ಜೀವನ ಪ್ರೀತಿಯ ಪ್ರತಿಬಿಂಬ – ಗೋಲ್ಡ್ ಅಂಡ್ ಕಾಪರ್
– ಡಾ ಅಶೋಕ್ ಕೆ ಆರ್
ಸಿನಿಮಾ ಅಂದ್ರೆ ಹೀರೋ ಹೀರೋಯಿನ್ ವಿಲನ್ ಇರಲೇಬೇಕೆಂಬ ಮನೋಭಾವವೇ ಹೆಚ್ಚು. ವಿಲನ್ ಇದ್ದ ಮೇಲೆ ಫೈಟು, ಹೀರೋ ಹೀರೋಯಿನ್ ಇದ್ದ ಮೇಲೆ ಒಂದಷ್ಟು ಸಾಂಗ್ಸು ಕಂಪಲ್ಸರಿ! ಪರದೇಶದ ಚಿತ್ರಗಳನ್ನು ವೀಕ್ಷಿಸಿದಾಗ ಹಾಡುಗಳಿರದೇ ಇದ್ದರೂ ಉಳಿದ ಅಂಶಗಳು ಹೆಚ್ಚು ಕಡಿಮೆ ಇದ್ದೇ ಇರುತ್ತವೆ. ಇವೆಲ್ಲ ಸಿದ್ಧಸೂತ್ರಗಳನ್ನು ತಿರಸ್ಕರಿಸಿ ಹೊಸತೊಂದು ನಿರೂಪಣೆಯ ಚಿತ್ರಗಳು ಅವಾಗಿವಾಗ ನಿರ್ಮಾಣವಾಗುತ್ತವೆ. ಅಂಥದೊಂದು ಇರಾನಿ ಚಿತ್ರ “ಗೋಲ್ಡ್ ಅಂಡ್ ಕಾಪರ್”. ಇಲ್ಲೂ ಹೀರೋ ಇದ್ದಾನೆ ಹೀರೋಯಿನ್ ಇದ್ದಾಳೆ ವಿಲನ್ ಕೂಡ ಇದೆ! ಇದೆ ಯಾಕೆಂದರೆ ವಿಲನ್ ಒಂದು ಖಾಯಿಲೆಯ ರೂಪದಲ್ಲಿ ಹೀರೋನ ಮನಸ್ಸಿನ ರೂಪದಲ್ಲಿ ಇದೆಯೇ ಹೊರತು ವಿಲನ್ ಒಬ್ಬ ವ್ಯಕ್ತಿಯ ರೂಪದಲ್ಲಿಲ್ಲ. ಹೋಮಾಯುನ ಅಸಾದಿಯನ್ (Homayoun Asadian) ನಿರ್ದೇಶನದ ಪರ್ಷಿಯನ್ ಭಾಷೆಯ ಈ ಚಿತ್ರ ಅಪರೂಪದ ಖಾಯಿಲೆಯೊಂದು ಹೇಗೆ ಒಂದು ಇಡೀ ಕುಟುಂಬದ ಜೀವನ ರೀತಿಯನ್ನು ಅಸ್ತವ್ಯಸ್ತಗೊಳಿಸುತ್ತದೆ ಎಂದು ತಿಳಿಸುವುದರ ಜೊತೆಜೊತೆಗೆ ಆ ಮಾರಣಾಂತಿಕ ಖಾಯಿಲೆ ಮನುಷ್ಯನ ಮನದ ಒಳಪದರದಲ್ಲಿ ಕಳೆದುಹೋಗಿದ್ದ ಸೂಕ್ಷ್ಮತೆಯನ್ನು ಹೊರತೆಗೆಯುವುದರಲ್ಲಿಯೂ ಸಹಕರಿಸುತ್ತದೆ!ಸೃಜನಶೀಲತೆಯಿಲ್ಲದ ಜನರ ಹಟವಿದು – ಡಬ್ಬಿ೦ಗ್ ವಿರೋಧ
– ಗುರುರಾಜ್ ಕೊಡ್ಕಣಿ
ಕನ್ನಡ ಚಿತ್ರರ೦ಗದಲ್ಲಿ ಮತ್ತೆ ಡಬ್ಬಿ೦ಗ್ ವಿವಾದದ ಅಲೆ ಭುಗಿಲೆದ್ದಿದೆ.ಚಿತ್ರರ೦ಗದಲ್ಲೇ ಡಬ್ಬಿ೦ಗ್ ವಿವಾದದ ಕುರಿತು ಭಿನ್ನಾಭಿಪ್ರಾಯಗಳಿವೆ.ಹೆಚ್ಚಿನ ಸಿನಿಮಾ ಮ೦ದಿ ಡಬ್ಬಿ೦ಗ್ ವಿರೋಧಿಗಳಾಗಿದ್ದರೆ ,’ಮಠ’ ಸಿನಿಮಾ ಖ್ಯಾತಿಯ ನಿರ್ದೇಶಕ ಗುರು ಪ್ರಸಾದರ೦ಥವರು ಡಬ್ಬಿ೦ಗ್ ಪರವಾಗಿ ನಿ೦ತಿದ್ದಾರೆ.ನಟ ಶಿವ ರಾಜಕುಮಾರ ನೇತೃತ್ವದಲ್ಲಿ ಡಬ್ಬಿ೦ಗ್ ವಿರೋಧಿ ನಟರು, ನಿರ್ದೇಶಕರು ಚಳುವಳಿಯೆ೦ದು ಬಿದಿಗಿಳಿಯುವ ಎಲ್ಲಾ ಸಾಧ್ಯತೆಗಳಿವೆ.ಈ ಮಧ್ಯೆ ಡಬ್ಬಿ೦ಗ್ ಸಮರ್ಥಿಸಿದರು ಎ೦ಬ ಕಾರಣಕ್ಕೆ ಜ್ನಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚ೦ದ್ರಶೇಖರ ಕ೦ಬಾರರನ್ನು ಅವಮಾನಿಸಿ ಚಿತ್ರನಟ ’ನೆನಪಿರಲಿ’ ಪ್ರೇಮ ವಿವಾದಕ್ಕೀಡಾಗಿದ್ದಾರೆ.ಸಧ್ಯಕ್ಕ೦ತೂ ಡಬ್ಬಿ೦ಗ್ ವಿವಾದ ಶೀಘ್ರದಲ್ಲಿ ಮುಗಿಯುವ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ ಡಬ್ಬಿ೦ಗ್ ವಿರೋಧಿಗಳ ವಾದಗಳನ್ನೊಮ್ಮೆ ಗಮನಿಸಿ.ಕನ್ನಡ ಚಿತ್ರರ೦ಗಕ್ಕೆ ಡಬ್ಬಿ೦ಗ್ ಕಾಲಿಟ್ಟರೆ,ಕನ್ನಡದ ಸ೦ಸ್ಕೃತಿ ಹಾಳಾಗಿ ಹೋಗುತ್ತದೆ ಎನ್ನುವುದು ಇವರ ಬಹುಮುಖ್ಯ ವಾದ.ಅಲ್ಲದೆ ಡಬ್ಬಿ೦ಗ್ ಸಮ್ಮತಿಸಲ್ಪಟ್ಟರೆ ಕನ್ನಡದ ಚಿತ್ರರ೦ಗದ ಕಲಾವಿದರು ಕೆಲಸವಿಲ್ಲದ೦ತಾಗಿ ಬೀದಿಗೆ ಬ೦ದುಬಿಡುತ್ತಾರೆ,ಹಾಗಾಗಿ ಡಬ್ಬಿ೦ಗ್ ನಿಷೇಧ ಆನಿವಾರ್ಯವೆ೦ದು ಕೆಲವರು ವಾದಿಸುತ್ತಾರೆ.ಪರಭಾಷಾ ಚಿತ್ರಗಳು ಕನ್ನಡಕ್ಕೆ ಡಬ್ ಆದರೆ,ಆ ಸಿನಿಮಾಗಳಲ್ಲಿನ ಆದ್ಧೂರಿ ಸೆಟ್,ದೃಶ್ಯ ವಿಜೃ೦ಭಣೆಯ ಮು೦ದೆ ಕನ್ನಡದ ಸಿನಿಮಾಗಳು ಪೈಪೋಟಿ ನೀಡಲಾಗದೆ ಸೋತು ಹೋಗಬಹುದೆನ್ನುವುದು ಉಳಿದ ಕೆಲವರ ಅ೦ಬೋಣ.ಒಟ್ಟಾರೆಯಾಗಿ,ಡಬ್ಬಿ೦ಗ್ ವಿರೋಧಿಗಳ ತಿರುಳಿಲ್ಲದ ಈ ವಾದಗಳು ಅವರ ಹತಾಶ ಮನಸ್ಥಿತಿಗೆ ಸಾಕ್ಷಿಯಾಗಬಲ್ಲವೇ ಹೊರತು ಬೇರೆನನ್ನೂ ನಿರೂಪಿಸಲಾರವು.
6-5=2 ಚಿತ್ರ ವಿಮರ್ಶೆ
-ಡಾ.ಅಶೋಕ್ ಕೆ ಆರ್
ಎರಡು ವಾರದ ಮುಂಚೆ 6-5=2 ಎಂಬ ವಿಚಿತ್ರ ಹೆಸರಿನ ಚಿತ್ರದ ಪೋಸ್ಟರನ್ನು ಪತ್ರಿಕೆಗಳಲ್ಲಿ ನೋಡಿ ನಕ್ಕುಬಿಟ್ಟಿದ್ದೆ! ‘ಏನ್ ಕರ್ಮಾರೀ ಏನೇನೋ ಹೆಸರಿಟ್ಟು ಫಿಲ್ಮ್ ತೆಗೀತಾರೆ’ ಎಂದು ನಗಾಡಿದ್ದೆ! ನಾಲ್ಕು ದಿನದ ಹಿಂದೆ ಮತ್ತೆ ಅದೇ ಚಿತ್ರದ ಜಾಹೀರಾತನ್ನು ಪತ್ರಿಕೆಯಲ್ಲಿ ನೋಡಿದಾಗ ಗಮನಿಸಿದೆ, ಸ್ವರ್ಣಲತಾ ಪ್ರೊಡಕ್ಷನ್ಸ್ ಮತ್ತು A video shot by Late Ramesh ಎಂಬೆರಡು ವಾಕ್ಯಗಳನ್ನು ಬಿಟ್ಟರೆ ಜಾಹೀರಾತಿನಲ್ಲಿ ಮತ್ತೇನೂ ಇರಲಿಲ್ಲ! ಅಲಲಾ! ಇದೇನೋ ಹೊಸ ಗಿಮಿಕ್ ಮಾಡ್ತಿದ್ದಾರಲ್ಲ ಈ ಫಿಲಮ್ನೋರು ಎಂಬ ಸಣ್ಣ ಕುತೂಹಲ ಹುಟ್ಟಿತು. ನಿರ್ದೇಶಕರ ಹೆಸರಿಲ್ಲ, ತಂತ್ರಜ್ಞರ ಹೆಸರಿಲ್ಲ, ಕಲಾವಿದರ ಹೆಸರಿಲ್ಲ, ನೈಜ ವೀಡೀಯೋವೊಂದು ದೊರಕಿದ್ದು ಅದನ್ನೇ ಚಿತ್ರಮಂದಿರದಲ್ಲಿ ಪ್ರದರ್ಶಿಸುತ್ತಿದ್ದೇವೆ ಎಂಬ ಸಾಲುಗಳು ಬೇರೆ. ಮ್… ಇವರು ಮಾಡಿರೋ ಗಿಮಿಕ್ಕಿಗಾದರೂ ಚಿತ್ರವನ್ನೊಮ್ಮೆ ನೋಡಬೇಕು ಎಂದು ನಿರ್ಧರಿಸಿದೆ.ಕನ್ನಡ ಚಿತ್ರರ೦ಗದ ಬಗೆಗೊ೦ದಿಷ್ಟು…
– ಗುರುರಾಜ ಕೊಡ್ಕಣಿ
ಮೊನ್ನೆಯಷ್ಟೇ ಕನ್ನಡದ ಹೊಸ ಚಿತ್ರವೊ೦ದು ಬಿಡುಗಡೆಯಾಗಿದೆ.ಹೆಸರು ’ಖತರ್ನಾಕ್’.ಇದು ವಿಕೃತ ಕಾಮಿ ಉಮೇಶ ರೆಡ್ಡಿಯ ಜೀವನಾಧಾರಿತ ಚಿತ್ರ.’ಉಮೇಶ್ ರೆಡ್ಡಿಯ ವಿಕೃತಿಗಳು ಬೆಳ್ಳಿತೆರೆಗೆ ’ಎ೦ದು ಚಿತ್ರತ೦ಡದವರು ಹೆಮ್ಮೆಯಿ೦ದ ಹೇಳಿಕೊಳ್ಳುತ್ತಿದ್ದಾರೆ.ಇತ್ತೀಚೆಗೆ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರಗಳನೊಮ್ಮೆ ಗಮನಿಸಿ.’ಖತರ್ನಾಕ್’,’ಉಮೇಶ’,’ದ೦ಡುಪಾಳ್ಯ’,’ಸಿಲ್ಕ್:ಸಕತ ಹಾಟ್ ಮಗಾ’ ಇತ್ಯಾದಿ ಇತ್ಯಾದಿ.ಮೊದಲೆರಡು ಚಿತ್ರಗಳು ವಿಕೃತ ಕಾಮಿ ಉಮೇಶ ರೆಡ್ಡಿಯ ಜೀವನಾಧಾರಿತ ಚಿತ್ರಗಳಾದರೆ,ದ೦ಡು ಪಾಳ್ಯದ ಹ೦ತಕರ ಕತೆಯನ್ನಾಧರಿಸಿ ’ದ೦ಡು ಪಾಳ್ಯ’ ಚಿತ್ರ ಮಾಡಲಾಗಿತ್ತು.’ಸಿಲ್ಕ್’ ಚಿತ್ರ ಕ್ಯಾಬರೇ ಡಾನ್ಸರ್ ಗತಕಾಲದ ನಟಿಯೊಬ್ಬಳ ಹೆಸರಿನಿ೦ದ ಪ್ರೇರಿತ ಚಿತ್ರವಾಗಿತ್ತು.
‘message oriented film’ ಎ೦ಬ ಹೆಸರಿನಡಿಯಲ್ಲಿ ಬರುತ್ತಿರುವ ಇ೦ಥ ಚಲನ ಚಿತ್ರಗಳ ದಿಕ್ಕಿನೆಡೆಗೆ ಸಾಗುತ್ತಿರುವ ಕನ್ನಡ ಚಿತ್ರರ೦ಗವನ್ನು ಗಮನಿಸಿದಾಗ ಅಭಿಮಾನಿಗಳಿಗೆ ಒಟ್ಟೊಟ್ಟಿಗೆ ನಿರಾಸೆ,ಆತ೦ಕಗಳ ಅನುಭವ.ಆಶ್ಲೀಲತೆ,ಹಸಿಹಸಿ ಕಾಮ,ವಿಕೃತಿ,ದ್ವ೦ದಾರ್ಥ ಮತ್ತು ಕ್ರೌರ್ಯಗಳೇ ಇ೦ಥಹ ಚಿತ್ರಗಳ ಬ೦ಡವಾಳ.ಇಷ್ಟೊ೦ದು ಅತೀರೇಕದ ಚಿತ್ರದಲ್ಲಿ ಬೇಕಿತ್ತಾ ಎ೦ದು ಚಿತ್ರತ೦ಡದವರನ್ನು ಕೇಳಿದರೆ.ಮೂಲ ಕತೆ ಇ೦ಥದ್ದನೆಲ್ಲ ಬೇಡುತ್ತದೆ ಎನ್ನುತ್ತಾರವರು…!! ಇನ್ನು ಇದೊ೦ದು ’ಸ೦ದೇಶ ಪ್ರಧಾನ ಚಿತ್ರ’ ಕೆಟ್ಟವರ ಜೀವನ ಕೊನೆಯಲ್ಲಿ ಹೇಗಾಗುತ್ತದೆ ಎ೦ದು ತೋರಿಸುವುದಕ್ಕೆ ಇದೆಲ್ಲ ಅವಶ್ಯಕ ಎನ್ನುವ ಸಮರ್ಥನೆ ಬೇರೆ.
ಅವಮಾನಿಸಲು ಕರೆಸಿದವರು ಬಿರುದುಕೊಟ್ಟು ಕಳುಹಿಸಿದರು
– ಸಂತೋಷ್ ತಮ್ಮಯ್ಯ
೧೯೪೭. ಹಳೆಯ ದೆಹಲಿಯ ಪುರಾನಾ ಕಿಲಾ. ದೇಶಕ್ಕೆ ಸ್ವಾತಂತ್ರ್ಯ ಬಂದು ಅತ್ತ ಲಾಲ್ ಕಿಲಾದಲ್ಲಿ ತಿರಂಗಾ ಹಾರಿ ಜನರು ಕುಣಿಯುತ್ತಿದ್ದರೆ ಪುರಾನಾ ಕಿಲಾಕ್ಕೆ ಆ ಭಾಗ್ಯವಿರಲಿಲ್ಲ. ಏಕೆಂದರೆ ಅದೇ ಹೊತ್ತಿಗೆ ದೇಶವೂ ತುಂಡಾಗಿ, ಪಾಕಿಸ್ಥಾನದಿಂದ ರಾಶಿರಾಶಿ ಹೆಣಗಳೂ , ಹಿಂಡುಹಿಂಡಾಗಿ ನಿರ್ವಸಿತರೂ ದಿಕ್ಕಿಲ್ಲದೆ ಬರುತ್ತಿದ್ದರು. ಆಗ ಅವರಿಗೆಲ್ಲಾ ತಾತ್ಕಾಲಿಕ ನೆಲೆಯನ್ನು ಕೊಟ್ಟಿದ್ದು ಈ ಪುರಾನಾ ಕಿಲಾ. ಹಳೆಯ ಕೋಟೆ. ಧ್ವಜ ಹಾರದ ಕೋಟೆ. ಹಾರಿಸಿದರೂ ಯಾರೂ ಸಂತೋಷ ಪಡದಿರುವಂಥ ಕೋಟೆ. ದೂರದ ಮುಲ್ತಾನ್, ಸಿಂಧ್, ಪಂಜಾಬ್‌ಗಳಿಂದ ಬಂದವರೆಲ್ಲಾ ಅಲ್ಲಿ ನೆರೆದು ಬೇರೆಯೇ ಆದ ಒಂದು ಭಾರತ ಅಲ್ಲಿ ನಿರ್ಮಾಣವಾಗಿತ್ತು. ಪುನರ್ವಸತಿ ಆಗುವವರೆಗೆ ಅವರಿಗೆಲ್ಲಾ ಅದೇ ಮನೆ. ಅದೇ ನೆಲೆ. ಅಂಥ ಒಂದು ದಿನ ಸಂಘಟನೆಯೊಂದು ನಿರ್ವಸಿತರಿಗೆ ಆಹಾರದ ಪೊಟ್ಟಣಗಳನ್ನು ವಿತರಣೆ ಮಾಡುತ್ತಿತ್ತು. ಅಲ್ಲಿ ಹನ್ನೆರಡು ವರ್ಷದ ಬಾಲಕ ಜನರ ನಡುವೆ ನುಸುಳುತ್ತಿದ್ದ. ದೊಡ್ಡ ಕೈಗಳ ಮಧ್ಯೆ ಸಣ್ಣ ಕೈಗೆ ಪೊಟ್ಟಣಗಳು ಎಟುಕುತ್ತಿರಲಿಲ್ಲ. ದೊಡ್ಡ ಕೈಗಳು ಸಂತ್ರಪ್ತವಾದ ಮೇಲೆ ಹಸಿದಿದ್ದ ಆ ಬಾಲಕನಿಗೂ ಆಹಾರದ ಪೊಟ್ಟಣ ಸಿಕ್ಕಿತ್ತು.
ಆ ಬಾಲಕ ಮುಂದೆ ಫ್ಲೈಯಿಂಗ್ ಸಿಕ್ಖ್ ಎಂದೇ ಹೆಸರಾದ ಖ್ಯಾತ ಅಥ್ಲೆಟ್ ಮಿಲ್ಖಾ ಸಿಂಗ್. ಪುರಾನಾ ಕಿಲಾದಲ್ಲಿ ಆಹಾರದ ಪೊಟ್ಟಣವನ್ನು ವಿತರಿಸಿದ ಆ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಅಂದರೆ ಆರೆಸ್ಸೆಸ್ಸ್. ಆ ಬಾಲಕ ಫ್ಲೈಯಿಂಗ್ ಸಿಕ್ಖ್ ಆಗುವಲ್ಲಿ ಆ ಆಹಾರ ಪೊಟ್ಟಣದ ಪಾತ್ರವೂ ಇದೆ. ಯಾರೂ ಹೇಳದಿದ್ದರೂ, ಯಾರೂ ಬರೆಯದಿದ್ದರೂ, ಯಾರೂ ತೋರಿಸದಿದ್ದರೂ ಅದರ ಪಾತ್ರವನ್ನು, ಅಂದಿನ ಸತ್ಯವನ್ನು ಅಲ್ಲಗೆಳೆಯಲಾಗದು. ದೇಶವಿಭಜನೆಯ ಮಹಾದುರಂತದ ಒಂದು ಉಳಿಕೆ, ಒಂದು ಚಿಹ್ನೆ, ಒಂದು ಜೀವಂತ ಸ್ಮಾರಕವಾದವರು ಸರ್ದಾರ್ ಮಿಲ್ಖಾ ಸಿಂಗ್. ದೇಶ ವಿಭಜನೆಯ ಹೊತ್ತಲ್ಲಿ ಪಾಕಿಸ್ಥಾನದಿಂದ ಓಡಿ ಭಾರತಕ್ಕೆ ಬಂದವರಿಗೆಲ್ಲಾ ಲಾಲ್ ಕೃಷ್ಣ ಅಧ್ವಾನಿ, ಸರ್ದಾರ್ ಮನಮೋಹನ ಸಿಂಗರಾಗುವ ಅದೃಷ್ಟವಿರಲಿಲ್ಲ. ಅಂಥವರಲ್ಲಿ ಮಿಲ್ಖಾ ಸಿಂಗ್‌ರಂಥವರೇ ಹೆಚ್ಚಿದ್ದರೆಂಬುದು ಇತಿಹಾಸದ ವಾಸ್ತವ. ಅದು ತಿಳಿಯುವುದು ಮಿಲ್ಖಾ ಸಿಂಗನ The Race of my life ನಂಥ ಆತ್ಮ ಕಥೆಗಳಿಂದ.
ಸಾವಿರ ರುಪಾಯಿಯ ಫೋಟೋ ಮತ್ತು ಲಕ್ಷದ ಪ್ರಚಾರ
ಡಾ ಅಶೋಕ್ ಕೆ ಆರ್.
ವೈಯಕ್ತಿಕ
ವಿಷಯದಿಂದ ಲೇಖನವೊಂದನ್ನು ಪ್ರಾರಂಭಿಸುವುದು ಅಷ್ಟೇನೂ ಸರಿಯಲ್ಲವಾದರೂ ಈ ಲೇಖನಕ್ಕೆ ಪೂರಕವಾಗಿರುವ ಘಟನೆಯಾಗಿರುವುದರಿಂದ ಹೇಳುತ್ತಿದ್ದೇನೆ, ಕ್ಷಮೆಯಿರಲಿ. ಮದುವೆಯಾಗುವ ದಿನ ಹೊಸದೇನನ್ನಾದರೂ ಮಾಡಬೇಕೆಂಬ ಆಸೆಯಿಂದ ನನ್ನ ಗೆಳೆಯನೊಬ್ಬ ಮದುವೆಗೆ ಬಂದವರಿಗೆಲ್ಲ ಒಂದೊಂದು ಗಿಡ ಹಂಚಿದ್ದ, ಒಟ್ಟು ಎರಡು ಸಾವಿರ ಗಿಡಗಳು. ಬಂದವರಿಗೆಲ್ಲ ಯಾವುದಾದರೊಂದು ಪುಸ್ತಕವನ್ನು ತಾಂಬೂಲದ ರೂಪದಲ್ಲಿ ಕೊಡಬೇಕೆಂಬುದು ನನ್ನಾಸೆಯಾಗಿತ್ತು. ಮದುವೆ ನಿಶ್ಚಿತವಾಗುವಷ್ಟರೊಳಗೆ ನನ್ನದೇ ಹದಿನೈದರಷ್ಟು ಕಥೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಕಾರಣ ನನ್ನದೇ ಕಥಾ ಸಂಕಲನ ಬಿಡುಗಡೆಗೊಳಿಸಿ ಮದುವೆಮನೆಯಲ್ಲೇ ತಾಂಬೂಲದ ಜೊತೆಗೆ ಕೊಡುವ ನಿರ್ಧಾರವೂ ಆಯಿತು. ಮಾಧ್ಯಮದವರನ್ನೂ ಕರೆಯುವ ತೀರ್ಮಾನವನ್ನೂ ಕೈಗೊಂಡೆವು. ಮದುವೆ ದಿನ ತಾಳಿ ಕಟ್ಟಿದ ಮೇಲೆ ಪುಸ್ತಕ ಬಿಡುಗಡೆ ಕಾರ್ಯಕ್ರಮವಿತ್ತು. ಮಾಧ್ಯಮದವರು ವಿಡಿಯೋ ಕ್ಯಾಮೆರಾಗಳ ಜೊತೆಗೆ ಬಂದು ಮುಂದಿನ ಸಾಲಿನಲ್ಲಿ ಆಸೀನರಾಗಿದ್ದರು. ಆಗ ಗಾಬರಿಯಾಗಿದ್ದು ಹುಡುಗಿ ಮತ್ತು ನನ್ನ ಮನೆ ಕಡೆಯ ನೆಂಟರು!! ಕೆಲವರಿಗಷ್ಟೇ ಪುಸ್ತಕ ಬಿಡುಗಡೆಯ ಬಗ್ಗೆ ತಿಳಿಸಿದ್ದೆವು, ಇನ್ನುಳಿದವರಿಗೆ ಅಂದೇ ತಿಳಿಯಲಿ ಎಂದು ಸುಮ್ಮನಿದ್ದೆವು. ಮೀಡಿಯಾದವರು ಕ್ಯಾಮೆರ ಸಮೇತ ದಾಂಗುಡಿಯಿಟ್ಟಿದ್ದು ಕಂಡು ಗಾಬರಿಗೊಂಡ ಜನ ಅವರ ಬಳಿ ಹೋಗಿ ಏನು ಸಮಾಚಾರ ಎಂದು ವಿಚಾರಿಸಿ ಪುಸ್ತಕ ಬಿಡುಗಡೆಯ ಬಗ್ಗೆ ತಿಳಿದು ನಿಟ್ಟುಸಿರುಬಿಟ್ಟರು!! ಜನ ಗಾಬರಿಗೊಂಡಿದ್ದಾದರೂ ಯಾಕೆ? ಯಾವುದೇ ದೃಶ್ಯ ಮಾಧ್ಯಮದಲ್ಲಿ ಮದುವೆಯ ಸುದ್ದಿ ಬರುವುದು ಹುಡುಗ/ಹುಡುಗಿ ಓಡಿ ಹೋದಾಗ ಅಥವಾ ಮತ್ಯಾವುದೋ ರಂಪ ರಾಮಾಯಣವಾದಾಗ. ಮಾಧ್ಯಮದವರಿದ್ದಾರೆಂದರೆ ಅಲ್ಲೇನೋ ಕೆಟ್ಟದ್ದು ನಡೆಯುತ್ತಿದೆ ಎಂಬ ಭಾವನೆಯೇ ತುಂಬಿ ಹೋಗಿದೆ ಜನರಲ್ಲಿ. ಅದೇ ಕಾರಣದಿಂದ ನನ್ನ ಮದುವೆಯ ದಿನ ನೆಂಟರಿಷ್ಟರು ಗಾಬರಿಯಾಗಿದ್ದರು! ಇದು ನಮ್ಮ ಮಾಧ್ಯಮಗಳು ಬೆಳೆಸಿಕೊಂಡಿರುವ ಪ್ರಭಾವಳಿ! ಮತ್ತಷ್ಟು ಓದು 
‘ಲೈಫ್ ಆಫ್ ಪೈ’ ಎಲ್ಲರಲ್ಲೂ ಕಾಡುವಂತಾಗಲಿ…
– ಚಕ್ರವರ್ತಿ ಸೂಲಿಬೆಲೆ
ಒಂದು ನಾಟಕ, ಸಿನಿಮಾ, ಕೊನೆಗೆ ಸಂಗೀತವೂ ಕೂಡ.. ಮುಗಿಸಿ ಬಂದ ನಂತರವೂ ಎಷ್ಟು ಹೊತ್ತು ನಿಮ್ಮನ್ನು ಕಾಡುತ್ತಿರುತ್ತದೆ ಎಂಬುದರ ಮೇಲೆ ಅದರ ಸಫಲತೆಯನ್ನು ಅಂದಾಜಿಸಬಹುದು. ಕಾಕತಾಳೀಯ ಅಂತಾದರೂ ಹೇಳಿ, ವಿಶ್ವಪ್ರಜ್ಞೆಯ ಪ್ರೇರಣೆ ಅಂತಲಾದರೂ ಕರೀರಿ. ಓಹ್ ಮೈ ಗಾಡ್ ನೋಡಿದ ಮರುವಾರವೇ ಲೈಫ್ ಆಫ್ ಪೈ ನೋಡುವ ಅವಕಾಶ ದಕ್ಕಿದ್ದು ನನ್ನ ಪಾಲಿಗೆ ವಿಶೇಷವೇ ಸರಿ. ಚಿತ್ರ ರಾತ್ರಿಯಿಡೀ ಕಾಡಿದೆ. ಕೆಲವು ಮಾತುಗಳು ಮತ್ತೆ ಮತ್ತೆ ನೆನಪಾಗುತ್ತಿವೆ. ದೃಶ್ಯಗಳ ವೈಭವದ ಹಿಂದೆ ಅಡಗಿ ಕುಳಿತಿರುವ ಬದುಕಿನ ಸೂಕ್ಷ್ಮ ಅರ್ಥಗಳು ಒಂದೊಂದಾಗಿ ಅನಾವರಣಗೊಳ್ಳುತ್ತವೆ. ದೇವರ ಕುತರಿತಂತೆ, ಮತಗಳ ಕುರಿತಂತೆ ಕೊನೆಗೆ ಬದುಕಿನ ಕುರಿತಂತೆಯೂ ಪೈ ಹುಟ್ಟು ಹಾಕುವ ಪ್ರಶ್ನೆಗಳಿವೆಯಲ್ಲ, ಅವು ನಿಮ್ಮನ್ನು ಕಾಡದಿದ್ದರೆ ಹೇಳಿ.
ಹೀಗೆ ಕಾಡುತ್ತಾನೆಂದೇ ಅವನು ’ಪೈ’. ಫ್ರಾನ್ಸಿನ ಸ್ವಚ್ಛ ನೀರಿನ ಈಜುಕೊಳದಿಂದಾಗಿ ಬಂದ ಹೆಸರು ಅವನದ್ದು. ಪಿಸಿನ್ ಪಟೇಲ್. ಉಳಿಯೋದು ಪೈ. ಅದೆಷ್ಟು ಸಾಂಕೇತಿಕವೆಂದರೆ, ಪೈನ ಬದುಕು ಗಣಿತದ ಪೈನಂತೆಯೇ. ಅದೊಂದು ಇರ‍್ಯಾಷನಲ್ ನಂಬರ್. ಆದರೆ ಗಣಿತದ ಸಮಸ್ಯೆಗಳನ್ನು ಪರಿಹರಿಸಲು ರ‍್ಯಾಷನಲ್ ಆಗಿಯೇ ಬಳಸಲ್ಪಡುತ್ತದೆ. ಭಗವಂತನೂ ಹಾಗೆಯೇ. ಯಾರೂ ಕಾಣಲೇ ಇಲ್ಲ. ಆದರೆ ಎಲ್ಲರೂ ಕಂಡಿದ್ದೇವೆ ಎಂಬಂತೆ ಜೊತೆಯಲ್ಲಿಟ್ಟುಕೊಂಡೇ ಬದುಕು ನಡೆಯುತ್ತದೆ. ಪೈ ವೃತ್ತದ ಪರಿಧಿ ಮತ್ತು ವ್ಯಾಸಗಳ ಅನುಪಾತವನ್ನು ತೋರಿಸುವ ಸಂಖ್ಯೆ. ವ್ಯಾಸವನ್ನು ಬದುಕಿನ ಯಾತ್ರೆ ಅಂತ ಭಾವಿಸುವುದಾದರೆ ಪರಿಧಿ ಧರ್ಮ, ದೇವರು, ವಿಶ್ವಾಸಗಳು. ಬದುಕು ಯಾರದ್ದಾದರೂ ಆಗಿರಲಿ, ಆತ ಆಸ್ತಿಕನಾಗಿರಲಿ, ನಾಸ್ತಿಕನೇ ಆಗಲಿ. ಕೊನೆಗೆ ಅವಕಾಶವಾದಿ ಆಸ್ತಿಕನಾದರೂ ಸರಿ. ಈ ಪರಿಧಿಯೊಳಗಿನ ವ್ಯಾಸವಾಗಿಯೇ ಬದುಕಬೇಕು. ಅದು ಪೈನಂತೆ ಸ್ಥಿರಾಂಕ!
ನಕ್ಸಲರು ಬರದಿದ್ದಲ್ಲಿ “ಚಕ್ರವ್ಯೂಹದ” ಅರಿವಾಗುತ್ತಿರಲಿಲ್ಲವೇನೋ?!
-ಡಾ.ಅಶೋಕ್ ಕೆ ಆರ್

ಇಂಗ್ಲೀಷ್ ಭಾಷೆಯ ದಾಳಿಯಿಂದ ಸೊರಗುತ್ತಿರುವ ಇನ್ನಿತರ ಭಾಷೆಗಳು – ಇಂಗ್ಲೀಷ್ ವಿಂಗ್ಲೀಷ್
– ರೂಪಲಕ್ಷ್ಮಿ
ಶಶಿ – ಅತ್ಯಂತ ಸಾಮಾನ್ಯ ಹೆಣ್ಣು ಮಗಳು. ಅತ್ತೆ, ಗಂಡ, ಮಕ್ಕಳಿಗೆ ರುಚಿಯಾದ ಅಡುಗೆ ಮಾಡಿ, ಅವರಿಗೆ ಉಣಬಡಿಸುವುದರಲ್ಲಿಯೇ ಸಾರ್ಥಕ್ಯ ಕಂಡವಳು. ಜೊತೆಗೊಂದಿಷ್ಟು ಪುಡಿಕಾಸು ಸಂಪಾದಿಸಲು, ತನಗೆ ಗೊತ್ತಿರುವಂಥ ವಿದ್ಯೆಯಾದ ಅಡುಗೆಯಿಂದಲೇ, ಮದುವೆ ಮುಂತಾದ ಸಮಾರಂಭಗಳಿಗೆ ಲಡ್ಡು ತಾನೇ ಕೈಯಾರೆ ತಯಾರಿಸಿ, ಅಲ್ಲಿಗೆ ಹೋಗಿ ಕೊಟ್ಟು ಬರುವಂಥವಳು. ಆ ಹಣವನ್ನು ಆಪದ್ಧನವೆಂದು ಕಾದಿರಿಸುವವಳೇ ಹೊರತು, ತನ್ನ ಬಟ್ಟೆಬರೆ, ಅಲಂಕಾರಗಳಿಗೆ ಖರ್ಚು ಮಾಡುವಂಥವಳಲ್ಲ! ಒಟ್ಟಿಗೆ ಬಾಳುವುದಕ್ಕೆ ಸಂಗಾತಿ ಪರಿಪೂರ್ಣನಾಗಿರಬೇಕಿಲ್ಲ, ಒಬ್ಬರಿಗೊಬ್ಬರು ಪೂರಕವಾಗಿದ್ದರೆ ಸಾಕು ಎಂಬುದು ಇವಳ ತತ್ವ. ಮಕ್ಕಳನ್ನು ಬೆಳೆಸುವಲ್ಲಿಯೂ ಆಕೆ ನಿರಾಳ. ಟೀನೇಜ್ ಮಗಳು ತುಂಡುಬಟ್ಟೆ ಹಾಕಿಕೊಂಡು, ಕಾಫೀ ಡೇ ಹೋಗುವುದನ್ನು ಅತೀ ಸಾಮಾನ್ಯ ವಿಷಯದಂತೆ ಸ್ವೀಕರಿಸುವಷ್ಟು, ತನ್ನ ಮುಂದೆಯೇ ತನ್ನ ಗಂಡ, ಪರ ನಾರಿಯನ್ನು ಹಗ್ ಮಾಡುವುದನ್ನು ಒಪ್ಪಿಕೊಳ್ಳುವಷ್ಟು, ಆಧುನಿಕ ಮನೋಧರ್ಮ ಇವಳಲ್ಲಿದೆ. ಗೇ, ಲೆಸ್ಬಿಯನ್ ಸಂಬಂಧಗಳನ್ನು ಒಪ್ಪಿಕೊಳ್ಳಲು ಹಿಂದೆ ಮುಂದೆ ನೋಡುವಂಥ ಸುಶಿಕ್ಷಿತ ಮನೋವರ್ಗದ ನಡುವೆ, ಅವರದು ಹೃದಯವಲ್ಲವೇ? ಅವರು ಕೂಡ ಪ್ರೀತಿಸಲು, ಬದುಕಲು ಅರ್ಹರು ಎನ್ನುವಂಥ, ಗಂಡ, ಮಕ್ಕಳ ಆಧುನಿಕ ಮನಸ್ಸನ್ನು ಯಾವುದೇ ತಂಟೆ, ತಕರಾರಿಲ್ಲದೆ ಒಪ್ಪಿಕೊಳ್ಳುವಂಥ ವಿಶಾಲ ಮನಸ್ಸು ಈಕೆಯದು. ಈ ಆಧುನಿಕ ಜಗತ್ತಿನಲ್ಲಿ ಇದ್ದು ಕೂಡ ಇರದಂಥವಳು. ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಲು, ಭಾವನೆಗಳನ್ನು ವ್ಯಕ್ತ ಪಡಿಸಲು ಭಾಷೆಯ ಹಂಗೇಕೆ? ತಾವೇ ಅವರ ಜಾಗದಲ್ಲಿ ನಿಂತು ನೋಡಿದರೆ ಅವರು ಅರ್ಥವಾಗುತ್ತಾರೆ ಎನ್ನುವ ಮನೋಭಾವದವಳು. ಆದರೆ ಈಕೆಯನ್ನು, ಈಕೆಯ ಮನಸ್ಸನ್ನು ಅರ್ಥ ಮಾಡಿಕೊಳ್ಳದ ಗಂಡ ಮತ್ತು ಮಗಳು, ಈಕೆಯದು ಗೊಡ್ಡು ಸ್ವಭಾವವೆಂದು, ಈ ಜಗತ್ತಿನಲ್ಲಿ ಬದುಕಲು ಕೂಡ ಅನರ್ಹವೆಂದೂ, ಇಂಗ್ಲೀಷ್ ಭಾಷೆ ಬರದ ಈಕೆ ಅಡುಗೆಮನೆಯಲಿರಷ್ಟೇ ಲಾಯಕ್ಕೆಂದೂ, ಸಮಯ ಸಿಕ್ಕಾಗಲೆಲ್ಲಾ ಪರಿಹಾಸ್ಯ ಮಾಡುವ ಗಂಡ, ಅದನ್ನು ತನ್ನ ಉಪಯೋಗಕ್ಕೆ ಬಳಸಿಕೊಳ್ಳುವ ಮಗಳು, ಇವರೀರ್ವರ ಅಪಹಾಸ್ಯದಿಂದ ನೋವಾದರೂ, ಸಂಕಟವಾದರೂ, ತೋರಿಸಿಕೊಳ್ಳದ ಸಂಯಮಿ.ಟೆಕ್ಕಿಗಳಿಂದ ಕನ್ನಡ ಹಾಸ್ಯ ನಾಟಕೋತ್ಸವ
ಪವನ್ ಪಾರುಪತ್ತೇದಾರ
ಪ್ರತಿದಿನ C++, Java,.net ಸರ್ವರ್ರುಗಳ ಮಧ್ಯೆ ಇರುವ ಸಾಫ್ಟ್ವೇರ್ ಇಂಜಿನಿಯರುಗಳ ತಂಡವೇ ರಂಗತಂತ್ರ. 2008ರಲ್ಲಿ ಸ್ಥಾಪಿತವಾದ ಈ ತಂಡ, ಹವ್ಯಾಸಿ ನಾಟಕಕಾರರನ್ನು ಹೊಂದಿದ್ದು, ಇಲ್ಲಿಯವರೆಗೂ 8 ಪ್ರದರ್ಶನಗಳನ್ನು ನೀಡಿದೆ. ಈ ಹವ್ಯಾಸಿ ಟೆಕ್ಕಿ ಕಲಾವಿದರು ತಮ್ಮ ಕಚೇರಿಯ ಬಿಡುವಿಲ್ಲದ ಸಮಯದ ಮಧ್ಯೆ, ತಮ್ಮ ವೀಕೆಂಡುಗಳನ್ನೆಲ್ಲ ಬದಿಗಿಟ್ಟು, ಬಹಳಷ್ಟು ಕಷ್ಟ ಪಟ್ಟು ಅಭ್ಯಾಸ ಮಾಡಿ, ಅಕ್ಟೋಬರ್ ತಿಂಗಳಲ್ಲಿ ನಿಮ್ಮ ಮುಂದೆ ಹಾಸ್ಯ ನಾಟಕೋತ್ಸವ ನಡೆಸಲು ಸಜ್ಜಾಗಿದ್ದಾರೆ.
ತಂಡದ ಮೇಷ್ಟ್ರು ಮಹದೇವ್ ಪ್ರಸಾದ್ ಯುವಪಡೆಯೊಂದನ್ನು ಸಜ್ಜು ಮಾಡಿಕೊಂಡಿದ್ದು, ನಾಟಕ ಪ್ರಿಯರಿಗೆ ನಗೆಯ ಹಬ್ಬದೂಟ ಬಡಿಸಲು ತಯಾರಿ ನಡೆಸುತಿದ್ದಾರೆ. ಲಾಕ್ ಔಟ್ ಅಲ್ಲ ನಾಕೌಟ್, ಶ್ರೀ ಕೃಷ್ಣ ಸಂಧಾನ ಮತ್ತು ಬಂಡ್ವಾಳವಿಲ್ಲದ ಬಡಾಯಿಯಂತಹ ಪ್ರಸಿದ್ಧ ಹಾಸ್ಯ ನಾಟಕಗಳನ್ನು ನಿಮ್ಮ ಮುಂದಿಡಲು ಕಾತುರದಿಂದ ಕಾಯುತಿದ್ದಾರೆ. ನಾಟಕ ಪ್ರಿಯರೆಲ್ಲ ಬಂದು ಸಾಫ್ಟ್ ವೇರ್ ಟೆಕ್ಕಿಗಳ ಪ್ರಯತ್ನವನ್ನು ಪ್ರೋತ್ಸಾಹಿಸಿ ಹರಸಬೇಕಾಗಿ ವಿನಂತಿ.
ನಾಟಕ ಪ್ರದರ್ಶನ ನಡೆಯುವ ದಿನಾಂಕಗಳು ಕೆಳಗಿನಂತಿವೆ.
ಅಕ್ಟೋಬರ್ 12 – ಶ್ರೀ ಕೃಷ್ಣ ಸಂಧಾನ
ಅಕ್ಟೋಬರ್ 13 – ಬಂಡ್ವಾಳವಿಲ್ಲದ ಬಡಾಯಿ
ಶ್ರೀ ಕೃಷ್ಣ ಸಂಧಾನ : ರಚನೆ : ವಿ ಎನ್ ಅಶ್ವಥ್
ವಿದ್ಯೆ ಇಲ್ಲದ ಹಳ್ಳಿ ಜನ ನಾಟಕ ಮಾಡಲು ಹೊರಟಾಗ ಎದುರಾಗುವ ಛಾಲೆಂಜುಗಳೇನು, ಅ ಹಳ್ಳಿ ಜನಕ್ಕೆ ನಾಟಕ ಹೇಳಿಕೊಡಲು ಬರುವ ಮೇಷ್ಟ್ರಿಗೆ ಅದರ ಅರಿವಿರೋದಿಲ್ಲ. ಬಂದು ಇವ್ರಿಗೆ ನಾಟಕ ಹೇಳಿಕೊಡಕ್ಕೆ ಶುರು ಮಾಡಿ ಗೆಜ್ಜೆಗ್ ಪೂಜೆ ಮಾಡ್ಸೋ ಅಷ್ಟ್ರಲ್ಲಿ ಮೇಷ್ಟ್ರು ಗೋಳು ಕೇಳಕ್ಕಾಗಲ್ಲ. ಅಂತಹ ಮೇಷ್ಟ್ರು ಮತ್ತೆ ಶಿಶ್ಯಂದಿರ ನಡುವೆ ನಡೆವ ನಗೆ ನಾಟಕ ಕೃಷ್ಣ ಸಂಧಾನ. ಈ ನಾಟಕ ಈಗಾಗ್ಲೆ ಕನ್ನಡದ ನಾಟಕ ಪ್ರಿಯರಿಗೆಲ್ಲ ಚಿರಪರಿಚಿತ. ಆದಕ್ಕೆ ಕಾರಣ ನಾಟಕದ ಪ್ರತಿಯೊಂದು ಸಾಲಿನಲ್ಲು ಇರುವ ನಗೆಮಿಠಾಯಿ ಅಂದ್ರೆ ತಪ್ಪಾಲ್ಲ ಬಿಡಿ. ನಾಟಕದ ಪ್ರತಿಯೊಂದು ಲೈನ್ ಸಹ ಪಂಚ್ ಲೈನ್. ನೀವೆಷ್ಟು ಬಾರಿ ನೋಡಿದರೂ ಬೇಜಾರಾಗದ ನಾಟಕ ಇದು. ಇಂತಹ ನಗೆಯ ರಸಾಯನ ಸಹ ರಂಗತಂತ್ರದ ಹಾಸ್ಯೋತ್ಸವದ ಕೊಡುಗೆ.





