್ದ ಮಾಧ್ಯಮ ಪಂಚಭೂತಾತ್ಮಕವಾಗಿ  ಅತ್ಯುತ್ತಮ ಮಾಧ್ಯಮವೆನಿಸಿದೆ. ಇಂತಹ ಶಬ್ದದ ಉತ್ಪಾದನೆ ಮಾಡುವ ಪ್ರಾಣಿವರ್ಗದಲ್ಲಿ ಮಾನವ ವಿಭಿನ್ನಜೀವಿ ಈ ಶಬ್ದದ ಉತ್ಪಾದನೆ ಮಾಡುವ ಧ್ವನ್ಯಂಗಗಳನ್ನು ವಿಶಿಷ್ಟ ರೀತಿಯಲ್ಲಿ ದಂಡಿಸಿಕೊಂಡು ವಿಚಿತ್ರ ರೀತಿಯ ಶಬ್ದಗಳನ್ನು ಹೊರಡಿಸುವ ಮೂಲಕ ಭಾವನೆಗಳನ್ನು ಹೊರಗೆಡುವುದಕ್ಕೆ ನಾನಾ ಶಬ್ದಗಳನ್ನು ಉತ್ಪಾದಿಸಬಲ್ಲವನಾಗಿದ್ದಾನೆ.

ಅನುಕೂಲಪವನಿನಿಂ ಜೀ|
ವನಿಷ್ಟದಿಂ ನಾಭಿಮೂಲದೊಳ್ ಕಹಳೆಯ ಪಾಂ
ಗಿನವೋಲ್ ಶಬ್ದದ್ರವ್ಯಂ|
ಜನಿಯಿಸುಗುಂ ಶ್ವೇತಮದಱ ಕಾರ್ಯಂ ಶಬ್ದಂ||

ಈ ಧವಳವರ್ಣದ ಶಬ್ದಗಳಿಗೆ ವ್ಯಾಕರಣಶಾಸ್ತ್ರಜ್ಞರು ಅಕ್ಷರ ಅಥವಾ ವರ್ಣಗಳೆಂದು ಸಂಜ್ಞಿಸಿರುವರು, ಇಂತಹ ವರ್ಣಗಳನ್ನು ಬರೆಯಲು ಲಿಪಿಯನ್ನು ಬಳಸುವಂತಾಗಿರುವುದು ಮಾನವ ನಾಗರೀಕತೆಯ  ವಿಕಾಸದ ಮತ್ತೊಂದು ಮೈಲಿಗಲ್ಲು. ಈ ವರ್ಣಗಳನ್ನು ಸಮನಾಗಿ ಸರಿಯಾಗಿ ಶುದ್ಧವಾಗಿ ಬಳಸುವ ಶಾಸ್ತ್ರ ವ್ಯಾಕರಣ, ವ್ಯಾಕರಣದಿಂದೇನುಪಯೋಗ ಎಂಬುದಕ್ಕೆ ದರ್ಪಣಕಾರನ ನುಡಿ ಹೀಗಿದೆ

ವ್ಯಾಕರಣದಿಂದೆ ಪದಮಾ|
ವ್ಯಾಕರಣದ ಪದದಿನರ್ಥಮರ್ಥದೆ ತತ್ವಾ-||
ಲೋಕಂ ತತ್ವಾಲೋಕದಿ-|
ನಾಕಾಂಕ್ಷಿಪ ಮುಕ್ತಿಯಕ್ಕುಮದೆ ಬುಧರ್ಗೆ ಫಲಂ||

ಬರಿ ಅಕ್ಷರಗಳನ್ನು ಸೇರಿಸಿದ ಮಾತ್ರಕ್ಕೆ ಪದಗಳಾಗುವುದಿಲ್ಲ ವ್ಯಾಕರಣ ರೀತ್ಯಾ ಬರೆದಾಗ ಪದಸಿದ್ಧಿಯಾಗುತ್ತದೆ, ಅದರಿಂದ ಅರ್ಥ ತನ್ಮೂಲಕ ಜ್ಞಾನ ಅದರಿಂದ ತತ್ವಸಿದ್ಧಿ , ತತ್ವ ವಿಚಾರದಿಂದ ಮುಕ್ತಿ ಇದು ವ್ಯಾಕರಣದ ಉದ್ದೇಶ.ಶಬ್ದಮಣಿದರ್ಪಣಕಾರನು ವರ್ಣಗಳನ್ನು ಶುದ್ಧಾಕ್ಷರಗಳೆಂದು ಹೆಸರಿಟ್ಟು ’ಶುದ್ಧಗೆ’ ಎಂದು ಕರೆದಿರುವನು. ಉಚ್ಚರಿಸಲು ಬರೆಯಲು ಬಾರದ ಶಬ್ದಗಳು ಘನಸ್ವನಾದ ಧ್ವನಿಗಳಂತೆ, ಅವು ಅಕ್ಷರಗಳಲ್ಲ.

