ವಿಷಯದ ವಿವರಗಳಿಗೆ ದಾಟಿರಿ

Posts tagged ‘ರೈತ’

18
ಜನ

ಹಸಿರ ಪಯಣ …

– ಸುಜಿತ್ ಕುಮಾರ್

maurice-de-vlaminck-la-moisson-1945ಶಾಂತ ಸಂಜೆಯ ತಿಳಿತಂಪಿನ ಹಿತಕ್ಕೆ ಭಂಗ ತರುವಂತೆ ಬಿಸಿಯಾದ ಗಾಳಿ ಒಮ್ಮೆಲೇ ಬೀಸತೊಡಗಿತ್ತು. ಗಾಳಿಯ ಬೀಸುವಿಕೆಯ ದಿಕ್ಕನ್ನು ಪರಿಗಣಿಸದೆಯೆ ಹಕ್ಕಿಗಳ ಗುಂಪು ತಮ್ಮ ತಮ್ಮ ಗೂಡುಗಳೆಡೆಗೆ ಮುಖಮಾಡಿ ಹಾರತೊಡಗಿದ್ದವು. ಕಪ್ಪು ಬಣ್ಣದ ಟ್ರ್ಯಾಕ್ ಪ್ಯಾಂಟ್, ಅದೇ ಬಣ್ಣದ ಟಿ ಶರ್ಟ್ ಹಾಗು ಅತಿ ದುಬಾರಿಯಾದೊಂದು ಸ್ಪೋರ್ಟ್ಸ್ ಶೋವನ್ನು ಧರಿಸಿ ಮೋಹನ ಜಾಗಿಂಗ್ ಗೆ ಇಳಿದಿದ್ದ. ವಾಹನಗಳಿಗೆ ಪಾರ್ಕ್ ಮಾಡಲೂ ಸರಿಯಾದ ಸ್ಥಳ ಸಿಗದಿರುವ ಸಿಟಿಯಲ್ಲಿ ಆಟೋಟ, ವ್ಯಾಯಾಮಗಳಿಗೆ ಜಾಗವನ್ನು ಕೊಡುವವರ್ಯಾರು? ವಾಹನಗಳೊಟ್ಟಿಗೆಯೇ ರಸ್ತೆಯ ಪಾದಚಾರಿ ಮಾರ್ಗದ ಮೇಲೆಯೇ ಈತನ ಪ್ರತಿದಿನದ ಓಟ. ಹೃದಯ ಸಿಡಿದು ಹೊರಬರುವವರೆಗೂ ಓಡುವುದ ನಿಲ್ಲಿಸಲಾರೆ ಎಂಬುವಂತಿರುತ್ತದೆ ಈತನ ಓಟದ ಧಾಟಿ. ಸುಮಾರು ಮೂರ್ನಾಲ್ಕು ಕಿಲೋಮೀಟರ್ನಷ್ಟು ಓಡಿದ ನಂತರ ಕಾಫಿ ಶಾಪೊಂದರ ಮುಂದೆ ಕೂತು ಕೊಂಚ ದಣಿವಾರಿಸಿಕೊಳ್ಳುತ್ತಾನೆ. ಅಲ್ಲೂ ತನ್ನ ಮೊಬೈಲನ್ನು ಹೊರಗೆಳೆದು ಆಫೀಸಿನ ಇಮೇಲ್ ಗಳನ್ನು ನೋಡತೊಡಗುತ್ತಾನೆ. ಆಗಷ್ಟೇ ಡವಡವ ಬಡಿದು ಶಾಂತವಾಗಿದ್ದ ಹೃದಯ, ಕ್ಲೈಂಟ್ ಒಬ್ಬನ ಇಮೇಲ್ ಅನ್ನು ಕಂಡು ಪುನಃ ಬಡಿಯಹತ್ತಿತು. ಇನ್ನೊಂದು ಸುತ್ತು ಓಡಲು ಬಾಕಿ ಇದ್ದರೂ ತನ್ನ ರೂಮಿನೆಡೆ ದಾಪುಗಾಲು ಹಾಕುತ್ತಾನೆ ಮೋಹನ. ರೂಮಿಗೆ ಬಂದವನೆ ಬೆವರಿನ ದಸೆಯಿಂದ ಅಂಟು-ಅಂಟಾಗಿದ್ದ ಬಟ್ಟೆಯನ್ನೂ ಲೆಕ್ಕಿಸದೆ ತನ್ನ ಆಫೀಸಿನ ಲ್ಯಾಪ್ಟಾಪ್ ಅನ್ನು ಹೊರಗೆಳೆದು ಕೆಲಸದಲ್ಲಿ ನಿರತನಾಗುತ್ತಾನೆ. ನೆಟ್ಟ ದೃಷ್ಟಿಯನ್ನು ಒಂತಿಷ್ಟೂ ಕದಲಿಸದೆ, ಕೀಲಿಮಣೆಗಳ ಮೇಲೆ ಸುಮಾರು ಎರಡು ಗಂಟೆಗಳ ಕಾಲ ಟಕಟಕ ಕುಟ್ಟಿದ ನಂತರ ಗಡಿಯಾರವನ್ನು ನೋಡುತ್ತಾನೆ, ಸಮಯ ಅದಾಗಲೇ ರಾತ್ರಿ ಹನ್ನೊಂದು! ಕೂಡಲೇ ಎದ್ದು ಪಕ್ಕದ ಹೋಟೆಲಿನಿಂದ ಊಟವೊಂದಕ್ಕೆ ಆರ್ಡರ್ ಕೊಟ್ಟು, ಸ್ನಾನಾದಿಗಳನ್ನು ಮುಗಿಸಿ ಹೊರಬಂದು ಊಟವನ್ನು ಮುಗಿಸುವಷ್ಟರಲ್ಲಿ ಮಧ್ಯರಾತ್ರಿ 12! ಒಂತಿಷ್ಟು ಸುದ್ದಿ ಸಮಾಚಾರಗಳನ್ನು ನೋಡಲು ಟಿವಿಯನ್ನು ಆನ್ ಮಾಡಿದ ಕೂಡಲೇ ಕಣ್ಣುಗಳ ರೆಪ್ಪೆಗಳು ಒಂದನ್ನೊಂದು ತಬ್ಬಿಕೊಳ್ಳತೊಡಗುತ್ತವೆ. ಅದೆಷ್ಟೋ ಬಾರಿ ಹೀಗೆಯೇ ಸೋಫಾದ ಮೇಲೆಯೇ ಬೆಳಗಿನವರೆಗೂ ಕೂತೇ ನಿದ್ರಿಸಿರುವುದುಂಟು! ಬೆಳಗೆದ್ದು ಮತ್ತದೇ ಓಟದ ಜೀವನ. ವಾರ, ವಾರಾಂತ್ಯ ಎಂಬ ಯಾವುದೇ ವ್ಯತ್ಯಾಸಗಳಿಲ್ಲದೆ 24*7 ಕಾಲದ ಕೆಲಸ. ಮೊದ ಮೊದಲು ಕಿರಿಕಿರಿಗುಡುತ್ತಿದ್ದ ಮೋಹನ ಕಾಲ ಕಳೆದಂತೆ ಇದೆ ಜೀವನಕ್ಕೆ ಒಗ್ಗಿಕೊಂಡಿದ್ದಾನೆ. ಅದೆಷ್ಟರ ಮಟ್ಟಿಗೆಂದರೆ ಆಗೊಮ್ಮೆ ಈಗೊಮ್ಮೆ ಸಿಗುವ ರಜೆಯ ಸಮಯವನ್ನೂ ಮನೆಯಲ್ಲಿ ಕಳೆಯಲಾಗದೆ ಆಫೀಸಿಗೆ ಬಂದು ಒಬ್ಬನೇ ಕೆಲಸ ಮಾಡುವುದುಂಟು! ಮತ್ತಷ್ಟು ಓದು »

8
ಜನ

ಹೊಲವನು ಉಳುತಾ ಅಳುವಾ ಯೋಗಿಯ ನೋಡಿಲ್ಲಿ!

