ವಿಷಯದ ವಿವರಗಳಿಗೆ ದಾಟಿರಿ

Recent Articles

25
ಏಪ್ರಿಲ್

ಈ ಯುದ್ಧ ಭೂಮಿಯಲ್ಲಿ ಸೈನಿಕರ ಬಡಿದಾಟ ಪ್ರಕೃತಿಯೊಂದಿಗೆ!

– ಡಾ ಅಶೋಕ್. ಕೆ. ಆರ್

          ಇದು ಪ್ರಪಂಚದ ಅತಿ ಎತ್ತರದ ಯುದ್ಧಭೂಮಿ. ಸಮುದ್ರಮಟ್ಟದಿಂದ ಅಜಮಾಸು 5,753 ಮೀ ಎತ್ತರದಲ್ಲಿರುವ ಹಿಮಚ್ಛಾದಿತ ರಣರಂಗ. ಭಾರತ ಮತ್ತು ಪಾಕಿಸ್ತಾನಕ್ಕೆ ಪ್ರತಿಷ್ಠೆಯ ಸಂಕೇತ. 1984ರಿಂದ ಇಲ್ಲಿಯವರೆಗೆ ಪಾಕಿಸ್ತಾನದ ಮೂರು ಸಾವಿರ ಮತ್ತು ಭಾರತದ ಐದು ಸಾವಿರಕ್ಕೂ ಹೆಚ್ಚು ಸೈನಿಕರು ಇಲ್ಲಿ ಹತರಾಗಿದ್ದಾರೆ [ಅನಧಿಕೃತ ವರದಿ; ಅಧಿಕೃತ ವರದಿಯನ್ನು ಎರಡೂ ದೇಶದ ಸರಕಾರಗಳು ಬಹಿರಂಗಗೊಳಿಸುವುದಿಲ್ಲ]. ಬಹಳಷ್ಟು ಮಂದಿಯ ದೇಹವನ್ನು ಇನ್ನೂ ಪತ್ತೆ ಹಚ್ಚಲಾಗಿಲ್ಲ. 80%ಗಿಂತ ಹೆಚ್ಚು ಸಂಖ್ಯೆಯ ಸೈನಿಕರ ಮರಣಕ್ಕೆ ಕಾರಣವಾಗಿದ್ದು ಎದುರಾಳಿಗಳ ಬಂದೂಕಾಗಲೀ, ಆಧುನಿಕ ಕ್ಷಿಪಣಿಗಳಾಗಲೀ ಅಲ್ಲ. ದೇಶಗಡಿಗಳ ಲೆಕ್ಕಿಸದೆ ಈ ಸೈನಿಕರನ್ನು ಬಲಿ ತೆಗೆದುಕೊಂಡಿರುವುದು ಪ್ರಕೃತಿ! ಪ್ರಕೃತಿಯ ಪ್ರಮುಖಾಯುಧ ಹಿಮ!! ಇದು ಸಿಯಾಚಿನ್ ಯುದ್ಧಭೂಮಿ.

ಆಪರೇಷನ್ ಮೇಘದೂತ: –

ಬಾಂಗ್ಲಾದೇಶದ ವಿಮೋಚನಾ ಯುದ್ಧದ ನಂತರ 1972ರಲ್ಲಿ ಸಿಮ್ಲಾ ಒಪ್ಪಂದಕ್ಕೆ ಯು.ಎನ್ ನೇತೃತ್ವದಲ್ಲಿ ಭಾರತ ಮತ್ತು ಪಾಕಿಸ್ತಾನ ಸಹಿ ಹಾಕುತ್ತವೆ. ಗಡಿರೇಖೆಯನ್ನು ವಿವರಿಸುವ ಆ ಒಪ್ಪಂದದಲ್ಲಿ ಸಿಯಾಚಿನ್ ಸೇರಿರಲಿಲ್ಲ. ಹಿಮಚ್ಛಾದಿತ ಮರುಭೂಮಿಯ ಮೇಲೆ ಹಕ್ಕು ಸಾಧಿಸಲು ಇವೆರಡೂ ದೇಶಗಳು ಬಡಿದಾಡಲಾರವು ಎಂದುಕೊಂಡಿತ್ತು ಯು.ಎನ್. ಆದರೆ ನಡೆದಿದ್ದೇ ಬೇರೆ! 1967ರಿಂದಲೇ ಅಮೆರಿಕಾದ ರಕ್ಷಣಾ ಸಂಸ್ಥೆಗಳು ತಯಾರಿಸಿದ ನಕ್ಷೆಗಳಲ್ಲಿ ಸಿಯಾಚಿನ್ ಪ್ರದೇಶವನ್ನು ಯಾವುದೇ ಐತಿಹಾಸಿಕ ಆಧಾರಗಳಿಲ್ಲದಾಗ್ಯೂ ಪಾಕಿಸ್ತಾನದ ಭಾಗವಾಗಿ ತೋರಿಸಲಾರಂಭಿಸಿತು. ಪಾಕಿಸ್ತಾನ ಕೂಡ ಅಮೆರಿಕದ ಕುಮ್ಮಕ್ಕಿನಿಂದಾಗಿ ಕ್ರಮೇಣವಾಗಿ ಸಿಯಾಚಿನ್ ಪ್ರದೇಶದ ಮೇಲೆ ಹಕ್ಕು ಚಲಾಯಿಸಲಾರಂಭಿಸಿತು. ಪಾಕಿನ ಈ ವರ್ತನೆಯನ್ನು ಗಮನಿಸಿದ ಭಾರತ ಸರಕಾರ ಕೂಡ ತನ್ನ ಸೈನ್ಯವನ್ನು ‘ಎತ್ತರದ ಪ್ರದೇಶಗಳಲ್ಲಿ ಯುದ್ಧ ತರಬೇತಿಯ’ ನೆಪದಲ್ಲಿ ಸಿಯಾಚಿನ್ ಪ್ರದೇಶಕ್ಕೆ ನಿಯೋಜಿಸಲಾರಂಭಿಸಿತು.

ಕುದಿಯಲಾರಂಭಿಸಿದ ದ್ವೇಷ 1984ರಲ್ಲಿ ಯುದ್ಧ ರೂಪವನ್ನು ಪಡೆಯಿತು. ಸಿಯಾಚಿನ್ ಪ್ರದೇಶವನ್ನು ಹಿಂಪಡೆದುಕೊಳ್ಳಲು ಆಪರೇಷನ್ ಮೇಘದೂತದ ಹೆಸರಿನಲ್ಲಿ ಭಾರತದ ಸೈನಿಕರು ಸಿಯಾಚಿನ್ ಏರಲಾರಂಭಿಸಿದರು. ಸರಿಸುಮಾರು ಸಾವಿರ ಚದುರ ಮೈಲು ಪ್ರದೇಶವನ್ನು ವಶಪಡಿಸಿಕೊಳ್ಳುವುದರಲ್ಲಿ ಭಾರತ ಸಫಲವಾಗಿ ಯುದ್ಧದಲ್ಲಿ ಗೆಲುವು ಪಡೆಯಿತು.

ಮತ್ತಷ್ಟು ಓದು »

24
ಏಪ್ರಿಲ್

ಒಳಸಂಚಿಗೆ ಬೇಕಿದೆ ಆತ್ಮವಿಶ್ವಾಸದ ಅಗ್ನಿಸ್ಪರ್ಷ

– ಚಕ್ರವರ್ತಿ ಸೂಲಿಬೆಲೆ
   ಅಗ್ನಿ ೫ ಬಂದನಂತರ ರಣಾಂಗಣದಲ್ಲಿ ನಮ್ಮನ್ನು ಸೋಲಿಸಲು ಚೀನಾಕ್ಕೆ ಸಾಧ್ಯವಾಗಲಾರದು ನಿಜ. ಆದರೆ ಸಂಸತ್ತಿನ ಮೇಜಿನ ಮೇಲೆಯೇ ನಮ್ಮ ಸೋಲಿಗೆ ಷರಾ ಬರೆದರೆ ಯಾರು ಏನು ಮಾಡಿಯಾರು ಹೇಳಿ!?

ನಾಲ್ಕು ವರ್ಷಗಳ ತಪಸ್ಸು ಪೂರ್ಣಗೊಂಡಿದೆ. ೭೦೦ ಕಿ.ಮೀ.ದೂರದವರೆಗೂ ಹೋಗಿ ಶತ್ರು ಠಾಣ್ಯ ನಾಶ ಮಾಡಿಬರಬಲ್ಲ. ಅಗ್ನಿ ೧ನ್ನು ನಭಕ್ಕೆ ಹಾರಿಬಿಟ್ಟಾಗಿನಿಂದಲೂ ೫,೦೦೦ ಕಿ.ಮೀ. ದೂರಕ್ಕೆ ಹೋಗಬಲ್ಲ ಅಗ್ನಿಯ ಕನಸು ಕಾಣುತ್ತಲೇ ಇದ್ದವರು ನಾವು. ಮೊನ್ನೆ ಅಗ್ನಿ ೫ ಯಶಸ್ವಿಯಾಗಿ ಉಡಾವಣೆಗೊಂಡು ಸೈನ್ಯದ ಶಕ್ತಿಯನ್ನು ನೂರ್ಮಡಿಗೊಳಿಸಿದಾಗ ಆ ಕನಸು ನನಸಾಯಿತು. ಕನಸು ನನಸುಗಳ ಕತೆ ಏನೇ ಇರಲಿ. ಸೈನ್ಯದ ಸಾಮರ್ಥ್ಯದ ಕುರಿತಂತೆ ನಡೆಯುತ್ತಿದ್ದ ವಾದ ವಿವಾದಗಳಿಂದ ಈ ಪರೀಕ್ಷೆ ಕೇಂದ್ರ ಸರ್ಕಾರವನ್ನಂತೂ ಪಾರುಮಾಡಿತು. ಅಗ್ನಿಯೂ ತಂಪೆರೆಯಬಲ್ಲದೆಂದರೆ ಹೀಗೇ ನೋಡಿ!

ಈ ನಾಲ್ಕು ವರ್ಷಗಳ ಪ್ರಯತ್ನ ಅಂತ್ಯ ಕಾಣಲು ಇನ್ನೂ ಸ್ವಲ್ಪ ಕಾಲಾವಕಾಶ ಬೇಕಿತ್ತು. ಆದರೆ ರಕ್ಷಣಾ ಸಚಿವ ಆಂಟನಿ ವಿಜ್ಞಾನಿಗಳಿಗೆ ದುಂಬಾಲು ಬಿದ್ದು ಈ ಪ್ರಯೋಗವನ್ನು ಸಾಧ್ಯವಾಗಿಸಿ ಯಶಸ್ಸು ಗಳಿಸಿಕೊಂಡರು. ಈ ನಿಟ್ಟಿನಲ್ಲಿ ಡಿಆರ್‌ಡಿಓಗೆ ಸಹಕಾರಿಯಾಗಿ ಹಲವು ವೈಜ್ಞಾನಿಕ ಸಂಸ್ಥೆಗಳು ದುಡಿದಿವೆ. ಯಶಸ್ಸಿನ ಈ ಹೊತ್ತಿನಲ್ಲಿ ಆ ವಿಜ್ಞಾನಿಗಳಿಗೆಲ್ಲ ಒಂದು ಪ್ರೀತಿಯ ಸಲಾಮು.

ಮತ್ತಷ್ಟು ಓದು »

23
ಏಪ್ರಿಲ್

ನನ್ನ ಊಟದ ಮೆನು ನಿರ್ಧರಿಸಲು ನೀವ್ಯಾರು?

– ರಾಕೇಶ್ ಶೆಟ್ಟಿ

ಕುಡಿಯುವ ನೀರು ಕೇಳಿದಾಗ “ನೀರು ಕೊಟ್ಟರೆ ನನ್ನ ಜಾತಿ ಕೆಡುತ್ತದೆ” ಅಂದ ಮಂಗಲ್ ಪಾಂಡೆಗೆ, “ಸ್ವಲ್ಪ ಇರು,ದನದ ಕೊಬ್ಬು ಹಚ್ಚಿರುವ ಕಾಡತೂಸು ಕಚ್ಚಲು ಹೇಳುತ್ತಾರೆ,ಆಮೇಲೆ ನಿನ್ನ ಜಾತಿ ಅದೇನಾಗುತ್ತೋ ನಾನು ನೋಡುತ್ತೇನೆ” ಅಂದಿದ್ದ ಆ ಕೆಳ ಜಾತಿಯ ಹುಡುಗ.ಮೊದಲೆ ಈ ಕಾಡತೂಸಿನ ಗುಸು-ಗುಸಿಗೆ ಗಾಯಗೊಂಡಿದ್ದವನಿಗೆ ಉಪ್ಪು ಸವರಿದಂತಾಗಿತ್ತು ಹುಡುಗನ ಮಾತು,ಕಡೆಗದು ’ಬ್ಯಾರಕ್ ಪುರ’ದಲ್ಲಿ ಕ್ರಾಂತಿಯ ಕಿಡಿಯಾಗಿ ಭಾರತವನ್ನ ವ್ಯಾಪಿಸಿಕೊಂಡಿತ್ತು.ಇತಿಹಾಸ ಅದಕ್ಕೆ ಕೊಟ್ಟ ಹೆಸರು “೧೮೫೭ರ ಪ್ರಪ್ರಥಮ ಸ್ವಾತಂತ್ರ್ಯ ಸಂಗ್ರಾಮ’.

೧೭೫೭ರಲ್ಲಿ ಪ್ಲಾಸಿ ಕದನದ ನಂತರ ಭಾರತವನ್ನ ಇಡಿಯಾಗಿ ಆಪೋಶನ ತೆಗೆದುಕೊಂಡ ಬ್ರಿಟಿಶರಿಂದ ತೆಪ್ಪಗೆ ಆಳಿಸಿಕೊಳ್ಳುತಿದ್ದ ಭಾರತದ ಸತ್-ಪ್ರಜೆಗಳ ಎದೆಯೊಳಗಿನ ನೋವಿನ ಜ್ವಾಲಾಮುಖಿ ಸ್ಫೋಟವಾಗಲು ಕಾರಣವೊಂದು ಬೇಕಿತ್ತು,ಕಾರಣವಾಗಿ ಬಂದದ್ದು ದನದ ಮತ್ತು ಹಂದಿಯ ಕೊಬ್ಬು ಸವರಿದ ಎನ್-ಫಿಲ್ಡ್ ಬಂದೂಕು..!

ಹೌದು.ಭಾರತದ ಸತ್-ಪ್ರಜೆಗಳೇ ಹಾಗೆ ಹೊಟ್ಟೆಗೆ ಅನ್ನ,ತಲೆಗೊಂದು ಸೂರು ಕೊಡದ ಸರ್ಕಾರವಾದರೂ ಸರಿ,ಕೋಟಿಗಟ್ಟಲೆ ಹಣ ಲೂಟಿ ಮಾಡಿದರೂ ಸರಿ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ.ಆದರೆ ಧರ್ಮದ ವಿಚಾರಕ್ಕಿಳಿದಿರೋ ಅಲ್ಲಿಗೆ ಮುಗಿಯಿತು..! ಇದು ಕೇವಲ ಇತಿಹಾಸದ ಕತೆಯಲ್ಲ,ತೀರಾ ಕಳೆದ ವರ್ಷ ತಸ್ಲೀಮಾ ನಸ್ರೀನ್ ಅವರು ಬರೆದ ಲೇಖನ (ಎಂದು ಹೇಳಲಾದ )ಪ್ರಕಟವಾದಾಗ ಶಿವಮೊಗ್ಗ-ಹಾಸನದಲ್ಲಿ ಏನಾಗಿತ್ತು ಅನ್ನುವುದು ನೆನಪಿದೆಯಲ್ವಾ?

ಕಳೆದ ಒಂದು ವರ್ಷಗಳಿಂದಲೂ ರಾಜ್ಯದಲ್ಲಿ ಸದ್ದು ಮಾಡುತ್ತಿರುವುದು ’ಗೋ-ಹತ್ಯೆ ನಿಷೇಧ’ ಮಸೂದೆ.ಸಾಕಷ್ಟು ಚರ್ಚೆಗಳು,ವಾದಗಳು ನಡೆದಿವೆ.ಬಹುಷಃ ಅದು ಎಂದಿಗೂ ಮುಗಿಯಲಾರದು.

ಮತ್ತಷ್ಟು ಓದು »

21
ಏಪ್ರಿಲ್

ದೀಪ. ಭಾಗ-೧

– ವಿಜಯ್ ಹೂಗಾರ್

ಸುಳಿಗಾಳಿಯಿಂದ ಹಗುರಾಗಿ ತೇಲಿದ ಮಣ್ಣು ಬಿಸಿಲಿನ ಪ್ರಭೆಗೆ ಮೊನಚಾಗಿ ಇಡೀ ಊರನ್ನ ಸಿಂಪಡಿಸಿದಂತೆ ಆವರಿಸಿತ್ತು.ಅಲ್ಲಲ್ಲಿ ತಲೆಯೆತ್ತಿದ ಮರಗಳು ತುಂಡು ತುಂಡಾಗಿ ನೆಲವನ್ನು ನೇವರಿಸುವಂತೆ ಬೇರುರಿದ್ದವು.ಊರ ಮಧ್ಯ ನಡುಗಡ್ದೆಯಂತೆ ಇರುವ ದೈತ್ಯ ಬೆಟ್ಟದ ಸುತ್ತಲೂ ಹರಿಯದ ನೀರಿನಂತೆ ಹರಿದ ಮನೆಗಳು ಕಲಸುಮೇಲೋಗರವಾಗಿ ಹರಡಿಕೊಂಡಿದ್ದವು.ಬೆಟ್ಟದ ಮೇಲೆ ಊರ ಕಾಯೋ ಪಹರೆದಾರನಂತೆ ಲಕ್ಷ್ಮಿ ದೇವತೆ ಭಕ್ತರ ಸೇವೆ ಸ್ವೀಕರಿಸುತ್ತಾ ವಾಸವಾಗಿದ್ದಳು.ಬೆಟ್ಟದ ಅಪರಭಾಗದಲ್ಲಿ ಬೀಕೋ ಅನ್ನುತ್ತಿರುವ ಬತ್ತಿ ಹಗುರಾದ ಕೆರೆ, ಆಡಿ ಹೋದ ಪುಟ್ಟ ಮಕ್ಕಳ ಹೆಜ್ಜೆಯ ಬರೆದಿಡುವ ಕಾಗದದಂತಿತ್ತು.ಬಿಸಿಲಿನ ಹೊಳೆಗೆ ತಟಸ್ಥವಾಗಿ ನಿಂತಿರುವ ಬೆವತ ಮನೆಗಳು ಶೋಕಸಾಗರದಲ್ಲಿ ಕಳೆದುಹೋದಂತೆ ಶಾಂತವಾಗಿದ್ದವು.

ಕಮಲಜ್ಜಿಗೆ ವಯಸ್ಸಾದರೂ ಈಗಲೂ ಚೂಟಿಯಾಗಿ ವಯಸ್ಸಿನ ಹುಡುಗಿಯರು ನಾಚುವಂತೆ ಕೆಲಸ ಮಾಡುತಿದ್ದಳು. ಮಗಳಮಗ ಹನುಮಂತನ ಮದುವೆಯಾಗಿ ಐದು ಸಂವತ್ಸರ ಕಳೆದರು ಮಕ್ಕಳಾಗಲಿಲ್ಲ ಅಂತ ತುಂಬಾ ಬೇಸರಿಸಿದ್ದಳು. ಮುತ್ತಜ್ಜಿಯಾಗಿ ಮರಿ ಮೊಮ್ಮಗನನ್ನು ಆಡಿಸಬೇಕೆಂದು ಬಲು ಆಸೆಯಿಂದ ಹನುಮಂತನ ಮದುವೆಯಾದ ಹೊಸತರಲ್ಲಿ ನವದಂಪತಿಗಳಿಗೆ ಖಾಸಗಿ ಕೋಣೆಯಲ್ಲಿ ಖಾಸಗಿಯಾಗಿ ಬಿಟ್ಟು ಕೊಟ್ಟಿಗೆಯಲ್ಲಿ ಇರುವ ಚಿಕ್ಕ ಕೋಣೆಯಲ್ಲಿ ಎಷ್ಟೋ ದಿವಸ ಒಬ್ಬಳೇ ಮಲಗಿದ್ದಳು.ಅದರಿಂದ ಫಲ ಕಾಣದೆ ಹೋದಾಗ ಪ್ಯಾಟೆಯಲ್ಲಿರುವ ದೊಡ್ಡ ಮಗ ರಾಮಪ್ಪನ ಹತ್ತಿರ ‘ಸೊಸೆಯನ್ನ ನೋಡಬೇಕೆನಿಸಿತು’ ಅಂತ  ಹೇಳಿ ಪದೇ ಪದೇ ಹೋಗಿ ಬರುತ್ತಿದ್ದಳು.’ಈ ಕೈಯ್ಯಾಗ ಎಷ್ಟು ಬಾಣಂತನ ಮಾಡಿಲ್ಲ ಲಕ್ಷ್ಮಿಯಕ್ಕ,ಆದರ ನಮ್ಮ ದೇವಕಿಯ (ಹನುಮಂತನ ಹೆಂಡತಿ) ಬಾಣಂತನ ನನ್ನ ಕೈಯಾರ ಮಾಡಬೇಕೆಂಬುದು ಬಕ್ಕುಳ್ ಆಸೆ ಆಗ್ಯದ ನೋಡು’ ಅಂತ ತನ್ನ ಸಂಕಟದ ಆಶಯ ಲಕ್ಷ್ಮಿಯಕ್ಕನ ಮುಂದೆ ತೋಡಿಕೊಳ್ಳುತ್ತಿದ್ದಳು.ಪರಾಗಸ್ಪರ್ಷದ ಅಮೃತ ಘಳಿಗೆಯ ಕಾಯುವ ಹೂವಾಡಗಿತ್ತಿಯಂತೆ ದೇವಕಿಯಿಂದ ಹೂವಿನಂಥ ಮಗು ಬಯಸುತ್ತಿದ್ದಳು.ಇವಳ ಕೊನೆಗಾಣದ ಕೊರಗು ಕಂಡು ಕಮಲಜ್ಜಿಯ ಗಂಡ ಪೂಜಾರಪ್ಪ ಮಾತ್ರ “ಸ್ವಲ್ಪ ದಮ್ ತಿನು,ಬಿತ್ತಿದ ಪ್ರತಿವರ್ಷ ಬೆಳೆ ಚನ್ನಾಗಿ ಬರಬೇಕು ಅಂತೇನಿಲ್ಲ….ಕೆಲವೊಂದುಸಲ ಮಳೆ ಬಿದ್ದಿಲ್ಲ ಅಂದ್ರೆ ಬಿತ್ತಿದೆಲ್ಲ ಲುಕ್ಸಾನು ಆಗ್ತದ” ಅಂತ ಸಮಾಧಾನ  ಮಾಡ್ತಿದ್ದ.ಅದಕ್ಕೆ ಕಮಲಜ್ಜಿ “ಹು ಲುಕ್ಸಾನ ಯಾಕ ಆಗ್ತದ,ಮಳಿ ಬರಾದ ನೋಡೇ ಬಿತ್ತೊಕೆನಾಗ್ತದ” ಅಂತ ಹೌಹಾರುತ್ತಿದ್ದಳು.

ಮತ್ತಷ್ಟು ಓದು »

20
ಏಪ್ರಿಲ್

ಯುವ ಪೀಳಿಗೆಗೆ ಬದುಕುವ ಕಲೆಯನ್ನು ಕಲಿಸಿ !

ಒಂದು ಕೆ.ಜಿ ಹಣ್ಣುಗಳೊಂದಿಗೆ ವೃದ್ಧ ದಂಪತಿಯನ್ನು ಭೇಟಿಯಾದೆ. ಬೆಂಗಳೂರಿನ ಮಲ್ಲೇಶ್ವರದ ಅಪಾರ್ಟ್ ಮೆಂಟ್ ಒಂದರಲ್ಲಿ ಅವರ ವಾಸ. ಯಜಮಾನರಿಗೆ  ಅಜಮಾಸು ೯೩-೯೪ ವರ್ಷ, ಯಜಮಾನರ ಯಜಮಾನತಿಯವರಿಗೆ ಒಂದೈದು ಕಮ್ಮಿ ಇರಬಹುದು. ಒಂದು ಚಿಕಿತ್ಸಾಲಯದಲ್ಲಿ, ಅವರು ಮುಪ್ಪಿನ ನೋವಿನ ತೊಂದರೆಗಳಿಗೆ ಅಲ್ಲಿಗೆ ಬಂದಾಗ, ನಾನು ಇನ್ನವುದೋ ಕಾರಣದಿಂದ ಅದೇ ಸಮಯಕ್ಕೆ ಅಲ್ಲಿಗೆ ತೆರಳಿದ್ದಾಗ, ವೈದ್ಯರ ಸಂದರ್ಶನಕ್ಕೆ ಸರದಿಯಲ್ಲಿ ಕಾಯುವಾಗ  ಆದ ಚಿಕ್ಕ ಪರಿಚಯ. ಗಂಟೆಯ ಕಾಲ ಮಾತನಾಡಿ ನಮಗೇ ಯಾವುದೋ ಜನ್ಮದ ಋಣವೆಂಬಂತೇ ಹರಟಿದ್ದು ವಿಶೇಷ! ಆ ವೃದ್ಧರ ಜೊತೆಯಲ್ಲಿ ಮನೆಯಲ್ಲಿ ಯಾರೂ ಇಲ್ಲ. ಅವರೇ ಸಾಮಾನು ತಂದುಕೊಳ್ಳಬೇಕು, ಅವರೇ ಅಡಿಗೆ ಮಾಡಿಕೊಳ್ಳಬೇಕು, ಅವರೇ ಪರಸ್ಪರ ಮಾತನಾಡಿ ಕಾಲವ್ಯಯಿಸಬೇಕು, ಅವರೀರ್ವರ ನೋವಿಗೂ-ನಲಿವಿಗೂ ಅವರೇ ಅವರೇ ಮತ್ತು ಅವರೇ! ಯಾಕೆ ಸಂತನಭಾಗ್ಯ ಇಲ್ಲವೇ? ಇದೆಯಪ್ಪಾ, ಎಲ್ಲವೂ ಇದೆ; ಮಗ ಅಮೇರಿಕದಲ್ಲಿ ದೊಡ್ಡ ವೈದ್ಯ, ಮಗಳು ಬೆಂಗಳೂರಿನಲ್ಲೇ ಇದ್ದು ಆಕೆ ಇವರಿಗಿಂತಾ ಮುಪ್ಪಾದವರಂತೇ ಇದ್ದಾಳಂತೆ-ಗೂರಲು ಉಬ್ಬಸ ರೋಗದ ಅವಳ ಯಜಮಾನರನ್ನೂ ಅವಳ ಮಕ್ಕಳನ್ನೂ ಸಂಭಾಳಿಸುವುದೇ ಅವಳಿಗೆ ಕಷ್ಟವಾಗಿ ಈ ಕಡೆ ತಲೆಹಾಕಲು ಆಗುತ್ತಿಲ್ಲವಂತೆ. ವೈದ್ಯ ಮಗ ಅಮೇರಿಕಾದಿಂದ ಎರಡೋ ಮೂರೋ ವರ್ಷಗಳಿಗೊಮ್ಮೆ ಫ್ಲೈಯಿಂಗ್ ವಿಸಿಟ್ ಕೊಡುತ್ತಿರುತ್ತಾನಂತೆ. ಮಗನ ಜೀವನ ಅಲ್ಲಿ ಸುಖಕರವಾಗಿದೆ ಎಂಬ ಮಾನಸಿಕ ಸಂತೋಷದಲ್ಲೇ ತಮ್ಮ ಕಷ್ಟಗಳನ್ನು ಮರೆಯುತ್ತಾ ಕಾಲಹಾಕುತ್ತಿದ್ದಾರೆ. ಇಬ್ಬರೂ ಹುಷಾರಿಲ್ಲದೇ ಏಳಲಾಗದಿದ್ದರೆ ದೂರವಾಣಿಯ ಮುಖಾಂತರ ಔಷಧ ಅಂಗಡಿಯ ಮಾಲೀಕನಿಗೆ ಅಥವಾ ಗೊತ್ತಿರುವ ಚಿಕಿತ್ಸಾಲಯದ ವೈದ್ಯರ ಸಹಾಯಕರಿಗೆ ದುಂಬಾಲು ಬೀಳುತ್ತಾರೆ; ಒಲ್ಲದ ಮನಸ್ಸಿನಲ್ಲೇ ಅವರು ಅಲ್ಪಸ್ವಲ್ಪ ಸಹಕಾರ ನೀಡಿದರೆ ಉಂಟು ಇಲ್ಲದಿದ್ದರೆ ಇಲ್ಲ.

ಮತ್ತಷ್ಟು ಓದು »

19
ಏಪ್ರಿಲ್

ನಮ್ಮ ಕ್ಷೀರಪಥದಲ್ಲಿ ಹಲವು ಶತಕೋಟಿ ವಾಸಯೋಗ್ಯ ಗ್ರಹಗಳಿವೆಯಂತೆ!

 – ವಿಷ್ಣುಪ್ರಿಯ

ನಮ್ಮ ಕ್ಷೀರಪಥದಲ್ಲಿ ಕನಿಷ್ಠವೆಂದರೂ ೧೬೦ ಶತಕೋಟಿ ಕೆಂಪು ಕುಬ್ಜ ನಕ್ಷತ್ರಗಳಿವೆ. ಈ ನಕ್ಷತ್ರಗಳ ಸುತ್ತ ಕನಿಷ್ಠ ಒಂದು ಸೂಪರ್ ಅರ್ಥ್ ಪರಿಭ್ರಮಿಸುತ್ತಿದ್ದರೂ ೧೬೦ ಶತಕೋಟಿ ಸೂಪರ್‌ಅರ್ಥ್‌ಗಳು ನಮ್ಮ ಕ್ಷೀರಪಥದಲ್ಲಿರಬೇಕು. ಅಥವಾ ಶೇ.೪೦ರಷ್ಟೇ ಕೆಂಪು ಕುಬ್ಜ ಸೂರ್ಯರು ಸೂಪರ್ ಅರ್ಥ್ ಹೊಂದಿರುವುದು ಎಂಬ ವಾದವನ್ನು ಪರಿಗಣಿಸಿದರೂ ೬೪ ಶತಕೋಟಿ ಸೂಪರ್ ಅರ್ಥ್‌ಗಳು ನಮ್ಮ ಕ್ಷೀರಪಥದಲ್ಲಿರಬೇಕು.

ಭೂಮಿಯನ್ನೊಳಗೊಂಡ ನಮ್ಮ ಸೌರಮಂಡಲ ಇರುವಂಥ ಕ್ಷೀರಪಥ ಗೆಲಾಕ್ಸಿಯಲ್ಲಿ ವಾಸಯೋಗ್ಯವಾಗಿರುವ ಗ್ರಹಗಳಿರಬಹುದೇ? ಬಾಹ್ಯಾಕಾಶದಾಚೆಗೆ ಸಾವಿರಾರು ಕೋಟಿ ಮೈಲಿಗಳ ದೂರದವರೆಗೆ ಎಲ್ಲಿಯಾದರೂ ಜೀವಾಸ್ತಿತ್ವಕ್ಕೆ ಅನುಕೂಲವಾಗುವಂಥ ಪ್ರದೇಶವಿದೆಯೇ ಎಂಬ ಹುಡುಕಾಟ ತಾರಕಸ್ಥಾಯಿ ತಲುಪಿರುವ ಈ ಹೊತ್ತಿನಲ್ಲಿ ಇಂಥದ್ದೊಂದು ಪ್ರಶ್ನೆ ಅಚ್ಚರಿ ಎನ್ನಿಸುವುದಿಲ್ಲ. ಕ್ಷೀರಪಥದೊಳಗೇ ವಾಸಯೋಗ್ಯ ಗ್ರಹಗಳು ಖಂಡಿತವಾಗಿಯೂ ಇರಬಹುದು ಎಂಬ ಉತ್ತರವೇ ಸಿಗುತ್ತದೆ. ಆದರೆ ಈ ಪ್ರಶ್ನೆಯ ಬೆನ್ನಿಗೇ ಎಷ್ಟು ಗ್ರಹಗಳು, ಆಕಾಶಕಾಯಗಳು ವಾಸಯೋಗ್ಯ ಪ್ರದೇಶಗಳನ್ನು ಹೊಂದಿರಬಹುದು? ಎಂಬ ಇನ್ನೊಂದು ಪ್ರಶ್ನೆ ಎಸೆದರೆ ಬಹುಶಃ ಅದಕ್ಕೆ ನಿಖರವಾದ ಉತ್ತರವನ್ನು ಕೊಡುವುದಕ್ಕೆ ಪರಿಣತ ವಿಜ್ಞಾನಿಗಳಿಂದಲೂ ಸಾಧ್ಯವಾಗದು.

ಮತ್ತಷ್ಟು ಓದು »

18
ಏಪ್ರಿಲ್

ಶಾರ್ಟ್ ವೇವ್ ರೇಡಿಯೋ ಪ್ರಸಾರದಲ್ಲಿ ಕನ್ನಡದ ದನಿಯಿಲ್ಲ

-ಸಾತ್ವಿಕ್ ಎನ್ ವಿ

ಕನ್ನಡಿಗನೊಬ್ಬ ತನ್ನ ಕೆಲಸದ ನಿಮಿತ್ತ ಕರ್ನಾಟಕದ ಹೊರಗೆ ಬದುಕಬೇಕಾಗಿ ಬಂದರೆ ಆತನಿಗೆ ಕನ್ನಡ ಆಕಾಶವಾಣಿ ಕೇಳಲು ಸಾಧ್ಯವಿಲ್ಲ. ಕಾರಣ, ಕಿರುತರಂಗಾಂತರ ಅಂದರೆ ಶಾರ್ಟ್‌ವೇವನಲ್ಲಿ ಕನ್ನಡದ ಯಾವುದೇ ಆಕಾಶವಾಣಿ ಕೇಂದ್ರ ಪ್ರಸಾರ ಮಾಡುತ್ತಿಲ್ಲ. ಆದರೆ ಇಂಥ ಪರಿಸ್ಥಿತಿ ಇತರೆ ಭಾಷಿಕರಿಗೆ ಇದೆಯೇ? ಇಲ್ಲ. ಕನ್ನಡವನ್ನು ಬಿಟ್ಟು ಮಿಕ್ಕೆಲ್ಲ ದಕ್ಷಿಣಭಾರತದ ಭಾಷೆಗಳಿಗೂ ಈ ಸೌಲಭ್ಯವಿದೆ.

ಏನಿದು ಕಿರುತರಂಗಾತರದಲ್ಲಿ ರೇಡಿಯೋ ಪ್ರಸಾರ?
ಬಾನುಲಿ ಪ್ರಸಾರದಲ್ಲಿ ಶಾರ್ಟ್ ವೇವ್(SW), ಮೀಡಿಯಂ ವೇವ್(MW) ಮತ್ತು ಫ್ರಿಕ್ವೇನ್ಸಿ ಮೊಡೊಲೇಷನ್ (FM) ಎಂಬ ಮೂರು ರೀತಿಯ ತರಂಗಾತರಗಳನ್ನು ಬಳಸಲಾಗುತ್ತದೆ. ಈಗ ಕರ್ನಾಟಕದ ಆಕಾಶವಾಣಿ ಕೇಂದ್ರಗಳು ಕೇವಲ ಎಂ.ಡಬ್ಲ್ಯೂ ಮತ್ತು ಎಫ್.ಎಂ ಗಳಲ್ಲಿ ಮಾತ್ರ ತಮ್ಮ ಕಾರ್ಯಕ್ರಮಗಳನ್ನು ಪ್ರಸರಿಸುತ್ತಿವೆ. ಆದರೆ ಎಂ.ಡಬ್ಲ್ಯೂ ಮತ್ತು ಎಫ್.ಎಂ ತರಂಗಗಳ ದೊಡ್ಡ ಕೊರತೆ ಎಂದರೆ ಈ ಅಲೆಗಳು ಬಹಳ ದೂರ ಚಲಿಸಲಾರವು. ಆದರೆ ಶಾರ್ಟ್ ವೇವ್ ಹಾಗಲ್ಲ. ಅದರ ಚಲನೆಯ ಶಕ್ತಿ ಖಂಡಾಂತರ ವ್ಯಾಪ್ತಿಯದ್ದು. ಇಂದು ನಾವು ಕೇಳುತ್ತಿರುವ ಬಿಬಿಸಿ, ವಾಯ್ಸ್ ಆಫ್ ಅಮೆರಿಕಾ, ರೇಡಿಯೋ ಸಿಲೋನ್, ಚೈನಾ ರೇಡಿಯೋ ಇಂಟರ್ ನ್ಯಾಷನಲ್ ಇತ್ಯಾದಿಗಳು ಇದೇ ತರಂಗಗಳನ್ನು ಬಳಸಿಕೊಳ್ಳುತ್ತವೆ. ಈ ತರಂಗಗಳನ್ನು ಬಳಸಿ ಪ್ರಪಂಚದ ಯಾವುದೇ ನಿರ್ದಿಷ್ಟ ಭಾಗಕ್ಕೆ ಪ್ರಸಾರವನ್ನು ತಲುಪಿಸಲು ಸಾಧ್ಯ. ಇದನ್ನು ಬೀಮಿಂಗ್ ಎಂದು ಕರೆಯಲಾಗುತ್ತದೆ. ಮತ್ತಷ್ಟು ಓದು »

17
ಏಪ್ರಿಲ್

ದನ ತಿಂದ್ರೆ ತಪ್ಪು ಜನಾನ್ ಬೇಕಾದ್ರೆ ತಿವ್ಕೊಳ್ಳಿ! …

-ಅಶೋಕ್ ಕೆ.ಆರ್

ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾನಿಲಯದಲ್ಲಿ ಅದೇನೋ ಬೀಫ್ ಫೆಸ್ಟಿವಲ್ ಅಂತ ಮಾಡ್ತಾರಂತೆ. ದನದ ಮಾಂಸ ಮಾಡಿ ಹಬ್ಬವನ್ನಾಚರಿಸುತ್ತಾರಂತೆ. ‘ಊಟ ನಮ್ಮಿಷ್ಟದಂತಿರಬೇಕು’ ಎಂಬುದ್ದಿಶ್ಯದಿಂದ ಆರಂಭವಾದ ಹಬ್ಬವಂತೆ. ಈ ಸಂದರ್ಭದಲ್ಲಿ ಹಬ್ಬದ ಪರವಾಗಿದ್ದ ವಿದ್ಯಾರ್ಥಿಯೊಬ್ಬನಿಗೆ ಚೂರಿ ಇರಿತವಾಗಿರುವ ಸುದ್ದಿ ಬಂದಿದೆ. ದನದ ರಕ್ಷಕರು ಜನರನ್ನು ಭಕ್ಷಿಸುತ್ತಿರುವ ಕಥೆಯಿದು!
          ಭಾರತದಲ್ಲಿ ಗೋಮಾಂಸ ಸೇವನೆಯ ಬಗ್ಗೆ ಇರುವ ಇತಿಹಾಸ ಆಸಕ್ತಿಕರವಾಗಿದೆ. ಧರ್ಮದ ಇತಿಹಾಸಕಾರರ ಲೇಖನಗಳ ಪ್ರಕಾರ ಸನಾತನ ಹಿಂದೂ ಧರ್ಮದಲ್ಲಿ ಬ್ರಾಹ್ಮಣರಲ್ಲೂ ಮಾಂಸ ಸೇವನೆ ಸಾಮಾನ್ಯವಾಗಿತ್ತು. ಗೋಮಾಂಸವೂ ಅದಕ್ಕೆ ಹೊರತಾಗಿರಲಿಲ್ಲ (ಇತ್ತೀಚೆಗೆ ಬಲಪಂಥೀಯತೆಯ ಪಟ್ಟ ಹೊತ್ತಿರುವ ಎಸ್.ಎಲ್. ಭೈರಪ್ಪನವರ ಉತ್ತಮ ಕೃತಿಗಳಲ್ಲೊಂದಾದ ‘ಪರ್ವ’ದಲ್ಲೂ ಗೋಮಾಂಸ ಸೇವಿಸುವ ಹಿಂದೂಗಳಿದ್ದಾರೆ). ಹಿಂದೂ ಧರ್ಮದಲ್ಲಿ ಗೋಮಾಂಸ ಸೇವನೆಗೆ ವಿರೋಧ ವ್ಯಕ್ತವಾಗಿ ನಿಷೇಧಕ್ಕೊಳಗಾಗಿದ್ದು ಬುದ್ಧ ಧರ್ಮದಿಂದ! ಅಹಿಂಸಾ ತತ್ವವನ್ನು ಭೋದಿಸುವ ಬುದ್ಧ ಧರ್ಮ ಹೆಚ್ಚೆಚ್ಚು ಪ್ರಚಲಿತಗೊಳ್ಳುತ್ತಿದ್ದಂತೆ ಗಾಬರಿಗೊಳಗಾದ ಹಿಂದೂ ಪಂಡಿತರು ಮಾಂಸ ಸೇವನೆ ನಿಷೇಧಿಸುವ ತೀರ್ಮಾನ ಕೈಗೊಳ್ಳುತ್ತಾರೆ. ಮಾಂಸದ ಸವಿಯಾದ ರುಚಿಯನ್ನುಂಡವರು ಅಷ್ಟು ಸುಲಭವಾಗಿ ಬಿಟ್ಟಾರೆಯೇ?! ಬ್ರಾಹ್ಮಣರು ಎಲ್ಲ ಮಾಂಸ ತೊರೆದು ಉಳಿದ ಕೆಲವರು ಗೋಮಾಂಸ ತೊರೆಯುತ್ತಾರೆ. ಹಿಂದೂ ಧರ್ಮದಿಂದ ಶೋಷಣೆಯನ್ನಷ್ಟೇ ಪಡೆದುಕೊಂಡಿದ್ದ ಬಹಳಷ್ಟು ಸಮುದಾಯಗಳು ಯಾವ ಮಾಂಸ ಸೇವನೆಯನ್ನೂ ತೊರೆಯುವುದಿಲ್ಲ. ಮತ್ತಷ್ಟು ಓದು »
16
ಏಪ್ರಿಲ್

ಕಾನೂನಿನಂಗಳ ೧ : ಕಾನೂನಿನ ಸ್ವರೂಪ

– ಉಷಾ ಐನಕೈ  ಶಿರಸಿ

ಪ್ರತೀ ಮನುಷ್ಯ ಹುಟ್ಟುವಾಗಲೇ ಆತನಿಗೆ ಅರಿವಿಲ್ಲದೇ ಹಲವಾರು ರೀತಿಯ ಕಾನೂನು ವ್ಯಾಪ್ತಿಗೆ ಸೇರಿಬಿಡುತ್ತಾನೆ. ಅದನ್ನು ಬೇಕಾದರೆ ಧರ್ಮ ಅನ್ನೋಣ. ನೈಸರ್ಗಿಕ ಕಾನೂನು ಅನ್ನೋಣ ಅಥವಾ ಪ್ರಭುತ್ವ ನಿಗದಿಪಡಿಸಿದ ಕಾನೂನು ಎಂದು ಕರೆಯೋಣ. ಒಟ್ಟಿನಲ್ಲಿ ಮನುಷ್ಯನಿಗೆ ಕಾನೂನಿನ ಆಶ್ರಯ ಬೇಕೇಬೇಕು. ಏಕೆಂದರೆ ಮನುಷ್ಯ ಸಂಘಜೀವಿ. ಅಷ್ಟೇ ಅಲ್ಲ, ಜೀವಿಗಳಲ್ಲೇ ಅತ್ಯಂತ ವಿಶಿಷ್ಟವಾದ ಮೆದುಳನ್ನು ಹೊಂದಿದ ಬುದ್ಧಿವಂತ ಈ ಮನುಷ್ಯ. ಇಂಥ ಮನುಷ್ಯರು ಸಾಮೂಹಿಕವಾಗಿ ಬಾಳಬೇಕಾದರೆ ಅದಕ್ಕೊಂದು ಚೌಕಟ್ಟು ಬೇಕು. ನಿಯಮಾವಳಿ ಬೇಕು. ಮಾರ್ಗದರ್ಶಿ ತತ್ವಗಳು ಬೇಕು. ಇದರಿಂದ ಇಡೀ ಸಮುದಾಯ ಆರೋಗ್ಯಕರವಾಗಿ ಪ್ರಗತಿಯತ್ತ ಸಾಗಲು ಸಾಧ್ಯ. ಹೀಗೆ ಮನುಷ್ಯ ಸಮೂಹವನ್ನು ನಿಯಂತ್ರಿಸಲು, ಚಾಲನೆಗೆ ತರಲು ಸೃಷ್ಟಿಸಿಕೊಂಡ ಚೌಕಟ್ಟನ್ನೇ ನಾವು ಕಾನೂನು ಎನ್ನಬಹುದು.

ಕಾನೂನು ಮನುಷ್ಯನಿಗೆ ಹಕ್ಕನ್ನು ನೀಡುತ್ತದೆ. ಹಕ್ಕಿಗೆ ಪ್ರತಿಯಾಗಿ ಕೆಲವು ಕರ್ತವ್ಯಗಳನ್ನು ಸೂಚಿಸುತ್ತದೆ. ಈ ಹಕ್ಕು ಮತ್ತು ಕರ್ತವ್ಯಗಳೇ ಮನುಷ್ಯನ ಆತ್ಮಗೌರವ, ಸದ್ವಿನಯ, ಪರೋಪಕಾರ, ಸಹಬಾಳ್ವೆ ಮುಂತಾದ ಮೌಲ್ಯಗಳನ್ನು ಸೃಷ್ಟಿಸುತ್ತವೆ ಮತ್ತು ನಿರ್ದೇಶಿಸುತ್ತವೆ.

ಕಾನೂನು ಎಂದರೆ ಏನು ಎನ್ನುವ ಪ್ರಶ್ನೆಗೆ ನಿಖರವಾದ ಒಂದು ವ್ಯಾಖ್ಯೆಯನ್ನು ಕೊಡುವುದು ಕಷ್ಟ. ಕಾನೂನು ಅನ್ನುವ ಪದ ಸರಳವಾಗಿ ಕಂಡರೂ ಅದರ ಅರ್ಥವ್ಯಾಪ್ತಿ ಬಹುವಿಸ್ತಾರವಾಗಿದೆ. ಹಾಗಾಗಿ ಮನುಷ್ಯನ ಹಕ್ಕು ಮತ್ತು ಕರ್ತವ್ಯಗಳ ಮೂಲಕವೇ ಕಾನೂನುಗಳನ್ನು ಅರ್ಥೈಸಿಕೊಳ್ಳುತ್ತ ಹೋಗಬೇಕು.

ಮತ್ತಷ್ಟು ಓದು »

13
ಏಪ್ರಿಲ್

ಸ್ಮಾರ್ಟ್ ಫೋನ್ ಬಗ್ಗೆ ನಮಗೆಷ್ಟು ಗೊತ್ತು?

– ಮುರಳಿಧರ್ ದೇವ್

ಇತ್ತೀಚಿಗೆ ಎಲ್ಲೆಡೆಯೂ ಸ್ಮಾರ್ಟ್ ಫೋನ್ ಗಳದ್ದೇ ಸುದ್ದಿ, ಬಹುತೇಕ ಎಲ್ಲ ದೊಡ್ಡ ದೊಡ್ಡ ಕಂಪನಿಗಳು ತಾವು ಸ್ಮಾರ್ಟ್ ಫೋನ್ ನಲ್ಲಿ ಇರಬೇಕೆಂದು ಬಯಸ್ತ ಇವೆ. ಅಲ್ಲದೆ ಗೂಗಲ್ ಎಂಬ ದೈತ್ಯ ಕಂಪನಿ android ಎನ್ನುವ ಆಪರಟಿಂಗ್ ಸಿಸ್ಟಮ್ ತಂದಮೆಲಂತೂ ಸ್ಮಾರ್ಟ್ ಫೋನ್ ಮಾರುಕಟ್ಟೆ ತುಂಬಾನೇ ವಿಸ್ತಾರವಾಗಿದೆ. ಗೂಗಲ್ ನ  android ಆಧಾರಿತ  ಹೊಸ ಸ್ಮಾರ್ಟ್ ಫೋನ್ ಗಳು  ಕೇವಲ ೪ ಸಾವಿರದಿಂದ  ಶುರುವಾಗಿ ೪೦ ಸಾವಿರದವರೆಗೂ ದೊರೆಯುತ್ತವೆ. ಹಣಕ್ಕೆ ತಕ್ಕಂತೆ ಮೊಬೈಲ್ ಪರದೆ, ವಿಶೇಷತೆಗಳು, ಕ್ಯಾಮರ ಸೌಲಭ್ಯ ಇರುತ್ತವೆ. ಈ ಸ್ಮಾರ್ಟ್ ಫೋನ್ ಗಳಲ್ಲಿನ ಮತ್ತೊಂದು ವಿಶೇಷ ಅಂದರೆ, ಬಳಕೆದಾರ ತನಗೆ ಬೇಕಾದ ಅಪ್ಲಿಕೇಶನ್ ಗಳನ್ನು ” android  ಮಾರ್ಕೆಟ್” ನಿಂದ  ತನ್ನ ಮೊಬೈಲ್ ನಲ್ಲಿ ಬಳಸಬಹುದು. ವಿವಿಧ ಆಟಗಳನ್ನು, ಸಾಮಾಜಿಕ ತಾಣಗಳ  ಅಪ್ಲಿಕೇಶನ್ ಗಳನ್ನು, ಬ್ಯಾಂಕಿಂಗ್  ಅಪ್ಲಿಕೇಶನ್ ಗಳನ್ನು ಮೊಬೈಲ್ ನಲ್ಲಿ ಬಳಸಬಹುದು. ಇದೆ ವಿಚಾರದಿಂದ  ಭಾರತದಲ್ಲೂ ಪ್ರತಿಯೊಬ್ಬರಿಗೂ ತಾವು ಒಂದು ಸ್ಮಾರ್ಟ್ ಫೋನ್ ತಗೊಂಡು ಸ್ಮಾರ್ಟ್ ಆಗಬೇಕೆಂಬ ಹಂಬಲ. ಅಲ್ಲದೆ  android  ಮಾರ್ಕೆಟ್ ನಲ್ಲಿ ಬಹಳಷ್ಟು ಉಚಿತವಾಗಿ ಬಳಸಬಹುದಾದ  ಅಪ್ಲಿಕೇಶನ್ ಗಳಿವೆ. ಫೋನ್ ಬೆಲೆಯೂ ಕೈಗೆಟಗುವ ದರದಲ್ಲೇ ಇದೆ, ಹೀಗಾಗಿ ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರ ಕೈನಲ್ಲಿ ಇಂತಹ ಸ್ಮಾರ್ಟ್ ಫೋನ್ ಗಳನ್ನ ಕಾಣಬಹುದು.

ಬಹುತೇಕರಿಗೆ ಸ್ಮಾರ್ಟ್ ಫೋನ್ ನ ಉಪಯೋಗ ಏನು ಅಂತ ಗೊತ್ತಿಲ್ದೆ ಇದ್ರೂ ಸ್ಮಾರ್ಟ್ ಆಗಿರಬೇಕು ಅಂತ ಸ್ಮಾರ್ಟ್ ಫೋನ್ ತೊಗೋತ ಇದಾರೆ. ತಿಳಿದವರಿಗೂ ಸ್ಮಾರ್ಟ್ ಫೋನ್ ಗಳ ಬಗ್ಗೆ ಹಾಗು ಅದರಲ್ಲಿ ಉಪಯೋಗಿಸಬಹುದಾದ ಅಪ್ಪ್ಲಿಕೆಶನ್ ಗಳ ಗ್ಗೆ ಹೆಚ್ಚಾಗಿ ತಿಳುವಳಿಕೆ ಇರುವುದಿಲ್ಲ. ಇದರಿಂದಾಗಿಯೇ ಇತ್ತೀಚಿನ ದಿನಗಳಲ್ಲಿ ಹ್ಯಾಕರ್ ಗಳು ಈ ಅಪ್ಪ್ಲಿಕೆಶನ್ ಲೋಕಕ್ಕೆ ನಿಧಾನವಾಗಿ ಕಾಲಿಡ್ತಾ ಇದಾರೆ. ಬಳಕೆದಾರನಿಗೆ ಯಾಮಾರಿಸಿ ಅವನ ಅರಿವಿಗೆ ಬರದಂತೆ ಆತನ ಮಾಹಿತಿಗಳನ್ನು ಕದಿಯುವ ಜಾಲಗಳು ನ್ಧಾನವಾಗಿ ಹುಟ್ತ್ಕೊಳ್ತಾ ಇವೆ. ಹಾಗು ಇದಕ್ಕೆಲ್ಲ ಬಳಕೆದಾರನಿಗೆ ಸ್ಮಾರ್ಟ್ ಫೋನ್ ಗಳು & ಅದರಲ್ಲಿ ಬಳಸಬಹುದಾದ ಅಪ್ಪಿಕೆಶನ್ ಗಳ ಬಗ್ಗೆ ಇರುವ ಕಡಿಮೆ ಜ್ಞಾನದಿಂದ ಹ್ಯಾಕರ್ ಗಳು ಸುಲಭವಾಗಿ ಸ್ಮಾರ್ಟ್ ಫೋನ್ ನಲ್ಲಿರುವ ಸ್ಮಾರ್ಟ್ ಜನರ ಮಾಹಿತಿಗಳನ್ನು ಸುಲಭವಾಗಿ ಪಡೆದುಕೊಳ್ಳುತ್ತಾರೆ.
ಮತ್ತಷ್ಟು ಓದು »