ಕನ್ನಡ ವರ್ಣಮಾಲೆಯು ಮೂಲವರ್ಣಗಳು ಅರವತ್ತನಾಲ್ಕು. ಅಚ್ಚ ಕನ್ನಡಲ್ಲಿ ಕೆಲವೊಂದು ಅಕ್ಷರಗಳ ಪ್ರಯೋಗವಿಲ್ಲದಿದ್ದರೂ ಸಂಸ್ಕೃತವನ್ನು ಬಳಸಿ ಸೌಂದರ್ಯವನ್ನು ಹೆಚ್ಚಿಸುವುದರಿಂದ ಆ ಅಕ್ಷರಗಳನ್ನೂ ಗಣನೆಗೆ ತೆಗೆದುಕೊಳ್ಳಲಾಗಿದೆ. ಆದರೆ ಬಳಕೆಯಲ್ಲಿರುವ ಅಕ್ಷರಗಳು ನಲವತ್ತೊಂಭತ್ತು.

ದರ್ಪಣಕಾರನು ಹೇಳುವಂತೆ
ತರದಿಂದೆ ಪದಿನಾಲ್ಕುಂ
ಸ್ವರಮಿರ್ಪತ್ತೈದು ವರ್ಣಮವು ವರ್ಗಂ ತ
ತ್ಪರದೊಂಬತ್ತುಮವರ್ಗಂ
ಪರಿಭಾವಿಸೆ ಯೊಗವಾಹಮವು ನಾಲ್ಕೆವಲಂ

ಹೀಗೆ ಐವತ್ತೇಳು ಅಕ್ಷರಗಳಾದಾಗ್ಯೂ ಅವುಗಳಲ್ಲೂ ಕೆಲವನ್ನು ಬಳಸದೆ ಇರುವುದರಿಂದ ನಲವತೊಂಬತ್ತಕ್ಕೆ ಇಳಿಸಬಹುದಾಗಿದೆ.ಹೀಗೆ ವರ್ಣಮಾಲೆಯು ಪೂರ್ಣಗೊಳ್ಳುತ್ತದೆ.

ವರ್ಣಮಾಲೆಯನ್ನು ಮೂರು ವಿಭಾಗಗಳನ್ನಾಗಿ ಮಾಡಿಕೊಳ್ಳಲಾಗಿದೆ. ೧) ಸ್ವರಗಳು ೨) ವ್ಯಂಜನಗಳು ೩) ಯೋಗವಾಹಗಳು.
೧) ಸ್ವರ ಸಂಜ್ಞೆಗಳು :- ’ಅ’ ಕಾರದಿಂದ ಮೊದಲಾಗಿ ’ಔ’ ವರೆಗಿನ ೧೩ ಸಂಜ್ಞೆಗಳು. ’ಸ್ವಯಂ ರಾಜಂತೇ ಸ್ಪಷ್ಟೋಚ್ಚಾರಣೇನ ಪ್ರಕಾಶಯಂತೇ ಇತಿ ಸ್ವರಾಃ’ ಯಾವುದೇ ಕಷ್ಟವಿಲ್ಲದೆ ಸ್ವತಂತ್ರ್ಯವಾಗಿ ಉಚ್ಚರಿಸುವಂಥದ್ದು. ಇವುಗಳನ್ನು ಮತ್ತೆ ಹ್ರಸ್ವಸ್ವರ ಮತ್ತು ದೀರ್ಘಸ್ವರಗಳೆಂದು ವಿಂಗಡಿಸಲಾಗಿದೆ. ಹ್ರಸ್ವವೆಂದರೆ ಅಲ್ಪಕಾಲದಲ್ಲಿ ಉಚ್ಚರಿಸಬಹುದಾದದ್ದು, ಇವುಗಳನ್ನು ಏಕ ಮಾತ್ರಕಗಳೆಂದು ಗುರುತಿಸುತ್ತಾರೆ. ಭಟ್ಟಾಕಳಂಕದೇವನು ಇವುಗಳಿಗೆ ಸೂತ್ರವನ್ನು ಬರೆದು ಔತಃ ಸ್ವರಾಃ || ಎನ್ನುತ್ತಾನೆ,
_________________
ಹ್ರಸ್ವ ಸ್ವರಗಳನ್ನು ಏಕಮಾತ್ರಾ ಸ್ವರಗಳೆಂತಲೂ ಅಥವಾ ಏಕಮಾತ್ರಕಗಳೆಂತಲೂ ಕರೆಯುತ್ತಾರೆ. ಛಂದಸ್ಸಿನ ಪರಿಭಾಷೆಯಲ್ಲಿ ಮಾತ್ರೆ ಎಂದರೆ ಒಂದು ಹ್ರಸ್ವಾಕ್ಷರಗಳನ್ನು ಉಚ್ಚರಿಸಲು ಬೇಕಾಗುವ ಕಾಲ ಪ್ರಮಾಣ ,ಇದನ್ನು ನಿಮಿಷೋನ್ಮೇಷಕಾಲವೆಂದು ಹೇಳುತ್ತಾರೆ. ಲಘುವೆಂದರೆ