– ತುರುವೇಕೆರೆ ಪ್ರಸಾದ್
ಪಂಚವಟಿ
ನಂ.6, 13ನೇ ವಾರ್ಡ್
ಗಾಂಧಿನಗರ
ತುರುವೇಕೆರೆ-572227

5bg1ಇಂದು ಮಾಜಿ ಪ್ರಧಾನಿ ಚೌದುರಿ ಚರಣ್‍ಸಿಂಗ್ ಹೆಸರಲ್ಲಿ ನಾವು ಮತ್ತೊಂದು ರಾಷ್ಟ್ರೀಯ ರೈತ ದಿನವನ್ನು ಆಚರಿಸುತ್ತಿದ್ದೇವೆ. ಆದರೆ ಡಿ.23 ರಾಷ್ಟ್ರೀಯ ರೈತ ದಿನ ಎಂದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ನೆಹರು, ಇಂದಿರಾ, ರಾಜೀವ್ ಜಯಂತಿಯಂತೆ ರೈತ ದಿನಾಚರಣೆ ಬಗ್ಗೆ ಯಾವ ಪಠ್ಯಪುಸ್ತಕದಲ್ಲೂ ಉಲ್ಲೇಖವೂ ಇರಲಿಕ್ಕಿಲ್ಲ. ತಮ್ಮ ಹೆಸರಿನಲ್ಲಿ ಈ ರೀತಿ ಸರ್ಕಾರಗಳು, ಜನಪ್ರತಿನಿಧಿಗಳು ದೊಡ್ಡ ಮನುಷ್ಯರು ರೈತದಿನಾಚರಣೆ ಎಂಬ ನಾಮಕಾವಸ್ಥೆ ಆಚರಣೆ ನಡೆಸುತ್ತಾರೆಂಬುದು ಬಹುಶಃ ಲಕ್ಷಾಂತರ ರೈತರಿಗೇ ಗೊತ್ತಿರಲಿಕ್ಕಿಲ್ಲ. ಟಿಪ್ಪು ಜಯಂತಿಗೆ ಮಾಡಿಕೊಂಡಂತೆ ಸರ್ಕಾರವೇನೂ ವಾರಗಟ್ಟಲೆ ಮುಂಚೆ ರೈತ ದಿನಾಚರಣೆಗೆ ಸಕಲ ಸಿದ್ಧತೆ ಮಾಡಿಕೊಂಡ ವರದಿ, ಸುದ್ದಿ ಯಾವ ಪತ್ರಿಕೆಯಲ್ಲೂ ಬರುವುದಿಲ್ಲ. ಇಂತಹ ಒಂದು ದಿನವನ್ನು ಅರ್ಥಪೂರ್ಣವಾಗಿ ಮಾಡಬೇಕು, ಸಂಭ್ರಮದಿಂದ ಆಚರಿಸಬೇಕು, ಅದೊಂದು ರೈತರ ಹಬ್ಬವಾಗಬೇಕು ಎಂದು ಯಾವ ಬುದ್ದಿಜೀವಿಗಳ ದಂಡೂ ಸರ್ಕಾರವನ್ನು ಒತ್ತಾಯಿಸುವುದಿಲ್ಲ. ಅದರ ರೂಪರೇಷೆಗೆ ಸಂವಾದ, ಗೋಷ್ಠಿ, ಚಿಂತನೆಗಳು ನಡೆಯುವುದೂ ಇಲ್ಲ. ಇದೆಲ್ಲಾ ನಮ್ಮ ಅನ್ನದಾತನನ್ನು ನಾವು ಯಾವ ದುಸ್ಥಿತಿಯಲ್ಲಿ ಇಟ್ಟಿದ್ದೇವೆ ಮತ್ತು ಅವನಿಗೆ ನಾವು ಯಾವ ಗೌರವ ಸಲ್ಲಿಸುತ್ತಿದ್ದೇವೆ ಎಂಬುದರ ದ್ಯೋತಕ. ಮತ್ತಷ್ಟು ಓದು »

