ಟಿಪ್ಪು ಹೊಗಳಿದ ಮೇಲೆ ಕೋವಿದನೂ ಅಲ್ಲ ಕೋದಂಡನೂ ಅಲ್ಲ
– ಸಂತೋಶ್ ತಮ್ಮಯ್ಯ
ಕೊಡವರಿಗೆ ಕಾವೇರಮ್ಮನ ಶಾಪವಿದೆಯಂತೆ, ಬ್ರಹ್ಮಹತ್ಯಾದೋಷವೂ, ನಾಗದೋಷವೂ ಕಾಡುತ್ತಿದೆಯಂತೆ. ಹಾಗಾಗಿ ಕೊಡವರಿಗೆ ಶಾಂತಿ ನೆಮ್ಮದಿ ಇಲ್ಲವಂತೆ, ಅಷ್ಟಮಂಗಲ ಪ್ರಶ್ನೆಯಲ್ಲಿ ಅದು ಕಂಡುಬಂದಿದೆಯಂತೆ. ಇದು ಸದ್ಯ ಕೊಡಗಿನಲ್ಲಿ ಚರ್ಚೆಯಾಗುತ್ತಿರುವ ವಿಷಯ. ಈ ದೋಷ, ಶಾಪ, ಪ್ರಶ್ನೆ, ಅದಕ್ಕಿರುವ ಪರಿಹಾರಗಳು ಏನೇನಿವೆಯೋ ಗೊತ್ತಿಲ್ಲ. ಆದರೆ ಒಂದು ಶಾಪವಂತೂ ಅಷ್ಟಮಂಗಲ ಪ್ರಶ್ನೆಯ ಹೊರತಾಗಿಯೂ ಪ್ರಜ್ನಾವಂತ ಕೊಡವರಿಗೆ ತಿಳಿದೇ ಇದೆ.
ಅದೆಂದರೆ ಕರ್ನಾಟಕದ ಎಲ್ಲರಿಗೂ ಕೊಡಗಿಗೆ ಹೋದಾಗ ಅಲ್ಲಿನ ಯೋಧರು, ಧೀರರು, ಶೂರರು ಎಲ್ಲರೂ ನೆನಪಾಗಿಬಿಡುತ್ತಾರೆ. ಮಡಿಕೇರಿಗೆ ಬಂದ ರಾಜಕಾರಣಿಗಳು, ಸಾಹಿತಿಗಳಿಗೆ ಯೋಧರನ್ನು ಹೊರತಾಗಿಸಿ ಮಾತು ಹೊರಬರುವುದೇ ಇಲ್ಲ. ಅವರೆಲ್ಲರಿಗೂ ಭಾಷಣಕ್ಕೆ, ಸಾಹಿತ್ಯಕ್ಕೆ, ಸಿನಿಮಾಕ್ಕೆ ಕೊಡಗಿನ ಯೋಧರು, ಬ್ರಹ್ಮಗಿರಿ, ಕಾವೇರಮ್ಮೆ, ಇಗ್ಗುತ್ತಪ್ಪರು ಬೇಕು. ಆದರೆ ಅವರೆಲ್ಲರೂ ಟಿಪ್ಪು ವಿಷಯಕ್ಕೆ ಬಂದರೆ ಟಿಪ್ಪು ಆ ಯೋಧರನ್ನೆಲ್ಲಾ ಮೀರಿ ನಿಂತುಬಿಡುತ್ತಾನೆ! ಅಂದರೇ ಧರ್ಮಕ್ಕಾಗಿ ಹೋರಾಡಿದ ಕೊಡಗಿನ ಯೋಧರು ಸಾಹಿತಿಗಳ ಪ್ರಕಾರ ಸೆಕ್ಯುಲರ್ ಆಗಿಬಿಡುತ್ತಾರೆ. ಈ ಸೆಕ್ಯುಲರ್ ವ್ಯಾದಿ ಸಾಹಿತಿಗಳ ಪ್ರಾರಬ್ಧವಾದರೂ ಕೊಡವರ ಪಾಲಿಗೆ ಅದು ಶಾಪ. ಅವರ ಭಾವನೆಗಳ ಮೇಲಿನ ಚೆಲ್ಲಾಟ. ಏಕೆಂದರೆ ಈ ಸೆಕ್ಯುಲರ್ ವ್ಯಾದಿ ಟಿಪ್ಪುವನ್ನು ಹೊಗಳಲು ಕೊಡವರ ಬಲಿದಾನವನ್ನೂ ತಿರುಚಲೂ ಹಿಂಜರಿಯುವುದಿಲ್ಲ. ಹೀಗೆ ಟಿಪ್ಪುವನ್ನು ಹೊಗಳುತ್ತಾ ಕೊಡವರ ಯೋಧತನವನ್ನು ವರ್ಣಿಸಲು ಹೇಗೆ ತಾನೇ ಸಾಧ್ಯ? ಸಾಧ್ಯವಿಲ್ಲ ನಿಜ. ಆದರೆ ಅದು ನಿರಂತರ ನಡೆಯುತ್ತಲೇ ಇದೆ. ಕೊಡಗಲ್ಲೇ ಕೆಲವರು ಭಂಡರಿದ್ದಾರೆ. ಅಂಥವರಿಗೆ ಅಷ್ಟು ಮಾತುಗಳು ಸಾಕಾಗುತ್ತವೆ. ಸಾಹಿತಿ-ರಾಜಕಾರಣಿಗಳಿಗೆ ಚಪ್ಪಾಳೆಗಳು ಭರಪೂರ ಗಿಟ್ಟುತ್ತವೆ. ಹಾಗಾಗಿ ಕಾರ್ನಾಡರೂ “ಟಿಪ್ಪು ಸುಲ್ತಾನ ಕಂಡ ಕನಸು” ಎಂದು ಬರೆಯುತ್ತಾರೆ. ಕೆಲವರು “ಟಿಪ್ಪು ಜನ್ಮದಿನವನ್ನು ಆಚರಿಸಲು ಶಾಲೆಗಳಿಗೆ ರಜಾ ಘೋಷಿಸಲಾಗುವುದು” ಎನ್ನುತ್ತಾರೆ. ಇನ್ನೊಬ್ಬರು ” ಟಿಪ್ಪು ಓರ್ವ ಸಂತ” ಎಂದುಬಿಡುತ್ತಾರೆ. ವಿಚಿತ್ರವೆಂದರೆ ಇವರೆಲ್ಲರೂ ಹೀಗೆ ಹೇಳುವ ಮೊದಲು ಮಡಿಕೇರಿಯ ಯುದ್ಧ ಸ್ಮಾರಕಗಳಿಗೆ ಹಾರ ಹಾಕಿ ಬಂದಿರುತ್ತಾರೆ. ಇವನ್ನೆಲ್ಲಾ ಕೇಳುವುದು, ನೋಡುವುದೇ ಕೊಡಗಿನವರ ಪಾಲಿನ ಶಾಪ. ಏಕೆಂದರೆ ಕೊಡಗಲ್ಲಿ ಬಂದು ಟಿಪ್ಪುವನ್ನು ಹೊಗಳುವುದೆಂದರೆ ಕೊಡಗಿನ ಪೂರ್ವಜರನ್ನು ನಿಂದಿಸಿದಂತೆಯೇ.
ಕರ್ನಾಟಕದಲ್ಲಿ ಅಶಾಂತಿಯ ಗಾಳಿ ಬೀಸಬೇಕೆಂದು ಕಾಂಗ್ರೆಸ್ಸ್ ನಿರ್ಧರಿಸಿದೆಯೇ?
– ರಾಕೇಶ್ ಶೆಟ್ಟಿ
ಪ್ರಶಾಂತವಾಗಿರುವ ಕರ್ನಾಟಕದಲ್ಲಿ ಅಶಾಂತಿಯ ಗಾಳಿ ಬೀಸಬೇಕೆಂದು ಕಾಂಗ್ರೆಸ್ಸ್ ನಿರ್ಧರಿಸಿದೆಯೇ? ಬಹುಶಃ ಹೌದು ಅನ್ನಿಸುತ್ತಿದೆ. ಶ್ರೀರಂಗ ಪಟ್ಟಣದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 50 ಪ್ರತಿಶತ ಮೀಸಲು ನೀಡುವಂತ ವಿವಿಯೊಂದನ್ನು ಸ್ಥಾಪಿಸುವ ಯೋಜನೆ ಕೇಂದ್ರ ಸರ್ಕಾರದ ಮುಂದಿದೆ ಮತ್ತು ಆ ವಿವಿಗೆ ‘ಟಿಪ್ಪು ವಿಶ್ವವಿದ್ಯಾಲಯ’ ಅಂತ ನಾಮಕರಣ ಮಾಡುತ್ತೇವೆ ಅನ್ನುವ ಹೇಳಿಕೆಯನ್ನು ಕೇಂದ್ರ ಸಚಿವರು ಕೊಟ್ಟ ದಿನದಿಂದಲೇ,’ಟಿಪ್ಪು’ ಬಗ್ಗೆ ಚರ್ಚೆ ಶುರುವಾಗಿದೆ.ಚಿದಾನಂದ ಮೂರ್ತಿ,ಎಸ್.ಎಲ್ ಭೈರಪ್ಪ ಮತ್ತು ಇತರರು, ಟಿಪ್ಪು ಕಾಲದಲ್ಲಿ ನಡೆದ ಮತಾಂತರ,ಪರ್ಷಿಯಾ ಭಾಷೆಯ ಹೇರಿಕೆ ಮತ್ತು ಮಲಬಾರಿನ ಸೇನಾಧಿಪತಿಗಳಿಗೆ ಮತ್ತು ಇತರರಿಗೆ ಟಿಪ್ಪು ಬರೆದ ಪತ್ರವನ್ನು ಮುಂದಿಟ್ಟು ‘ಟಿಪ್ಪು ಹೆಸರಿನ ವಿವಿ’ಯನ್ನು ವಿರೋಧಿಸುತಿದ್ದರೆ, ಇನ್ನೊಂದು ಕಡೆ ಟಿಪ್ಪು ಪರ ನಿಂತವರು, ಟಿಪ್ಪು ಒಬ್ಬ ದೇಶ ಭಕ್ತ, ಮಕ್ಕಳನ್ನು ದೇಶಕ್ಕಾಗಿ ಅಡ ಇಟ್ಟವನು ಅನ್ನುತಿದ್ದಾರೆ. ಟಿಪ್ಪು ಕುರಿತ ಈ ಚರ್ಚೆ ನಡೆಯುತ್ತಿರುವುದೂ ಇದೇ ಮೊದಲೇನಲ್ಲ.ಟಿಪ್ಪು ಕಾಲದ ಇತಿಹಾಸದ ಬಗ್ಗೆ ಅನೇಕ ಸಾಕ್ಷಿಗಳು ಸಿಗುವುದರಿಂದ ಟಿಪ್ಪು ಏನು ಅಂತ ನಿರ್ಧರಿಸುವುದು ಬೇರೆಯದೇ ವಿಷಯ.ಹಾಗಾಗಿ ಈ ಲೇಖನದಲ್ಲಿ ಟಿಪ್ಪು ಬಗ್ಗೆ ಗಮನ ಹರಿಸುವುದಕ್ಕಿಂತ,’ಅಲ್ಪಸಂಖ್ಯಾತರಿಗೆ ಪ್ರತ್ಯೇಕ ವಿವಿ (ಅಥವಾ 50% ಮೀಸಲು ನೀಡುವ ವಿವಿ) ಅಗತ್ಯವಿದೆಯೇ?’ ಅನ್ನುವ ಪ್ರಶ್ನೆಯನ್ನು ಕೇಂದ್ರ ಸರ್ಕಾರಕ್ಕೆ ಮತ್ತು ಟಿಪ್ಪು ವಿವಿ ಬೆಂಬಲಿಸುತ್ತಿರುವವರಿಗೆ ಕೇಳ ಬಯಸುತ್ತೇನೆ?
ರಾಜ್ಯದಲ್ಲಿ ಈಗಾಗಲೇ ಇರುವ 20ಕ್ಕೂ ಹೆಚ್ಚು ರಾಜ್ಯದ ವಿವಿ ಮತ್ತು ಡೀಮ್ದ್ ವಿವಿಗಳಲ್ಲಿ ಇಲ್ಲದಿರುವ ಹೊಸತನವೇನಾದರೂ, ಶ್ರೀರಂಗ ಪಟ್ಟಣದಲ್ಲಿ ನಿರ್ಮಿಸ ಬಯಸಿರುವ ವಿವಿಯಲ್ಲಿ ಇರಲಿದೆಯೇ? ಮೈಸೂರಿನಲ್ಲೇ 2 ವಿವಿ ಇರುವಾಗ ಶ್ರೀರಂಗಪಟ್ಟಣದಲ್ಲಿ ಇನ್ನೊಂದ್ಯಾಕೆ ಅನ್ನುವುದು ಒಂದು ಪ್ರಶ್ನೆಯಾದರೆ, ಜ್ಞಾನರ್ಜನೆಗಾಗಿಯೇ ವಿವಿಯನ್ನು ಸ್ಥಾಪಿಸುವ ಉದ್ದೇಶವಿದ್ದರೆ,ಅದರಲ್ಲಿ ಅಲ್ಪಸಂಖ್ಯಾತರಿಗೆ 50 ಪ್ರತಿಶತ ಮೀಸಲು ಯಾತಕ್ಕಾಗಿ? ಜ್ಞಾನಕ್ಯಾವ ಧರ್ಮ? ವಿದ್ಯೆ ಕಲಿಯಲು ಬರುವವರು ಪದವಿಯ ವಿಷಯಗಳ ಮೇಲೆ ನಿರ್ಧರಿಸಿ ಒಂದು ವಿವಿಗೆ ಹೋಗುತ್ತಾರೋ? ಅಥವಾ ಅವರ ಧರ್ಮಕ್ಕೆ ಅನುಗುಣವಾಗಿ ವಿವಿಗಳನ್ನು ಆಯ್ಕೆ ಮಾಡಿಕೊಳ್ಳುತಾರೆಯೋ?





