ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 15, 2014

1

ಓದುಗ ಸಾಹಿತ್ಯ ಮತ್ತು ವಿಮರ್ಶಕ – ಭಾಗ 2

‍ನಿಲುಮೆ ಮೂಲಕ

– ಮು.ಅ ಶ್ರೀರಂಗ ಬೆಂಗಳೂರು

ಕನ್ನಡ ಸಾಹಿತ್ಯ‘ನಿಲುಮೆ’ಯಲ್ಲಿ 13-8-14ರಂದು ಪ್ರಕಟವಾದ ಈ ಸರಣಿಯ ಮೊದಲ ಭಾಗದಲ್ಲಿ (ಓದುಗ ಸಾಹಿತ್ಯ ಮತ್ತು ವಿಮರ್ಶಕ – ಭಾಗ 1) ಹೇಳಿದಂತೆ ‘ಕನ್ನಡ ಪ್ರಭ’ದಲ್ಲಿ ಪ್ರಕಟವಾದ ನನ್ನ  ‘ಇಂದಿನ ನಮ್ಮ ಜೀವನದಲ್ಲಿ ಸಾಹಿತ್ಯಕ್ಕೆ ಅವಕಾಶವಿದೆಯೇ?’ ಎಂಬ ಲೇಖನಕ್ಕೆ  ಓದುಗರಿಂದ ಐದು ಪ್ರತಿಕ್ರಿಯೆಗಳು ಬಂದಿದ್ದವು. ಆ ಪ್ರತಿಕ್ರಿಯೆಗಳ ಮುಖ್ಯಾಂಶಗಳನ್ನು ಮೊದಲಿಗೆ ನೋಡೋಣ

