ವಿಷಯದ ವಿವರಗಳಿಗೆ ದಾಟಿರಿ

Posts from the ‘ಪುಸ್ತಕ ಪರಿಚಯ’ Category

26
ಜುಲೈ

ಪುಸ್ತಕ ವಿಮರ್ಶೆ: ನಭಾರಣ್ಯದ ಮಾಯಾಮೃಗ

– ನಾಗೇಶ್ ಕುಮಾರ್ ಸಿ ಎಸ್

4597ಬಾಹ್ಯಾಕಾಶ ವಿಜ್ಞಾನದ ಅಧ್ಯಯನವನ್ನು “ರಾಕೆಟ್ ಸೈನ್ಸ್” ಎಂಬ ಲೇಬಲ್ ಹಚ್ಚಿ ಕ್ಲಿಷ್ಟಾತಿ-ಕ್ಲಿಷ್ಟ ವಿಷಯವೆನ್ನುವಂತೆ  ವಿಡಂಬನೆಗಾಗಿಯೂ ನಾವು ಸಾಮಾನ್ಯವಾಗಿ ಬಳಸುವುದುಂಟು. ಇಂತಹ ಖಗೋಳ ಶಾಸ್ತ್ರದ ಬೆರಗುಗೊಳಿಸುವಂತಾ ಹಲವು ಬಾಹ್ಯಾಕಾಶ ಸಂಬಂಧಿ ವೈವಿಧ್ಯಮಯ ಲೇಖನಗಳನ್ನು ಹೊಂದಿ ಮೈವೆತ್ತಿಕೊಂಡಿರುವ ಪುಸ್ತಕ: ಚಿರಪರಿಚಿತ ಜನಪ್ರಿಯ ಲೇಖಕ ರೋಹಿತ್ ಚಕ್ರತೀರ್ಥರವರ ನಭಾರಣ್ಯದ ಮಾಯಾಮೃಗ.

ಯಾವನೇ ಮನುಷ್ಯನಾದರೂ ಬುದ್ದಿ ತಿಳಿದ ಮೇಲೆ ಸಹಜವಾಗಿಯೇ ತಾರೆಗಳ ವರ್ಣರಂಜಿತ ಪರದೆಯಾದ ಆಗಸವನ್ನು ದಿಟ್ಟಿಸಿ ” ಅಲ್ಲೇನಿರಬಹುದು?” ಎಂದು  ಸೋಜಿಗದಿಂದ ವಿಚಾರ ಮಾಡಲಿಕ್ಕೆ ಸಾಧ್ಯ. ಇಂದಿನ ಖಗೋಳ ಶಾಸ್ತ್ರದ ಪ್ರಚಲಿತ ವಿಷಯಗಳನ್ನು ಆಯ್ದುಕೊಂಡು, ದೇಶ-ಕಾಲ(space time), ಕಪ್ಪು ಕುಳಿ( black hole). ಅದೃಶ್ಯ ಶಕ್ತಿ ಡಾರ್ಕ್ ಎನರ್ಜಿ, ಕ್ವಾನ್ಟಮ್ ಮೆಕಾನಿಕ್ಸ್ ಬಗೆಗಿನ ಹಲವಾರು ಕಠಿಣ ಪ್ರಶ್ನೆಗಳಿಗೆ ಲೇಖಕರು ಒಂದೊಂದಾಗಿ ತಮ್ಮದೇ ಆದ ಮಣ್ಣಿನ ಸೊಗಡಿನ ಸರಳ ದಿನಬಳಕೆಯ ಕನ್ನಡದ ಉಪಮೆ ಉದಾಹರಣೆಗಳ ಮೂಲಕ ಉತ್ತರಿಸುತ್ತಾ ಹೋಗಿದ್ದಾರೆ. ಹಲವು ವೈಜ್ಞಾನಿಕ ಸಿದ್ಧಾಂತಗಳನ್ನೂ, ಆವಿಷ್ಕಾರಗಳನ್ನೂ ಸವಿವರವಾಗಿ ಪಟ್ಟಿ ಮಾಡಿ, ಎಲ್ಲವನ್ನೂ ನಿರ್ದಿಷ್ಟವಾದ ವಾದಸರಣಿಯಲ್ಲಿ ಮಂಡಿಸುತ್ತಾ, ಅಲ್ಲಲ್ಲಿ ಚಿತ್ರಲೇಖನಗಳನ್ನು ಅದಕ್ಕೆ ಬೆಂಬಲವಾಗಿ ನೀಡಿ, ಸಾಮಾನ್ಯ ಓದುಗನೂ ಕುತೂಹಲದಿಂದ ‘ಕವರ್ ಟು ಕವರ್’ ಓದಿಕೊಂಡು ಹೋಗುವಂತೆ ಪ್ರೇರೇಪಿಸಿದ್ದಾರೆ.

ರೋಹಿತ್ ಲೇಖನಿಯಿಂದ ಚಿಮ್ಮುವ ಕ್ಲಿಷ್ಟ ವಿಚಾರಗಳೂ ಸರಳ ಸುಂದರವಾಗಿ ನಮಗೆ ಸ್ಪಷ್ಟವಾಗುತ್ತಾ ಹೋಗುತ್ತವೆ. ವಿಜ್ಞಾನಿಗಳ ಅನ್ವೇಷಣೆಗಳ ಇತಿಹಾಸದಿಂದ ಸಂಗ್ರಹಿಸಲ್ಪಟ್ಟ ಉಪಯುಕ್ತ ವೈಜ್ಞಾನಿಕ ವಿಚಾರಗಳ ರೋಚಕ ಚಿತ್ರ ಈ ಪುಸ್ತಕದಲ್ಲಿದೆ, ಅದರಲ್ಲಿ ಆಸಕ್ತಿಯಿದ್ದ ಓದುಗರಿಗೆ ಇದು ಮೃಷ್ಟಾನ್ನ ಭೋಜನವೇ ಸರಿ!

