ಕಾಸರಗೋಡಿನ ಕನ್ನಡಿಗರ ತ್ಯಾಗ ಮತ್ತು ಬಲಿದಾನಗಳನ್ನು ಕರ್ನಾಟಕ ಮರೆತಿದೆಯೇ..!?
– ಕುಮಾರ ರೈತ
“ಕಾಸರಗೋಡು, ಕರ್ನಾಟಕದ ಕನ್ಯಾಕುಮಾರಿ. ಉತ್ತರದಲ್ಲಿ ಬೆಳಗಾವಿ, ಬಳ್ಳಾರಿಗಳಂತೆ ದಕ್ಷಿಣ ಕನ್ನಡದಲ್ಲಿ ನಮ್ಮದು ಕರ್ನಾಟಕದ ಕನ್ಯಾಕುಮಾರಿ. ಕನ್ನಡನಾಡಿನ ಈ ತೆಂಕಣ ಬಾಗಿಲನ್ನು ತೆರೆದಿಟ್ಟು ಕನ್ನಡಿಗರು ಎಚ್ಚರತಪ್ಪಿ ನಿದ್ರೆ ಹೋದುದ್ದೇ ಆದರೆ ನಮ್ಮ ಜನರಿಗೂ, ನಮ್ಮ ನಾಡಿಗೂ ಅಮೂಲ್ಯವಾದ ಕನ್ನಡ ಸಂಸ್ಕೃತಿಗೂ ಪ್ರಮಾದ ಒದಗುವುದರಲ್ಲಿ ಸಂಶಯವಿಲ್ಲ. ವಿಶಾಲ ಕೇರಳ ಚಳವಳಿಯು ಆರಂಭವಾಗಿ ಹತ್ತು ವರ್ಷಗಳು ಸಂದುಹೋದವು. ದಕ್ಷಿಣ ಕನ್ನಡ, ಕೊಡಗು, ನೀಲಗಿರಿ ಜಿಲ್ಲೆಗಳು ಮಲಬಾರಿನೊಂದಿಗೆ ಜತೆಗೊಂಡು ಕೇರಳ ಸಂಸ್ಥಾನ ಅಥವಾ ಪಶ್ಚಿಮ ಪ್ರಾಂತ ಸಂಸ್ಥಾನವೊಂದು ನಿರ್ಮಾಣವಾಗಬೇಕೆಂದು ಈ ಚಳವಳಿಯು ಪ್ರಬಲವಾಗುತ್ತಾ ನಡೆದಿದೆ. ಈ ಚಳವಳಿಯ ಮರ್ಮವನ್ನು ತಿಳಿದುಕೊಂಡು ಕನ್ನಡಿಗರು ಅದನ್ನು ಸಕಾಲದಲ್ಲಿಯೇ ಪ್ರತಿಭಟಿಸದೇ ಹೋದರೆ ಸ್ವಲ್ಪಕಾಲದೊಳಗಾಗಿಯೇ ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡಾದರೂ ಮಲಬಾರಿನವರ ಮಡಿಲಿಗೆ ಬೀಳಬೇಕಾಗಬಹುದು”
ಭಾಷಾವಾರು ಪ್ರಾಂತ್ಯ ರಚನೆಯಾಗುವುದಕ್ಕೂ ಒಂಭತ್ತು ವರ್ಷಗಳಿಗೂ ಮೊದಲೇ ಶ್ರೀಧರ ಕಕ್ಕಿಲಾಯರು ಹೇಳಿದ್ದ ಖಚಿತ ಅಭಿಪ್ರಾಯವಿದು. ಇವರು ಕಾಸರಗೋಡಿನ ಸುಪ್ರಸಿದ್ಧ ವಕೀಲರಾಗಿದ್ದರು. ಕಾಸರಗೋಡನ್ನು ಕರ್ನಾಟಕಕ್ಕೆ ಸೇರ್ಪಡೆಗೊಳಿಸಲು ಸತತ ೨೫ ವರ್ಷ ಹೋರಾಟ ಮಾಡಿದರು. ಅವರ ಜೀವಿತಾವಧಿಯವರೆಗೂ ಈ ಹೋರಾಟದಲ್ಲಿ ಸಕ್ರಿಯರಾಗಿದ್ದರು. ೧೯೪೭ರ ಡಿಸೆಂಬರ್ನಲ್ಲಿ ಕಾಸರಗೋಡಿನ ಬೋರ್ಡ್ ಹೈಸ್ಲೂಲ್ ಆವರಣದಲ್ಲಿ ೩೧ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆತು. ಈ ಸಂದರ್ಭದಲ್ಲಿ ಹೊರಬಂದ ಸ್ಮರಣ ಸಂಚಿಕೆ ‘ತೆಂಕುನಾಡು’ ಸ್ಮರಣ ಸಂಚಿಕೆಯಲ್ಲಿ ಶ್ರೀಧರ ಕಕ್ಕಿಲಾಯರ ಈ ಲೇಖನ ಪ್ರಕಟವಾಯಿತು. ಅದರ ಶೀರ್ಷಿಕೆ ‘ಕನ್ನಡ-ಮಲೆಯಾಳ ಸಮಸ್ಯೆ’
ಇದನ್ನೆಲ್ಲ ಪ್ರಸ್ತಾಪಿಸಲು ಕಾರಣವಿದೆ. ಕಾಸರಗೋಡಿಗೆ ಹೋದಾಗಲೆಲ್ಲ ನಾನು ಭೇಟಿ ಕೊಡುವ ಖಾಯಂ ಸ್ಥಳಗಳ ಸಾಲಿನಲಿಬೇಕಲ್ ಕೋಟೆ ಸೇರಿದೆ. ಇಲ್ಲಿ ಪ್ರಾಣದೇವರ ಗುಡಿಯಿದೆ. ಹೊರಭಾಗದಲ್ಲಿ ಗುಡಿ ಹೆಸರನ್ನು ಕನ್ನಡದಲ್ಲಿ ಬರೆಯಲಾಗಿದೆ. ಬೇಕಲ್ ಕೋಟೆ ನಿರ್ಮಾಣ ಮಾಡಿದ್ದು ಕನ್ನಡಿಗ ರಾಮನಾಯಕ. (ಟಿಪ್ಪು ಸುಲ್ತಾನ್ ಸೈನ್ಯದ ದಂಡನಾಯಕ ( ಮೂಲತಃ ಬೇಕಲ್ ಕೋಟೆ ಕನ್ನಡ ಪ್ರದೇಶ. ಇದಕ್ಕೆ ಅನೇಕ ಕುರುಹುಗಳಿವೆ. ಕೋಟೆ ಇರುವ ಊರಿನ ಹೆಸರು ‘ಅಗಸರ ಹೊಳೆ. ಈ ಎರಡೂ ಪದಗಳು ಅಚ್ಚಗನ್ನಡ.