4
ಮೇ

ಇರುವುದೆಲ್ಲವ ಬಿಟ್ಟು …

– ಗುರುರಾಜ ಕೊಡ್ಕಣಿ, ಯಲ್ಲಾಪುರ

ಯಶವಂತಪುರದ ಬಸ್‌ನಿಲ್ದಾಣಕ್ಕೆ ವೇಗವಾಗಿ ನುಗ್ಗಿದ ಬಸ್ಸಿನೊಳಗೆ ಅವಸರವಸರವಾಗಿ ತೂರಿಕೊಂಡ ಪ್ರಸನ್ನ. ಹಾಗೆ ಕ್ಷಣಮಾತ್ರದಲ್ಲಿ ತೂರಿಕೊಳ್ಳದಿದ್ದರೇ ಕುಳಿತುಕೊಳ್ಳಲು ಸೀಟು ಸಿಗುವುದಿಲ್ಲವೆನ್ನುವುದು ಬೆಂಗಳೂರಿನಲ್ಲಿನ ಅವನ ಐದು ವರ್ಷಗಳ ಒಡನಾಟದಲ್ಲಿ ಕಂಡುಕೊಂಡ ಸತ್ಯ. ಬಸ್ಸಿನ ಮುಂದಿನ ಬಾಗಿಲಲ್ಲಿ ನಿಂತು ’ಮೆಜೆಸ್ಟಿಕ್, ಮೆಜೆಸ್ಟಿಕ್,ಮೆಜೆಸ್ಟಿಕ್’ ಎಂದು ನಿರ್ವಾಹಕ ಕೂಗುವಷ್ಟರಲ್ಲಿ ಬಸ್ಸು ಸಂಪೂರ್ಣವಾಗಿ ತುಂಬಿ ಹೋಗಿ ಸ್ವತ: ನಿರ್ವಾಹಕನಿಗೆ ಬಸ್ಸಿನೊಳಕ್ಕೆ ಓಡಾಡುವುದು ಕಷ್ಟವಾದಂತಾಯಿತು. ’ಮುಂದಕ್ಕೆ ಹೋಗ್ರಿ , ಇಲ್ಲೇ ಡೋರ್‌ನಲ್ಲಿ ನಿಲ್ಬೇಡಿ’ ಎಂದು ಜನರನ್ನು ಗದರುತ್ತ, ’ಪಾಸಿನೋರು, ಪಾಸು, ಟಿಕೆಟಿನವರು ಕಾಸು ಕೈಯಲ್ಲಿ ಹಿಡ್ಕೊಳ್ಳಿ’ ಎಂದು ಪ್ರಾಸಬದ್ಧವಾಗಿ ಧ್ವನಿಯೇರಿಸಿದ ಕಂಡಕ್ಟರ್ ತುಂಬಿಹೋಗಿದ್ದ ಬಸ್ಸಿನೊಳಕ್ಕೆ ಕಷ್ಟಪಟ್ಟು ನಡೆಯಲಾರಂಭಿಸಿದ. ಮಹಿಳೆಯರ ಸೀಟಿನಲ್ಲಿ ಕುಳಿತಿದ್ದ ಗಂಡಸರನ್ನು ಬಯ್ಯುತ್ತ ಎಬ್ಬಿಸುತ್ತಿದ್ದ ಮಹಿಳೆಯರು, ಸ್ಕೂಲ್ ಬ್ಯಾಗನ್ನು ಬೆನ್ನಿನಿಂದಿಳಿಸಿ ’ಅಂಕಲ್ ಸ್ವಲ್ಪ ಬ್ಯಾಗ್ ಹಿಡ್ಕೊಳ್ಳಿ’ ಎನ್ನುತ್ತ, ಕುಳಿತವರ ಉತ್ತರಕ್ಕೂ ಕಾಯದೇ ಅವರ ತೊಡೆಯ ಮೇಲೆ ತಮ್ಮ ಚೀಲಗಳನ್ನಿಡುತ್ತ ತಮ್ಮ ಹೋಂ ವರ್ಕಿನ ಬಗ್ಗೆ ಜೋರಾದ ಧ್ವನಿಯಲ್ಲಿ ಚರ್ಚಿಸುತ್ತಿದ್ದ ಮಕ್ಕಳು, ’ಇನ್ನೇನು ಹತ್ತು ನಿಮಿಷದಲ್ಲಿ ಮೆಜೆಸ್ಟಿಕ್ಕಿಗೆ ಬಂದುಬಿಡ್ತೇನೆ ಕಣೊ, ಇಲ್ಲಿ ಫುಲ್ ಟ್ರಾಫಿಕ್ ಜಾಮ್’ ಎಂದು ಎಲ್ಲರೆದುರೇ ರಾಜಾರೋಷವಾಗಿ ಫೋನಿನಲ್ಲಿ ಸುಳ್ಳು ಹೇಳುತ್ತಿದ್ದ ಕಾಲೇಜು ಯುವಕರ ಗಲಾಟೆಯ ನಡುವೆಯೇ ಬಸ್ಸು ನಿಧಾನವಾಗಿ ಚಲಿಸಲಾರಂಭಿಸಿತ್ತು. ಬಸ್ಸು ಶುರುವಾಗುತ್ತಲೇ ಸಣ್ಣಗೆ ಬೀಸಿದ್ದ ಗಾಳಿ, ಕಿಟಕಿಯ ಪಕ್ಕಕ್ಕೆ ಕುಳಿತಿದ್ದ ಪ್ರಸನ್ನನಿಗೆ ಕೊಂಚ ನೆಮ್ಮದಿಯನ್ನು ಕೊಟ್ಟಿತ್ತು. ಬೆಳಿಗ್ಗೆ ಆರುಗಂಟೆಗೆಲ್ಲ ಎದ್ದು, ಸ್ನಾನ ಮಾಡಿ, ತಿಂಡಿ ತಿಂದು ಬಸ್ಸು ಹತ್ತುವಷ್ಟರಲ್ಲಿ ಮೈಯೆಲ್ಲ ಬೆವತು ಹೋಗುವುದು ಪ್ರಸನ್ನನಿಗೆ ದಿನನಿತ್ಯದ ರೂಢಿ. ಬಹುಶಃ ಕೆಲಸಕ್ಕಾಗಿ ಸಿಟಿಬಸ್ಸುಗಳನ್ನು ಅವಲಂಬಿಸುವ ಪ್ರತಿಯೊಬ್ಬ ಬೆಂಗಳೂರಿಗನಿಗೂ ಅದು ಅಭ್ಯಾಸವಾಗಿ ಹೋಗಿರುತ್ತದೆ. ಹಾಗಾಗಿ ಬಸ್ಸಿನ ಕಿಟಕಿಯಿಂದ ಹಾದು ಬರುವ ಗಾಳಿ ತಂಪಾಗಿರದಿದ್ದರೂ ಮೈತುಂಬ ಆವರಿಸಿಕೊಂಡ ಬೆವರಿನ ಪರಿಣಾಮವಾಗಿ ಮೈಯೆಲ್ಲ ತಂಪಾದ ಅನುಭವ. ಕ್ಷಣಕಾಲ ಹಾಯೆನಿಸಿ ತಲೆಯನ್ನು ಸಿಟಿಗೊರಗಿಸಿ ಕಣ್ಣು ಮುಚ್ಚಿದ ಪ್ರಸನ್ನ. ಮುಚ್ಚಿದ ಕಣ್ಣುಗಳ ಹಿಂದೆ ಹತ್ತು ಹಲವು ಆಲೋಚನೆಗಳು. ಯಶವಂತಪುರದಿಂದ ಮೆಜೆಸ್ಟಿಕ್ಕಿನ ಬಸ್ ನಿಲ್ದಾಣಕ್ಕೆ ತೆರಳಲು ಕನಿಷ್ಟ ಅರ್ಧ ತಾಸು ಬೇಕು. ವಾಹನದಟ್ಟಣೆ ಜಾಸ್ತಿಯಿದ್ದರಂತೂ ಇನ್ನೂ ಹೆಚ್ಚೇ ಸಮಯ ಬೇಕಾಗಬಹುದು. ಅಲ್ಲಿಳಿದು ಮತ್ತೊಂದು ಬಸ್ಸು ಹಿಡಿದು ಬನ್ನೆರುಘಟ್ಟ ರಸ್ತೆಯಲ್ಲಿರುವ ತನ್ನ ಕಚೇರಿಗೆ ತೆರಳುವಷ್ಟರಲ್ಲಿ ಇನ್ನೊಂದು ಗಂಟೆಯ ಪ್ರಯಾಣ. ಬೆಳಿಗ್ಗೆ ಎರಡು ಗಂಟೆಗಳ ಪ್ರಯಾಣವಾದರೆ ಸಾಯಂಕಾಲದ ವಾಹನದಟ್ಟಣೆಯಿಂದಾಗಿ ಸಂಜೆ ಅದೇ ಮಾರ್ಗದಲ್ಲಿ ಮರಳಿ ಬರಲು ಕನಿಷ್ಟ ಮೂರು ಗಂಟೆಗಳ ಕಾಲಾವಕಾಶವಂತೂ ಬೇಕು. ಕಚೇರಿಯ ಒಂಭತ್ತು ಗಂಟೆಗಳ ಕಾರ್ಯಾವಧಿಯನ್ನು ಸೇರಿಸಿಕೊಂಡರೆ ಪ್ರತಿದಿನ ಹದಿನಾಲ್ಕು ಗಂಟೆಗಳಷ್ಟು ಕಾಲದ ತನ್ನ ಬದುಕು ಬೀದಿಯಲ್ಲಿಯೇ ಮುಗಿದುಹೋಗಿರುತ್ತದೆ ಎಂದುಕೊಂಡ ಪ್ರಸನ್ನ. ಈ ಗಡಿಬಿಡಿಯ ಬದುಕಿಗಾಗಿ ಬೆಂಗಳೂರಿಗೆ ಬರಬೇಕಿತ್ತೇ ತಾನು ಎಂದೆನ್ನಿಸಿತು ಅವನಿಗೆ. ಬೆಳಿಗ್ಗೆ ಏಳು ಗಂಟೆಗೆ ಮನೆ ಬಿಟ್ಟರೇ ಪುನಃ ಮನೆ ಸೇರಿಕೊಳ್ಳುವುದು ರಾತ್ರಿಯ ಒಂಭತ್ತು ಗಂಟೆಗೆ. ಆಫೀಸಿನ ಕೆಲಸದಿಂದ ಸುಸ್ತಾಗಿ ಹೋದ ದೇಹಕ್ಕೆ ರಾತ್ರಿ ಊಟ ಮುಗಿಯುವಷ್ಟರಲ್ಲಿ ನಿದ್ರೆಯ ಸೆಳೆತ. ಬೆಳಗೆದ್ದರೆ ಮತ್ತದೇ ಅಡಾವುಡಿಯ ಓಟ. ಕೊಂಚ ಸಮಾಧಾನ ಸಿಗುವುದು ವಾರಾಂತ್ಯದಲ್ಲಿ ಎನ್ನಿಸಿದರೂ, ಕೋಣೆಯ ಸ್ವಚ್ಛತೆ, ಬಟ್ಟೆ ಒಗೆತದಂತಹ ಕೆಲಸ ಮುಗಿಸುವಷ್ಟರಲ್ಲಿ ವಾರಾಂತ್ಯವೂ ಮುಗಿದುಹೋಗಿರುತ್ತದೆ. ಅದೆಷ್ಟೋ ಸಲ ವಾರಾಂತ್ಯಕ್ಕೂ ರಜೆಯಿಲ್ಲದೇ ಕೆಲಸ ಮಾಡಿದ್ದಿದೆ. ಇಂಥಹ ಅವಸರದ ಜೀವನಕ್ಕೆ ದುಡಿಮೆಯಾದರೂ ಜಾಸ್ತಿಯಿದೆಯಾ ಎಂದುಕೊಂಡರೆ ತನ್ನ ಕೈಗೆ ಸಿಗುವ ಸಂಬಳವೂ ಇಪ್ಪತ್ತೈದು ಸಾವಿರ ಮಾತ್ರ. ದುಬಾರಿ ಮನೆಯ ಬಾಡಿಗೆ, ಕರೆಂಟು, ನೀರಿನ ಬಿಲ್ಲುಗಳ ಪಾವತಿಯ ನಂತರ ಕೈಯಲ್ಲುಳಿಯುವ ದುಡ್ಡಾದರೂ ಎಷ್ಟು ಎಂಬ ಪ್ರಶ್ನೆ ಅವನ ಮನದಲ್ಲಿ ಮೂಡಿ ಅವನಿಗರಿವಿಲ್ಲದಂತೆ ಮುಖದಲ್ಲೊಂದು ಪೆಚ್ಚುನಗೆ ಅರಳಿತ್ತು. ಹಾಳಾದ್ದು ತನ್ನ ಕಚೇರಿಯಲ್ಲಿ ಕಂಪನಿ ಬಸ್ಸಿನ ಸವಲತ್ತು ಸಹ ಇಲ್ಲ. ಹಾಗಾಗಿ ತನ್ನ ಖರ್ಚಿಗೆ ಬಸ್ ಪಾಸಿನ ಎರಡು ಸಾವಿರಗಳ ಹೆಚ್ಚುವರಿ ಹೊರೆ ತಪ್ಪಿದ್ದಲ್ಲ ಎಂದುಕೊಳ್ಳುವಷ್ಟರಲ್ಲಿ ಬಸ್ಸು ಮೆಜೆಸ್ಟಿಕ್ ನಿಲ್ದಾಣವನ್ನು ತಲುಪಿತ್ತು. ನಿಲ್ದಾಣದಲ್ಲಿ ಇಳಿಯುವ ಜನರ ನಡುವೆಯೇ ಹತ್ತಿಕೊಳ್ಳುವ ಆತುರದಲ್ಲಿದ್ದ ಜನರನ್ನು ತಳ್ಳುತ್ತ ಕೆಳಗಿಳಿದ ಪ್ರಸನ್ನ ತನ್ನ ಕಚೇರಿಯತ್ತ ತೆರಳುವ ಬಸ್ಸುಗಳು ನಿಲ್ಲುವ ಪ್ಲಾಟಫಾರ್ಮಿನತ್ತ ನಡೆದ. ಮತ್ತಷ್ಟು ಓದು »

