ವಿಷ್ಣುವರ್ಧನ್: ಅವಕಾಶವಾದಿಗಳ ನಡುವೆ ನಲುಗಿದ ನಟ
– ರಾಜಕುಮಾರ.ವ್ಹಿ.ಕುಲಕರ್ಣಿ,
ಮುಖ್ಯಗ್ರಂಥಪಾಲಕ, ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟ
ವಿಷ್ಣುವರ್ಧನ್ ನಿಧನರಾದಾಗ ಸಿನಿಮಾವನ್ನು ಬಹುವಾಗಿ ಪ್ರೀತಿಸುವ ಪ್ರೇಕ್ಷಕರು ‘ಇನ್ನು ಮುಂದೆ ಭಾವನಾತ್ಮಕ ಪಾತ್ರಗಳಲ್ಲಿ ನಾವುಗಳು ಯಾರನ್ನು ನೋಡುವುದು’ ಎಂದು ಉದ್ಘರಿಸಿದರು. ಏಕೆಂದರೆ ಆ ಹೊತ್ತಿಗಾಗಲೆ ವಿಷ್ಣುವರ್ಧನ್ ಭಾವನಾತ್ಮಕ ಪಾತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಮನಸ್ಸುಗಳಲ್ಲಿ ನೆಲೆಯೂರಿದ್ದರು. ಆಶ್ಚರ್ಯದ ಸಂಗತಿ ಎಂದರೆ ಈ ನಟನಿಗೆ ‘ಸಾಹಸ ಸಿಂಹ’ ಎನ್ನುವ ಬಿರುದಿನಿಂದ ಕನ್ನಡ ಚಿತ್ರರಂಗದಲ್ಲಿ ಐಡೆಂಟಿಟಿ ಸಿಕ್ಕರೂ ಅವರು ತಮ್ಮ ಭಾವನಾತ್ಮಕ ಪಾತ್ರಗಳಿಂದಲೇ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾದರು. ಹೊಂಬಿಸಲು, ಬಂಧನ, ಸುಪ್ರಭಾತ, ಲಾಲಿಯಂಥ ಭಾವಪ್ರಧಾನ ಸಿನಿಮಾಗಳು ವಿಷ್ಣುವರ್ಧನ್ ಅವರಲ್ಲಿನ ಮನೋಜ್ಞ ಅಭಿನಯದ ಕಲಾವಿದನನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಜಗತ್ತಿಗೆ ಪರಿಚಯಿಸುವಲ್ಲಿ ಯಶಸ್ವಿಯಾದವು. ವಿಷ್ಣುವರ್ಧನ್ ನಟನಾ ವೃತ್ತಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದರಿಂದಲೇ ಅವರು ತಮ್ಮ ಸಿನಿಮಾ ಬದುಕಿನ ಯಶಸ್ಸಿನ ಉತ್ತುಂಗದಲ್ಲಿದಾಗಲೇ ಹೊಸದೊಂದು ಬದಲಾವಣೆಗೆ ತಮ್ಮನ್ನು ತಾವು ತೆರೆದುಕೊಂಡರು. ಹೀಗೆ ಪ್ರಯತ್ನಿಸದೆ ಹೋಗಿದ್ದರೆ ಅವರೊಳಗಿನ ಕಲಾವಿದ ಒಂದೇ ಪ್ರಕಾರದ ಪಾತ್ರಗಳಿಗೆ ಬ್ರ್ಯಾಂಡ್ ಆಗುವ ಅಪಾಯವಿತ್ತು. ಅನೇಕ ನಟ ನಟಿಯರು ತಮ್ಮ ವೃತ್ತಿಬದುಕಿನುದ್ದಕ್ಕೂ ಒಂದೇ ಪ್ರಕಾರದ ಪಾತ್ರಗಳಿಗೆ ಜೋತುಬಿದ್ದು ಆ ಒಂದು ಏಕತಾನತೆಯ ನಡುವೆ ಅವರೊಳಗಿನ ಕಲಾವಿದ ಕಳೆದು ಹೋಗಿರುವುದಕ್ಕೆ ಬಹಳಷ್ಟು ಉದಾಹರಣೆಗಳಿವೆ. ಅಂಥದ್ದೊಂದು ಸಮಸ್ಯೆಯಿಂದ ಕಳಚಿಕೊಳ್ಳುವಲ್ಲಿ ವಿಷ್ಣುವರ್ಧನ್ ಯಶಸ್ವಿಯಾದರೂ ಅವರೊಳಗಿನ ಪರಿಪೂರ್ಣ ಕಲಾವಿದನನ್ನು ಪರಿಚಯಿಸುವಲ್ಲಿ ಕನ್ನಡ ಚಿತ್ರರಂಗ ಸೋತಿದೆ ಎನ್ನುವುದು ಪ್ರಜ್ಞಾವಂತ ಪ್ರೇಕ್ಷಕರ ಅಭಿಮತ. ಇನ್ನು ಕೆಲವು ವರ್ಷಗಳ ಕಾಲ ವಿಷ್ಣುವರ್ಧನ್ ನಮ್ಮೊಡನಿದ್ದರೆ ಅವರನ್ನು ನಾವು ಒಬ್ಬ ಪರಿಪೂರ್ಣ ಮತ್ತು ಮಾಗಿದ ಕಲಾವಿದನಾಗಿ ನೋಡಲು ಸಾಧ್ಯವಿತ್ತೇನೋ. ಆದರೆ ಸಾವಿನ ರೂಪದಲ್ಲಿ ಬಂದ ವಿಧಿ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿತು. ಬದುಕಿದ್ದರೆ ಈ ದಿನ (ಸೆಪ್ಟೆಂಬರ್, 18) ವಿಷ್ಣುವರ್ಧನ್ ತಮ್ಮ 65 ನೆ ಜನ್ಮದಿನ ಆಚರಿಸಿಕೊಳ್ಳುತ್ತಿದ್ದರು.
ಸುಂದರ್ ರಾಜ್ ನೆನಪಿಸಿಕೊಂಡಂತೆ ಅಂಬರೀಷ್ !
– ಶ್ರೀಧರ್ ಜಿ ಸಿ ಬನವಾಸಿ
ಅಂಬರೀಷ್ ಜೊತೆಗಿನ ನನ್ನ ಸ್ನೇಹವನ್ನು ಈ ಮೂಲಕ ವರ್ಣಿಸೋದು ತುಂಬಾ ಕಷ್ಟ. ಅಂಬರೀಷ್ ಜೊತೆಗಿನ ನನ್ನ ಒಡನಾಟ, ಸ್ನೇಹ, ಓಡಾಟ, ಕೆಲಸಮಾಡಿದ್ದು ನನಗೆ ಬೆಟ್ಟದಷ್ಟು ಅಪಾರ ನೆನಪುಗಳು ನನ್ನ ಮನಸ್ಸಿನಲ್ಲಿವೆ. ಆತ ಹೀಗೆ ಅಂತ ಹೇಳೋದು ತುಂಬಾ ಕಷ್ಟ, ಆತನ ತರಹ ನೀವಾಗಬೇಕು ಅಂತಾನೂ ಹೇಳೋದು ತುಂಬಾ ಕಷ್ಟ. ಅಂಬರೀಷನಿಗೆ ಅಂಬರೀಷನೇ ಸಾಟಿ. ಅಂಬರೀಷ್ ಯಾಕೆ ಇಷ್ಟವಾಗ್ತಾರೆ ಅಂತ ಅವರನ್ನ ಇಷ್ಟಪಡೋ ಎಲ್ಲರನ್ನು ಕೇಳಿ ಒಬ್ಬೋಬ್ಬರು ಆತನನ್ನು ಒಂದೊಂದು ರೀತಿಯಲ್ಲಿ ವರ್ಣಿಸುತ್ತಾರೆ. ಹಾಗಾಗಿ ಅಂಬರೀಷ್ ಇಷ್ಟವಾಗಲು ಬಹಳಷ್ಟು ಕಾರಣಗಳಿವೆ. ಕನ್ನಡಚಿತ್ರರಂಗವೇಕೇ, ರಾಜಕೀಯ, ಬೇರೆ ಚಿತ್ರರಂಗ, ರಾಜ್ಯ ರಾಜಕೀಯ, ದೆಹಲಿ ರಾಜಕೀಯದ ವ್ಯಕ್ತಿಗಳು ಕೂಡ ಆತನನ್ನು ಇಷ್ಟಪಡುತ್ತಾರೆ. ಆತನ ವ್ಯಕ್ತಿತ್ವೇ ಅಂತಹದ್ದು. ಅಜಾತಶತ್ರು, ಹುಂಬತನ, ಎದೆಗಾರಿಕೆ, ಬೇರೆಯವರಿಗೆ ಮರುಗುವ ಮನಸ್ಸು ಆತನ ಗುಣಗಾನ ಮಾಡುವುದು ನಿಜವಾಗಿಯೂ ಕಷ್ಟ ಸಾಧ್ಯ. ಇಂತಹ ಅಂಬರೀಷ್ ನನ್ನ ಆತ್ಮೀಯ ಸ್ನೇಹಿತ ಅನ್ನುವುದೇ ನನ್ನ ಹೆಮ್ಮೆಗೆ ಕಾರಣ.
ಅಂಬಿ ‘ನಾನೊಬ್ಬ ಅದ್ಭುತ ನಟ’ ಅಂತ ಎಲ್ಲೂ, ಯಾರ ಹತ್ತಿರವೂ ಹೇಳಿಕೊಂಡವರಲ್ಲ. ಆದರೆ, ವ್ಯಕ್ತಿಯಾಗಿ, ಸಮಾಜದ ಶಕ್ತಿಯಾಗಿ, ಉತ್ತಮ ಮನುಷ್ಯನಾಗಿ ಅಂಬಿಗೆ ಅಂಬಿಯೇ ಸಾಟಿ. ಇಂಥ ವೈವಿಧ್ಯತೆಯ ಮನುಷ್ಯನನ್ನು ಎಲ್ಲಿ ಹುಡುಕಿದರೂ ಸಿಕ್ಕುವುದಿಲ್ಲ. ಆ ದಿನಗಳಲ್ಲಿ ನನಗೆ ಅಂಬಿ ಕಂಡರೆ ಸಣ್ಣ ಒಳ್ಳೆಯ ಹೊಟ್ಟೆಕಿಚ್ಚಂತೂ ಇತ್ತು, ಏನಪ್ಪಾ ಈ ಮನುಷ್ಯ ಪುಟ್ಟಣ್ಣನಂತಹ ನಿರ್ದೇಶಕರ ಮನಸ್ಸನ ಹೇಗಂಪಾ ಗೆದ್ದು ಬಿಟ್ಟಿದ್ದಾನೆ. ನಾವೇನೋ ಬಾಲಚಂದರ್ ಸಿನಿಮಾಗಳಲ್ಲಿ ಗುರುತಿಸಿಕೊಂಡುಬಿಟ್ಟಿದ್ವಿ. ಆದರೆ ಪುಟ್ಟಣ್ಣರ ಸಿನಿಮಾಗಳಲ್ಲಿ ನಮಗೆ ಅವಕಾಶ ಸಿಕ್ಕಿರಲಿಲ್ಲ. ಈತನ್ನ ನೋಡಿದ್ರೆ ಪುಟ್ಟಣ್ಣನವರ ಹೆಚ್ಚಿನ ಸಿನಿಮಾಗಳಲ್ಲಿ ಚಾನ್ಸ್ ತಗೋತಾ ಇದಾನೆ. ಪುಟ್ಟಣ್ಣ ಕಣಗಾಲ್ ಗುರುಕೃಪೆಗೆ ಹೆಚ್ಚು ಒಳಗಾದ ನಟ ಅಂಬರೀಶ್ನನ್ನು ಕಂಡಾಗ ಈ ರೀತಿಯ ಅವ್ಯಕ್ತ ಅಸೂಹೆಯ ಪ್ರೀತಿ ಆತನ ಮೇಲಿತ್ತು. ಆದರೆ ಅಂಬರೀಷ್ ತನ್ನ ನಿಷ್ಕಲ್ಮಶ ಪ್ರೀತಿಯಿಂದ ನನ್ನನ್ನು ಗೆದ್ದುಬಿಟ್ಟಿದ್ದ.





