ಕರ್ನಾಟಕದಲ್ಲಿ ಅಶಾಂತಿಯ ಗಾಳಿ ಬೀಸಬೇಕೆಂದು ಕಾಂಗ್ರೆಸ್ಸ್ ನಿರ್ಧರಿಸಿದೆಯೇ?
– ರಾಕೇಶ್ ಶೆಟ್ಟಿ
ಪ್ರಶಾಂತವಾಗಿರುವ ಕರ್ನಾಟಕದಲ್ಲಿ ಅಶಾಂತಿಯ ಗಾಳಿ ಬೀಸಬೇಕೆಂದು ಕಾಂಗ್ರೆಸ್ಸ್ ನಿರ್ಧರಿಸಿದೆಯೇ? ಬಹುಶಃ ಹೌದು ಅನ್ನಿಸುತ್ತಿದೆ. ಶ್ರೀರಂಗ ಪಟ್ಟಣದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 50 ಪ್ರತಿಶತ ಮೀಸಲು ನೀಡುವಂತ ವಿವಿಯೊಂದನ್ನು ಸ್ಥಾಪಿಸುವ ಯೋಜನೆ ಕೇಂದ್ರ ಸರ್ಕಾರದ ಮುಂದಿದೆ ಮತ್ತು ಆ ವಿವಿಗೆ ‘ಟಿಪ್ಪು ವಿಶ್ವವಿದ್ಯಾಲಯ’ ಅಂತ ನಾಮಕರಣ ಮಾಡುತ್ತೇವೆ ಅನ್ನುವ ಹೇಳಿಕೆಯನ್ನು ಕೇಂದ್ರ ಸಚಿವರು ಕೊಟ್ಟ ದಿನದಿಂದಲೇ,’ಟಿಪ್ಪು’ ಬಗ್ಗೆ ಚರ್ಚೆ ಶುರುವಾಗಿದೆ.ಚಿದಾನಂದ ಮೂರ್ತಿ,ಎಸ್.ಎಲ್ ಭೈರಪ್ಪ ಮತ್ತು ಇತರರು, ಟಿಪ್ಪು ಕಾಲದಲ್ಲಿ ನಡೆದ ಮತಾಂತರ,ಪರ್ಷಿಯಾ ಭಾಷೆಯ ಹೇರಿಕೆ ಮತ್ತು ಮಲಬಾರಿನ ಸೇನಾಧಿಪತಿಗಳಿಗೆ ಮತ್ತು ಇತರರಿಗೆ ಟಿಪ್ಪು ಬರೆದ ಪತ್ರವನ್ನು ಮುಂದಿಟ್ಟು ‘ಟಿಪ್ಪು ಹೆಸರಿನ ವಿವಿ’ಯನ್ನು ವಿರೋಧಿಸುತಿದ್ದರೆ, ಇನ್ನೊಂದು ಕಡೆ ಟಿಪ್ಪು ಪರ ನಿಂತವರು, ಟಿಪ್ಪು ಒಬ್ಬ ದೇಶ ಭಕ್ತ, ಮಕ್ಕಳನ್ನು ದೇಶಕ್ಕಾಗಿ ಅಡ ಇಟ್ಟವನು ಅನ್ನುತಿದ್ದಾರೆ. ಟಿಪ್ಪು ಕುರಿತ ಈ ಚರ್ಚೆ ನಡೆಯುತ್ತಿರುವುದೂ ಇದೇ ಮೊದಲೇನಲ್ಲ.ಟಿಪ್ಪು ಕಾಲದ ಇತಿಹಾಸದ ಬಗ್ಗೆ ಅನೇಕ ಸಾಕ್ಷಿಗಳು ಸಿಗುವುದರಿಂದ ಟಿಪ್ಪು ಏನು ಅಂತ ನಿರ್ಧರಿಸುವುದು ಬೇರೆಯದೇ ವಿಷಯ.ಹಾಗಾಗಿ ಈ ಲೇಖನದಲ್ಲಿ ಟಿಪ್ಪು ಬಗ್ಗೆ ಗಮನ ಹರಿಸುವುದಕ್ಕಿಂತ,’ಅಲ್ಪಸಂಖ್ಯಾತರಿಗೆ ಪ್ರತ್ಯೇಕ ವಿವಿ (ಅಥವಾ 50% ಮೀಸಲು ನೀಡುವ ವಿವಿ) ಅಗತ್ಯವಿದೆಯೇ?’ ಅನ್ನುವ ಪ್ರಶ್ನೆಯನ್ನು ಕೇಂದ್ರ ಸರ್ಕಾರಕ್ಕೆ ಮತ್ತು ಟಿಪ್ಪು ವಿವಿ ಬೆಂಬಲಿಸುತ್ತಿರುವವರಿಗೆ ಕೇಳ ಬಯಸುತ್ತೇನೆ?
ರಾಜ್ಯದಲ್ಲಿ ಈಗಾಗಲೇ ಇರುವ 20ಕ್ಕೂ ಹೆಚ್ಚು ರಾಜ್ಯದ ವಿವಿ ಮತ್ತು ಡೀಮ್ದ್ ವಿವಿಗಳಲ್ಲಿ ಇಲ್ಲದಿರುವ ಹೊಸತನವೇನಾದರೂ, ಶ್ರೀರಂಗ ಪಟ್ಟಣದಲ್ಲಿ ನಿರ್ಮಿಸ ಬಯಸಿರುವ ವಿವಿಯಲ್ಲಿ ಇರಲಿದೆಯೇ? ಮೈಸೂರಿನಲ್ಲೇ 2 ವಿವಿ ಇರುವಾಗ ಶ್ರೀರಂಗಪಟ್ಟಣದಲ್ಲಿ ಇನ್ನೊಂದ್ಯಾಕೆ ಅನ್ನುವುದು ಒಂದು ಪ್ರಶ್ನೆಯಾದರೆ, ಜ್ಞಾನರ್ಜನೆಗಾಗಿಯೇ ವಿವಿಯನ್ನು ಸ್ಥಾಪಿಸುವ ಉದ್ದೇಶವಿದ್ದರೆ,ಅದರಲ್ಲಿ ಅಲ್ಪಸಂಖ್ಯಾತರಿಗೆ 50 ಪ್ರತಿಶತ ಮೀಸಲು ಯಾತಕ್ಕಾಗಿ? ಜ್ಞಾನಕ್ಯಾವ ಧರ್ಮ? ವಿದ್ಯೆ ಕಲಿಯಲು ಬರುವವರು ಪದವಿಯ ವಿಷಯಗಳ ಮೇಲೆ ನಿರ್ಧರಿಸಿ ಒಂದು ವಿವಿಗೆ ಹೋಗುತ್ತಾರೋ? ಅಥವಾ ಅವರ ಧರ್ಮಕ್ಕೆ ಅನುಗುಣವಾಗಿ ವಿವಿಗಳನ್ನು ಆಯ್ಕೆ ಮಾಡಿಕೊಳ್ಳುತಾರೆಯೋ?





