ವಿಷಯದ ವಿವರಗಳಿಗೆ ದಾಟಿರಿ

Recent Articles

4
ಜುಲೈ

ಮಾತೃಭಾಷೆಯಲ್ಲಿಯೇ ಶಿಕ್ಷಣ-ಮಕ್ಕಳ ಹಕ್ಕನ್ನು ರಕ್ಷಿಸಿ

– ಪಂಡಿತಾರಾಧ್ಯ,ಮೈಸೂರು

ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕೆಂಬ ಜಗತ್ತಿನ ಎಲ್ಲ ಶ್ರೇಷ್ಠ ಶಿಕ್ಷಣ ತಜ್ಞರ ವಿಚಾರಗಳು ಮತ್ತು ನ್ಯಾಯಾಲಯಗಳ ತೀರ್ಪುಗಳನ್ನು ಪರಿಶೀಲಿಸಿ ಕರ್ನಾಟಕ ಸರಕಾರವು ತನ್ನ ಭಾಷಾನೀತಿಯನ್ನು ಅಂತಿಮವಾಗಿ ರೂಪಿಸಿತು(೧೯೯೪). ಅದರ ಪ್ರಕಾರ ಒಂದರಿಂದ ಐದನೇ ತರಗತಿಯವರೆಗೆ ಮಾತೃಭಾಷೆ/ರಾಜ್ಯಭಾಷೆ ಮಾತ್ರ ಕಡ್ಡಾಯ. ಕನ್ನಡ ಮಾತೃಭಾಷೆಯಲ್ಲದವರಿಗೆ ಒಂದನೆಯ ತರಗತಿಯಲ್ಲಿ ಪರಿಸರಭಾಷೆ/ರಾಜ್ಯಭಾಷೆಯಾದ ಕನ್ನಡವೂ ಕಡ್ಡಾಯ ಕಲಿಕೆಯ ವಿಷಯವಲ್ಲ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಅವರಿಗೆ ರಾಜ್ಯಭಾಷೆ ಕನ್ನಡ ಐಚ್ಛಿಕ ಕಲಿಕೆಯ ವಿಷಯ ಮಾತ್ರ; ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಕನ್ನಡ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಎರಡನೆಯ ಭಾಷೆಯನ್ನು ಕಲಿಯುವ ಹಂತದಿಂದ ಅಂದರೆ ಮೂರನೆಯ ತರಗತಿಯಿಂದ ಮಾತ್ರ ಇಂಗ್ಲಿಷ್ ಮಾತೃಭಾಷೆಯಲ್ಲದ ಮಕ್ಕಳಿಗೆ ಇಂಗ್ಲಿಷ್ ಐಚ್ಛಿಕ ಕಲಿಕೆಯ ವಿಷಯ, ಪರೀಕ್ಷೆ ಕಡ್ಡಾಯವಲ್ಲ. ಐದನೆಯ ತರಗತಿಯಿಂದ ಇಂಗ್ಲಿಷ್ ಕಲಿಕೆ ಮತ್ತು ಪರೀಕ್ಷೆ ಕಡ್ಡಾಯ. ಕರ್ನಾಟಕ ಸರಕಾರದ ಈ ಭಾಷಾನೀತಿಯನ್ನು ಸರ್ವೋನ್ನತ ನ್ಯಾಯಾಲಯವೂ ಪ್ರಶಂಸಿಸಿ ಅನುಮೋದಿಸಿತ್ತು(೧೯೯೩).

ಈ ಭಾಷಾನೀತಿಗೆ ಇದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವ ಸಂದರ್ಭದಲ್ಲಿ ಅದನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಸೀಮಿತಗೊಳಿಸಿತು. ಪೂರ್ವ ಪ್ರಾಥಮಿಕವೂ ಸೇರಿದಂತೆ ಒಂದನೆಯ ತರಗತಿಯಿಂದಲೇ ಇಂಗ್ಲಿಷ್ ಮಾತೃಭಾಷೆಯಲ್ಲದವರಿಗೂ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಡೆಸಲು ಅನುದಾನರಹಿತ ಖಾಸಗಿ ಶಾಲೆಗಳಿಗೆ ಮುಕ್ತ ಅವಕಾಶ ನೀಡಿತು(೨೦೦೮). ಇದು ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕೆಂಬ ಮಕ್ಕಳ ಶೈಕ್ಷಣಿಕ ಹಕ್ಕಿನ ನೀತಿಗೆ ವಿರುದ್ಧವಾಗಿದೆ. ಇದರಿಂದ ಮಕ್ಕಳು ಆರಂಭದ ಹಂತದಲ್ಲಿಯೇ ‘ಸಮಾನ ಅವಕಾಶ-ಸಮಾನ ಸ್ಪರ್ಧೆ’ ಎಂಬ ಸಮಾನತೆಯ ನ್ಯಾಯದಿಂದ ವಂಚಿತರಾಗಿದ್ದಾರೆ.

ಮತ್ತಷ್ಟು ಓದು »

3
ಜುಲೈ

ಕಾನೂನಿನಂಗಳ ೪ : ಆಧುನಿಕ ಕಾನೂನುಗಳು

– ಉಷಾ ಐನಕೈ  ಶಿರಸಿ

ಭಾರತದಲ್ಲಿ ಕಾನೂನುಗಳನ್ನು ಅಧ್ಯಯನ ಮಾಡುವಾಗ ಸ್ಥೂಲವಾಗಿ ಎರಡು ವಿಭಾಗಗಳಲ್ಲಿ ನೋಡುವುದು ಅನಿವಾರ್ಯವಾಗುತ್ತದೆ. ಅದಾವವೆಂದರೆ ಬ್ರಿಟಿಶ್ ವಸಾಹತುಶಾಹಿ ಪೂರ್ವದ ಕಾನೂನುಗಳು ಹಾಗೂ ವಸಾಹತುಶಾಹಿ ನಂತರದ ಕಾನೂನುಗಳು. ಪೂರ್ವದ ಕಾನೂನುಗಳು ಪ್ರಾಚೀನ ಭಾರತದ ಕಾನೂನುಗಳೆಂದೇ ಗುರುತಿಸಲ್ಪಡುತ್ತದೆ. ಶ್ರುತಿ, ಸ್ಮೃತಿ, ಧರ್ಮ, ಸಂಪ್ರದಾಯಗಳೆಲ್ಲ ಆ ಕಾಲದ ಕಾನೂನಿನ ನೆಲೆಗಳು. ವಸಾಹತುಶಾಹಿ ನಂತರದ  ಕಾನೂನುಗಳು ಆಧುನಿಕ ಕಾನೂನುಗಳೆಂದು ಗುರುತಿಸ್ಪಟ್ಟು ಇಂದಿಗೂ ಕೂಡ ಚಾಲನೆಯಲ್ಲಿವೆ.

ವಸಾಹತುಶಾಹಿ ನಂತರದ ಕಾನೂನುಗಳು ಏಕೆ ಆಧುನಿಕ ಕಾನೂನುಗಳೆಂದು ಕರೆಯಲ್ಪಟ್ಟವು ಎಂಬುದಕ್ಕೆ ವಿವರಣೆಗಳು ಬೇಕಿಲ್ಲ. ಏಕೆಂದರೆ ಅದೊಂದು ಸಾಮಾನ್ಯ ಜ್ಞಾನ. ಐರೋಪ್ಯರು ಭಾರತಕ್ಕೆ ವ್ಯಾಪಾರಕ್ಕಾಗಿ ಬಂದವರು. ನಂತರ ಈ ದೇಶದ ಆಡಳಿತವನ್ನು ಕೈಗೆ ತೆಗೆದುಕೊಂಡರು. ಪಾಶ್ಚಾತ್ಯ ದೇಶಗಳ ಹಾಗೆ ಇಡೀ ಭಾರತದ ದೇಶವನ್ನು ಪುನರ್ಕಟ್ಟಲು ಪ್ರಯತ್ನಿಸಿದರು. ಅವರ ಈ ಪ್ರಯತ್ನ ಒಳಿತು ಕೆಡಕುಗಳೆರಡನ್ನೂ ಒಳಗೊಂಡಿದೆ. ಭಾರತ ನೂರಾರು ಪ್ರಾಂತಗಳಾಗಿ ಒಡೆದು ಹಂಚಿಹೋಗಿತ್ತು. ಇದು ಆಡಳಿತಾತ್ಮಕವಾಗಿ ಹಾಗೂ ಕಾನೂನಾತ್ಮಕವಾಗಿ ತುಂಬ ತೊಂದರೆಯನ್ನುಂಟುಮಾಡುತ್ತಿತ್ತು.

ಕಾನೂನಿನ ವಿಷಯವಾಗಿ ನೋಡುವುದಾದರೆ ಆಯಾ ಪ್ರಾಂತ್ಯದ ರೂಢಿ, ಪದ್ಧತಿಗಳೇ ಅಲ್ಲಿನ ಕಾನೂನುಗಳಾಗಿದ್ದವು. ಹೀಗಾಗಿ ಸ್ಥಳದಿಂದ ಸ್ಥಳಕ್ಕೆ ಕಾನೂನಿನ ಸ್ವರೂಪ ಕೂಡ ಭಿನ್ನತೆಯನ್ನು ಹೊಂದಿತ್ತು. ಇದು ಇಡೀ ಭಾರತವನ್ನು ಆಳಲು  ಹೊರಟ ಇಂಗ್ಲೀಶರಿಗೆ ನ್ಯಾಯ ನಿರ್ಣಯ ನೀಡಲು ತೊಡಕಾಯಿತು. ಹೀಗಾಗಿ ತಮ್ಮಂತಹದೇ ಒಂದು ಏಕರೂಪಿ ಕಾನೂನಿನ ಪರಿಕಲ್ಪನೆಯನ್ನು ಇಲ್ಲಿ ಅನುಷ್ಠಾನಗೊಳಿಸಲು ನಿರ್ಣಯಿಸಿದರು. ಪ್ರಾರಂಭದಲ್ಲಿ ಈಸ್ಟ್ ಇಂಡಿಯಾ ಕಂಪನಿ ತನ್ನ ಅಧಿಕಾರದ ಕೇಂದ್ರಗಳಾದ ಮದ್ರಾಸ್, ಮುಂಬಯಿ, ಕಲ್ಕತ್ತಾಗಳ ಮೂಲಕ ಬ್ರಿಟಿಶ್ ಇಂಗ್ಲೀಶ್ ಕಾನೂನುಗಳನ್ನು ಆಧಾರವಾಗಿಟ್ಟುಕೊಂಡು ಆಡಳಿತ ನಡೆಸುತ್ತಿತ್ತು. ನಂತರ ಈ ಅಧಿಕಾರ ಬ್ರಿಟಿಶ್ ಸರಕಾರಕ್ಕೆ ಹಸ್ತಾಂತರವಾದಾಗ ಇಡೀ ಭಾರತಕ್ಕೆ ಅನ್ವಯವಾಗುವಂತಹ ಹಲವು ಕಾನೂನುಗಳು ರಚಿತವಾದವು.

ಮತ್ತಷ್ಟು ಓದು »

2
ಜುಲೈ

ಕನ್ನಡ/ಇಂಗ್ಲೀಷ್ ಮಾಧ್ಯಮದ ಜೊತೆಗೆ ಏಕರೂಪ ಶಿಕ್ಷಣದ ಬಗ್ಗೆಯೂ ಚರ್ಚೆ ಆಗಬೇಕಲ್ಲವೇ?

– ರಾಕೇಶ್ ಶೆಟ್ಟಿ

ಕಡೆಗೂ ‘ಸರ್ಕಾರ ಏಕರೂಪ ಶಿಕ್ಷಣ ನೀತಿ ಜಾರಿಗೆ ತರುವ ನಿಟ್ಟಿನಲ್ಲಿ ಚಿಂತಿಸಬೇಕು’ ಅನ್ನುವ ಮಾತುಗಳನ್ನು ಕಸಪಾ ಅಧ್ಯಕ್ಷ ಪುಂಡಲೀಕ ಹಾಲಂಬಿ ಹೇಳಿದ್ದಾರೆ.ಕಳೆದ ಹಲವು ದಿನಗಳಿಂದ ಇಂಗ್ಲೀಷ್ ಮಾಧ್ಯಮದ ಸುತ್ತ ನಡೆಯುತ್ತಲಿರುವ ಚರ್ಚೆಯಲ್ಲಿ ನಾನು ನಿರೀಕ್ಷಿಸುತಿದ್ದ ಮಾತು “ಏಕರೂಪ ಶಿಕ್ಷಣ”ದ ಬಗ್ಗೆ.ಪೇಟೆಯ/ಉಳ್ಳವರ ಮಕ್ಕಳಿಗೊಂದು ಶಿಕ್ಷಣ,ಹಳ್ಳಿಯ/ಬಡವರ ಮಕ್ಕಳಿಗೊಂದು ಶಿಕ್ಷಣ ಕೊಟ್ಟು ಕಡೆಗೆ ಸಮಾನತೆ,ಸಾಮಾಜಿಕ ನ್ಯಾಯ,ಭಾಷೆ,ನಾಡು-ನುಡಿಯ ಅಳಿವು ಉಳಿವು ಅಂತ ಮಾತನಾಡುವುದೆಷ್ಟು ಸರಿ?

೧೦ನೆ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದ ನನಗೆ ಮಾತೃ ಭಾಷೆಯಲ್ಲಿ ಕಲಿಯುವುದೆಷ್ಟು ಸುಲಭ,ಆನಂದದ ವಿಷಯ ಅನ್ನುವುದರ ಅರಿವಿದೆ ಹಾಗೆಯೇ ೧೦ರ ನಂತರ ಇಂಗ್ಲೀಷ್ ಮಾದ್ಯಮಕ್ಕೆ (ಪಿಯುಸಿಯಲ್ಲಿ ಆಯ್ದುಕೊಂಡಿದ್ದು ವಿಜ್ಞಾನ ವಿಷಯ) ಕಾಲಿಟ್ಟಾಗ ಅನುಭವಿಸಿದ ಕಷ್ಟ,ಕೀಳರಿಮೆಯ ಅನುಭವಗಳು ಇವೆ.ಹಾಗಾಗಿ ಈ ಚರ್ಚೆಯಲ್ಲಿ ಮತ್ತು ಈಗಿನ ನಮ್ಮ ಶೈಕ್ಷಣಿಕ ಪರಿಸ್ಥಿತಿಯಲ್ಲಿ ನಾನು ಇಂಗ್ಲೀಷ್ ಮೀಡಿಯಂ ಬೇಕು ಅನ್ನುವುದರ ಪರವೇ ನಿಲ್ಲುತ್ತೇನೆ.

ಒಂದು ವೇಳೆ ಸಾಹಿತಿಗಳು ಒತ್ತಾಯಿಸುತ್ತಿರುವಂತೆ ಪ್ರಾಥಮಿಕ ಶಿಕ್ಷಣ ಮಾತೃ ಭಾಷೆಯಲ್ಲೇ ಆಗಬೇಕು ಅನ್ನುವುದಾದರೆ ಅದು ಈ ರಾಜ್ಯದಲ್ಲಿರುವ ಸರ್ಕಾರಿ/ಅನುದಾನಿತ/ಕೇಂದ್ರೀಯ/ಖಾಸಗಿ ಶಾಲೆಗಳಿಗೂ ಏಕರೂಪವಾಗಿ ಅನ್ವಯವಾಗಲಿ. ಅದನ್ನು ಬಿಟ್ಟು ಸರ್ಕಾರಿ ಶಾಲೆಗಳಲ್ಲಿ ಮಾತ್ರ ಕನ್ನಡ ಕಡ್ಡಾಯವಾಗಲಿ ಆ ಮೂಲಕ ಬಡವರ ಮಕ್ಕಳು ಮಾತ್ರ ಕನ್ನಡದಲ್ಲಿ ಕಲಿತು ಮುಂದೆ ಇಂಗ್ಲೀಷ್ ಲೋಕಕ್ಕೆ ಕಾಲಿಟ್ಟು ಅರ್ಧಕರ್ಧ ಜನ ಕೀಳರಿಮೆ,ಹೆದರಿಕೆಯಿಂದಾಗಿ ಹಿಂದೆ ಬೀಳಲಿ ಅನ್ನುವುದು ಇಬ್ಬಗೆಯ ನೀತಿಯಾಗುತ್ತದೆ.

ಏಕರೂಪ ಶಿಕ್ಷಣ ಅನ್ನುವಾಗ ಇನ್ನೊಂದು ಅಂಶವನ್ನ ನಾವು ಗಮನಕ್ಕೆ ತೆಗೆದುಕೊಳ್ಳಬೇಕು.ಮಕ್ಕಳನ್ನು ಶಾಲೆಗೇ ಸೇರಿಸುವಾಗ ಅದು ಇಂಗ್ಲೀಷ್ ಮೀಡಿಯಂ ಶಾಲೆಯೇ ಅಂತ ಮಾತ್ರ ಈಗಿನ ಪೋಷಕರು ನೋಡುತ್ತಿಲ್ಲ,ಅದರ ಜೊತೆಗೆ ಅವರು ಅಲ್ಲಿರುವುದು ಸೆಂಟ್ರಲ್ ಸಿಲ್ಲಬಸ್ಸೋ,ಐ.ಸಿ.ಎಸ್.ಈ ಸಿಲ್ಲಬಸ್ಸೋ (ಅಥವಾ ಇನ್ಯಾವುದೋ) ಅನ್ನುವುದನ್ನು ನೋಡುತಿದ್ದಾರೆ.ನಮ್ಮ ಮಕ್ಕಳು ಇಂತ ಸಿಲಬಸ್ಸ್ ಇರೋ ಶಾಲೆಯಲ್ಲಿ ಓದುತಿದ್ದಾರೆ ಅಂತ ಹೇಳಿಕೊಳ್ಳುವುದು ಈಗಿನ ಪೋಷಕರಿಗೆ ಗರ್ವದ ವಿಷಯವಾಗಿದೆ. ಅಸಲಿಗೆ ಈ ರೀತಿ ಬೇರೆ,ಬೇರೆ ಸಿಲ್ಲಬಸ್ಸಿನ ಅಗತ್ಯ ಶಾಲಾ ಮಟ್ಟದಲ್ಲಿ ಏನು ಅನ್ನುವುದು ಸಹ ಚರ್ಚೆಯಾಗಬೇಕಲ್ಲವೇ?

ಮತ್ತಷ್ಟು ಓದು »

30
ಜೂನ್

ಖೆಡ್ಡಾ – ೨ : ನಿಮಗೆ ಬೇಕಾ….. ಪ್ರೀತಿ!

ಹೇಮಂತ್ ಕುಮಾರ್

ಯಾವನಾದರೂ ಇನ್ನು ಮುಂದೆ ಲವ್ ಆಗಿದ್ಯ ನಿನಗೆ ಅಂತ ಕೇಳಿದ್ರಿ ಅಂದ್ರೆ ಹಿಗ್ಗಾ ಮುಗ್ಗಾ ಒದೆ ತಿಂತೀರಾ ಹುಶಾರಾಗಿರಿ ಹೇಳಿದ್ದೀನಿ. ಲವ್ ಅಂತೇ ಲವ್ವು ಸುಡುಗಾಡು. ಬರೀ ಬೂಟಾಟಿಕೆ. ಲವ್ವು ಅಂದದ್ದೇ ಹದಿನೈದರಿಂದ ಇಪ್ಪತ್ತೈದು ವರ್ಷದ ಹುಡುಗ ಹುಡುಗಿಯ ಚಿತ್ರವನ್ನ ಮನದ ಮುಂದೆ ತಂದು ನಿಲ್ಲಿಸಿಕೊಂಡು, ಪಾರ್ಕು, ಥಿಯೇಟರು, ಕಾಫೀ ಡೇ, ರೆಸಾರ್ಟುಗಳಿಗೆಲ್ಲಾ ಹೋಗಿಬಂದುಬಿಡ್ತೀರಿ. ನಾಚಿಕೆ ಆಗಲ್ವೇನ್ರೀ ಯಾರಿಗೂ. ನಾನೂ ನಂಬಿದ್ದೆ ಪ್ರೀತಿ ಇನ್ನೂ ಉಳ್ಕೊಂಡಿದೆ ಅಂತ. ಆದರೆ ಎಲ್ಲಿ ಉಳ್ಕೊಂಡಿದೆ ಅಂತ ಹುಡುಕೋಕೆ ಹೊರಟಾಗಲೇ ಗೊತ್ತಾಗಿದ್ದು…….

ನನ್ನಲ್ಲಿ ಬೆಟ್ಟದಷ್ಟು ತುಂಬಿಕೊಂಡಿದ್ದ ಪ್ರೀತಿಯಲ್ಲಿ ಒಂದು ಚಮಚೆಯಷ್ಟನ್ನ ಅಂಗೈಯಲ್ಲಿ ಇಟ್ಟುಕೊಂಡು ಯಾರಿಗಾದರೂ ಒಬ್ಬರಿಗೆ ಪ್ರೀತಿ ಕೊಡೋಣೆಂದು ಹೊರಟೆ. ಯಾರಿಗೆ ಕೊಡಲೆಂದೇ ಪ್ರಶ್ನೆ. ಆರೆ ಯಾರಿಗಾದರೇನಂತೆ ಎಲ್ಲರೂ ಮನುಷ್ಯರೇ ತಾನೆ? ಇನ್ನೂ ನೋಡಿದರೆ ಪ್ರಾಣಿಗಳಿಗೂ ಸಹ ಕೊಡಬಹುದು ನಾನು. ಯಾರಾದರೇನಂತೇ ಒಂದು ಜೀವ ನನ್ನ ಪ್ರೀತಿ ಪಡೆದುಕೊಂಡರೆ ಸಾಕಿತ್ತು ನನಗೆ. ಸರಿ, ಯಾರಿಗೆ ಕೊಡಲಿ. ಈ ರಸ್ತೆಯ ಆ ಪಕ್ಕದಲ್ಲಿ ಯಾರೋ ಒಬ್ಬ ನಿಂತಿರುವನು. ಏನೋ ಗಲಿಬಿಲಿಗೊಂಡವನಂತೆ ಕಾಣುತ್ತಿರುವನು. ಅವನಿಗೂ ನನ್ನಂತೆಯೇ ಯಾರೂ ಪ್ರೀತಿ ಕೊಟ್ಟೇ ಇಲ್ಲವೇನೋ ಅದಕ್ಕೇ ನನ್ನಂತೆಯೇ ಚಿಂತೆಯಲ್ಲಿರುವನೆಂದು ಊಹಿಸಿಕೊಂಡು ನೇರ ಅವನ ಬಳಿಗೇ ಹೊರಟೆ. ಫೋನಿನಲ್ಲಿ ಯಾರ ಅಮ್ಮನನ್ನೋ, ಅಕ್ಕನನ್ನೋ ಕೆಟ್ಟದಾಗಿಯಾದರೂ ನೆನಪಿಸಿಕೊಳ್ಳುತ್ತಿದ್ದ. ಅವನು ಮಾತು ಮುಗಿಸಲೆಂದು ನನ್ನ ಮುಷ್ಟಿ ತುಂಬು ಪ್ರೀತಿಯನ್ನು ಹಿಡಿದೇ ಕಾದೆ. ಆತ ಯಾರೋ ತನ್ನ ಸ್ನೇಹಿತನಿರಬೇಕು ಅವನ ಸಂಸಾರ, ವಂಶವನ್ನೆಲ್ಲಾ ನೆನಪಿಸಿಕೊಳ್ಳುತ್ತಲೇ ಇದ್ದ.
29
ಜೂನ್

ಮುಖ್ಯವಾಹಿನಿಯ ಜಾಣಗುರುಡು

– ಡಾ.ಅಶೋಕ್ ಕೆ.ಆರ್

ಹೆಂಡತಿ ಗಂಡನಿಗೆ ಹೊಡೆದರೆ ‘ಬ್ರೇಕಿಂಗ್ ನ್ಯೂಸ್’, ಗಂಡ ಹೆಂಡತಿಗೆ ಹೊಡೆದರೆ ‘ಬ್ರೇಕಿಂಗ್ ನ್ಯೂಸ್’, ಪೂನಂ ಪಾಂಡೆ ಬೆತ್ತಲಾದದ್ದು, ಐಶ್ವರ್ಯ ರೈ ದಪ್ಪಗಾಗಿದ್ದು ಮುಖಪುಟ ಸುದ್ದಿ! ಅಧಿಕಾರಿ, ರಾಜಕಾರಣಿ, ಸನ್ಯಾಸಿ ಮಾಡಿದ ತಪ್ಪುಗಳು ‘ಬ್ರೇಕಿಂಗ್ ನ್ಯೂಸ್’ [ofcourse ಯಾವ ವಾಹಿನಿ ವೀಕ್ಷಿಸುತ್ತಿದ್ದೀರೆಂಬುದರ ಮೇಲೆ ಈ ಕೊನೆಯ ಬ್ರೇಕಿಂಗ್ ನ್ಯೂಸ್ ಬದಲಾಗುತ್ತಿರುತ್ತದೆ!]. ಪತ್ರಕರ್ತನೊಬ್ಬ ನೆಲದ ಕಾನೂನಿಗೆ ಗೌರವ ಕೊಡದೆ ನಡೆದುಕೊಂಡಾಗ? ಅದು ಸುದ್ದಿಯೂ ಅಲ್ಲ, ರದ್ದಿಗೆ ಹಾಕುವಂಥ ವಿಷಯ ಎಂಬುದು ನಮ್ಮ ಮುಖ್ಯವಾಹಿನಿ ಮಾಧ್ಯಮಗಳ ನಿಲುವು!

           ಪತ್ರಕರ್ತ ಅದರಲ್ಲೂ ಪತ್ರಿಕೆಯೊಂದರ ಸಂಪಾದಕನೆಂದ ಮೇಲೆ ಮಾನನಷ್ಟ ಮೊಕದ್ದಮೆಯ ಆರೋಪಿಯಾಗುವುದು ಸಹಜ. ಕೆಲವೊಮ್ಮೆ ವೈಯಕ್ತಿಕ ದ್ವೇಷದಿಂದ ಸಂಪಾದಕರೇ ಸುಳ್ಳು ಮಾಹಿತಿಯನ್ನು ವೈಭವೀಕರಿಸುತ್ತಾರೆ. ಇನ್ನು ಕೆಲವೊಮ್ಮೆ ನಂಬಿದ ವರದಿಗಾರರೇ ಸುಳ್ಳು ಅಥವಾ ಅರ್ಧ ಸತ್ಯದ ಮಾಹಿತಿಯನ್ನು ನೀಡಿ ಸಂಪಾದಕರ ದಾರಿ ತಪ್ಪಿಸುತ್ತಾರೆ. ಸತ್ಯ ತನ್ನ ಪರವಾಗಿದೆಯೆಂಬ ಧೃಡತೆ ಇರುವ ವ್ಯಕ್ತಿ ಪತ್ರಿಕೆ, ಅದರ ವರದಿಗಾರ-ಸಂಪಾದಕರ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತಾರೆ. ವರದಿ ಅಪ್ಪಟ ಸುಳ್ಳಾಗಿದ್ದರೆ ಪತ್ರಿಕೆ ಅಥವಾ ಸುದ್ದಿವಾಹಿನಿಯಲ್ಲಿ ತಪ್ಪೊಪ್ಪಿಗೆ ನೀಡಬೇಕಾಗುತ್ತದೆ. ಮಾನಸಿಕ ಹಿಂಸೆ, ಸಾಮಾಜಿಕ ನೆಲೆಯಲ್ಲಾದ ಅವಮಾನಗಳನ್ನು ಪರಿಗಣಿಸಿ ಪರಿಹಾರ ಕೊಡಿಸುವುದೂ ಉಂಟು. ಜೈಲು ಪಾಲಾಗುವ ಸಾಧ್ಯತೆಯೂ ಇದೆಯಾದರೂ ಅದು ಬಹಳವೇ ಅಪರೂಪ.
ಇವೆಲ್ಲವನ್ನೂ ಹೇಳಲು ಕಾರಣ ಹಾಲಿ ಕನ್ನಡ ಪ್ರಭ ಪತ್ರಿಕೆಯ ಸಂಪಾದಕರೂ, ಸುವರ್ಣ ಸುದ್ದಿ ವಾಹಿನಿಯ ಮುಖ್ಯಸ್ಥರೂ ಆದ ವಿಶ್ವೇಶ್ವರ ಭಟ್ಟರು ಜೂನ್ 27ರಂದು ಬಂಧಿತರಾಗಿ ಮಧ್ಯಾಹ್ನದ ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. 2008ರಲ್ಲಿ ವಿಜಯ ಕರ್ನಾಟಕದ ಸಂಪಾದಕರಾಗಿದ್ದ ಸಮಯದಲ್ಲಿನ ಒಂದು ವರದಿಯ ಕುರಿತಂತೆ ಮಾನನಷ್ಟ ಮೊಕದ್ದಮೆ ಎದುರಿಸುತ್ತಿದ್ದರು. ನ್ಯಾಯಾಲಯದಿಂದ ಪದೇ ಪದೇ ಸಮನ್ಸ್ ಜಾರಿಯಾದಾಗ್ಯೂ ಕೂಡ ಹಾಜರಾಗಲಿಲ್ಲ. ಕೊನೆಗೆ ಬೇಸತ್ತ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿ ಮಾಡಿತು. ಭಟ್ಟರ ಬಂಧನವಾಯಿತು.

28
ಜೂನ್

ಶೇರು ಮಾರುಕಟ್ಟೆ : ಭಾಗ -೧

– ವೆಂಕಟೇಶ್ ಗುರುರಾಜ್

ಹಣ ಯಾರಿಗೆ ಬೇಡ? ಮನುಷ್ಯ ಹುಟ್ಟಿದಾಗಿನಿಂದ ಸಾಯುವ ವರೆಗೂ ಮತ್ತು ಅವನು ಸತ್ತಮೇಲೆ ಅವನ ಅಂತ್ಯಕ್ರಿಯಯನ್ನು ಮಾಡುವ ಅವನ ಮನೆಯವರಿಗೂ ಹಣ ಬೇಕೇಬೇಕು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ನಾಮಕರಣದಿಂದ ತಿಥಿಯವರೆಗೆ. ನಾವು ನೀವೆಲ್ಲರೂ ನಮ್ಮ ಜೀವಿತ ಅವಧಿಯಲ್ಲಿ ಹಣವನ್ನು ನಮ್ಮ ಇತಿಮಿತಿಯಲ್ಲಿ ಸಂಪಾದಿಸುತ್ತೇವೆ. ಕೆಲವರು ಉದ್ಯೋಗವನ್ನು ಮಾಡಿ, ಮತ್ತೆ ಕೆಲವರು ಸ್ವಂತ ಉದ್ಯೋಗವನ್ನು ಮಾಡಿ, ಮತ್ತೆ ಕೆಲವರು ವ್ಯಾಪಾರ ವಹಿವಾಟು ಮಾಡಿ, ಮತ್ತೆ ಕೆಲವರು ಹಣದಿಂದ ಹಣವನ್ನು ಸಂಪಾದಿಸುತ್ತಾರೆ. ಮೊದಲ ಮೂರು ನಮಗೆಲ್ಲರಿಗೂ ತಿಳಿದ ವಿಷಯವೇ ಆಗಿದೆ. ಕೊನೆಯದಾದ ಹಣದಿಂದ ಹಣವನ್ನು ಸಂಪಾದಿಸುವುದು ಹೇಗೆ ಎಂಬುದರ ಬಗ್ಗೆ ಸ್ವಲ್ಪ ಗಮನ ಕೊಡೋಣ. ಇದನ್ನು ಬಂಡವಾಳ ಹೂಡಿಕೆ ಎಂದೂ ಸಹ ಕರೆಯುತ್ತಾರೆ.  ಬಂಡವಾಳ ಎಂದರೆ ಏನು ಎಂಬುದರ ಬಗ್ಗೆ ಸ್ವಲ್ಪ ಚಿಂತನೆಯನ್ನು ಮಾಡೋಣವೇ?

ಬಂಡವಾಳ ಹೂಡುವುದೆಂದರೆ ಜನಸಾಮಾನ್ಯರಲ್ಲಿ ಅದು ಲಕ್ಷ/ಕೋಟಿಗಳ ರೂಪದಲ್ಲಿ ಇರುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಇದು ಸುಳ್ಳು. ಒಂದು ರೀತಿಯಲ್ಲಿ ಹೇಳಬೇಕೆಂದರೆ ಜನ ಸಾಮಾನ್ಯರೂ ಸಹ ಸ್ವಲ್ಪ ಮಟ್ಟಿನ ಬಂಡವಾಳ ಹೂಡಿಕೆದಾರರೇ. ಕೆಲವರು ತಮ್ಮ ಹೆಚ್ಚುವರಿ ಸಂಪಾದನೆಯನ್ನು ಅಥವಾ ತಮ್ಮ ಉಳಿತಾಯದ ಹಣವನ್ನು ನಿಶ್ಚಿತ ಠೇವಣಿಯಾಗಿ ಬ್ಯಾಂಕ್/ಅಂಚೆ ಕಚೇರಿಯಲ್ಲಿ ಇಟ್ಟು ಅದರಲ್ಲಿ ಬರುವ ಬಡ್ದಿಯನ್ನು ಪಡೆಯುತ್ತಾರೆ. ಇದೂ ಸಹ ನಿಮ್ಮ ಹಣ ವೃದ್ದಿಸುತ್ತದೆ.  ಭೂಮಿಯ ಮೇಲೆ ಹಾಕಿದ ಹಣ ನಿಮ್ಮ ಮೂಲ ಹಣವನ್ನು ಅನೇಕ ಬಾರಿ ವೃದ್ದಿಸುತ್ತದೆ. ಚಿನ್ನ, ಬೆಳ್ಳಿಯ ಮೇಲೆ ಹಾಕಿದ ಹಣ ನಿಮಗೆ ದುಪ್ಪಟ್ಟು, ತಿಪ್ಪಟ್ಟಾಗುತ್ತದೆ. ಶೇರು/ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿದ ಹಣ ನಿಮಗೆ ಲಾಭವನ್ನು ತಂದುಕೊಡುತ್ತದೆ.

ಮತ್ತಷ್ಟು ಓದು »

27
ಜೂನ್

ಪ್ರತಿಯೊಬ್ಬ ವ್ಯಕ್ತಿಯೂ ಅದ್ವಿತೀಯ

– ಎ.ವಿ.ಜಿ ರಾವ್

ಪ್ರತಿಯೊಬ್ಬ ವ್ಯಕ್ತಿಯೂ ಅದ್ವಿತೀಯ. ಎಲ್ಲ ಗುಣಲಕ್ಷಣಗಳನ್ನು ಒಟ್ಟಾರೆಯಾಗಿ ಪರಿಗಣಿಸಿದರೆ ಈ ಭೂಮಿಯ ಮೇಲೆ ಒಬ್ಬ ವ್ಯಕ್ತಿಗೆ ಪ್ರತಿಶತ ೧೦೦ ರಷ್ಟು ಸರಿಸಾಟಿಯಗಬಲ್ಲ ಇನ್ನೊಬ್ಬ ವ್ಯಕ್ತಿ ಇರುವುದಿಲ್ಲ. ಏಕಾಂಡಜ ಯಮಳರ ನಡುವೆ (ಐಡೆಂಟಿಕಲ್ ಟ್ವಿನ್ಸ್-ಇವರ ಜೈವಿಕ ಆನುವಂಶೀಯತೆ ಒಂದೇ ಆಗಿರುತ್ತದೆ) ಕೂಡ ಪ್ರತಿಶತ ೧೦೦ರಷ್ಟು ಸಮತೆ ಇರುವುದಿಲ್ಲ. ಅಂದ ಮಾತ್ರಕ್ಕೆ, ಮಾನವರಲ್ಲಿ ಸಮತೆ ಇಲ್ಲವೇ ಇಲ್ಲ ಎಂದು ತೀರ್ಮಾನಿಸ ಕೂಡದು. ಸಮತೆ ಮತ್ತು ವಿವಿಧತೆ ಇವೆರಡನ್ನೂ ಮಾನವರಲ್ಲಿ ಕಾಣಬಹುದು. ಯಾವದೇ ಒಂದು ಜೀವಿಜಾತಿಯನ್ನು ವೀಕ್ಷಿಸಿದರೂ ಸಾರ್ವತ್ರಿಕ ಲಕ್ಷಣಗಳಲ್ಲಿ ಸಮತೆಯೂ ನಿರ್ದಿಷ್ಟ ಲಕ್ಷಣಗಳಲ್ಲಿ ವಿವಿಧತೆಯೂ ಇರುವುದು ಗೋಚರಿಸುತ್ತದೆ. ಅಳತೆ ಮಾಡಬಹುದಾದ ಯಾವುದೇ ಮಾನವ ಲಕ್ಷಣವನ್ನು ಅಧ್ಯಯಿಸಿದರೂ ಈ ನಿಸರ್ಗ ನಿಯಮ ಸ್ಪಷ್ಟವಾಗುತ್ತದೆ. ಜೈವಿಕ ಆನುವಂಶೀಯತೆ ಮತ್ತು ಪರಿಸರಗಳ ನಡುವಿನ ಅನ್ಯೋನ್ಯಕ್ರಿಯೆಯೇ ಈ ವೈಚಿತ್ರ್ಯಕ್ಕೆ ಕಾರಣ.

ಸಹೋದರ ಸಹೋದರಿಯರ ಜನ್ಮದಾತೃಗಳು ಉಭಯಸಾಮಾನ್ಯರಾಗಿದ್ದರೂ ಅವರ ಜೈವಿಕ ಆನುವಂಶೀಯತೆ ಒಂದೇ ಆಗಿರುವುದಿಲ್ಲ. ವಂಶಪಾರಂಪರ್ಯವಾಗಿ ಬರಬಹುದಾದ ಗುಣಗಳ ವಾಹಕಗಳು ವಂಶವಾಹಿ (ಜೀನ್)ಗಳು ಎಂಬ ತಥ್ಯ ನಿಮಗೆ ತಿಳಿದಿದೆ. ಏಕಾಂಡಜ ಯಮಳರನ್ನು ಹೊರತುಪಡಿಸಿದರೆ ಬೇರೆ ಯಾವ ಇಬ್ಬರಲ್ಲಿಯೂ (ಅವರಿಬ್ಬರೂ ಒಂದೇ ಜನ್ಮದಾತೃಗಳಿಂದ ತಮ್ಮ ವಂಶವಾಹಿಗಳನ್ನು ಪಡೆದಿದ್ದರೂ) ಇವುಗಳು ಒಂದೇ ಆಗಿರುವುದು ಸಾಧ್ಯವೇ ಇಲ್ಲ. ಅಂದ ಮೇಲೆ, ಪ್ರತಿಯೊಬ್ಬ ವ್ಯಕ್ತಿಯ ಜೈವಿಕ ಆನುವಂಶೀಯತೆ ಅದ್ವಿತೀಯ ಅನ್ನುವುದರಲ್ಲಿ ಭಿನ್ನಾಭಿಪ್ರಾಯವಿಲ್ಲ. ವ್ಯಕ್ತಿಗಳ ಅದ್ವಿತೀಯತೆಗೆ ಇದು ಒಂದು ಕಾರಣ

ಮತ್ತಷ್ಟು ಓದು »

26
ಜೂನ್

ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳಬಾರದು – ಅಲ್ಲವೇ?

– ಸಿದ್ದಾಂತ್

ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠಶಾಲೆ.ಹೀಗಿರುವಾಗ ಇಂದಿನ ತಾಯಂದಿರು ತಮ್ಮ ಮಕ್ಕಳ ಸರ್ವಾಂಗೀಣ ಬೆಳವಣಿಗೆಯನ್ನು ರೂಪಿಸುವಲ್ಲಿ ಯಾವ ಪಾತ್ರ ವಹಿಸಿದ್ದಾರೆ? ಮಗುವಿನ ಸರ್ವಾಂಗೀಣ ಬೆಳವಣಿಗೆ ಎಂದರೆ ಅವನ/ಅವಳ ಶಾರೀರಿಕ, ಮಾನಸಿಕ, ಬ್ಹುದ್ದಿಕ, ಆಧ್ಯಾತ್ಮಿಕ,ಆತ್ಮಿಕ, ಹಾಗು ಆತ್ಮಸ್ತೈರ್ಯದ ವಿಕಾಸವೇ ಆಗಿದೆ. ಆದರೆ ಇಂದಿನ ತಂದೆ ತಾಯಂದಿರು ತಮ್ಮ ಮಕ್ಕಳ ಶಾರೀರಿಕ, ಶೈಕ್ಷಣಿಕ ಹಾಗು ಸಾಂಸ್ಕೃತಿಕ ಬೆಳವಣಿಗೆಯನ್ನು ಮಾತ್ರವೇ(ಸ್ಪರ್ದೆಗಳಲ್ಲಿ ಗೆಲ್ಲುವುದು) ಸರ್ವಾಂಗೀಣ ಬೆಳವಣಿಗೆ ಎಂದು ಅರ್ಥೈಸಿಕೊಂಡಿರುವಂತಿದೆ…?

ಇದಕ್ಕೆ ಸಂಬಂಧಿಸಿಧ ಮತ್ತೊಂದು ವಿಷಾದನೀಯ ಸಂಗತಿ ಎಂದರೆ ಇಂಥಹುದನ್ನು ಪ್ರಹಿಸುವಂತೆ ಟಿವಿಗಳಲ್ಲಿ ಬರುವ ಜಾಹೀರಾತುಗಳನ್ನು ನೋಡಿ ಮಕ್ಕಳಿಗೆ ದುಭಾರಿಯಾದಂತಹ ಆಹಾರ(ಹೆಲ್ತ್ ಡ್ರಿಂಕ್ಸ್) , ಪಾನೀಯಗಳನ್ನು ಪೋಷಕರು ಕೊಡಿಸುವ ಭ್ರಮೆಯಲ್ಲಿರುತ್ತಾರೆ. ಇದನ್ನು ಕುಡಿದರೆ ಮಾತ್ರ ತಮ್ಮ ಮಕ್ಕಳು ವಿಶೇಷವಾದದನ್ನು ಸಾಧಿಸಬಲ್ಲರು ಎಂಬ ಭ್ರಮೆಯನ್ನು ಜಾಹೀರಾತುಗಳಲ್ಲಿ ಬರುವ ಸೆಲೆಬ್ರಿಟಿಗಳು ಮತ್ತು ಪೋಷಕರು ಮಕ್ಕಳ ಮನಸ್ಸಿನಲ್ಲಿ ಉಂಟುಮಾಡುವುದು ಎಷ್ಟರಮಟ್ಟಿಗೆ  ಸರಿ? ಹೀಗೆ ನೋಡಿದರೆ ಹಿಂದಿನ ಕಾಲದಲ್ಲಿ ಮಕ್ಕಳು(ಆಧುನಿಕ ಹೆಲ್ತ್ ಪಾನಿಯಗಳಿಲ್ಲದ ಕಾಲದಲ್ಲಿ ) ಏನ್ನನ್ನೂ ಸಾಧಿಸಿರಲಿಲ್ಲವೆ?

ಮತ್ತಷ್ಟು ಓದು »

23
ಜೂನ್

ಖೆಡ್ಡಾ-೧ : ಪಡುವಣದಲ್ಲುದಯರವಿ!

– ಹೇಮಂತ್ ಕುಮಾರ್

[ಗೆಳೆಯ ಹೇಮಂತ್ ಕುಮಾರ್ ರವರು ಇನ್ನು ಮುಂದೆ ಪ್ರತಿ ಶನಿವಾರ ನಮ್ಮ ನಿಲುಮೆ ಓದುಗರನ್ನ ತಮ್ಮ ಕಥೆಗಳ ಖೆಡ್ಡಾಗೆ ಬೀಳಿಸಲಿದ್ದಾರೆ, ಓದುಗರೆಲ್ಲ ಇವರ ಕಥೆಗಳನ್ನ ಓದಿ ಈ ಯುವ ಬರಹಗಾರನಿಗೆ ಪ್ರೋತ್ಸಾಹಿಸಬೇಕೆಂದು ಕೋರುತ್ತೇವೆ]

ಅಪ್ಪ ನನಗೆ ವಯಸ್ಸಾಗ್ತಾ ಬಂತು ಕೂದಲು ಉದುರಿಹೋಗುವ ಮುನ್ನ ಮದುವೆ ಮಾಡಿಬಿಡಪ್ಪಾ! ಒಮ್ಮಿಂದೊಮ್ಮೆಗೆ ಇಪ್ಪತ್ತಾರು ವರ್ಷದ ತನ್ನ ಮಗ ಎದುರು ನಿಂತು ಹೀಗೆ ಕೇಳುವನೆಂದು ಯೋಚಿಸಿರಲಿಲ್ಲವೇನೋ ಮಂಜುನಾಥಯ್ಯನವರು. ಯಾವುದೋ ಲೆಕ್ಕಾಚಾರದಲ್ಲಿ ಮುಳುಗಿದ್ದವರು ಕಾಲ್ಕುಲೇಟರನ್ನು ಕೆಳಗಿಟ್ಟು ಕನ್ನಡಕವನ್ನು ಕಣ್ಣಿನಿಂದ ತೆಗೆದು ಕೈಗೆ ಅಲಂಕರಿಸಿ ಮಗನನ್ನು ಕಾಲಿನಿಂದ ತಲೆಯವರೆಗೂ ಒಮ್ಮೆ ಸ್ಕಾನ್ ಮಾಡುವರು. ಏನಪ್ಪಾ, ನನಗೂ ಸಂಗಾತಿ ಬೇಕು ಅನ್ನಿಸ್ತಿದೆ ಇದೇ ಸರಿಯಾದ ಸಮಯ ಮದುವೆ ಮಾಡಿಬಿಡಿ, ಎಂದು ಮತ್ತೊಮ್ಮೆ ಹೇಳಿದ್ದನ್ನು ಕೇಳಿದ ನಂತರ ಲೆಕ್ಕಾಚಾರದಿಂದ ಸಂಪೂರ್ಣ ಹೊರಗೆ ಬಂದ ಮಂಜುನಾಥಯ್ಯನವರು, ನಿಧಾನಕ್ಕೆ ಕುರ್ಚಿಗೆ ಒರಗಿ ಹಾ ಆಗಪ್ಪಾ ಯಾರು ಬೇಡ ಅಂದ್ರು ಇವಾಗ, ಎನ್ನುವರು. ಅರೆ ಇದೇನು ಅಪ್ಪ ಹೀಗೆ ಹೇಳುತ್ತಿರುವರಲ್ಲಾ ಎಂದು ಅಚ್ಚರಿಯಾಗಿ ಹೆಣ್ಣು ಹುಡುಕಿ ಮತ್ತೆ ಎಂದು ಮತ್ತೆ ನಾಚಿಕೆ ಬಿಟ್ಟು ಹೇಳುವನು.

ಮತ್ತಷ್ಟು ಓದು »

21
ಜೂನ್

ಕನ್ನಡ ಕಲಿಕೆಯ ಶಾಲೆ ಸಂಸ್ಥೆ

ನಿಲುಮೆ

ಸ್ನೇಹಿತರೆ ನಮಸ್ಕಾರ, ಈ ಪತ್ರದ ಮೂಲಕ ನಾವು ಇದೆ ಮೊದಲನೇ ಸಲ ಭೇಟಿಯಾಗುತ್ತಿದ್ದೇವೆ, ಎಲ್ಲರಿಗೂ ಶುಭವಾಗಲಿ . (ಒಂದು ಸೂಚನೆ: “ಈ ಪತ್ರ ಓದಲು ನಿಮಗೆ ಮೂರು ನಿಮಿಷ ಗಳಾದರೂ ಬೇಕಾಗುವುದರಿಂದ ದಯವಿಟ್ಟು ಸಮಯವಿದ್ದರಷ್ಟೇ ಮುಂದುವರಿಸಿ, ಇಲ್ಲದಿದ್ದರೆ ನಿಮ್ಮ ಬಿಡುವಿನ ವೇಳೆಯಲ್ಲಿ ಓದಿಕೊಳ್ಳಿ” – ಇದು ನಮ್ಮ ವಿನಂತಿ).

ಒಂದು ಕಾಲದಲ್ಲಿ “ಉದ್ಯಾನ ನಗರಿ” ಎಂದೇ ಪ್ರಸಿದ್ದಿ ಪಡೆದಿದ್ದ “ಬೆಂದಕಾಳೂರು”, ಇಂದು ಸಾಫ್ಟ್ವೇರ್ ಲೋಕದ ದಿಗ್ಗಜ ನಗರಗಳಲ್ಲಿ ಒಂದಾಗಿ ತಲೆಯೆತ್ತಿ ನಿಂತಿದೆ. ಜಾಗತೀಕರಣದ ಪ್ರಭಾವದಿಂದಾಗಿ ಇಂದು ಹಲವಾರು ಸಂಸ್ಥೆ ಗಳಿಗೆ ಹಾಗೂ ದೇಶ-ವಿದೇಶದ ನಾನಾ ಭಾಗ/ಪ್ರಾಂತ್ಯದ ಸಹಸ್ರಾರು ಜನರಿಗೆ ಆಶ್ರಯ ತಾಣವಾಗಿದೆ. ಹೇಗೆ ನಮ್ಮ ಮನೆಗೆ ಅತಿಥಿಗಳು ಬಂದಾಗ, ನಮ್ಮ ಬಗ್ಗೆ ಹಾಗೂ ನಮ್ಮ ಮನೆಯ ವಾತಾವರಣದ ಬಗ್ಗೆ ಪರಿಚಯ ಮಾಡಿಕೊಡುತ್ತೆವೋ ಹಾಗೆಯೇ ಇಲ್ಲಿಗೆ ಬರುವ ಸಹಸ್ರಾರು ಜನರಿಗೆ ನಮ್ಮ ಭಾಷೆಯನ್ನು, ನಮ್ಮ ಸಂಸ್ಕೃತಿಯನ್ನು ಪರಿಚಯಿಸಿ ಕೊಡುವ “ಜವಾಬ್ದಾರಿ” ಹಾಗೂ “ನಿರಂತರ ಪ್ರಯತ್ನ” ನಮ್ಮೆಲ್ಲರ ಮೇಲಿದೆ.

ಮತ್ತಷ್ಟು ಓದು »