ನಿಜಗನ್ನಡ ವ್ಯಾಕರಣ – ಭಾಗ ೨
– ಹರೀಶ್ ಆತ್ರೇಯ
ಅವರ್ಗೀಯ ವ್ಯಂಜನಗಳ ಬಗ್ಗೆ ಮಾತನಾಡುತ್ತಿದೆವು, ಹಳೆಗನ್ನಡಾಭ್ಯಾಸಿಗಳ ಗಮನಕ್ಕೆ ತಂದ ಱ ೞ ಗಳನ್ನು ’ರಳ’ ಗಳೆಂದೂ ಕರೆಯುತ್ತಾರೆ. ಹೆಚ್ಚುವರಿಯಾಗಿ ಕನ್ನಡ ದೇಸೀ ಶಬ್ದಗಳಲ್ಲಿ ಬಳಕೆಯಾಗುವ ’ಳ’ (ಈಗ ಹೆಚ್ಚಾಗಿ ಬಳಕೆಯಲ್ಲಿರುವ ಅವರ್ಗೀಯ ವ್ಯಂಜನ)ವನ್ನು ’ಕುಳ’ ಗಳೆಂದು ಕರೆಯುತ್ತಾರೆ. ಸಂಸ್ಕೃತ ಶಬ್ದಗಳಲ್ಲಿ ಪ್ರಯೋಗವಾಗುವ ’ಲ’ ಕ್ಕೆ ಪ್ರತಿಯಾಗಿ ಬಳಕೆಯಾಗುವ ’ಳ’ ವನ್ನು ’ಕ್ಷಳ’ಗಳೆಂದು ಕರೆಯುತ್ತಾರೆ. ಹೀಗಾಗಿ ’ಳ’ ಕಾರವು ಪ್ರಯೋಗಗಳಲ್ಲಿ ರಳ,ಕುಳ,ಕ್ಷಳ ಎಂಬುದಾಗಿ ಗುರುತಿಸಬಹುದು. ಹಿಂದಿನ ಲೇಖನದಲ್ಲಿ ಕೊಟ್ಟ ಅರ್ಥ ವ್ಯತ್ಯಾಸದ ಉದಾಹರಣೆಯ ಜೊತೆಗೆ ಇನ್ನೂ ಕೆಲವು ಉದಾಹರಣೆಗಳನ್ನೀಗ ನೋಡೋಣ
ರಳ ಕುಳ
ಹಳೆಗನ್ನಡ (ೞ್) ಅಚ್ಚಗನ್ನಡದ ಳ
ಪೊೞೆ = ನದಿ ಪೊಳೆ = ಪ್ರಕಾಶಿಸು
ಆೞ್ = ಮುಳುಗು ಆಳ್ = ಸೇವಕ, ಮನುಷ್ಯ
ಬಾೞ್ = ಜೀವನ ಬಾಳ್=ಕತ್ತಿ
ಬಾೞೆ= ಒಂದು ಜಾತಿಯ ಮೀನು ಬಾಳೆ = ಒಂದು ಜಾತಿಯ ಹಣ್ಣು
ತೞೆ= ಛತ್ರಿ ತಳೆ =ಹೊಂದು
ಸಮ್ಮೇಳನದ ವೇದಿಕೆಯಲ್ಲಿ ಬರಹಗಾರರೋಬ್ಬರನ್ನು ನಿಂದಿಸುವುದು ಕನ್ನಡ ಮತ್ತು ಸಮ್ಮೇಳನದ ಅಪಮಾನವಲ್ಲವೆ ?
– ಅನಿಲ್ ಚಳಗೇರಿ
ಹೌದು, ಅದು ಪ್ರಸಕ್ತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಮಹಿಳೆಯರ ಸಮಾನತೆ ಮತ್ತು ಸವಾಲು ಅನ್ನುವ ವಿಷಯದ ಕುರಿತು ಚರ್ಚೆ ನಡೆಯಬೇಕಿತ್ತು. ಆದರೆ ಅಲ್ಲಿ ನಡೆದಿದ್ದು ಮಾತ್ರ ಕರ್ನಾಟಕ ಕಂಡ ಅಧ್ಭುತ ಸಾಹಿತಿಗಳಲ್ಲಿ ಒಬ್ಬರಾದ ಎಸ್ ಎಲ್ ಭೈರಪ್ಪನವರ ಬಗ್ಗೆ ಅಪಪ್ರಚಾರ , ಹಿಂದೂ ವಿರೋಧಿ ಹೇಳಿಕೆಗಳು, ಬ್ರಾಹ್ಮಣರ ಬಗ್ಗೆ ಕೆಳಮಟ್ಟದ ಆರೋಪ , ಪುರೋಹಿತಶಾಹಿಯ ಹೆಸರಿನಲ್ಲಿ ಈಡೀ ಜನಾಂಗವನ್ನೇ ದೂಷಿಸುವ ಪ್ರಯತ್ನ . ಈ ದೂಷಿಸುವ ಭರದಲ್ಲಿ ಮಹಿಳೆಯರ ಹಕ್ಕುಗಳ ಬಗ್ಗೆ, ಸಮಾಜದಲ್ಲಿ ಮಹಿಳೆಯರು ಎದುರಿಸುತ್ತಿರುವ ಮುಖ್ಯ ವಿಷಯಗಳ ಬಗ್ಗೆ ಚರ್ಚೆಯೇ ಆಗಲಿಲ್ಲ. ನೆರದಿದ್ದ ಅನೇಕ ಕವಿಯತ್ರಿಯರು ಭೈರಪ್ಪನವರನ್ನು ನೇರವಾಗಿ ವೈಯ್ಯಕ್ತಿಕವಾಗಿ ನಿಂದಿಸಿದರು. ಅಷ್ಟೇಯಲ್ಲದೇ ಇಂತಹ ಕೆಳ ಮಟ್ಟದ ಭಾಷಣಗಳು ಮತ್ತು ವ್ಯಕ್ತಿ ನಿಂದನೆಯನ್ನು ಕೇಕೆ, ಶಿಳ್ಳೆ ಮುಖಾಂತರ ಆನಂದಿಸುವ ಜನರು ಆ ಕಾರ್ಯಕ್ರಮಗಳಲ್ಲಿ ಉಪಸ್ತಿತರಿದ್ದರು. ಕನ್ನಡ ಹಿರಿಮೆ, ಕನ್ನಡ ಕಂಪು ಹಾಗು ಮಹಿಳೆಯರ ಪರ ಧ್ವನಿಎತ್ತಬೇಕಾದ ವೇದಿಕೆಯೊಂದರಲ್ಲಿ ಕನ್ನಡದ ಕಣ್ಮಣಿಯನ್ನು ನಿಂದಿಸುವದು ಸಾಹಿತ್ಯ ಸಮ್ಮೇಳನಕ್ಕೆ ಮತ್ತು ಕನ್ನಡಕ್ಕೆ ಮಾಡುವ ಅಪಮಾನವಲ್ಲವೆ??
ಭೈರಪ್ಪನವರ ನಿಂದನೆ ಮುಗಿಸಿ ಮುಂದುವರೆದ ಕವಿಯತ್ರಿಯರು ದೇವರ ಹೆಸರಲ್ಲಿ, ಪುರೋಹಿತಶಾಹಿಯ ಹೆಸರಲ್ಲಿ ಮೇಲ್ವರ್ಗದವರು ಬೇರೆಯವರನ್ನು ಲೂಟಿ ಮಾಡುತ್ತಾರೆಂದು ದೂಷಿಸಿದರು. ಈ ರೀತಿಯ ದೂಷಣೆಯಿಂದ ಮತ್ತು ಮೇಲ್ವರ್ಗದವರನ್ನು ಬಾಯಿಗೆ ಲಗಾಮಿಲ್ಲದೆ ಬಯ್ಯುವುದರಿಂದಲೇ ಕೆಲವರ ಮನೆ ನಡೆದರೆ ಇನ್ನು ಕೆಲವರಿಗೆ ಮಾಧ್ಯಮಗಳಲ್ಲಿ ಸ್ಥಳ ದೊರಕುವುದೆಂದು ಚೆನ್ನಾಗಿ ಅರಿತುಕೊಂಡಿದ್ದಾರೆ. ಬ್ರಾಹ್ಮಣ ವಿರೋಧಿ ಮನೋಭಾವವನ್ನು ಹೆಚ್ಚಿಸಲು ಬ್ರಾಹ್ಮಣ್ಯ ದೇಶಕ್ಕೆ ಅಂಟಿಕೊಂಡ ಒಂದು ದೊಡ್ಡ ಶಾಪ ಅನ್ನುವ ಅರ್ಥರಹಿತ ಮಾತುಗಳನ್ನಾಡಿ ಜೊತೆಗೆ ಬುದ್ಧ ಕೂಡ ಬ್ರಾಹ್ಮಣರಿಂದ ದೂರವಿರಬೇಕಂದು ಎಂದು ಕರೆ ನೀಡಿದ್ದರಂತೆ !.ಅದ್ಯಾವ ಕೃತಿಯಲ್ಲಿ ಬುದ್ದ ಹೀಗೆ ಹೇಳಿದ್ದೆನೆಂದು ಆ ಕವಿಯತ್ರಿಗಳೇ ಬಲ್ಲರು..
ನಿತ್ಯೋತ್ಸವ ಕವಿ ನಿಸಾರ್ @ ೮೦
– ರಾಘವೇಂದ್ರ ಅಡಿಗ ಹೆಚ್.ಎನ್
ನಿತ್ಯೋತ್ಸವ ಖ್ಯಾತಿಯ ಕವಿ ನಿಸಾರ್ ಅಹಮದ್ ಇದೇ ಫೆಬ್ರವರಿ 5ರಂದು ಎಂಭತ್ತಕ್ಕೆ ಕಾಲಿರಿಸುತ್ತಿದ್ದಾರೆ. ತಮ್ಮ ಸರಳತೆ, ಸಾಹಿತ್ಯ ಪ್ರೌಢಿಮೆ,ಕವಿತೆಗಳಿಂದ ಕನ್ನಡಿಗರ ಮನೆಮಾತಾಗಿರುವ ಈ ಸಜ್ಜನ ಕವಿಯ ಜನುಮದಿನದಂದು ಈ ಸಮಯದಲ್ಲಿ ಕನ್ನಡಕ್ಕೆ ಇನ್ನೊಬ್ಬ ರಾಷ್ಟ್ರಕವಿ ಆಯ್ಕೆಪ್ರಕ್ರಿಯೆಯೂ ನಡೆಯುತ್ತಿದ್ದು, ನಮ್ಮೆಲ್ಲರ ಪ್ರೀತಿಯ ನಿಸಾರ್ ಅಹಮದ್ ಮುಂದಿನ ರಾಷ್ಟ್ರಕವಿಯಾಗಲೆದು ಹಾರೈಸೋಣ…ಅವರ ದಶಕಗಳ ಸಾಹಿತ್ಯಯಾತ್ರೆಯ ಒಂದು ಕಿರು ಪರಿಚಯವನ್ನು ಮಾಡಿಕೊಳ್ಳೋಣ
ಕರ್ನಾಟಕದಾದ್ಯಂತ ಕವಿಗಳಾಗಿ, ವಿಮರ್ಶಕರಾಗಿ ಮತ್ತು ವೈಚಾರಿಕ ಬರಹಗಾರರಾಗಿ ಪ್ರಸಿದ್ಧರಾದ ಪ್ರೊ|| ಕೆ. ಎಸ್. ನಿಸಾರ್ ಅಹಮದ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನ ಹಳ್ಳಿಯಲ್ಲಿ 05-02-1936ರಂದು ಕೆ. ಎಸ್. ಹೈದರ್ ಮತ್ತು ಹಮೀದಾ ಬೇಗಂ ಅವರ ಪುತ್ರರಾಗಿ ಜನಿಸಿದರು. ತಂದೆ ಸರಕಾರಿ ನೌಕರಿಯಲ್ಲಿದ್ದು ಕನ್ನಡ, ಇಂಗ್ಲಿಷ್, ಸಂಸ್ಕೃತ ಬಲ್ಲ ಸುಸಂಸ್ಕೃತರು. ನಿಸಾರರು ಪ್ರಾಥಮಿಕ, ಮಾಧ್ಯಮಿಕ ಶಾಲೆ ಓದಿದ್ದು ದೇವನಹಳ್ಳಿಯಲ್ಲಾದರೆ. ಪ್ರೌಢಶಾಲೆಗೆ ಹೊಸಕೋಟೆ ಹೈಸ್ಕೂಲು. ಸೇರಿಕೊಂಡರು. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿ ಭೂಗರ್ಭ ಶಾಸ್ತ್ರದಲ್ಲಿ ಆನರ್ಸ್ ಪದವಿ ಪಡೆದರು. ಹೀಗೆ ಬೆಂಗಳೂರಿನಲ್ಲಿ ಭೂವಿಜ್ಞಾನದಲ್ಲಿ ಎಂ.ಎಸ್ಸಿ. ವರೆಗಿನ ಅಧ್ಯಯನವನ್ನು ಮುಗಿಸಿ 1958ರಲ್ಲಿ ಗುಲ್ಬರ್ಗದಲ್ಲಿ ಸಹಾಯಕ ಭೂವಿಜ್ಞಾನಿಯಾಗಿ ಸರಕಾರಿ ಸೇವೆಯನ್ನು ಆರಂಭಿಸಿದರು.ಆದರೆ ತಾನು ಮಾಡುತ್ತಿರುವ ಕೆಲಸ ಅವರಿಗೆ ತೃಪ್ತಿ, ಸಂತೋಷವನ್ನು ತಂದುಕೊಡಲಿಲ್ಲ. ಹೀಗಾಗಿ ಆ ಉದ್ಯೋಗವನ್ನು ತೊರೆದು, ಅಧ್ಯಾಪನ ವೃತ್ತಿಗೆ ಸೇರಿಕೊಂಡರು. ಬೆಂಗಳೂರು ಸರಕಾರಿ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಆರಂಭ ಮಾಡಿದ್ದ ನಿಸಾರ್ ಅಹಮದ್ ನಂತರದಲ್ಲಿ ಚಿತ್ರದುರ್ಗ,ಶಿವಮೊಗ್ಗ, ಬೆಂಗಳೂರು ಪುನಃ ಶಿವಮೊಗ್ಗ ಕಾಲೇಜಿನಲ್ಲಿ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಕಾಲೇಜಿನ ಪ್ರಾಧ್ಯಾಪಕರಾಗಿರುವಾಗ ಎನ್.ಸಿ.ಸಿ.ಯಲ್ಲಿ ಲೆಪ್ಟಿನೆಂಟ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವವೂ ಅವರಿಗಿದೆ.
ಓದುಗ ಸಾಹಿತ್ಯ ಮತ್ತು ವಿಮರ್ಶಕ – ಭಾಗ 3
– ಮು.ಅ ಶ್ರೀರಂಗ,ಬೆಂಗಳೂರು
ಓದುಗ ಸಾಹಿತ್ಯ ಮತ್ತು ವಿಮರ್ಶಕ – ಭಾಗ 1
ಓದುಗ ಸಾಹಿತ್ಯ ಮತ್ತು ವಿಮರ್ಶಕ – ಭಾಗ 2
(ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ-೧೦ ರಲ್ಲಿ ತಿಳಿಸಿದಂತೆ (“ನಿಲುಮೆ” ದಿನಾಂಕ ೧೨-೧೧-೨೦೧೪) ನನ್ನ ಮತ್ತು ಶ್ರೀ ವಸುಧೇಂದ್ರರ ಪತ್ರಗಳ ಪೂರ್ಣ ಪಾಠ)
ವಸುಧೇಂದ್ರರ ಮೊದಲನೇ ಪತ್ರ – ಬೆಂಗಳೂರು ೨೧-೦೬-೨೦೧೨
ಶ್ರೀರಂಗ ಅವರಿಗೆ-
ನಮಸ್ಕಾರಗಳು. ನಿಮ್ಮ ಸುಧೀರ್ಘವಾದ ಪತ್ರ ಬಂದಿದೆ. ಸುಮಾರು ಎರಡು ವರ್ಷಗಳ ಹಿಂದೆ ಪ್ರಕಟವಾದ ಈ ಲೇಖನವನ್ನು ನೆನಪಿನಲ್ಲಿಟ್ಟುಕೊಂಡು, ಈಗ ನನ್ನ ವಿಳಾಸ ದೊರೆತ ಮೇಲೆ ಅದಕ್ಕೆ ಪ್ರತಿಕ್ರಿಯಿಸಿರುವ ನಿಮ್ಮ ಸಾಹಿತ್ಯಾಭಿಮಾನ ದೊಡ್ಡದು. ನಿಮ್ಮಂತಹ ಕಟ್ಟಾ ಅಭಿಮಾನಿಗಳನ್ನು ಹೊಂದಿರುವ ಭೈರಪ್ಪನವರ ಬಗ್ಗೆ ಅಸೂಯೆಯಾಗುತ್ತದೆ.
ಭೈರಪ್ಪನವರ ಬಗ್ಗೆ ನನಗೆ ಯಾವುದೇ ವೈಯಕ್ತಿಕ ದ್ವೇಷವಾಗಲಿ, ಬೇಸರವಾಗಲಿ ಇಲ್ಲ. ಇದುವರೆಗೆ ನಾನು ಅವರನ್ನು ಭೇಟಿಯಾಗಿಲ್ಲ. ನಿಮ್ಮೆಲ್ಲರಂತೆ ನಾನೂ ಅವರೆಲ್ಲಾ ಕಾದಂಬರಿಗಳನ್ನು ಪ್ರೀತಿ ವಿಶ್ವಾಸದಿಂದ ಓದಿದ್ದೇನೆ . ಗೃಹಭಂಗ ಮತ್ತು ಪರ್ವ ನನ್ನ ಬಹು ಇಷ್ಟವಾದ ಕಾದಂಬರಿಗಳು. ಅವುಗಳ ಬಗ್ಗೆ ಮತ್ತೊಮ್ಮೆ ಖಂಡಿತಾ ಬರೆಯುತ್ತೇನೆ.
ಅಭಿಮಾನ ಜಾಸ್ತಿಯಾದಾಗ ಆರಾಧನೆಯಾಗುತ್ತದೆ. ಆಗ ನಮಗೆ ಸಾಹಿತಿಗಳ ತಪ್ಪುಗಳೊಂದೂ ಕಾಣುವುದಿಲ್ಲ. ಅವರ ಎಲ್ಲಾ ಹೇಳಿಕೆಗಳೂ, ಮಾತುಗಳೂ, ಕೃತಿಗಳೂ ಸರಿಯೆನ್ನಿಸಲಾರಂಭಿಸುತ್ತವೆ. ಓದುಗ ಎಂದೂ ಆ ಅಪಾಯದಲ್ಲಿ ಸಿಲುಕಬಾರದು. ಕೇವಲ ಓದುಗನಾದ ನನಗೆ ಭೈರಪ್ಪನವರ ಗುಣ–ದ್ವೇಷಗಳೆರಡೂ ಸ್ಪಷ್ಟವಾಗಿ ಕಾಣಿಸುತ್ತವೆ. ಎರಡನ್ನೂ ಸಮಾನ ಪ್ರೀತಿಯಿಂದಲೇ ದಾಖಲಿಸಿದ್ದೇನೆ. ಆದರೆ ನಮ್ಮ ಸಾಹಿತ್ಯದ ಮಾನ ದಂಡ ಬೇರೆಯಾದಾಗ ಅವು ನಿಮಗೆ ಒಪ್ಪಿಗೆಯಾಗದೇ ಹೋಗುವುದನ್ನೂ ನಾನು ಒಪ್ಪುತ್ತೇನೆ, ಗೌರವಿಸುತ್ತೇನೆ. ಮತ್ತಷ್ಟು ಓದು 
ನಾನು ನೇತ್ರಾವತಿ
– ಭರತೇಶ ಅಲಸಂಡೆಮಜಲು
ನಾನು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಹತ್ತಿರದ ಎಳನೀರು ಘಟ್ಟದ ಬಂಗ್ರಬಾಳಿಗೆಯವಳು, ಪಶ್ಚಿಮ ಘಟ್ಟವೇ ಮೂಲಸ್ಥಾನ, ಬೆಳೆದದ್ದು ದಕ್ಷಿಣ ಕನ್ನಡದ ಉಪ್ಪಿನಂಗಡಿ ಹತ್ತಿರ, ಸೇರಿದ್ದು ಅರಬ್ಬೀ ಸಮುದ್ರವನ್ನು… ನನ್ನ ಜೊತೆ ಎಳನೀರು ಹೊಳೆ, ಬಂಡಾಜೆ ಹೊಳೆ, ಮೃತ್ಯುಂಜಯ ಹೊಳೆ, ನೇರಿಯಾ ಹೊಳೆ, ಕೆಂಪು ಹೊಳೆ, ಹನಿಯೂರು ಹೊಳೆ, ಸುನಾಲ ಹೊಳೆ, ಕಪಿಲಾ ಹೊಳೆ, ಕುಮಾರಧಾರ ಹೀಗೆ ಸೋದರ-ಸೋದರಿಯರು. ನಮ್ಮದು ತುಂಬು ಸಂಸಾರ ಪರ್ವತ ರಾಜ, ಮೇಘರಾಜ, ವಾಯುರಾಜರನ್ನೊಳಗೊಂಡ ಚೊಕ್ಕ ಸಂಸಾರ, ಒಬ್ಬರನೊಬ್ಬರು ಬಿಟ್ಟಿರಲಾರದಷ್ಟು ರಕ್ತಕ್ಕಿಂತಲೂ ಮೀರಿದ ಪಾಕೃತಿಕ ಬಂಧನ. ಹೌದು ಈಗ ಗೊತ್ತಗಿರಬಹುದು ನಿಮಗೆ ನಾನರೆಂದು ಅದೇ ನಿಮ್ಮ ನೇತ್ರಾವತಿ ನಾನು.
ನನ್ನ ಜೀವನವೇ ಹೀಗೆ ಎಲ್ಲಿಯೂ , ಯಾರನ್ನೂ ಕಾಯದೇ ನಿರಂತರವಾಗಿ ಹರಿದು ಅದರಿಂದಲೇ ಪಾವನವಾಗಿ ಜಗತ್ತಿಗೆ ತುಳುನಾಡಿನ ಸೌಂದರ್ಯದ ಬಸಿರ ತೋರಿಸಿ, ನರಳುವವರಿಗೆ ಹಸಿರಿನ ನೆರಳಾಗಿ ಹರಿದು ಹರಿದು ಒಂದು ದಿನ ಮಹಾಸಾಗರದಲ್ಲಿ ಬೆರೆತು ಮರೆಯಾಗುತ್ತೇನೆ. ಚಿನ್ನಾಟ ಆಡುತ್ತಾ ಹಿಂಗಾರು- ಮುಂಗಾರು ಮಾರುತಗಳ ಜೊತೆ ಬರುವ ಮೋಡಗಳನ್ನು ಎದೆಯೊಡ್ಡಿ ನಿಲ್ಲಿಸಿದ ಪಶ್ಚಿಮಘಟ್ಟ ತುಳುನಾಡಿಗೆ, ಮಲೆನಾಡಿಗೆ ವರ್ಷಧಾರೆಯನ್ನು ಸಿಂಪಡಿಸುತ್ತಿದ್ದರೆ, ಹಿಮ್ಮೇಳದಲ್ಲಿ ಮಂದಗಾಳಿಗೆ ನೆಟ್ಟಿ ತೆಗೆಯುವ ಲೆಂಕಿರಿಗಳು, ತಂಗಾಳಿಗೆ ಮೈಯೊಡ್ಡಿ ವ್ಯಾಯಾಮ ಮಾಡುವ ಕೊಂಬೆಗಳು, ಬಿಸಿಲಿಗೆ ಬಾಯಾರಿದ ತರಗೆಳಲೆಗಳು ನೀರು ಕುಡಿಯುವುದು, ತೋಡಿನ ಬದುವಿನ ಕೇದಗೆಯ ಪರಿಮಳ, ಇನಿದನಿ ಪಕ್ಷಿಗಳ ರಸಮಂಜರಿ, ಬಳುಕುತ್ತಾ ನಡೆಯುವ ಪ್ರಾಣಿಗಳು ಹೀಗೆ … ಹೀಗೆ…ಇಂತಹ ಜೀವವೈವಿಧ್ಯದ ಪ್ರಾಕೃತಿಕ ಬಂಗುರವೇ ನನಗೆ ಆಹಾರ, ಕಣ್ಣಿಗೆ ಹಬ್ಬ, ಹೊಟ್ಟೆಗೂ ಖುಷಿ…
ಆಳ್ವಾಸ್ ’ನುಡಿಸಿರಿ’ ಮತ್ತು ಪ್ರಗತಿಪರರ ’ಕಿರಿಕಿರಿ’
– ಹರಿಶ್ಚಂದ್ರ ಶೆಟ್ಟಿ
ಮೋಹನ ಆಳ್ವರ ನಾಡು ನುಡಿಯ ಕಂಪಿನ ಕನ್ನಡ ನುಡಿಸಿರಿ ಅದ್ದೂರಿಯ ಮುಕ್ತಾಯ ಕಂಡಿದೆ.ಒಬ್ಬ ವ್ಯಕ್ತಿ ತನ್ನ ಇಚ್ಛಾಶಕ್ತಿಯಿಂದ ಇಂತಹದೊಂದು ಕಾರ್ಯ ನಡೆಸುವುದು ಸಾಧ್ಯವೇ ಎನ್ನುವ ಸಾರ್ವಜನಿಕರ ಆಶ್ಚರ್ಯದ ನಡುವೆ ಕೆಲವು ಹುಳುಕಿನ ಮನಸ್ಸುಗಳು ತಮ್ಮ ವಿತಂಡ ವಾದವನ್ನು ಆಳ್ವರತ್ತ ಹರಿಸಿ ಬಿಟ್ಟಿವೆ.ಕಳೆದ ವರ್ಷ ಮೋಹನ ಆಳ್ವರಿಂದ ಸನ್ಮಾನ ಮಾಡಿಸಿಕೊಂಡು,ಶಾಲು ಹೊದಿಸಿಕೊಂಡು,ಒಟ್ಟಿಗೆ ನೋಟಿನ ದಪ್ಪ ಕಟ್ಟನ್ನು ಕಿಸೆಗೇರಿಸಿಕೊಂಡು ಹೋದ ಸಾರಸ್ವತ ಲೋಕದ ಮಹಾಶಯರೊಬ್ಬರು ನಂತರ ತಮ್ಮ ಅಸಲಿ ಬುದ್ಧಿಯ ” ಜಾತಿ” ವಾದವನ್ನು ಸಾಬೀತು ಪಡಿಸಿದ್ದರು…ಅಂತಹ ಸಾಹಿತಿಗೆ,” ಓತಿಕ್ಯಾತನಿಗೆ ಬೇಲಿ ಸಾಕ್ಷಿ ” ಎನ್ನುವಂತೆ,ಕಳೆದ ಹಲವಾರು ವರ್ಷಗಳಿಂದ ನುಡಿಸಿರಿಯ ಹೆಸರಿನಲ್ಲಿ ಕುತ್ತಿಗೆ ಮಟ್ಟ ತಿಂದು ತೇಗಿದ ಬುದ್ಧಿಜೀವಿಗಳು ಸಹಕಾರ ವಾಣಿಯನ್ನು ಒದಗಿಸಿದ್ದವು.ಈ ಸಲವೂ ಇವರುಗಳಿಗೆ ಏನೋ ಒಡಕು ಕಂಡಿದೆಯಂತೆ.ಆಳ್ವರ ಕನ್ನಡ ಮನಸ್ಸು ಪ್ರಿಯವಾಗುವ ಬದಲು ,ಅವುಗಳಿಗೆ ಎಲ್ಲೋ ಬಿದ್ದಿದ್ದ ಕೊಳಚೆ ಆಪ್ಯಾಯಮಾನವಾಗಿ ಕಂಡಿದೆ.ಜನಪದ ನೃತ್ಯಗಳೂ ಜಾತಿ ಪದ್ಧತಿಯ ಓಣಿಯಲ್ಲಿಯೇ ಸಾಗಬೇಕೆಂಬ ಇವುಗಳು ಮಾತ್ರ ಜಾತಿ ಪದ್ದತಿ ನಿವಾರಣೆಗೆ ತಾವೇನು ಘನ ಕಾರ್ಯ ಮಾಡಿದ್ದೇವೆ ಎಂದು ಹೇಳುವುದಿಲ್ಲ.ಇವರುಗಳ ಕೆಲಸ ಏನಿದ್ದರೂ ಬರವಣಿಗೆ ಮೂಲಕ ಘರ್ಷಣೆಯ ಕಿಡಿ ಹೊತ್ತಿಸುವುದು ಮತ್ತು ಆ ಮೂಲಕ ಉದರ ಪೋಷಣೆ ಮಾಡಿಕೊಳ್ಳುವುದು….
ಕನ್ನಡದ ಇಲ್ಲಗಳು!
– ಡಾ. ಶ್ರೀಪಾದ ಭಟ್, ಸಹಾಯಕ ಪ್ರಾಧ್ಯಾಪಕ
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು, ಕರ್ನಾಟಕ
ಕನ್ನಡ ಸಾವಿರ ವರ್ಷಗಳಿಂದ ಉಳಿದು ಬಂದ ಬಗೆ ಬೆರಗು ಹುಟ್ಟಿಸುವಂಥದ್ದೇನಲ್ಲ. ಅದು ಎಲ್ಲ ಜೀವಂತ ಭಾಷೆಗಳಂತೆಯೇ ಸಹಜವಾಗಿ ಸವಾಲುಗಳನ್ನು ಎದುರಿಸಿ ತನ್ನೊಡಲೊಳಗೆ ಸೇರಿಸಿಕೊಂಡು, ತನ್ನದನ್ನಾಗಿ ಮಾಡಿಕೊಂಡಿದೆ. ಹೀಗೆಂದರೆ ಬಿಸಿಲು, ಮಳೆ ಗಾಳಿಗಳನ್ನು ಎದುರಿಸಿ ಸಾವಿರ ವರ್ಷಗಳಿಂದ ಜಗ್ಗದೇ ಈ ಕಲ್ಲು ನಿಂತಿದೆ ಎಂಬಂತೆ ಕನ್ನಡ ಎಂದರೆ ಯಾವುದೋ ಎರಡನೆಯ ವಸ್ತುವಲ್ಲ. ಕನ್ನಡ ದಕ್ಕಿಸಿಕೊಂಡಿದೆ ಎಂದರೆ ಕನ್ನಡ ಮಾತನಾಡುವ ಜನ ಹಾಗೆ ಮಾಡಿದ್ದಾರೆ ಎಂದರ್ಥ. ಆದರೆ ಇಂದೇನಾಗಿದೆ? ಕನ್ನಡಿಗರು ಕನ್ನಡವೇ ಬೇರೆ, ತಾವೇ ಬೇರೆ ಎಂಬಂತೆ ಇದ್ದಾರೆ. ಎಲ್ಲವನ್ನೂ ಸಿದ್ಧಮಾದರಿಯಲ್ಲಿ ಬಯಸುವ ನಮಗೆ ಕನ್ನಡವೂ ಸಿದ್ಧಮಾದರಿಯಲ್ಲಿ ಉದ್ಧಾರವಾಗಬೇಕು! ನಾನೊಬ್ಬ ಕನ್ನಡ ಮಾತಾಡದಿದ್ದರೆ ಏನಂತೆ? ನನ್ನ ಮಗ/ಮಗಳು ಕನ್ನಡ ಕಲಿಯದಿದ್ದರೆ ಏನಂತೆ? ಎಂದು ಒಬ್ಬೊಬ್ಬರೂ ಭಾವಿಸಿ ಅಂತೆಯೇ ವರ್ತಿಸುತ್ತಿರುವುದೇ ಕನ್ನಡದ ಇಂದಿನ ಸಮಸ್ಯೆಗೆ ಬಹುಪಾಲು ಕಾರಣ. ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಗತಿಯಾದ ಭಾಷೆಯನ್ನು ಆರ್ಥಿಕ-ಔದ್ಯೋಗಿಕ ಮತ್ತು ರಾಜಕೀಯ ದೃಷ್ಟಿಯಿಂದ ನೋಡುವ ಪರಿಪಾಠ ಇನ್ನೊಂದು ಅಪಾಯ. ಕಾಲ ಕಾಲಕ್ಕೆ ಆಯಾ ಭಾಷಿಕ ಪರಿಸರದಲ್ಲಿ ಕಾಣಿಸುವ ರಾಜಕೀಯ, ವಿಜ್ಞಾನ, ತಂತ್ರಜ್ಞಾನ, ಆರ್ಥಿಕತೆ ಮೊದಲಾದ ಸನ್ನಿವೇಶಗಳನ್ನು ಎದುರಿಸುತ್ತ, ಅದನ್ನು ತನ್ನೊಡಲೊಳಗೆ ಸೇರಿಸಿಕೊಳ್ಳುತ್ತ ಹೋಗಬೇಕಾದ ಸವಾಲು ಇರುವುದರಿಂದ ಕನ್ನಡ ಎಂದಲ್ಲ, ಎಲ್ಲ ಜೀವಂತ ಭಾಷೆಗಳೂ ಸದಾ ಕಾಲ ಸಂಕ್ರಮಣ ಸ್ಥಿತಿಯಲ್ಲೇ ಇರುತ್ತವೆ.
ಸದ್ಯದ ಸ್ಥಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಕನ್ನಡಕ್ಕಾಗಿ ಇರುವ ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಸಂಘ ಸಂಸ್ಥೆಗಳು ನೂರನ್ನೂ ಮೀರುತ್ತವೆ. ಇಷ್ಟಾದರೂ ಜಾಗತಿಕ ವಿದ್ಯಮಾನದ ಹಿನ್ನೆಲೆಯಲ್ಲಿ ಆಗುತ್ತಿರುವ ಬದಲಾವಣೆಗೆ ಸಿದ್ಧವಾಗುವಂತೆ ಕನ್ನಡವನ್ನು ಕಟ್ಟುವ ಮತ್ತು ರೂಪಿಸುವ ಕೆಲಸ ಮಾತ್ರ ನಡೆಯುತ್ತಿಲ್ಲ. ಇದು ಆಕ್ಷೇಪವಲ್ಲ, ವಾಸ್ತವ. ಆಧುನಿಕ ತಂತ್ರಜ್ಞಾನದಿಂದ ಇಂದು ಭಾಷೆ, ಶಿಕ್ಷಣ ಮತ್ತು ಸಾಹಿತ್ಯದ ಸ್ವರೂಪವೇ ಬದಲಾಗಿಹೋಗಿದೆ. ಕಂಪ್ಯೂಟರ್, ಮೊಬೈಲ್ ತಂತ್ರಜ್ಞಾನಗಳು ನಿತ್ಯ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಹೊಸ ಜಗತ್ತಿನ ಈ ಹೊಸ ಸಂಪರ್ಕ ಮಾಧ್ಯಮಗಳು ಭಾಷೆಯನ್ನು ಬಳಸಿಕೊಳ್ಳುವ ಬಗೆಯೇ ಬೇರೆ. ಈ ತಂತ್ರಜ್ಞಾನಗಳಿಗೆ ಒಳಪಡದ ಭಾಷೆ ಅಳಿವು ಉಳಿವಿನ ಪ್ರಶ್ನೆಯನ್ನು ಎದುರಿಸುವುದು ಖಂಡಿತ. ಕನ್ನಡ ಈಗ ಈ ಸವಾಲು ಎದುರಿಸುತ್ತಿದೆ.
ಕನ್ನಡ ಅಕ್ಷರ ಮಾಲೆಯ ಸೌಂದರ್ಯ ಅಭಿವ್ಯಕ್ತಗೊಳಿಸುವ ಕವನ
– ಡಾ. ಸುದರ್ಶನ ಗುರುರಾಜರಾವ್
”ಅ,ಆ ಇ,ಈ ಕನ್ನಡದಾ ಅಕ್ಷರಮಾಲೆ ಅಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ” ಈ ಹಾಡನ್ನು ಕೇಳದ ಕನ್ನಡಿಗರಿಲ್ಲ. ಈ ಸುಂದರ ಗೀತೆ ಸ್ವರಗಳ ಸ್ತರದಲ್ಲಿ ಯೋಗವಾಹಗಳಾದ ಅಂ ಅಃ ಗಳೊಂದಿಗೆ ಮುಗಿಯುತ್ತದೆ. ಕರುಳಿನ ಕರೆ ಚಿತ್ರಕ್ಕಾಗಿ ಶ್ರಿ ಆರ್.ಎನ್. ಜಯಗೋಪಾಲ್ ಅವರು ರಚಿಸಿದ ಕನ್ನಡದ ಈ ಅನನ್ಯ ಗೀತೆ ಪ್ರತಿಯೊಂದು ಸ್ವರಕ್ಕೂ ಜೀವನದ ವಿವಿಧ ಹಂತ (ಸ್ತರ) ಗಳಲ್ಲಿ ಇರಬಹುದಾದ ಪ್ರಾಮುಖ್ಯತೆ ಯನ್ನು ತೊರುತ್ತದೆ. ’ಅ’ ಇಂದ ಅಮ್ಮಾ ಎನ್ನುವ ಮೊದಲ ಮಾತು ಶಿಶುವಾಗಿದ್ದಾಗ, ಆಟ ಊಟ ಓಟ ಗಳು ಬಾಲಕನಾಗಿದ್ದಾಗ,ಇನ್ನೂ ಬೆಳೆದ ನಂತರ ಮಾನವೀಯ ಮೌಲ್ಯಗಳ ಕಲಿಕೆ- ಇದ್ದವರು ಇಲ್ಲದವರಿಗೆ ನೀಡುವುದು, ಈಶ್ವರನಲ್ಲಿ ಭಕ್ತಿ ಇಡುವುದು ಮುಖ್ಯವಾಗುತ್ತದೆ;ಅಂದರೆ, “ನಾನು” ಎನ್ನುವ ಭಾವ ತೊಡೆಯುವುದು. ತರುಣರಾಗಿದ್ದಾಗ ಕಲಿಯುವ ಬಹು ಮುಖ್ಯ ನೀತಿ ಉಪ್ಪು ತಿಂದ ಮನೆಗೆ ಎರ್ಡ ಬಗೆಯದಿರುವ ಮನೋಭಾವ, ಸ್ವಾರ್ಥ ಸಾಧನೆಗಾಗಿ ಊರಿಗೆ ದ್ರೋಹ ಮಾಡದಿರುವ ( ವ್ಯಕ್ತಿಗತ ಹಿತಕ್ಕಿಂತ ಸಾಮಾಜಿಕ ಹಿತವನ್ನು ಪರಿಗಣಿಸುವ ಮನೋಭಾವನೆ) ವ್ಯಕ್ತಿತ್ವದ ಬೆಳವಣಿಗೆ, ಆನಂತರದಲ್ಲಿ ಓದು ಮುಗಿದು ಮಾಗಿದ ತಾರುಣ್ಯದ ವಯಸ್ಸಿನಲ್ಲಿ ದೇಶಸೇವೆ ಈಶ ಸೇವೆ ಎಂದು ಮಾಡಿದಾಗ ಜೀವನ ಆಹಾ ಆಃ ಆಃ ಎನ್ನುವಂತಿರುತ್ತದೆ ಎಂದು ಸುಂದರವಾಗಿ ಹೆಣೆದಿದ್ದಾರೆ. ಕನ್ನಡದ ಮುಂದಿನ ವರ್ಣಮಾಲೆಯಲ್ಲಿ ಬರುವ ವ್ಯಂಜನಗಳಿಗೂ ಅವುಗಳದ್ದೆ ಆದ ವೈಶಿಷ್ಟ್ಯ ಇದ್ದು ಇದು ಬಹಳ ಜನಕ್ಕೆ ತಿಳಿಯದು. ವ್ಯಂಜನಗಳಲ್ಲಿ ವರ್ಗೀಯ,ಅವರ್ಗೀಯ, ಅಲ್ಪಪ್ರಾಣ,ಮಹಪ್ರಾಣ ಹಾಗು ಅನುನಾಸಿಕಗಳೆಂಬ ಬಗೆಗಳಿವೆ ಇದು ಎಲ್ಲರಿಗೂ ತಿಳಿದ ವಿಚಾರ. ವರ್ಣಮಾಲೆಯ ಪ್ರತಿಯೊಂದು ಗುಂಪಿನ ಎಲ್ಲ ಸದಸ್ಯರು ನಮ್ಮ ಶ್ವಾಸ ಪ್ರಕ್ರಿಯೆಯ ವಿವಿಧ ಹಂತಗಳಿಂದ ಕ್ರಮವಾಗಿ ಮೂಡಿಬರುತ್ತವೆ. ಸ್ವರಗಳಿಂದ ಆರಂಭವಾಗುವ ಧ್ವನಿಗಳು ಹಂತ ಹಂತವಾಗಿ ಗಂಟಲಿನಿಂದ ಮೇಲೇರಿ ತುಟಿಯ ವರೆಗೂ ಬರುತ್ತವೆ. ಉದಾಹರಣೆಗೆ, ಅ,ಆ ಅಂದು ನೋಡಿ, ನಾಲಿಗೆಯ ಹಿಂದಿನ ಗಂಟಲ ಭಾಗದಿಂದ ಶಬ್ದ ಹೊರಡುತ್ತದೆ. ಕ,ಖ,ಗ ಗಳು ಅಲ್ಲಿಂದ ಮುಂದಕ್ಕೆ ಸರಿದು ನಾಲಿಗೆ ಮತ್ತು ಕಿರಿನಾಲಿಗೆಯ ಚಲನೆಯಿಂದ ಬರುತ್ತವೆ. ಹೀಗೆ ಪ.ಫ ಬ ದಲ್ಲಿ ಎರಡು ತುಟಿಗಳು ತಗುಲಿದಾಗ ಮಾತ್ರವೆ ಶಬ್ದ ಹೊರಡುವುದು. ಇಷ್ಟು ಸುಂದರವಾಗಿ, ವ್ಯವಸ್ಥಿತವಾಗಿ ಸಂಸ್ಕೃತದಿಂದ ಪ್ರೇರಿತವಾದ ಭಾರತದ ಭಾಷೆಗಳಲ್ಲದೆ ಬೇರೆ ಭಾಷೆಯಲ್ಲಿದೆಯೆಂದು ನನಗನಿಸದು. ಅದರಲ್ಲೂ, ಎಲ್ಲಾ ವರ್ಣಗಳಿಂದ ಸಮೃದ್ಧವಾದ ಕನ್ನಡ ಭಾಷೆಯಲ್ಲಿ ಈ ಬೆಡಗನ್ನು ಕಾಣಬಹುದು. ಈ ಭಾಷಾ ಸೌಂದರ್ಯವನ್ನು ಕವಿತೆಯಲ್ಲಿ ಹಿಡಿದಿಡುವ,ಅಭಿವ್ಯಕ್ತಗೊಳಿಸುವ ಅಭಿಲಾಷೆ ನನ್ನದು.
ಮತ್ತಷ್ಟು ಓದು 
ಕನ್ನಡ – ಕನ್ನಡ
– ಭರತೇಶ ಅಲಸಂಡೆಮಜಲು
ಅ.. ಆ.. ಅ. ಆ..
ಇ.. ಈ.. ಇ.. ಈ..
ಅಆಇಈ ಕನ್ನಡದ ಅಕ್ಷರಮಾಲೆ
ಅ…. ಅಮ್ಮ ಎಂಬುವುದೇ ಕಂದನ ಕರುಳಿನ ಕರೆಯೋಲೆ
ಆ…. ಆಟ, ಊಟ, ಓಟ ಕನ್ನಡ ಒಂದನೇ ಪಾಠ
ಕನ್ನಡ ಭಾಷೆಯ ಕಲಿತವನ ಜೀವನವೇ ರಸದೂಟ…
ಇದು “ಕರುಳಿನ ಕರೆ” ಚಿತ್ರದ ಕನ್ನಡ ಭಾಷೆಯ ಬಗೆಗಿನ ಹೆಮ್ಮೆಯ ಹಾಡು, ಹೌದು ಜೀವಿಯೊಂದರ ಧ್ವನಿ ಪೆಟ್ಟಿಗೆಯಿಂದ ಉದ್ಭವಿಸಿದ ದನಿ ಗಾಳಿಯ ಒತ್ತಡಕ್ಕೆ ಸಿಳುಕಿ ಹಾರಾಡಿ ಅದು ತರಂಗಗಳಾಗಿ ತಮಟೆಗೆ ಬಡಿದು ಅನಾಥವಾದರೆ ಶಬ್ಧ, ಅದು ಅರ್ಥವಾದರೆ ಭಾಷೆಯಾಗುತ್ತದೆ. ಪ್ರತಿಯೊಬ್ಬರಿಗೂ ಭಾಷೆಯ ಬಗೆಗೆ ವಿಧ ವಿಧವಾದ ವ್ಯಾಖ್ಯಾನಗಳಿವೆ ಭಾಷೆ ಒಂದು ಸಂಸ್ಕಾರದ ಪರಿಶೋಧನೆಗೆ ಸಂಕೇತಗಳ ರೂಪ ನೀಡಿ ವ್ಯವಹರಿಸಲಿರುವ ವಿಶೇಷ ಸಾಮಥ್ರ್ಯ ಹಾಗೂ ಪಶು-ಪಕ್ಷಿಗಳಿಂದ ಪ್ರತ್ಯೇಕಿಸುವ ಘಟಕವೆಂದೆ ಬಿಂಬಿತವಾಗಿದೆ. ಭಾಷೆಯೆಂಬುದು ಆ ಪ್ರಾಂತ್ಯದ , ಜನ ಮಾನಸದ, ವ್ಯವಹಾರದ, ಸಮಾಜ ಸಂಸ್ಕ್ರತಿಯ ಸೊಗಡನ್ನು ಅಭಿವ್ಯಕ್ತಿ ಪಡಿಸುವ ರಾಯಭಾರಿಯಿದ್ದಂತೆ. ನಾವು ನಮ್ಮನ್ನು ಪರಿಚಯಿಸುವುದೇ ನಮ್ಮ ಭಾಷೆ, ನಮ್ಮ ನಾಡಿನ ಹೆಸರುಗಳ ಮೂಲಕ, ನಮ್ಮದು ಕನ್ನಡ ಭಾಷೆ ಅದರ ನವ್ಯತೆ, ನವಿರತೆ, ಮುಗ್ಧತೆ, ಸ್ಪಷ್ಟತೆ, ಉಚ್ಚರಣೆ, ಭಾವಾವಿಶೇಷಣಗಳು ಕನ್ನಡಿಗನೆನ್ನುವವನ ಮನ ಗೌರವವೆನಿಸುತ್ತದೆ.. ಅದಿ ದ್ರಾವಿಡ ಭಾಷೆಯಿಂದ ಕವಳೊಡೆದು ಒಸರಿನಂತೆ ಜಿನುಗಿ ಅದರ ಗಟ್ಟಿತನ , ಪ್ರಾಚೀನತೆ, ಸ್ವತಂತ್ರ ಪರಂಪರೆ, ಅಪಾರ ಸಾಹಿತ್ಯ ಬಿನ್ನತೆ, ಉನ್ನತ ಮಟ್ಟದ ಮೌಖಿಕ , ಶ್ರೇಷ್ಠ ಜಾನಪದ ನೆಲೆಯಲ್ಲಿ ಇಂದು ಕನ್ನಡ ಶಾಸ್ತ್ರೀಯ ಭಾಷೆಗಳಲ್ಲಿ ಒಂದಾಗಿದೆ. ಕನ್ನಡದ ಕುಲಪುರೋಹಿತ ಅಲೂರು ವೆಂಕಟರಾಯರು ಹೇಳುತ್ತಾ ” ಭರತ ಖಂಡವಿಲ್ಲದೆ ಕರ್ನಾಟಕ ಮುಂತಾದ ಪ್ರಾಂತ್ಯಗಳು ಇಲ್ಲವೆಂಬುದು ಎಷ್ಟು ನಿಜವೋ, ಅಷ್ಟೇ ಕರ್ನಾಟಕ ಮುಂತಾದ ಪ್ರಾಂತ್ಯಗಳಿಲ್ಲದೆ ಭರತಖಂಡವಿಲ್ಲವೆಂಬುದೂ ನಿಜ !!!