ಚತುರಂಗುಲಮಾನಾಂತರಾಲಕಂ ಕರತಾಡನಂ
ಅಕ್ಷಿಪ್ರ ಮಂದಂ ಯತ್ತತ್ಸ್ಯಾತ್ಮಾತ್ರಾ ಸೈವ ಲಘುರ್ಭವೇತ್
ಜಾನು ಪ್ರದಕ್ಷಿಣಂ ಯತ್ತನ್ನದ್ರುತಂ ನವಿಲಂಬಿತಂ
ಅಂಗುಲಿಸ್ಫೋಟನಂ ಯಾವತ್ಕಾಲೇ ಮಾತ್ರೇತಿ ಸೋಚ್ಯತೇ
ಸ್ವಸ್ಥೋ ಯುವಾ ಋಜುಶ್ವಾಸ ಉಚ್ಚರಕ್ಷರಂ ಲಘು
ಕಾಲೇನ ಯಾವತಾ ಸಾ ಸ್ಯಾನ್ಮಾತ್ರ್ರೇತಿ ಮುನಯೋ ವಿದುಃ

ಲಘುವೆಂದರೆ , ಅಂಗೈಯನ್ನು ಬಿಡಿಸಿ ಮತ್ತೊಂದು ಕೈಯಿನ ನಾಲ್ಕು ಬೆರಳುಗಳಿಂದ ತಟ್ಟಿದಾಗ ಆಗುವ ಶಬ್ದದ ಕಾಲ, ಹೆಬ್ಬೆರಳು ಮತ್ತು ತೋರ್ಬೆರಳು ಗಳಿಂದ ಹೊರಡಿಸುವ ಚಿಟಿಕೆಯ ಶಬ್ದದ ಕಾಲ ಹೀಗೆ ಲಘುವಿನ ಕಾಲವನ್ನು ಹೇಳುತ್ತಾರೆ. “ಚಟಕೋ ರೌತ್ಯೇಕಮಾತ್ರಂ” ಗುಬ್ಬಿಯು ಕೂಗುವ ಕೂಗು ಏಕ ಮಾತ್ರಕವು, ಲಘುವು
ಇದನ್ನು U ಚಿಹ್ನೆಯಿಂದ ಸೂಚಿಸುತ್ತಾರೆ. ಹ್ರಸ್ವ ಸ್ವರಗಳು ಅ, ಇ, ಉ, ಋ, ಎ, ಒ  ಇವು ಆರು ಹ್ರಸ್ವಾಕ್ಷರಗಳು.

ದೀರ್ಘಸ್ವರಗಳು: ಶ್ವಾಸವನ್ನು ದೀರ್ಘವಾಗಿ ಎಳೆದುಕೊಂಡು ಉಚ್ಚರಿಸಲ್ಪಡುವ ಸ್ವರಗಳು ದೀರ್ಘಸ್ವರಗಳು ಇವು ದ್ವಿಮಾತ್ರಕಗಳು ಎರಡು ಮಾತ್ರೆಗಳ ಕಾಲದಲ್ಲಿ ಎಳೆದು ಉಚ್ಚರಿಸಲ್ಪಡುವಂಥವು, ’ದ್ವಿಮಾತ್ರಂ ರೌತಿ ವಾಯಸಃ’ ಇವುಗಳನ್ನು ’ಗುರು’ ಎಂದು ಛಂಧೋ ಪರಿಭಾಷೆಯಲ್ಲಿ ಹೇಳುತ್ತಾರೆ. ಇದಕ್ಕೆ ’-’ ಚಿಹ್ನೆಯನ್ನುಪಯೋಗಿಸುತ್ತಾರೆ. ಆ,ಈ,ಊಏ,ಐ,ಓ,ಔ ಇವು ಏಳು ದೀರ್ಘಸ್ವರಗಳು
ಈ ಪ್ರಕಾರಗಳಲ್ಲದೆ ಪ್ಲುತಸ್ವರಗಳೆಂದು ಮೂರನೆಯ ಪ್ರಕಾರದ ಸರಗಳೂ ಇವೆ. ಇವುಗಳಿಗೆ ಲಿಪಿ ಸಂಜ್ಞೆಗಳಿಲ್ಲ ಅವು ತ್ರಿಮಾತ್ರಕಗಳು, (“ತ್ರಿಮಾತ್ರಂತು ಶಿಖೀ ರೌತಿ” ನವಿಲು ತ್ರಿ ಮಾತ್ರಾಕಾಲದಲ್ಲಿ ಕೂಗುತ್ತದೆ)
ಉದಾ
-U     – U     -U
ಆss , ಊss , ಏss  ಇತ್ಯಾದಿ

