ವಿಷಯದ ವಿವರಗಳಿಗೆ ದಾಟಿರಿ

ಜುಲೈ 2, 2012

6

ಕನ್ನಡ/ಇಂಗ್ಲೀಷ್ ಮಾಧ್ಯಮದ ಜೊತೆಗೆ ಏಕರೂಪ ಶಿಕ್ಷಣದ ಬಗ್ಗೆಯೂ ಚರ್ಚೆ ಆಗಬೇಕಲ್ಲವೇ?

‍ರಾಕೇಶ್ ಶೆಟ್ಟಿ ಮೂಲಕ

– ರಾಕೇಶ್ ಶೆಟ್ಟಿ

ಕಡೆಗೂ ‘ಸರ್ಕಾರ ಏಕರೂಪ ಶಿಕ್ಷಣ ನೀತಿ ಜಾರಿಗೆ ತರುವ ನಿಟ್ಟಿನಲ್ಲಿ ಚಿಂತಿಸಬೇಕು’ ಅನ್ನುವ ಮಾತುಗಳನ್ನು ಕಸಪಾ ಅಧ್ಯಕ್ಷ ಪುಂಡಲೀಕ ಹಾಲಂಬಿ ಹೇಳಿದ್ದಾರೆ.ಕಳೆದ ಹಲವು ದಿನಗಳಿಂದ ಇಂಗ್ಲೀಷ್ ಮಾಧ್ಯಮದ ಸುತ್ತ ನಡೆಯುತ್ತಲಿರುವ ಚರ್ಚೆಯಲ್ಲಿ ನಾನು ನಿರೀಕ್ಷಿಸುತಿದ್ದ ಮಾತು “ಏಕರೂಪ ಶಿಕ್ಷಣ”ದ ಬಗ್ಗೆ.ಪೇಟೆಯ/ಉಳ್ಳವರ ಮಕ್ಕಳಿಗೊಂದು ಶಿಕ್ಷಣ,ಹಳ್ಳಿಯ/ಬಡವರ ಮಕ್ಕಳಿಗೊಂದು ಶಿಕ್ಷಣ ಕೊಟ್ಟು ಕಡೆಗೆ ಸಮಾನತೆ,ಸಾಮಾಜಿಕ ನ್ಯಾಯ,ಭಾಷೆ,ನಾಡು-ನುಡಿಯ ಅಳಿವು ಉಳಿವು ಅಂತ ಮಾತನಾಡುವುದೆಷ್ಟು ಸರಿ?

೧೦ನೆ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದ ನನಗೆ ಮಾತೃ ಭಾಷೆಯಲ್ಲಿ ಕಲಿಯುವುದೆಷ್ಟು ಸುಲಭ,ಆನಂದದ ವಿಷಯ ಅನ್ನುವುದರ ಅರಿವಿದೆ ಹಾಗೆಯೇ ೧೦ರ ನಂತರ ಇಂಗ್ಲೀಷ್ ಮಾದ್ಯಮಕ್ಕೆ (ಪಿಯುಸಿಯಲ್ಲಿ ಆಯ್ದುಕೊಂಡಿದ್ದು ವಿಜ್ಞಾನ ವಿಷಯ) ಕಾಲಿಟ್ಟಾಗ ಅನುಭವಿಸಿದ ಕಷ್ಟ,ಕೀಳರಿಮೆಯ ಅನುಭವಗಳು ಇವೆ.ಹಾಗಾಗಿ ಈ ಚರ್ಚೆಯಲ್ಲಿ ಮತ್ತು ಈಗಿನ ನಮ್ಮ ಶೈಕ್ಷಣಿಕ ಪರಿಸ್ಥಿತಿಯಲ್ಲಿ ನಾನು ಇಂಗ್ಲೀಷ್ ಮೀಡಿಯಂ ಬೇಕು ಅನ್ನುವುದರ ಪರವೇ ನಿಲ್ಲುತ್ತೇನೆ.