ಮತ್ತಷ್ಟು ಓದು 
ನಮ್ಮ ನಮ್ಮ ಭಾಷೆಯ ಸಮಸ್ಯೆ
– ಡಾ. ಶ್ರೀಪಾದ ಭಟ್
ಸಹಾಯಕ ಪ್ರಾಧ್ಯಾಪಕ, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು.
ವಾರಗಳ ಹಿಂದೆ ಭಾರತದ ಖಗೋಳ ವಿಜ್ಞಾನಿಗಳ ತಂಡ ಮಂಗಳನ ಕಕ್ಷೆಗೆ ಉಪಗ್ರಹವನ್ನು ಯಶಸ್ವಿಯಾಗಿ ಸೇರಿಸಿತು. ಈ ಸಂದರ್ಭದಲ್ಲಿ ಬಹುತೇಕ ಕನ್ನಡ ವಾಹಿನಿಗಳು ಚರ್ಚೆಯನ್ನು ಏರ್ಪಡಿಸಿದ್ದವು. ಖಗೋಳ ಅನ್ನುತ್ತಿದ್ದಂತೆ ಈ ಕುರಿತ ಭಾರತದ ಪ್ರಾಚೀನ ಜ್ಞಾನವೇತ್ತರನ್ನು ಹಾಗೂ ಇಂದಿನ ವಿಜ್ಞಾನಿಗಳನ್ನು ಅಥವಾ ಅವರ ಪ್ರತಿನಿಧಿಗಳು ಅಂದುಕೊಂಡವರನ್ನು ಚರ್ಚೆಗೆ ಆಹ್ವಾನಿಸಬೇಕಲ್ಲ? ವಾಹಿನಿಗಳೂ ಹಾಗೆಯೇ ಮಾಡಿದವು. ಎರಡೂ ಕ್ಷೇತ್ರದವರನ್ನು ಜೊತೆಗೆ ನಡುವೆ ವಿಚಾರವಾದಿಗಳನ್ನು ಕರೆತಂದು ಕೂರಿಸಲಾಗಿದ್ದ ಚರ್ಚೆಯೊಂದನ್ನು ನೋಡುತ್ತಿದ್ದೆ. ಜ್ಯೋತಿಷಶಾಸ್ತ್ರದಲ್ಲಿ ಮಂಗಳನ ಬಗ್ಗೆ ಹೀಗೆ ಹೇಳಿದೆ, ಹಾಗೆ ಹೇಳಿದೆ. ಅದೇ ಸತ್ಯ; ಭಾರತೀಯ ಋಷಿ ಮುನಿಗಳು ಅಣುವಿನ ಬಗ್ಗೂ ಪ್ರಸ್ತಾಪಿಸಿದ್ದಾರೆ, ಅವರಿಗೆಲ್ಲ ತಿಳಿದಿತ್ತು ಎಂಬಂತೆ ಆ ಶಾಸ್ತ್ರದವರು ಅನ್ನುತ್ತಿದ್ದರೆ ಮತ್ತೊಂದೆಡೆ ಹಾಗಾದ್ರೆ ಅವರಿಗೆ ಅಣುಬಾಂಬ್ ತಿಳಿದಿತ್ತಾ? ಇದೆಲ್ಲ ನಾನ್ಸೆನ್ಸ್ ಎಂದು ಆಧುನಿಕ ಜ್ಞಾನ ಪ್ರತಿಪಾದಕರು ಬಿಸಿಬಿಸಿ ಚರ್ಚೆ ಮಾಡುತ್ತಿದ್ದರು.ತಮ್ಮ ತಮ್ಮ ಪ್ರತಿಪಾದನೆಗೆ ಎರಡೂ ಗುಂಪಿನವರೂ ಬಲವಾಗಿ ಅಂಟಿಕೊಂಡೇ ಇದ್ದರು. ಸಮಯವಾಯ್ತು, ಚರ್ಚೆ ನಿಂತಿತು. ಇಂಥ ಚರ್ಚೆಗೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ.
ಕಾರಣ ಇಷ್ಟೇ. ಭಾರತದ ಪ್ರಾಚೀನ ಜ್ಞಾನ ಅಂದರೆ ಇಲ್ಲಿ ಚಂದ್ರ, ಸೂರ್ಯ, ಮಂಗಳ ಮೊದಲಾದವುಗಳ ಬಗ್ಗೆ ಜ್ಯೋತಿಷಶಾಸ್ತ್ರದಲ್ಲಿ ಹೇಳಿರುವ ಮಾತುಗಳು ಅಥವಾ ಪಾರಂಪರಿಕ ಜ್ಞಾನ. ಇವುಗಳ ವಿವರ ಭಾಸ್ಕರಾಚಾರ್ಯ, ವರಾಹಮಿಹಿರ ಮೊದಲಾದವರ ಕೃತಿಗಳಲ್ಲಿ ತಕ್ಕಮಟ್ಟಿಗೆ ದೊರೆಯುತ್ತದೆ. ಇದನ್ನು ಇಂದಿನ ಜ್ಯೋತಿಷ್ಕರು ತುಸು ತಿಳಿದಿರುತ್ತಾರೆ. ಇನ್ನು ಆಧುನಿಕ ವಿಜ್ಞಾನ ಕುರಿತು ಮಾತನಾಡುವವರು ವಿಜ್ಞಾನಿಗಳ ಸಾಧನೆಯನ್ನು ಪತ್ರಿಕೆಗಳಲ್ಲಿ ಓದಿದವರೋ ವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಪಾಠ ಮಾಡುವವರೋ ಆಗಿದ್ದವರು. ಇವರಲ್ಲಿ ಎರಡೂ ವರ್ಗದವರೂ ಈ ಎರಡೂ ಕ್ಷೇತ್ರದ ಜ್ಞಾನ ಸೃಷ್ಟಿಗೆ ಕಾರಣರಾದವರಲ್ಲ, ಬದಲಿಗೆ ಯಾರೋ ಮಾಡಿದ ಪ್ರಯೋಗ-ಅದರ ಫಲಿತಗಳ ಅಂತಿಮ ಫಲಾನುಭವಿಗಳು.





