ಜೇನುಗೂಡಿಗೆ ಕಲ್ಲು ಹೊಡೆದ್ರೆ ಏನಾಗುತ್ತೆ ಅಂತ ಗೊತ್ತಾಯ್ತಾ!?
(ಇದೆ ಲೇಖನಗಳನ್ನ ನೋಡಿ ಬೋರ್ ಅನಿಸಬಹುದು,ಆದರೆ ಈ ಮನುಷ್ಯ ಮಾಡಿದ ಕೆಲಸ ಮೈ ಉರಿಯುವಂತದ್ದು,ನಾನು ಬರೆಯಬಾರದು ಅಂದುಕೊಂಡರು ಬರೆಯದಿರಲಾಗಲಿಲ್ಲ.ಇದನ್ನ
ಬರೆಯುವ ಹೊತ್ತಿಗೆ ಚಿಮೂ ಅವರಿಗೆ ಗೌರವ ಸಲ್ಲಲ್ಲಿದೆ ಅನ್ನುವ ಸಮಾಧಾನಕರ ಸುದ್ದಿ ಬಂದರೂ,ಅಂತ ಹಿರಿಯ ಜೀವದ ಮನ ನೋಯಿಸಿದವರ ಬಗ್ಗೆ ಬರೆಯದಿರಲು ಹೇಗೆ ಸಾಧ್ಯ? )
ಮರವಂಜಿ ಅನ್ನೋದು ಈ ರಾಜ್ಯದ ಒಂದು ಪುಟ್ಟಹಳ್ಳಿ.ಆ ಹಳ್ಳಿಯ ಬಯಲಲ್ಲಿ ಆಟವಾಡುತಿದ್ದ ಮಕ್ಕಳ ಬಳಿ ಒಬ್ಬ ಪೇಲವ ಶರೀರದ,ಮೃದು ಮಾತಿನ ವ್ಯಕ್ತಿ ಬಂದು ಕೇಳಿದರು ’ಮಕ್ಕಳೇ,ಈ ಹಳ್ಳಿಯಲ್ಲಿ ದೊಡ್ಡ ಮನೆ ಯಾರದಪ್ಪ?’ಅಲ್ಲಿ ಆಟವಾಡುತಿದ್ದ ದೊಡ್ಡ ಮನೆಯ ಮಕ್ಕಳು ಆ ವ್ಯಕ್ತಿಯನ್ನ ಮನೆಗೆ ಕರೆದುಕೊಂಡು ಹೋದರು.ಮನೆಯ ಹಿರಿಯರೊಂದಿಗೆ ಆ ವ್ಯಕ್ತಿ ’ತಾನು, ಕರ್ನಾಟಕ-ಕನ್ನಡದ ಬಗ್ಗೆ ಸಂಶೋಧನೆ ಮಾಡುತ್ತಾ ಇರುವುದಾಗಿಯೂ,ಅದಕ್ಕಾಗಿ ಹೀಗೆ ಹಳ್ಳಿ ಹಳ್ಳಿಗಳಿಗೊ ಭೇಟಿ ನೀಡುತ್ತಿರುವುದಾಗಿಯು ಮತ್ತು ಹೋದೆಡೆ ಹೀಗೆ ಉಳ್ಳವರ ಮನೆಯಲ್ಲಿ ವಿಶ್ರಾಂತಿ ಪಡೆದು ಸಾಗುತ್ತಿರುವುದಾಗಿ’ ಹೇಳಿದ್ದರು.ಹಾಗೆ ಮುಂದುವರೆದು ’ಉಚಿತವಾಗಿ ಈ ರೀತಿ ಉಳಿದುಕೊಳ್ಳುವುದು ನನಗೆ ಕಷ್ಟವಾಗುತ್ತದೆ, ನಿಮ್ಮ ಮನೆಯ ಮಕ್ಕಳನ್ನೆಲ್ಲ ಕರೆಯಿರಿ ನಾನವರಿಗೆ ಕಥೆಯನ್ನಾದರು ಹೇಳುತ್ತೇನೆ’ ಅಂದರಂತೆ.ಆ ವ್ಯಕ್ತಿ ಹಾಗೆ ಮನೆಗೆ ಬಂದು ಹೋದ ೪-೫ ವರ್ಷದ ಮೇಲೆ ಯಾವುದೋ ಪತ್ರಿಕೆಯಲ್ಲಿ ಅವರ ಫೋಟೊ ನೋಡಿದಾಗಲೆ ಆ ಮನೆಯವರಿಗೆ ಗೊತ್ತಾಗಿದ್ದು ಅಂದು ನಮ್ಮ ಮನೆಗೆ ಬಂದು ಉಳಿದುಕೊಂಡಿದ್ದ ವ್ಯಕ್ತಿ, ಕನ್ನಡದ ಹಿರಿಮೆಯ ಸಂಶೋಧಕ,ವಿದ್ವಾಂಸರು ಅಂತ.
ಸಂಶೋಧನೆಯ ಸತ್ಯಕ್ಕೆ ಸಂದ ಜಯ: ಚಿಮೂ.ಗೆ ಗೌರವ ಡಾಕ್ಟರೇಟ್ ನೀಡಲು ಒಪ್ಪಿಗೆ
ಕನ್ನಡದ ಹಿರಿಯ ಸಂಶೋಧಕರಾದ ಡಾ.ಎಂ. ಚಿದಾನಂದ ಮೂರ್ತಿಯವರಿಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ನೀಡಲು ನಿರಾಕರಿಸಿದ್ದ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಕೊನೆಗೂ ಗೌರವ ಡಾಕ್ಟರೇಟ್ ನೀಡಲು ಸಮ್ಮತಿಸಿದ್ದಾರೆ. ಕನ್ನಡಿಗರ, ಸಾಹಿತಿಗಳ, ಸಂಘಟನೆಗಳ ಒತ್ತಾಯಕ್ಕೆ ಒಪ್ಪಿಗೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಚರ್ಚ್ ಮೇಲಿನ ದಾಳಿಯ ಕುರಿತು ನ್ಯಾಯಮೂರ್ತಿ ಸೋಮಶೇಖರ್ ಆಯೋಗವು ನೀಡಿದ ವರದಿಯನ್ನು ಚಿದಾನಂದಮೂರ್ತಿಯವರು ಸಮರ್ಥಿಸಿದ್ದಾರೆ. ಅಲ್ಲದೇ ಡಾಕ್ಟರೇಟ್ ನೀಡಲು ಸಾಹಿತ್ಯಿಕ ಸಾಧನೆಗಳ ಜೊತೆಗೆ ಸಾಮಾಜಿಕ ಕಾಳಜಿಯೂ ಮಾನದಂಡ ಎಂದು ಹೇಳುವ ಮೂಲಕ ಗೌರವ ಡಾಕ್ಟರೇಟ್ ಗೆ ಹೊಸ ಮಾನದಂಡವೊಂದನ್ನು ಸೇರ್ಪಡೆಗೊಳಿಸಿದ್ದರು.
ರಾಜ್ಯಪಾಲರ ಈ ನಿರ್ಧಾರವನ್ನು ಸಾಹಿತಿಗಳು, ಹಲವು ಕನ್ನಡಪರ ಸಂಘಟನೆಗಳು, ಕನ್ನಡ ಪ್ರೇಮಿಗಳು ವಿರೋಧಿಸಿದ್ದರು. ಚಿದಾನಂದಮೂರ್ತಿಯವರನ್ನು ಕೋಮುವಾದಿಯೆಂದು ಸಹ ಹೇಳುವಲ್ಲಿ ರಾಜ್ಯಪಾಲರು ಹಿಂದೆ ಬಿದ್ದಿರಲಿಲ್ಲ. ಇದನ್ನು ತೀವ್ರವಾಗಿ ವಿರೋಧಿಸಿದ್ದ ಸಾಹಿತ್ಯ ಪ್ರೇಮಿಗಳು, ಸಂಶೋಧನಾ ಆಸಕ್ತರು ಇಂದು ರಾಜಭವನದ ಮುಂದೆ ಪ್ರತಿಭಟನೆ ನಡೆಸಿದ್ದರು.
ನಿನ್ನೆ ಮುಕ್ತಾಯಗೊಂಡ 77ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿಯೂ ರಾಜ್ಯಪಾಲರ ವಿರುದ್ಧ ಖಂಡನಾ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ತಮ್ಮ ನಡುವಿನ ವೈಚಾರಿಕ ಭಿನ್ನತೆಗಳನ್ನು ಮರೆತು ಕನ್ನಡ ಸಂಶೋಧಕನಿಗೆ ಸಲ್ಲಬೇಕಿದ್ದ ಸ್ಥಾನಮಾನಗಳನ್ನು ಕೊಡಿಸುವಲ್ಲಿ ಎಲ್ಲ ಕನ್ನಡ ಸಾಹಿತಿಗಳು ಒಂದಾದದ್ದು ಮತ್ತು ಒಕ್ಕೊರಲಿನಲ್ಲಿ ಆಗ್ರಹಪಡಿಸಿದ್ದು ವಿಶೇಷವಾಗಿತ್ತು. ಮತ್ತಷ್ಟು ಓದು 
ಇದು ಕನ್ನಡಕ್ಕಾದ ಅವಮಾನವಲ್ಲವೇ?
ಕರ್ನಾಟಕದಲ್ಲಿ ಕನ್ನಡದ ಪರ ಕೆಲಸ ಮಾಡಿದವರಿಗೆ ಗೌರವ ಕೊಡೋದು ತಪ್ಪಾ? ತಪ್ಪು ಅನ್ನೋದಾದ್ರೆ ರಾಜ್ಯಪಾಲರು, ಡಾ|| ಎಂ. ಚಿದಾನಂದಮೂರ್ತಿ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ನಿರಾಕರಿಸಿರುವುದು ಸರಿಯಾಗುತ್ತದೆ,ಅಲ್ವಾ? ಚಿಮೂ ಯಾರು? ಕನ್ನಡಕ್ಕೆ ಅವರ ಕೊಡುಗೆಯೇನು? ಎಲ್ಲ ಅರ್ಹತೆಯಿದ್ದರು ಅವರಿಗೆ ಗೌರವ ಡಾಕ್ಟರೇಟ್ ನಿರಾಕರಿಸಲು ನೀಡಿರುವ ಕಾರಣವಾದರು ಏನು ಅಂತ ನೋಡಿದರೆ ‘ಸಂಘ ಪರಿವಾರದ’ ಜೊತೆ ಅವರು ಗುರ್ತಿಸಿಕೊಂಡಿರುವ ಮಹಾಪರಾಧವನ್ನ ಮಾಡಿರುವುದಂತೆ!
ಅದ್ಯಾವ ಸೀಮೆಯ ಅಪರಾಧ ಅಂತ ನನಗೂ ಇನ್ನು ಕೆಲವರಿಗೂ ಅನ್ನಿಸಬಹುದು ಆದರೆ ಸಿಕ್ಯುಲರ್ ಮನಸ್ಸುಗಳಿಗೆ ಅದು ದೇಶ ದ್ರೋಹಕ್ಕೆ ಸಮ ಅನ್ನಿಸಲೂಬಹುದು.ಆದರೆ ಚಿಮೂ ಅವರನ್ನ ಕೇಸರಿ-ಹಸಿರಿನ ಪರದೆ ಸರಿಸಿ, ಕೆಂಪು-ಹಳದಿಯ ಕನ್ನಡದ ಪರದೆಯ ಮೂಲಕ ನೋಡಿದಾಗಲೂ ಅವರ ವಿರೋಧಿಗಳು ಅವರಿಗೆ ಗೌರವ ಡಾಕ್ಟರೇಟ್ ನೀಡುವುದನ್ನು ವಿರೋಧಿಸಬಲ್ಲರೆ?
ಯಾವುದೇ ರಾಜಕೀಯ ಪಕ್ಷ,ಸಂಘಟನೆ, ಪಂಥಕ್ಕೆ ಸೇರದ ಒಬ್ಬ ಸಾಮನ್ಯ ಕನ್ನಡಿಗನ ಕಣ್ಣಿಗೆ ಚಿಮೂ ಅವರು,ಕನ್ನಡದ ಪ್ರಖ್ಯಾತ ಸಂಶೋಧಕ,ವಿದ್ವಾಂಸ,ಇತಿಹಾಸಜ್ಞ ಹಾಗೂ ಲೇಖಕರಾಗಿ ಮಾತ್ರ ಕಾಣಬಲ್ಲರು.
ಇಂತ ಚಿಮೂ ಅವರಿಗೆ ಗೌರವ ಡಾಕ್ಟರೇಟ್ ನಿರಾಕರಿಸುವುದು ಕನ್ನಡ ಭಾಷೆಯ ಪ್ರಾಚೀನತೆ ಹಾಗೂ ಪ್ರಾಚೀನ ಕರ್ನಾಟಕದ ಬಗ್ಗೆ ಅವರ ಒಲವನ್ನ,ನಿಷ್ಠೆಯನ್ನ,ತುಡಿತವನ್ನ ಮತ್ತು ಕನ್ನಡಕ್ಕಾಗಿ ಅವರು ಮಾಡಿರುವ ಕೆಲಸವನ್ನ ಕಡೆಗಣಿಸಿದಂತೆ ಅವಮಾನಿಸಿದಂತಲ್ಲವೇ? ಕನ್ನಡಕ್ಕಾಗಿ ಕೆಲಸ ಮಾಡಿದವರನ್ನ ಕಡೆಗಣಿಸುವುದು ಕನ್ನಡಿಗರನ್ನ,ಕರ್ನಾಟಕವನ್ನ ಕಡೆಗಣಿಸಿದಂತೆ-ಅವಮಾನಿಸಿದಂತೆಯೇ ಸರಿ. ಮತ್ತಷ್ಟು ಓದು 
ಪೇಜಾವರ ಶ್ರೀಗಳಿಗೆ ದಲಿತರ ಮನೆ(ನ) ಇನ್ನೂ ಹತ್ತಿರವಿಲ್ಲವೇ?
ಸಾತ್ವಿಕ್ ಎನ್.ವಿ
ಉಡುಪಿಯಲ್ಲೊಂದು ಪ್ರಸಿದ್ಧ ಕಾಲೇಜು. ಪ್ರತಿವರ್ಷವೂ ಹೊಸದಾಗಿ ಬರುವ ವಿದ್ಯಾರ್ಥಿಗಳ ಜೊತೆ ಆ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಸ್ವಾಮೀಜಿಯವರೊಂದಿಗೆ ಸಂವಾದ ಕಾರ್ಯಕ್ರಮ. ಒಂದು ವರ್ಷವೂ ತಪ್ಪದೇ ಯತಿಗಳಿಗೆ ವಿದ್ಯಾರ್ಥಿಗಳು ಕೇಳುವ ಪ್ರಶ್ನೆ ‘ಸ್ವಾಮೀಜಿ ಕೃಷ್ಣಮಠದಲ್ಲಿ ಸಹಪಂಕ್ತಿ ಭೋಜನ ಯಾಕಿಲ್ಲ’ ಅಂತ. ‘ಅದು ನಮ್ಮ ಮಠದ ಸಂಪ್ರದಾಯ ಕ್ರಮ. ಅಲ್ಲದೇ ಯಾವುದೇ ಬ್ರಾಹ್ಮಣರು ‘ಅನ್ಯ’ರೊಂದಿಗಿನ ಸಹಪಂಕ್ತಿ ಭೋಜನ ಅಷ್ಟಾಗಿ ಇಷ್ಟಪಡುವುದಿಲ್ಲ’ ಎಂಬ ರೆಡಿಮೇಡ್ ಉತ್ತರ ಸ್ವಾಮೀಜಿಗಳಿಂದ. ಮರುಪ್ರಶ್ನೆ ಕೇಳಲು ಹೊರಟ ವಿದ್ಯಾರ್ಥಿಗೆ ಪಕ್ಕದಲ್ಲಿರುವ ಮೇಷ್ಟ್ರುಗಳ ಬಿರುಸುನೋಟ ರೆಡ್ ಸಿಗ್ನಲ್ ಆಗಿರುತ್ತದೆ. ಅಲ್ಲಿಗೆ ಸಂವಾದ ಕಾರ್ಯಕ್ರಮ ಮುಗಿಯುತ್ತದೆ.
ಈ ಪ್ರಸಂಗ ನೆನಪಾದದ್ದು ಪೇಜಾವರ ಶ್ರೀಗಳ ದಲಿತ ಕಾಲೋನಿಗಳ ಭೇಟಿಯನ್ನು ಪತ್ರಿಕೆಯಲ್ಲಿ ನೋಡಿದ ಸಂದರ್ಭದಲ್ಲಿ. ಸ್ವಾಮೀಜಿಯವರು ಅಲ್ಲಿನ ದಲಿತರಿಗೆ ವೈಷ್ಣವ ದೀಕ್ಷೆಯನ್ನು ನೀಡುವ ಮೂಲಕ ಜನರನ್ನು ಉತ್ತಮ ವ್ಯಕ್ತಿಗಳಾಗಿ ಪರಿವರ್ತಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದರೆ ಈ ಪ್ರಕ್ರಿಯೆ ನಮ್ಮಲ್ಲಿ ಸಾಮಾನ್ಯವಾದ ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅವು- ಈವರಗೆ ದಲಿತರು ಉತ್ತಮ ವ್ಯಕ್ತಿಗಳಾಗಿರಲಿಲ್ಲವೇ? ಸಹಪಂಕ್ತಿ ಭೋಜನಕ್ಕೆ ಒಪ್ಪದ ಮನಸ್ಸುಗಳು ಮುಂದೆ ದಲಿತರನ್ನು ಅಥವಾ ಇತರೆ ವೈಷ್ಣವ ದೀಕ್ಷೆ ಪಡೆದ ವ್ಯಕ್ತಿಗಳನ್ನು ತಮ್ಮವರೆಂದು ಒಪ್ಪಿಕೊಳ್ಳುತ್ತಾರೆಯೇ?
ಹೀಗೆಲ್ಲಾ ಉಂಟು!
ಬೃಹತ್ ಬೆಂಗಳೂರಿನ ಕೆಲವು ಅನುಭವಗಳನ್ನು ನಾನೀಗ ಹೇಳ ಹೊರಟಿರುವೆ .ನೆನಪಾದರೆ ನಗು, ಅಳು ಎರಡೂ ಬರುವ ಘಟನೆಗಳವು. ಅದೊಂದು ಶನಿವಾರ ರಜೆಯಿದ್ದ ಕಾರಣ ಸ್ನೇಹಿತೆಯ ರೂಮಿಗೆ ಹೊರಟಿದ್ದೆ. ನಾನಿದ್ದ BTM ನಿಂದ ಅಷ್ಟು ದೂರದ ಕೋರಮಂಗಲಕ್ಕೆ ಆಟೋದಲ್ಲೇ ಹೊರಟಿದ್ದೆ. .(ನನ್ನಂತಹ ಇನ್ನೊಂದು ೪ ಜನರಿದ್ದರೆ ಆಟೋದವರ ಹೊಟ್ಟೆಪಾಡು ಬಹು ಸುಲಭ !)ಕೋರಮಂಗಲ (ಮೊನ್ನೆ ಮೊನ್ನೆ ಗೊತ್ತಾಗಿದ್ದು ಹೆಸರು )ದಲ್ಲೊಂದು ಸಿಗ್ನಲ್ ಬಿತ್ತು.ಇಳಿಯಲಿರುವ ಸ್ಟಾಪ್ ಮುಂದಿತ್ತು.ನಾನು ವಾಹನದಲ್ಲಿ ಕೂತ ಪಯಣಿಗರ ಯೋಗಕ್ಷೇಮ ವಿಚಾರಿಸಲು ಬರುತ್ತಿದ್ದ ಭಿಕ್ಷುಕರು ,ಮಾರಾಟಗಾರರನ್ನು ನೋಡುತ್ತಿದ್ದೆ .ಆಗ ನನ್ನ ದೃಷ್ಟಿ ಬಿತ್ತು ನೋಡಿ, ಸಿಗ್ನಲ್ ಕೆಳಗೆ ನಿಂತ ಬೈಕ್ ಸವಾರನ ಜೊತೆ ಜಗಳ ಆಡುತ್ತಿದ್ದ ಒಬ್ಬ ಹಿಜಡಾ ಮೇಲೆ. ನಮ್ಮ ಉಡುಪಿ ,ಕುಂದಾಪುರದ ಕಡೆ ಇವರು ಬೆರಳೆಣಿಕೆಯಷ್ಟು ಇರಬಹುದು ..ಆದ್ರೆ ನಾನಂತೂ ನೋಡಿದ್ದೇ ಇಲ್ಲ, t .v ಲೆಲ್ಲಾ ನೋಡಿದ್ದಾಗ ಭಯಮಿಶ್ರಿತ ಕುತೂಹಲ ಇದ್ದೆ ಇತ್ತು .ನಾ ಕಣ್ಣು ಬಾಯಿ ಬಿಟ್ಟುಕೊಂಡು ಅವಳನ್ನೇ ನೋಡುತ್ತಿದ್ದುದು ಅವಳಿಗೆ ಅದು ಹ್ಯಾಗೆ ಗೊತ್ತಾಯ್ತೋ, ಸ್ಮೈಲ್ ಕೊಡುತ್ತಲೇ ಬಂದುಬಿಟ್ಟಳಲ್ಲ ನಮ್ಮ ಆಟೋದ ಕಡೆ !ನನ್ನ ಫ್ರೆಂಡ್ ಹೇಳಿದ್ದು ನೆನಪಾಯ್ತು ,ಅವರು ಹುಡುಗೀರ ಹತ್ತಿರ ಏನೂ ಕೇಳಲ್ಲ ಅಂತ…. !ಸುಳ್ಳೇ ಸುಳ್ಳು ಕ್ಯಾರೆ ಅನ್ನದೆ ಆಟೋ ಹತ್ತಿ ನನ್ನ ಪಕ್ಕ ಕುಳಿತು ಕೈ ಚಾಚಿದಳು.. ಅಬ್ಬಾ! ಎಂದೂ ನಂಬದ ದೇವರು ಕೂಡ ನೆನಪಿಗೆ ಬಂದುಬಿಟ್ಟ ! ಆಟೋದವರಿಗೆ ಕೊಡಲು ಕೈಯಲ್ಲೇ ಇದ್ದ ನೂರರ ನೋಟನ್ನೇ ನಡುಗುವ ಕೈಯಿಂದ ಕೊಟ್ಟುಬಿಟ್ಟೆ.ಅವಳು ಅದನ್ನು ತೆಗೆದುಕೊಂಡು ತನ್ನಲ್ಲಿದ್ದ ಐವತ್ತರ ನೋಟನ್ನು ಅದು ಹೇಗೋ ತಲೆಗೆ ಸುತ್ತು ಹಾಕಿ (ನಾ ನೋಡಲಿಲ್ಲ) ಕೊಟ್ಟು ಬಿಟ್ಟಳಪ್ಪ.ನಾ ತೊದಲುತ್ತ ಬೇಡ ಬೇಡ ಅಂದಿರಬೇಕು…ಸ್ವರ ಹೊರಗೆ ಬಂದಿದ್ದು ಅನುಮಾನ !ಅವಳು ಬೇಡ ಅನ್ನೋಲ್ಲ, ಒಳ್ಳೆದಾಗುತ್ತೆ ಅಂತ ನನ್ನ ತಲೆ ಮುಟ್ಟಿ ಕೆಳಗಿಳಿದು ಹೋಗಿಬಿಟ್ಟಳು .ಅಲ್ಲಿ ತನಕ ನಾ ಉಸಿರಾಡಿದ್ದರೆ ಕೇಳಿ !……..ಆಗ ಬಾಯಿ ತೆರೆದ ಆಟೋದವನು, “ಮ್ಯಾಡಂ ಅವರನ್ನು ಹಾಗೆಲ್ಲ ನೋಡಬಾರದು ಅಂತ..ನಮಸ್ಕಾರ !ಮೊದಲೇ ಹೇಳಿದ್ದರೆ ಏನಾಗ್ತಿತ್ತೋ !?! ..ಈಗ ಹೋಗೋವಾಗ ಎಲ್ಲಾದರೂ ಅವರನ್ನು ನೋಡಿದರೆ ಕೈಯ್ಯಲ್ಲಿದ್ದ ಮೊಬೈಲ್ ಸ್ವಿಚ್ ಆಫ್ ಆಗಿದ್ದರೂ ಕೂಡ ಅಲ್ಲಾಡದೆ ಅದನ್ನೇ ನೋಡುತ್ತಿರುತ್ತೇನೆ!
ಹ್ಮ್.. ಇದೊಂದು ಮಾಯಾನಗರೀನೆ ಹೌದು ಕಣ್ರೀ…. ಇದು ಕೊಟ್ಟ ಪಾಡು , ನಾ ಪಟ್ಟ ಬವಣೆ ಎಷ್ಟೆಲ್ಲಾ ಅಂತ ಗೊತ್ತಾ..ಬರೆಯ ಹೋದರೆ ಕಾದಂಬರಿನೇ ಆದೀತು !3 ಸ್ಟಾಪ್ ಹಿಂದೆ ಹೋದರೆ ಸಿಗೋ ಸಿಲ್ಕ್ ಬೋರ್ಡ್ ಗೆ ಹೋಗಲು ಗೊತ್ತಿಲ್ಲದೇ btm ನಿಂದ ಮೆಜೆಸ್ಟಿಕ್ ಹೋಗಿ ಅಲ್ಲಿಂದ ಸಿಲ್ಕ್ ಬೋರ್ಡ್ಗೆ ಹೋದ ಪರಮ ಬುದ್ದಿವಂತೆ ನಾನು !.ಒಬ್ಬ ಆಸಾಮಿನ ಕೇಳಿದ್ದೆ,ಸಿಲ್ಕ್ ಬೋರ್ಡ್ಗೆ ಹೋಗಬೇಕಾದ್ರೆ ಹ್ಯಾಗ್ ಹೋಗ್ಬೇಕು ಅಂತ ! ಪಾಪ ,ಗೊತ್ತಿಲ್ಲ ಅನ್ನೋಕೆ ನಾಚಿಕೆ ಆಗಿರಬೇಕು !ನೆಕ್ಸ್ಟ್ ಸ್ಟಾಪ್ಗೆ ಹೋಗಿ ಯಾರ್ನಾದ್ರೂ ಕೇಳಿ ಅಂದ .ಅದಕ್ಕೆ ಅಲ್ಲಿ ತನಕ ಯಾಕೆ ಹೋಗ್ಬೇಕು ??ಮೆಜೆಸ್ಟಿಕ್ ನಲ್ಲಿ ಎಲ್ಲ ಬಸ್ಸು ಸಿಗತ್ತೆ ಅಂತ ಅಲ್ಲಿಗೆ ಹೋಗೋಕೆ ಬಸ್ ಸ್ಸ್ಟ್ಯಾಂಡ್ ನಲ್ಲಿ ನಿಂತರೆ ಬರೋ ಬಸ್ಸುಗಳ ಮೇಲಿದ್ದ ಹೆಸರು ಕೆಂ.ಬ.ನಿ (!!?!!)ಆಮೇಲೆ ಬಂದ ಬಸ್ಸುಗಳ ಮೇಲೆ ಬರೆದಿತ್ತು ಕೆಂಪೇಗೌಡ ಬಸ್ ನಿಲ್ದಾಣ ಅಂತ !ಓಹೋ ಗೊತ್ತಾಯ್ತು ಗೊತ್ತಾಯ್ತು !ಅಲ್ಲಾ….ನಮ್ಮ ಕಡೆ ಕಂಡಕ್ಟರುಗಳು ಕಿರುಚುತ್ತಾರಪ್ಪ ಪ್ರಸ್ತುತ ನಿಲ್ದಾಣ ಮತ್ತೆ ಹೋಗಲಿರೋ ನಿಲ್ದಾಣದ ಹೆಸರನ್ನು ..ಇವರೆಲ್ಲ ಯಾಕೆ ಹಿಂಗೆ ?!ಛೆ ಸರಿಯಿಲ್ಲಪ್ಪ ಬೆಂಗಳೂರು !ಆಮೇಲೆ ಫ್ರೆಂಡ್ ಮೂಲಕ ಮೆಜೆಸ್ಟಿಕ್ ಮತ್ತೆ ಕೆಂ.ಬ.ನಿ ಎರಡೂ ಒಂದೇ ಅಂತ ಗೊತ್ತಾದಾಗ ನಗು ಬಂತು ..ಸಂಜೆ ಸಿಲ್ಕ್ ಬೋರ್ಡ್ ಅನ್ನೋದು ನಾನಿದ್ದ ಸ್ಟಾಪಿನ ೩ ಸ್ಟಾಪ್ ಹಿಂದೇನೆ ಅಂತ ಗೊತ್ತಾದಾಗ ನಗು ,ಅಳು ಎರಡೂ ಬಂತು ! ಮತ್ತಷ್ಟು ಓದು 
ರಾಜ್ಯಪಾಲರು…ಅತಿರೇಕ ಹಾಗೂ ಯಡಿಯೂರಪ್ಪ…..
‘ ನಂದನವನ’
ಭ್ರಷ್ಟಚಾರ, ಸ್ವಜನಪಕ್ಷಪಾತ, ಅಧಿಕಾರ ದುರಪಯೋಗ ಕಾರಣಗಳಿಂದಾಗಿ ಮುಖ್ಯಮಂತ್ರಿ ವಿರುದ್ಧವೇ ಕ್ರಿಮಿನಲ್ ಮೊಕದ್ದಮೆ ಹೂಡಲು ರಾಜ್ಯಪಾಲ ಹನ್ಸ್ರಾಜ್ ಭಾರದ್ವಾಜ್ ಅನುಮತಿ ನೀಡಿದ್ದಾರೆ. ಕಟ್ಟರ್ ಕಾರ್ಯಕರ್ತರ ಪಕ್ಷವಾದ ಬಿಜೆಪಿ, ಸಂಘಪರಿವಾರಿಗಳು ನಾಚುವ ಬದಲು ರಾಜ್ಯಪಾಲರ ವಿರುದ್ಧವೇ ತೊಡೆತಟ್ಟಿ ನಿಂತಿರುವುದು ನಾಚಿಕೇಡು. ಭ್ರಷ್ಟಚಾರದ ವಿರುದ್ಧ ಧ್ವನಿ ಎತ್ತುವ ಮೂಲಕ ಕಾನೂನಿನಲ್ಲಿ ಒಬ್ಬ ಸಾಮಾನ್ಯ ಮನುಷ್ಯನಿಂದ ಹಿಡಿದು ಮುಖ್ಯಮಂತ್ರಿಯವರಿಗೆ ಒಂದೇ ನ್ಯಾಯ ಎಂಬ ಘೋಷ ವ್ಯಾಕ್ಯವನ್ನು ವಕೀಲರಾದ ಸಿರಾಜ್ ಭಾಷಾ, ರಾಮಚಂದ್ರ ಸಿಎಂ ವಿರುದ್ದ ಮೊಕದ್ದಮೆಗೆ ಅವಕಾಶ ನೀಡುವಂತೆ ರಾಜ್ಯಪಾಲರ ಅನುಮತಿ ಕೋರುವ ಮೂಲಕ ಎತ್ತಿ ಹಿಡಿದಿದ್ದಾರೆ.
ಮೊದಲಿನಿಂದಲೂ ರಾಜ್ಯದಲ್ಲಿ ಒಂದು ರೀತಿ ವಿರೋಧ ಪಕ್ಷದಂತೆಯೇ ವತರ್ಿಸಿಕೊಂಡು ಬಂದ ರಾಜ್ಯಪಾಲರು ಸಿಎಂ ವಿರುದ್ಧ ಮೊಕದ್ದಮೆ ಹೂಡಲು ಖಂಡಿತಾ ಅನುಮತಿ ಕೊಟ್ಟೆ ಕೊಡುತ್ತಾರೆ ಎಂಬುದರಲ್ಲಿ ಎರಡು ಮಾತು ಇರಲಿಲ್ಲ. ರಾಜ್ಯಪಾಲರು ಈ ಹಿಂದಿನ ಕೆಲವು ಪ್ರಕರಣಗಳಲ್ಲಿ ಸಿಎಂ ಹಾಗೂ ಬಿಜೆಪಿ ಸಕರ್ಾರದ ವಿರುದ್ಧದ ತೋರಿದ ಅಸಹಕಾರ ನಿಜಕ್ಕೂ ಅವರ ಹುದ್ದೆಗೆ ಘನತೆ ತರುವಂಥದ್ದಲ್ಲ. ಆದರೂ ಭ್ರಷ್ಟಾಚಾರದ ವಿಷಯದಲ್ಲಿ ಅವರು ತೆಗೆದುಕೊಂಡಿರುವ ನಿಧರ್ಾರಕ್ಕೆ ಹ್ಯಾಸ್ಟ್ ಅಫ್ ಹೇಳಲೇಬೇಕು.
ರಾಜಕೀಯವಾಗಿ ರಾಜ್ಯಪಾಲರ ಕ್ರಮ ದುರುದ್ದೇಶಪೂರಿತ ವಿರಬಹುದು. ಆದರೆ ಸಾಂವಿಧಾನಿಕವಾಗಿ, ಈ ನೆಲದ ಕಾನೂನು, ಪ್ರಜಾಪ್ರಭುತ್ವವನ್ನು ಗೌರವಿಸುವ ಪ್ರತಿಯೊಬ್ಬ ವ್ಯಕ್ತಿಯು ರಾಜ್ಯಪಾಲರ ಈ ನಿರ್ಣಯವನ್ನು ಗೌರವಿಸುವಂಥದೇ ಆಗಿದೆ. ಮುಖ್ಯಮಂತ್ರಿ ವಿರುದ್ಧದದ ಭ್ರಷ್ಟಾಚಾರದ ಪ್ರಕರಣಗಳು ಪುಂಖಾನುಫುಂಖವಾಗಿ ಮಾಧ್ಯಮಗಳಲ್ಲಿ ಈ ಹಿಂದೆಯೇ ವರದಿಯಾಗಿದ್ದವು. ಒಮ್ಮೆ ಮುಖ್ಯಮಂತ್ರಿಗಳ ತವರು ಜಿಲ್ಲೆ ಶಿವಮೊಗ್ಗಕ್ಕೆ ಕಾಲಿಟ್ಟರೂ ಅಲ್ಲಿಯ ಸಾಮಾನ್ಯ ಜನರು ಕೂಡ ಸಿಎಂ ಅವರ ಪ್ರವರ ಹೇಳುತ್ತಾರೆ. ಅಷ್ಟೂ ಅಲ್ಲದೇ ರಾಜ್ಯಪಾಲರಿಗೆ ಆ ಇಬ್ಬರು ವಕೀಲರು ಕೇವಲ ಅನುಮತಿ ಕೋರಿ ಅಜರ್ಿ ಬರೆದಿಲ್ಲ, ಬದಲಿಗೆ 2000 ಸಾವಿರ ಪುಟಗಳಷ್ಟು ದಾಖಲೆ, ಇನ್ನೂರು ಪುಟಗಳ ವರದಿಯನ್ನು ನೀಡಿದ್ದಾರೆ.
ಆಂಗ್ ಸಾನ್ ಸೂಕಿ ಎಂಬ ಹೆಣ್ಣುಮಗಳಿಂದ ನಾವು ಕಲಿಯಬೇಕಾದದ್ದು !
ಬರ್ಮಾದ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ಆಂಗ್ ಸಾನ್ ಸೂ ಕಿಯ ಬಗ್ಗೆ ಚಿಕ್ಕಂದಿನಿಂದಲೂ ಬೇರೆ ಬೇರೆ ಪತ್ರಿಕೆಗಳಲ್ಲಿ ಓದುತ್ತಲೇ ಇದ್ದೆ. ತನ್ನ ನಾಡಿನ ಜನರ ಸ್ವಾತಂತ್ರ್ಯಕ್ಕಾಗಿ, ಅವರ ಹಕ್ಕುಗಳಿಗಾಗಿ ಹೋರಾಡುತ್ತ ಹೆಚ್ಚು ಕಡಿಮೆ ಬದುಕಿನ ಮುಕ್ಕಾಲು ಭಾಗ ಗೃಹ ಬಂಧನದಲ್ಲೇ ಕಳೆದ ಛಲಗಾರ್ತಿ ಈಕೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡು ಆಚೆ ಬಂದ ಆಕೆಯ ಈ ಕೆಳಗಿನ ಮಾತುಗಳು ಏಳಿಗೆಗೆ ಕನ್ನಡವೊಂದನ್ನೇ ನೆಚ್ಚಿಕೊಂಡಿರುವ ಕೋಟ್ಯಾಂತರ ಅವಕಾಶವಂಚಿತ ಕನ್ನಡಿಗರ ನಡುವೆ “ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಮತ್ತು ಅದು ಕೊಡ ಮಾಡುವ ಉದ್ಯೋಗ, ಜೀವನವಕಾಶದ ಪ್ರಯೋಜನ” ಪಡೆದುಕೊಂಡಿರುವ ಕೆಲವೇ ಕೆಲವು ಕನ್ನಡಿಗರ ಮನಸಿನಲ್ಲಿ ರಿಂಗಣಿಸಬೇಕಿದೆ. ಅಷ್ಟೇ ಅಲ್ಲ, ಸಂವಿಧಾನದ ಪ್ರಕಾರವೇ ಇಡೀ ಭಾರತದೆಲ್ಲೆಡೆ ಹಿಂದಿಯೇತರ ಜನರಿಗಿಂತ ಹೆಚ್ಚಿನ ಸವಲತ್ತು, ಸೌಕರ್ಯ ಪಡೆಯುತ್ತಿರುವ ಹಿಂದಿ ಭಾಷಿಕ ಭಾರತೀಯರ ಮನಸಲ್ಲೂ ಅವರ ಈ ಮಾತುಗಳು ಪ್ರತಿಧ್ವನಿಸಬೇಕಿದೆ:
The value systems of those with access to power and of those far removed from such access cannot be the same. The viewpoint of the privileged is unlike that of the underprivileged.
ಅಧಿಕಾರ, ಸವಲತ್ತು ಅನುಭವಿಸುತ್ತಿರುವ ಜನರು ನಂಬುವ ಮೌಲ್ಯ ವ್ಯವಸ್ಥೆ ಮತ್ತು ಅಧಿಕಾರ, ಸವಲತ್ತಿದಿಂದ ವಂಚಿತರಾಗಿರುವ ಜನರ ಮೌಲ್ಯ ವ್ಯವಸ್ಥೆ ಒಂದೇ ಆಗಿರುವುದಿಲ್ಲ. ಸವಲತ್ತು, ಹಕ್ಕು ಅನುಭವಿಸುತ್ತಿರುವ ಜನರ ನಿಲುವು ವಂಚಿತರಾದವರ ನಿಲುವಿಗಿಂತ ಯಾವತ್ತಿಗೂ ಬೇರೆಯೇ ಆಗಿರುತ್ತದೆ.
ಓಶೋ ಕಂಡಂತೆ ಗಾಂಧಿ!
ಓಶೋ ರಜನೀಶ್ ಜಗತ್ತು ಕಂಡ ಅತ್ಯಂತ ವಿವಾದಾಸ್ಪದ ವ್ಯಕ್ತಿ. ಮಧ್ಯಪ್ರದೇಶದ ಜೈನ ಕುಟುಂಬವೊಂದರಲ್ಲಿ ಹುಟ್ಟಿದ ರಜನೀಶ್ ಬಾಲ್ಯದಿಂದಲೇ ಸ್ವತಂತ್ರ ಚಿಂತನೆಯೆಡೆಗೆ ಒಲವು ಹೊಂದಿದ್ದ. ತನ್ನ ಇಪ್ಪತ್ಮೂರನೆಯ ವಯಸ್ಸಿನಲ್ಲಿ ತನಗೆ ಜ್ಞಾನೋದಯವಾಯಿತು ಎಂದು ಹೇಳಿಕೊಳ್ಳುವ ಈತ ಜಗತ್ತಿನ ಎಲ್ಲಾ ಧರ್ಮಗಳ ಬಗ್ಗೆ ಅತ್ಯಂತ ವಸ್ತುನಿಷ್ಠವಾದ, ಹಿಂದೆ ಯಾರೂ ಹೇಳಿರದಿದ್ದ ಸಂಗತಿಗಳನ್ನು ಹೇಳಿದ. ನಂಬಿಕೆಗಳನ್ನು ಬಿತ್ತುವ, ಆ ಮೂಲಕ ಸ್ವತಂತ್ರ ಚಿಂತನೆಯನ್ನು ನಾಶ ಮಾಡುವ ಎಲ್ಲಾ ವ್ಯವಸ್ಥೆಗಳನ್ನೂ ಖಂಡಿಸಿದ. ಮನುಷ್ಯ ತತ್‌ಕ್ಷಣಕ್ಕೆ ಮಾತ್ರ ಸ್ಪಂದಿಸಬೇಕು. ಯಾವ ಪೂರ್ವಾಗ್ರಹವಿಲ್ಲದೆ, ಭವಿಷ್ಯತ್ತಿನ ಬಗ್ಗೆ ಯೋಜನೆಯಿಲ್ಲದೆ ಈ ಕ್ಷಣದಲ್ಲಿ ಬದುಕಬೇಕು ಎಂದು ಹೇಳಿದ. ಜಗತ್ತಿನ ಯಾವ ವ್ಯಕ್ತಿಯನ್ನೂ, ನಂಬಿಕೆಗಳನ್ನೂ ಬಿಡದೆ ಜಾಲಾಡಿದವ ಈತ. ೧೯೯೦ರಂದು ಹೃದಯಾಘಾತದಿಂದ ನಿಧನನಾದ.
ಇಡೀ ಜಗತ್ತೇ ಮಹಾತ್ಮಾ ಗಾಂಧಿಯನ್ನು ಅಹಿಂಸಾ ಮಾರ್ಗದ ಅನ್ವೇಷಕ ಎಂದು ಕೊಂಡಾಡಿದರೆ ಈತ ಗಾಂಧಿಯನ್ನು ಕುಟಿಲ ರಾಜಕಾರಣಿ ಎಂದು ಕರೆದ. ಗಾಂಧೀಜಿ ಪ್ರತಿಪಾದಿಸಿದ ಅಹಿಂಸೆ, ಸತ್ಯಾಗ್ರಹವೆಲ್ಲವೂ ಕೇವಲ ರಾಜಕೀಯ ತಂತ್ರಗಳು ಎಂದು ವಾದಿಸಿದ. ಗಾಂಧೀಜಿಯ ಸರಳತೆ ಢೋಂಗಿಯದು ಎಂದು ಜರೆದ. ಅವರ ಆಧ್ಯಾತ್ಮ, ಶಿಸ್ತು, ಬ್ರಹ್ಮಚರ್ಯ, ದೇವರ ಕಲ್ಪನೆ ಎಲ್ಲವನ್ನೂ ಲೇವಡಿ ಮಾಡಿದ.
ನಿಜವಾದ ಚಿನ್ನವನ್ನು ಯಾವ ಒರಗೆ ಹಚ್ಚಿದರೂ ತನ್ನ ಹೊಳಪನ್ನು ಹೆಚ್ಚಿಸಿಕೊಳ್ಳುತ್ತದೆಯೇ ಹೊರತು ಕಳೆಗುಂದುವುದಿಲ್ಲ. ಹೀಗಾಗಿ ಓಶೋ ರಜನೀಶ್ ಗಾಂಧಿಯ ಬಗ್ಗೆ ಮಾತಾಡಿರುವ ಬಗ್ಗೆ ಸ್ವಲ್ಪ ತಿಳಿಯೋಣ. ಇದರಲ್ಲಿ ನಮಗೆ ಗಾಂಧೀಜಿಯ ವ್ಯಕ್ತಿತ್ವದ ಬಗ್ಗೆ, ಘನತೆಯ ಬಗ್ಗೆ ಹೊಸತೊಂದು ಆಯಾಮ ಸಿಕ್ಕಬಹುದು. ಯಾರನ್ನೂ ಕಣ್ಣು ಮುಚ್ಚಿ ಒಪ್ಪಬಾರದು ಎಂಬ ಎಚ್ಚರಿಕೆಯಿದ್ದರೆ ನಮ್ಮ ಪ್ರಯತ್ನ ಹೆಚ್ಚು ಪ್ರಯೋಜನಕಾರಿಯಾಗಬಲ್ಲದು.
***
… ನನ್ನ ಪ್ರಕಾರ ಮಹಾತ್ಮ ಗಾಂಧಿ ಒಬ್ಬ ಕಪಟ ರಾಜಕಾರಣಿ. ಅಹಿಂಸೆಯನ್ನು ಅಳವಡಿಸಿಕೊಳ್ಳುವ ಮೂಲಕ ಆತ ಎಷ್ಟೋ ಸಂಗತಿಗಳನ್ನು ತನಗೆ ಹಿತವಾಗುವಂತೆ ನಿರ್ವಹಿಸಿದ. ಎಲ್ಲಾ ಜೈನರು ಆತನ ಅನುಯಾಯಿಗಳಾದರು. ತಾವು ನಂಬಿದ ಅಂಹಿಸೆಯ ತತ್ವವನ್ನು ಬೆಂಬಲಿಸುವ ಒಬ್ಬ ವ್ಯಕ್ತಿಯನ್ನು ಅವರು ಆತನಲ್ಲಿ ಕಂಡಿದ್ದರು. ಗಾಂಧಿ ಜೈನನಾಗಿರಲಿಲ್ಲ. ಆತ ಕೇವಲ ಶೇ ೯ರಷ್ಟು ಜೈನನಾಗಿದ್ದ. ನಾನು ಗಾಂಧಿಯನ್ನು ಹೀಗೆ ವರ್ಣಿಸಲು ಇಚ್ಚಿಸುತ್ತೇನೆ: ಆತ ಹುಟ್ಟಿನಿಂದ ಹಿಂದು ಆದರೆ ಆತ ಕೇವಲ ಶೇ ೧ರಷ್ಟು ಹಿಂದು. ಆತ ಹುಟ್ಟಿದ್ದು ಜೈನರು ಹೆಚ್ಚು ಸಂಖ್ಯೆಯಲ್ಲಿದ್ದ ಗುಜರಾತಿನಲ್ಲಿ ಹೀಗಾಗಿ ಆತ ಶೇ ೯ರಷ್ಟು ಜೈನ. ಉಳಿದ ಶೇ ೯೦ರಷ್ಟು ಆತ ಕ್ರಿಶ್ಚಿಯನ್ ಆಗಿದ್ದ. ಮೂರು ಬಾರಿ ಆತ ಕ್ರೈಸ್ತನಾಗಿ ಮತಾಂತರವಾಗುವ ಹಂತದಲ್ಲಿದ್ದ. ಮತ್ತಷ್ಟು ಓದು 
ಪ್ರೀತಿಯ (?) ರಾಜಕಾರಣಿಗಳಿಗೆ ೩ ಪ್ರಶ್ನೆ-೧ ಸಲಹೆ
ಪ್ರಶಾಂತ್ ಯಾಳವಾರಮಠ
ಇಂದಿನ ನಮ್ಮ ರಾಜಕೀಯ ಪರಿಸ್ತಿತಿಯೇನ್ನು ನೋಡಿ ನಮ್ಮ ಪ್ರೀತಿಯ ರಾಜಕಾರಣಿಗಳಿಗೆ ೩ ಪ್ರಶ್ನೆಗಳನ್ನು ಕೇಳೋಣ ಅಂತ ಅಂದುಕೊಂಡಿದಿನೀ…
೧. ನಿಮಗೆ ಸಾಮಾನ್ಯರಂತೆ ಬದುಕಲು ಆಗುವುದಿಲ್ಲವೇ?
ಇಂದು ಯಾವುದೇ ಪಕ್ಷ ಅತವಾ ವ್ಯಕ್ತಿಯನ್ನ ತಗೊಳ್ಳಿ ಎಲ್ಲರೂ ದುಡ್ಡು ದುಡ್ಡು ಅಂತಿದ್ದಾರೆ.ಒಬ್ಬ ಸಾಮಾನ್ಯ ವ್ಯಕ್ತಿ ಎಲ್ಲ ಸವಲತ್ತುಗಳನ್ನು ಪಡೆದು, ಮನೆ ಮಟ ಮಾಡಿ, ಮಕ್ಕಳನ್ನ ಒಳ್ಳೆ ಶಾಲೆಗಳಿಗೆ ಸೇರಿಸಿ ಸಂತೋಷದಿಂದ ಬದುಕಲು ಕೇವಲ ೧ ಕೋಟಿಗಿಂತ [ಬೆಂಗಳೂರಲ್ಲಿ] ಕಡಿಮೆ ದುಡ್ಡು ಸಾಕು.
ಆದರೆ ಇವತ್ತು ರಾಜಕೀಯದಲ್ಲಿರೋ ಎಲ್ಲರೂ [೯೯%] ಕೋಟ್ಯದಿಪತಿಗಳೇ ಇದ್ದೀರಾ… ಆದರು ನಿಮಗೆ ಯಾಕೆ ಇಷ್ಟೊಂದು ಆಸೆ ಯಾರಿಗೋಸ್ಕರ ಇಷ್ಟೆಲ್ಲಾ ಆಸ್ತಿಯನ್ನ ಮಾಡ್ತಾ ಇದ್ದೀರಾ … ನಿಮಗೂ ಗೊತ್ತು ನಮಗೂ ಗೊತ್ತು ಎಲ್ಲರೂ ಹೋಗುವಾಗ ಏನನ್ನು ತೆಗೆದುಕೊಂಡು ಹೋಗೋದಿಲ್ಲ ಅಂತ ಆದರೂ …
೨. ನೀವು ಯಾಕೆ ಆತ್ಮವಂಚಕರಾಗಿ ಬದುಕುತ್ತಾ ಇದ್ದೀರಿ?
ನೀವು ಎಷ್ಟೊಂದು ತಪ್ಪುಗಳನ್ನ ಮಾಡಿದ್ದಿರೀ, ಮಾಡುತ್ತ ಇದ್ದೀರಿ ಅಂತ ನಮಗಿಂತ ನಿಮಗೆ ಚೆನ್ನಾಗಿ ಗೊತ್ತು ಆದರು ನೀವು ಏನು ಮಾಡಿಯೇ ಇಲ್ಲ ಅಂತೀರಾ.
ನೀವು ಮಾಡಿದ್ದೂ ತಪ್ಪು ಅಂತ ಒಬ್ಬ ಸಾಮಾನ್ಯನು ಹೇಳುತ್ತಾನೆ… ಲಂಚ ತೊಗೊತಿರಿ, ಧಮಕಿ ಹಾಕಸ್ತಿರಿ, ಸರಕಾರಿ ದುಡ್ಡನ್ನ/ಜಾಗವನ್ನ/ವಸ್ತುಗಳನ್ನ/ಮೋಟಾರುಗಳನ್ನ ಗುಳುಂ ಅನಸ್ತಿರಿ, ಗುಂಡಾಗಳನ್ನ ಸಾಕುತ್ತಿರೀ …ಅಬ್ಬಾ ಒಂದಾ ಎರಡಾ …. ಇಷ್ಟೆಲ್ಲಾ ಮಾಡಿದ್ದು ನಿಮಗೂ ಗೊತ್ತು ಆದರು ಯಾಕೆ ನೀವು ಆತ್ಮವಂಚಕರಾಗಿ, ಸಭ್ಯರತರ ನಟಸ್ತೀರಿ ಅಥವಾ ನಿಮಗೆ ಆತ್ಮ ಅನ್ನೋದೇ ಇಲ್ಲವಾ ಹೇಗೆ?
೩. ನಿಮ್ಮ ನಡವಳಿಕೆ ಅಧಿಕಾರದಲ್ಲಿದ್ದಾಗ ಬೇರೆ ಇಲ್ಲದಿದ್ದಾಗ ಬೇರೆ ಯಾಕೆ ?
ನಾನು ಎಷ್ಟೊಂದು ರಾಜಕೀಯ ವ್ಯಕ್ತಿಗಳ ಬಗೆಗಿನ ವಿವರಗಳನ್ನ ನೋಡಿದೆ ಎಲ್ಲರೂ ಎಷ್ಟೊಂದು ಒಳ್ಳೆಯವರು,ಎಷ್ಟೊಂದು ಹೋರಾಟಗಳನ್ನ ಮಾಡಿದ್ದಾರೆ, ಒಳ್ಳೊಳ್ಳೆಯ ಮಾತುಗಳನ್ನ ಆಡಿದ್ದಾರೆ, ಬಡಬಗ್ಗರಿಗೆ ಸಹಾಯ ಮಾಡಿದ್ದಾರೆ ಆದರೆ ಈ ಎಲ್ಲವನ್ನು ಅವರು ವಿರೋಧ ಪಕ್ಷದಲ್ಲಿದ್ದಾಗ ಮಾಡಿದ್ದಾರೆ. ಅಂದರೆ ಇವೆಲ್ಲ ನೀವು ಅಧಿಕಾರ ಹಿಡಿಯಲು ಮಾಡಿರುವ/ಆಡಿರುವ ನಾಟಕಗಳಾ? ಏಕೆಂದರೆ ಅದೇ ವ್ಯಕ್ತಿಗಳು ಅಧಿಕಾರ ಹಿಡಿದಮೇಲೆ ಎಷ್ಟೊಂದು ಭ್ರಷ್ಟಾಚಾರ, ಅನ್ಯಾಯಗಳನ್ನ ಮಾಡಿದ್ದಾರೆ ಅಂದರೆ ಅವುಗಳಿಗೆ ಲೆಕ್ಕವಿಲ್ಲ. ಇದು ಯಾಕೆ ಹೀಗೆ, ಅಧಿಕಾರದ ಮುಂದೆ ಒಳ್ಳೆಯತನ ನಿಲ್ಲೋದಿಲ್ಲವಾ? ಇದು ನಿಜ ಅಂದರೆ ನೀವು ಅಧಿಕಾರದಲ್ಲಿ ಇರೋದೇ ಬೇಡಾ.
ಸಲಹೆ :
ದಯವಿಟ್ಟು ನೀವು ದುಡ್ಡುಮಾಡೋದಕ್ಕೆ ರಾಜಕೀಯ ಸೇರಬೇಡಿ … ಯಾಕಂದರೆ ದುಡ್ಡು ಮಾಡೋದಕ್ಕೆ ನಾನಾ ದಾರಿಗಳಿವೆ.ನಿಮ್ಮ ಮಕ್ಕಳಿಗೆ ಚೆನ್ನಾಗಿ ಜೀವನ ಮಾಡಲು ಕಲಿಸೋ ಶಕ್ತಿ ಇಲ್ಲಾ ಅಂದರೆ ಮಕ್ಕಳನ್ನ ಹಡಿಯಬೇಡಿ ಯಾಕಂದರೆ ನೀವು ಮಾಡೋ ಎಲ್ಲ ತಪ್ಪುಗಳು ನಿಮ್ಮ ಮಕ್ಕಳಿಗೊಸ್ಕರನೆ.ಇನ್ನು ಉಳಿದ ಸಲಹೆಗಳನ್ನ ಈ ಕೆಳಗಿನ ಗೆಳೆಯರು ಕೊಡ್ತಾರೆ ಕೇಳಿ 🙂
ಕನ್ನಡ ಮತ್ತು ಸಂಸ್ಕೃ’ತ’ ಇಲಾಖೆಯೇ?
ಸಂಸ್ಕೃತದಲ್ಲಿ ಅಡಗಿರುವ ಅರಿವನ್ನು ಹೆಚ್ಚು ಜನರಿಗೆ ಪರಿಚಯಿಸುವ ಉದ್ದೇಶದಿಂದ ಶುರುವಾದ ಸಂಸ್ಕೃತ ಭಾರತಿ ಸಂಸ್ಥೆ ಬೆಂಗಳೂರಿನಲ್ಲಿ ಸಂಸ್ಕೃತ ಪುಸ್ತಕ ಮೇಳ ಆಯೋಜಿಸಿದೆ ಅನ್ನುವ ಜಾಹೀರಾತು ಪತ್ರಿಕೆಗಳಲ್ಲಿ ಕಂಡೆ. ವೇದ, ಉಪನಿಷತ್ತು, ಆಯುರ್ವೇದ ಸೇರಿದಂತೆ ಹಲವು ಜ್ಞಾನ ಸಂಪತ್ತನ್ನು ಜನ ಸಾಮಾನ್ಯರಿಗೆ ಮುಟ್ಟಿಸುವುದು ಈ ಮೇಳದ ಉದ್ದೇಶವಾಗಿದೆಯಂತೆ. ಪುಸ್ತಕ ಮೇಳಕ್ಕೆ ನನ್ನ ಯಾವುದೇ ವಿರೋಧವಿಲ್ಲ. ಸಂಸ್ಕೃತದ ಬಗ್ಗೆ ಮೊದಲೇ ವಿರೋಧ ಇಲ್ಲ. ಸಂಸ್ಕೃತದಲ್ಲಿರುವ ಎಲ್ಲ ಒಳ್ಳೆಯದು ಕನ್ನಡಕ್ಕೆ ಅನುವಾದಗೊಂಡು ಕನ್ನಡಿಗರಿಗೆ ದೊರಕಲಿ ಅನ್ನುವುದು ನನ್ನ ನಿಲುವು. ಆದರೆ ಈ ಮೇಳದ ಜಾಹೀರಾತು ನೋಡಿದಾಗ ಅಚ್ಚರಿಯಾಗಿದ್ದು, ಈ ಮೇಳದ ಸಹ ಪ್ರಾಯೋಜಕರು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಂಬುದು !
ಆರ್.ಎಸ್.ಎಸ್ ನ ಅಂಗಸಂಸ್ಥೆಯಾದ “ಸಂಸ್ಕೃತ ಭಾರತಿ” ಸಂಸ್ಕೃತ ಪ್ರಚಾರ, ಪುಸ್ತಕ ಮೇಳ ಅಂತ ಖಾಸಗಿಯಾಗಿ ಕಾರ್ಯಕ್ರಮ ನಡೆಸುವುದಕ್ಕೆ ಯಾರ ವಿರೋಧವೂ ಇಲ್ಲ. ಆದರೆ ಇಂತಹ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿಸುವುದರ ಹಿಂದಿನ ರಹಸ್ಯವೇನು? ಇಮಾಮ ಸಾಬಿಗೂ ಗೋಕುಲಾಷ್ಟಮಿಗೂ ಏನ್ ಸಂಬಂಧ? ಬೆಳಗಾವಿಯಲ್ಲಿ ನಡೆಯಬೇಕಿದ್ದ ವಿಶ್ವ ಕನ್ನಡ ಸಮ್ಮೇಳನಕ್ಕೆ ಸರಿಯಾದ ಆದ್ಯತೆ, ಗಮನ ಕೊಡದೇ ವರ್ಷಾನುಗಟ್ಟಲೆ ಅದನ್ನು ಮುಂದೆ ಹಾಕುವ ಸರ್ಕಾರ ಸಂಸ್ಕೃತ ಪುಸ್ತಕ ಮೇಳದ ಯಶಸ್ಸಿಗೆ ಟೊಂಕ ಕಟ್ಟಿ ನಿಲ್ಲುವುದನ್ನು ನೋಡಿದಾಗ ಅದನ್ನು misplaced priority ಅನ್ನದೇ ವಿಧಿಯಿಲ್ಲ. ಹೇಗೆ ಕೊಂಕಣಿ ಅಕಾಡೆಮಿಯ ಕೆಲಸ ಕೊಂಕಣಿ ಭಾಷೆ, ಸಂಸ್ಕೃತಿಯ ಉಳಿಸುವಿಕೆ-ಬೆಳೆಸುವಿಕೆಯೋ, ಹೇಗೆ ತುಳು ಅಕಾಡೆಮಿಯ ಕೆಲಸ ತುಳು ನುಡಿ, ತುಳು ಸಂಸ್ಕೃತಿಯ ಪೋಷಣೆ, ರಕ್ಷಣೆಯೋ, ಅದೇ ರೀತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೆಲಸ ಕನ್ನಡ ನಾಡು-ನುಡಿ, ಸಂಸ್ಕೃತಿಯ ಉಳಿವು,ಬೆಳೆವು, ಕನ್ನಡಿಗರಲ್ಲಿ ಕನ್ನಡತನದ ಅರಿವು ಹೆಚ್ಚಿಸುವತ್ತ ಗಮನ ಹರಿಸುವುದೇ ವಿನಹ ಇಂದು ಸಂಸ್ಕೃತ ಮೇಳ ಇಲ್ಲವೇ ನಾಳೆ ದಿನ ತಮಿಳು ಮೇಳ, ಹಿಂದಿ ಮೇಳ ಅಂತ ತನ್ನ ಕಾರ್ಯ ವ್ಯಾಪ್ತಿಗೆ ಸಂಬಂಧಿಸದ ಮೇಳಗಳನ್ನು ಪ್ರಾಯೋಜಿಸುವುದಲ್ಲ. ಕನ್ನಡ ವಿಶ್ವವಿದ್ಯಾಲಯಗಳು ಅನುದಾನವಿಲ್ಲದೇ ಒದ್ದಾಡುತ್ತಿವೆ. ಗಡಿ ಭಾಗದ ಕನ್ನಡ ಶಾಲೆಗಳೆಲ್ಲ ಒಂದೊಂದಾಗಿ ಬಾಗಿಲು ಹಾಕಿ, ಅಲ್ಲಿನ ಕನ್ನಡಿಗರೆಲ್ಲ ಪರಭಾಷಿಕರಾಗುತ್ತಿದ್ದಾರೆ, ಇದಾವುದನ್ನೂ ಗಮನಿಸದ ಸರ್ಕಾರ, ಸಂಸ್ಕೃತ ಪುಸ್ತಕ ಮೇಳವನ್ನು ಪ್ರಾಯೋಜಿಸುವುದನ್ನು ನೋಡಿದಾಗ, ಕೋಟ್ಯಾಂತರ ಜನ ಆಡುವ ಜೀವಂತ ಭಾಷೆಯತ್ತ ಅದಕ್ಕಿರುವ ಆದ್ಯತೆ ಏನಿದೆ, ಎಷ್ಟಿದೆ ಅನ್ನುವ ಪ್ರಶ್ನೆ ಕನ್ನಡಿಗರ ಮನಸಲ್ಲಿ ಬರದೇ ಇರದು. ಮತ್ತಷ್ಟು ಓದು










