ಸಾ ನಿಗಮ..ಪಾದ ನೀ ಸಾ?
– ತುರುವೇಕೆರೆ ಪ್ರಸಾದ್
ಎಂಎಲ್‍ಎ ಮುಳ್ಳಪ್ಪನವರ ಏಕಮಾತ್ರ ಪುತ್ರಿ ಪದ್ಮಾವತಿ ‘ಸ…’ ಎಂದು ಬಾಯಿ ತೆರೆದಾಗ ಸಂಗೀತ ಮೇಷ್ಟ್ರು ಶಾಮಾ ದೀಕ್ಷಿತರು ‘ಸ್ವಲ್ಪ ಎಳೆಯಮ್ಮ..’ ಎಂದರು. ಕೂಡಲೇ ಪದ್ಮಾವತಿ ಬಾಯಲ್ಲಿದ್ದ ಚೂಯಿಂಗ್ ಗಮ್‍ನ ದೀಕ್ಷಿತರ ಮೂತಿಗೇ ಬರುವಂತೆ ಎಳೆದಾಗ ದೀಕ್ಷಿತರು ಅಸಹ್ಯದಿಂದ ಮುಖ ಹಿಂಡಿದರು. ‘ ಎಳೆಯೋದು ಅಂದ್ರೆ ಈ ಸುಡುಗಾಡು ಚೂಯಿಂಗ್‍ಗಮ್‍ನಲ್ಲ..ಸ್ವರನಮ್ಮ..’ ಎಂದರು ಅಸಹನೆಯಿಂದ. ಪದ್ಮಾ ತಾರಕ ಸ್ವರದಲ್ಲಿ ‘ ಸಾ…’ ಎಂದು ಬೊಬ್ಬೆ ಹೊಡೆದಾಗ, ಆ ಕರ್ಕಶ ಸ್ವರ ಕೇಳಲಾಗದೆ ‘ಶಿವ ಶಿವಾ’ಎಂದು ಕಿವಿ ಮುಚ್ಚಿಕೊಂಡರು.’ಅಷ್ಟೊಂದು ಎಳೀಬಾರದಮ್ಮ..’ ಎಂದು ಕಿವಿಯಲ್ಲಿ ಬೆರಳಿಟ್ಟುಕೊಂಡೇ ಬೇಡಿಕೊಂಡರು. ಪದ್ಮಾವತಿ ತಲೆಯಾಡಿಸಿ ದೀಕ್ಷಿತರ ಮುಖಕ್ಕೇ ಕೆಮ್ಮಿ, ಕ್ಯಾಕರಿಸಿ ಕಾಫಿ ಎಂಬ ಕಲಗಚ್ಚು ಹೀರಿ ಗಂಟಲು ಹದಮಾಡಿಕೊಂಡು ಬರಲು ಒಳಗೆ ಹೋದಳು. ದೀಕ್ಷಿತರು ಧೋತರದಿಂದ ಪದ್ಮಾವತಿ ಉಗಿದಿದ್ದನ್ನು ಒರೆಸಿಕೊಂಡು ನಿಟ್ಟುಸಿರಿಟ್ಟರು.
ಪಾಪ್, ರ್ಯಾಪ್, ರಾಕ್ ಅಬ್ಬರದಲ್ಲಿ ದೀಕ್ಷಿತರ ಶಾಸ್ತ್ರೀಯ ಸಂಗೀತ ಔಟ್ ಡೇಟೆಡ್ ಆಗಿಹೋಗಿತ್ತು. ಮನೆಯೊಳಗಿನ ಹೆಂಡತಿ ಮಕ್ಕಳೆಂಬ ಪಕ್ಕ ವಾದ್ಯಗಳ ಮಧ್ಯೆ ದೀಕ್ಷಿತರಿಗೆ ಮುತ್ತಯ್ಯ ದೀಕ್ಷಿತರ ಕೀರ್ತನೆಯನ್ನು ಮೆಲುಕು ಹಾಕಲೂ ಅವಕಾಶವಿರಲಿಲ್ಲ. ರಾಮನವಮಿ, ಶಂಕರ ಜಯಂತಿ ಮುಂತಾದ ಸಮಾರಂಭಗಳಲ್ಲಿ ಲೈಟ್ ಮ್ಯೂಸಿಕ್ ಎಂದು ಬಳ್ಳಿ ನಡುವಿನ ಲತಾಂಗಿ ಸ್ಟೇಜ್ ಹತ್ತಲು ಶುರುಮಾಡಿದ ಮೇಲಂತೂ ದೀಕ್ಷಿತರ ಆಲಾಪನೆಯನ್ನು ಕೇಳುವವರೇ ಇಲ್ಲದಾಗಿ ಹೋಯಿತು. ಅಸ್ತಮಾದಿಂದ ದೀಕ್ಷಿತರು ಅನವರತ ಗೊರ ಗೊರ ಎನ್ನುವಂತೆ ತಿದಿಯೊತ್ತಿದರೆ ಅವರ ಹಾರ್ಮೊನಿಯಂ ಪೆಟ್ಟಿಗೆಯೂ ಬುಸ ಬುಸ ಎಂದು ನಿಟ್ಟುಸಿರುಬಿಡುತ್ತಿತ್ತು. ದೀಕ್ಷಿತರು ಇಂತಹ ಸಂಕಷ್ಟ ಸಮಯದಲ್ಲಿ ಎಂಎಲ್‍ಎ ಮುಳ್ಳಪ್ಪನವರ ಮಗಳು ಪದ್ಮಾವತಿಗೆ ಸಂಗೀತ ಕಲಿಯುವ ಹುಚ್ಚು ಹತ್ತಿತ್ತು. ತಾನೂ ಫಿಲಂ ಸ್ಟಾರ್ ರಮಯಾ ತರ ಆಗುತ್ತೇನೆಂದು ಅಪ್ಪನ ಬೆನ್ನು ಹತ್ತಿದ್ದಳು.