(1) ಸಾಹಿತ್ಯವೆಂದರೆ ನಮ್ಮೊಳಗಿನ ಅನುರಣ – ಜಿ ಎಸ್ ನಾಗೇಶ್ ಗುಬ್ಬಿ  (29-4-12)
ಇಂದಿನ ನಮ್ಮ ಜೀವನದಲ್ಲಿ ಸಾಹಿತ್ಯಕ್ಕೆ ಅವಕಾಶವಿದೆಯೇ?  ಎಂದು ಪ್ರಶ್ನಿಸಿ, ಅಗತ್ಯವಿಲ್ಲ ಎಂಬ ಅಭಿಪ್ರಾಯವನ್ನೂ ತಾವೇ ನೀಡಿದ್ದು ವಿಚಿತ್ರವೆನಿಸಿತು.  ಜತೆಗೆ ದೈನಂದಿನ ಒತ್ತಡಗಳಿಂದಾಗಿ ಸಾಹಿತ್ಯ ಕಡೆಗಣಿಸಲ್ಪಡುತ್ತಿದೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಅವರು ದ್ವಂದ್ವದಲ್ಲಿದ್ದಾರೆಂಬುದು ಸ್ಪಷ್ಟ. ಅವರ ಅಭಿಪ್ರಾಯಕ್ಕೆ ನನ್ನ ಆಕ್ಷೇಪವಿದೆ. ನಮ್ಮಲ್ಲಿ ಬಹಳಷ್ಟು ಮಂದಿ ಸಾಹಿತ್ಯವೆಂದರೆ ಪುಸ್ತಕದ ಓದು ಅಥವಾ ಕವಿ ಸಾಹಿತಿಗಳ ಜೀವನವನ್ನು ಅರಿಯುವುದೆಂದು ತಪ್ಪಾಗಿ ಭಾವಿಸಿದ್ದಾರೆ. ಕವಿಗಳು ಸಾಹಿತಿಗಳು ವ್ಯಕ್ತಿ ಶೋಧದಲ್ಲಿ ನಿರತರಾದವರಲ್ಲ. ಸಮಷ್ಟಿ ಶೋಧ ಅವರ ಮೂಲ ಉದ್ದೇಶ. ಕೇವಲ ದೊಡ್ಡ ದೊಡ್ಡ ಕವಿಗಳನ್ನು ಸಾಹಿತಿಗಳನ್ನು ಓದಿಕೊಂಡ ಮಾತ್ರಕ್ಕೆ ನನಗೆ ಸಾಹಿತ್ಯ ಗೊತ್ತು ಎಂದು ಪರಿಭಾವಿಸಿದರೆ ಅವರಿಗಿಂತ ಮೂರ್ಖರು ಮತ್ತೊಬ್ಬರಿರಲಾರರು. ‘ಹಾಗೆಂದು ಅವರನ್ನು ಓದಬಾರದೆಂದಲ್ಲ. ಆದರೆ ನಿಮ್ಮೊಳಗೆ ನಿಮ್ಮದೇ ಆದ ಚಿಂತನೆಗಳಿಲ್ಲದಿದ್ದರೆ ಅದು ದಕ್ಕಲಾರದು’. ನಮ್ಮ ದೈನಂದಿನ ಜೀವನವನ್ನು ನಾನಾ ಉದಾಹರಣೆಗಳನ್ನು ಕೊಟ್ಟು ಶ್ರೀರಂಗ ಅವರು ಟೀಕಿಸಿದ್ದಾರೆ. ರೈಲಿನಲ್ಲಿ ಪ್ರಯಾಣ ಮಾಡುತ್ತಿರುವಾಗಲೇ ಹೋಂ ವರ್ಕ್ ಮುಗಿಸಿಕೊಳ್ಳುವ ಮಕ್ಕಳಿದ್ದಾರೆ. ಅಸೈನ್ ಮೆಂಟುಗಳನ್ನು ಅಚ್ಚುಕಟ್ಟಾಗಿ ರೆಡಿಮಾಡಿಕೊಳ್ಳುವ ಬಿ. ಎಡ್., ಡಿ.