27
ಜೂನ್

ಸಾಲ ಮನ್ನಾ ಮಾಡುವ ಮುನ್ನ…

– ಸುಜೀತ್ ಕುಮಾರ್

ಸಾಲ ಮನ್ನಾ ಅಂದಾಕ್ಷಣ ಹೇಗೆ, ಎಷ್ಟು, ಎಲ್ಲಿ ಎಂಬ ಪ್ರಶ್ನೆಗಳೇ ಹೆಚ್ಚಾಗಿ ನಮ್ಮಲ್ಲಿ ಮೂಡುತ್ತವೆ ಅಲ್ಲವೇ? ರೈತರಾದರೆ ಆಫ್-ಕೋರ್ಸ್ ಯಸ್. ರೈತನ ಕನಸ್ಸು ಮನಸಲ್ಲೂ ಸದ್ಯಕ್ಕೆ ಹರಿದಾಡುತ್ತಿರುವ ಏಕೈಕ ಪದವೆಂದರೆ ಅದು ‘ಸಾಲಮನ್ನಾ’. ಆದರೆ ಈ  ಪ್ರಶ್ನೆಗಳು ಒಂದು ವಿಧದಲ್ಲಿ ಪ್ರಶ್ನೆಗಳೇ ಅನಿಸಿಕೊಳ್ಳುವುದಿಲ್ಲ ಅಂದರೆ!? ಇನ್ ಫ್ಯಾಕ್ಟ್ ಇವು ಒಂತರ ಪಂದ್ಯದ ಮೊದಲೇ ಸೋಲೊಪ್ಪಿಕೊಂಡ ಮನೋಭಾವದ ಸಂಕೇತಗಳು ಎಂದರೂ ತಪ್ಪಾಗುವುದಿಲ್ಲ. ನಾ ಮಾಡಿದ ನಿರ್ಧಾರ ತಪ್ಪೆಂದು ಬೇರೆಯವರ ಮೇಲೆ ಗೂಬೆ ಕೂರಿಸಿ, ಇನ್ಯಾರಿಂದಲೋ ಅದಕ್ಕೊಂದು ಪರಿಹಾರವನ್ನು ಬಯಸುತ್ತ, ಕಾಯುತ್ತ, ಕೊನೆಗೆ  ಹಿಂದಿನಕ್ಕಿಂತಲೂ ಮತ್ತೊಂದು ಬಾಲಿಶ ನಿರ್ಧಾರವನ್ನು ಕೈಗೊಂಡು ಇಡೀ ಸಂಸಾರವನ್ನು ನಡು ನೀರಿನಲ್ಲಿ ಕೈ ಬಿಟ್ಟು, ಯಾರೋ ಮಾಡಿಟ್ಟ ಚಟ್ಟವನ್ನು ಹತ್ತುವುದು ಯಾವ ಸೀಮೆಯ ಪುರುಷಾರ್ಥ?  ರೈತನೆಂದರೆ ಇಷ್ಟೆಯೇ?

ಇಂದು ಬರಡು ಭೂಮಿಯೊಂದನ್ನು ಯಾವುದೇ ಯಂತ್ರಗಳ ಸಹಾಯವಿಲ್ಲದೆ ಅಗೆದು, ಗುದ್ದಿ  ಹಸಿರನ್ನು ಹೊತ್ತಿಸಿ ಸಾವಿರ ಜನರ ಹಸಿವನ್ನು ನೀಗಿಸಬಲ್ಲ ಒಂದಾದರೂ ಪೇಟೆಯ ಕಂಪನಿಗಳನ್ನು ತೋರಿಸಿ ನೋಡುವ.?  ಇವುಗಳು ನೂರು ಕೋಟಿ ಸುರಿದು ಸಾವಿರ ಕೋಟಿ  ಮಾಡುವ  ಮನಿ ಮೈಂಡ್ಸ್ ಗಳೇ ಹೊರತು ಬಿಡಿಗಾಸು ಹಣವಿಲ್ಲದೆ ಬೆವರನ್ನು ಬಸಿದು ಹಸಿವನ್ನು ನೀಗಿಸಬಲ್ಲ ನಮ್ಮ ರೈತನೆಂಬ ನೈಸರ್ಗಿಕ ಕಂಪೆನಿಗಳಂತಲ್ಲ. ಅಂತಹ ಎದೆಗಾರಿಕೆಯ ರೈತನೆಂಬ ಶಕ್ತಿ ಇಂದು ‘ಆತ್ಮಹತ್ಯೆ’ ಹಾಗು ‘ಸಾಲಮನ್ನಾ’ ಎಂಬೆರೆಡೇ ಪದಗಳಿಗೆ ಮೀಸಲಾಗಿರುವುದೇಕೆ? ಆತ್ಮಹತ್ಯೆ ಎಂಬುದು ಜೀವನದ ಅತಿ ಸಹಜ ಸವಾಲಿಗೆ ಹೆದರಿ ಓಟಕೀಳುವಂತಹ ಮನೋಭಾವವಾದರೆ, ಸಾಲಮನ್ನಾ ಎಂಬುದು ಎಲ್ಲವೂ ಇದ್ದರೂ ಇತರರ ಮುಂದೆ ಕೈಯೊಡ್ಡಿದಂತೆ!  ಕುಂಟುತ್ತಿದ್ದ ದೇಶದ ಆರ್ಥಿಕತೆಗೇ ಬೆನ್ನೆಲುಬಾಗಿ ನಿಲ್ಲಬಲ್ಲ ತಾಕತ್ತಿದ್ದ ರೈತನೆಂಬ ಚೇತನ ಇಂದು ಸಾಲವೆಂಬ ಪುಡಿಗಾಸಿಗೆ ನಿಜವಾಗಿಯೂ ಹೆದರಬೇಕೇ? ಒಂದುಪಕ್ಷ ವಿಷಯ ಇಷ್ಟು ಸರಳವಲ್ಲ ಎಂದೇ ಇಟ್ಟುಕೊಳ್ಳೋಣ. ಸರಿ, ಸಾಲ ಎಂಬ ವಿಷಸರ್ಪವನ್ನು ಆತ ಕೆಣಕಿದ್ದಾದರೂ ಏತಕ್ಕೆ? ಗೊಬ್ಬರ ಕೊಳ್ಳಲು? ಜಮೀನಿನಲ್ಲಿ ದುಡಿಯುವ ಕಾರ್ಮಿಕರಿಗಾಗಿ? ನೀರಿಗಾಗಿ ? ಅಥವಾ ತನ್ನ ಸ್ವಂತ ಭೋಗಕ್ಕಾಗಿ? ವಿಷಯವಿರುವುದೇ ಇಲ್ಲಿ. ಕೃಷಿಯ ಯಾವುದೊ ಸಮಸ್ಯೆಯನ್ನು ಹೊತ್ತು ತನ್ನಲ್ಲಿಗೆ ಬರುವ ರೈತನಿಗೆ ಕೃಷಿಸಾಲವೆಂಬ ವಿಷ ಮುಲಾಮನ್ನು ಸವರುವುದೇ ಈ ಸರ್ಕಾರಗಳು. ಅವರ ಸಮಸ್ಯೆಗಳಿಗೊಂದು ಸೂಕ್ತ ಪರಿಹಾರವನ್ನು ಆಲೋಚಿಸುವುದ ಬಿಟ್ಟು ತೋರ್ಪಡಿಕೆಯ ಪ್ರೀತಿಗೆ ದುಡ್ಡಿನ ಅಮಲೇರಿಸಿ ಮಕ್ಕಳು ಹಾಳಾದಾಗ ಮುಂದೇನು ಮಾಡುವುದೆಂದು ಕೈ ಕೈ ಹಿಸುಕಿಕೊಳ್ಳುವ ಪೋಷಕರಂತಾಗಿದೆ ಇಂದಿನ ಸರ್ಕಾರಗಳ ವಸ್ತುಸ್ಥಿತಿ.

ಮತ್ತಷ್ಟು ಓದು »

1
ಜೂನ್

ಒಂದು ಹೊತ್ತು ಉಪವಾಸ ಮಾಡಿ, ಅದರ ಹಣದಲ್ಲಿ ಗೋವುಗಳನ್ನು ಉಳಿಸಿಕೊಳ್ಳುವ ವಿನೂತನ ಅಭಿಯಾನ #GiveUpAMeal ಹಿಂದಿನ ಕತೆ..

ಅಜಿತ್ ಶೆಟ್ಟಿ
ಹೆರಂಜೆ ದೊಡ್ಡಮನೆ.

ಗೋಹತ್ಯೆ ತಡೆಗಾಗಿನ ಕೂಗು ಭಾರತದಲ್ಲಿ ಬಹಳ ಹಿಂದಿನದು, ಇತ್ತೀಚಿನ ಡಿಜಿಟಲ್ ಇಂಡಿಯಾ ಯುಗದಲ್ಲಿ ಅದು ಸೋಷಿಯಲ್ ಮೀಡಿಯದಲ್ಲೂ ಸದ್ದು ಮಾಡುತ್ತಿದೆ.. ನಮ್ಮ ಯುವಕರು ಗೋಹತ್ಯೆ ನಿಲ್ಲಿಸಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬಡಿದುಕೊಳ್ಳುವಾಗ ಸೋಕಾಲ್ಡ್ ಪ್ರಗತಿಪರರು ಸೋಷಿಯಲ್ ಮೀಡಿಯದಲ್ಲಿರುವ ಮಂದಿಗೆ ತಲೆ ಇಲ್ಲ, ಅವರಿಗೆ ಅಷ್ಟು ಪ್ರೀತಿ ಇದ್ದರೆ ಒಂದೆರಡು ಗೋವುಗಳನ್ನು ಸಾಕಲಿ, ಗೋಶಾಲೆ ನಡೆಸಲಿ ಹೀಗೆ ಹಲವಾರು ಪ್ರಶ್ನೆಗಳನ್ನೊಡ್ಡಿ ಬಾಯಿ ಮುಚ್ಚಿಸುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆದರೆ ನಮ್ಮ ಯುವಕರ ಕೂಗು ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಇದೆಯಾ ಅಥವಾ ನಿಜವಾಗಲೂ ಗೋವುಗಳನ್ನು ಉಳಿಸಿಕೊಳ್ಳುವ ಕಾಳಜಿ ಇದೆಯಾ, ಪೂಜ್ಯ ಭಾವನೆ ಇಟ್ಟುಕೊಂಡಿದ್ದಾರ ಎಂದು ನೋಡಿದರೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ನಡೆದ ಒಂದು ಅಭಿಯಾನ ಯುವ ಜನತೆ ಬಗ್ಗೆ ಹೆಮ್ಮೆ ಮೂಡಿಸುತ್ತದೆ ಎಂದು ಭಾವಿಸುತ್ತೇನೆ. ಈ ಅಭಿಯಾನದ ಒಳಗೆ ಹೋಗುವ ಮೊದಲು ಅಭಿಯಾನದ ಪೂರ್ವ ಪ್ರೇರಣೆಯ ಕಡೆ ಒಮ್ಮೆ ಗಮನ ಹರಿಸೋಣ. ನಮ್ಮ ದೇಶದಲ್ಲಿ ಗೋವು ಪ್ರತಿ ರೈತನ ಬೆನ್ನೆಲುಬು, ದೇಶಿ ಗೋವುಗಳು ಅವನತಿ ಹೊಂದಿದರೆ ರಾಸಾಯನಿಕ ಮುಕ್ತ ಕೃಷಿ ಎನ್ನುವುದು ಕನಸಾಗುವುದು ನಿಶ್ಚಿತ. ಇಂತಹ ಸತ್ಯಗಳು ನಮ್ಮ ಸಮಾಜಕ್ಕೆ, ಜನನಾಯಕರಿಗೆ ಗೊತ್ತಿಲ್ಲ ಅಂತೇನು ಇಲ್ಲ.. ಆದರೂ ಓಲೈಕೆ ರಾಜಕಾರಣಕ್ಕಾಗಿ ಗೋಹತ್ಯೆಯನ್ನು ನಿಲ್ಲಿಸಲಾಗುತ್ತಿಲ್ಲ, ನಾವು ಗಾಂಧೀಜಿ ಅನುಯಾಯಿಗಳು ಎಂದವರೇ ದಶಕಗಳ ಕಾಲ ದೇಶವನ್ನು ಆಳಿದರೂ ಗಾಂಧಿ ಕನಸನ್ನು ನನಸು ಮಾಡದೆ ಹೊಣೆಗೇಡಿಗಳಂತೆ ವರ್ತಿಸಿದ್ದಾರೆ. ಇವೆಲ್ಲವುಗಳ ನಡುವೆ ಬರಗಾಲದಿಂದ ಸಾಯುತ್ತಿರುವ ಜಾನುವಾರುಗಳನ್ನು ಉಳಿಸಿ ರೈತನ ಬಾಳನ್ನು ಬಲಗೊಳಿಸುವ ಪ್ರಾಮಾಣಿಕ ಕಾರ್ಯವನ್ನಾದರೂ ಮಾಡುತ್ತಾರೆ ಎಂದುಕೊಂಡರೆ ಅದನ್ನು ಮಾಡದೇ ಅದರಲ್ಲೂ ಭ್ರಷ್ಟಾಚಾರ ಮಾಡಿಕೊಂಡು ಮಜ ಮಾಡುತ್ತಿದ್ದಾರೆ.. ಇಂತಹ ಸಂಧಿಘ್ನ ಪರಿಸ್ಥಿತಿಯಲ್ಲಿ ಮಠಗಳು, ಸಂಘ ಸಂಸ್ಥೆಗಳು ರೈತರ ಬೆನ್ನಿಗೆ ನಿಂತು ಗೋಶಾಲೆಗಳನ್ನು ತೆರೆದು ಗೋವುಗಳನ್ನು ಉಳಿಸಿಕೊಳ್ಳುವ ಸಾಹಸಕ್ಕೆ ಕೈ ಹಾಕಿದ್ದಾರೆ. ಇದರ ಒಂದು ಭಾಗವಾಗಿ ರಾಮಚಂದ್ರ ಪುರ ಮಠವು ಸಹ ೧೪ ಜಿಲ್ಲೆಗಳಲ್ಲಿ ಗೋಶಾಲೆಗಳನ್ನು ತೆರೆದು ಗೋವುಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಮತ್ತಷ್ಟು ಓದು »

17
ಮೇ

ಬರಗಾಲದಲ್ಲಿ ವರವಾದ ಶ್ರೀಸಂಕಲ್ಪ

– ಶಿಶಿರ್ ಅಂಗಡಿ

ಈ ಬಾರಿಯ ಭೀಕರ ಬರಗಾಲ ಮತ್ತು ಸರಕಾರದ ಅನರ್ಥದ ಕಾನೂನುಗಳು ಬೆಟ್ಟದ ತಪ್ಪಲಿನ ಸಾವಿರಾರು ಗೋವುಗಳನ್ನು ಹಾಗೂ ನೂರಾರು ಗೋಪಾಲಕರನ್ನು ಹಸಿವಿನಿಂದ ನರಳುವಂತೆ ಮಾಡಿ ಅಕ್ಷರಶಃ ಕಂಗೆಡಿಸಿದೆ.. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಅಲ್ಲಿನ ಗೋವುಗಳಿಗೆ ಮೇವೊದಗಿಸುವ ಮೂಲಕ ಆಪದ್ಬಾಂಧವರಂತೆ ಗೋವು‌ ಮತ್ತು ಗೋವಳರ ಕಷ್ಟಕ್ಕೊದಗಿ ಬಂದವರು  ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರು. ಈ 44 ದಿನಗಳಿಂದೀಚೆಗೆ ಸತತವಾಗಿ ಬೆಟ್ಟಕ್ಕೆ ಮಠ ಪೂರೈಸಿದ ಮೇವಿನ ಒಟ್ಟು ಮೊತ್ತ ೨೧೦೦ ಟನ್ ದಾಟಿದೆ. ೨ ಲಕ್ಷ ಕೇಜಿ ಮೇವುಗಳನ್ನು ದಿನವೊಂದಕ್ಕೆ ೨.೫ ಲಕ್ಷ ರೂಪಾಯಿ ವೆಚ್ಚದಲ್ಲಿ ಹದಿಮೂರು ಕೇಂದ್ರಗಳಲ್ಲಿ ಪ್ರತಿದಿನ ಸುಮಾರು ೨೦-೨೫ ಸಾವಿರ ಗೋವುಗಳಿಗೆ ಮೇವು ಒದಗಿಸಲಾಗುತ್ತಿದೆ. ದಶಕಗಳಿಂದ ಗೋರಕ್ಷಣೆಗೆ ಕಟಿಬದ್ಧರಾಗಿರುವ ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರು, ಸಾವಿನ ಅಂಚಿನಲ್ಲಿರುವ ಗೋವುಗಳನ್ನು ರಕ್ಷಿಸುವ ಮಹದುದ್ದೇಶದಿಂದ ಬೆಟ್ಟದ ತಪ್ಪಲಿನ ಎಲ್ಲ ಗೋವುಗಳಿಗೂ ಮಳೆಗಾಲ ಪ್ರಾರಂಭದವರೆಗೂ ಮೇವು ಒದಗಿಸುವ ಭರವಸೆ ನೀಡಿದ್ದರು. ಮತ್ತಷ್ಟು ಓದು »

16
ಮೇ

ಕೇಳುತ್ತಿದೆಯಾ ಗೋವಿನ ಆಕ್ರಂದನ…

– ಶಾರದ ಡೈಮಂಡ್

ಜನನದಿಂದ ಮರಣ ಪರ್ಯಂತ ಹುಲು ಮಾನವರಿಗೆ ಅಮೃತ ಸಮಾನವಾದ ಹಾಲನ್ನುಣಿಸುವವಳು ಗೋಮಾತೆ. “ಗವಾಂ ಅಂಗೇಷು ತಿಷ್ಟಂತಿ ಭುವನಾನಿ ಚತುರ್ದಶ” – ಗೋವಿನ ದೇಹದ ಕಣಕಣಗಳಲ್ಲೂ ಹದಿನಾಲ್ಕು ಲೋಕಗಳನ್ನು ವ್ಯವಸ್ಥಿತವಾಗಿ ನಡೆಸತಕ್ಕ ಮೂವತ್ಮೂರು ಕೋಟಿ ದೇವತೆಗಳು ಅನ್ಯಾನ್ಯ ಸ್ಥಳಗಳಲ್ಲಿ ನೆಲೆಸಿರುತ್ತಾರೆ. ಗೋವಿನಿಂದ ದೊರಕುವ ಹಾಲು, ಮೊಸರು, ಬೆಣ್ಣೆ, ತುಪ್ಪ ಮನುಷ್ಯ ಸ್ವಾಸ್ಥಮಯ ಜೀವನವನ್ನು ನಡೆಸಲು ಆಧಾರವಾಗಿದೆ. ಗೋಮೂತ್ರ, ಗೋಮಯ ಕೃಷಿಗೆ ಜೀವಾಳ. ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಕಾಮಧೇನುವಾಗಿ ನಮ್ಮನ್ನು ಸಲಹುತ್ತಿರುವ ಗೋವಿಗೆ ಭಾರತದಲ್ಲಿ ವಿಶೇಷವಾದ ಸ್ಥಾನವಿದೆ. ಮತ್ತಷ್ಟು ಓದು »

29
ನವೆಂ

ಸಾಲದ ಮನೆಯೊಡೆಯ ಅಪ್ಪ..!

– ಸೋಮು ಕುದರಿಹಾಳ

indian-farmer-copyಬಡತನ ಉಂಡುಳಿದ ಬದುಕು
ವಂಶವಾಹಿನಿಯ ಕೊಂಡಿ
ಸಾಲದೆಂಬುದಕ್ಕೆ ಸಾಲದ ನಂಟು
ಗುಡಿಸಲಿನಲ್ಲಿ ಆರದ ಬೆಂಕಿ

ಬರೆದ ಗೆರೆಗಳೆಲ್ಲಾ ಸಾಲದ ಲೆಕ್ಕಕ್ಕೆ
ಸಮನಾಗಿ ಬಡ್ಡಿಗೆ ಹೆಚ್ಚುತ್ತಿದ್ದದ್ದು
ಬಿದಿರ ತಡಿಕೆಗೆ ಮೆತ್ತಿದ ಮಣ್ಣನ್ನು
ಬಲಪಡಿಸುತ್ತಿತ್ತು
ಕಣ್ಣೀರ ಕರಗಿಸಿಕೊಳತ್ತಿತ್ತು

ವಸೂಲಿಯ ಶೂಲಕೊಮ್ಮೆ ಅಪ್ಪ
ಕೆಮ್ಮುತ್ತಿದ್ದ ಉಸಿರಿನೊಡನೆ ಸ್ಪರ್ಧೆ
ಮತ್ತೆ ಬದುಕುತ್ತಿದ್ದ ಭೂಮಿ ತಾಯಿಗೆ
ತಲೆಯಿಟ್ಟು ಬೆವರಿನ ದಕ್ಷಿಣೆ ಕೊಟ್ಟು ಮತ್ತಷ್ಟು ಓದು »

10
ಜುಲೈ

ಕಬ್ಬು ಸಕ್ಕರೆಗಷ್ಟೇ ಸೀಮಿತವೆ?

– ರಾಘವೇಂದ್ರ ಅಡಿಗ

ಕಬ್ಬು ಬೆಳೆಗಾರರುರಾಜ್ಯದಲ್ಲಿ ಇದೇ ಇಪ್ಪತ್ತು ದಿನಗಳಲ್ಲಿ ಸುಮಾರು ಇಪ್ಪತ್ತೈದು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಬಹುಪಾಲು ಮಂದಿ ಕಬ್ಬು ಬೆಳೆಗಾರರೇ ಆಗಿದ್ದು ಸಾಲ ಮಾಡಿ ಬೆಳೆದ ಕಬ್ಬನ್ನು ಸಕ್ಕರೆ ಕಾರ್ಖಾನೆಗೆಳಿಗೆ ನೀಡಿದ ಬಳಿಕ ಕಾರ್ಖಾನೆ ಮಾಲೀಕರಿಂದ ಬರಬೇಕಾದ ಹಣ ಬರದೆ ಸಾಲದ ಬಡ್ಡಿಯನ್ನೂ ಕಟ್ಟಲಾಗದೆ ಆತ್ಮಹತ್ಯೆಯ ಮೊರೆ ಹೋಗುತ್ತಿದ್ದಾರೆ. ರೈತರ ಈ ಸರಣಿ ಆತ್ಮಹತ್ಯೆಗೆ ಸರ್ಕಾರ ಹಾಗೂ ಕಾರ್ಖಾನೆ ಮಾಲೀಕರೇ ನೇರ ಹೊಣೆ ಎಂದು ವಿರೋಧ ಪಕ್ಷಗಳ ನಾಯಕರೂ ಸೇರಿದಂತೆ ಎಲ್ಲರೂ ಗುಲ್ಲೆಬ್ಬಿಸುತ್ತಿದ್ದಾರೆ. ಇದು ತಕ್ಕಮಟ್ಟಿಗೆ ನಿಜವೂ ಆಗಿರಬಹುದು. ಆದರೆ ಇಂದಿನ ಕೃಷಿ ಪದ್ದತಿ, ರೈತರ ಮನಸ್ಥಿತಿಯೂ ಸಹ ಈ ದುರ್ದೆಸೆಗೆ ಕಾರಣೆವೆಂದರೆ ಅದು ತಪ್ಪಲ್ಲ.

ಸಕ್ಕರೆಗೆ ಸೀಮಿತವಲ್ಲ!
ಮೊದಲನೆಯದಾಗಿ ನಮ್ಮ ರೈತರ ಮನಸ್ಥಿತಿ ಬದಲಾಗಬೇಕು. ಕಾರ್ಖಾನೆಗಳು, ಸರ್ಕಾರಗಳನ್ನೇ ಅವಲಂಬಿಸಿಕೊಳ್ಳುವುದರಿಂದ ಹೊರಬಂದು ತಾವೇ ಸ್ವತಂತ್ರವಾಗಿ ಯೋಚಿಸುವುದನ್ನು ಕಲಿಯಬೇಕಿದೆ. ಇಂದು ತಂತ್ರಜ್ಜಾನ ಅದೆಷ್ಟು ಮುಂದುವರಿದಿದೆ, ಮಾನವನು ತಾನದೆಷ್ಟರ ಮಟ್ಟಿಗೆ ಅದರ ಅನುಕೂಲಗಳನ್ನು ಬಳಸಿಕೊಳ್ಳುತ್ತಿದ್ದಾನೆ ಎನ್ನುವುದನ್ನು ನಾವ್ಯಾರೂ ಇನ್ನೊಬ್ಬರಿಗೆ ಹೇಳಿಕೊಡಬೇಕಾಗಿಲ್ಲ. ಕೃಷಿ ಕ್ಷೇತ್ರದಲ್ಲಿಯೂ ಸಹ ಹಿಂದಿನ ಕಾಲಕ್ಕಿಂತ ಸಾಕಷ್ಟು ಬದಲಾವಣೆಗಾಳಾಗಿವೆ. ಕ್ರಾಂತಿಕಾರಿ ರೀತಿಯಲ್ಲಾಗಿರುವ ತಾಂತ್ರಿಕ ಪ್ರಗತಿಯನ್ನೂ ನಮ್ಮವರೇ ಕೆಲವು ಕೃಷಿಕರು ಅದರ ಲಾಭವನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತಿರುವುದನ್ನೂ ನಾವು ನೋಡುತ್ತಿದ್ದೇವೆ. ಆದರೆ ಇಂತಹಾ ಸನ್ನಿವೇಶದಲ್ಲಿಯೂ ಕಬ್ಬು ಬೆಳೆಗಾರರು ಬೆಳೆದ ಕಬ್ಬನ್ನೇ ನೆಲಸಮ ಮಾಡುವುದು, ಸುಡುವುದು ಅಲ್ಲದೆ ತಾನೂ ಕೂಡ ಆತ್ಮಹತ್ಯೆಯಂತಹಾ ಕೃತ್ಯಕ್ಕೆ ಮುಂದಾಗುತ್ತಿರುವುದು ನೋಡಿದರೆ ನಮ್ಮ ಕೃಷಿಕರಿಗೆ ಈ  ತಂತ್ರಜ್ಞಾನ ಬೆಳವಣಿಗೆಯ ಕುರಿತ ಸಾಮಾನ್ಯ ಜ್ಞಾನವೂ ಇಲ್ಲವೆ ಎನ್ನುವ ಪ್ರಶ್ನೆ ಎದುರಾಗುತ್ತದೆ.

ಮತ್ತಷ್ಟು ಓದು »

27
ಏಪ್ರಿಲ್

ರೈತರ ಆತ್ಮಹತ್ಯೆ, ಹೀಗೊಂದು ಚಿಂತನೆ

– ಭರತ್ ಎನ್ ಶಾಸ್ತ್ರಿ

ರೈತಆತ್ಮಹತ್ಯೆಗಳು ಘೋರನಿರ್ಧಾರಗಳು ಎನ್ನುವುದರಲ್ಲಿ ಸಂಶಯವಿಲ್ಲ. ಯಾವುದೇ ಸಾವು ತರುವ ಶೂನ್ಯತೆ, ಮತ್ತು ಬಂಧುಮಿತ್ರರಿಗೆ ಅಥವಾ ಪ್ರೀತಿಪಾತ್ರರಿಗೆ ತರುವ ಯಾತನೆ ಅನುಭವಿಸಿದವರಿಗೇ ಗೊತ್ತು. ಅದರಲ್ಲೂ ಆತ್ಮಹತ್ಯೆ ತರುವ ಸಂಕಟ ಮಾತ್ರ ಹಲವು ಆಯಾಮಗಳದ್ದು.

ಆದರೆ, ಭಾರತದಲ್ಲಿ ರೈತರ ಆತ್ಮಹತ್ಯೆಗಳು ವಿಚಿತ್ರಕಾರಣಗಳಿಂದ ಮಾಧ್ಯಮಗಳ ದೊಡ್ಡಗಂಟಲಿನಿಂದ ಜನರ ಗಮನ ಸೆಳೆಯುತ್ತವೆ. ರೈತರ ಆತ್ಮಹತ್ಯೆಗಳಿಗೆ ಕಾರಣ ಹುಡುಕಲು ನಡೆಸಿದ ವೈಜ್ಞಾನಿಕ ಮತ್ತು ಭಾವೋದ್ವೇಗರಹಿತ ಅಧ್ಯಯನಗಳು ಒಂದೋ ಅವಗಣಿಸಲ್ಪಟ್ಟಿವೆ, ಅಥವಾ ರಾಜಕೀಯ ಕಾರಣಗಳಿಂದ ಆಳುವವರ ಮತ್ತು ಮಾಧ್ಯಮಗಳ ಕೆಂಗಣ್ಣಿಗೆ ಗುರಿಯಾಗಿವೆ.

ಹೆಚ್ಚುತ್ತಿರುವ ಜನಸಂಖ್ಯೆ, ದುಡಿಯುವ ಯುವಜನತೆಯ ಕೈಗೆ ಉದ್ಯೋಗಗಳ ಅಭಾವ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಿಂದ ಕುಸಿಯುತ್ತಿರುವ ಮಹಾನಗರ/ ನಗರಗಳು ಇವೆಲ್ಲ ಸಮಸ್ಯೆಯ ಜತೆ ಸಕ್ಷಮವಲ್ಲದ ಕೃಷಿಕ್ಷೇತ್ರ ಕೂಡ ಭಾರತದ ಹಿಂದುಳಿಕೆಯ ಕಾರಣವಾಗಿದೆ.

ಆತ್ಮಹತ್ಯೆಗಳ ಬಗ್ಗೆ ಭಾರತದ ಒಟ್ಟೂ ಪರಿಸ್ಥಿತಿಯನ್ನು ಅವಲೋಕಿಸುವುದಾದರೆ, ಮೂರುದಶಕಗಳ ಹಿಂದೆ ಸುಮಾರು ೪೦,೦೦೦(ಒಂದು ವರ್ಷಕ್ಕೆ) ದಷ್ಟಿದ್ದ ಆತ್ಮಹತ್ಯೆಗಳ ಸಂಖ್ಯೆ ೨೦೦೯ ಕ್ಕೆ ೧೨೭,೧೫೧ ಕ್ಕೆ ಏರಿತು. ಅದೇ ೨೦೧೩ ರಲ್ಲಿ ಒಟ್ಟು ಆತ್ಮಹತ್ಯೆಗಳ ಸಂಖ್ಯೆ ೧,೩೪,೭೯೯! ಈ ಐದು ವರ್ಷಗಳಲ್ಲಿ ಕರ್ನಾಟಕದ ಕೊಡುಗೆ ಹತ್ತಿರ ಹತ್ತಿರ ೮.೪%. ಕರ್ನಾಟಕದಲ್ಲಿ ೨೦೦೯ ರ ವರ್ಷದಲ್ಲಿ ಸಂಭವಿಸಿದ ಆತ್ಮಹತ್ಯೆಗಳು ಸುಮಾರು ೧೦,೬೮೦. ಇದರಲ್ಲಿ ರೈತರ ಸಂಖ್ಯೆ ೩೩೭, ಎಂದರೆ ೩.೧೫%. ಇದರ ಅರ್ಥ ಪ್ರತಿ ೩೦ ಆತ್ಮಹತ್ಯೆಗಳಲ್ಲಿ ಒಬ್ಬ ರೈತನ ಜೀವನಷ್ಟವಾಗಿದೆ. ಇನ್ನುಳಿದವರ ವೃತ್ತಿ ಏನಿತ್ತು? ಸೋಜಿಗವೆಂದರೆ ರೈತರ ಆತ್ಮಹತ್ಯೆಯ ಬಗ್ಗೆ ಅಂತರ್ಜಾಲದಲ್ಲಿ ಸುಲಭವಾಗಿ ಸಿಕ್ಕುವ ಮಾಹಿತಿ ಮಿಕ್ಕ ವೃತ್ತಿಯಲ್ಲಿರುವವರ ಬಗ್ಗೆ ಸಿಗುವುದಿಲ್ಲ. ಬೆಂಗಳೂರನ್ನೇ ಉದಾಹರಣೆಗೆ ತೆಗೆದುಕೊಳ್ಳುವುದಾದರೆ, ಸಾಫ್ಟ್ ವೇರ್ ಉದ್ಯಮದಲ್ಲಿ ಮಿತಿಮೀರಿದ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ಎಷ್ಟು ಎಂದು ನೀವು ಹುಡುಕಾಡಿದರೆ ಅಂಕಿ-ಅಂಶಗಳನ್ನು ಪಡೆಯಲು ಕಷ್ಟ ಪಡಬೇಕಾಗುತ್ತದೆ!

ಮತ್ತಷ್ಟು ಓದು »