ನನ್ನ ಮತ : 5/5

 

16
ಜೂನ್

ಗೂಂಡಾಗಿರಿ ಎಂದು ಕರೆಯುವ ಭಂಡತನ

Untitled5555

ಸಂಶೋಧಕರಾದ(?!!) ಭಗವಾನ್ ಅವರ ಶಂಕರಾಚಾರ್ಯ ಮತ್ತು ಪ್ರತಿಗಾಮಿತನ ಪುಸ್ತಕದ ಎರಡನೆಯ ಅಧ್ಯಾಯ “ಶಂಕರಾಚಾರ್ಯನ ಗೂಂಡಾಗಿರಿ ಮತ್ತು ವೈದಿಕ ಸಂಸ್ಕೃತಿ” ಲೇಖನದ ಶೀರ್ಷಿಕೆಯನ್ನು ಸಾಬೀತು ಪಡಿಸಲು ಸಂಶೋಧಕರು ಹಾಕಿರುವ ತಿಪ್ಪರಲಾಗ ಮತ್ತು ಬಿಟ್ಟ ಸತ್ಯವಿಚಾರಗಳು ಬೃಹದಾಕಾರವಾಗಿವೆ. ಸದ್ಯ, ಇವರುಗಳು ಗಣಿತ, ರಸಾಯನ ಶಾಸ್ತ್ರ ಮುಂತಾದುವುಗಳನ್ನು ಓದಿಲ್ಲ. ಇಲ್ಲದೇ ಹೋಗಿದ್ದರೆ ಅಲ್ಲಿ ಇವರು ಹುಟ್ಟುಹಾಕಬಹುದಾಗಿದ್ದ ಪ್ರಮೇಯಗಳಿಂದ ಎಷ್ಟು ವಿಜ್ಞಾನಿಗಳ ಆತ್ಮಗಳು ಅಕಾಲ ಮೃತ್ಯುವನ್ನಪ್ಪಿ ಪ್ರೇತಗಳಾಗುತ್ತಿದ್ದವೋ ಗೊತ್ತಿಲ್ಲ. ವಿಜ್ಞಾನ ಉಳ್ಕೊಂಡ್ರೂ ಸಮಾಜ ವಿಜ್ಞಾನವನ್ನು ಮನಕ್ಕೆ ಬಂದ ತರ್ಕ, ಊಹೆಗಳನ್ನು ವೈಜ್ಞಾನಿಕವೆಂದು ಒರಲುತ್ತಾ ಬುಡವಿಲ್ಲದ ಸಿದ್ಧಾಂತ ಮಂಡನೆ ಮತ್ತು ಬ್ರಾಹ್ಮಣರ ಖಂಡನೆಯಿಂದ ಪ್ರಚಂಡನಾಗುವ ಕೌಶಲವು ಬುದ್ಧಿಜೀವಿಗಳು ಎಂದೆನಿಸಿಕೊಳ್ಳಬೇಕಾದರೆ ಕಲಿಯಬೇಕಾದ ಕಸರತ್ತಾದ್ದರಿಂದ, ಆ ವಿಷಯದಲ್ಲಿ ಅಸಾಮಾನ್ಯ ಪ್ರತಿಭೆಯನ್ನು ಮೆರೆದಿದ್ದಾರೆ. ಕಳೆದ ಅಧ್ಯಾಯದಲ್ಲಿ ಶಂಕರಾಚಾರ್ಯರಿಂದ ಶುರುಮಾಡಿದ ಪ್ರಲಾಪವನ್ನು ಕಡೆಯಾಗುವಾಗ ನೌಕರಿ ಮಾಡುವ ಜನರವರೆಗೂ ವಿಸ್ತರಿಸಿದ್ದು ಇವರ ಪ್ರತಿಭೆಗೆ ಸಾಕ್ಷಿ. ಇಲ್ಲಿಯೂ ಅಷ್ಟೆ; ಯುಗ ಯುಗಗಳನ್ನು ಲೀಲಾಜಾಲವಾಗಿ ಹಾರಿ ನೆಗೆದು ಒಂದೆರಡು ಉದಾಹರಣೆಗಳಿಂದ ಇಡೀ ಗ್ರಂಥದ ಆಶಯವನ್ನೇ, ಆ ಜನಪದದ ಸಾಮಾರ್ಥ್ಯವನ್ನೇ ದಿಕ್ಕಾಪಾಲು ಮಾಡುವ ಅಮೋಘ ವಾದಲಹರಿಯಲ್ಲಿ ಮುಳುಗಿ ತೇಲಿದ್ದಾರೆ. ಆದರೆ ಇತಿಹಾಸವನ್ನು ತಿರುಚಿ ಬರೆಯಬಹುದಾದರೂ ಐತಿಹಾಸಿಕ ಸತ್ಯಗಳನ್ನು ನಾಶಮಾಡಲು ಸಾಧ್ಯವಿಲ್ಲವಾದ್ದರಿಂದ ವಿಚಾರಗಳ ಸತ್ಯಾಂಶಗಳನ್ನು ಪ್ರಸ್ತುತಪಡಿಸುವಲ್ಲಿ ದಯನೀಯವಾಗಿ ಸೋತಿದ್ದಾರೆ. ಈ ಅಧ್ಯಾಯದಲ್ಲಿ ಮುಖ್ಯವಾಗಿ ಆಪಾದಿಸಿರುವ ನಾಗಾರ್ಜುನಕೊಂಡದ ಬೌದ್ಧ ಮಂದಿರಗಳು ಶಂಕರಾಚಾರ್ಯರ ನೇತೃತ್ವದಲ್ಲಿ ಧ್ವಂಸವಾಗಿದ್ದು ಎಂಬುದರ ಮತ್ತು ಇನ್ನಿತರ ಐತಿಹಾಸಿಕ ವಿಚಾರಗಳೆಡೆಗೆ ನೋಡೋಣ. ಉಳಿದಂತೆ ಅದೇ ಬ್ರಾಹ್ಮಣ, ಪುರೋಹಿತಶಾಹಿ, ಹಿಂದೂ ಧರ್ಮ ಮುಂತಾದ ಪದಪುಂಜಗಳಿಂದ ಅರೋಪ ಮಾಡುತ್ತ ಪುಟಭರ್ತಿ ಮಾಡುವ ಕೆಲಸ ಮಾಡಿದ್ದಾರಾದ್ದರಿಂದ ಮತ್ತೆ ಮತ್ತೆ ಅದನ್ನು ಪರಿಶೀಲಿಸುವ ಅಗತ್ಯವಿಲ್ಲ. ಮತ್ತಷ್ಟು ಓದು »

4
ಮೇ

ಕಾಡು ಮತ್ತು ಕ್ರೌರ್ಯ ( ಪುಸ್ತಕ ಪರಿಚಯ)

– ನಾಗೇಶ ಮೈಸೂರು

kaadumattukrouryaಸಾಧಾರಣವಾಗಿ ತೇಜಸ್ವಿಯರ ಯಾವುದೇ ಪುಸ್ತಕವನ್ನು ಪರಿಚಯ ಮಾಡಿಸುವ ಅಗತ್ಯ ಇರುವುದಿಲ್ಲ. ಅವೊಂದು ರೀತಿ ‘ಸ್ವಯಂಭು’ ಪ್ರವೃತ್ತಿಯ ‘ಸ್ವಯಂದರ್ಶಿ’ ಜಾತಿಗೆ ಸೇರಿದವು. ಆದರೂ ಈ ಪುಸ್ತಕ ನೋಡಿದಾಗ ಒಂದು ಪರಿಚಯ ಮಾಡಿಸುವ ಅಗತ್ಯವಿದೆ ಎನಿಸಿತು. ಅದಕ್ಕೆ ಮೊದಲ ಕಾರಣ – ಇದು ೧೯೬೨ರಲ್ಲಿ ತಮ್ಮ ಎಂ.ಎ. ಮುಗಿಸಿದ ನಂತರದ ದಿನಗಳಲ್ಲಿ ತೇಜಸ್ವಿ ಬರೆದ ಮೊಟ್ಟಮೊದಲ ಕಾದಂಬರಿ. ನಾನಾ ಕಾರಣಗಳಿಂದ ಪ್ರಕಟವಾಗದೆ ತೀರಾ ಈಚೆಗೆ ಬೆಳಕು ಕಂಡ ಕೃತಿ. ಪ್ರಕಾಶಕರ ಮಾತಿನಲ್ಲೇ ಹೇಳಿದಂತೆ ಸ್ವರೂಪ ಮತ್ತು ನಿಗೂಢ ಮನುಷ್ಯರು ಬರೆದಾದ ಮೇಲೆ ಸ್ವತಃ ತೇಜಸ್ವಿಯವರೇ, ಈ ಪುಸ್ತಕ ಪ್ರಕಟಿಸುವ ಮಾತೆತ್ತಿದಾಗ ‘ಹೂಂ’ ಅಥವಾ ‘ಉಹೂಂ’ ಎರಡೂ ಅಲ್ಲದ ತಮ್ಮ ಕಥೆಗಳಷ್ಟೇ ನಿಗೂಢವಾದ ಮುಗುಳ್ನಗೆಯೊಂದನ್ನು ಬಿತ್ತರಿಸಿ ಸುಮ್ಮನಾಗಿಬಿಡುತ್ತಿದ್ದರಂತೆ. ಅಂತಹ ಪುಸ್ತಕವೊಂದು ಕೊನೆಗೂ ೨೦೧೩ ರಲ್ಲಿ, ಬರೆದ ಸುಮಾರು ಐವತ್ತು ವರ್ಷಗಳ ನಂತರ  ಪ್ರಥಮ ಮುದ್ರಣ ಭಾಗ್ಯ ಕಂಡಿತೆಂದ ಮೇಲೆ ಅದರ ಕುರಿತಾದ ಪರಿಚಯ ಸಾಕಷ್ಟು ಕುತೂಹಲಕಾರಿಯಾದ ವಿಷಯವೇ ಅಲ್ಲವೇ ? ಬಹುತೇಕ ತೇಜಸ್ವಿ ‘ಪರಮಾಭಿಮಾನಿ’ಗಳಿಗು ಈ ಪುಸ್ತಕ ಪರಿಚಿತವಿರಲಾರದೆಂಬ ಅನಿಸಿಕೆಯಲ್ಲಿ ಹೀಗೊಂದು ಪರಿಚಯದ ಯತ್ನ. ಮತ್ತಷ್ಟು ಓದು »

21
ಏಪ್ರಿಲ್

‘ಹೊಸ ತಲೆಮಾರಿನ ತಲ್ಲಣ’ ಕೃತಿ ಪರಿಚಯ

ಮು.ಅ ಶ್ರೀರಂಗ ಬೆಂಗಳೂರು

hosa talemarina tavaka tallanagalu0001ಡಾ. ರಹಮತ್ ತರೀಕೆರೆ ಅವರ ಸಂಪಾದಕತ್ವದಲ್ಲಿ  ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ ಅವರು ೨೦೦೮ರಲ್ಲಿ ಪ್ರಕಟಿಸಿರುವ ‘ಹೊಸ ತಲೆಮಾರಿನ ತಲ್ಲಣ’ ಕೃತಿಯ ಒಂದು ಪರಿಚಯ ಮಾಡಿಕೊಡುವುದು ಈ ಲೇಖನದ ಉದ್ದೇಶ. ಈ ಕೃತಿಯಲ್ಲಿ ಒಟ್ಟು   ೩೮ ಲೇಖನಗಳಿವೆ. ಸಂಪಾದಕರಾದ  ರಹಮತ್ ತರೀಕೆರೆಯವರು ತಮ್ಮ ಮುನ್ನುಡಿಯಲ್ಲಿ ಹೇಳಿರುವಂತೆ ‘ಈ ಸಂಕಲನವು ಬರಹದಲ್ಲಿ ತೊಡಗಿಕೊಂಡಿರುವವರಿಗೂ, ಸಾಹಿತ್ಯ ಅಧ್ಯಯನ ಮಾಡುವವರಿಗೂ, ಸಾಹಿತ್ಯದಲ್ಲಿ ಸಾಮಾನ್ಯ ಆಸಕ್ತಿ ಇರಿಸಿಕೊಂಡಿರುವ ಓದುಗರಿಗೂ ಉಪಯುಕ್ತ ಆಗಬಹುದು’.   ಈ ಕೃತಿಯಲ್ಲಿ ಮೂರು ಭಾಗಗಳಿವೆ. ಮೊದಲ ಭಾಗದಲ್ಲಿ  ಹೊಸತಲೆಮಾರಿನ ಲೇಖಕರ ಆತ್ಮ ಕಥಾನಾತ್ಮಕ ಮಾದರಿಯ ಬರಹಗಳಿವೆ. ಎರಡನೇ ಭಾಗದ ಬರಹಗಳು ಸಂಪಾದಕರ ಕೆಲವು ನಿರ್ದಿಷ್ಟ ಪ್ರಶ್ನೆಗಳಿಗೆ ಕೊಟ್ಟ ಉತ್ತರವಾಗಿ ಮೂಡಿಬಂದ ಲೇಖನಗಳಿವೆ. ಮೂರನೇ ಭಾಗದಲ್ಲಿ ಈ ಎರಡೂ  ಭಾಗದ ಬರಹಗಳಿಗೆ ಸಂಪಾದಕರು ಮಾಡಿರುವ   ‘ತಲ್ಲಣಗಳ ಸ್ವರೂಪ’ ಎಂಬ ಉತ್ತಮ  ವಿಶ್ಲೇಷಣೆ ಇದೆ. ಮತ್ತಷ್ಟು ಓದು »

15
ಏಪ್ರಿಲ್

ನನ್ನನ್ನು ಆಕರ್ಷಿಸಿದ್ದು ಆಕೆಯ ಕಣ್ಣುಗಳು…!!

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

The-Eyes-Have-It-Postರೋಹಾನಾ ಪಟ್ಟಣಕ್ಕೆ ತೆರಳುವವರೆಗೂ ರೈಲಿನ ಆ ಬೋಗಿಯೊಳಗಿದ್ದಿದ್ದು ನಾನೊಬ್ಬನೇ. ರೋಹಾನಾದ ಸ್ಟೇಷನ್ನಿನಲ್ಲಿ ಅವಳು ಹತ್ತಿಕೊಂಡಳು. ಆಕೆಯನ್ನು ನಿಲ್ದಾಣಕ್ಕೆ ಬಿಡಲು ಬಂದ ಅವರ ಅಪ್ಪ ಅಮ್ಮನಿಗೋ ಅವಳ ಬಗ್ಗೆ ಅತಿಯಾದ ಕಾಳಜಿ. ರೈಲು ಬಿಡುವವರೆಗೂ ಅವಳಿಗೆ ನಿಮಿಷಕ್ಕೊಂದು ಎಚ್ಚರಿಕೆ ಕೊಡುತ್ತ ನಿಂತಿದ್ದ ಆಕೆಯ ಪೋಷಕರ ಮಾತುಗಳು ನನಗೆ ಸ್ಪಷ್ಟವಾಗಿ ಕೇಳಿಸುತ್ತಿದ್ದವು. “ಬ್ಯಾಗುಗಳನ್ನು ಕಾಲ ಬಳಿಯೇ ಇರಿಸಿಕೋ, ಕಿಟಕಿಯಿಂದ ಕೈ ಹೊರಗೆಹಾಕಬೇಡ, ಹುಶಾರು, ಅಪರಿಚಿತರೊಡನೆ ಮಾತನಾಡಬೇಡ” ಹೀಗೆ ಕೆಲವು ಸಲಹೆಗಳನ್ನು ಆಕೆಯ ಹೆತ್ತವರು ನೀಡುತ್ತಿರುವಂತೆಯೇ ರೈಲು ಹೊರಟಿತು. ಮೊದಲೇ ನಾನು ಕುರುಡ. ಬೆಳಕು ಮತ್ತು ಕತ್ತಲುಗಳನ್ನು ಹೊರತುಪಡಿಸಿ ಇನ್ನೇನನ್ನೂ ಗುರುತಿಸಲು ನನ್ನಿಂದಾಗುತ್ತಿರಲಿಲ್ಲ. ಹಾಗಾಗಿ ಆ ಹುಡುಗಿ ನೋಡಲು ಹೇಗಿರಬಹುದೆಂದು ಊಹಿಸುವುದು ನನ್ನಿಂದ ಶಕ್ಯವಾಗಲಿಲ್ಲ. ಆಕೆಯ ಚಪ್ಪಲಿಯಿಂದ ಬರುತ್ತಿದ್ದ ಸಪ್ಪಳದಿಂದಾಗಿ ಆಕೆ ಹವಾಯಿ   ಚಪ್ಪಲಿಗಳನ್ನು   ಧರಿಸಿರಬೇಕೆನ್ನುವುದನ್ನು   ಅರಿತೆ.   ಆಕೆಯದ್ದೋ ಕೋಗಿಲೆಯಂತಹ ಮಧುರ ಧ್ವನಿ.  ಹೇಗಾದರೂ  ಸರಿ,  ಆಕೆಯ  ರೂಪವನ್ನು ಗ್ರಹಿಸಬೇಕೆಂದುಕೊಂಡೆನಾದರೂ  ನನ್ನ ಸಹಾಯಕ್ಕೆ ಅಲ್ಲಿ ಯಾರೂ ಇರದಿದ್ದದ್ದು ನನಗೆ ಕೊಂಚ ಬೇಸರವನ್ನುಂಟು ಮಾಡಿತ್ತು. ಮತ್ತಷ್ಟು ಓದು »

15
ಮಾರ್ಚ್

ಮೂಕಜ್ಜಿಯ ಕನಸುಗಳು (ಪುಸ್ತಕ ಪರಿಚಯ)

– ನಾಗೇಶ ಮೈಸೂರು

image1‘ … ಅಂಥ ಅಜ್ಜಿಯೊಬ್ಬಳು ಇದ್ದಾಳೆಯೇ ಎಂಬ ಸಂಶಯ ಬಂದರೆ, ಸಮ್ಮ ಸಂಸ್ಕೃತಿಯ ನಂಬಿಕೆಗಳ ಕುರಿತಾದ ಸಂಶಯ ಪಿಶಾಚಿಯ ರೂಪವೇ ಅವಳೆಂದು ತಿಳಿದರಾಯ್ತು. ಆದರೂ ಅವಳು ನಮ್ಮಲ್ಲನೇಕರಲ್ಲಿ ಪಿಶಾಚಿಯಂತಲ್ಲ, ಪ್ರಾಮಾಣಿಕ ಸಂದೇಹಗಳ ರೂಪದಲ್ಲಿ ಬದುಕಿಕೊಂಡೇ ಇದ್ದಾಳೆ…. ‘

‘ಸಾಂಪ್ರದಾಯಿಕತೆಯಿಂದ ಹೆರೆಗಟ್ಟಿದ ಮನಸುಗಳನ್ನು ತುಸುತುಸುವಾಗಿ ಕಾಯಿಸಿ, ಕರಗಿಸುವ ಕೆಲಸ ಅವಳದ್ದು…’

ಬಹುಶ ಮುನ್ನುಡಿಯಲ್ಲಿ ಶಿವರಾಮಕಾರಂತರು ಕಾಣಿಸಿರುವ ಇವೆರಡು ಸಾಲುಗಳು ಸಾಕೇನೋ – ಈ ಅದ್ಭುತ ಪುಸ್ತಕದ ಸಾರಾಂಶವನ್ನು ಎರಡೇ ಮಾತಲ್ಲಿ ಹಿಡಿದಿಡಲು. ಪರಂಪರಾನುಗತವಾಗಿ ಹರಿದುಬಂದ ನಂಬಿಕೆ, ಸಂಪ್ರದಾಯಗಳಲ್ಲಿ ನಿಮಿತ್ತವೆಂಬಂತೆ ಬದುಕು ಸಾಗಿಸಿದ ಜನಮಾನಸದ ಕೆಲವಾದರೂ ಚಿತ್ತಗಳನ್ನು ಕೆದಕಿ ಕದಡಿರಬಹುದಾದ ‘ಏನೀ ಜಗ ? ನಾನೇಕಿಲ್ಲಿದ್ದೇನೆ ?’ ಎಂಬ ಗಹನ ಪ್ರಶ್ನೆಗಳಿಗೆ ತನ್ನರಿವಿನ ಪರಿಧಿಯನುಸಾರ ಉತ್ತರ ಕಂಡುಕೊಳ್ಳುವ ಸೂಕ್ಷ್ಮಚಿತ್ರಣ ಈ ಕಾದಂಬರಿಯ ಸ್ಥೂಲ ಮೊತ್ತ ಎಂದರೆ ತಪ್ಪಾಗಲಾರದು.
ಮತ್ತಷ್ಟು ಓದು »

12
ಮಾರ್ಚ್

“ಯೇಗ್ದಾಗೆಲ್ಲಾ ಐತೆ ” (ಪುಸ್ತಕ ಪರಿಚಯ)

– ನಾಗೇಶ ಮೈಸೂರು

4046ಕನ್ನಡದಲ್ಲಿ ಪುಸ್ತಕಗಳು ಒಂದು ಮುದ್ರಣ ಕಾಣುವುದೇ ಕಷ್ಟ. ಹೆಚ್ಚು ಪುಸ್ತಕಗಳು ಅಚ್ಚಿನ ಮನೆಯ ಮುಖವನ್ನೆ ಕಾಣುವುದಿಲ್ಲ. ಅಂತದ್ದರಲ್ಲಿ ಪುಸ್ತಕವೊಂದು ಹತ್ತು ಬಾರಿಗೂ ಮೀರಿ ಮುದ್ರಣ ಭಾಗ್ಯ ಕಂಡಿದೆಯೆಂದರೆ ? ಖಂಡಿತ ಅದರಲ್ಲೇನೊ ವಿಶೇಷ ಇರಲೇಬೇಕು. ಹಾಗೆಂದುಕೊಂಡೇ ಬೆಂಗಳೂರಿಗೆ ಭೇಟಿಯಿತ್ತಾಗ ಕೊಂಡು ತಂದ ಪುಸ್ತಕ – ‘ಯೇಗ್ದಾಗೆಲ್ಲಾ ಐತೆ’. ೨೫ ಸಾವಿರಕ್ಕೂ ಅಧಿಕ ಪ್ರತಿಗಳು ಅಚ್ಚಾಗಿದ್ದೇ ಅಲ್ಲದೆ ಇತರ ನಾಲ್ಕು ಭಾಷೆಗಳಿಗೂ ಅನುವಾದವಾಗಿದ್ದು, ನಾಟಕದ ರೂಪದಲ್ಲು ಜನಮನ ತಲುಪಿದ್ದು – ಇದೆಲ್ಲಾ ನೋಡಿದರೆ ಚಾಪೆಯಡಿ ನುಸುಳುವ ನೀರಂತೆ ಹರಿದು ಜನಪ್ರಿಯವಾಗುವುದು ಈ ಪುಸ್ತಕದ ‘ಯೇಗ್ದಾಗೇ’ ಇರುವಂತೆ ಕಾಣುತ್ತಿದೆ.

ಒಂಬತ್ತಿಂಚಿನ ಪೀಜಾಗು ೩೦೦ ರಿಂದ ೬೦೦ ರೂಪಾಯಿ ಪೀಕುವ ಈ ಕಾಲದಲ್ಲಿ, ೧೪೦ ಪುಟಗಳ ಈ ಪುಸ್ತಕ, ಎಷ್ಟೋ ಕಡೆ   ತೆರುವ  ಕಾಫಿಯ  ಕಾಸಿಗಿಂತಲು   ಅಗ್ಗವಾಗಿ  ೬೦  ರೂಪಾಯಿಗೆ ಸಿಕ್ಕಿತ್ತು ! ರೆಸ್ಟೋರೆಂಟಿನಲ್ಲಿ ಹಿಂದೆಮುಂದೆ ನೋಡದೆ ಸಾವಿರಾರು ಸುರಿವ ನಮಗೆ – ವರ್ಷಕ್ಕೊಂದು  ಸಾರಿಯಾದರು ಕನ್ನಡ ಪುಸ್ತಕ ಕೊಳ್ಳುವುದು ‘ ಯೇಗ್ದಾಗೆ ಬರ್ದಿಲ್ಲ’ ಅಂತ ಕಾಣುತ್ತೆ. ಆದರು ಪ್ಲೀಸ್ – ಓದಲಿ, ಬಿಡಲಿ ಛಾನ್ಸ್ ಸಿಕ್ಕಿದ್ರೆ ಈ ಪುಸ್ತಕ ಮಾತ್ರ ಕೊಂಡುಕೊಂಡು ಬಿಡಿ. ಯಾಕೇಂದ್ರೆ ಈ ಪುಸ್ತಕ ಮಾರಿ ಬಂದ ಆದಾಯವೆಲ್ಲ ನೇರವಾಗಿ ಹೋಗೋದು ಬೆಳಗೆರೆಯ ಶ್ರೀ ಶಾರದಾಮಂದಿರ ವಿದ್ಯಾಸಂಸ್ಥೆಯ ಶೈಕ್ಷಣಿಕ ಚಟುವಟಿಕೆಗಳಿಗೆ. ಓದದೇ ಇದ್ದರೂ ನಿಮ್ಮಿಂದ ಪುಕ್ಕಟೆಯಾಗಿ ಸಮಾಜ ಸೇವೆ ಮಾಡಿಸುತ್ತೆ ಈ ಪುಸ್ತಕ – ಅದೂ ತೀರಾ ಅಗ್ಗವಾಗಿ!

ಈ ಪುಸ್ತಕ ಮೂಲತಃ ಶ್ರೀ ಸಾಮಾನ್ಯನಂತಿದ್ದೂ ಅದ್ಭುತ ಯೋಗಿಯ ಬಾಳು ಬದುಕಿದ ಶ್ರೀ ಮುಕುಂದೂರು ಸ್ವಾಮಿಗಳ ‘ಪವಾಡ’ ವನ್ನು ಕುರಿತದ್ದು. ಪವಾಡವೆಂದರೆ ಇದು ಯಾವುದೊ ‘ಛೂ ಮಂತ್ರಕಾಳಿ’ಯ ತರದ ಬೂಟಾಟಿಕೆಯ ಪುಸ್ತಕವೆಂದು ಮೂಗು ಮುರಿಯಬೇಡಿ ತಾಳಿ… ಈ ಸ್ವಾಮಿಗಳನ್ನು ಹತ್ತಿರದಿಂದ ಕಂಡು ಅಲ್ಲೇನಾದರು ಢೋಂಗಿತನವಿತ್ತೆ ಎಂದು ಸ್ವತಃ ತಾವೇ ಅಳೆದು ನೋಡಲೆತ್ನಿಸಿದ ಶ್ರೀ ಬೆಳಗೆರೆ ಕೃಷ್ಣಶಾಸ್ತ್ರಿಗಳು, ವಿಜ್ಞಾನದ ನಿಲುಕಿಗೆ ಸಿಗದ ನೂರಾರು ಘಟನೆ, ಅನುಭವಗಳಿಂದ ವಿಸ್ಮಿತರಾಗಿ ನೆನಪಿನ ಕೋಶದಿಂದ ಸಿಕ್ಕಷ್ಟನ್ನು ಹೆಕ್ಕಿ ಕೊನೆಗೆ ಈ ಪುಸ್ತಕರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಒಂದು ವೇಳೆ ಬರೆಯುವ ಉದ್ದೇಶದಿಂದಲೇ ಅಭ್ಯಸಿಸಿ ಬರೆದಿದ್ದರೆ ಈ ಪುಸ್ತಕ ಇನ್ನೂ ಹೇಗಿರುತ್ತಿತ್ತೊ ?!
ಮತ್ತಷ್ಟು ಓದು »

9
ಮಾರ್ಚ್

ನನ್ನಿ- ತಾತ್ವಿಕ ಒಳಸುಳಿಗಳ ವಿಶ್ಲೇಷಣೆ.

ನವೀನ ಗಂಗೋತ್ರಿ

12122868_977678548941892_2941475822589158080_nಗಂಭೀರ ಓದುಗರು, ನೋಡುಗರು, ಕನ್ನಡದಲ್ಲಿ ಕಡಿಮೆಯಾದ್ದರಿಂದಲೇ ಕಡಮೆ ದರ್ಜೆಯ ಪತ್ರಿಕೆಗಳು, ಸಿನಿಮಾಗಳು, ಕಾದಂಬರಿಗಳು ನಮ್ಮಲ್ಲಿ ನಾಯಿಕೊಡೆಯಂತೆ ಹುಟ್ಟಿಕೊಂಡಿವೆ ಎನ್ನುವ ಮಾತನ್ನು ಆಗಾಗ ನಿರಾಶಾವಾದಿ ವಿಮರ್ಶಕರೂ, ತಮ್ಮ ಕಣ್ಣೀರಿನ ಕಾರ್ಯಕ್ರಮಗಳ ಸಮರ್ಥಕರಾದ ಚಾನೆಲ್ಗಳೂ ಹೇಳಿಕೊಂಡು ಬಂದಿವೆ. ಸಕಾರಾತ್ಮಕ ಧೋರಣೆಯ ಕೆಲವು ಬರಹಗಾರರು, ಚಿಂತಕರು ಓದುಗರನ್ನು ಇಷ್ಟು ತಳಮಟ್ಟದಲ್ಲಿ ಕಾಣುವುದಿಲ್ಲ. ಹಾಗಾಗಿಯೇ ಘನವಾದ ಕೃತಿಗಳನ್ನು ಕೊಡುವುದು ಅವರಿಗೆ ಇಂದಿಗೂ ಸಾಧ್ಯವಾಗುತ್ತಿದೆ.

ಕರ್ಮ ಕಾದಂಬರಿಯ ಮೂಲಕ ಕರಣಂ ಪವನ್ ಪ್ರಸಾದ್ ಹಾಗೊಬ್ಬ ಆಳ ಚಿಂತನೆಯ ಕಾದಂಬರಿಕಾರರಾಗುವ ಭರವಸೆಯನ್ನು ಹುಟ್ಟಿಸಿದ್ದರು. ತಾತ್ತ್ವಿಕ ಎತ್ತರವನ್ನು ಅಡಕಗೊಳಿಸಿಕೊಂಡಿದ್ದರೂ ಕರ್ಮದ ಓಘದಲ್ಲಿ ಇನ್ನೊಂದಿಷ್ಟು ನೈಪುಣ್ಯವನ್ನು ಬಯಸಿದ್ದ ಓದುಗ, ಇದೀಗ ಅವರ ಹೊಸ ಕಾದಂಬರಿ ’ನನ್ನಿ’ಯ ಮೂಲಕ ಹೆಚ್ಚು ಕುಶಲಿಯಾದ ಮತ್ತು ಪ್ರಭಾವಿಯಾದ ಕಾದಂಬರಿಕಾರನನ್ನು ಕಂಡಿದ್ದಾರೆ. ಎರಡುವಾರದ ಹಿಂದೆ ಬಿಡುಗಡೆಯಾದ ನನ್ನಿ ಅದಾಗಲೇ ಎರಡುಬಾರಿ ಟಾಪ್ ಟೆನ್ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಆನ್ ಲೈನ್ ನ್ಯೂಸ್ ಪೋರ್ಟಲ್ಗಳಲ್ಲಿ ಸುದ್ದಿಯಾಗ್ತಿದೆ, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗ್ತಿದೆ. ಹೊತ್ತಿ ಉರಿವ ಬೆಂಕಿಯಂತಲ್ಲದೆ, ಚಾಪೆಯಡಿಗೆ ಹರಿವ ನೀರಿನಂತೆ ಓದುಗನನ್ನು ಆಂತವಾಗಿ ತಲುಪುತ್ತಿದೆ. ಅದ್ಯಾಕೆ ಹಾಗೆ ತಲುಪುತ್ತಿದೆ ಎನ್ನುವುದಕ್ಕೆ ನನ್ನಿ ಕಾದಂಬರಿಯ ಸಾಮರ್ಥ್ಯವೇ ಉತ್ತರ.

ಮತ್ತಷ್ಟು ಓದು »

21
ಡಿಸೆ

ಮತ್ತೆ ಮತ್ತೆ ಹೆಮ್ಮಿಂಗ್ವೆ…

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

ಅರ್ನೆಸ್ಟ್ ಹೆಮ್ಮಿಂಗ್ವೆಹತ್ತಾರು ಎತ್ತಿನಬಂಡಿಗಳು,ಲಾರಿಗಳು ಓಡಾಡುತ್ತಿದ್ದ ಸೇತುವೆಯ ತುದಿಯಲ್ಲಿ ಆ ವೃದ್ಧ ಕುಳಿತಿದ್ದ.ತೀರ ಕೊಳಕಾದ ಉಡುಪುಗಳನ್ನು ತೊಟ್ಟಿದ್ದ ಆತ ಸಾಧಾರಣ ಗುಣಮಟ್ಟದ ಚಾಳೀಸೊಂದನ್ನು ಧರಿಸಿದ್ದ. ಸೇತುವೆಯ ಒಂದು ತುದಿಯಲ್ಲಿ ಮಣಭಾರದ ಮೂಟೆಗಳನ್ನು ಹೊತ್ತು ನಡೆಯಲಾಗದೇ ನಿಂತಿದ್ದ ಹೇಸರಗತ್ತೆಗಳನ್ನು ಸೈನಿಕರು ಕಷ್ಟಪಟ್ಟು ಮುಂದೆ ತಳ್ಳುತ್ತಿದ್ದರು.ಹೆಂಗಸರು ತಮ್ಮ ಮಕ್ಕಳೊಂದಿಗೆ ಸಂಕವನ್ನು ಅವಸರದಲ್ಲಿ ದಾಟಿಕೊಂಡು ಮತ್ತೊಂದು ತುದಿಯನ್ನು ತಲುಪಿಕೊಳ್ಳುವ ಧಾವಂತದಲ್ಲಿದ್ದರೂ ಮುದುಕ ಮಾತ್ರ ಸುಮ್ಮನೇ ಕುಳಿತುಕೊಂಡಿದ್ದ.ಮೈಲುಗಟ್ಟಲೆ ನಡೆದು ಬಂದ ಆತನ ಮುಖದಲ್ಲಿ ಸುಸ್ತು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆತ ಅದಾಗಲೇ ಸೇತುವೆಯನ್ನು ದಾಟಿ ಬಂದಿದ್ದರಿಂದಲೋ ಏನೋ, ಮುಂದೆ ನಡೆಯಲಾರೆನೆನ್ನುವ ಭಾವ ಆತನ ನಿತ್ರಾಣಗೊಂಡ ಮೊಗದಲ್ಲಿ ಕಾಣಿಸುತ್ತಿತ್ತು.ಸೇತುವೆಯ ಮತ್ತೊಂದು ತುದಿಯನ್ನು ದಾಟಿ ಶತ್ರುಗಳ ಚಲನವಲನವನ್ನು ಗಮನಿಸುವ ಜವಾಬ್ದಾರಿ ನನ್ನ ಮೇಲಿತ್ತು.ನಾನು ಸೇತುವೆಯನ್ನೊಮ್ಮೆ ದಾಟಿ ಎಚ್ಚರಿಕೆಯಿಂದ ಅಲ್ಲಿನ ಪರಿಸರವನ್ನು ಗಮನಿಸಿದೆ.ಶತ್ರುಗಳ ಭಯದಿಂದ ಸೇತುವೆಯನ್ನು ದಾಟಿ ಸುರಕ್ಷಿತ ತಾಣವನ್ನು ಸೇರಿಕೊಳ್ಳಲು ನಡೆದುಬರುತ್ತಿದ್ದ ಜನರ ಸಂಖ್ಯೆಯೂ ವಿರಳವಾಗತೊಡಗಿತ್ತು. ಹೆಚ್ಚಿನವರು ಸೇತುವೆಯ ಸುರಕ್ಷಿತ ಪಕ್ಕವನ್ನು ಸೇರಿಕೊಂಡಾಗಿತ್ತು.ಶತ್ರುಗಳು ತೀರ ಸೇತುವೆಯನ್ನು ಸಮೀಪಿಸಿಲ್ಲವೆನ್ನುವದು ಖಚಿತಪಡಿಸಿಕೊಂಡು ನಾನು ಹಿಂತಿರುಗಿ ಬಂದ ನಂತರವೂ ವೃದ್ಧ ಸೇತುವೆಯ ಪಕ್ಕದಲ್ಲಿಯೇ ಕುಳಿತಿದ್ದ.

“ನಿನ್ನ ಊರಾವುದು ತಾತ..”? ಎಂದು ನಾನು ಆ ವೃದ್ಧನನ್ನು ಕೇಳಿದೆ.”ಸಾನ್ ಕಾರ್ಲೋಸ್” ಎಂದ ವೃದ್ಧನ ಮುಖದಲ್ಲಿ ಸಣ್ಣದೊಂದು ಔಪಚಾರಿಕ ಮಂದಹಾಸ.ನಾನು ಕೇಳದಿದ್ದರೂ”ಅಲ್ಲಿ ನಾನು ಕೆಲವು ಸಾಕುಪ್ರಾಣಿಗಳ ಮೇಲ್ಚಿಚಾರಕನಾಗಿ ಕೆಲಸ ಮಾಡುತ್ತಿದ್ದೆ”ಎಂದು ನುಡಿದನಾತ.”ಹೌದಾ..”ಎನ್ನುವ ಉದ್ಗಾರವೊಂದು ನನ್ನ ಬಾಯಿಂದ ಹೊರಬಿದ್ದದ್ದೇನೋ ನಿಜ.ಆದರೆ ಪ್ರಾಣಿಗಳ ಮೇಲ್ವಿಚಾರಣೆ ಎನ್ನುವ ಆತನ ಮಾತುಗಳು ನನಗೆ ಅರ್ಥವಾಗಲಿಲ್ಲ.”ಮ್ಮ್,ನಾನು ಕೆಲವು ಪ್ರಾಣಿಗಳನ್ನು ಸಾಕಿಕೊಂಡು ಜೀವನವನ್ನು ನಡೆಸುತ್ತಿದ್ದೆ.ಯುದ್ಧ ಭೀತಿಗೆ ನನ್ನೂರಿನ ಹೆಚ್ಚಿನ ಜನ ಊರನ್ನು ತೊರೆದು ಸೇತುವೆಯನ್ನು ದಾಟಿ ಬಂದುಬಿಟ್ಟರು,ಕದನಭಯದ ನಡುವೆಯೂ ಹುಟ್ಟೂರಿನೆಡೆಗಿನ ನನ್ನ ಭಾವುಕತೆ ನನ್ನನ್ನು ಇಷ್ಟು ದಿನ ಅಲ್ಲಿಯೇ ಉಳಿದುಕೊಳ್ಳುವಂತೆ ಮಾಡಿತ್ತು,ಸಾನ್ ಕಾರ್ಲೋಸ್ ಬಿಟ್ಟ ಕೊನೆಯ ಕೆಲವು ನಾಗರಿಕರಲ್ಲಿ ನಾನೂ ಒಬ್ಬ”ಎನ್ನುತ್ತ ಮಾತು ಮುಂದುವರೆಸಿದ ವೃದ್ಧ.
ಮತ್ತಷ್ಟು ಓದು »

10
ಡಿಸೆ

ಎ ಸ್ಟ್ರೇಂಜ್ ಸ್ಟೋರಿ

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

ಓ ಹೆನ್ರಿಅಮೆರಿಕಾದ ಟೆಕ್ಸಾಸ್ ರಾಜ್ಯದ ರಾಜಧಾನಿಯಾಗಿರುವ ಆಸ್ಟಿನ್ ಪಟ್ಟಣದ ಉತ್ತರ ಭಾಗದಲ್ಲಿ ವಾಸವಿದ್ದ ಆ ಕುಟುಂಬ ನಗರದ ಸಂಸ್ಕಾರವಂತ ಕುಟುಂಬಗಳಲ್ಲೊಂದು ಎಂದು ಗುರುತಿಸಲ್ಪಡುತ್ತಿತ್ತು. ’ಸ್ಮೂದರ್ಸ್ ಕುಟುಂಬ’ ಎಂದೇ ಕರೆಯಲ್ಪಡುತ್ತಿದ್ದ  ಕುಟುಂಬದಲ್ಲಿದ್ದಿದ್ದು ಜಾನ್ ಸ್ಮೂದರ್ಸ್, ಅವನ ಮಡದಿ ಮತ್ತವನ ಐದು ವರ್ಷದ ಪುಟ್ಟ ಮಗಳು ಮಾತ್ರ.ಪರಿವಾರದಲ್ಲಿದ್ದದ್ದು ಮೂರು ಸದಸ್ಯರೇ ಆಗಿದ್ದರೂ ,ಸರಕಾರಿ ದಾಖಲಾತಿಗಳಲ್ಲಿ ಮಾತ್ರ ಕುಟುಂಬ ಸದಸ್ಯರ ಸಂಖ್ಯೆ ಆರು ಎಂದು ದಾಖಲಾಗಿರುವುದು ಏಕೆನ್ನುವುದು ಸ್ವತ: ಜಾನ್ ಸ್ಮೂದರ್ಸನಿಗೂ ಸಹ ತಿಳಿದಿರಲಿಲ್ಲ.

ಅದೊಂದು ದಿನ ರಾತ್ರಿಯ ಊಟ ಮುಗಿಸಿ ಮಡದಿಯೊಂದಿಗೆ ಹರಟುತ್ತ ಕುಳಿತಿದ್ದ ಜಾನ್,ತನ್ನ ಮಗಳು ಹೊಟ್ಟೆ ನೋವಿನಿಂದ ಒದ್ದಾಡುತ್ತಿರುವುದನ್ನು  ಗಮನಿಸಿದ.ಕ್ಷಣಗಳು ಉರುಳಿದಂತೆ ಮಗಳ ಉದರಶೂಲೆ ಹೆಚ್ಚುತ್ತ ಆಕೆ ಕಿರುಚಾಡುತ್ತಿರುವುದನ್ನು ಕಂಡು ಗಾಬರಿಯಾದ ಆತ ಔಷಧಿಯನ್ನು ತರಲು ತಕ್ಷಣ ಪಟ್ಟಣದತ್ತ ತೆರಳಿದ.ಮಗಳೆಡೆಗೆ ಗಮನವಿರಿಸುವಂತೆ ಮಡದಿಗೆ ತಿಳಿಸಿ,ಔಷಧಿಗಾಗಿ ಹಾಗೆ ಪಟ್ಟಣಕ್ಕೆ ತೆರಳಿದ ಜಾನ್,ಪುನ: ವಾಪಸ್ಸು ಬರಲೇ ಇಲ್ಲ!!ಅವನಿಗಾಗಿ ಕಾಯುತ್ತ ಕುಳಿತಿದ್ದ ಮಡದಿಗೆ ನಿಜಕ್ಕೂ ಇದು ಆಘಾತಕರ ಸಂಗತಿ.ಆದರೆ ಅಂಥದ್ದೊಂದು ಆಘಾತದಿಂದ ಆಕೆ ಬಲುಬೇಗ ಚೇತರಿಸಿಕೊಂಡಳು. ಸರಿಸುಮಾರು ಮೂರು ತಿಂಗಳನಂತರ ಮತ್ತೊಬ್ಬರನ್ನು ಮದುವೆಯಾದ ಆಕೆ ಆಸ್ಟಿನ್ ಪಟ್ಟಣವನ್ನು ತೊರೆದು ಸಾನ್ ಅಂಟೋನಿಯೊ ಪಟ್ಟಣವನ್ನು ಸೇರಿಕೊಂಡಳು.ಕಾಲಚಕ್ರ ಉರುಳುತ್ತ ಸಾಗಿತು.ಅಪ್ಪ ನಾಪತ್ತೆಯಾಗುವಾಗ ಐದು ವರ್ಷವಾಗಿದ್ದ ಬಾಲಕಿಗೆ ಈಗ ಇಪ್ಪತ್ತೈದರ ವಸಂತ.ಮನ ಮೆಚ್ಚಿದ ಹುಡುಗನೊಂದಿಗೆ ವಿವಾಹವಾದ ಅವಳು ಒಂದು ಮುದ್ದಾದ ಹೆಣ್ಣುಮಗುವಿನ ತಾಯಿಯೆನಿಸಿಕೊಂಡಿದ್ದಳು.ಮಗಳಿಗೆ ’ಪನ್ಸಿ’ ಎಂದು ನಾಮಕರಣ ಮಾಡಿದ ಆಕೆ ಕಳೆದು ಹೋದ ಅಪ್ಪನನ್ನು ಮರೆಯಲಾಗದೆ,ಪುನಃ ಆಸ್ಟಿನ್ ಪಟ್ಟಣವನ್ನು ಸೇರಿಕೊಂಡು ತಮ್ಮ ಹಳೆಯ ಮನೆಯಲ್ಲಿಯೇ ಪತಿಯೊಂದಿಗೆ ವಾಸವಾಗಿದ್ದಳು.

ಮತ್ತಷ್ಟು ಓದು »