ಎಡ್.  ವಿಧ್ಯಾರ್ಥಿಗಳನ್ನು ಕಾಣಬಹುದು. ಭೈರಪ್ಪನವರ ಒಳಹೊಕ್ಕಂತೆ, ಅನಂತಮೂರ್ತಿಯವರನ್ನು ಆವಾಹಿಸಿಕೊಂಡಂತೆ ಚರ್ಚೆಗಿಳಿಯುವ ಸಾಹಿತ್ಯಾಭಿಮಾನಿಗಳಿದ್ದಾರೆ. ಇನ್ನು ಟಿ. ವಿ. ಧಾರಾವಾಹಿಗಳನ್ನು ನೋಡುತ್ತಾ ಸಾಂಸಾರಿಕ ಕಲಹಗಳಿಗೆ ಕಾರಣಗಳನ್ನು, ಪರಿಣಾಮಗಳನ್ನು ಅರಿಯುತ್ತಾ ತಮ್ಮ ಸಂಸಾರ ಹಾಗಾಗಬಾರದೆಂದು ಅಪೇಕ್ಷಿಸಿದ, ತಪ್ಪನ್ನು ತಿದ್ದಿಕೊಂಡ ಅನೇಕ ಕುಟುಂಬಗಳನ್ನು ಕಂಡಿದ್ದೇನೆ. ಚೆನ್ನಾಗಿ ನಿದ್ದೆ ಮಾಡಿ ಮೇಲೆದ್ದ ತಕ್ಷಣ ಸೊಗಸಾದ ಕವನ ರಚಿಸಿ ಬೆರಗುಗೊಳಿಸಿದವರಿದ್ದಾರೆ. ಭಾನುವಾರ ಶಾಪಿಂಗ್ ಮಾಲ್ ನಲ್ಲಿ ಅಡ್ಡಾಡುತ್ತಲೇ ಅಲ್ಲಿನ ‘ಸಾಲ ಮಾಡಿ ಸ್ನೇಹ ಕಳೆದುಕೊಳ್ಳಬೇಡಿ’ ಎಂಬ ಸ್ಲೋಗನ್ ನೋಡಿ  ಸಾಲ ಮತ್ತು ಸ್ನೇಹದ ಬಗ್ಗೆ ಆಲೋಚನಾಪರರಾಗುವವರನ್ನು ಕಾಣುತ್ತೇವೆ. ಇವತ್ತಿನ ಶಾಪಿಂಗ್ ಮಾಲ್ ಗಳಂತೂ ಸಾಹಿತ್ಯ ಮತ್ತು ಸಂಸ್ಕೃತಿಯ ತವರೇ ಆಗಿರುವುದು ಎಲ್ಲರಿಗೂ ತಿಳಿದೇ ಇದೆ. ಹೀಗಿರುವಾಗ ನೋಡುವ ಕಣ್ಣು, ಕೇಳುವ ಕಿವಿ, ಅರಿಯುವ ಪ್ರಜ್ಞೆ ಇದ್ದರೆ ಸಾಕು. ಯಾವುದೇ ಸ್ಥಳದಲ್ಲಿದ್ದರೂ ಸಾಹಿತ್ಯಿಕ ಚಿಂತನೆಯನ್ನು ಅಂತರ್ಗತಗೊಳಿಸಿಕೊಳ್ಳಲು ಸಾಧ್ಯವಿದೆ. ಇಷ್ಟಕ್ಕೂ ಸಾಹಿತ್ಯದ ಅಧ್ಯಯನವೆಂದರೆ ಜನಜೀವನ, ಮಾನವನ ನಡುವಳಿಕೆಗಳ, ಸಮುದಾಯಗಳ ನಡುವಿನ ಸಂವೇದನೆಗಳನ್ನು ಕುರಿತದ್ದು. ಆದ್ದರಿಂದ ವಿಶೇಷವಾದ ಓದೇನೂ ಬೇಕಾಗಿಲ್ಲ. ಸಾಹಿತ್ಯವೆಂದರೆ ಕೇವಲ ಶಬ್ದಗಳ ಆಡಂಬರವಲ್ಲ.

(2) ವ್ಯವಧಾನ ಇದೆ, ಅಭಿರುಚಿ ಇದೆಯೇ- ಕೆ ಆರ್ ಶ್ರೀನಿವಾಸಮೂರ್ತಿ,ಸಾಗರ (6-5-12)
ಸಾಹಿತ್ಯಕ್ಕೆ ಸಂಬಂಧಿಸಿದ ಚರ್ಚೆಗೆ ತೊಡಗುವ ಮುನ್ನ ನಾವು ಸುಮಾರು ಅರ್ಧ ಶತಮಾನದ ಹಿಂದಿನ ಪರಿಸ್ಥಿತಿಯನ್ನು ಅವಲೋಕಿಸಿ ನಂತರ ವರ್ತಮಾನ ಕಾಲದ ಜನರ ಸಾಹಿತ್ಯಾಭಿರುಚಿಯ ಬಗ್ಗೆ ಚರ್ಚಿಸುವುದು ಸೂಕ್ತ. ದೂರದರ್ಶನ,ರೇಡಿಯೋ ಮುಂತಾದ ಆಧುನಿಕ ಮನರಂಜನಾ ವಸ್ತುಗಳಿಲ್ಲದ ಹಿಂದಿನ ಕಾಲದಲ್ಲಿ ಕಾರಂತ,ಅನಕೃ,ತ್ರಿವೇಣಿ ಮುಂತಾದವರ ಕೃತಿಗಳನ್ನು ಓದುವುದೇ ಒಂದು ದೊಡ್ಡ ಮನರಂಜನೆ. ವಿಶೇಷ ದಿನಗಳಲ್ಲಿ ಕಾವ್ಯವಾಚನ ಸಾಮಾನ್ಯವಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಇಂಥಾ ಯಾಂತ್ರಿಕ ಬದುಕಿನಲ್ಲಿಯೂ ಸಾಹಿತ್ಯಕ್ಕೆ ಅವಕಾಶವಿದೆ. ಇದ್ದ ಅವಕಾಶವನ್ನು ಬಳಸಿಕೊಳ್ಳಬೇಕಷ್ಟೇ.ಇದು  ಒಂದು  ನಿರಂತರ ಪ್ರಕ್ರಿಯೆ. ಕಾಲದ ಗತಿಯಲ್ಲಿ ಬದುಕಿನ ಶೈಲಿ,ಬದುಕನ್ನು ಕಾಣುವ ದೃಷ್ಟಿ,ಹವ್ಯಾಸ ಚಿಂತನೆಗಳು ಬದಲಾಗುವುದು ಸಹಜ ಧರ್ಮ. ಹಾಗೆಂದ ಮಾತ್ರಕ್ಕೆ ಸಾಹಿತ್ಯವನ್ನು ರಚಿಸುವುದಕ್ಕಾಗಲಿ,ಕೃತಿಗಳನ್ನು ಓದುವುದಕ್ಕಾಗಲೀ ವ್ಯವಧಾನ ಇಲ್ಲ ಅಂದಲ್ಲ. ಈ ಕಾಲಾವಕಾಶವನ್ನು ಬಳಸಿಕೊಳ್ಳುವ ಮನಸ್ಸಿಲ್ಲ. ಅಭಿರುಚಿ ಇಲ್ಲ. ಸಾಹಿತ್ಯವನ್ನು ಅಧ್ಯಯನ ಮಾಡಿದರೆ ಮಾತ್ರ ಅದರ ‘ರುಚಿ’ ತಿಳಿದೀತು; ಅಭಿರುಚಿ ಹುಟ್ಟೀತು. ಓದುವ ಹವ್ಯಾಸವೇ ಇಲ್ಲದವರಿಗೆ ಓದಿನ ಸವಿ,ಅದರ ಕಲ್ಪನಾಲಹರಿ ಸಿಗುವುದಾದರೂ ಹೇಗೆ?

(3) ಸಾಹಿತ್ಯದಿಂದ ಮನಕಾನಂದ, ಇದು ನಿತ್ಯ ಸತ್ಯ – ನಾ. ಗೋ. ಶರ್ಮ ಗುಲ್ಬರ್ಗಾ  (13-5-12)
ಶ್ರೀರಂಗ ಅವರು ಹಾಕಿದ ಪ್ರಶ್ನೆಯೇ ನಿರಾಧಾರವಾದುದು. ಯಾರೇ ಆಗಲಿ ಪುಸ್ತಕ ಹಿಡಿದು ಓದಿದ ಮಾತ್ರಕ್ಕೆ ಸಾಹಿತ್ಯ ಪ್ರೇಮಿ ಅಂತಲ್ಲ. ಎಂ. ಪಿ.3 ಯಲ್ಲಾಗಲೀ, ಎಫ್. ಎಂ.ರೇಡಿಯೋದಲ್ಲಾಗಲೀ ನೀವು ಯಾವುದೋ ಹಾಡನ್ನು ಕೇಳುತ್ತಾ ತಲೆದೂಗುತ್ತಾ ಅದರಲ್ಲಿ ತಲ್ಲೀನರಾಗುತ್ತೀರೆಂದರೆ ನಿಮಗೆ ತಿಳಿಯದಂತೇ ಆ ಹಾಡಿನ ಸಾಹಿತ್ಯಕ್ಕೆ ಸಂಗೀತಕ್ಕೆ ಮಾರುಹೋಗಿದ್ದೀರಿ ಎಂದೇ ಅರ್ಥ. ಅತೀ ಸಾಮಾನ್ಯ ಮನೆಯಲ್ಲೂ ಅವರಿಗೆ ತುಂಬಾ ಮೆಚ್ಚುಗೆಯಾಗಿರುವ ಭಾವಗೀತೆಗಳು, ಭಜನೆಗಳು,ಸಿನಿಮಾ ಹಾಡುಗಳ ಪುಟ್ಟ ಕ್ಯಾಸೆಟ್ ಸಂಗ್ರಹ ಈಗ ಎಲ್ಲೆಡೆಯೂ ಕಾಣಬಹುದು. ಅವರಿಗೆ ತಿಳಿಯದೇ ಸಾಹಿತ್ಯದೆಡೆಗೆ ಒಲವು ಬೆಳೆದಿರುವುದಕ್ಕೆ ಸಾಕ್ಷಿಯಿದು. ಯಾವುದೋ ಹಾಡು ಧ್ವನಿವರ್ಧಕದಲ್ಲಿ ಜೋರಾಗಿ ಕೇಳುತ್ತಿದ್ದರೆ, ಬಸ್ ಪ್ರಯಾಣದಲ್ಲಿ ಯಾರೋ ಹಾಡು ಜೋರಾಗಿ ಹಾಕಿದ್ದರೆ ನಿಮ್ಮ ಕಿವಿ  ನೆಟ್ಟಗಾಗಿ ಆಲಿಸುತ್ತದೆ. ಹೃದಯವನ್ನು ತಟ್ಟುವಂತಹ ಸಾಹಿತ್ಯ ನಿಮ್ಮನ್ನು ತನ್ಮಯಗೊಳಿಸುತ್ತದೆ. ಇದೇ ಸಾಹಿತ್ಯದ ಶಕ್ತಿ–ಇದು ನಿತ್ಯ ಸತ್ಯ. ಯಾವುದೇ ಭಾಷೆಯಿರಲಿ ಶೇ. 98ಕ್ಕೂ ಹೆಚ್ಚು ಜನ ಸಾಹಿತ್ಯ ಪ್ರೇಮಿಗಳು, ಅಭಿಮಾನಿಗಳು ಇರುತ್ತಾರೆ. ಇದು ವಸ್ತುಸ್ಥಿತಿ. ಹೀಗಿರುವಾಗ ಇಂದಿನ ನಮ್ಮ ಬಿಡುವಿಲ್ಲದ ದಿನಚರಿಯಲ್ಲಿ ಲಘು ಲಲಿತ ಸಾಹಿತ್ಯದ ಓದಿಗಾಗಿ, ಉನ್ನತಮಟ್ಟದ ಭಾವಗೀತೆಗಳನ್ನು ಆಲಿಸುವುದಕ್ಕಾಗಿ ಸಮಯ ಮೀಸಲಿರಿಸಿಕೊಂಡರೆ ಸಾಕು–ಸಾಹಿತ್ಯದಿಂದ ಮನಕಾನಂದ ನೆಮ್ಮದಿ ದೊರೆಯುವುದಂತೂ ಶತಸಿದ್ದ.

(4) ಓದುವುದರಿಂದಲೇ ಪರಂಪರೆ …- ವಿ. ವಸಿಷ್ಠ  ಚಿಕ್ಕಮಗಳೂರು (20-5-12)
ನಾವಿರುವ ವಿಷಮ ಪರಿಸ್ಥಿತಿಯಲ್ಲಿ ನಮ್ಮ ಸಂಸ್ಕೃತಿಯನ್ನು ಕುರಿತು ಅರಿವು ಮೂಡಿಸುವ, ಬೇಸರ ಕಳೆದು ಮನೋಲ್ಲಾಸ ಉಂಟು ಮಾಡುವ ಸಾಹಿತ್ಯ ಕೃತಿಗಳು ಮಾನವ ಜೀವನದಲ್ಲಿ ಅವಕಾಶವಷ್ಟೇ ಅಲ್ಲದೇ ಒಂದು ಅಗತ್ಯತೆಯೂ ಹೌದು. ಆಧುನಿಕ ಯುಗದಲ್ಲಿ ಕಳೆದುಹೋಗಿರುವ ಮಕ್ಕಳಿಗೆ ಕುವೆಂಪು , ಪೂರ್ಣಚಂದ್ರತೇಜಸ್ವಿ, ಬೇಂದ್ರೆ,ಕಾರಂತರಂತಹ ಘನ ಕವಿಗಳ ಹೆಸರನ್ನೂ,ಕೃತಿಗಳನ್ನು ಪಠ್ಯಪುಸ್ತಕಗಳಲ್ಲಿ ಕೇಳಿ ಗೊತ್ತೇ ಹೊರತು ಅವರ ಶ್ರೇಷ್ಠ ಕೃತಿಗಳನ್ನು ವಾಚಿಸದೆ ಅದರ ಸವಿಯಿಂದ ಅವರು ವಂಚಿತರಾಗುತ್ತಿರುವುದು ನಿಜಕ್ಕೂ ವಿಷಾದನೀಯ. ಎಷ್ಟೇ ಕೆಲಸವಿದ್ದರೂ ಕೂಡ ಒಂದೆರೆಡು ನಿಮಿಷ ಒಂದೆಡೆ ಕುಳಿತು ನಮ್ಮ ಸಾಹಿತ್ಯ ಕೃತಿಗಳನ್ನು ತಿರುವಿಹಾಕಲೂ ಬಿಡುವಿಲ್ಲದಷ್ಟು ಸಮಯದ ಅಭಾವ ಉಂಟಾಗಿರುವಂತಹ ಸ್ಥಿತಿ ಯಾವ ಮನುಷ್ಯನಿಗೂ ಇರಲು ಸಾಧ್ಯವಿಲ್ಲ.

(5) ಗೂಡಂಗಡಿಯಾತನ ಹಾಡಿನ ಸೊಲ್ಲಲ್ಲೂ ಸಾಹಿತ್ಯವಿದೆ – ಪ್ರಸಾದ್ ಶೆಣೈ ಆರ್.ಕೆ.ಕಾರ್ಕಳ ( 27-5-12)
ಆಧುನಿಕ ಮರ್ಜಿಯ ಮಂದಿಗಳು ಎಫ್.ಎಂ., ಮೊಬೈಲ್, ಕಂಪ್ಯೂಟರ್ ಗಳ ಮಧ್ಯೆ ಸಾಹಿತ್ಯವನ್ನು ಮರೆಯುತ್ತಿದ್ದಾರೆ ಎನ್ನುವ ಶ್ರೀರಂಗರವರು ಒಂದೇ ಕಣ್ಣಿಂದ ಕಿಟಕಿಯನ್ನು ನೋಡಿದಂತಿದೆ. ಆಧುನಿಕ ಮಾಧ್ಯಮಗಳನ್ನು ಹೀಗಳೆಯುತ್ತಿರುವ  ಇವರು ಅದರಲ್ಲೂ ಒಂದು ಬಗೆಯ ಸಾಹಿತ್ಯ ಇದೆ ಎನ್ನುವ ನಿಜಾರ್ಥವನ್ನು ಗಮನಿಸಿದಂತಿಲ್ಲ. ಇಂದು ರೇಡಿಯೋದಲ್ಲಿ ಬರುವ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಮೆಚ್ಚಿ ಪತ್ರ ಬರೆಯುವ ಮಂದಿ ಧಾರಾಳವಾಗಿದ್ದಾರೆ. ಕಾಲ ಕುದುರೆಯಂತೆ ಓಟಕ್ಕಿಳಿಯುತ್ತಿದ್ದರೆ ಸಾಹಿತ್ಯವು ಹೊಸ ವಿಚಾರಗಳಿಗೆ ಆಯಾಮಗಳಿಗೆ ತುಡಿಯುವುದು ಸಾಮಾನ್ಯ. ಹಿಂದೆ ಸಾಹಿತ್ಯಿಕ ಪತ್ರಿಕೆಗಳಿಗಾಗಿ, ಮ್ಯಾಗಝಿನ್ ಗಳಿಗಾಗಿ ಪುಸ್ತಕದಂಗಡಿಗೆ ಅಲೆಯುತ್ತಿದ್ದ ಸಾಹಿತ್ಯ ಪ್ರೇಮಿಗಳು ಇವತ್ತು ಕಂಪ್ಯೂಟರ್ ಕಿಟಕಿಯ ಮುಂದೆ ಕೂತು ಇ–ಸಾಹಿತ್ಯ ವಿಮರ್ಶೆ, ಪೇಪರುಗಳನ್ನು ಪುಷ್ಕಳವಾಗಿ ಓದುತ್ತಿದ್ದಾರೆ. ಕೆಲವರು ಒಂದು ಹೆಜ್ಜೆ ಮುಂದೆ ಇಟ್ಟು ಬ್ಲಾಗು ಬರೆದೇ ಹೊಸ ಸಾಹಿತ್ಯ ಖಯಾಲಿ ಬೆಳೆಸಿಕೊಂಡಿದ್ದಾರೆ ಎನ್ನುವುದನ್ನೂ ಲೇಖಕರು ಗಮನಿಸಬೇಕು. ನೀವು ಯಾವುದಾದರೂ ಗೂಡಂಗಡಿಯಲ್ಲಿ ಸುಮ್ಮನೆ ಮಾತನಾಡಿನೋಡಿ ಅವನಿಗಿರುವ ಸಾಮಾಜಿಕ ಪ್ರಜ್ಞೆ, ಜೀವನದ ಕುರಿತಾಗಿ ಕೊಡುವ ಉಪನ್ಯಾಸ, ಸಮಕಾಲೀನ ಸಮಸ್ಯೆಗಳನ್ನು ತನ್ನದೇ ಶೈಲಿಯಲ್ಲಿ ಕಟ್ಟಿಕೊಡುವ ಅವನ ತಂತ್ರಗಾರಿಕೆಯಲ್ಲೂ ಸಾಹಿತ್ಯವಿದೆ. ಅವನು ಕೆಲಸ ಮಾಡುತ್ತಾ ಅದ್ಯಾವುದೋ ಚೆಂದದ ಹಾಡಿನ ಸೊಲ್ಲನ್ನು ಹಾಡುವಾಗಲೂ ಅಲ್ಲಿ  ಸಾಹಿತ್ಯ ನಳನಳಿಸುತ್ತದೆ. . ಎಲ್ಲೋ ರಾತ್ರಿ ಊರಲ್ಲಿ ನಡೆಯುವ ಯಕ್ಷಗಾನ, ಭಜನೆ ಮುಂತಾದ ಕಾರ್ಯಕ್ರಮಗಳು ಸಾಹಿತ್ಯಕ್ಕೆ ಹುಮ್ಮಸ್ಸು ಕೊಡೋ ಕಾರಂಜಿಯೇ ಅಲ್ಲವಾ?
******

ಮೇಲಿನ ಐದು ಪ್ರತಿಕ್ರಿಯೆಗಳ ನಂತರ ಈ ಚರ್ಚೆ ಮುಗಿಯಿತು. ಸಾಮಾನ್ಯವಾಗಿ ಪತ್ರಿಕೆಗಳಲ್ಲಿ ಯಾವುದಾದರೊಂದು ಚರ್ಚೆ ಮುಗಿಸುವ ಮುನ್ನ ಆ ಚರ್ಚೆಯನ್ನು ಪ್ರಾರಂಭಿಸಲು ಕಾರಣವಾದ ಲೇಖನದ ಲೇಖಕರ ಅಭಿಪ್ರಾಯಗಳೊಂದಿಗೆ  ಮುಕ್ತಾಯ ಮಾಡುತ್ತಾರೆ. ಆದರೆ ಈ ಸಂದರ್ಭದಲ್ಲಿ  ಐದನೇ ಪ್ರತಿಕ್ರಿಯೆಯ ಕೊನೆಯಲ್ಲಿ ಅಂತಹ ಯಾವ ಸೂಚನೆಯೂ ಇರಲಿಲ್ಲ. ಆದರೂ ನಾನು ಮೇಲಿನ ಪ್ರತಿಕ್ರಿಯೆಗಳ ಬಗ್ಗೆ ನನ್ನ ಅಭಿಪ್ರಾಯಗಳನ್ನು ‘ಕನ್ನಡ ಪ್ರಭ’ದ ಸಾಪ್ತಾಹಿಕ ಪ್ರಭ ವಿಭಾಗಕ್ಕೆ ಕಳಿಸಿದೆ. ಅದು ಪ್ರಕಟವಾಗಲಿಲ್ಲ. ಪ್ರಯತ್ನಮಾಡುವುದಷ್ಟೇ ನನ್ನ ಕೆಲಸ. ಪ್ರಕಟಿಸುವುದು/ಪ್ರಕಟಿಸದೇ ಇರುವುದು  ಸಂಪಾದಕರಿಗೆ ಬಿಟ್ಟ ವಿಷಯ. ಐದು ಭಾನುವಾರಗಳು ನನ್ನ ಒಂದು ಸಾಮಾನ್ಯ ಲೇಖನಕ್ಕೆ ರಾಜ್ಯವ್ಯಾಪಿ ಪತ್ರಿಕೆಯೊಂದರಲ್ಲಿ ಚರ್ಚೆ ನಡೆಯಿತಲ್ಲ. ಅಷ್ಟು ಸಾಕು. ವಾಚಕರ ವಿಭಾಗಕ್ಕೆ ಬರೆದ ಒಂದು ಪತ್ರ,  ಪತ್ರಿಕೆ/ಸಾಹಿತ್ಯ ಪತ್ರಿಕೆಯಲ್ಲಿ  ಒಂದು ಲೇಖನ /ಪ್ರತಿಕ್ರಿಯೆ
ಪ್ರಕಟವಾದರೆ  ನನ್ನಂತಹ ಒಬ್ಬ ಸಾಹಿತ್ಯದ ಹವ್ಯಾಸಿ ಓದುಗನಿಗೆ ಒಂದು ರೀತಿಯ ಖುಷಿ ಆಗುತ್ತದೆ.. ಅದರಿಂದ ಇನ್ನಷ್ಟು ಓದಲು, ಬರೆಯಲು ಒಂದು ರೀತಿಯ ಹುಮ್ಮಸ್ಸನ್ನು ಕೊಡುತ್ತದೆ. ಅಷ್ಟು ಸಾಕು. ಅದೂ ಅಲ್ಲದೆ ‘ಕನ್ನಡ ಪ್ರಭ’ದವರು ಇನ್ನೂರೈವತ್ತು ರೂಪಾಯಿಗಳ ಚೆಕ್ ಸಹ ಕಳಿಸಿದರು!. ಇನ್ನೊಂದೆರೆಡು ಪುಸ್ತಕಗಳನ್ನು ಕೊಳ್ಳಲು ಧನ ಸಹಾಯವೂ ಆಯ್ತಲ್ಲ !!.  ಇನ್ನೇನು ಬೇಕು? ಪ್ರಕಟವಾಗದ ಆ ನನ್ನ ಪ್ರತಿಕ್ರಿಯೆ ಈ ಕೆಳಕಂಡಂತೆ ಇತ್ತು.

*********   *********   *********

ಜೀವನದ ದ್ವಂದ್ವಗಳಲ್ಲಿ ನಾನೆಂಬ ಪರಕೀಯ

‘ಇಂದಿನ ನಮ್ಮ ಜೀವನದಲ್ಲಿ ಸಾಹಿತ್ಯಕ್ಕೆ ಅವಕಾಶವಿದೆಯೇ?’ ಎಂಬ ನನ್ನ ಲೇಖನಕ್ಕೆ ಓದುಗರ ಐದು ಪ್ರತಿಕ್ರಿಯೆಗಳು ಪ್ರಕಟವಾಗಿದೆ. ಅವುಗಳ ಬಗ್ಗೆ ನನ್ನ ಕೆಲವು ಅನಿಸಿಕೆಗಳನ್ನು ಓದುಗರೊಂದಿಗೆ ಹಂಚಿಕೊಳ್ಳಲು ಆಶಿಸುತ್ತೇನೆ. ಕೆ ಆರ್ ಶ್ರೀನಿವಾಸಮೂರ್ತಿ ಅವರು ನನ್ನ ಅಭಿಪ್ರಾಯವನ್ನೇ ಬೇರೆ ಪದಗಳಲ್ಲಿ ಬೇರೆ ರೀತಿಯಲ್ಲಿ ಹೇಳಿದ್ದಾರೆ. ಹಾಗೆಯೇ ವಿ. ವಶಿಷ್ಠ ಅವರೂ ಸಹ ನನ್ನ ಲೇಖನದ ಒಟ್ಟು ಸಾರಾಂಶಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ನಾ. ಗೋ. ಶರ್ಮ ಅವರು ನನ್ನ ಲೇಖನದ ಚೌಕಟ್ಟನ್ನು ಮೀರಿ ತಮ್ಮ ಪ್ರತಿಕ್ರಿಯೆಯ ತೆಕ್ಕೆಗೆ  ಸಂಗೀತವನ್ನೂ ಸೇರಿಸಿಕೊಂಡಿದ್ದಾರೆ. ಸಂಗೀತ ಕೇಳುವವರೆಲ್ಲರೂ ಸಾಹಿತ್ಯದ ಪ್ರೇಮಿಗಳು,ಅಭಿಮಾನಿಗಳು ಮತ್ತು ಅವರ ಸಂಖ್ಯೆ ಯಾವುದೇ ಭಾಷೆಯಿರಲಿ ಶೇ.98ಕ್ಕೂ ಅಧಿಕ ಎಂಬ ಸರ್ವೇ ರಿಪೋರ್ಟ್ ಅನ್ನೂ ಕೊಟ್ಟಿದ್ದಾರೆ. ಅವರಿಗೆ ಈ ಅಂಕಿ ಅಂಶ ಎಲ್ಲಿಂದ ದೊರಕಿತು, ಅದಕ್ಕೆ ಆಧಾರವೇನು ಎಂಬ ಬಗ್ಗೆ ಏನೂ ಹೇಳಿಲ್ಲ. ನನ್ನ ಲೇಖನದ ‘ಧ್ವನಿ’ಯನ್ನು ಗ್ರಹಿಸದ ಇಂತಹ ಸರ್ವೇಯರ್ ಗಳ ಅಭಿಪ್ರಾಯಗಳ ಬಗ್ಗೆ ನಾನು ಹೇಳುವಂತಹುದೇನೂ ಇಲ್ಲ. ಪ್ರಸಾದ್ ಶೆಣೈ ಅವರು ತೀರಾ ಭಾವುಕರಾಗಿ, ರೊಮ್ಯಾಂಟಿಕ್ ಆಗಿ ಗೂಡಂಗಡಿಗಳಲ್ಲೂ ಸಾಹಿತ್ಯದ ಸಾಗರವನ್ನು ಕಂಡು ಹಿಡಿದಿದ್ದಾರೆ! ಇವರ ಈ ಕಾಣ್ಕೆ  ಇಂದು ನಮ್ಮ  ವಿ ವಿ ಗಳ  ಸಂಶೋಧನಾ ವಿಧ್ಯಾರ್ಥಿಗಳಿಗೆ  ಅವರ ಪಿ ಎಚ್ ಡಿ ಪ್ರಬಂಧಕ್ಕೆ  ಅನುಕೂಲವಾದರೂ ಆಗಬಹುದು!!. ನಾಗೇಶ್ ಗುಬ್ಬಿ ಅವರು ನನ್ನ ಲೇಖನದ ಶೀರ್ಷಿಕೆ, ಒಟ್ಟು ಬರಹದ ಪದಗಳು,ವಾಕ್ಯಗಳನ್ನೇ ಸರಿಯಾಗಿ ಅರ್ಥ ಮಾಡಿಕೊಳ್ಳದೆ ತಮ್ಮ ಭಾಷಾ ಬತ್ತಳಿಕೆಯಿಂದ ‘ಅನುರಣಗಳು’, ‘ಸಂವೇದನೆಗಳು’, ‘ವ್ಯಕ್ತಿ ಶೋಧ’, ‘ಸಮಷ್ಠಿ ಶೋಧ’ಗಳೆಂಬ ಬಾಣಗಳನ್ನು ನನ್ನ ಮೇಲೆ ಪ್ರಯೋಗಿಸಿ ನನ್ನನ್ನು ಹಣ್ಣುಗಾಯಿ,ನೀರುಗಾಯಿ ಮಾಡಿಬಿಟ್ಟಿದ್ದಾರೆ. ನಾನು ಇಂದಿನ ನಮ್ಮ ಜೀವನ ಶೈಲಿಯನ್ನು ಟೀಕಿಸಿಲ್ಲ. ಪರಿಸ್ಥಿತಿ ಹೀಗಿದೆ ಎಂದಷ್ಟೇ ಹೇಳಿದ್ದೇನೆ. ಜತೆಗೆ ಇಂತಹ ಪರಿಸ್ಥಿತಿಯ ಒತ್ತಡದಲ್ಲೂ ತಮ್ಮಳಗಿನ ‘ಅನುರಣಕ್ಕೆ’  ಮನಸ್ಸುಮಾಡಿದವರು ,ಸಮಯ ಹೊಂದಿಸಿಕೊಂಡವರು ಪ್ರಶಂಸಾರ್ಹರು ಎಂದು ಹೇಳಿದ್ದೇನೆ. ದ್ವಂದ್ವಗಳಿಲ್ಲದ ಮನುಷ್ಯ  ಭೋಳೆತನದ ಪರಮಾವಧಿಯಲ್ಲೋ ಅಥವಾ ಅಭಿನವ ಬುದ್ಧನಂತೆಯೋ ಜೀವಿಸುತ್ತಾ ಕಾಲ ಕಳೆಯುತ್ತಿರುತ್ತಾನೆ. ‘ಗುಬ್ಬಿ’ಯವರ ‘ನೆಲೆ’ ಇವೆರಡರಲ್ಲಿ  ಯಾವುದು ಎಂದು   ಅವರ ದೀರ್ಘ ಪ್ರತಿಕ್ರಿಯೆಯಿಂದಲೇ  ಸ್ಪಷ್ಟವಾಗಿ ತಿಳಿಯುವಂತಿದೆ. ಬೇರೆ ವಿವರಣೆ ಬೇಕಾಗಿಲ್ಲ.

Read more from ಲೇಖನಗಳು

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments