‘ದಾಮಿನಿ’ಗೆ ಮಿಡಿದ ಹೃದಯಗಳು ’ಸೌಜನ್ಯ’ಳಿಗೂ ಮಿಡಿಯಲಾರವೇ?
– ಭುವಿತ್ ಶೆಟ್ಟಿ
ಪ್ರಿಯ ಮಂಗಳೂರಿನ ನಾಗರೀಕರೇ,
ನಾವೇಕೆ ಈ ರೀತಿ? ನಮ್ಮ ಮನೆಯಲ್ಲಿ ಸೂತಕವಿದ್ದರೂ ಪರಮನೆಯ ಸಾವಿಗೆ ಕಣ್ಣೀರು ಸುರಿಸುವ ಹೃದಯ ವೈಶಾಲ್ಯತೆ ನಮಗೇಕೆ? ಊರ ಉಸಾಬರಿ ನಮಗ್ಯಾಕೆ ಅಂತ ಸುಮ್ಮನೆ ಕೂರುವಂಥ ಕಾಲ ಇದಲ್ಲ. ಅದನ್ನು ಒಪ್ಪಲೇ ಬೇಕು. ಆದರೆ, ಇತ್ತೀಚೆಗೆ ನಾವು ತೀರ ಸ್ವಂತಿಕೆಯ ಎಲ್ಲೆ ಮೀರಿ ಹೋಗುತ್ತಿದ್ದೇವೆ. ನೆರೆಮನೆ ಸುಡುತ್ತಿದ್ದರೂ ಮಾತಾಡದೆ, TV ಯಲ್ಲಿ ಕ್ರೈಂ ಸ್ಟೋರಿ ನೋಡಿ ಅಯ್ಯೋ ಪಾಪ ಎನ್ನುತ್ತೇವೆ. ಅಂಥ ಮನೋಸ್ಥಿಥಿ ನಮ್ಮದು. ಮಾನವೀಯತೆ ಎಂಬುದು ಮಾದ್ಯಮಗಳು ಬಿತ್ತರಿಸುವ ಸುದ್ದಿಯನ್ನು ನೋಡಿ ಉಕ್ಕಿ ಹರಿಯುತ್ತದೆ ಹೊರತು ವಾಸ್ತವತೆಯನ್ನರಿತಲ್ಲ. ಮಂಗಳೂರು ಖಂಡಿತವಾಗಿಯೂ ಬದಲಾಗಿದೆ ಎನ್ನಲು ಇತ್ತೀಚೆಗೆ ನಡೆದ Home Stay ಗಲಾಟೆ ಹಾಗೂ ಸೌಜನ್ಯ ಸಾವಿನ ಪ್ರಕರಣದ ಬಗ್ಗೆ ಮಂಗಳೂರಿನ ಜನತೆ ವ್ಯಕ್ತಪಡಿಸಿದ ಪ್ರತಿಕ್ರಿಯೆಯೇ ಸಾಕು.
ರಾಜಕೀಯ ಪ್ರೇರಿತ ‘ಮಂಗಳೂರು ರೆಸಾರ್ಟ್ ಗಲಾಟೆ’ಯಲ್ಲಿ ಸಿರಿವಂತ ಮನೆಯ ಹೆಣ್ಣುಮಕ್ಕಳಿಗಾದ ಅನ್ಯಾಯಕ್ಕೋಸ್ಕರ ಅದೆಷ್ಟು ಮಂದಿ ಬೀದಿಗಿಳಿಯಲಿಲ್ಲಾ? Facebook ತುಂಬಾ ಅದೇನೂ ಸ್ಟೇಟಸ್ Update ಗಳು, ಅದೇನೂ ಅಕ್ರೋಶ? ದಾಳಿ ಮಾಡಿದವರನ್ನು ಕೈಗೆ ಕೊಟ್ಟಿದ್ದರೆ ಕೊಂದು ಬಿಡುತ್ತಿದ್ದರೋ ಏನೋ… ಆ ರೀತಿ ಇತ್ತು ಪ್ರತಿಭಟನೆಯ ಜೋರು.