ಇನ್ನು ವ್ಯಂಜನ ಸಂಜ್ಞೆಗಳು, ಸ್ವರಾಕ್ಷರಗಳ ಸಹಾಯವಿಲ್ಲದೆ ಉಚ್ಚರಿಸಲು ಬಾರದ ಅಕ್ಷರಗಳು ಇವಾಗಿವೆ.
ಪ್ರಕಟಿತರ ವ್ಯಂಜನ ಸಂ
ಜ್ಞೆ ಕಕಾರದಿನಾ ಳಕಾರಪರ್ಯಂತಂ ಪಂ
ಚಕ ಪಂಚಕಗಳಿಂ ಪ
ಚಕಮಕ್ಕುಂ ವರ್ಗಮಂತ್ಯವರ್ಣಮವರ್ಗಂ
ಕ ಕಾರದಿಂದ ಳಕಾರದವರೆಗೆ ವ್ಯಂಜನಾಕ್ಷರಗಳಿವೆ, ಇವುಗಳನ್ನು ವರ್ಗೀಯ ಮತ್ತು ಅವರ್ಗೀಯ ಎಂದು ಎರಡು ವಿಭಾಗಗಳನ್ನಾಗಿಸಿದೆ.
ವರ್ಗೀಯ ವ್ಯಂಜನಗಳು
ಅಲ್ಪ ಪ್ರಾಣ    ಮಹಾ ಪ್ರಾಣ    ಅನುನಾಸಿಕ
ಕ್, ಗ್        ಖ್,ಘ್        ಙ
ಚ್,ಜ್        ಛ್,ಝ್        ಞ್
ಟ್,ಡ್        ಠ್,ಢ್        ಣ್
ತ್,ದ್        ಥ್,ಧ್        ನ್
ಪ್,ಬ್        ಫ್,ಭ್        ಮ್

ಅವರ್ಗೀಯ ವ್ಯಂಜನಗಳು ಒಂಭತ್ತು- ಯ,ರ,ಲ,ವ,ಸ,ಹ,ಳ ಶ,ಷ .  ಱ ೞ ಗಳು ಈಗ ಬಳಕೆಯಲ್ಲಿಲ್ಲ ಆದರೆ ಹಳೆಗನ್ನಡ ಅಭ್ಯಾಸಿಗಳಿಗೆ ಇವು ಬಹು ಮುಖ್ಯವಾಗಿವೆ. ಉದಾಹರಣೆಗೆ ’ಅಱಿ’ ಎಂದರೆ ತಿಳಿ ಎಂತಲೂ ’ಅರಿ’ ಎಂದರೆ ಕತ್ತರಿಸು ಎಂತಲೂ ಪ್ರಯೋಗ ಮಾಡಿದಂಥವು, ಈ ಬಗೆಯ ವ್ಯತ್ಯಾಸಗಳು ಅನೇಕ ಬಾರಿ ಶಬ್ದಗಳ ವಾಕ್ಯಗಳ ಅರ್ಥವನ್ನೇ ಬುಡಮೇಲು ಮಾಡುವ ಸಾಧ್ಯತೆಯಿರುತ್ತದೆ.
ಮಹಾ ಪ್ರಾಣಗಳು:  ಮಹಾಪ್ರಾಣಗಳು ದ್ರಾವಿಡಭಾಷಾವರ್ಗಕ್ಕೆ ಸೇರಿದ

ಮುಂದುವರೆಯುವುದು…

2 ಟಿಪ್ಪಣಿಗಳು Post a comment
  1. Krishna Kulkarni
    ಏಪ್ರಿಲ್ 18 2015

    ಜ್ಞಾನ ಸಂಪತ್ತಿದು, ಎಷ್ಟು ಓದಿದರೂ ಕಡಿಮೆ

    ಉತ್ತರ

Trackbacks & Pingbacks

  1. ನಿಜಗನ್ನಡ ವ್ಯಾಕರಣ – ಭಾಗ ೨ | ನಿಲುಮೆ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments