ಕಂದ ನೀನು ಸಾಯಲೇಕೆ…
– ಮಂಜುನಾಥ ಕೊಳ್ಳೇಗಾಲ
ಕಳೆದೆರಡು ದಿನದಿಂದ ಆ ಮುಗ್ಧ ಕರುವಿನ ಚಿತ್ರ ಪದೇಪದೇ ನಿದ್ದೆಗೆಡಿಸುತ್ತಿದೆ. ಮೊನ್ನೆ ಕೇರಳದಲ್ಲಿ ಕೆಲವು ರಕ್ಕಸರು ಪ್ರತಿಭಟನೆಯ ಹೆಸರಿನಲ್ಲಿ ಕಡಿದು ತಿಂದು ತೇಗಿದರಲ್ಲ,ಕಡಿಯಲು ಟೆಂಪೋ ಹತ್ತಿಸುವ ಕೆಲವೇ ಕ್ಷಣಗಳ ಹಿಂದೆ ಕೂಡ, ಬಲಿಗೆ ಹೋಗುವ ಪ್ರಾಣಿಗಳ ಕಣ್ಣುಗಳಲ್ಲಿ ಸಾಮಾನ್ಯವಾಗಿ ಕಾಣುವ ಭಯದ ಸೂಚನೆಯೂ ಇಲ್ಲ ಅದರ ಮೊಗದಲ್ಲಿ. ಇನ್ನೈದೇ ನಿಮಿಷದಲ್ಲಿ ತನ್ನನ್ನು ಕೊಲ್ಲುತ್ತಾರೆಂಬ ಅರಿವೂ ಇರಲಾರದು ಪಾಪದ್ದಕ್ಕೆ. ಕೇವಲ ಯಾರದೋ ಮೇಲಿನ ಹುರುಡಿಗಾಗಿ ಅದನ್ನು ಕತ್ತರಿಸಿ ಚೆಲ್ಲಿದ ಕಟುಕರು ಆ ಮೊಗವನ್ನು, ಆ ಭಾವವನ್ನು ಕ್ಷಣಕಾಲವಾದರೂ ನಿರುಕಿಸಿದ್ದರೇ? ಖಂಡಿತಾ ಇರಲಿಕ್ಕಿಲ್ಲ.
ಬಾಲ್ಯದಲ್ಲಿ ನಾನು ಕೊಟ್ಟಿಗೆಯಲ್ಲಿ ಕೂತು ದಿನಗಟ್ಟಲೆ ಹರಟುತ್ತಿದ್ದ ತುಂಗೆ ಕರುವೂ ಬಹುತೇಕ ಹೀಗೇ ಇತ್ತು. ಅದೇ ಬಟ್ಟಲುಗಣ್ಣು, ಅದೇ ಹೊಳಪು, ಅದೇ ಮಾಟವಾದ ಮೋರೆ, ತುಸುವೇ ನಗುವಂತಿದ್ದ ಮುಖಭಾವ, ಹಣೆಯ ಮೇಲೆ ಅದೇ ಬಿಳಿಯ ಲಾಂಛನ. ಮೈಬಣ್ಣವೊಂದು ತುಸು ತಿಳಿದು, ವಯಸ್ಸೊಂದು ಇನ್ನೂ ಚಿಕ್ಕದು… ಅಂಥದ್ದೊಂದು ಮುದ್ದಾದ ಜೀವಿಗೆ ಇಂಥ ದಾರುಣವಾದ ಅಂತ್ಯವೂ ಸಾಧ್ಯವಿರಬಹುದೆಂದು ಯೋಚಿಸಲೂ ಆಗದ ವಯಸ್ಸು ಅದು. ಹಾಲು ಕರೆಯುವುದನ್ನು ನಿಲ್ಲಿಸಿದ ಹಸುವಿಗೂ ಮನೆಯಲ್ಲಿ ಹೊರೆ ಹುಲ್ಲು, ಒಂದಷ್ಟು ’ತಿಂಡಿ’ ದಕ್ಕುತ್ತಿತ್ತು; ಮೇಯಲು ಗೋಮಾಳವಿತ್ತು. ಸತ್ತವುಗಳನ್ನು ಸಾಮಾನ್ಯವಾಗಿ ಮಾದಿಗರು ಒಯ್ಯುತ್ತಿದ್ದರಾದರೂ ಕೆಲವು ಮನೆಗಳಲ್ಲಿ ಮನೆಯ ಸದಸ್ಯರಂತೆಯೇ ಇರುತ್ತಿದ್ದ ಅವುಗಳು ಆನಂತರ ಛಿದ್ರಛಿದ್ರವಾಗಿ ಹೋಗುವುದನ್ನು ಕಲ್ಪಿಸಿಕೊಳ್ಳಲಾಗದೇ ಕೆಲವು ಮನೆಯವರು ತಮ್ಮ ಜಾಗೆಯಲ್ಲೇ ಮಣ್ಣು ಮಾಡುತ್ತಿದ್ದುದೂ, ಅದಕ್ಕಾಗಿ ಕೆಲವೊಮ್ಮೆ ಮಾದಿಗರು ಬಂದು ಜಗಳವಾಡುತ್ತಿದ್ದುದೂ ಉಂಟು – ಆಗ ಅದರ ಹಿಂದಿನ ಆರ್ಥಿಕತೆ, ಸಾಮಾಜಿಕ ನಡಾವಳಿಗಳು ನನಗಿನ್ನೂ ಅರ್ಥವಾಗದ ವಯಸ್ಸು. ಹೋರಿಗರುಗಳನ್ನೂ ಅವು ಹಾಲು ಕುಡಿಯುವುದನ್ನು ಬಿಡುವವರೆಗೆ ಇಟ್ಟುಕೊಂಡು ಆಮೇಲೆ ಅದನ್ನು ರೈತರಿಗೆ ಮಾರುತ್ತಿದ್ದುದನ್ನೂ, “ಕಟುಕರಿಗೆ ಮಾರಿಗೀರೀಯ” ಎಂಬ ಕೊನೆಯ ಎಚ್ಚರಿಕೆಯೊಂದಿಗೆ ಬೀಳ್ಕೊಡುತ್ತಿದ್ದುದನ್ನೂ ನೋಡಿದ್ದೇನೆ. ಆಮೇಲೆ ಅವುಗಳ ಗತಿ ಏನಾಗುತ್ತಿತ್ತೋ ಅರಿಯೆ – ಕೆಲವೊಮ್ಮೆ ಅವು ’ಮನೆ’ಯನ್ನು ಹುಡುಕಿಕೊಂಡು ಕೊಟ್ಟಿಗೆಗೇ ಮರಳಿ ಬಂದದ್ದೂ, ಆಗೆಲ್ಲಾ ಅವಕ್ಕೊಂದಷ್ಟು ಹುಲ್ಲು ಹಾಕಿ, ಮೈದಡವಿ, ’ಬುದ್ಧಿ ಹೇಳಿ’ ಮತ್ತೆ ಹೊಸ ಯಜಮಾನರ ಬಳಿ ಕಳಿಸುತ್ತಿದ್ದುದೂ ಉಂಟು.