ಒಂದು ವೇಳೆ ಸಾಹಿತಿಗಳು ಒತ್ತಾಯಿಸುತ್ತಿರುವಂತೆ ಪ್ರಾಥಮಿಕ ಶಿಕ್ಷಣ ಮಾತೃ ಭಾಷೆಯಲ್ಲೇ ಆಗಬೇಕು ಅನ್ನುವುದಾದರೆ ಅದು ಈ ರಾಜ್ಯದಲ್ಲಿರುವ ಸರ್ಕಾರಿ/ಅನುದಾನಿತ/ಕೇಂದ್ರೀಯ/ಖಾಸಗಿ ಶಾಲೆಗಳಿಗೂ ಏಕರೂಪವಾಗಿ ಅನ್ವಯವಾಗಲಿ. ಅದನ್ನು ಬಿಟ್ಟು ಸರ್ಕಾರಿ ಶಾಲೆಗಳಲ್ಲಿ ಮಾತ್ರ ಕನ್ನಡ ಕಡ್ಡಾಯವಾಗಲಿ ಆ ಮೂಲಕ ಬಡವರ ಮಕ್ಕಳು ಮಾತ್ರ ಕನ್ನಡದಲ್ಲಿ ಕಲಿತು ಮುಂದೆ ಇಂಗ್ಲೀಷ್ ಲೋಕಕ್ಕೆ ಕಾಲಿಟ್ಟು ಅರ್ಧಕರ್ಧ ಜನ ಕೀಳರಿಮೆ,ಹೆದರಿಕೆಯಿಂದಾಗಿ ಹಿಂದೆ ಬೀಳಲಿ ಅನ್ನುವುದು ಇಬ್ಬಗೆಯ ನೀತಿಯಾಗುತ್ತದೆ.

ಏಕರೂಪ ಶಿಕ್ಷಣ ಅನ್ನುವಾಗ ಇನ್ನೊಂದು ಅಂಶವನ್ನ ನಾವು ಗಮನಕ್ಕೆ ತೆಗೆದುಕೊಳ್ಳಬೇಕು.ಮಕ್ಕಳನ್ನು ಶಾಲೆಗೇ ಸೇರಿಸುವಾಗ ಅದು ಇಂಗ್ಲೀಷ್ ಮೀಡಿಯಂ ಶಾಲೆಯೇ ಅಂತ ಮಾತ್ರ ಈಗಿನ ಪೋಷಕರು ನೋಡುತ್ತಿಲ್ಲ,ಅದರ ಜೊತೆಗೆ ಅವರು ಅಲ್ಲಿರುವುದು ಸೆಂಟ್ರಲ್ ಸಿಲ್ಲಬಸ್ಸೋ,ಐ.ಸಿ.ಎಸ್.ಈ ಸಿಲ್ಲಬಸ್ಸೋ (ಅಥವಾ ಇನ್ಯಾವುದೋ) ಅನ್ನುವುದನ್ನು ನೋಡುತಿದ್ದಾರೆ.ನಮ್ಮ ಮಕ್ಕಳು ಇಂತ ಸಿಲಬಸ್ಸ್ ಇರೋ ಶಾಲೆಯಲ್ಲಿ ಓದುತಿದ್ದಾರೆ ಅಂತ ಹೇಳಿಕೊಳ್ಳುವುದು ಈಗಿನ ಪೋಷಕರಿಗೆ ಗರ್ವದ ವಿಷಯವಾಗಿದೆ. ಅಸಲಿಗೆ ಈ ರೀತಿ ಬೇರೆ,ಬೇರೆ ಸಿಲ್ಲಬಸ್ಸಿನ ಅಗತ್ಯ ಶಾಲಾ ಮಟ್ಟದಲ್ಲಿ ಏನು ಅನ್ನುವುದು ಸಹ ಚರ್ಚೆಯಾಗಬೇಕಲ್ಲವೇ?

ಇದ್ಯಾವುದನ್ನು ಕೇಳದೇ,ಉಳ್ಳವರ ಮಕ್ಕಳು ಇಂಗ್ಲೀಷ್ ಮೀಡಿಯಂಗೆ ಹೋಗಬಹುದು,ಹೋದರೂ ಅವರು ಕನ್ನಡಕ್ಕಾಗುತ್ತಿರುವ ಅಪಾಯದ ಬಗ್ಗೆ ದನಿಯೇತ್ತಬಹುದು ಆ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಿ ಬಡವರ/ರೈತರ/ದಲಿತರ ಮಕ್ಕಳು ಮಾತ್ರ ಕನ್ನಡ ಮೀಡಿಯಂ ಇರುವ ಸರ್ಕಾರಿ ಶಾಲೆಯಲ್ಲಿ ಕಲಿಯಲಿ ಅನ್ನುವ ಧೋರಣೆಯನ್ನ ಒಪ್ಪಬೇಕಾ?

ಏಕರೂಪ ಭಾಷಾ ಮಾಧ್ಯದಂತೆ, ಏಕರೂಪ ಸಿಲ್ಲಬಸ್ ಕೂಡ ಬರಲಿ ಅನ್ನುವುದು ಸಹ ನಮ್ಮ ಬೇಡಿಕೆಯಾಗಬೇಕಲ್ಲವೇ? ಹಾಗೊಂದು ವೇಳೆ ಏಕರೂಪ ಶಿಕ್ಷಣ (ಭಾಷಾ ಮತ್ತು ಸಿಲ್ಲಬಸ್ಸ್) ಜಾರಿಯಾದರೆ ಆಗ ಜನರೇ ಸರ್ಕಾರಿ ಶಾಲೆಗಳೆಡೆಗೆ ತಿರುಗಿ ನೋಡುವ ಸಾಧ್ಯತೆಗಳೂ ಇವೆ ಮತ್ತು ಇದು ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕಲೂ ಸಹಕಾರಿಯಾಗಬಹುದು.ಹಾಗಾಗಿ ಸರ್ಕಾರ ಅಂತ ಏಕರೂಪ ಶಿಕ್ಷಣ ನೀತಿಯ ಬಗ್ಗೆ ಅಗತ್ಯವಾಗಿ ಚಿಂತಿಸಲೆಬೇಕಿದೆ ಮತ್ತು ಸಾಹಿತಿಗಳ ಹೋರಾಟ ಈ ಅಂಶವನ್ನೇ ಇರಿಸಿಕೊಂಡರೆ ಬಹುಶ ಅವರಿಗೆ ಜನಸಾಮಾನ್ಯರ ಬೆಂಬಲವು ಸಿಗಬಹುದು.

ಈ ಚರ್ಚೆಯಲ್ಲಿ ಕನ್ನಡ ಮಾಧ್ಯಮದ ಪರ ನಿಂತವರು,ಇಂಗ್ಲೀಶ್ ಮಾಧ್ಯಮದ ಪರ ನಿಂತವರು,ಎಲ್ಲಿಯೂ ನಿಲ್ಲದೆ ಸರ್ಕಾರ ಬೇಕಾದ್ದು ಮಾಡಿಕೊಳ್ಳಲಿ ನಮ್ಮ ಮಕ್ಕಳನ್ನು ಖಾಸಗಿ ಶಾಲೆ ಸೇರಿಸುತ್ತೀವಿ ಅನ್ನುವವರು ಹಾಗೆಯೇ ತುತ್ತಿನ ಚೀಲದ ತುರ್ತಿಗೆ ಬಿದ್ದು ಪರಿತಪಿಸುತ್ತ ಇದ್ಯಾವುದರ ಅರಿವೇ ಇಲ್ಲದಿರುವ ಜನರನ್ನು ಮನಸ್ಸಿನಲ್ಲಿಟ್ಟುಕೊಂಡೇ ಪರಿಹಾರ ಹುಡುಕಬೇಕು. ಇಲ್ಲಿ ನಡೆಯುತ್ತಿರುವುದು ಚರ್ಚೆ ಮತ್ತು ಅಂತಿಮವಾಗಿ ಎರಡೂ ಬದಿಯವರು ಮುಂದಿನ ಪೀಳಿಗೆಯ ಮತ್ತು ನಾಡು-ನುಡಿಯ ಭವಿಷ್ಯದ ಬಗ್ಗೆಯೇ ಯೋಚಿಸುತ್ತಿರುವುದರಿಂದ ಕತ್ತಿ-ಗುರಾಣಿಗಳನ್ನು ಪಕ್ಕಕ್ಕಿಟ್ಟು.ಚಿಂತನ-ಮಂಥನದಲ್ಲಿ ತೊಡಗಿ ಒಂದು ಮಾರ್ಗ ಕಂಡು ಹಿಡಿದರೆ ಮುಂದಿನ ಪೀಳಿಗೆ ನಮ್ಮನ್ನು ನೆನೆಸಿಕೊಳ್ಳಬಹುದು(ಒಳ್ಳೆಯ ಕಾರಣಕ್ಕಾಗಿ).

ಶಿಕ್ಷಣ ನಮ್ಮ ಮೂಲಭೂತ ಹಕ್ಕು ಅನ್ನುವ ಐತಿಹಾಸಿಕ ತೀರ್ಪಿನ ಕಡ್ಡಾಯ ಜಾರಿಯ ಜೊತೆಗೆ ರಾಜ್ಯ ಸರ್ಕಾರ ಏಕರೂಪ ಶಿಕ್ಷಣ ನೀತಿಯನ್ನು ಜಾರಿಗೆ ತಂದು ದೇಶಕ್ಕೆ ಮಾದರಿಯಾಗಲಿ.

6 ಟಿಪ್ಪಣಿಗಳು Post a comment
  1. ಜುಲೈ 2 2012

    ಏಕರೂಪದ ಶಿಕ್ಷಣ ಅಂದರೇನು? ಎಲ್ಲ ಶಾಲೆಗಳಲ್ಲಿ ಏಕರೂಪದ ಪಠ್ಯಕ್ರಮ ಇರಬೇಕು ಎಂದರ್ಥವೇ? ಏಕರೂಪದ ಸೌಲಭ್ಯಗಳಿರಬೇಕು ಎಂದರ್ಥವೇ? ಏಕರೂಪದ ಬೋಧನ ಪದ್ಧತಿ ಇರಬೇಕು ಎಂದರ್ಥವೇ? ಏಕರೂಪದ ಬೋಧನಮಾಧ್ಯಮವಿರಬೇಕು ಎಂದರ್ಥವೇ? ಏಕರೂಪದ ಕಲಿಕಾ ಅನುಭವಗಳನ್ನು ಒದಗಿಸುವುದು ಎಂದರ್ಥವೇ?
    ಮೊದಲನೆಯದನ್ನು ಜಾರಿಗೊಳಿಸುವುದು ಸುಲಭ. ಉಳಿದವುಗಳು—-?

    ಉತ್ತರ
    • ನನ್ನ ಆಶಯವೂ ಮೊದಲಿನದೇ “ಏಕರೂಪದ ಪಠ್ಯಕ್ರಮ”
      ಶಾಲಾ ಮಟ್ಟದಲ್ಲಿ ಯಾತಕ್ಕಾಗಿ ವಿವಿಧ ಪಠ್ಯಕ್ರಮಗಳಿರಬೇಕು ಅನ್ನುವುದು ನನ್ನ ಪ್ರಶ್ನೆ

      ಉತ್ತರ
  2. bhaskara
    ಮೇ 10 2014

    ನಿಮ್ಮ ಈ ನಿಲುವಿಗೆ ನನ್ನ ಸಮರ್ಥನೆ ಇದೆ. ಮಕ್ಕಳ ವಿಕಸನಕ್ಕೆ ಯಾವುದು ಸೂಕ್ತವೋ ಆ ಭಾಷಾ ಮಾಧ್ಯಮವನ್ನ ಪೋಷಕರು ಆಯ್ಕೆ ಮಾಡಿಕೊಳ್ಳುತ್ತಾರೆ ಇದು ಅವರ ಹಕ್ಕಾಗಿರಬೇಕು ಸಹಾ. ಕನ್ನಡವನ್ನು ಒಂದು ಭಾಷೆಯನ್ನಾಗಿ ಖಡ್ಡಾಯವಾಗಿ ಕಲಿಸಲಿ, ಇಂದು ಕನ್ನಡ ಮಾಧ್ಯಮವೇ ಬೇಕು ಎಂದು ಪ್ರತಿಪಾದಿಸುತ್ತಿರುವವರ ಮಕ್ಕಳೆಲ್ಲಾ ಸಂಫೂರ್ಣ ವಿಧ್ಯಾಭ್ಯಾಸವನ್ನ ಕನ್ನಡದಲ್ಲೇ ಮುಗಿಸಿದ್ದಾರ? ಕನ್ನಡದಲ್ಲಿ ಇಂಜಿನಿಯರಿಂಗ್, ವೈದ್ಯ ಪಠ್ಯಗಳು ಇಲ್ಲವಾದಲ್ಲಿ ಅವರ ಮಕ್ಕಳನ್ನು ಕಲಾ ವಿಭಾಗಕ್ಕೆ ಕಳಿಸಿ ಓದಿಸಿದ್ದಾರ? ಸ್ನಾತಕೋತ್ತರದ ವರೆಗೆ ಕಲಾ ಮಾಧ್ಯಮ ಕನ್ನಡದಲ್ಲೇ ಇದೆ.. ಬೇರೆಯೋರ ಮಕ್ಕಳನ್ನ ಬಾವಿಗೆ ತಳ್ಳಿ ಆಳ ನೋಡುವ ಬುದ್ದಿ ಬಿಟ್ಟು, ಆಳ ಅಳೆಯುವ ನೈಜ ಮಾರ್ಗ ಹುಡುಕಿ.

    ಉತ್ತರ
  3. Maaysa
    ಮೇ 10 2014

    ಏಕರೂಪ ಶಿಕ್ಷಣ ಬೇಡ.

    ವಿವಿಧ ಬಗೆಯಲ್ಲಿ, ವಿವಿಧ ಶೈಕ್ಷಣ-ಸಿದ್ಧಾಂತಾಧಾರಿತ ವಿವಿಧ ರೂಪದ ಶಿಕ್ಷಣದ ಸೌಲಭ್ಯವಿದ್ದು, ಕಲಿಯುವರಿಗೆ ಹಾಗು ಪೋಷಕರಿಗೆ ಆಯ್ಕೆಯ ಸ್ವಾತಂತ್ರ್ಯವಿರಬೇಕು.

    ವಿಜ್ಞಾನ ಹಾಗು ತಂತ್ರಜ್ಞವನ್ನು ಕನ್ನಡದಲ್ಲಿ ಕಲಿಸುವುದು ದಂಡ. ಹಾಗೆ ಕನ್ನಡವಲ್ಲದ ಭಾಷೆಯಲ್ಲಿ ಕರ್ನಾಟಕದಲ್ಲಿ ಸಾಮನ್ಯ, ಸಾರ್ವಜನಿಕ ಸಂವಹನ ತಪ್ಪು!

    ಉತ್ತರ
  4. Goutham
    ಆಕ್ಟೋ 19 2015

    Thanks for writing a good article. Govt and educationalists should think about it

    ಉತ್ತರ

Trackbacks & Pingbacks

  1. ಮಾತೃಭಾಷೆಯಲ್ಲಿಯೇ ಶಿಕ್ಷಣ-ಮಕ್ಕಳ ಹಕ್ಕನ್ನು ರಕ್ಷಿಸಿ | ನಿಲುಮೆ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments