ಚಿನ್ನದ ಬಾಗಿಲಿಗೆ ‘ದೋಷ’ವಿಲ್ಲವೇ?!
– ಡಾ. ಅಶೋಕ್ ಕೆ.ಆರ್
ಕೆಲವು ದಿನಗಳ ಹಿಂದೆ ವಿಜಯ್ ಮಲ್ಯರವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಎಂಭತ್ತು ಲಕ್ಷ ಬೆಲೆಬಾಳುವ ಚಿನ್ನದ ಬಾಗಿಲನ್ನು ದಾನವಾಗಿ ನೀಡಿದ್ದಾರೆ. ತಿಂಗಳುಗಳ ಹಿಂದೆ ಅವರು ಹೊತ್ತಿದ್ದ ಹರಕೆಯಂತೆ ಅದು. ಮತ್ತೊಂದು ಬಾಗಿಲನ್ನು ದಾನವಾಗಿ ನೀಡುತ್ತಾರಂತೆ. ಕಿಂಗ್ ಫಿಷರ್ ಏರ್ ಲೈನ್ಸಿನ ಸಿಬ್ಬಂದಿಗಳಿಗೆ ಸಂಬಳ ಸರಿಯಾಗಿ ನೀಡದ ಮಲ್ಯ ಲಕ್ಷಾಂತರ ರುಪಾಯಿಗಳನ್ನು ಹೀಗೆ ‘ದಾನ’ದ ರೂಪದಲ್ಲಿ ಕೊಟ್ಟಿರುವುದು ಕೆಲವರ ಕಣ್ಣು ಕೆಂಪಗಾಗಿಸಿದೆ. ಇದೇ ದುಡ್ಡನ್ನು ಸಮಾಜದ ಕೆಳಸ್ತರದಲ್ಲಿರುವವರಿಗೆ ನೀಡಬಹುದಿತ್ತಲ್ಲ? ಎಂದೂ ಹಲವರು ಪ್ರಶ್ನಿಸುತ್ತಿದ್ದಾರೆ. ಬಿಡಿ, ಮೊದಲನೆಯದು ಅವರ ವ್ಯವಹಾರಕ್ಕೆ ಸಂಬಂಧಿಸಿದ್ದು, ಎರಡನೆಯದು ಅವರ ಭಕ್ತಿಗೆ ಸಂಬಂಧಿಸಿದ್ದು. ಹರಕೆ ತೀರಿಸುವುದಕ್ಕೆ ಲಕ್ಷಾಂತರ ರುಪಾಯಿ ವ್ಯಯಿಸುವುದು ಅವರ ಮರ್ಜಿ. ಆದರೆ ಅವರೆಲ್ಲಿದ್ದಾರೆ ಹಿಂದೂ ಧರ್ಮ ‘ರಕ್ಷಕರು’, ಪೇಜಾವರ ಸ್ವಾಮಿಗಳು, ಮುಖ್ಯವಾಗಿ ಅವರೆಲ್ಲಿದ್ದಾರೆ ಆ ದೇವರು?!ಸಂಸ್ಕೃತಿ ಸಂಕಥನ – 19 – ವಿಚಾರಕ್ಕೂ ಆಚಾರಕ್ಕೂ ಏನು ಸಂಬಂಧ ?
-ರಮಾನಂದ ಐನಕೈ
ನಮ್ಮೂರಿನಲ್ಲಿ ಒಬ್ಬರು ವಿಚಾರವಂತರಿದ್ದಾರೆ. ನಿಜವಾಗಲೂ ಅವರು ಚಿಂತಕರೆ, ನಾವೆಲ್ಲ ತಮಾಷೆಗಾಗಿ ಅವರನ್ನು ಸೆಕ್ಯುಲರ್ ಚಿಂತಕರು ಎಂದು ಕರೆಯುತ್ತೇವೆ. ಯಾವತ್ತೂ ವೇದಿಕೆಯ ಮೇಲೆ ಅವರು ನಾಸ್ತಿಕತೆಯ ಕುರಿತಾಗಿ ಮಾತನಾಡುತ್ತಾರೆ. ದೇವರುಗಳನ್ನು ಟೀಕಿಸುತ್ತಾರೆ. ಗ್ರಾಮೀಣ ಜನರ ಆಚಾರಗಳು ಮೌಢ್ಯವೆಂದು ಗುರುತಿಸುತ್ತಾರೆ. ಹೊರಗೆ ಬಂದಾಗ ಹೆಂಡ, ಸಿಗರೇಟುಗಳೆಲ್ಲ ಅವರ ಆಪ್ತ ಸಂಗಾತಿಗಳು. ಆದರೆ ಆ ವ್ಯಕ್ತಿ ಅವರ ಊರಿನಲ್ಲಿ ಒಬ್ಬ ಪೂಜಾರಿ. ಮನೆಯಲ್ಲಿ ಕರ್ಮಠ ಆಸ್ತಿಕರು. ಜಪ-ತಪ, ಮಡಿ-ಮೈಲಿಗೆ ಮುಂತಾದವುಗೆಳೆಲ್ಲವೂ ಅವರ ನಿತ್ಯಕರ್ಮಗಳು. ಜ್ಯೋತಿಷ್ಯ, ಶಕುನ ಮುಂತಾದವುಗಳೆಲ್ಲದರಲ್ಲೂ ಪ್ರವೀಣರು. ಶನಿವಾರ ಅವರ ಮನೆ ಮುಂದೆ ಜನರ ಸರದಿ ಇರುತ್ತದೆ. ಈ ವ್ಯಕ್ತಿಯನ್ನು ನಾವು ಯಾವ ರೀತಿ ಅರ್ಥೈಸೋಣ? ಸಾರ್ವಜನಿಕವಾಗಿ ಅವರು ವ್ಯಕ್ತಪಡಿಸುವ ವಿಚಾರಗಳು ನಿಜವೇ ಇರುತ್ತದೆ. ವೈಯಕ್ತಿಕವಾಗಿ ಅವರು ವ್ಯಕ್ತಪಡಿಸುವ ವಿಚಾರಗಳು ನಿಜವೇ ಇರುತ್ತದೆ. ವೈಯಕ್ತಿಕವಾದ ಅವರ ಆಚರಣೆಯೂ ಶುದ್ಧವಾಗಿರುತ್ತದೆ. ಇವೆರಡರಲ್ಲಿ ಯಾವುದು ತಪ್ಪು ಅನ್ನಲು ಸಾಧ್ಯ? ಇದೇ ಭಾರತದ ಆಧುನಿಕ ವಿಚಾರವಾದಿಗಳ ಸಮಸ್ಯೆ.
ವಿಜ್ಞಾನಿಯೊಬ್ಬರು ದೇವರ ಫೋಟೋ ಪೂಜಿಸುವುದು, ದೇವಸ್ಥಾನಕ್ಕೆ ಹೋಗುವುದು ಹಾಸ್ಯಾಸ್ಪದ ಅನಿಸುತ್ತದೆ. ಲಕ್ಷ್ಮೀ ಪೂಜೆಯ ದಿನ ಕಂಪ್ಯೂಟರಿಗೆ ಬಿಳಿಪಟ್ಟೆ ಎಳೆದು ಪೂಜಿಸಿದರೆ ನಗು ಬರುತ್ತದೆ. ಸೂರ್ಯ, ಚಂದ್ರ ಭೂಮಿಯ ಪರ್ಯಟನದಿಂದಾಗಿ ಗ್ರಹಣವಾಗುತ್ತದೆ ಎಂಬ ವೈಜ್ಞಾನಿಕ ಸತ್ಯ ನಮಗೆ ಗೊತ್ತಿದೆ. ಆದರೂ ಉಪವಾಸ ಇರುತ್ತೇವೆ. ದೇವರನ್ನು ಮುಳುಗಿಸಿಬಿಡುತ್ತೇವೆ. ಮನೆಯ ಬಿಟ್ಟು ರಸ್ತೆಗೇ ಬರುವುದಿಲ್ಲ. ಗ್ರಹಣದ ನಂತರ ಸ್ನಾನ ಮಾಡುತ್ತೇವೆ. ಯಾಕೆ? ತಿಳಿದಿರುವುದೊಂದು ಮಾಡುವುದೊಂದು, ಹೇಳುವುದೊಂದು ಮಾಡುವುದೊಂದು. ಇದನ್ನೇ ಸೋಗಲಾಡಿತನ ಎಂದು ಟೀಕಿಸುತ್ತೇವೆ.





