ಪರಿಹಾರಭಾಗ್ಯದ ಆಸೆಗೆ ಪ್ರಾಣ ಕಳೆದುಕೊಂಡ ಶಾಸಕ
– ಪ್ರವೀಣ್ ಕುಮಾರ್ ಮಾವಿನಕಾಡು
ಶಾಸಕರು ಅಥವಾ ಮಂತ್ರಿಗಳು ಆತ್ಮಹತ್ಯೆ ಮಾಡಿಕೊಂಡರೆ ರೈತ ಸಂಘಟನೆಗಳ ವತಿಯಿಂದ ಪರಿಹಾರ ನೀಡಲಾಗುವುದು ಎನ್ನುವ ಘೋಷಣೆಯನ್ನು ನಂಬಿ ಶಾಸಕನೊಬ್ಬ ಅಧಿವೇಶನದ ನಡುವೆಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ!ಶೂನ್ಯ ವೇಳೆಯಲ್ಲಿ ಶೌಚಾಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ ಶಾಸಕನನ್ನು ಕೆಳಗಿಳಿಸಿ ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಮಾರ್ಗಮದ್ಯದಲ್ಲಿಯೇ ಅಸುನೀಗಿದ್ದಾನೆ.
ಇದರಿಂದ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣಗೊಂಡಿದ್ದು ಇತರ ಶಾಸಕರು ರಾಜ್ಯ ಹೆದ್ದಾರಿಯಲ್ಲಿ ಟೈರ್ ಗಳನ್ನು ಸುಟ್ಟು ಪ್ರತಿಭಟನೆ ನಡೆಸಿದರು.ರೈತ ಸಂಘಟನೆಗಳ ರಾಜ್ಯ ಮುಖಂಡರು ಬಂದು ಪರಿಹಾರ ನೀಡುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದ ಶಾಸಕರು,ಮೃತ ದೇಹವನ್ನು ಪೋಸ್ಟ್ ಮಾರ್ಟಮ್ ಗೆ ಒಯ್ಯಲೂ ಅವಕಾಶ ನೀಡದೇ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು.ನಂತರ ಸ್ಥಳಕ್ಕೆ ಬಂದ ಸ್ಥಳೀಯ ರೈತ ಮುಖಂಡನ ಬೈಕ್ ಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ನಂತರ ಸ್ಥಳದಲ್ಲಿದ್ದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಬೇಕಾಯಿತು.
ಮೂಢನಂಬಿಕೆ ನಿಷೇಧ ಕಾಯ್ದೆ ಮಂಡನೆಗೆ ಆಷಾಢಮಾಸ ಅಡ್ಡಿ!
– ಪ್ರವೀಣ್ ಕುಮಾರ್ ಮಾವಿನಕಾಡು
ಆಷಾಢಮಾಸ ಯಾವುದೇ ಶುಭ ಕಾರ್ಯಗಳಿಗೆ ಸೂಕ್ತವಲ್ಲ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ “ಮೂಢನಂಬಿಕೆ ಆಚರಣೆ ಪ್ರತಿಬಂಧಕ ವಿಧೇಯಕ”ವನ್ನು ಬರಲಿರುವ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸದಿರಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.ಈ ವಿಧೇಯಕವನ್ನು ಬರಲಿರುವ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸುವ ಕುರಿತಂತೆ ಮೂಢ ನಂಬಿಕೆ ವಿರೋಧೀ ಹೋರಾಟ ಸಮಿತಿಯ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಮಾತನಾಡುತ್ತಾ ಮಾನ್ಯ ಮುಖ್ಯಮಂತ್ರಿಗಳು ಈ ವಿಷಯ ತಿಳಿಸಿದರು.ಇದೇ ಸಂಧರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು,ತಾವು ಈಗಾಗಲೇ ನಗರದ ಲಾಡ್ಜ್ ಒಂದರಲ್ಲಿ ವಾಸ್ತವ್ಯ ಹೂಡಿರುವ ಖ್ಯಾತ ಜ್ಯೋತಿಷಿಯೊಬ್ಬರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸಿದ್ದು ಅವರೂ ಸಹ ಈ ಬಾರಿ ಅಧಿಕ ಆಷಾಢ ಬಂದಿರುವುದರಿಂದ ವಿಧೇಯಕ ಮಂಡನೆ ಬೇಡ ಎಂದು ತಮಗೆ ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.ಅಲ್ಲದೇ ಹಾಗೊಂದು ವೇಳೆ ಆಷಾಢದಲ್ಲೇ ವಿಧೇಯಕ ಮಂಡಿಸಿದರೆ ತಮ್ಮ ಸ್ಥಾನಕ್ಕೆ ಕುತ್ತು ಬರಲಿದೆ ಮತ್ತು ರಾಜ್ಯದಲ್ಲಿ ದಲಿತರೊಬ್ಬರು ಮುಖ್ಯಮಂತ್ರಿಗಳಾಗುವ ಸಂಭವವಿದೆ.ಹಾಗೇನಾದರೂ ಆದಲ್ಲಿ ತಾವು ಮುಖ್ಯಮಂತ್ರಿ ಹುದ್ದೆಗಾಗಿ ಪಕ್ಷಾಂತರ ಮಾಡಿ,ಹಲವು ವರ್ಗಗಳನ್ನು ಸಮಾಜದ ಮುಖ್ಯ ವಾಹಿನಿಯಿಂದ ಬೇರ್ಪಡಿಸಿ,ಇದುವರೆಗೆ ಮಾಡಿದ ರಾಜಕೀಯವೆಲ್ಲವೂ ವ್ಯರ್ಥವಾಗಲಿದೆ ಎಂದು ಎಚ್ಚರಿಸಿದ್ದಾರೆ. ಹಾಗಾಗಿ ಸಧ್ಯಕ್ಕೆ ಈ ವಿಧೇಯಕವನ್ನು ಮಂಡಿಸದಿರಲು ನಿರ್ಧರಿಸಿರುವುದಾಗಿ ತಿಳಿಸಿದರು.
