ವಿಷಯದ ವಿವರಗಳಿಗೆ ದಾಟಿರಿ

Recent Articles

19
ಆಕ್ಟೋ

ಇತಿಹಾಸದಿಂದ ಏನನ್ನೂ ಕಲಿಯಲು ಸಿದ್ಧರಾಗಿದ್ದಲ್ಲಿ,ಮರುಕಳಿಸುವ ಇತಿಹಾಸವನ್ನೇ ನೋಡಬೇಕಾಗುತ್ತದೆ

 – ಮಯೂರಲಕ್ಷ್ಮಿ

ಇತಿಹಾಸಜಾರ್ಜ ಸಂತಾಯನ ಎನ್ನುವ ಪ್ರಸಿದ್ಧ ಕವಿ ಮತ್ತು ತತ್ವಜ್ಞಾನಿ ಇತಿಹಾಸವನ್ನು ಕುರಿತು ತನ್ನ ಅಭಿಪ್ರಾಯವನ್ನು ಹೀಗೆ ತಿಳಿಸಿದ್ದಾನೆ.

ಒಂದು ದೇಶದ ಸಂಸ್ಕೃತಿಯ ದ್ಯೋತಕ ಅದರ ಪರಂಪರೆ ಧ್ಯೇಯ ನಿಷ್ಠೆ ಮತ್ತು ಅದರ ಇತಿಹಾಸವನ್ನೂ ಅವಲಂಬಿಸಿದೆ.

ಉನ್ನತ ಸಂಸ್ಕೃತಿಯನ್ನು ಹೊಂದಿದ ದೇಶಗಳು ಸುಭಿಕ್ಷವಾಗುವುದು ತನ್ನಲ್ಲಿ ಅಂತರ್ಗತವಾಗಿರುವ ಐತಿಹಾಸಿಕ ಮೌಲ್ಯಗಳ ಜಾಗೃತಿಯಿಂದ ಮಾತ್ರ.

ತಮ್ಮ ಅಸಾಧಾರಣ ಇಚ್ಛಾಶಕ್ತಿಯಿಂದ ಅಪರಿಮಿತ ಸಂಕಲ್ಪಶಕ್ತಿಯಿಂದ ಇತಿಹಾಸವನ್ನೇ ನಿರ್ಮಿಸಿದವರ ಸಂಖ್ಯೆ ಅತ್ಯಾಧಿಕ. ಇಂತಹ ಇತಿಹಾಸದ ಅರಿವು ಶಿಕ್ಷಣದಿಂದ ಮಾತ್ರ ಸಾಧ್ಯವೇ? ಹಾಗಿದ್ದಲ್ಲಿ ಇತಿಹಾಸವನ್ನು ನಮ್ಮ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಕಡ್ಡಾಯವಾಗಿ ಇತಿಹಾಸ ಇರಬೇಕೋ ಅಥವಾ ಐಚ್ಛಿಕವಾಗಿ ಕಲಿಯಬೇಕೋ ಎನ್ನುವ ಪ್ರಶ್ನೆ ಮೂಡುವುದು.

ಒಂದು ವ್ಯವಸ್ಥೆಯಲ್ಲಿ ಸಾಗುತ್ತಿರುವ ನಮ್ಮ ಶಿಕ್ಷಣ ವ್ಯವಸ್ಥೆಯ ಇತಿಮಿತಿಗಳನ್ನರಿತು ಅವಲೋಕಿಸಿದಾಗ ನಮ್ಮ ಮುಂದಿನ ದೇಶದ ರೂವಾರಿಗಳಾದ ಇಂದಿನ ಯುವಶಕ್ತಿಗೆ ಇತಿಹಾಸವನ್ನೂ ಇತಿಹಾಸದಿಂದ ನಾವು ಕಲಿತಿರುವ ಮತ್ತು ಕಲಿಯಬೇಕಾಗಿರುವುದನ್ನೂ ಅರಿಯಬೇಕಾದ ಇತಿಹಾಸ ಪ್ರಜ್ಞೆ ಇದೆಯೇ? ಅಥವಾ ಜಾಗೃತವಾಗಿಲ್ಲವೇ? ನಮ್ಮ ತರುಣ ಪೀಳಿಗೆಯನ್ನು ಗತವೈಭವ ಎನ್ನುವ ನಮ್ಮ ಇತಿಹಾಸದತ್ತ ಸಂಪರ್ಕಿಸುವಲ್ಲಿ ನಾವು ಸೋಲುತ್ತಿದ್ದೇವೆಯೇ?

ಮತ್ತಷ್ಟು ಓದು »

17
ಆಕ್ಟೋ

ಶ್ರೇಣಿಕೃತ ವ್ಯವಸ್ಥೆ ಜಾತಿಗಳಿಗೆ ಮಾತ್ರ ಸೀಮಿತವೇ?

– ಪ್ರಸನ್ನ ಬೆಂಗಳೂರು

ಜಾತಿ ವ್ಯವಸ್ಥೆಕನ್ನಡಪ್ರಭದಲ್ಲಿ ರಾಕೇಶ್ ಶೆಟ್ಟಿಯವರ ಲೇಖನವನ್ನು ಅರ್ಥ ಮಾಡಿಕೊಳ್ಳದ ಕೆಲವರು ಜಾಲತಾಣದಲ್ಲಿ ಆ ಲೇಖನದ ವಿಶ್ಲೇಷಣೆಗಿಳಿದು ವ್ಯಂಗ್ಯ ವಿಡಂಬನೆ ಮೂಲಕ ಆ ಲೇಖನದ ಬಿಸಿಯನ್ನು ತಗ್ಗಿಸಲು ಪ್ರಯತ್ನಿಸಲು ನಿಂತರು. ಲೇಖನವನ್ನು ಬರೆಯಲು ಷಣ್ಮುಖ ಅರ್ಮುಗಂ ಅವರೂ ಕೂಡ ಹಲವಾರು ಬಾರಿ ಒತ್ತಾಯಿಸಿದ್ದರೂ ಸಹ ಯಾವುದೇ ವಿಷಯ ನನ್ನೊಳಗೆ ಕುದ್ದು ಖೋವ ಆಗದೆ ಬರಹ ರೂಪಕ್ಕಿಳಿಯಲಾಗದು ಎಂಬ ಕನ್ನಡದ ಅತ್ಯುತ್ಕೃಷ್ಹ ಸಾಹಿತಿ ಭೈರಪ್ಪನವರ ಮಾತಿನಂತೆ ಆ ವಿಷಯ ನನ್ನೊಳಗೆ ಹರಳುಗಟ್ಟಲು ಬಿಟ್ಟಿದ್ದೆ. ಪುರೋಹಿತಶಾಹಿ ಎಂದರೇನು ಎನ್ನುವುದನ್ನು ನಾನಿಲ್ಲಿ ವಿವರಿಸಲು ಹೊರಟಿಲ್ಲ. ಅಂತಹ ಯಾವ ವ್ಯವಸ್ಥೆಯೂ ಇಲ್ಲವೆಂದು ಈಗಾಗಲೆ CSLC ತಂಡ ಧೃಢಪಡಿಸಿದೆ. ಆದರೆ, ಜಾತಿ ವ್ಯವಸ್ಥೆಯ ಬಗ್ಗೆ ಪದೇ ಪದೇ ಪ್ರಶ್ನೆಗಳು ಏಳುತ್ತಿರುತ್ತವೆ. ಜಾತಿ ಇಲ್ಲವೆ? ಪದ್ದತಿ ಇಲ್ಲವೆ? ವ್ಯವಸ್ಥೆ, ಶ್ರೇಣಿ ಇಲ್ಲವೆ? ಎಂಬ ಪ್ರಶ್ನೆಗಳು ಏಳುವುದು ಸಾಮಾನ್ಯ.

ಈ ಸಂಶೋಧನಾ ತಂಡದ ಪ್ರಕಾರ ಹೇಳುವುದಾದರೆ, ಭಾರತೀಯ ಸಮಾಜವು ವ್ಯವಸ್ಥಿತವಾಗಿ ಯೂರೋಪಿಯನ್ನರು ಹೇಳುವಂತೆ ಇರಲಿಲ್ಲ. ಯೂರೋಪಿಯನ್ನರು ಅವರ ಕನ್ನಡಕದಲ್ಲಿ ಭಾರತೀಯ ಸಮಾಜವನ್ನು ನೋಡಿ ಅವರ ಸಮಾಜಕ್ಕೆ ಸಮೀಕರಿಸಿಕೊಂಡು ಅನರ್ಥೈಸಿ ಕಥೆಗಳನ್ನು ಹೆಣೆದರು. ಆ ಕಥೆಗಳನ್ನೇ ‘ವಾಸ್ತವ ಸತ್ಯ’ ವೆಂದು ನಂಬಿಕೊಂಡ ನಮ್ಮ ಮೂರ್ಖಶಿಖಾಮಣಿಗಳು ಈಗ ಕೂಗಾಟ ಅರಚಾಟ, ಹಾರಾಟ ಓರಾಟಗಳಲ್ಲಿ ತೊಡಗಿದ್ದಾರೆ. ಹೀಗೆ ಭಾರತದ ಕುರಿತ ಯುರೋಪಿಯನ್ನರ ಚಿತ್ರಣ ಮತ್ತು ಅವುಗಳನ್ನೇ ಸತ್ಯವೆಂದು ನಂಬಿ ಆ ನಕಲುಗಳನ್ನೇ ಪುನರುತ್ಪಾದಿಸುತ್ತಿರುವ ಚಿಂತನೆಗಳ ಮಿತಿಯನ್ನು, ವಿಫಲತೆಯನ್ನು ಎತ್ತಿ ತೋರಿಸುವ ಮೂಲಕ ವಾಸ್ತವವನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳುವ ಹೊಸ ಸಾಧ್ಯತೆಗಳನ್ನು ಈ ಸಂಶೋಧನಾ ತಂಡ ಶೋಧಿಸುತ್ತಿದೆ. ಅದರಲ್ಲಿ ಬಹುತೇಕ ಯಶಸ್ಸನ್ನೂ ಕಂಡಿದೆ. ಆದರೆ ಇದನ್ನೆಲ್ಲಾ ಹೇಳ ಹೊರಟರೆ ಈ ಎಡಬಿಡಂಗಿಗಳಿಗೆ ತಮ್ಮ ಮೂಲಕ್ಕೆ ಪೆಟ್ಟು ಬಿದ್ದು ಹೊಟ್ಟೆಹೊರೆಯುವಿಕೆ ನಿಂತು ಹೋಗುತ್ತದೆಂಬ ಭಯದಿಂದ ಶತಾಯಗತಾಯ ಅದನ್ನು ವಿರೋಧಿಸುತ್ತಾರೆ ಮತ್ತು ಅದರಲ್ಲಿ ಯಶಸ್ವಿಯೂ ಆಗಿ ರಾಜಕೀಯ ಒತ್ತಡ ತಂದು ಆ ಕೇಂದ್ರವನ್ನು ಮುಚ್ಚಿಸಿದ್ದೂ ಅದಕ್ಕಾಗಿ ಖುಷಿ ಪಟ್ಟಿದ್ದೂ ಆಯ್ತು.

ಜಾತಿ, ಶ್ರೇಣಿಕರಣ, ಪುರೋಹಿತಶಾಹಿ ಪರಿಕಲ್ಪನೆಗಳಲ್ಲಿನ ಸಮಸ್ಯೆಗಳನ್ನು ವಿವರಿಸಲು ತಮ್ಮ ಸಂಶೋಧನಾ ಭಾಷೆ ಮತ್ತು ಗ್ರಾಂಥಿಕ ಶಬ್ಧಗಳು ಮತ್ತು ಪಠ್ಯ ಪುಸ್ತಕ ಮಾದರಿ ಶಬ್ಧಗಳ ಮೂಲಕ ವಿವರಿಸಲು ಸಂಶೋಧಕರು ತೊಡಗುವುದು ಸಾಮಾನ್ಯರಾದ ನಮಗೆ ಅರ್ಥವಾಗುವುದು ಕಷ್ಟವಾಗುತ್ತದೆ. ಇದೇನೋ ಸಂಶೋಧಕರಿಗೆ ಮಾತ್ರ ಸೀಮಿತ ಎಂದು ಸುಮ್ಮನಾಗುವ ಸಾಧ್ಯತೆಯೂ ಇದೆ.

ಮತ್ತಷ್ಟು ಓದು »

16
ಆಕ್ಟೋ

ಮ೦ಗಳಯಾನದ ಬಗ್ಗೆ ಅಮ೦ಗಳಕರ ಮಾತನ್ನಾಡುವವರ ಕುರಿತು…

-ಗುರುರಾಜ್ ಕೊಡ್ಕಣಿ

ಮಂಗಳಯಾನಸುಮಾರು ಮೂರು ವಾರಗಳ ಹಿ೦ದೆ ಯಶಸ್ವಿಯಾದ ’ಮ೦ಗಳಯಾನ’ ಯೋಜನೆಯ ಬಗ್ಗೆ ನೀವು ಕೇಳಿರುತ್ತೀರಿ.ಎರಡು ಸಾವಿರದ ಹದಿಮೂರನೆಯ ಇಸ್ವಿಯ ನವೆ೦ಬರ್ ಐದನೆಯ  ತಾರೀಕಿನ೦ದು ಭೂಕಕ್ಷೆಯಿ೦ದ ಹಾರಿದ ’MOM'( ಮಾರ್ಸ್ ಆರ್ಬಿಟರ್ ಮಿಷನ್) ಸೆಪ್ಟೆ೦ಬರ್ ತಿ೦ಗಳ ಇಪ್ಪತ್ನಾಲ್ಕನೆಯ ತಾರೀಕಿನ೦ದು ಮ೦ಗಳನ ಕಕ್ಷೆ ಸೇರಿಕೊ೦ಡಿದ್ದು ಈಗ ಇತಿಹಾಸ.ನಿಜಕ್ಕೂ ಇದೊ೦ದು ಐತಿಹಾಸಿಕ ಸಾಧನೆ.ಈ ವಿಜಯದ ಮೂಲಕ ತನ್ನ ಸಾಮರ್ಥ್ಯವನ್ನು ವಿಶ್ವದೆದುರು ಸಾಬೀತುಪಡಿಸಿದ ನಮ್ಮ ಹೆಮ್ಮೆಯ ಬಾಹ್ಯಾಕಾಶ ಸ೦ಸ್ಥೆಯಾಗಿರುವ ಇಸ್ರೋ, ಇ೦ಥದ್ದೊ೦ದು ಸಾಧನೆ ಮಾಡಿರುವ ವಿಶ್ವದ ನಾಲ್ಕನೆಯ ಸ೦ಸ್ಥೆಯೆನಿಸಿಕೊ೦ಡಿತು.ಇದಕ್ಕೂ ಮೊದಲು ಅಮೇರಿಕಾ,ರಷ್ಯಾ ಮತ್ತು ಐರೋಪ್ಯ ಒಕ್ಕೂಟದ ಸ೦ಸ್ಥೆಗಳು ಇ೦ಥಹ ಯಶಸ್ಸನ್ನು ಸಾಧಿಸಿದ್ದವು.ಅಲ್ಲದೆ ಈ ಸಾಧನೆಯನ್ನು ಮಾಡಿರುವ ಏಷ್ಯಾದ ಮೊದಲ ರಾಷ್ಟ್ರ ಎನ್ನುವ ಹೆಗ್ಗಳಿಕೆಯೂ ಭಾರತದ್ದಾಗಿದೆ ಎ೦ದರೇ ನಮಗೆ ಹೆಮ್ಮೆಯೆನಿಸಬಹುದು.ವಿಚಿತ್ರವೆ೦ದರೆ ವೈಜ್ನಾನಿಕ ಕ್ಷೇತ್ರದಲ್ಲಿ ಭಾರತಕ್ಕಿ೦ತ ಬಹು ದೂರ ಸಾಗಿರುವ ಚೀನಾ ದೇಶಕ್ಕೆ ಕುಜಗ್ರಹವಿನ್ನೂ ಕೈವಶವಾಗಿಲ್ಲ.ಸುಮಾರು ಸಾವಿರದ ಮುನ್ನೂರು ಕೇಜಿಗಳಷ್ಟು ತೂಗುವ ಉಪಗ್ರಹವನ್ನು ಅರವತ್ತಾರು ಕೋಟಿ ಕಿಲೋಮೀಟರುಗಳಷ್ಟು ದೂರಕ್ಕೆ ಕಳುಹಿಸಲು ಇಸ್ರೋ ಮಾಡಿರುವ ಖರ್ಚು ಕೇವಲ ನಾನೂರೈವತ್ತು ಕೋಟಿ ರೂಪಾಯಿಗಳು.ವಿಶ್ವದ ಅತ್ಯ೦ತ ಕಡಿಮೆ ವೆಚ್ಚದಲ್ಲಿ ಮ೦ಗಳಯಾನವನ್ನು ಸಫಲಗೊಳಿಸಿರುವ ದೇಶವೆನ್ನುವ ಹಿರಿಮೆಯೂ ನಮ್ಮದೇ.ವರ್ಷಗಟ್ಟಲೇ ಕಷ್ಟಪಟ್ಟು ದುಡಿದು ಅ೦ಗಾರಕನನ್ನು ಗೆದ್ದ ಇಸ್ರೋದ ವಿಜ್ನಾನಿಗಳು ಅ೦ತಿಮ ಕ್ಷಣಗಳಲ್ಲಿ ಭಾವುಕರಾಗಿ ಒಬ್ಬರನ್ನೊಬ್ಬರು ತಬ್ಬಿಕೊ೦ಡು ಆನ೦ದಭಾಷ್ಪವನ್ನು ಸುರಿಸಿದ್ದು ನಿಜಕ್ಕೂ ಹೃದಯಸ್ಪರ್ಶಿಯಾಗಿತ್ತು.ದೊಡ್ಡದೊ೦ದು ಮಹತ್ವಾಕಾ೦ಕ್ಷೆಯ ಯಜ್ನವೊ೦ದರ ಸಫಲತೆಯ ಅದ್ಭುತ ತೃಪ್ತಿ ಅವರದ್ದು.

ಆದರೆ ಈ ಸ೦ಭ್ರಮಾಚರಣೆಯ ನ೦ತರ ನಡೆದ ಕೆಲವು ಘಟನೆಗಳು ನಮ್ಮ ಕೆಲವು ಪ್ರಗತಿಪರ ಬರಹಗಾರರ ಮತ್ತು ಹಲವು ರಾಜಕಾರಣಿಗಳ ರುಗ್ಣ ಮಾನಸಿಕತೆ ಹಿಡಿದ  ಕನ್ನಡಿಯ೦ತಿದ್ದವು.ಹೀಗೊ೦ದು ಯಶಸ್ಸಿನ ನ೦ತರ ಚಿಕ್ಕದೊ೦ದು ಅಭಿನ೦ದನಾ ಭಾಷಣವನ್ನು ಮಾಡಿದ ನಮ್ಮ ಪ್ರಧಾನಮ೦ತ್ರಿ ನರೇ೦ದ್ರ ಮೋದಿಯವರು,’ಇ೦ಥಹ ಆಕಾಶಯಾನದ ಕನಸು ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿಯವರಿಗೂ ಇತ್ತು’ ಎ೦ದುಬಿಟ್ಟರು.ನಮ್ಮ ಕೆಲವು ಪುಢಾರಿಗಳಿಗೆ ಅಷ್ಟು ಸಾಕಾಯಿತು.’ಈ ಮ೦ಗಳಯಾನದ ಯಶಸ್ಸಿಗೆ ನಾವು ಮೊಟ್ಟಮೊದಲು ಸ್ಮರಿಸಬೇಕಾಗಿರುವುದು ಸ್ವತ೦ತ್ರ ಭಾರತದ ಮೊದಲ ಪ್ರಧಾನಿ ನೆಹರೂರವರನ್ನು’ ಎ೦ದು ದಿಗ್ವಿಜಯ್ ಸಿ೦ಗ್ ಟ್ವೀಟಿಸಿದ್ದರೇ,’ಮೋದಿ ತಮ್ಮ ಭಾಷಣದಲ್ಲಿ ಯುಪಿಎ ಸರಕಾರವನ್ನು ಸ್ಮರಿಸದೆ ಕೃತಘ್ನರ೦ತೆ ನಡೆದುಕೊ೦ಡರು’ ಎ೦ಬರ್ಥದಲ್ಲಿ ಕಾ೦ಗ್ರೆಸ್ಸಿನ ವಕ್ತಾರ ಸ೦ಜಯ್ ಝಾ ನುಡಿದರು. ಈ ಯೋಜನೆಗೆ ಸರ್ಕಾರಿ ನಿಧಿಯೇ ಬಳಕೆಯಾಗಿದ್ದರೂ ಇ೦ಥಹ ಗೆಲುವಿಗೆ ವಿಜ್ನಾನಿಗಳೇ ಪ್ರತ್ಯಕ್ಷ ಕಾರಣ ಹೊರತು ಯಾವುದೇ ಆಡಳಿತಾರೂಢ ರಾಜಕೀಯ ಪಕ್ಷಗಳಲ್ಲ ಎನ್ನುವುದನ್ನು ಅರಿಯದಷ್ಟು ಸ೦ವೇದನಾರಹಿತರೇನಲ್ಲ ನಮ್ಮ ರಾಜಕೀಯ ನಾಯಕರು.ಆದರೂ ತಮ್ಮ ರಾಜಕೀಯ ಹಿತಾಸಕ್ತಿಗಳಿಗಾಗಿ ಈ ಅಭೂತಪೂರ್ವ ಯಶಸ್ಸಿನ ಕೀರ್ತಿಯನ್ನು ತಮ್ಮದಾಗಿಸಿಕೊಳ್ಳಲು ಎಲ್ಲ ಪ್ರಮುಖ ಪಕ್ಷಗಳು ಹೆಣಗಾಡಿದವು.ವೈಜ್ನಾನಿಕ ಯಶಸ್ಸನ್ನೂ ಸಹ ರಾಜಕೀಯದಾಟಕ್ಕೆ ಬಳಸಿಕೊ೦ಡ ರಾಜಕೀಯ ನೇತಾರರ ಚರ್ಯೆ ದೇಶದ ನಾಗರಿಕರಲ್ಲಿ ಪ್ರಜಾ ಪ್ರತಿನಿಧಿಗಳೆಡೆಗೊ೦ದು ತಿರಸ್ಕಾರ ಮೂಡಿಸಿದ್ದು ಸುಳ್ಳಲ್ಲ.

ಮತ್ತಷ್ಟು ಓದು »

16
ಆಕ್ಟೋ

ತಮಿಳ್ ಮಕ್ಕಳನ್ನು ಆತಂಕದ ಗುಮ್ಮನ ಕೈಗಿತ್ತ ‘ಅಮ್ಮ’!

– ತುರುವೇಕೆರೆ ಪ್ರಸಾದ್

Jayalilthaತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ 18 ವರ್ಷಗಳ ನಂತರ ಅವರ ಅಕ್ರಮ ಆಸ್ತಿ ಗಳಿಕೆ ಆರೋಪ ಸಾಬೀತಾಗಿದ್ದು ಇದೀಗ ಶಿಕ್ಷೆಯಾಗಿದೆ. ಅಧಿಕಾರ ಹಾಗೂ ಕೀರ್ತಿಯ ಉತ್ತುಂಗದಲ್ಲಿದ್ದಾಗಲೇ ಅವರು ಜೈಲು ಸೇರುವಂತಾಗಿದೆ. ಹಾಲಿ ಮುಖ್ಯಮಂತ್ರಿಯೊಬ್ಬರು ಭ್ರಷ್ಟಾಚಾರ ಹಾಗೂ ಅಕ್ರಮ ಸಂಪತ್ತು ಗಳಿಕೆ ಆರೋಪದ ಮೇಲೆ ಜೈಲು ಸೇರುತ್ತಿರುವುದೂ ಇದೇ ಮೊದಲ ಬಾರಿಯಾದ್ದರಿಂದ ಈ ಪ್ರಕರಣ ಭಾರೀ ಮಹತ್ವ ಹಾಗೂ ಪ್ರಚಾರ ಪಡೆದಿದೆ. ಎಲ್ಲಾ ತತ್ವ, ಸಿದ್ಧಾಂತ,ಕಾನೂನಿನ ನಿಯಂತ್ರಣ ಮೀರಿ ಅಪರಾಧೀಕರಣಗೊಳ್ಳುತ್ತಿರುವ ರಾಜಕೀಯ ಕ್ಷೇತ್ರಕ್ಕೆ ನ್ಯಾಯಾಲಯದ ತೀರ್ಪು ಒಂದು ಎಚ್ಚರಿಕೆಯ ಗಂಟೆ ಎಂದರೆ ತಪ್ಪಾಗಲಾರದು. ಇದು ಜಯಲಲಿತಾ ವಿರೋಧಿಗಳಿಗೆ ಸಿಕ್ಕ ಜಯವೂ ಹೌದು, ಹಾಗೆಯೇ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸತ್ಯ, ನ್ಯಾಯಕ್ಕೆ ಸಿಕ್ಕ ಜಯವೂ ಹೌದು.

ಆದರೆ ಈ ಪ್ರಕರಣದ ಹಿನ್ನಲೆಯಲ್ಲಿ ಕೆಲವೊಂದು ಅಂಶಗಳನ್ನು ಯೋಚಿಸಬೇಕಿದೆ. ಜಯಲಲಿತಾ ಅವರಿಗೆ ಅಕ್ರಮ ಸಂಪತ್ತು ಗಳಿಕೆ ಆರೋಪದ ಹಿನ್ನಲೆಯಲ್ಲಿ ಶಿಕ್ಷೆಯಾಗಿರುವುದರಿಂದ ಇನ್ನು ಮುಂದಾದರೂ ನಮ್ಮ ರಾಜಕೀಯ ಕ್ಷೇತ್ರ ಶುದ್ಧೀಕರಣಗೊಳ್ಳುತ್ತದೆ ಎಂದು ನಂಬುವ ಹಾಗಿಲ್ಲ. ಯಾಕೆಂದರೆ ಜಯಲಲಿತಾ ಅವರ ಅಕ್ರಮ ಅಸ್ತಿ ಪ್ರಮಾಣ ಕೇವಲ 66 ಕೋಟಿ. ಆದರೆ ಸಾವಿರಾರು ಕೋಟಿ ಅಕ್ರಮ ಆಸ್ತಿ ಮಾಡಿ, ಸ್ವಿಸ್ ಬ್ಯಾಂಕಿನಲ್ಲಿ ಕೋಟ್ಯಂತರ ರೂಪಾಯಿ ಇಟ್ಟಿರುವ ನೂರಾರು ರಾಜಕಾರಣಿಗಳು, ಉದ್ಯಮಿಗಳು ಹಾಗೂ ಅಧಿಕಾರಿಗಳು ಇದ್ದಾರೆ. ಅವರೆಲ್ಲರ ವಿರುದ್ಧ ನಮ್ಮ ಕಾನೂನು ಏನೂ ಮಾಡಲಾಗಿಲ್ಲ. ಸ್ವಾತಂತ್ಯ್ರ ಬಂದ ನಂತರ ದೇಶದಲ್ಲಿ ನಡೆದಿರುವ ಒಟ್ಟಾರೆ ಹಗರಣಗಳಲ್ಲಿ ರೂ.91063323430000 ರಷ್ಟು ದೊಡ್ಡ ಮೊತ್ತದ ಭ್ರಷ್ಟಾಚಾರ ನಡೆದಿದೆ ಎಂದು ಹೇಳಲಾಗಿದೆ. ಈ ಅಕ್ರಮ ಹಣದ ಫಲಾನುಭವಿಗಳಲ್ಲಿ ಎಷ್ಟು ಮಂದಿಗೆ ಶಿಕ್ಷೆ ಆಗಿದೆ? ಯಾಕೆ ಆಗಿಲ್ಲ? ಎಂದು ಯೋಚಿಸಬೇಕಿದೆ.

ಹಾಗಾದರೆ ಜಯಲಲಿತಾ ಅವರಿಗೆ ಶಿಕ್ಷೆ ಆಗಿದ್ದೇಕೆ? ಜಯಲಲಿತಾ ಅನುಭವದ ಕೊರತೆ ಹಾಗೂ ಮಿತಿ ಮೀರಿದ ಉದ್ಧಟತನದಿಂದ ಎಲ್ಲಾ ತೊಂದರೆಗಳನ್ನು ತಾವೇ ಆಹ್ವಾನಿಸಿಕೊಂಡರು. 1991-96 ರ ಅಧಿಕಾರಾವಧಿಯಲ್ಲಿ ಅವರು ತೆಗೆದುಕೊಂಡ ತಪ್ಪು ನಿರ್ಧಾರಗಳಿಗೆ ಅವರು ಈಗ ಭಾರೀ ಬೆಲೆ ತೆರುವಂತಾಗಿದೆ. ಆ ಅವಧಿಯಲ್ಲಿ ಅವರಿಗೆ ರಾಜಕೀಯ ಪ್ರಬುದ್ಧತೆ ಇರಲಿಲ್ಲ, ರಾಜಕೀಯಕ್ಕೆ ಬೇಕಾದ ಸೂಕ್ಷ್ಮತೆ, ದೂರಾಲೋಚನೆ , ಅನುಭವ ಯಾವುದೂ ಅವರಿಗಿರಲಿಲ್ಲ. ಹೋಗಲೆಂದರೆ ಅವರಿಗೆ ಆ ಸಮಯದಲ್ಲಿ ಸೂಕ್ತ ಮಾರ್ಗದರ್ಶನವೂ ಸಿಗಲಿಲ್ಲ. ಅವರ ಬಂಧುಗಳು ಅಧಿಕಾರದಲ್ಲಿ ಭಾರೀ ಹಸ್ತಕ್ಷೇಪ ನಡೆಸಿದರು.ನೂರಾರು ಕೋಟಿ ರೂಗಳ ಅಕ್ರಮ ನಡೆಯಿತು. ಜೊತೆಗೆ ಜಯಲಲಿತಾ ತಮ್ಮ ರಾಜಕೀಯ ಜೀವನದುದ್ದಕ್ಕೂ ವಿರೋಧಿಗಳನ್ನೇ ಸೃಷ್ಟಿಸಿಕೊಳ್ಳುತ್ತಾ ಹೋದರು. ಸುಬ್ರಹ್ಮಣ್ಯಸ್ವಾಮಿ, ಟಿ.ಎನ್.ಶೇಷನ್, ಚಿದಂಬರಂ ಎಲ್ಲರನ್ನೂ ಎದುರು ಹಾಕಿಕೊಂಡರು. ಪ್ರಜಾಪ್ರಭುತ್ವದಿಂದ ಬಂದ ಅಧಿಕಾರವನ್ನು ಸರ್ವಾಧಿಕಾರಿಯ ಧೋರಣೆಯಿಂದ ನಡೆಸಿದರು.ಅವರಲ್ಲಿ ಅಹಂ ತುಂಬಿ ತುಳುಕುತ್ತಿತ್ತು. ವಿರೋಧಿಗಳೊಂದಿಗೆ ರಾಜಕೀಯ ದ್ವೇಷಕ್ಕೆ ಮೀರಿದ ವೈಯಕ್ತಿಕ ಸೇಡಿನ ಮನೋಭಾವ ಬೆಳೆಸಿಕೊಂಡರು. ಯಾರನ್ನೂ ಬೇಕಾದರೂ ದುಡ್ಡು ಚೆಲ್ಲಿ ಕೊಂಡುಕೊಳ್ಳಬಲ್ಲೆ ಎಂಬ ದರ್ಪ ಮೆರೆದರು.

ಮತ್ತಷ್ಟು ಓದು »

15
ಆಕ್ಟೋ

ಓದುಗ ಸಾಹಿತ್ಯ ಮತ್ತು ವಿಮರ್ಶಕ – ಭಾಗ 2

– ಮು.ಅ ಶ್ರೀರಂಗ ಬೆಂಗಳೂರು

ಕನ್ನಡ ಸಾಹಿತ್ಯ‘ನಿಲುಮೆ’ಯಲ್ಲಿ 13-8-14ರಂದು ಪ್ರಕಟವಾದ ಈ ಸರಣಿಯ ಮೊದಲ ಭಾಗದಲ್ಲಿ (ಓದುಗ ಸಾಹಿತ್ಯ ಮತ್ತು ವಿಮರ್ಶಕ – ಭಾಗ 1) ಹೇಳಿದಂತೆ ‘ಕನ್ನಡ ಪ್ರಭ’ದಲ್ಲಿ ಪ್ರಕಟವಾದ ನನ್ನ  ‘ಇಂದಿನ ನಮ್ಮ ಜೀವನದಲ್ಲಿ ಸಾಹಿತ್ಯಕ್ಕೆ ಅವಕಾಶವಿದೆಯೇ?’ ಎಂಬ ಲೇಖನಕ್ಕೆ  ಓದುಗರಿಂದ ಐದು ಪ್ರತಿಕ್ರಿಯೆಗಳು ಬಂದಿದ್ದವು. ಆ ಪ್ರತಿಕ್ರಿಯೆಗಳ ಮುಖ್ಯಾಂಶಗಳನ್ನು ಮೊದಲಿಗೆ ನೋಡೋಣ

(1) ಸಾಹಿತ್ಯವೆಂದರೆ ನಮ್ಮೊಳಗಿನ ಅನುರಣ – ಜಿ ಎಸ್ ನಾಗೇಶ್ ಗುಬ್ಬಿ  (29-4-12)
ಇಂದಿನ ನಮ್ಮ ಜೀವನದಲ್ಲಿ ಸಾಹಿತ್ಯಕ್ಕೆ ಅವಕಾಶವಿದೆಯೇ?  ಎಂದು ಪ್ರಶ್ನಿಸಿ, ಅಗತ್ಯವಿಲ್ಲ ಎಂಬ ಅಭಿಪ್ರಾಯವನ್ನೂ ತಾವೇ ನೀಡಿದ್ದು ವಿಚಿತ್ರವೆನಿಸಿತು.  ಜತೆಗೆ ದೈನಂದಿನ ಒತ್ತಡಗಳಿಂದಾಗಿ ಸಾಹಿತ್ಯ ಕಡೆಗಣಿಸಲ್ಪಡುತ್ತಿದೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಅವರು ದ್ವಂದ್ವದಲ್ಲಿದ್ದಾರೆಂಬುದು ಸ್ಪಷ್ಟ. ಅವರ ಅಭಿಪ್ರಾಯಕ್ಕೆ ನನ್ನ ಆಕ್ಷೇಪವಿದೆ. ನಮ್ಮಲ್ಲಿ ಬಹಳಷ್ಟು ಮಂದಿ ಸಾಹಿತ್ಯವೆಂದರೆ ಪುಸ್ತಕದ ಓದು ಅಥವಾ ಕವಿ ಸಾಹಿತಿಗಳ ಜೀವನವನ್ನು ಅರಿಯುವುದೆಂದು ತಪ್ಪಾಗಿ ಭಾವಿಸಿದ್ದಾರೆ. ಕವಿಗಳು ಸಾಹಿತಿಗಳು ವ್ಯಕ್ತಿ ಶೋಧದಲ್ಲಿ ನಿರತರಾದವರಲ್ಲ. ಸಮಷ್ಟಿ ಶೋಧ ಅವರ ಮೂಲ ಉದ್ದೇಶ. ಕೇವಲ ದೊಡ್ಡ ದೊಡ್ಡ ಕವಿಗಳನ್ನು ಸಾಹಿತಿಗಳನ್ನು ಓದಿಕೊಂಡ ಮಾತ್ರಕ್ಕೆ ನನಗೆ ಸಾಹಿತ್ಯ ಗೊತ್ತು ಎಂದು ಪರಿಭಾವಿಸಿದರೆ ಅವರಿಗಿಂತ ಮೂರ್ಖರು ಮತ್ತೊಬ್ಬರಿರಲಾರರು. ‘ಹಾಗೆಂದು ಅವರನ್ನು ಓದಬಾರದೆಂದಲ್ಲ. ಆದರೆ ನಿಮ್ಮೊಳಗೆ ನಿಮ್ಮದೇ ಆದ ಚಿಂತನೆಗಳಿಲ್ಲದಿದ್ದರೆ ಅದು ದಕ್ಕಲಾರದು’. ನಮ್ಮ ದೈನಂದಿನ ಜೀವನವನ್ನು ನಾನಾ ಉದಾಹರಣೆಗಳನ್ನು ಕೊಟ್ಟು ಶ್ರೀರಂಗ ಅವರು ಟೀಕಿಸಿದ್ದಾರೆ. ರೈಲಿನಲ್ಲಿ ಪ್ರಯಾಣ ಮಾಡುತ್ತಿರುವಾಗಲೇ ಹೋಂ ವರ್ಕ್ ಮುಗಿಸಿಕೊಳ್ಳುವ ಮಕ್ಕಳಿದ್ದಾರೆ. ಅಸೈನ್ ಮೆಂಟುಗಳನ್ನು ಅಚ್ಚುಕಟ್ಟಾಗಿ ರೆಡಿಮಾಡಿಕೊಳ್ಳುವ ಬಿ. ಎಡ್., ಡಿ.ಎಡ್.  ವಿಧ್ಯಾರ್ಥಿಗಳನ್ನು ಕಾಣಬಹುದು. ಭೈರಪ್ಪನವರ ಒಳಹೊಕ್ಕಂತೆ, ಅನಂತಮೂರ್ತಿಯವರನ್ನು ಆವಾಹಿಸಿಕೊಂಡಂತೆ ಚರ್ಚೆಗಿಳಿಯುವ ಸಾಹಿತ್ಯಾಭಿಮಾನಿಗಳಿದ್ದಾರೆ. ಇನ್ನು ಟಿ. ವಿ. ಧಾರಾವಾಹಿಗಳನ್ನು ನೋಡುತ್ತಾ ಸಾಂಸಾರಿಕ ಕಲಹಗಳಿಗೆ ಕಾರಣಗಳನ್ನು, ಪರಿಣಾಮಗಳನ್ನು ಅರಿಯುತ್ತಾ ತಮ್ಮ ಸಂಸಾರ ಹಾಗಾಗಬಾರದೆಂದು ಅಪೇಕ್ಷಿಸಿದ, ತಪ್ಪನ್ನು ತಿದ್ದಿಕೊಂಡ ಅನೇಕ ಕುಟುಂಬಗಳನ್ನು ಕಂಡಿದ್ದೇನೆ. ಚೆನ್ನಾಗಿ ನಿದ್ದೆ ಮಾಡಿ ಮೇಲೆದ್ದ ತಕ್ಷಣ ಸೊಗಸಾದ ಕವನ ರಚಿಸಿ ಬೆರಗುಗೊಳಿಸಿದವರಿದ್ದಾರೆ. ಭಾನುವಾರ ಶಾಪಿಂಗ್ ಮಾಲ್ ನಲ್ಲಿ ಅಡ್ಡಾಡುತ್ತಲೇ ಅಲ್ಲಿನ ‘ಸಾಲ ಮಾಡಿ ಸ್ನೇಹ ಕಳೆದುಕೊಳ್ಳಬೇಡಿ’ ಎಂಬ ಸ್ಲೋಗನ್ ನೋಡಿ  ಸಾಲ ಮತ್ತು ಸ್ನೇಹದ ಬಗ್ಗೆ ಆಲೋಚನಾಪರರಾಗುವವರನ್ನು ಕಾಣುತ್ತೇವೆ. ಇವತ್ತಿನ ಶಾಪಿಂಗ್ ಮಾಲ್ ಗಳಂತೂ ಸಾಹಿತ್ಯ ಮತ್ತು ಸಂಸ್ಕೃತಿಯ ತವರೇ ಆಗಿರುವುದು ಎಲ್ಲರಿಗೂ ತಿಳಿದೇ ಇದೆ. ಹೀಗಿರುವಾಗ ನೋಡುವ ಕಣ್ಣು, ಕೇಳುವ ಕಿವಿ, ಅರಿಯುವ ಪ್ರಜ್ಞೆ ಇದ್ದರೆ ಸಾಕು. ಯಾವುದೇ ಸ್ಥಳದಲ್ಲಿದ್ದರೂ ಸಾಹಿತ್ಯಿಕ ಚಿಂತನೆಯನ್ನು ಅಂತರ್ಗತಗೊಳಿಸಿಕೊಳ್ಳಲು ಸಾಧ್ಯವಿದೆ. ಇಷ್ಟಕ್ಕೂ ಸಾಹಿತ್ಯದ ಅಧ್ಯಯನವೆಂದರೆ ಜನಜೀವನ, ಮಾನವನ ನಡುವಳಿಕೆಗಳ, ಸಮುದಾಯಗಳ ನಡುವಿನ ಸಂವೇದನೆಗಳನ್ನು ಕುರಿತದ್ದು. ಆದ್ದರಿಂದ ವಿಶೇಷವಾದ ಓದೇನೂ ಬೇಕಾಗಿಲ್ಲ. ಸಾಹಿತ್ಯವೆಂದರೆ ಕೇವಲ ಶಬ್ದಗಳ ಆಡಂಬರವಲ್ಲ.

ಮತ್ತಷ್ಟು ಓದು »

14
ಆಕ್ಟೋ

ನಮ್ಮ ನಮ್ಮ ಭಾಷೆಯ ಸಮಸ್ಯೆ

– ಡಾ. ಶ್ರೀಪಾದ ಭಟ್

ಸಹಾಯಕ ಪ್ರಾಧ್ಯಾಪಕ, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು.

ಕನ್ನಡ ಕಲಿವಾರಗಳ ಹಿಂದೆ ಭಾರತದ ಖಗೋಳ ವಿಜ್ಞಾನಿಗಳ ತಂಡ ಮಂಗಳನ ಕಕ್ಷೆಗೆ ಉಪಗ್ರಹವನ್ನು ಯಶಸ್ವಿಯಾಗಿ ಸೇರಿಸಿತು. ಈ ಸಂದರ್ಭದಲ್ಲಿ ಬಹುತೇಕ ಕನ್ನಡ ವಾಹಿನಿಗಳು ಚರ್ಚೆಯನ್ನು ಏರ್ಪಡಿಸಿದ್ದವು. ಖಗೋಳ ಅನ್ನುತ್ತಿದ್ದಂತೆ ಈ ಕುರಿತ ಭಾರತದ ಪ್ರಾಚೀನ ಜ್ಞಾನವೇತ್ತರನ್ನು ಹಾಗೂ ಇಂದಿನ ವಿಜ್ಞಾನಿಗಳನ್ನು ಅಥವಾ ಅವರ ಪ್ರತಿನಿಧಿಗಳು ಅಂದುಕೊಂಡವರನ್ನು ಚರ್ಚೆಗೆ ಆಹ್ವಾನಿಸಬೇಕಲ್ಲ? ವಾಹಿನಿಗಳೂ ಹಾಗೆಯೇ ಮಾಡಿದವು. ಎರಡೂ ಕ್ಷೇತ್ರದವರನ್ನು ಜೊತೆಗೆ ನಡುವೆ ವಿಚಾರವಾದಿಗಳನ್ನು ಕರೆತಂದು ಕೂರಿಸಲಾಗಿದ್ದ ಚರ್ಚೆಯೊಂದನ್ನು ನೋಡುತ್ತಿದ್ದೆ. ಜ್ಯೋತಿಷಶಾಸ್ತ್ರದಲ್ಲಿ ಮಂಗಳನ ಬಗ್ಗೆ ಹೀಗೆ ಹೇಳಿದೆ, ಹಾಗೆ ಹೇಳಿದೆ. ಅದೇ ಸತ್ಯ; ಭಾರತೀಯ ಋಷಿ ಮುನಿಗಳು ಅಣುವಿನ ಬಗ್ಗೂ ಪ್ರಸ್ತಾಪಿಸಿದ್ದಾರೆ, ಅವರಿಗೆಲ್ಲ ತಿಳಿದಿತ್ತು ಎಂಬಂತೆ ಆ ಶಾಸ್ತ್ರದವರು ಅನ್ನುತ್ತಿದ್ದರೆ ಮತ್ತೊಂದೆಡೆ ಹಾಗಾದ್ರೆ ಅವರಿಗೆ ಅಣುಬಾಂಬ್ ತಿಳಿದಿತ್ತಾ? ಇದೆಲ್ಲ ನಾನ್ಸೆನ್ಸ್ ಎಂದು ಆಧುನಿಕ ಜ್ಞಾನ ಪ್ರತಿಪಾದಕರು ಬಿಸಿಬಿಸಿ ಚರ್ಚೆ ಮಾಡುತ್ತಿದ್ದರು.ತಮ್ಮ ತಮ್ಮ ಪ್ರತಿಪಾದನೆಗೆ ಎರಡೂ ಗುಂಪಿನವರೂ ಬಲವಾಗಿ ಅಂಟಿಕೊಂಡೇ ಇದ್ದರು. ಸಮಯವಾಯ್ತು, ಚರ್ಚೆ ನಿಂತಿತು. ಇಂಥ ಚರ್ಚೆಗೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ.

ಕಾರಣ ಇಷ್ಟೇ. ಭಾರತದ ಪ್ರಾಚೀನ ಜ್ಞಾನ ಅಂದರೆ ಇಲ್ಲಿ ಚಂದ್ರ, ಸೂರ್ಯ, ಮಂಗಳ ಮೊದಲಾದವುಗಳ ಬಗ್ಗೆ ಜ್ಯೋತಿಷಶಾಸ್ತ್ರದಲ್ಲಿ ಹೇಳಿರುವ ಮಾತುಗಳು ಅಥವಾ ಪಾರಂಪರಿಕ ಜ್ಞಾನ. ಇವುಗಳ ವಿವರ ಭಾಸ್ಕರಾಚಾರ್ಯ, ವರಾಹಮಿಹಿರ ಮೊದಲಾದವರ ಕೃತಿಗಳಲ್ಲಿ ತಕ್ಕಮಟ್ಟಿಗೆ ದೊರೆಯುತ್ತದೆ. ಇದನ್ನು ಇಂದಿನ ಜ್ಯೋತಿಷ್ಕರು ತುಸು ತಿಳಿದಿರುತ್ತಾರೆ. ಇನ್ನು ಆಧುನಿಕ ವಿಜ್ಞಾನ ಕುರಿತು ಮಾತನಾಡುವವರು ವಿಜ್ಞಾನಿಗಳ ಸಾಧನೆಯನ್ನು ಪತ್ರಿಕೆಗಳಲ್ಲಿ ಓದಿದವರೋ ವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಪಾಠ ಮಾಡುವವರೋ ಆಗಿದ್ದವರು. ಇವರಲ್ಲಿ ಎರಡೂ ವರ್ಗದವರೂ ಈ ಎರಡೂ ಕ್ಷೇತ್ರದ ಜ್ಞಾನ ಸೃಷ್ಟಿಗೆ ಕಾರಣರಾದವರಲ್ಲ, ಬದಲಿಗೆ ಯಾರೋ ಮಾಡಿದ ಪ್ರಯೋಗ-ಅದರ ಫಲಿತಗಳ ಅಂತಿಮ ಫಲಾನುಭವಿಗಳು.

ಮತ್ತಷ್ಟು ಓದು »

13
ಆಕ್ಟೋ

ಕೈಲಾಶ್ ಸತ್ಯಾರ್ಥಿ : ಮಾನವತೆಯ ಕೈಲಾಸ ಪರ್ವತ

– ರಾಘವೇಂದ್ರ ಅಡಿಗ

ಕೈಲಾಶ್ ಸತ್ಯಾರ್ಥಿಭಾರತದ ಮಧ್ಯ ಪ್ರದೇಶದ ವಿದಿಶಾ ನಗರದಲ್ಲಿ ಹುಟ್ಟಿ “ಬಚಪನ್ ಬಚಾವೋ” ಆಂದೋಳನದ ಮೂಲಕ ಸಾವಿರಾರು ಮಕ್ಕಳನ್ನು ಜೀತ ವಿಮುಕ್ತಿಗೊಳಿಸಿದ ವ್ಯಕ್ತಿ 60 ರ ಪ್ರಾಯದ ಕೈಲಾಶ್ ಸತ್ಯಾರ್ಥಿಯವರ ಕುರಿತಾಗಿ ಮೊನ್ನೆ ನೋಬೆಲ್ ಶಾಂತಿ ಪಾರಿತೋಶಕ ಘೋಷಣೆ ಆಗುವವರೆಗೂ ನಮಗೆ ಯಾರೊಬ್ಬರಿಗೂ ಅವರ ಬಗೆಗೆ ತಿಳಿದಿರಲಿಲ್ಲ ಎನ್ನುವುದು ನಮ್ಮ ದೇಶದ ಸಾಧಕನೋರ್ವನ ಬಗೆಗೆ ನಮಗಿರುವ ಉದಾಸೀನತೆಗೆ ಸಾಕ್ಷಿಯಲ್ಲವೆ? ಭಾರತದ ಸಾಮಾನ್ಯ ಜನರಿಗಾಗಲೀ, ಭಾರತದ ಘನ ಸರ್ಕಾರಗಳಿಗಾಗಲೀ, ಸಾವಿರಾರು ಸಂಖ್ಯೆಯಲ್ಲಿರುವ ಸಂಘ ಸಂಸ್ಥೆಗಳಲ್ಲಿ ಯಾರೊಬ್ಬರಿಗೂ ಇವರ ಬಗೆಗೆ, ಇವರ ಸಾಮಾಜಿಕ ಕಳಕಳಿಯ ಕಾರ್ಯಗಳ ಬಗೆಗೆ ಯಾವೊಂದು ವಿಚಾರವೂ ತಿಳಿದಿರಲಿಲ್ಲ! “ಡರ್ಟಿ ಪಿಕ್ಚರ್” ನಂತಹಾ ಚಲನಚಿತ್ರಗಳಲ್ಲಿ ನಟಿಸಿದ ನಟಿಮಣಿಯರಿಗೆಲ್ಲ ಭಾರತದ ಉನ್ನತ ನಾಗರಿಕ ಗೌರವ “ಪದ್ಮಶ್ರೀ” ಪ್ಯ್ರಸ್ಕಾರವು ಸಂದಿರುವಾಗ ನಮ್ಮ ನಡುವೆಯೇ ಇದ್ದು ಸಾವಿರಾರು ಬಡ ಮಕ್ಕಳ ಉದ್ದಾರಕ್ಕಾಗಿ ಟೊಂಕಕಟ್ಟಿದ ಕೈಲಾಶ್ ರಂತಹವರನ್ನು ನಮ್ಮ ಸರ್ಕಾರಗಳು ಗುರುತಿಸದೇ ಹೋದುದು ತೀರಾ ಖೇದಕರ ಸಂಗತಿಯಲ್ಲವೆ? ಇನ್ನಾದರೂ ನಮ್ಮ ದೇಶದ ಸರ್ಕಾರಗಳು, ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಬೇಕಿದೆ. ಹಾಗಾದಾಗ ಮಾತ್ರವೇ ನಮ್ಮ ಸಮಾಜಕ್ಕೂ, ಜನತೆಗೂ ಮಾನವತೆಯ ಮೌಲ್ಯಗಳ ಅರಿವಿದೆ ಎಂದು ಇತರರಿಗೆ ತಿಳಿಸಿದಂತಾಗುತ್ತದೆ.

ಆ ಹುಡುಗನು ತಾನು ನಿತ್ಯವೂ ಶಾಲೆಗೆ ನಡೆದು ಹೋಗುತ್ತಿದ್ದಾಗ ತನ್ನದೇ ಓರಗೆಯ ಹುಡುಗನೋರ್ವನು ತನ್ನ ತಂದೆಯೊಡನೆ ಕುಳಿತು ಬೂಟು ರಿಪೇರಿ ಮಡುತ್ತಿದ್ದುದನ್ನು ಕಾಣುತ್ತಿದ್ದನು. ಅದಾಗೆಲ್ಲಾ ಈ ಹುಡುಗನ ಮನಸ್ಸಿನಲ್ಲಿ ‘ನಾನು ಉತ್ಸಾಹದಿಂದಲೂ ಸಂತೋಷದಿಂದಲೂ ಶಾಲೆಗೆ ಹೋಗುತ್ತಿದ್ದರೆ ಆ ಹುಡುಗ ಮಾತ್ರ ತನ್ನ ತಂದೆಯೊಂದಿಗೆ ಕುಳಿತು ಬೂಟು ಹೊಲಿಯುತ್ತಿದ್ದಾನೆ, ಅದೇಕೆ ಹೀಗೆ?’ಎನ್ನುವ ಆಲೋಚನೆ ಹುಟ್ಟುತ್ತಿತ್ತು.

ಅದೊಮ್ಮೆ ಅದೇ ಪ್ರಶ್ನೆಯನ್ನು ತನ್ನ ಶಾಲಾ ಉಪಾದ್ಯಾಯರ ಬಳಿ ಕೇಳಲಾಗಿ “ ಅವರ ಬಳಿ ಹಣವಿಲ್ಲ, ಅವರು ಬಡವರು. ವಿದ್ಯಾಭ್ಯಾಸ ಪಡೆದುಕೊಳ್ಳಲಿಕ್ಕೆ ಸಾಕಷ್ಟು ಧನಬಲವಿಲ್ಲದವರು.” ಎನ್ನುವ ಉತ್ತರ ದೊರಕಿತು.

ಮತ್ತಷ್ಟು ಓದು »

11
ಆಕ್ಟೋ

ಪ್ರತಿಭಟನೆ ಮಾಡಿದವರೆಲ್ಲ ಕೃತಿಯನ್ನು ಓದಿದ್ದರೇ?

– ವೃಷಾಂಕ ಭಟ್

ವಾಲ್ಮೀಕಿ ಯಾರುಡಾ.ಕೆ.ಎಸ್.ನಾರಾಯಣಾಚಾರ್ಯರು ಬರೆದ ‘ವಾಲ್ಮೀಕಿ ಯಾರು?’ ಎಂಬ ಪುಸ್ತಕದ ವಿರುದ್ಧ ಹಲವು ಪ್ರತಿಭಟನೆಗಳನು ನಡೆದವು. ನನಗೆ ಹೆಚ್ಚು ಹಾಸ್ಯಾಸ್ಪದವೆನಿಸಿದ್ದು ಸಿಪಿಎಂ ನಡೆಸಿದ ಪ್ರತಿಭಟನೆ. ದೇವರ ಅಸ್ಥಿತ್ವವನ್ನೇ ಒಪ್ಪದ ಎಡಪಂಥೀಯರು ರಾಮನನ್ನು ದೇವರೆಂದು ಬರೆದ ವಾಲ್ಮೀಕಿ ಪರ ವಕಾಲತ್ತು ವಸಿದ್ದಕ್ಕೆ ಏನು ಹೇಳಬೇಕು? ಓಟ್ ಬ್ಯಾಂಕ್ ಸೃಷ್ಟಿಸಲು ತಮ್ಮ ಸಿದ್ಧಾಂತವನ್ನೇ ಮರೆತ ಪಕ್ಷವಲ್ಲವೇ? ಅದೇನೇ ಇರಲಿ, ಕೃತಿಯೊಂದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆಯಾದಾಗ, ಆ ಕೃತಿಯನ್ನೋದಬಯಸುತ್ತದೆ ಮನಸ್ಸು. ಹಿಂದೆ ‘ಡುಂಡಿ’ ಬಿಡುಗಡೆಯಾದಗಲೂ ಕದ್ದು ಓದುವ ಪ್ರಯತ್ನ ಮಾಡಿದ್ದೆ. ಕದ್ದು ಓದಿದ್ದೇಕೆಂದರೆ ಆ ಕೃತಿಯನ್ನು ನಿಷೇಸಲಾಗಿತ್ತು. ಹೀಗೆ ಕದ್ದು ಓದಲು ಯತ್ನಿಸಿದ ಡುಂಡಿಯನ್ನು ಹತ್ತು ಪುಟಕ್ಕಿಂತ ಹೆಚ್ಚು ಓದಲಾಗಲಿಲ್ಲ. ‘ವಾಲ್ಮೀಕಿ ಯಾರು’ ಕೃತಿಯೂ ಇದರಿಂದ ಹೊರತಾಗಿರದು ಎಂಬ ಪೂರ್ವಾಲೋಚನೆಯಲ್ಲಿದ್ದವನನ್ನು, ಕೃತಿ ಸೋಲಿಸಿತು!

ಈ ಕೃತಿಯ ವಿರುದ್ಧ ಹೋರಾಟನಡೆಸಿದವರಲ್ಲಿ ಹೆಚ್ಚಿನವರು ಕೃತಿಯನ್ನೇ ಓದಿರುವುದಿಲ್ಲ ಎಂದು ನಾನು ಪಂದ್ಯ ಕಟ್ಟಬಲ್ಲೆ. ಅದರಲ್ಲಿ ಹಂಗಿದೆಯಂತೆ, ಹಿಂಗಿದೆಯಂತೆ ಎಂದು ಹರಡುವ ಮಾತನ್ನೇ ನಂಬಿ ಕೆಲವರು ದೊಂಬಿ ಎಬ್ಬಿಸುತ್ತಾರೆ. ಉಳಿದವರು ಕುರಿಗಳಂತೆ ಸೇರಿಕೊಳ್ಳುತ್ತಾರೆ. ಆದರೆ ಈ ಲೇಖನ ಬರೆಯುವ ಮುನ್ನ ನಾನು ಕೃತಿಯನ್ನು ಸಂಪೂರ್ಣವಾಗಿ ಓದ್ದೇನೆ. ಓದಿದ್ದನ್ನು ನನ್ನ ಸಾಮರ್ಥ್ಯಕ್ಕೆ ನಿಲುಕುವಷ್ಟು ಅರ್ಥೈಸಿಕೊಂಡಿದ್ದೇನೆ. ಕೃತಿಯ ವಿರುದ್ಧ ಗಲಾಟಗಳಾದ ಕೂಡಲೇ ಈ ಲೇಖನವನ್ನು ಬರೆಯಬಹುದಿತ್ತು. ಆದರೆ ಪ್ರತಿಭಟನಕಾರರ ಮನಸ್ಸು ಇನ್ನೊಬ್ಬರ ಮಾತನ್ನು ಆಲಿಸುವಷ್ಟು ಮಟ್ಟಿಗೆ ಶಾಂತವಾಗುವ ತನಕ ಬರೆಯದೇ ಇರುವುದು ಲೇಸು ಎನ್ನಿಸಿತು. ಎಲ್ಲಕ್ಕೂ ಮಿಗಿಲಾಗಿ, ಈ ಕೃತಿಯ ಬಗ್ಗೆ ಇಷ್ಟೆಲ್ಲಾ ಗಲಾಟೆ ಇದ್ದರೂ, ಹೆಚ್ಚಿನವರಿಗೆ ಓದಲು ಈ ಪುಸ್ತಕ ಸಿಕ್ಕಿಲ್ಲ. ಅವರೆಲ್ಲರ ಕುತೂಹಲವೂ ತಣಿಯಬಹುದೆಂಬ ನಂಬಿಯಿದೆ.

ಮೊದಲಿಗೆ ಆಚಾರ್ಯರು ಬರೆದ ಯಾವ ಸಾಲುಗಳಿಂದ ವಾಲ್ಮೀಕಿ ಜನಾಂಗದವರಿಗೆ ನೋವುಂಟಾಗಿರಬಹುದೆಂಬುದನ್ನು ತಿಳಿಯಲು ಯತ್ನಿಸೋಣ.

1. ಪಾಮರನಾದ ಬೇಡನೊಬ್ಬ ದಿಢೀರನೆ ಕಾವ್ಯ ಬರೆದ ರೀತಿ ಇದೆಂದು ಹೇಳುವುದು ಹಾಸ್ಯಾಸ್ಪದವೇ ಆಗುತ್ತದೆ.
2. ವಾಲ್ಮೀಕಿಯ ವಾಗ್ವೈಭವಕ್ಕೆ ಈವರೆಗೆ ನಾವು ಅವನ ಪಾತ್ರರಚನೆ, ಪೋಷಣೆ, ವಾಕ್ಯಗಳ ವಿವರಣೆಗಳನ್ನು ಇತ್ತಿರುವುದೆಲ್ಲ ಸಾಕ್ಷಿ ಎಂದ ಮೇಲೆ ಹೆಚ್ಚು ಹೇಳುವುದೇನಿದೆ? ಪಾಮರನಿಗೆ ಇವೆಲ್ಲ ಶಕ್ಯವೇ?
3. ವಾಲ್ಮೀಕಿ ಬೇಡನೆಂಬುದಕ್ಕೆ ‘ಶ್ರೀ ವಾಲ್ಮೀಕಿ ರಾಮಾಯಣ’ದಲ್ಲಿ ಯಾವ ಆಧಾರಗಳೂ ಇಲ್ಲ.
4. ಕೃತಿಗಳನ್ನು ಓದದೆ ಕೇವಲ ಹೆಸರು ಅಂಟಿಸಿಕೊಂಡರೆ ಅವರಿಗೂ ಅಪಕೀರ್ತಿ, ನಿಮಗೂ ಹಾನಿ!
ಮತ್ತಷ್ಟು ಓದು »

8
ಆಕ್ಟೋ

ಭ್ರಷ್ಟ ಜಯಲಲಿತಾ ಯಾವೆಲ್ಲದರ ಫಲಿತಾಂಶ?

– ಚೇತನಾ ತೀರ್ಥಹಳ್ಳಿ    

Jayalilthaಅಧಿಕೃತವಾಗಿ ತನ್ನ ಸ್ವಂತದವರೆಂದು ಹೇಳಿಕೊಳ್ಳಲು ಮತ್ತೊಂದು ಜೀವ ಜೊತೆಗಿರದ ಜಯಲಲಿತಾ ಇವೆಲ್ಲವನ್ನೂ ಮಾಡಿಟ್ಟಿದ್ದು ಯಾಕಾಗಿ? ತನ್ನ ನೆಲದ ಬಡ ಜನರಿಗೆ ರೂಪಾಯಿಗೊಂದು ಇಡ್ಲಿ, ಕುಡಿಯುವ ನೀರು, ಸೂರು ಎಂದೆಲ್ಲ ಜನಪರ – ಜನಪ್ರಿಯ ಯೋಜನೆಗಳನ್ನು ರೂಪಿಸಿದ ಜಯಲಲಿತಾ ಅದೇ ಜನರ ತೆರಿಗೆ ಹಣವನ್ನು ನುಂಗಿ ಕೂತಿರುವುದು ಯಾಕೆ? ನಿಜಕ್ಕೂ ಈ ಪರಿಯ ಹಪಾಹಪಿ ಅವರಲ್ಲಿದೆಯೇ? ತುಸು ಜಂಭದ, ಆದರೆ ಅಪ್ರಮಾಣಿಕತೆ ಕಾಣದ ಅವರ ಮುಖ ಹಾಗೂ ನಿಲುವಿನಲ್ಲಿ ಮೋಸವಿದೆಯೇ? ಇಂದು ನಾವು ನೋಡುತ್ತಿರುವ ಭ್ರಷ್ಟ ರಾಜಕಾರಣಿ ಜಯಲಲಿತಾ ರೂಪುಗೊಂಡಿದ್ದು ಹೇಗೆ?

ಬದುಕನ್ನು ಗಂಡು – ಹೆಣ್ಣೆಂಬ ಭೇದ ಮೀರಿದ ದೃಷ್ಟಿಕೋನದಿಂದ ನೋಡಬೇಕೆನ್ನುವುದು ನಿಜವಾದರೂ ಅದರ ಹೊರಳಾಟಗಳನ್ನು ನೋಡುವಾಗ ಈ ಭೇದದ ಊರುಗೋಲು ಅಗತ್ಯವಾಗಿಬಿಡುತ್ತದೆ. ಏಕೆಂದರೆ, ಬದುಕು ಒಂದೇ ಆದರೂ ಅದನ್ನು ಹೆಣ್ಣು ಎದುರುಗೊಳ್ಳುವ ಬಗೆಯೇ ಬೇರೆ ಮತ್ತು ಗಂಡು ಒಳಗೊಳಿಸಿಕೊಳ್ಳುವ ಬಗೆ ಬೇರೆ. ಏಕೆಂದರೆ, ನಾಗರಿಕತೆಯ ಆರಂಭಕಾಲದಿಂದಲೂ ಗಂಡು ಹೆಣ್ಣಿಗೆ ಕೊಡಲಾಗಿರುವ ಅವಕಾಶಗಳು ಹಾಗಿವೆ.

ಸದ್ಯದ ಭಾರತೀಯ ರಾಜಕಾರಣದ ಮುಖ್ಯಧಾರೆಯಲ್ಲಿರುವ ಐವರು ಹೆಣ್ಣುಗಳ ಬದುಕು ಮತ್ತು ಸಾಧನೆಗಳು ವಿಶಿಷ್ಟವೇ. ಅವರ ಹಗರಣಗಳೂ ಕೂಡಾ. ಭ್ರಷ್ಟಾಚಾರದ ವಿಷಯಕ್ಕೆ ಬಂದಾಗ ಅಲ್ಲಿ ಕೂಡ ಲಿಂಗ ತಾರತಮ್ಯ ಇರುವುದಿಲ್ಲ. ವಿಚಾರಣೆ, ಶಿಕ್ಷೆ, ಪರಿಣಾಮಗಳಿಗೆ ಸಂಬಂಧಿಸಿದಂತೆ ಅದನ್ನು ತರತಮವಿಲ್ಲದೆಯೇ ನೋಡಬೇಕಾಗುತ್ತದೆ. ಈ ಸಾಮಾಜಿಕ ಆಯಾಮವನ್ನು ಮೀರಿ, ಮಾನಸಿಕ ಸ್ತರದಲ್ಲಿ ನೋಡುವಾಗ, ಮಾನವೀಯ ಚಿಂತನೆಗೆ ಹಚ್ಚಿ ನೋಡುವಾಗ ಬಿಚ್ಚಿಕೊಳ್ಳುವ ದೃಶ್ಯಗಳೂ ಬೇರೆಯೇ ಇರುತ್ತವೆ. ಅಲ್ಲಿ ಮಾಯಾವತಿಯ ಮೂರ್ತಿಗಳಿಗೆ, ಚಿನ್ನದ ಕತ್ತಿಗಳಿಗೆ ಬೇರೆಯೇ ಅರ್ಥ ಕಾದಿರುತ್ತದೆ. ಹಿಂಜಿಹೋದ ಕಾಟನ್‌ ಸೀರೆಯನ್ನಷ್ಟೆ ಉಡುವ ಮಮತಾ ಬ್ಯಾನರ್ಜಿಯ ಹೆಸರು ಯಾಕೆ ಚೀಟಿ ವ್ಯವಹಾರದಂಥದರಲ್ಲಿ ಕಾಣಿಸುತ್ತದೆ ಎಂಬುದರ ಅರಿವಾಗುತ್ತದೆ. ಯಾಕೆ ಉಮಾ ಭಾರತಿ ಹಾಗೆ ರಚ್ಚೆ ಹಿಡಿದ ಮಗುವಿನಂತಾಡುತ್ತಾರೆ ಎಂದರೆ ಅವರ ಸೋತ ಹೃದಯದ ನೋವು ಕೇಳಿಸುತ್ತದೆ. ಸೋನಿಯಾರ ನಗುವಿಲ್ಲದ ಮುಖವೂ ಅವರ ಪರಿವಾರದೊಂದಿಗೆ ಹೆಣೆದುಕೊಂಡ ಹಗರಣಗಳು, ಹಣದ ವ್ಯವಹಾರಗಳು ಮತ್ತೊಂದೇ ಕಥೆ ಹೇಳತೊಡಗುತ್ತವೆ. ಈ ಎಲ್ಲವನ್ನು ಆ ಎಲ್ಲರ ಅಪರಾಧಗಳ ಸಮರ್ಥನೆಗಾಗಿ ಖಂಡಿತ ಬಳಸಬಾರದು. ಆದರೆ ಅರ್ಥೈಸಿಕೊಳ್ಳಲು ಮತ್ತು ನಮ್ಮನಮ್ಮ ಸ್ತರಗಳಲ್ಲಿ ಅವನ್ನು ಅನ್ವಯಿಸಿಕೊಂಡು ನೋಡಲು ಇವು ಬೇಕಾಗುತ್ತವೆ.
ಮತ್ತಷ್ಟು ಓದು »

1
ಆಕ್ಟೋ

ಚರಿತ್ರೆ ಮತ್ತು ಗತಕಾಲ

ಭಗವದ್ಗೀತೆ“ಮನುಸ್ಮೃತಿ”ಯ ಕುರಿತ ಲೇಖನದಲ್ಲಿ ವಲವಿ,ಷಣ್ಮುಖ ಮತ್ತು ಶೆಟ್ಕರ್ ಅವರ ನಡುವೆ ನಡೆದ ಪ್ರತಿಕ್ರಿಯೆಗಳು ಹೆಚ್ಚು ಜನರಿಗೆ ತಲುಪಲಿ ಎಂದು ಅವುಗಳನ್ನು ಲೇಖನವಾಗಿ ಪ್ರಕಟಿಸುತಿದ್ದೇವೆ – ನಿಲುಮೆ ನಿರ್ವಾಹಕರು.

ವಲವಿ: ಷಣ್ಮುಖ ಅವರೆ,“ಈ ಜಾತಿ ಪದ್ಧತಿ ಯಾರಿಂದ ಭಾರತದಲ್ಲಿ ಬೇರೂರಿತು? ವೇದಕಾಲದಲ್ಲಿ ಇರಲಾರದ ಜಾತಿ ಯಾವ ಕಾಲದಲ್ಲಿ ಭಾರತದಲ್ಲಿ ಬಳಕೆಗೆ ಬಂತು? ಮತ್ತು ಅಸ್ಪೃಶ್ಯತೆ ಆಚರಣೆ ಯಾವಾಗ ಶುರುವಾಯಿತು? ಕಾರಣಗಳೇನು ವಿವರಿಸುವಿರಾ? ಈಗ ಸಧ್ಯಕ್ಕೆ ನೀವು ತಿಳಿದ ಮಟ್ಟಿಗಾದರೂ ಇವುಗಳ ಬಗ್ಗೆ ಬೆಳಕು ಚಲ್ಲಿದರೆ ಸಂತೋಷವಾಗುತ್ತದೆ.”

ಷಣ್ಮುಖ : ಮಾನ್ಯ ವಲವಿ ಯವರೇ, ಬಹಳವೇ ದೊಡ್ಡ ದೊಡ್ಡ ಪ್ರಶ್ನೆಗಳನ್ನು ಕೇಳ್ತಿದ್ದೀರಿ. ಆದರೆ ಸದ್ಯಕ್ಕೆ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವಲ್ಲಿನ ಸಮಸ್ಯೆಗಳನ್ನು ಮಾತ್ರ ಸಂಕ್ಷಿಪ್ತವಾಗಿ ಹೇಳ್ತೇನೆ ಆಗ ಈ ಪ್ರಶ್ನೆಗಳ ಸಮಸ್ಯೆಯನ್ನೋ ಅಥವಾ ಇಂತಹ ಪ್ರಶ್ನೆಗಳಿಗೆ ವೈಜ್ಞಾನಿಕ ಉತ್ತರದ ಸಾಧ್ಯತೆಯನ್ನೋ ಪರಿಶೀಲಿಸಿಕೊಳ್ಳಲಾದರೂ ನೆರವಾಗಬಹುದು.

ಮತ್ತಷ್ಟು ಓದು »