ಮತ್ತಷ್ಟು ಓದು 
ನ್ಯಾಯಕ್ಕಾಗಿ ಶೋಷಿತ ಯುವಕನ ಜೀವಪರ ಹೋರಾಟ
– ಪ್ರವೀಣ್ ಕುಮಾರ್ ಮಾವಿನಕಾಡು
ಬೆಂಗಳೂರು: ಕೇವಲ ಭಯೋತ್ಪಾದಕ ಎನ್ನುವ ಕ್ಷುಲ್ಲಕ ಕಾರಣಕ್ಕಾಗಿ ಯುವಕನೋರ್ವನಿಗೆ ಮನೆಯನ್ನು ಬಾಡಿಗೆಗೆ ನೀಡುವುದಿಲ್ಲ ಎಂದು ನಿರಾಕರಿಸಿದ ಘಟನೆ ಬೆಂಗಳೂರಿನಿಂದ ವರದಿಯಾಗಿದೆ.ಹೈದರಾಬಾದ್ ಮೂಲದ ಮನೋಜ್ ಕುಮಾರ್(ಹೆಸರು ಮತ್ತು ಧರ್ಮ ಬದಲಿಸಿದೆ) ಎನ್ನುವ ಯುವಕ ತಾನು ಗೆರೆ ನಗರದ ಮನೆಯ ಮಾಲೀಕರೊಬ್ಬರ ಬಳಿ ಬಾಡಿಗೆಗೆ ಮನೆ ಬೇಕೆಂದು ಕೇಳಿದಾಗ ಅವರು ಕೆಲವಾರು ಭಯೋತ್ಪಾದನೆ ಪ್ರಕರಣಗಳಲ್ಲಿ ಆರೋಪಿಯಾಗಿರುವ (ಕೇವಲ ಆರೋಪಿಯಾಗಿರುವ) ನನ್ನನ್ನು ಗುರುತಿಸಿದರು ಮತ್ತು ನಾವು ನಿಮ್ಮಂತವರಿಗೆ ಮನೆ ನೀಡುವುದಿಲ್ಲ ಹೇಳಿ ಬಾಗಿಲು ಮುಚ್ಚಿಕೊಂಡರು ಎಂದು ಆರೋಪಿಸಿದ್ದಾನೆ.
ಇಂತಹಾ ಘಟನೆ ರಾಜ್ಯದಲ್ಲಿ ಜಾತ್ಯತೀತ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ನಡೆದಿದ್ದು ದೇಶದಾದ್ಯಂತ ತೀವ್ರ ಸಂಚಲನ ಉಂಟುಮಾಡಿದೆ.
ನಿಜಕ್ಕೂ ಇದೊಂದು ದುರದೃಷ್ಟಕರ ಘಟನೆ ಎಂದು ಪ್ರತಿಕ್ರಿಯಿಸಿದ ಗೃಹ ಸಚಿವರು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಮೂರು ದಿನಗಳ ಒಳಗಾಗಿ ತನಗೆ ವರದಿ ನೀಡುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು,ತಪ್ಪಿತಸ್ತರು ಎಷ್ಟೇ ದೊಡ್ದವರಾಗಿದ್ದರೂ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮತ್ತಷ್ಟು ಓದು 
ಸುಳ್ಸುದ್ದಿ : ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವಿವಾದಕ್ಕೆ ಅನಿರೀಕ್ಷಿತ ತಿರುವು
– ಪ್ರವೀಣ್ ಕುಮಾರ್ ಮಾವಿನಕಾಡು
ಸೂರ್ಯ ನಮಸ್ಕಾರವನ್ನು ಮಾಡಿಯೇ ತೀರುತ್ತೇವೆ:ಅಸಾದುದ್ದೀನ್ ಒವೈಸಿ
ನವದೆಹಲಿ: ಜೂನ್ 21ರ ಅಂತಾರಾಷ್ಟ್ರೀಯ ಯೋಗ ದಿನ ನಿಮಿತ್ತ ಭಾನುವಾರ ರಜೆ ದಿನದಂದು ಕಡ್ಡಾಯವಾಗಿ ಉರ್ದು ಶಾಲೆಗಳು ಸೇರಿದಂತೆ ಎಲ್ಲ ಶಾಲೆಗಳು ತೆರೆದಿದ್ದು, ಅಂದು ಬೆಳಗ್ಗೆ ಶಾಲೆಗಳಲ್ಲಿ ಯೋಗ ಕಾರ್ಯಕ್ರಮ ಆಯೋಜಿಸಲಾಗುವುದು ಎಂಬ ಸರ್ಕಾರದ ಆದೇಶಕ್ಕೆ ಹಲವಾರು ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ವಿಶ್ವಹಿಂದೂ ಪರಿಷತ್,ಅಖಿಲ ಭಾರತೀಯ ಹಿಂದೂ ಮಹಾ ಸಭಾ,ಶ್ರೀರಾಮ ಸೇನೆ ಮೊದಲಾದ ಸಂಘಟನೆಗಳ ಮುಖಂಡರು ಸರಕಾರದ ಈ ಆದೇಶವು ನಮ್ಮ ಧಾರ್ಮಿಕ ನಂಬಿಕೆಗಳನ್ನು ಇತರ ಧರ್ಮದವರು ದುರುಪಯೋಗಪಡಿಸಿಕೊಳ್ಳಲು ವೇದಿಕೆಯನ್ನು ಕಲ್ಪಿಸಿಕೊಟ್ಟಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇತರ ಧರ್ಮದವರು ಏಕೇಶ್ವರವಾದಿಗಳಾಗಿದ್ದು, ಅವರುಗಳು ಕೇವಲ ಆ ದೇವರ ಎದುರು ಮಾತ್ರ ಬಾಗುತ್ತಾರೆ. ಆದ್ದರಿಂದ ನಾವು ದೇವರೆಂದು ಭಾವಿಸುವ ಸೂರ್ಯದೇವರಿಗೆ ಇತರ ಧರ್ಮದವರು ನಮಸ್ಕಾರ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರ ಎದುರು ತಮ್ಮ ಅಸಮಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ರವರು, ಹಿಂದೂಗಳಲ್ಲದವರು ಸೂರ್ಯ ನಮಸ್ಕಾರ ಮಾಡುವುದನ್ನು ನಾವೆಂದಿಗೂ ಸಹಿಸಲು ಸಾಧ್ಯವಿಲ್ಲ ಎಂದರು.
ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಮಣಿದ ಪ್ರಧಾನಿ ನರೇಂದ್ರ ಮೋದಿಯವರು ಕೇವಲ ಹಿಂದೂಗಳು ಮಾತ್ರ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಮತ್ತಷ್ಟು ಓದು 
ರಾಜ್ ಕುಮಾರ್: ನಾಡಿನ ಸೃಜನಶೀಲ ಆಯಾಮ
– ರಾಜಕುಮಾರ.ವ್ಹಿ.ಕುಲಕರ್ಣಿ,ಮುಖ್ಯಗ್ರಂಥಪಾಲಕ
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ
‘ಐದು ಕೋಟಿ ಕನ್ನಡಿಗರನ್ನು ಜಾಗೃತಗೊಳಿಸಲು ಇಡೀ ಕನ್ನಡ ಸಾಹಿತ್ಯ ವಲಯಕ್ಕೆ ಸಾಧ್ಯವಾಗದೇ ಇದ್ದಾಗ,ಕಲಾವಿದನಾಗಿ ರಾಜ್ ಕುಮಾರ್ ಪ್ರತಿಯೊಬ್ಬ ಕನ್ನಡಿಗನ ಮನೆ ಮತ್ತು ಮನಸ್ಸನ್ನು ತಲುಪಿದರು’ ಕನ್ನಡದ ವರನಟ ರಾಜ್ ಕುಮಾರ್ ಕುರಿತು ಡಾ.ಯು.ಆರ್.ಅನಂತಮೂರ್ತಿ ಅವರು ಹೇಳಿದ ಮಾತಿದು.ಈ ಮಾತಿನಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಮತ್ತು ಇದು ಮುಖಸ್ತುತಿಯೂ ಅಲ್ಲ.
ನಿಜ.ಯಾರಿಗೂ ಸಾಧ್ಯವಾಗದೇ ಇರುವುದನ್ನು ರಾಜ್ ಕುಮಾರ್ ಒಬ್ಬ ಕಲಾವಿದನಾಗಿ ಸಾಧಿಸಿದರು.ರಾಜ್ ಕುಮಾರ್ ಎಂದರೆ ಕನ್ನಡ ಸಿನಿಮಾ ಎನ್ನುವಷ್ಟರ ಮಟ್ಟಿಗೆ ಅವರು ಅನಿವಾರ್ಯವಾದರು.ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ರಾಜ್ ಕುಮಾರ್ ಪೂರ್ವದಲ್ಲಿ ಮತ್ತು ರಾಜ್ ಕುಮಾರ್ ನಂತರ ಎನ್ನುವ ರೀತಿ ಕನ್ನಡ ಸಿನಿಮಾ ಪ್ರಪಂಚದ ಅವಿಭಾಜ್ಯ ಅಂಗವಾದರು.ಕನ್ನಡ ಚಿತ್ರರಂಗದ ಈ ಮೇರುನಟ ಎಪ್ರಿಲ್ ೧೨ ರಂದು ತೀವ್ರ ಹೃದಯಾಘಾತದಿಂದ ನಿಧನರಾದಾಗ ಸಿನಿಮಾ ಲೋಕ ಮಾತ್ರವಲ್ಲ ಇಡೀ ಕನ್ನಡ ನಾಡು ಆಘಾತದಿಂದ ತತ್ತರಿಸಿ ಹೋಯಿತು.ಬದುಕಿದ್ದರೆ ಈ ದಿನ (ಏಪ್ರಿಲ್ ೨೪) ತಮ್ಮ ೮೬ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು.ಆದರೆ ಸಾವಿನ ರೂಪದಲ್ಲಿ ಬಂದ ವಿಧಿ ಅದಕ್ಕೆ ಅವಕಾಶವನ್ನೇ ಕೊಡಲಿಲ್ಲ.
ಪುಟ್ಟ ‘ಬೇಬಿ’ಯೊಳಗೆ ಎಷ್ಟೆಲ್ಲ ಕಥೆಗಳು…
– ಚಕ್ರವರ್ತಿ ಸೂಲಿಬೆಲೆ
‘ಬೇಬಿ’ ಚಿತ್ರ ಎರಡು ವಾರದಲ್ಲಿ ಹೆಚ್ಚುಕಡಿಮೆ ನೂ ರುಕೋಟಿ.ಕಾಲ್ಪನಿಕ ಕಥಾಹಂದರದ, ಹಿಂದೂದ್ವೇಷಿ ಹಣೆಪಟ್ಟಿಹೊತ್ತ ಪೀಕೆಗೆ ಸಿಕ್ಕ ಪ್ರಚಾರದ ಶೇಕಡಾ ಹತ್ತರಷ್ಟೂ ದೊರೆಯದ ಬೇಬಿಯ ಗೆಲುವು ಖುಷಿ ನೀಡುವಂತದ್ದೇ ಸರಿ. ಕೊನೆಯ ಕ್ಷಣದವರೆಗೂ ತುದಿಗಾಲಲ್ಲಿ ನಿಲ್ಲುವಂತೆ ಮಾಡಿ ಭಾರತದ ಗೂಢಚಾರ ವ್ಯವಸ್ಥೆ, ಪೋಲೀಸರ ಬಗ್ಗೆ ಹೆಮ್ಮೆ ಮೂಡುವಂತೆ ಮಾಡುವ ಬೇಬಿ ನಿಜಕ್ಕೂ ವಿಶೇಷ ಚಿತ್ರ.
ಬೇಬಿ ಗುಪ್ತ ಕಾರ್ಯಾಚರಣೆಗೆಂದು ರೂಪುಗೊಂಡ ಪುಟ್ಟ ಪೋಲಿಸ್‌ಪಡೆ. ಭಯೋತ್ಪಾದಕರನ್ನು ಮಟ್ಟಹಾಕಲು ಕಟಿಬದ್ಧವಾದ ಈ ಪಡೆ ಟರ್ಕಿಯಲ್ಲಿ ಕಾರ್ಯಾಚರಣೆ ಮಾಡುವುದರೊಂದಿಗೆ ಸಿನಿಮಾ ಶುರು. ಅಲ್ಲಿಂದಾಚೆಗೆ ನೇಪಾಳ, ಪಾಕಿಸ್ತಾನ ಕೊನೆಗೆ ಸೌದಿ ಅರೇಬಿಯಾದಲ್ಲಿ ಭಿನ್ನಭಿನ್ನ ಕಾರ್ಯಾಚರಣೆಗಳು. ನೀರಜ್ ಪಾಂಡೆಯ ಚಿತ್ರಕಥೆ, ನಿರ್ದೇಶನ ಅದೆಷ್ಟು ಬಿಗಿಯಾಗಿದೆಯೆಂದರೆ ಪ್ರಾಣ ಕುತ್ತಿಗೆಗೆ ಬಂದು ಸಿಕ್ಕಿಹಾಕಿಕೊಂಡುಬಿಡುತ್ತದೆ.
ಭಾರತೀಯ ಪೊಲೀಸರನ್ನು ಗಲಾಟೆ ಮುಗಿದಮೇಲೆ ಬರುವ ಅಬ್ಬೇಪಾರಿಗಳಂತೆ ಸಿನಿಮಾದಲ್ಲಿ ಇಷ್ಟುದಿನ ತೋರಿಸಲಾಗುತ್ತಿತ್ತು. ಮೊದಲಬಾರಿಗೆ ಅಮೆರಿಕನ್ ಸಿನಿಮಾಗಳಿಗೆ ಸರಿಸಾಟಿಯಾಗಿ ನಿಲ್ಲುವ ಅತ್ಯಂತ ನಿರ್ಭಾವುಕ ಸಿನಿಮಾ ಇದು. ಇಡಿಯ ಚಿತ್ರದಲ್ಲಿ ಒಂದೇ ಹಾಡು, ಭರಪೂರ ಸಾಹಸ. ಥಿಯೇಟರ್‌ನಿಂದ ಹೊರಬರುವಾಗ ಮಗುವೊಂದು ಅಪ್ಪನ ಬಳಿ ಇಂತಹ ಪೊಲೀಸ್ ಆಗಬೇಕೆಂದರೆ ಏನು ಮಾಡಬೇಕಪ್ಪ? ಎಂದು ಕೇಳುತ್ತಿತ್ತು. ಅಷ್ಟರಮಟ್ಟಿಗೆ ಸಿನಿಮಾ ಸಾರ್ಥಕ.
ಈ ಸಿನಿಮಾ ನೋಡುತ್ತಿರುವಾಗ ನನ್ನೊಳಗೆ ಹತ್ತಾರು ಸಿನಿಮಾ ಓಡುತ್ತಿತ್ತು. ಕಳೆದ ಡಿಸೆಂಬರ್ ೧೬ಕ್ಕೆ ಪೇಷಾವರದ ಶಾಲೆಯೊಂದರಲ್ಲಿ ತೆಹರೀಶ್-ಎ-ತಾಲಿಬಾನ್ ತಂಡ ದಾಳಿಗೈದು ಮಕ್ಕಳನ್ನು ಹತ್ಯೆಗೈದದ್ದು ನೆನಪಿದೆಯಲ್ಲ, ಅವತ್ತು ಪರ್ವೆಜ್ ಮುಶರಫ್‌ರಿಂದ ಹಿಡಿದು ಸರ್ತಾಜ್ ಅಜೀಜ್‌ರ ವರೆಗೆ ಪ್ರತಿಯೊಬ್ಬರೂ ಈ ಕೃತ್ಯದ ಹಿಂದೆ ಭಾರತದ ಕೈವಾಡ ಇದೆ ಎಂದು ಕೂಗಾಡಿದ್ದರು. ೧೯೭೧ರ ಡಿಸೆಂಬರ್ ೧೬ರ ನಂತರ ೨೦೧೪ರ ಡಿಸೆಂಬರ್ ೧೬ ಎಂಬ ಅನೇಕ ಟ್ವೀಟ್‌ಗಳು ಹರಿದಾಡಿದ್ದವು. ಮೊದಲನೆಯದು ಬಾಂಗ್ಲಾ ವಿಮೋಚನೆಯ ದಿವಸ ನೆನಪಿರಬೇಕಲ್ಲ!
PK ಎಂಬ ರಾಂಗ್ ನಂಬರ್
– ಸಂತೋಷ್ ಕುಮಾರ್ ಪಿ.ಕೆ
ಅಮೀರ್ ಖಾನ್ ಎಂದರೆ ವಿಭಿನ್ನ ಶೈಲಿಯ ಚಿತ್ರಗಳನ್ನು ತೆರೆಗೆ ತರುವ ಸಾಮರ್ಥ್ಯ ಉಳ್ಳವರು ಎಂಬುದೇ ಬಹುತೇಕರ ಭಾವನೆ, ಅದು ಸತ್ಯ ಕೂಡ. ಈಗ ಬಂದಿರುವ ಪೀಕೆ ಚಿತ್ರ ಕೆಲವು ತಪ್ಪುಗ್ರಹಿಕೆಗಳ ಆಧಾರದ ಮೇಲೆ ಹೋಗುತ್ತದೆ ಎಂಬುದು ಬಿಟ್ಟರೆ ಅದನ್ನೊಂದು ಉತ್ತಮ ಲವ್ ಸ್ಟೋರಿ ಆಧಾರಿತ ಚಿತ್ರವನ್ನಾಗಿ ನಿರ್ದೇಶಕರು ಮಾಡಬಹುದಿತ್ತು ಎಂಬುದು ನನ್ನ ಅನಿಸಿಕೆ. ಹಾಗಾದರೆ ಆ ತಪ್ಪುಗ್ರಹಿಕೆಗಳು ಏನು?
1. ಭಾರತೀಯ ಸಂಪ್ರದಾಯ ಮತ್ತು ಸೆಮೆಟಿಕ್ ರಿಲಿಜನ್ ಗಳು ಭಗವಾನ್ ಮತ್ತು ಗಾಡ್ ಎಂದು ಮಾತನಾಡುವಾಗ ಇರುವ ವ್ಯತ್ಯಾಸವನ್ನು ಗುರುತಿಸಿಕೊಳ್ಳದಿರುವುದು. ನಮ್ಮಲ್ಲಿ ಸಾಮಾನ್ಯವಾಗಿ ದೇವರೇ ಕಾಪಾಡಬೇಕು, ದೇವರು ನಿನಗೆ ಕರುಣಿಸಲಿ, ಹೀಗೆ ಇತ್ಯಾದಿಗಳನ್ನು ದೇವರಿಗೆ ಆರೋಪಿಸುವಾಗ, ಅಕ್ಷರಶಃ ದೇವರನ್ನೇ ರೆಫರೆನ್ಸ್ ಪಾಯಿಂಟ್ ಆಗಿ ಇಟ್ಟುಕೊಂಡಿರುತ್ತೇವೆಯೆ? ಅದು ಹೇಳುವವರಿಗೂ ಸ್ಪಷ್ಟವಿರುವುದಿಲ್ಲ, ಕೇಳಿಸಿಕೊಳ್ಳುವವರಿಗೂ ತಿಳಿದಿರುವುದಿಲ್ಲ,. ಆಡುವ ಮಾತಿಗೂ ಕ್ರಿಯೆಗೂ ಕೆಲವು ಬಾರಿ ನಮ್ಮ ಸಂಸ್ಕೃತಿಯಲ್ಲಿ ಸಂಬಂಧವೇ ಇರುವುದಿಲ್ಲ, ದೇವರು ಇದ್ದಾನೆ ಎಂದರೆ ಇದ್ದಾನೆ ಎಂದಷ್ಟೇ..ಅವನು ಎಲ್ಲಿದ್ದಾನೆ, ಹೇಗಿದ್ದಾನೆ ಎಂಬುದು ನಮ್ಮ ಪ್ರಶ್ನೆಯೂ ಅಲ್ಲ ಆಸಕ್ತಿಯೂ ಅಲ್ಲ. ಆದರೆ ಇದನ್ನೇ ರಿಲಿಜನ್ ಸಮಾಜಗಳಲ್ಲಿ ಬಳಸಿದರೆ ಅದಕ್ಕೆ ನಿರ್ದಿಷ್ಟ ಅರ್ಥವೂ ಇದೆ, ಅದನ್ನು ಹುಡುಕಲು (ತೀರ ಸಿಗುವುದಿಲ್ಲ ಎಂದು ತಿಳಿದಿದ್ದರೂ) ಸಹಾಯ ಮಾಡುವ ಸಂಸ್ಥೆಗಳು ಹಾಗೂ ಗ್ರಂಥಗಳು ದೊರಕುತ್ತವೆ. ಇಲ್ಲಿ ಭಾಷೆಯ ಒಕ್ಕಣೆಯ ಆಧಾರದ ಮೇಲೆ ಏನನ್ನು ಹೇಳುತ್ತಿದ್ದಾರೆ ಎಂಬುದನ್ನು ಅರ್ಥೈಸಿಕೊಳ್ಳುವುದಕ್ಕಿಂತ ಏನನ್ನು ಹೇಳುತ್ತಿಲ್ಲ ಎಂಬುದು ಅರ್ಥೈಸಿಕೊಳ್ಳುವುದು ಸವಾಲಿನ ಕೆಲಸ. ಏಲಿಯನ್ ಮನುಷ್ಯನಿಗೆ ಭಾಷೆ ತಿಳಿದ ಮಾತ್ರಕ್ಕೆ ಸಂಸ್ಕೃತಿಯೇ ಅರ್ಥವಾಗಿಬಿಡುತ್ತದೆ ಎಂಬುದು ನಿರ್ದೇಶಕರ ತಪ್ಪುಗ್ರಹಿಕೆಗೆ ಒಂದು ನಿದರ್ಶನವಾಗಿದೆ.
ಹೊಸದನ್ನೇನೋ ಕಂಡಂತೆ…!!
– ಅವಿನಾಶ್ ಜಿ ರಾಮ್
ವಿಚಿತ್ರವಾಗಿ ಕಾಡುವ ರಿಚ್ಚಿ, ಮೌನವಾಗಿಯೇ ಕೊಲ್ಲುವ ಮುನ್ನಾ ಅಲಿಯಾಸ್ ಪ್ರಣಯರಾಜ.. ನೋಡುವವರ ಕಣ್ಣು ತೇವ ಮಾಡಲೇಂದೆ ಕಾದು ಕುಳಿತ ರತ್ನಕ್ಕ ಮತ್ತವಳ ಮಗ ರಾಘು.. ಪಾಪ ಎನಿಸುವ ಬಾಲು.. ಕಣ್ಣೆದುರು ಬಂದಾಗೆಲ್ಲಾ ಬೆರಗು ಮೂಡಿಸುವ ಡೆಮಾಕ್ರಸಿ.. ಹೀಗೆ ಪಟ್ಟಿ ಮಾಡುತ್ತ ಹೋದರೆ ಉಳಿದವರ ಗುಂಪು ದೊಡ್ಡದಾಗುತ್ತ ಹೋಗುತ್ತದೆ..
ಅತ್ಯಂತ ವಿಭಿನ್ನ ಆಯಾಮಗಳೊಂದಿರುವ ಈ ಸಿನಿಮಾ ನನ್ನ ಕುತೂಹಲಕ್ಕೆ ಮೋಸ ಮಾಡಿಲ್ಲ. ಪ್ರತಿ ಪ್ರೇಮ್‌ನಲ್ಲೂ ತನ್ನ ಸಹಿ ಉಳಿಸಿರುವ ಕರಮ್ ಚಾವ್ಲಾರ ಕ್ಯಾಮೆರಾ ಕೈಚಳಕ, ಇಡೀ ಸಿನಿಮಾದಲ್ಲೊಂದು ಯಶಸ್ವಿ ಪಾತ್ರವಾಗಿರುವ ಅಜನೀಶ್ ರ ಸಂಗೀತ..:) ಕತ್ತರಿ ಪ್ರಯೋಗದಲ್ಲಿ ಕುಶಲತೆ ತೋರಿರುವ ಸಚಿನ್. ಈ ಎಲ್ಲಾ ತಂತ್ರಜ್ಞರ ತಾಂತ್ರಿಕತೆಯಲ್ಲಿ ಮಿಂದಿದೆ ‘ಉಳಿದವರು..‘
ತಂಡದ ನಾಯಕನಾಗಿರುವ ರಕ್ಷಿತ್ ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನದ್ದು ನೀಡಬಲ್ಲೇ ಎಂದು ಸಾಬೀತು ಮಾಡಿದ್ದಾರೆ. ಚಿತ್ರಕಥೆಯ ಶೈಲಿ ಭಿನ್ನವಾಗಿದೆ. ವರ್ಲ್ಡ್ ಸಿನಿಮಾಗಳ ಪ್ರಭಾವ ಅವರಿಗಾಗಿದೆ. ರಕ್ಷಿತ್ ಬರೀ ನಟನಾಗಿ ಮಾತ್ರ ಉಳಿದು ಹೋಗಬಾರದಾಗಿ ವಿನಂತಿ..
ಇನ್ನೂ ಲಾಭಾಂಶಗಳ ಲೆಕ್ಕಾಚಾರ ಮಾಡದೇ ಚಿತ್ರ ನಿರ್ಮಾಣ ಮಾಡಿದ ಸಿಂಪಲ್ ಸುನಿ ಮತ್ತು ತಂಡಕ್ಕೆ ಕೃತಜ್ಞತೆ ಹೇಳಲೇಬೇಕು..ಈ ಚಿತ್ರ ಅರ್ಥ ಆಗ್ತಿಲ್ಲ ಅನ್ನೋ ಕೊರಗು ಹಾಗೂ ವಿಮರ್ಶೆಗಳು ಎಲ್ಲೆಡೆ ಉಚಿತವಾಗಿ ಕೇಳಿ ಬರುತ್ತಿವೆ. ಇದುವರೆಗೂ ಎಂತೆಂಥ ಅನರ್ಥಗಳು, ಹೊಲಸು ತುಂಬಿರುವ ಚಿತ್ರಗಳು ಕನ್ನಡದಲ್ಲಿ ಬಂದಿವೆ. ಅಂತವುಗಳನ್ನು ಗೆಲ್ಲಿಸಿ ಯಶಸ್ವಿ ಚಿತ್ರ ಎಂಬ ಹಣೆ ಪಟ್ಟಿ ಕೊಟ್ಟವರು ನಾವು ಇನ್ನು ಈ ‘ ಉಳಿದವರನ್ನು ಅರಗಿಸಿಕೊಳ್ಳಲಾಗಲಿಲ್ಲವೆಂದರೇ ಹೇಗೆ..?
ಜೋಶಿಯವರು ಕಂಡಂತೆ.. ಉಳಿದವರು ಕಂಡಂತೆ.. ಹೀಗಂತೆ…
-ಶ್ರೀವತ್ಸ ಜೋಶಿ
ಬೇಡಾ ನಂಬಬೇಡಾ… ಜೀವ ಹೋದರೂ ಕನ್ನಡ ಪತ್ರಿಕೆಗಳಲ್ಲಿನ ಚಿತ್ರವಿಮರ್ಶೆಗಳನ್ನು ನಂಬಬೇಡ.
‘ಉಳಿದವರು ಕಂಡಂತೆ’ ಬಗ್ಗೆ ಅವು ಬರೆದಿರೋ ವಿಮರ್ಶೆಯನ್ನಂತೂ ದೇವರಾಣೆಗೂ ನಂಬಬೇಡ.
ಅದರಲ್ಲೂ ಕಪ್ರ, ಪ್ರವಾ, ವಿಕ, ವಿವಾ ಗಳ ಪ್ರಲಾಪವನ್ನು ಕೇಳಲೇಬೇಡ. ಉದಯವಾಣಿಯಲ್ಲಿನ ವಿಮರ್ಶೆಯನ್ನು ಓದದೆ ಬಿಡಬೇಡ.
ಇದು, ಸದಭಿರುಚಿಯ ಕನ್ನಡ ಸಿನೆಮಾ ಪ್ರೇಕ್ಷಕನಿಗೆ ವಾಷಿಂಗ್ಟನ್ ಡಿಸಿಯಿಂದ ಒಬ್ಬ ಶ್ರೀ(ವತ್ಸ)ಸಾಮಾನ್ಯ ಕನ್ನಡಿಗನ ಕಿವಿಮಾತು.
ಭಾನುವಾರ (ಮಾರ್ಚ್ 30) ಬೆಳಿಗ್ಗೆ ಹತ್ತು ಗಂಟೆಗೆ ಇಲ್ಲಿನ AMC ಸಿನೆಮಾ ಕಾಂಪ್ಲೆಕ್ಸ್‌ನಲ್ಲಿ ’ಉಳಿದವರು ಕಂಡಂತೆ’ ಸಿನೆಮಾ ಪ್ರದರ್ಶನ ಇತ್ತು. ಅಮೆರಿಕದ ಇತರ ನಾಲ್ಕು ಕಡೆಗಳಲ್ಲಿ (ನ್ಯೂಜೆರ್ಸಿ, ಶಿಕಾಗೊ, ಡೆಟ್ರಾಯಿಟ್ ಮತ್ತು ಕ್ಯಾಲಿಫೋರ್ನಿಯಾ) ಸಹ ಈ ಚಿತ್ರ ಬಿಡುಗಡೆಯಾಯ್ತು. ಕನ್ನಡ ಚಲನಚಿತ್ರ ಪ್ರದರ್ಶನ ಇಲ್ಲಿ ಅಪರೂಪವೆಂದೇ ಹೇಳಬೇಕು, ಅದರಲ್ಲೂ ’ಉಳಿದವರು ಕಂಡಂತೆ’ಯಂಥ ವಿಭಿನ್ನ ವಿಶಿಷ್ಟ, “ಈರೀತಿಯದು ಕನ್ನಡದಲ್ಲಿ ಇದೇ ಮೊದಲು” ಎನ್ನಲಾದ ಚಿತ್ರ, ಅಲ್ಲಿ ಕರ್ನಾಟಕದಲ್ಲಿ ಬಿಡುಗಡೆಯಾದಾಗಲೇ ಇಲ್ಲೂ ಪ್ರದರ್ಶನ ಕಾಣುತ್ತಿರುವುದು ನಮಗೆಲ್ಲ ಸಂತೋಷದ, ಹೆಮ್ಮೆಯ ವಿಚಾರ. ವಾಷಿಂಗ್ಟನ್ ಡಿಸಿಯಲ್ಲಿನ ಚಿತ್ರಮಂದಿರ ಹೆಚ್ಚೂಕಡಿಮೆ ಭರ್ತಿಯಾಗಿತ್ತು, ಇತ್ತೀಚೆಗೆ ಇಲ್ಲಿಗೆ ಬಂದ ನವಯುವಕರು, ಐಟಿಹುಡುಗರು ತುಂಬಿಕೊಂಡಿದ್ರು. ನಾವೆಲ್ಲ ಚಿತ್ರವನ್ನು ತುಂಬ ಇಷ್ಟಪಟ್ಟೆವು.
’ಉಳಿದವರು ಕಂಡಂತೆ’ ಚಿತ್ರದ ವಿಮರ್ಶೆ ಕನ್ನಡದ ಪ್ರಮುಖ ದಿನಪತ್ರಿಕೆಗಳ ಶನಿವಾರದ ಸಂಚಿಕೆಗಳಲ್ಲಿ ಪ್ರಕಟವಾಗಿದ್ದನ್ನು ನಾನು ಗಮನಿಸಿದ್ದೆ, ಓದಿದ್ದೆ. ಅದೇನೂ ನನ್ನ ಮೇಲೆ ಪ್ರಭಾವ ಬೀರಿತ್ತು ಅಂತಲ್ಲ. ಆದರೆ ನಾನೇ ಸಿನೆಮಾ ನೋಡಿ ಬಂದಮೇಲೆ ಆ ವಿಮರ್ಶೆಗಳು (ಒಂದನ್ನು ಹೊರತುಪಡಿಸಿ) ಎಂಥ ಪ್ರಮಾಣದಲ್ಲಿ ದಾರಿತಪ್ಪಿಸುವಂಥವಾಗಿವೆ, ವಾಸ್ತವಕ್ಕೆ ಅದೆಷ್ಟು ದೂರವಾಗಿವೆ ಎಂದು ಅರಿತು ಆಘಾತವಾಯಿತು. ’ಉಳಿದವರು ಕಂಡಂತೆ’ಯಂಥ ಒಂದು ಉತ್ತಮ ಪ್ರಯತ್ನ/ಪ್ರಯೋಗದ ಉನ್ನತ ಮಟ್ಟದ ಮೌಲ್ಯವನ್ನು ಅರಿಯಲಾರದೆ “ದ್ರಾಕ್ಷಿ ಹುಳಿಯಾಗಿದೆ” ಎಂದು ಮುಖ ಸಿಂಡರಿಸಿ ಓಡಿದ ನರಿಯನ್ನು ಅವು ನನಗೆ ನೆನಪಿಸಿದವು.
“ಉಳಿದವರು ಕಂಡಂತೆ” – ಅವರಿವರು ಕಂಡಂತೆ
– ವಸಂತ ಗಿಳಿಯಾರ್ ಕಂಡಂತೆ
ಅವರಿವರು ಕಂಡಂತೆ “ಉಳಿದವರು ಕಂಡಂತೆ” ಚಿತ್ರ ಹೇಗಿದೆಯೋ ಎಂಬುದರ ಬಗ್ಗೆ ನಾನು ಮಂಡೆಕೆಡಿಸಿಕೊಳ್ಳಲಾರೆ.. ತಾಂತ್ರಿಕವಾಗಿ ಮೊದಲ ನಿರ್ದೇಶನದಲ್ಲೆ ಗೆದ್ದಿದ್ದಾರೆ ರಕ್ಷಿತ್ ಎಂದು ನೇರವಾಗಿ ಮಾರ್ಕ್ ಕೊಡುತ್ತಿದ್ದೇನೆ. ಮಿಕ್ಕುಳಿದಂತೆ ಭಾಷೆ ಅರ್ಥವಾಗುವುದಿಲ್ಲ ಎಂದು ಮಗುಮ್ಮಾಗಿ ದೂರುವವರಿಗೆ ನಾನು ಕೇಳುವುದು ಇಷ್ಟನ್ನೆ ಒಂದು ಚೂರೂ ಅರ್ಥವಾಗದಿದ್ದರೂ ಕೆಲವರು english,ತಮಿಳು,ತೆಲುಗು ಚಿತ್ರವನ್ನ ನೋಡುವುದಿಲ್ಲವೇ? ಇದು ನಮ್ಮದೇ ರಾಜ್ಯದ ಒಂದು ಪ್ರದೇಶದ ವಿಶಿಷ್ಟವಾದಂತ ಚಂದದ ಕುಂದಗನ್ನಡವೆಂಬ ಭಾಷೆ. ಅರ್ಥವಾಗದಿದ್ದರೂ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಿ.. ನಿಮ್ಮ ಪ್ರಯತ್ನ ವ್ಯರ್ಥವಾಗದು..ಯಾಕೆಂದರೇ ನಮ್ಮದೇ ರಾಜ್ಯದಲ್ಲಿ ಕನ್ನಡ ಭಾಷೆ ಯಾವ ಯಾವ ರೀತಿಯಲ್ಲಿದೆ ಎಂಬುದು ನಿಮ್ಮ ಗ್ರಹಿಕೆಗೆ ನಿಲುಕುತ್ತದೆ.. “ಉಳಿದವರು ಕಂಡಂತೆ” ಚಿತ್ರ ನನಗೆ ನನ್ನ ಬಾಲ್ಯದ ಬದುಕನ್ನ ನೆನಪಿಸಿತು.. ರಿಚ್ಚಿ ಪಾತ್ರವನ್ನ ಕಂಡು ನನಗೆ ನನ್ನ ಬಾಲ್ಯದ ಗೆಳೆಯ ಹಂದಾಡಿಯ ರಾಬರ್ಟ್ ನೆನಪಾದ. ಡೆಮಕ್ರಶಿ ನನ್ನ ಬಾಲ್ಯದ ಅವತಾರದ ಚಿತ್ರಣವೆಂದೆನಿಸಿತು..
“ಪೇಪರ್ ಪೇಪರ್ ಮೆಡಿಸಿನ್ ಪೇಪರ್” ಎಂಬ ಹಾಡು ಬಾಲ್ಯದಲ್ಲಿ ದನಕಾಯುವಾಗ ನಮ್ಮ ಗುಂಪಿನಲ್ಲಿ ನಾವು ಹಾಡಿಕೊಳ್ಳುತ್ತಿದ್ದ ಚಲನಚಿತ್ರ ಗೀತೆಯ ನೆನಪು ತಂದರೆ ವಿಟ್ಲಪಿಂಡಿಯ ಹುಲಿವೇಶ ಕಣ್ಣ ಮುಂದೆ ಹಾದು ಹೋದಂತಾಯಿತು.. ಊರಿಗೆ ಕೇವಲ ೪೦೦ ಕಿಲೋಮೀಟರ್ ದೂರದಲ್ಲಿರುವ ನನಗಿಂತ ಸಾವಿರಾರು ಕಿಲೋಮೀಟರ್ ದೂರದಲ್ಲಿರುವವರಿಗೆ ಅಥವ ಊರಿನಿಂದ ದೂರವೆ ಉಳಿದವರಿಗೆ ಇದು ಮತ್ತಷ್ಟು ಆಪ್ತವಾಗಿ ಕಾಣಿಸ ಬಹುದು. ಕಥೆಯೆ ಬಗ್ಗೆ ನಾನು ಹೆಚ್ಚು ತಲೆಕೆಡಿಸಿ ಕೊಳ್ಳಲಿಲ್ಲ ಘಟಿಸುವ ಘಟನೆಗಳು ಒಂದನ್ನೊಂದು ಬೆನ್ನತ್ತುವ ರೀತಿ ಸೊಗಸಾಗಿದ. ಚಿತ್ರ ಮುಗಿಸಿ ಹೊರಬಂದ ಮೇಲೆ ನನ್ನೊಳಗೆ ಕಥೆ ಆರಂಭವಾಗಲು ಆರಂಬಿಸಿತು.. ಒಂದೊಂದು ಪಾತ್ರದಲ್ಲು ಒಂದೊಂದು ಕಥೆ ಅರಳ ತೊಡಗಿತು. ಚಿತ್ರ ಒಳಗೊಂಡ ಸಂಗೀತ ಸಾಹಿತ್ಯ ನವಿರು ಭಾವದ ಅಲರು ಕಂಪನವನ್ನ ಹುಟ್ಟಿಸುತ್ತದೆ..” ಮಳೆ ಮರೆತು ಹಸಿರಾಗಿ ನಿಂತಾಗ ಈ ಭೂಮಿ ..ಸಲಹೇನೆ ಕೊಡಬೇಡ ದೇವರೆ ನೀನಿಲ್ಲಿ ಹಂಗಾಮಿ.. ಹಾಡು ಗುಂಗಿನಂತೆ ಕಾಡುತಿದೆ.. ಹೌದು ಉಳಿದವರು ಕಂಡಂತೆ ಒಂದು ಉತ್ತಮವಾದ ಚಿತ್ರ.. ಕನ್ನಡಕ್ಕೊಂದು ಪ್ರಯೋಗಾತ್ಮಕ ಚಿತ್ರ ಎಂದು ಹೇಳಬಲ್ಲೆ.. ರಕ್ಷಿತ್ ಮತ್ತು ತಂಡಕ್ಕೆ ನನ್ನದೂಂದು ಅಭಿನಂದನೆ…
*** *** *** ಮತ್ತಷ್ಟು ಓದು 




